ಈ ಬ್ಲಾಗ್ ಅನ್ನು ಹುಡುಕಿ

ಬುಧವಾರ, ಜೂನ್ 26, 2019

ವಚನದ ಸಾರವೇ ಈ ಕವಿತೆ







ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ 
ಇಲ್ಲೇ ಇರುವ ಪ್ರೀತಿ ಸ್ನೇಹಗಳ 
ಗುರುತಿಸದಾದೆನು ನಮ್ಮೊಳಗೆ

ಎಲ್ಲಿದೆ ನಂದನ ಎಲ್ಲಿದೆ ಬಂಧನ 
ಎಲ್ಲಾ ಇವೆ ಈ ನಮ್ಮೊಳಗೆ 
ಒಳಗಿನ ತಿಳಿಯನು ಕಲಕದೆ ಇದ್ದರೆ 
ಅಮೃತದ ಸವಿಯಿದೆ ನಾಲಗೆಗೆ

ಹತ್ತಿರವಿದ್ದೂ ದೂರ ನಿಲ್ಲುವೆವು 
ನಮ್ಮ ಅಹಮ್ಮಿನ ಕೋಟೆಯಲಿ 
ಎಷ್ಟು ಕಷ್ಟವೋ ಹೊಂದಿಕೆ ಎಂಬುದು 
ನಾಲ್ಕು ದಿನದ ಈ ಬದುಕಿನಲಿ





ಜಿ.ಎಸ್.ಶಿವರುದ್ರಪ್ಪ ಅವರ ಈ ಕವಿತೆ ವಚನ ಸಾಹಿತ್ಯದ ಸಂಪೂರ್ಣ ಆಶಯವನ್ನು ಹೇಳಬಲ್ಲದು. ಪ್ರಸ್ತುತ ಹೊಂದಿಕೆಯಾಗುವ ಈ ಕವನ ಮನುಷ್ಯ ಸಂಬಂಧಗಳ ನಡುವಿನ ಬಿಕ್ಕಟ್ಟುಗಳನ್ನು ಸರಳವಾಗಿ ಹೇಳುತ್ತದೆ. ದೇವನಿರುವುದು ಆತ್ಮದಲ್ಲಿ ಎಂದು ತಿಳಿದಿದ್ದರೂ ಆಡಂಬರಕ್ಕಾಗಿ ದೇವಾಲಯಗಳಲ್ಲಿ ದೇವರನುಡುಕುವ ಡಾಂಭಿಕ ಕಾರ್ಯದಲ್ಲಿ ತೊಡಗಿದ್ದೇವೆ. ನಮಗೆ ಭಯವಿದೆ. ಏಕೆಂದರೆ ನಮ್ಮ ಕುರಿತು ನಮಗೆ ಅಷ್ಟು ಪೂರ್ಣ ನಂಬಿಕೆ ಇಲ್ಲದಿರುವುದೇ ಆ ಭಯ, ಅಂಜಿಕೆ. ಈ ಸಮಾಜದಲ್ಲಿ ಪರಸ್ಪರರು ಪ್ರೀತಿ-ಸ್ನೇಹಗಳಿಂದ ವರ್ತಿಸಿ ಬಾಳುವುದರಿಂದ ಯಾವ ದ್ವೇಷವೂ ಇರಲಾರದು. ಸ್ವಾರ್ಥದ ಕಾರಣದಿಂದ ಗೆಲ್ಲುವ ಸವಾರಿ ಹೊರಟಿದ್ದೇವೆ. ಮನುಷ್ಯರ ನಡುವಿನ ಈ ಬಿಕ್ಕಟ್ಟು ಸಮಾಜ, ರಾಜ್ಯ, ದೇಶ-ದೇಶಗಳ ನಡುವಿನ ಹಿಂಸೆಗೆ ಕಾರಣವಾಗಿದೆ. ಇಷ್ಟು ಹಿಂಸೆಯ ಉಲ್ಬಣವಿದ್ದರೂ ನಾವು ಗುಡಿ-ಚರ್ಚು-ಮಸೀದಿ-ಸ್ತೂಪ-ಬಸದಿಗಳಲ್ಲಿ, ಮತಧರ್ಮಗಳ ಮತಿಹೀನತೆಯಲ್ಲಿ ಪರಿಹಾರ ಹುಡುಕುತ್ತಿದ್ದೇವೆ.

ಮನುಷ್ಯನ ಎಲ್ಲಾ ಕ್ರಿಯೆಗಳು ಕೂಡ ಸಂತೋಷವಾಗಿ ಬದುಕುವ ಕಾರಣ ನಡೆಯುತ್ತಿವೆ. ಈ ಬದುಕಿನ ಎಲ್ಲಾ ಹಿಂಸೆಗಳು ಈ ಕ್ರಿಯೆಗಳಿಂದಲೇ ನಿರ್ಮಿತವಾಗಿವೆ. ನಮ್ಮ ಮನಸ್ಸನ್ನು ನಾವೇ ನಿರ್ಮಾಣಮಾಡಿಕೊಳ್ಳಬೇಕು. ಇನ್ನೊಬ್ಬರಲ್ಲಿ ನಮ್ಮ ಲಾಭವನ್ನು ಹುಡುಕಿದರೆ ಅದೇ ಹಿಂಸೆ. ಹುಡುಕದೇ ಅವರೂ ನಮ್ಮಂತೆ ಎಂದು ಭಾವಿಸಿದರೆ ಅದೇ ನಂದನ, ಆನಂದ.  ಈ ನಿರ್ಮಲವಾದ ಮನಸ್ಸಿನ ಆತ್ಮವನ್ನು ಕಲಕುತ್ತಾ ಸದಾ ನೋವಿನಲ್ಲಿ ಬದುಕು ಸಾಗಿಸುವ ಬದಲು ನಮ್ಮೊಳಗೆ ಇರುವ ಅಮೃತದಂತಹ ಆನಂದವನ್ನು, ಮನದ ತಿಳಿಯನ್ನು ಕಲಕದೆ ಅನುಭವಿಸಬೇಕು, ಸವಿಯಬೇಕು, ಪರರಿಗೂ ಉಣಿಸಬೇಕು. 'ಇದಂ ಶರೀರಂ ಪರೋಪಕಾರಾರ್ಥಂ' ಎಂಬಂತೆ ನಿಸ್ವಾರ್ಥ ಗುಣ ನಮ್ಮದಾಗಬೇಕು.





ಮನುಷ್ಯನ ಬದುಕು ಪರಸ್ಪರ ಸಂಬಂಧಗಳ ಸರಪಳಿಯಲ್ಲಿ ಇರುವಂತಹದು. ರಕ್ತ ಸಂಬಂಧ,  ಪರಿಚಯದ ಮೂಲಕ ನಾವು ಆತ್ಮೀಯತೆ ಗಳಿಸಿರುತ್ತೇವೆ. ಎಷ್ಟೇ ಹತ್ತಿರವಿದ್ದರೂ ಮಾನಸಿಕವಾಗಿ ತುಂಬಾ ದೂರ ಉಳಿದಿರುತ್ತೇವೆ. ಕೇವಲ ಋಣಾತ್ಮಕವಾಗಿ ತಪ್ಪುಗಳನ್ನು ಹುಡುಕುತ್ತಾ ಅವರಿಂದ ದೂರ ಉಳಿಯುತ್ತಿರುತ್ತೇವೆ. ಈ ಬದುಕು ನಾಲ್ಕುದಿನ ಸಂತೆಯಂತೆ ಇರುವುದು. ಇಂತಹ ಬದುಕಿನಲ್ಲಿ ಹೊಂದಿಕೆಯೆಂಬುದು ಮುಖ್ಯವಾದುದು. ಅದೇ ಹೊಂದಾಣಿಕೆ ಕಷ್ಟವಾದರೆ ನಮ್ಮ ಇಷ್ಟವಾದ ಬದುಕು ಸಿಗಲಾರದು.

ಮನೆಯಲ್ಲಿ ನಾವು ಎಷ್ಟು ಅನ್ಯೋನ್ಯತೆ ಹೊಂದಿದ್ದೇವೆ. ಸಮಾಜದಲ್ಲಿ ಇತರರ ಕುರಿತು ನಮ್ಮ ಅಭಿಪ್ರಾಯಗಳೇನು! ಈ ಅಂಶಗಳು ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ. ಒಂದು ಕಾರ್ಯಾರ್ಥವಾಗಿ ಇಲ್ಲಿ ಜನಿಸಿರುವ ನಾವು ಸ್ವಾರ್ಥವನ್ನು ಬಿಟ್ಟು ನಮ್ಮನ್ನು ಪ್ರೀತಿಸುವವರ ಮೇಲೆ ಪ್ರೀತಿಯನ್ನು ಹೊಂದಿ ಯಾರನ್ನೂ ದ್ವೇಷಿಸದೇ ನಮ್ಮ ಕಾಲವನ್ನು ಫಲಪ್ರದಗೊಳಿಸಬೇಕಿದೆ.