ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಸೆಪ್ಟೆಂಬರ್ 2, 2018

ಕೃಷ್ಣ ರಾಧೆಯರ ಕಥೆಯು..

ಕೃಷ್ಣನೆಂದರೆ ಪ್ರೇಮ
ರಾಧೆಯದರ ಭಾವ
ಮನುಜರೋಲಿಕೆಯ
ದೇಹವಿಲ್ಲ, ದಾಹ ಮೊದಲಿಲ್ಲ!

ಕೊಳಲದೋ ಜಗದನಿಯು
ಸವಿದಳು ಮನದನ್ನೆ
ಶೃಂಗಾರ ಮೋಹದಲಿ
ಹುಟ್ಟಿದನು ಕಾಮ
ರತಿಯ ರಮಣಾಂಕಿತದಿ

ನವಿಲು ಚಿತ್ರದ ನಗುವೆ
ಕುಂಚದೊಳಗಿನ ಒಲವೆ
ನೋಟದೊಳಗಿನ ಕೂಟ
ಚಿತ್ತಾರ ಬರೆದ ಚೈತ್ರ ಸಾರ

ಕೃಷ್ಣನೆಂದರೆ ಗೊಂಬೆ
ರಾಧೆಯೊಳು ನೀ ಕಾಂಬೆ
ನನ್ನೊಳಗೆ ನೀ ನಂಬೆ
ಅಂಬಿಗನು ನಾನು
ಜಗದ ಸಂಸಾರದಲಿ- ಅಂಕುರ
*ದ್ಯೋತಕ*

ಹೌದು, ಎನ್ನುವುದಾದರೆ ಹೌದು!
ಇಲ್ಲ ಎಂಬುದಕ್ಕೆ ಸಾಕ್ಷಿಯ ಕೊರತೆ.

ದೇವರೆಂದರೆ
ಕ್ರಿಯಾತ್ಮಕ ನಂಬಿಕೆ
ಇಲ್ಲಿ ಅರ್ಧ ಜನ ಅಜ್ಞಾನಿಗಳು.
ಕಾಲು ಪಾಲು ಮೂರ್ಖರು..
ಉಳಿದವರ ಎದೆಯಲ್ಲಿ
ಉಸಿರಾಟವಿದೆ.

ಧರ್ಮವೆಂದರೆ
ಮನೋ ಚೈತನ್ಯ.
ಇಲ್ಲವೆಂದೂ, ಇದೆಯೆಂದು,
ಒಂದಕ್ಕೆ ಜೋತು ಬಿದ್ದ,
ಹಗಲು ಬಾವಲಿ ಕಥೆಗೆ
ಪೌರೋಹಿತ್ಯ ಕೀಲಿಕೈ.

ಶಿಕ್ಷಣವಿದು ಬೆಳಕು
ಅಂತಃಶಕ್ತಿಯ ಅರಿವು
ನೇತು ಹಾಕಿದ್ದೇವೆ ಅಳತೆ
ಆಯಾಮದಲಿ
ನಾಲ್ಕು ಗೋಡೆಯ ನಡುವೆ
ನಾತವಾಗಿದೆ ಮನಸು
ಕಲಿಯಲಾಗದ ಪ್ರಕೃತಿ
ಈಗ ವಿಕೋಪದ ನೃತ್ಯ ಶಾಲೆ.

ಸಾಕು ಮಾಡುವೆ ಸೊಲ್ಲು
ಹಣದ ಅಳತೆಯ ಗೆಲ್ಲು
ನೀತಿ-ಸೂತಕವಾಗಿ
ದೇಶ ದ್ಯೋತಕವಾಗಿ
ಎಲ್ಲವೂ ಕ್ಷಣ ಮೆಚ್ಚುವ
ತಕ್ಷಣವೇ ಚುಚ್ಚುವ
ತನ್ನೊಳಗೆ ತಾ ಮುಚ್ಚುವ
ಸ್ವಚ್ಛ ನೀರಿನ ನಳಿನಾನನೆ..!-ಅಂಕುರ