ಈ ಬ್ಲಾಗ್ ಅನ್ನು ಹುಡುಕಿ

ಸೋಮವಾರ, ಜೂನ್ 12, 2023

ಮೆಟ್ರೊ ಕಥನ - ೮೫

 ಮೆಟ್ರೊ ಕಥನ - ೮೫


ಅರೆಕಾಲಿಕ ಉದ್ಯೊಗಿ ಹೆಂಗಸು ಖುಷಿಯಿಂದ ಬಂದಳು. ಏನಮ್ಮ ಇಷ್ಟು ಖುಷಿಯಾಗಿದ್ದೀಯಾ ಎಂದಾಗ ಏನಿಲ್ಲ ಸಾ.. ನಿಜವಾಗಿಯೂ ಇವತ್ತಿಂದ ಬಸ್ ಚಾರ್ಜ್ ತೆಗೆದುಕೊಳ್ಳಲಿಲ್ಲ. ಬರೋ  ಸಂಬಳದಲ್ಲಿ ಸಾವಿರದೈನೂರು ಚಾರ್ಜೆ ಆಗ್ತಿತ್ತು. ಇನ್ಮೆಲೆ ಇದನ್ನಾದರೂ ಉಳಿಸಬಹುದು ಎಂದಳು. ಈಕೆ ಖುಷಿಯಲ್ಲಿ ಯಾವ ಸರ್ಕಾರ, ಯಾವ ಮಂತ್ರಿ ಏನೂ ಮುಖ್ಯವಾಗದೆ ತನ್ನ ಬಡತನವಷ್ಟೆ ಮಾತಾಡಿಸುತ್ತಿತ್ತು.


- ಅಂಕುರ

ಮೆಟ್ರೊ ಕಥನ - ೮೪

 ಮೆಟ್ರೊ ಕಥನ - ೮೪

ಮೆಟ್ರೋ ಕಥನ 


ಸರ್ಕಾರಿ ಉದ್ಯೋಗಿಯೊಬ್ಬ, ತನ್ನ ನೆಮ್ಮದಿಯ ಜೊತೆಯಲ್ಲಿ  ನಿರುದ್ಯೋಗಿಗಳಿಗೆ ಸೇವೆ ಮಾಡಲು ಪ್ರಾರಂಭಿಸಿದನು. ಆರಂಭದಲ್ಲಿ ತನ್ನ ಸೇವೆಗೆ ಆಸಕ್ತರ ಪ್ರತಿಕ್ರಿಯೆ ಲಕ್ಷ ಜನರ ತಲುಪಿತು. ಖುಷಿಯೂ ಆಯಿತು. ತನ್ನ ಶ್ರಮಕ್ಕೆ ಪ್ರತಿಫಲವಾಗಿ ಹೀಗೆ ಆಲೋಚಿಸುವಾಗ ಒಬ್ಬೊಬ್ಬರಿಂದ ಒಂದೊಂದು ರೂ ಸಂಗ್ರಹಿಸೋಣ ಸಾಕು ಎನಿಸಿ, ಉಪಾಯ ಹುಡುಕಿದ. ಅದರ ಫಲವಾಗಿ ಲಕ್ಷಾಂತರ ಹಣ ದೊರೆಯಿತು. ಸೇವೆ ಉದ್ಯಮವಾಯಿತು. ಈಗ ನೌಕರಿಯನ್ನೇ ಬಿಡುವ ಆಲೋಚನೆ ಮಾಡಿದ್ದಾನೆ.


- ಅಂಕುರ


ಮೆಟ್ರೋ ಕಥನ - ೮೩

 ಮೆಟ್ರೋ ಕಥನ - ೮೩

ನಮ್ಮೂರ ಎಲ್ಲಾ ಹೆಣ್ಮಕ್ಕಳಿಗೆ ದುಡ್ಡಿಲ್ಲದೆ ಅರಾಮಾಗಿ ಸರ್ಕಾರಿ ಬಸ್ಸಲ್ಲಿ ತಿರುಗಾಡುವ ಯೋಗ ದೊರೆಯಿತು. ಅಕ್ಕಿ, ಬೇಳೆ, ಎಣ್ಣೆ,ಗ್ಯಾಸು ಅದು ಇದು ಅಂತ ಸಿಟ್ಟಿಗೆದ್ದವರೆಲ್ಲಾ ತಣ್ಣಗಾದರು. ಸ್ವಸಹಾಯ ಹಾಗೂ ಸಾವಿತ್ರಿ, ಅಕ್ಕ, ಅಮ್ಮ ಸಂಘದ ಮಹಿಳೆಯರೆಲ್ಲಾ ಪ್ರವಾಸ ಹೊರಟರು. ಧರ್ಮಸ್ಥಳ, ಕುಕ್ಕೆ, ಕಟೀಲು, ಮುರುಡೇಶ್ವರ, ಸಿಗಂಧೂರು, ಜೋಗ, ಹೊರನಾಡು, ಶೃಂಗೇರಿ ಒಂದು ಸುತ್ತು ಹೋಗಬೇಕು ಅಂತ ಯೋಚ್ನೆ ಮಾಡ್ತಾವ್ರೆ. ಫುಲ್ ಟೈಟಾಗಿ ಇದನ್ನೆಲ್ಲಾ ಗಮನಿಸುತ್ತಿದ್ದ ಪರಮೇಶಿಯು ಈ ಸರ್ಕಾರ ಸರಿ ಇಲ್ಲ ಎಂದನು.

- ಅಂಕುರ 

ಮೆಟ್ರೋ ಕಥನ -೮೨

 ಮೆಟ್ರೋ ಕಥನ -೮೨

ಇತ್ತೀಚಿನ ಸಚಿವ ದೇವಾಲಯಕ್ಕೆ ಲಕ್ಷ ನೀಡಿದ್ದು, ಮನೆಯಲ್ಲಿ ಹೋಮ ಮಾಡಿಸಿದ್ದು, ಇವತ್ತು ಅಲ್ಲೆಲ್ಲೊ ಹರಕೆ ತೀರಿಸಿದ್ದು ಕುರಿತು ಅರಳಿಕಟ್ಟೆ ಮಾತು ಜೋರಾಗಿ ನಡೆದಿತ್ತು. ಕೇಳುವ ತನಕ ಕೇಳಿ ರಾಜಣ್ಣ ಹೀಗೆ ನುಡಿದನು. ದುಡ್ಡು ಇರೋರು ಕಥೆ ಒಂತರಾ, ಇಲ್ಲದೆ ಇರೋರು ಕತೆ ಇನ್ನೊಂತರ. ಅಲ್ಲೋಡು ಶ್ಯಾಮಣ್ಣ ಕಾಸಿಲ್ಲದೆ  ಹಾಗೇ ಮರೆಲಿ ಹೋಗ್ತಾ ಇದಾನೆ. ಇಲ್ಲೋಡು ಲಕ್ಷ್ಮಮ್ಮ ಯಾರಾದರೂ ಒಂದು ಮೊಳ ಹೂ ಕೊಳ್ಳಲಿ ಅಂತ ನಾಲ್ಕು ದಿಕ್ಕು ನೋಡ್ತಾವ್ಳೆ. ಆ ನಿಂಗಮ್ಮ ಹಣ ಮಾಡೋ ಆಸೆಲಿ ದಿನಕ್ಕೆ ಒಂದೊತ್ತು ಊಟ ಮಾಡುತ್ತೆ, ಇದೆ ಪ್ರಪಂಚ. ಅವರವರ ಅವರವರ ದೃಷ್ಟಿಯಲ್ಲಿ ಅವರು ಮಾಡಿದ್ದೆಲ್ಲ ಸರಿನೆ.


- ಅಂಕುರ

ಮೆಟ್ರೋ ಕಥನ - ೮೧

ಮೆಟ್ರೋ ಕಥನ - ೮೧ 

ಹಣವು ಜೇಬಿನಿಂದ ಜೇಬಿಗೆ ಸಾಗುತ್ತಿತ್ತು. ಅದು ಯಾವುದೇ ಮೈಲಿಗೆ ಇಲ್ಲದೆ ಮೌಲ್ಯ ಪಡೆಯುತ್ತಿತ್ತು. ಸುಳ್ಳು ಹೇಳಿಸಿತು. ಮೋಸ ಮಾಡಿಸಿತು. ಅನ್ಯಾಯ, ಅಧರ್ಮ, ಅತ್ಯಾಚಾರ ಎಲ್ಲಕ್ಕೂ ಕಾರಣವಾಯಿತು. ಒಟ್ಟಾರೆ ಬೆವರಲ್ಲಿ ತೃಪ್ತಿ ಕಂಡಿತು. ಕಾರಣಕ್ಕಿಂತ ಕಾರ್ಯದಲ್ಲಿ ಸಾಗಿತು.

ಮೆಟ್ರೋ ಕಥನ - ೮೦

 ಮೆಟ್ರೋ ಕಥನ - ೮೦


ರಾತ್ರೋರಾತ್ರಿ ವೈರಲ್ ಮೂಲಕ ಪ್ರಚಲಿತವಾದ ಹೆಣ್ಣೊಬ್ಬಳು ನಾಳೆಯೇ ನಟಿಯಾಗುವ ಕನಸು ಕಂಡಳು. ಕರೆದಲ್ಲೆಲ್ಲಾ ಸನ್ಮಾನ, ಗೌರವ ಪಡೆದಳು. ಆಕೆಯ ಅಜ್ಜಿ 'ತಾಳಿದವಳು ಬಾಳಿಯಾಳು' ಅಷ್ಟೆಲ್ಲಾ ಕನಸು ಕಾಣಬೇಡಮ್ಮ ನಿಧಾನವಾಗಿ ಹೆಜ್ಜೆ ಇಡು ಎಂದಿತು. ಅಜ್ಜಿ, ಸಿಗುವಾಗ ಪಡೆಯದವರು ಮೂರ್ಖರು ಎಂದು ಸಮಾಧಾನ ಮಾಡಿದಳು. ಆಕೆಯ ಕನಸು, ವೇಗ ಎಲ್ಲವೂ ವಿಚಿತ್ರವಾಗಿತ್ತು. ಸಿನಿಮಾ, ಧಾರವಾಹಿ, ತೆರೆಯ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲೂ ಆಕೆಯೆ. ಆದರೆ ದಿನ ಕಳೆದಂತೆ ಅವಕಾಶ ಕಡಿಮೆಯಾದವು. ಜ್ಞಾನವಿಲ್ಲದ ಕಾರಣ, ಕಲಿಕೆಯ ಆಸಕ್ತಿಗಿಂತ ಪ್ರಸಿದ್ದಿಯ ಹುಚ್ಚು ಇರುವ ಕಾರಣ ಅವಕಾಶ ಇಲ್ಲವಾದವು. ಈಗ ಮನೆಯಿಂದ ಆಚೆ ಬರುವುದೇ ಕಷ್ಟವಾಗಿದೆ. ಚಿಕ್ಕಪುಟ್ಟ ಖರ್ಚಿಗೂ ಕಷ್ಟವಿದೆ. ದೇಹಮಾರುವ ಹಂತಕ್ಕೆ ಬಂದಳು. ಆದರೆ ಸಮಾಜವು ಆ ತರಹ ಇರಲಿಲ್ಲ. ಈಗ ಅವಳ ಬದುಕು ಅಜ್ಜಿಯ ಮಾತನ್ನು ಆಲೋಚಿಸುತ್ತಿದೆ. ಅಜ್ಜಿ ಈಗ ಗೋಡೆಯ ಮೇಲೆ ಚಿತ್ರದಲ್ಲಿ ನಗುತ್ತಿದೆ.

- ಅಂಕುರ

ಮೆಟ್ರೋ ಕಥನ - ೭೯

ಮೆಟ್ರೋ ಕಥನ - ೭೯ 

ಫೋಟೋದಲ್ಲಿ ಕಾಣುತ್ತಿದ್ದ ಗಾಂಧಿ ಮತ್ತು ಬೋಸ್ ಪರಸ್ಪರ ಮಾತನಾಡುತ್ತಿದ್ದರು. ನೋಡಿ ಗಾಂಧಿಯವರೇ ಸರಿಯಾಗಿ ಓದದೇ ಇದ್ದರೆ ತಮ್ಮ ಕರ್ತವ್ಯ ಮರೆತು ತಿಲಕ, ಶಾಲು, ಧರ್ಮ, ಜಾತಿ ಅಂತ ಅಧಿಕಾರಿಗಳೇ ಅವಿದ್ಯೆ ಪ್ರದರ್ಶನ ಮಾಡ್ತಾರೆ ಎಂದರು. ಗಾಂಧಿ ಅದಕ್ಕೆ ಉತ್ತರವಾಗಿ ಹೌದದು ಮೂರ್ತಿ, ಜಯಂತಿ, ಮೆರವಣಿಗೆ ಅಂತ ವಿದ್ಯೆ ಕಲಿತವರೆ ನಮ್ಮ ಹೆಸರುಗಳನ್ನು ಬಳಸಿ ಲಾಭಿ ಮಾಡ್ತಾ ಇದ್ದಾರೆ. ನಾವು ಎಂದಾದರೂ ಇಂತಹ ಅನಾಗರಿಕತೆ ಬಯಸಿದ್ದೆವಾ? ಎಂದಾಗ ಬೋಸ್ ಅವರು 'ನಾವು ಇಲ್ಲ ಅಂತ ಅವರಿಗೆ ಈಗಾಗಲೇ ಗೊತ್ತಿದೆ' ಎಂದು ನಕ್ಕರು.

- ಅಂಕುರ

ಮೆಟ್ರೋ ಕಥನ - ೭೮

ಮೆಟ್ರೋ ಕಥನ - ೭೮ 

ಚಂದ್ರನೆಂದರೆ ಶಾಂತಿ, ನೆಮ್ಮದಿ ಎಂದರ್ಥ. ತಂಪು ಕಾಂತಿ ನೀಡುವ ಚಂದ್ರನ ಬೆಳಕಲ್ಲಿ ಅದೆಷ್ಟೋ ಜನಪದ ಕಥೆಗಳು ತಲೆಯಿಂದ ತಲೆ ನುಡಿಯಾಗಿದ್ದವು. ಕಥೆಯೊಂದಿಗೆ ಊಟ, ಕೆಲವೊಮ್ಮೆ ಕೆಲಸಗಳು ಹೀಗೆ ಕೃಷಿ- ಖುಷಿ ಎರಡೂ ಇತ್ತು. ಕಣದ ಬಣವೆ ಹುಲ್ಲಿನ ಗುಡಿಸಲು ಕಟ್ಟಿ ಆಕಾಶ ನೋಡುತ್ತಾ ಮಲಗುವ ಸ್ವರ್ಗವೇ ಹಾಲು ಚೆಲ್ಲುವ ಹಾದಿ. ಈಗ ನಮಗೆ ಚಂದ್ರನ ಸಹಾಯವೆಂದರೆ ಎಲ್ಲರ ಮೊಬೈಲ್ ನಲ್ಲೂ ತೊಂದರೆ ಕೊಡಬೇಡಿ ಎಂಬ ಬಟನ್ ಮೂಲಕ ನೆಮ್ಮದಿಯ ಸಂಕೇತವಾಗಿದೆ.


- ಅಂಕುರ