ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಜೂನ್ 2, 2023

ಮೆಟ್ರೋ ಕಥನ - ೬೯

 ಮೆಟ್ರೋ ಕಥನ - ೬೯


ಅವನು ಮಾತಿನ ಮೋಡಿಗಾರ. ಮೌನವನ್ನೂ ನಾಜೂಕಿನಿಂದ ಮಾತನಾಡಿಸಬಲ್ಲ. ಸುಳ್ಳನ್ನು ಸತ್ಯದಂತೆ ನಂಬಿಸಬಲ್ಲ. ಎಲ್ಲರಿಗೂ ಅವನ ಬರುವಿಕೆಯೇ ಕಾತುರ. ಇರುವಿಕೆಯಂತೂ ಹರ್ಷದಬ್ಬ. ಏಕೆಂದರೆ ಅವನು ರೇಡಿಯೋ ನಿರೂಪಕ.


- ಅಂಕುರ


ಮೆಟ್ರೋ ಕಥನ - ೬೮

 ಮೆಟ್ರೋ ಕಥನ - ೬೮


ಮೇಷ್ಟ್ರು ಹೇಳಿದರು,

ದಿನ ಎರಡು ನಿಮಿಷ ನಿಮ್ಮ ಬೆಸ್ಟ್ ಪ್ರೆಂಡ್ ಗೆ ಸಮಯಕೊಡಿ. ನಿಮ್ಮನ್ನು ಬೌದ್ಧಿಕವಾಗಿ ಗೆಲ್ಲಿಸುತ್ತಾನೆ ಎಂದರು.

ಸರ್ ಸಾಕಷ್ಟು ಸಮಯ ಕೊಡ್ತಿವಿ ಸರ್, ಫ್ರೆಂಡ್ಸ್ ಜೊತೆಯಲ್ಲೇ ವಾಸ ಸರ್, ಜೊತೆಯಲ್ಲಿಯೇ ತಿಂಡಿ-ಊಟ ಸರ್ ಒಬ್ಬೊಬ್ಬರು ಒಂದೊಂದು ಹೇಳಿದರು. 

ಬೆಸ್ಟ್ ಫ್ರೆಂಡ್ ಎಂದರೆ ಸುದ್ದಿ ಪತ್ರಿಕೆಗಳು ನೀವು ಇವರಿಗಾಗಿ ಅಷ್ಟು ಸಮಯ ಕೊಡ್ತಿರಾ ಎಂದು ಮೇಷ್ಟ್ರು ಆಶ್ಚರ್ಯವಾದಾಗ, ವಿದ್ಯಾರ್ಥಿಗಳು ನಾಚಿ ನೀರಾದರು.

ಪರಿಣಾಮವೆಂಬಂತೆ ಪತ್ರಿಕೆಗಳ ಓದು ಹೆಚ್ಚಾಯಿತು. ಅದೇ ವಿದ್ಯಾರ್ಥಿಗಳು ಸಾಧಿಸಿ, ಅದೇ ಪತ್ರಿಕೆಯಲ್ಲಿ ವಿದ್ಯಾರ್ಥಿಗಳು ಬೆಸ್ಟ್ ಫ್ರೆಂಡ್ ಕಥೆ ಹೇಳಿದ್ದರು.


- ಅಂಕುರ

ಮೆಟ್ರೋ ಕಥನ - ೬೭

 ಮೆಟ್ರೋ ಕಥನ - ೬೭


ಹೆಣ್ಣು ಹುಡುಗಿಯು ಕುರಿಯನ್ನು ಕತ್ತರಿಸಿದ ಬಗೆಗೆ ಎಲ್ಲರೂ ವಾವ್! ಎಂದರು. ಪವರ್ ಅಂದ್ರೆ ಇದು ಎಂದರು. ಆದರೆ, ಯಾವ ಬಲಿಯನ್ನೂ ಕೊಡದೆ, ಮನೆಯನ್ನು ಸ್ವಚ್ಛ ಮಾಡಿ, ಮನಸ್ಸುಗಳನ್ನು ಶುದ್ಧಮಾಡಿ, ಬೆಂದು-ಬೇಯಿಸಿ ಎದೆಗೆ ಅಕ್ಷರವಿತ್ತ ಹೆಣ್ಣನ್ನು ಕಂಡು ಯಾರೂ ವಾವ್ ಎನ್ನಲಿಲ್ಲ. ಅದು ಬಳೆ ತೊಟ್ಟುಕೊಂಡ ಹೇಡಿ ಎಂದೆ ಪ್ರಚಾರವಾಯಿತು. 

ಸಾಹಿತಿಗಳು ಬರೆದದ್ದು ಅಕ್ಷರದಲ್ಲೆ ಉಳಿಯಿತು. ಏಕೆಂದರೆ ಸ್ಥಿತ್ಯಂತರ ಹೊಂದದಿರುವವರು ಎಂದಿಗೂ ಓದುವುದೇ ಇಲ್ಲ.


- ಅಂಕುರ

ಮೆಟ್ರೋ ಕಥನ - ೬೬

 ಮೆಟ್ರೋ ಕಥನ - ೬೬


ಯುವಕನ ಸಾವಿಗೆ ಎಲ್ಲರೂ ಮಮ್ಮಲ ಮರುಗಿದರು. ಓಂ ಶಾಂತಿ, ಮತ್ತೆ ಹುಟ್ಟಿ ಬಾ, ಇದು ತುಂಬಲಾರದ ನಷ್ಟ ಹೀಗೆ ಹಲವಾರು ನೊಂದ ನುಡಿಗಳ ಸಿಕ್ಕಲ್ಲೆಲ್ಲಾ ಬರೆದರು. ಹುಡುಗನ ತಾಯಿ ಆಸ್ಪತ್ರೆಯಲ್ಲಿ ಬಿಲ್ಲು ಕಟ್ಟಲಾಗದೆ, ತಾಳಿ ಮಾರಿ ಹೆಣ ತಂದಳು. ಸಂಸ್ಕಾರಕ್ಕೆ ಹಣ ಇಲ್ಲದೆ, ಸಿಕ್ಕಸಿಕ್ಕವರಲ್ಲಿ ಅಂಗಲಾಚಿ ಮಣ್ಣು ಮಾಡಿದಳು. ಆದರೆ ಮಾಧ್ಯಮ ಇನ್ನೂ ಮಾತಾಡುತ್ತಲೆ ಇತ್ತು. ಇದ್ದಾಗ ಮಾತಾಡಿಸದ, ಕಷ್ಟ ಎಂದಾಗ ಕೈ ಹಿಡಿಯದ ಜನರೆಲ್ಲಾ ಎಲ್ಲದನ್ನೂ ಸೂತಕದಂತೆ ಕಳುಚುತ್ತಾರೆ. ಮಾತು ಕೃತಿಯಾಗಲಿಲ್ಲ.


- ಅಂಕುರ

ಮೆಟ್ರೋ ಕಥನ - ೬೫

 ಮೆಟ್ರೋ ಕಥನ - ೬೫


ಮೇಷ್ಟ್ರು ಹೇಳಿದರು,

ನೀವು ನಿತ್ಯವೂ ಬಿಟ್ಟುಕೊಡುವುದರಲ್ಲಿ ಖುಷಿ ಕಾಣುತ್ತಿರಿ. ಪಡೆದುಕೊಳ್ಳುವ ಖುಷಿ ಕಾಣಬೇಕು ಎಂದರು.

ಈ ಬಿಟ್ಟುಕೊಡುವುದು ಎಂದರೇನು ಸರ್ ಎಂದನು ವಿದ್ಯಾರ್ಥಿ.

ನನ್ನ ಆಸಕ್ತಿ, ಕ್ಷೇತ್ರ, ವಿಷಯ ಎಂದು ಬೇಲಿ ಹಾಕಿಕೊಂಡು ಕಲಿಕೆಯನ್ನು ಮಿತಗೊಳಿಸಿಕೊಳ್ಳುತ್ತಿದ್ದೇವೆ. ನಮಗೆ ಮನುಷ್ಯ ಕಲಿಯುವ ಎಲ್ಲದನ್ನೂ ಕಲಿಯುವ ಶಕ್ತಿ ಇದೆ. ಸಾಯುವವರೆಗೂ ಕೇವಲ ೨೦% ಅಷ್ಟೇ ನಮ್ಮ ಮಿದುಳಿನ ಬಳಕೆಯಾಗುವುದು ಎಂದರು ಮೇಷ್ಟ್ರು.

ವಿದ್ಯಾರ್ಥಿಗಳಿಗೆ ತಮ್ಮ ಶಕ್ತಿಯ ಕುರಿತು ಆಶ್ಚರ್ಯವಾಯಿತು.


- ಅಂಕುರ

ಮೆಟ್ರೋ ಕಥನ - ೬೪

 ಮೆಟ್ರೋ ಕಥನ - ೬೪

ಗಂಡ ಹೆಂಡತಿಗೆ ಜಗಳವಾಗಿ ತನ್ನ ಊರಿನ ಅಜ್ಜಿಯ ಬಳಿ ಹೋದರು‌. ಇಬ್ಬರೂ ಸಾಕಷ್ಟು ದೂರು ಹೇಳಿಕೊಂಡರು. ಅಜ್ಜಿ ಕೇಳುವ ತನಕ ಕೇಳಿ, ಕೊನೆಗೆ ಒಂದೇ ಒಂದು ಮಾತು ಹೇಳಿತು. 'ಗಂಡಿಗೆ ಚಟ, ಹೆಣ್ಣಿಗೆ ಹಠ' ಇಲ್ಲದೆ ಇದ್ರೆ, ನೀವೆ ಬಂಗಾರ ಆಗ್ತಿರಿ. ಅರ್ಥಮಾಡಿಕೊಂಡು ಬದುಕಿ ಅಂತು. ಇಬ್ಬರೂ ಮೌನವಾಗಿ ಮನೆಗೆ ಬಂದರು. ಎನೋ ಅರ್ಥವಾದಂತಾಗಿ ಮೆಲ್ಲಗೆ ನಕ್ಕರು.


- ಅಂಕುರ

ಮೆಟ್ರೋ ಕಥನ - ೬೩

 ಮೆಟ್ರೋ ಕಥನ - ೬೩

ಒಂದು ಊರಿನ ಜನರು ಸಿಗುವ ಆಸೆಗಾಗಿ ಕಳೆದುಕೊಂಡ, ಕೊಳ್ಳುವ ಎಲ್ಲವನ್ನೂ ಮರೆತರು. ೧ರೂ ಪಡೆದುಕೊಂಡು ೧೦೦ಕ್ಕಿಂತಲೂ ಹೆಚ್ಚು ದಂಡ ತೆರುವ ಲೆಕ್ಕಾಚಾರ ಕುರಿತು ಯಾವ ಅರಳಿಕಟ್ಟೆಯಲ್ಲೂ ಚರ್ಚೆಯಾಗಲಿಲ್ಲ. ಏಕೆಂದರೆ ಅವರ ರಾಜನು ಅವರಿಗೆಲ್ಲಾ ದೇವರು. ದೇವರ ಕುರಿತು ಕನಸಿನಲ್ಲೂ ಪ್ರಶ್ನಿಸಬಾರದೆಂಬ ನಂಬಿಕೆಯ ಮೂರ್ಖರಾಗಿದ್ದರು.


- ಅಂಕುರ

ಮೆಟ್ರೋ ಕಥನ - ೬೨

 ಮೆಟ್ರೋ ಕಥನ - ೬೨


ಮೊಲವೊಂದು ಮಕ್ಕಳನ್ನು ಮಣ್ಣಿನ ಗೂಡಿನಲ್ಲಿ ಮಡಗಿತ್ತು. ಆಹಾರ ಹುಡುಕಿ, ಹೊಟ್ಟೆ ತುಂಬಿಸಿಕೊಂಡು ಬಂದು ಮಣ್ಣು ತೆಗೆದು ಗೂಡಿನಿಂದ ಬರುವ ಮಕ್ಕಳಿಗೆ ಹಾಲುಣಿಸುತ್ತಿತ್ತು. ಎಂದಿನಂತೆ ಆಹಾರಕ್ಕೆ ಹೋದ ಮೊಲವು ತಿಂದದ್ದು ಚಿಗುರೆಲೆ, ಗರಿಕೆ ಅಷ್ಟೇ. ಆದರೆ ಆಚೆ ಬರುವಾಗ ಉರುಳಿಗೆ ಸಿಕ್ಕಿ ನರಳಾಡಿ ಸತ್ತಿತು.  ಉರುಳು ಬಿಟ್ಟ ನಾಗರಾಜನ ಮನೆಯಲ್ಲಿ ಮೊಲದ ಮಾಂಸ ಕುದಿಯುತ್ತಿದೆ. ತಾಯಿ ಬರುವ ಆಸೆಯಿಂದ ಮಕ್ಕಳು ಕಾಯುತ್ತಿವೆ.

ಕಾಡಿನಲ್ಲಿ ಅದೆಷ್ಟೋ ತಾಯಿಗಳು ಅನ್ನಕ್ಕಾಗಿ ಹೋಗಿ, ಮತ್ತೊಂದು ಪ್ರಾಣಿಗೆ ಅನ್ನವಾಗುತ್ತವೆ.


ಉರುಳು - ಉಳ್ಳು ಎಂದು ಕರೆಯುವರು. ತೆಳುವಾದ ತಂತಿಯಲ್ಲಿ ನೇಣಿನಂತೆ ಚಿಕ್ಕ ಚಿಕ್ಕ ವೃತ್ತಾಕಾರಗಳ ಜೋಡಣೆಯ ಬಲೆ


- ಅಂಕುರ

ಮೆಟ್ರೋ ಕಥನ - ೬೧

 ಮೆಟ್ರೋ ಕಥನ - ೬೧

ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕನಿಗೆ ಹೆಣ್ಣು ಕೊಡಲಿಲ್ಲ. ಸರ್ಕಾರಿ ಉದ್ಯೋಗಿಯನ್ನೇ ಹುಡುಕಿ ಮದುವೆಯಾದ ದಂಪತಿಗಳು, ತಮ್ಮ ಮಗುವನ್ನು ಶಾಲೆಗೆ ಸೇರಿಸಲು ಖಾಸಗಿ ಶಾಲೆಯನ್ನೇ ಹುಡುಕಿ ಬಂದರು.  


- ಅಂಕುರ

ಮೆಟ್ರೋ ಕಥನ - ೬೦

 ಮೆಟ್ರೋ ಕಥನ - ೬೦

ಇವಳು ಯಾವಾಗಲೂ ಹುಡುಕುತ್ತಲೇ ಇದ್ದಾಳೆ. ಅವಳ ಕಣ್ಣೀರು ಹೇಳಿಕೊಳ್ಳಲು ಒಂದು ನಂಬಿಕೆಯ ಜೀವ ಬೇಕಿದೆ. ಮುಖವಾಡಗಳೇ ಸ್ವಾರ್ಥದ ವೇಗದಲ್ಲಿ ಸಾಗುವಾಗ ಅವಳು ನಿತ್ಯ ಮೌನಿಯಾಗಿದ್ದಾಳೆ. ಎಲ್ಲರೊಂದಿಗೂ ಹರಟುವ, ತಿನ್ನುವ, ಸಾಗುವ ಇವಳಿಗೆ ಒಂದು ಸಾಂಗತ್ಯದ ಅಗತ್ಯವಿದೆ. ತಂದೆಯಲ್ಲಿ ಹುಡುಕಿದರೆ ವ್ಯವಹಾರದಲ್ಲೇ ಕಳೆದುಹೋಗಿದ್ದಾರೆ. ತಾಯಿಯೋ ತನ್ನದೇ ಲೋಕಕ್ಕಾಗಿ ಹಪಾಹಪಿಸುತ್ತಿದ್ದಾರೆ‌. ಸ್ನೇಹಿತರೋ ಒಬ್ಬೊಬ್ಬರು ಒಂದೊಂದು ರೀತಿ. ಲಾಭವೋ, ಸ್ವಾರ್ಥವೋ, ಕಾಮವೋ ಎನೋ ಉಪಯೋಗಿ ಮನಸ್ಸುಗಳ ಕಂಡು ಬೇಸತ್ತಿದ್ದಾಳೆ.

ಇವಳಿಗೆ ಇವಳದೇ ಮನಸ್ಸಿನ ಮತ್ತೊಂದು ಆಲೋಚನೆಯ ಮನಸ್ಸು ಬೇಕಿದೆ. ಇವಳು ಎಲ್ಲಾ ಕಡೆಯೂ ಇದ್ದಾಳೆ. ಎಲ್ಲರೊಳಗೂ ಇದ್ದಾಳೆ.


- ಅಂಕುರ

ಮೆಟ್ರೋ ಕಥನ - ೫೯

 ಮೆಟ್ರೋ ಕಥನ - ೫೯

ಕ್ಷೌರ ಮಾಡುತ್ತಿದ್ದ ಹುಡುಗ ಬಹಳ ಮಾತುಗಾರ. ಏನೇನೋ ಕೇಳಿದ. ನಾನು ಸ್ವಲ್ಪ ಮಾತು ಇಷ್ಟ ಪಡುವ ಕಾರಣ ಕೇಳಿದ್ದಕ್ಕೆಲ್ಲಾ ಹೇಳುತ್ತಿದ್ದೆ. ಎಲ್ಲಿ ತನಕ ಓದು ನಿಲ್ಲಿಸಿದೆ ಎಂದೆ. ಅದಕ್ಕೆ ಓದಲಿಲ್ಲ ಸಾರ್, ಎಂಟನೆ ತರಗತಿಗೆ ಹೋಗಲೇ ಇಲ್ಲ ಎಂದನು. ಹಾಗೇ ಮುಂದುವರೆಸುತ್ತಾ... ಸಾರ್ ಇದೆಲ್ಲಾ ಸುಮ್ಮನೆ ಕೆಲಸ ಮಾಡೋದು.. ನಾನೇನಿದ್ರು ಡೀಲಿಂಗ್ ಜಾಸ್ತಿ ಸಾರ್. ಆಗಂತ ದುಡ್ಡಿಗಾಗಿ ಮಾಡಲ್ಲ. ನನಗೆ ದೋಸ್ತಿಗಳು ಜಾಸ್ತಿ. ನಾವು ಯಾರು ತಂಟೆಗೂ ಹೋಗಲ್ಲ, ನಮ್ ತಂಟೆಗೆ ಬಂದ್ರೆ ಸುಮ್ಮನೆ ಬಿಡಲ್ಲ ಅಷ್ಟೇ. ಸಾರ್ ಒಂದು ವಿಚಾರ ಗೊತ್ತಾ! ನಮ್ಮದೆ ತಪ್ಪು ಜಾಸ್ತಿ ಇದ್ರೆ ಸೀದಾ ಸ್ಟೇಷನ್ ಗೆ ಹೋಗಿ ತಪ್ಪು ಒಪ್ಕೊತಿವಿ. ತಪ್ಪಿಲ್ಲ ಅಂದ್ರೆ ಯಾರೇ ಬಂದ್ರು ಫೈಟ್ ಮಾಡ್ತಿವಿ. ನಮಗೆ ಒಬ್ಬ ಅಣ್ಣ ಇದಾನೆ ಸಾರ್. ಯಾವಾಗಲೂ ಆತನೆ ನಮಗೆಲ್ಲ ದಾರಿ. ಸುಮ್ಮನೆ ಇರಬಾರದಲ ಅದಕೆ ಈ ಕೆಲಸ ಮಾಡ್ತಿನಿ ಎಂದ.

ಮಾತಾಡುತ್ತಲೇ ಬ್ಲೇಡು ಒತ್ತಿ, ಅಮ್ಮಾ! ಎಂದೆ. ಅಯ್ಯೋ, ನೋವಾಯ್ತ ಸಾರ್ ಎಂದನು. ಹಾಗೇನಿಲ್ಲ, ನೀವು ಕೊಲೆ ಮಾಡುವಾಗ ಪಾಪ! ಅದೆಷ್ಟು ನೋವಾಗಬಹುದು ಅಂತ ಭಯ ಆಯ್ತು ಅಂದೆ.

ಹೌದಲ್ವ ಸಾರ್ ಆದರೆ ಆ ತರ ಯೋಚನೆ ಬರಲಿಲ್ಲ ಎಂದನು.

ಅಂತೂ ಕ್ಷೌರ ಮುಗಿದು ಬರುವಾಗ, ಯೋಚನೆ ಮಾಡಪ್ಪ! ನೋವು ಚಿಕ್ಕದಾದ್ರೆನು, ದೊಡ್ಡದಾದ್ರೆನು..

ಬರ್ತಿನಿ ಎಂದು ಹೊರಟೆ.


- ಅಂಕುರ

ಮೆಟ್ರೋ ಕಥನ - ೫೮

 ಮೆಟ್ರೋ ಕಥನ - ೫೮


ಜೊತೆಯಲ್ಲಿ ಬೆಳೆದ ಎರಡು ಗಿಡಗಳಲ್ಲಿ ಮೊಗ್ಗುಗಳ ಕುಡಿ ಬಂದವು. ಪರಸ್ಪರ ನೋಟದಲ್ಲಿಯೇ ಪ್ರೇಮ ಬೆಳೆದು ಅರಳಿ ಪರಿಮಳ ಬೀರಲು ಸಿದ್ಧವಾದವು. ವಿಳಾಸವಿಲ್ಲದ ಮನುಷ್ಯನೊಬ್ಬ ಎಲ್ಲಾ ಕಿತ್ತನು. ಎಲ್ಲೋ ಕೊಂಡೊಯ್ದು, ಎಲ್ಲೋ ವ್ಯಾಪಾರ ಮಾಡಿದನು. ಎರಡೂ ಹೂಗಳು ಬೇರೆ ಬೇರೆ ಮನೆ ತಲುಪಿದವು. ಅವರವರ ಆಸೆಯಂತೆ ಎಲ್ಲಿಯೋ ಸುಂದರಗೊಳಿಸಿ ಒಣಗಿಸುವ ಕಾರ್ಯ ನಡೆದಿತ್ತು.

ಪ್ರೇಮ ವಿರಹದಲ್ಲಿದ್ದ ಹೂವುಗಳಿಗೆ ಬಾಡುವಾಸೆ ಇರದೆ, ಬಣ್ಣ ಮಂಕಾಗಿ, ಅರಳಿದ ಪರಿಮಳವು ಪ್ರೇಮದಲಿ ನಗುವ ಕನಸು ಕನಸಾಗಿಯೇ ಉಳಿದಿತು. ಆದರೆ ಹುಟ್ಟಿದ್ದ ಗಿಡಗಳು ಇನ್ನೂ ಅಲ್ಲೇ ಇವೆ, ಮತ್ತೊಮ್ಮೆ ಹೂಬಿಟ್ಟು ಪ್ರೇಮಿಸಬಹುದು. ಅಗಲಿಸುವ ಅದೆಷ್ಟೋ ಆಸೆಗಳು ದಿನದಿನವೂ ಕಿತ್ತು ಖುಷಿಪಟ್ಟರೂ ಗಿಡಗಳು ಮುನಿದಿಲ್ಲ. ಹತ್ತಿರದಿಂದ ಮನವಿಟ್ಟು ನೋಡಿದಾಗ ತಿಳಿಯಿತು. ಪ್ರೇಮಕ್ಕೆ ನೋವು - ಸಾವು ಇಲ್ಲ, ಅದೊಂದು ಸಂಚಲನ ಸವಿ.


- ಅಂಕುರ

ಮೆಟ್ರೋ ಕಥನ - ೫೭

 ಮೆಟ್ರೋ ಕಥನ - ೫೭


ಆ ರಾಗದಲ್ಲಿ ಪ್ರೇಮದ ಸೆಳೆತವಿತ್ತು. ಮಧು ನಿಶೆಯ ಮನೆಯಂತೆ, ನೀರಿನ ಸಂಚಲನದಂತೆ ಆವರಿಸಿದನು. ಕಾತುರದಿಂದ ಕಂಗೆಟ್ಟು ಹೋದೆ. ಹೃದಯ ಬಡಿತ ಹೆಚ್ಚಾಯಿತು. ಇಷ್ಟು ದಿನ ಅವನ ನೃತ್ಯವನ್ನು ಹಣಕೊಟ್ಟು ನೋಡುತ್ತಿದ್ದೆ. 

ಈಗ ಇಲ್ಲೆ, ಕಣ್ಣೆದುರಲ್ಲೆ, ಹುಡುಕಿದೆ...

ಆ ಪ್ರಶಾಂತ ಬಯಲಲ್ಲಿ ತಂಪು ಸಲಿಲದ ಸನಿಹ ಗರಿಬಿಚ್ಚಿ ಕುಣಿಯುತ್ತಿದ್ದನು ನವಿಲು ಚೆಲುವ.


- ಅಂಕುರ

ಮೆಟ್ರೋ ಕಥನ - ೫೬

 ಮೆಟ್ರೋ ಕಥನ - ೫೬


ಕಾಡಿನಲ್ಲಿ ಆಡಳಿತ ಮಂಡಳಿ ರಚನೆಯಾಯಿತು. ಆಯ್ಕೆಯಾದ ಎಲ್ಲಾ ಪ್ರಾಣಿ ಪಕ್ಷಿಗಳಿಗೆ ಅಲ್ಲಲ್ಲೆ ಸನ್ಮಾನ ನಡೆಯುತ್ತಿತ್ತು. ಆಯಾ ಜಾತಿಯ, ಧರ್ಮದ ಪಕ್ಷಗಳು ಅಭಿನಂದಿಸಿಕೊಳ್ಳುತ್ತಿದ್ದವು. ಸೋತ  ಜೀವಿಗಳು ನಿಂದನೆಯಲ್ಲೇ ಸಮಾಧಾನ ಮಾಡಿಕೊಳ್ಳುತ್ತಿದ್ದವು. ತಾನೇ ಮಾಡಿದ ತಪ್ಪು, ಇಷ್ಟು ಬೃಹತ್ತಾಗಿ ಬೆಳೆದು, ಕೆಟ್ಟದ್ದೇ ಒಳಿತಾಗಿರುವ ಕ್ರೂರ ಸತ್ಯವನ್ನು ನಿಶಕ್ತವಾದ ಮುದಿಸಿಂಹ ನೋಡುತ್ತಿತ್ತು. ಅಲ್ಲೇ ನೇತು ಹಾಕಿದ್ದ ಕಾಡಿನ ಸಂವಿಧಾನದ ಬೋರ್ಡಿನಲ್ಲಿ ಜಾತ್ಯಾತೀತ, ಧರ್ಮಾತೀತ ಅರಣ್ಯ ಸರ್ವಸಮನ್ವಯತೆಯ ಸಾಲುಗಳು ವಿಜೃಂಭಣೆಯಿಂದ ಕಾಣುತ್ತಿದ್ದವು.


- ಅಂಕುರ

ಮೆಟ್ರೋ ಕಥನ - ೫೫

 ಮೆಟ್ರೋ ಕಥನ - ೫೫


ರಾಜನು ಕುದುರೆಯ ಮೇಲೆ ಹೋಗುವಾಗ ರಾಜನಷ್ಟೇ ಕಂಡನು. ಏಕೆಂದರೆ ಅವನಲ್ಲಿ ಸುಖವಿತ್ತು. ನಿಜವಾಗಿಯೂ ಕುದುರೆ ಅಲ್ಲಿ ಶೋಷಣೆಯೊಳಗಿತ್ತು. ಅದು ಪ್ರತಿ ಕ್ಷಣವೂ ನೋವನ್ನೇ ಅನುಭವಿಸುತ್ತಿತ್ತು. ಆದರೆ ರಾಜನ ಕಾರ್ಯ ದೇವರ ಸೇವೆ ಅನಿಸಿತ್ತು. ಕುದುರೆಯ ಕ್ಷೇಮಕ್ಕಾಗಿ ರಾಜನು ಹಲವು ಯೋಜನೆಗಳನ್ನು ತಂದನು. ಉನ್ನತವಾದ ಪೋಷಣೆ, ಗುಣಮಟ್ಟದ ಆಹಾರ, ಹೊಸತಾದ ಲಾಳ, ರತ್ನಗಂಬಳಿ ಹೀಗೆ. ಕುದುರೆ ಆನಂದಪಟ್ಟಿತು. ಆದರೆ ಈ ಪೋಷಣೆಯು ತನ್ನ ಶೋಷಣೆಗಾಗಿಯೇ ಎಂದು ಕುದುರೆಗೆ ತಿಳಿಯಲೇ ಇಲ್ಲ. ರತ್ನಗಂಬಳಿಯ ಮೇಲೆ ರಾಜ ಕುಳಿತಿದ್ದಾನೆ. ಕುದುರೆ ಚಲಿಸುತ್ತಲೇ ಇದೆ. ಇದು ದೇವರ ಸೇವೆಯೆಂದೇ ತಿಳಿದಿದೆ.


- ಅಂಕುರ