ಈ ಬ್ಲಾಗ್ ಅನ್ನು ಹುಡುಕಿ

ಮಂಗಳವಾರ, ಅಕ್ಟೋಬರ್ 25, 2022

ನೀರೋನೋ ರಾಜ್ಯದಲಿ...

 ನೀರೋನೋ ರಾಜ್ಯದಲ್ಲಿ...














ನೀರೋನೋ ರಾಜ್ಯದಲಿ... 

ದೇಹ ಸುಡಲಿಕ್ಕೆ 

ಹಲವು ಕಾರಣಗಳುಂಟು!

ಸುಡುವ ಬೇಗುದಿಗೆ

ನಮ್ಮ ಪರಮಭಕ್ತಿ ಇಹುದು.

'ಇಲ್ಲ'ವೆಂಬುದೇ ನಮ್ಮ 

ದಾಸ್ಯದಾಕೃತಿಯ ಚರಿತೆ.


ಹಣ ಇದ್ದವರ, ಅಧಿಕಾರವುಳ್ಳವರ,

ಒಳಮಾರ್ಗದ ಏಡಿ ಕೊಂಡಿಗಳ,

ಯೌವನದ ಹಸಿದಾವರೆಯ,

ಭೂಮಾಲಿಕರ,  ವಿಷಯ ಸಾಧಕರ, 

ವೇಷನಾದಕರ, ನೆತ್ತರಿನ ದಳ್ಳುರಿಯ,

ವಿದ್ಯೆಯ ಕುಶಲ ಜಾತರ ಈ ಎಲ್ಲರ

ಜವಾಬ್ದಾರಿ ಪೀಠತೋಟದಿ

ಬೆಳೆದ ಮಧುವಣ್ಣಿನ ರಸವನೀರಲು

ಕುಳಿತಿಹರು ಇವರೆಲ್ಲಾ ಒಟ್ಟೊಟ್ಟಿಗೆ...

ಅಂದು ರೋಮ್ ನಲ್ಲಿ

ನೀರೋ ಆಜ್ಞೆಮಾಡಿದನು.

ಎಳೆದು ತನ್ನಿ ಖೈದಿಗಳ 

ಸುಡಲಿಕ್ಕೆ ಸೌದಿಲ್ಲ

ನಮಗೆ ಬೆಳಕು ಬೇಕೀಗ...

ಇಂದು ನಮ್ಮಲ್ಲಿ ಹಲವು

ನೀರೋಗಳು, ಆಜ್ಞೆ ಮಾಡುವುದಿಲ್ಲ

ನಿಮ್ಮ ಸೇವೆಯೇ 

ನಮ್ಮ ಪರಮ ಗುರಿ ಎನ್ನುವರು

ಸೇವೆಯ ನೆಪದಲ್ಲಿ

ಸಾವನೊದಿಸುವರು.


ನಿತ್ಯವೂ ಔತಣಕೂಟ

ದುಡಿಯುವವರು 

ದುಡಿಯುತ್ತಲೇ ಇದ್ದಾರೆ.

ದುಡಿಸಲು ಬೀಸುವರು

'ಖಾಸಗಿ'ಯ ಗಾಳ!

ರಕ್ತ ಹೀರುವ ತನಕ

ಸುಂದರ ನೌಕೆಯ ಪಯಣ.

ದಾಸ್ಯದ ಪರವಾಗಿ

ನಿಂತ ವೇಷಗಾರರು 

ದಸ್ಯುಗಳ ಸೇವಕರೇ

ಮರೆಯ ಮರೆಯಲ್ಲಿ

ಮಧುವ ನೀಡುತ, ಮಧುರವಾಡುತ,

ಕುಣಿದ ದೇಹಹಿತ..

ಎಲ್ಲರೂ ಸುಡುವ ಸೌದಿಗಳೇ


'ಇಲ್ಲ'ದವರ ಹಿತ ಕಾಯುವ

'ಇರು'ವವರ ಜನ್ಮಗಳು

ನೀರೋ ಅವತಾರಗಳೇ..

ದತ್ತು ಮಗನಾಗಿ, 

ಗಂಡನನೇ ಕೊಂದವಳಿಗೆ ಮಗನಾಗಿ,

ಇವರ ಮಗಳಿಗೆ ಗಂಡನಾಗಿ,

ಆ ತಾಯಿಯನೇ ಕೊಂದವನಾಗಿ,

ಕೆಲವು ಅನುರಕ್ತಿಯ 

ಕಾಮಭೋಗಗಳಿಗೆ ತನ್ನೆಂಡತಿಯನೇ ತ್ಯಜಿಸಿ,

ಸಾಧುವಾದವನು,

ಕವಿಯಾಗಿ, ಕಲಾವಿದನಾಗಿ

ಒಣಜಂಬದಿ ದೇಶ ಸುಟ್ಟವನು.


ಸಭೆಯ ಮಾತುಗಳಲ್ಲಿ,

ಕಣ್ಣೀರು ಒರೆಸುತ, ಬೆವರೆಡೆಗೆ

ಬಂದ ಕಾಲ್ನಡಿಗೆ ಪಯಣದಲಿ

ಹಣ ಚೆಲ್ಲಿದ ಕಥೆಗಳಿವೆ.

ಸಂಬಳದ, ಅಧಿಕಾರದ 

ಹೆಚ್ಚಳದ ನಿಚ್ಚಳದಿ

ಬಡತನಕೆ ಸಾಂತ್ವನಗೈದ 

ಸಂಭ್ರಮದ ಕಥೆಯಲ್ಲಿ

ಭ್ರಷ್ಟಾಚಾರದ ಬೆವರವಾಸನೆಯಿದೆ

ನೀರೋ ಕಲ್ಪಿತ ಕಥೆಯ

ಚರಿತ್ರೆಯ ಪುತ್ಥಳಿ.

ಇವರೆಲ್ಲಾ ನಿತ್ಯ ವ್ಯಥೆಯ

ವಾಸ್ತವದ ದಾಳಿ.

ಬೆವರಿಗೂ ಭಯವಿದೆ, ಗಾಳಿಚಿಂತೆ.


ಇರುವವರ ಚರಿತೆಯಲಿ

ಶ್ರೀಮಂತ ಕಥೆಗಳಿವೆ

ನೋವಿನ ನರ್ತನಕೂ

ಅಧಿಕ ಪೀಠ, ಶ್ರೀಮಂತ ನೋಟ.

ಸುಡುವ ವಾಸನೆಗೆ ದಾಸ್ಯದ ಹೆಸರಿಲ್ಲ

ಗೌರವದ ರೇಷ್ಮೆಯಲಿ

ನಲಿವ ನೇಣು, ನಗುತ ನಿಂತಿವೆ

ಸಾಲು ಬಡತನದ ಗೋಣು.


'ಇಲ್ಲ'ದ ಕಥೆಯಲ್ಲಿ ಇದು ನಿತ್ಯ ನಾಕ

'ಇರು'ವವರ ಆರಾಧನೆಯು ಸಗ್ಗವಿವೇಕ

ಇಲ್ಲಿ ಬಾ, ಮೆಲ್ಲನೆ ನೀನು ನೀನಾಗಿ

ನಂಬದಿರು ರೂಪಗಳ ಕ್ಷಣಹಿತದ ಸುಖದಿ.


-ಅಂಕುರ