ಈ ಬ್ಲಾಗ್ ಅನ್ನು ಹುಡುಕಿ

ಶನಿವಾರ, ಜೂನ್ 17, 2023

ಮೆಟ್ರೋ ಕಥನ - ೯೯

 ಮೆಟ್ರೋ ಕಥನ - ೯೯

ಒಂದು ಊರು. ನೂರಾರು ಮನೆಗಳು. ಸಾವಿರಾರು ಮನಸುಗಳು. ಜಾತಿಗೊಂದು ಬೀದಿ, ಧರ್ಮಕ್ಕೊಂದು ಕೇರಿ. ಎಲ್ಲರೂ ತಮ್ಮ ಸ್ವಾರ್ಥಕ್ಕಾಗಿ ಇನ್ನೊಬ್ಬರಿಗೆ ಬಳಕೆಯಾಗುತ್ತಿದ್ದರು. ಬಳಸಿಕೊಳ್ಳುತ್ತಿದ್ದರು. ಊರಿನ ಅರಳಿಮರವು ಅರಳಿಕಟ್ಟೆ ಹೆಸರಲ್ಲಿ ಕಲ್ಲಿನ ಕಟ್ಟೆಕಟ್ಟಿ ನೀರಿನ ಸಂಪರ್ಕ ನಿಲ್ಲಿಸಿದ್ದರೂ, ಎಲ್ಲರಿಗೂ ಆಶ್ರಯವಾಗಿತ್ತು. ಊರ ಬಾವಿಗಳು ನಿತ್ಯ ಎಲ್ಲರೂ ಬಂದು ನೀರು ಸೇದಿದರೂ ಜಿನುಗುತ್ತಾ ನೀರು ನೀಡುತ್ತಿತ್ತು. ಊರಾಚೆಯ ಕಾಡು ಕಡಿದು ನಾಶಗೊಳಿಸುತ್ತಿದ್ದರೂ, ತಂಗಾಳಿ ನೀಡುತ್ತಿತ್ತು. ಇದರ ಸುಖಿ ಮನುಷ್ಯ ಮಾತ್ರ ಇದೆಲ್ಲವನ್ನೂ ಪುಸ್ತಕದಲ್ಲಿ ಮಾತ್ರ ಓದುತ್ತಿದ್ದನು.


- ಅಂಕುರ

ಮೆಟ್ರೋ ಕಥನ - ೯೮

 ಮೆಟ್ರೋ ಕಥನ - ೯೮


ಗರಿಕೆಯ ಹುಲ್ಲು ಕೃಷಿಗೆ ಕಸವಾಗಿ ಕಿತ್ತು ಹಾಕುತ್ತಿದ್ದರು. ಹಬ್ಬದ ದಿನ ಮಾತ್ರ ಹುಡುಕಿ, ಕಿತ್ತು ತಂದು ಅಲಂಕಾರಮಾಡಿ ಪೂಜಿಸುತ್ತಿದ್ದರು.  ಕಿತ್ತ ಜಾಗದಲ್ಲೇ ಮತ್ತೆ ಮತ್ತೆ ಚಿಗುರುವ ಗರಿಕೆಯು ಅದೆಷ್ಟೋ ಸೋಲಿಗೆ ಜೀವಂತಕಾವ್ಯಗಳನ್ನು ಹಾಡುತ್ತಿತ್ತು.


- ಅಂಕುರ

ಮೆಟ್ರೋ ಕಥನ - ೯೭

ಮೆಟ್ರೋ ಕಥನ - ೯೭


 ಆನಂದನು ಬಹಳ ಮಾತುಗಾರ. ಎಲ್ಲೇ ತಪ್ಪು ಅನಿಸಿದರೂ ಪ್ರಶ್ನಿಸಿ, ವಿರೋಧಿಸುತ್ತಿದ್ದ. ಎಲ್ಲರೂ ದ್ವೇಷಿಸುತ್ತಿದ್ದರು. ಇವನಿಗೂ ಬೇಸರಗಳೇ ಹೆಚ್ಚಾಗಿ, ಆರೋಗ್ಯ ಹಾಳಾಯಿತು. ಒಮ್ಮೆ ಸಾಧುಗಳನ್ನು ಭೇಟಿಯಾದ. ಸಾಧುಗಳು ಆನಂದದ ಅರ್ಥ ತಿಳಿಸಿ, ಮೌನದ ಪ್ರೀತಿ ಹೇಳಿಕೊಟ್ಟರು. ಆನಂದ ಈಗ ತುಂಬಾ ಮೌನಿಯಾಗಿದ್ದಾನೆ. ಎಲ್ಲಾ ಸಂದರ್ಭದಲ್ಲೂ ನಗುಚೆಲ್ಲಿ ಮುಂದೆ ಸಾಗುತ್ತಾನೆ. ಅವನಿಗೆ ತಿಳಿದಿರುವುದೊಂದೆ! ಲೋಕವನ್ನು ಬದಲಿಸಲಾಗದು, ತಾನು ಬದಲಾದರೆ ಸಾಕು. ಆನಂದನ ವರ್ತನೆಯು ಕೆಲವರಿಗೆ ಲಾಭ ಇರಬಹುದು, ಆದರೆ ಹಲವರು ಬದಲಾಗುತ್ತಿದ್ದಾರೆ.



- ಅಂಕುರ

ಮೆಟ್ರೋ ಕಥನ - ೯೬

 ಮೆಟ್ರೋ ಕಥನ - ೯೬

ಜಗತ್ತಿನ ಎಲ್ಲಾ ವಿಷಯಗಳನ್ನು ಸಂಗ್ರಹಿಸಿರುವ ಅಂತರ್ಜಾಲವನ್ನು ನಂಬಿ ವಿದ್ಯಾರ್ಥಿಗಳು ಖಾಲಿತಲೆಯಲ್ಲಿ ಗಿಣಿಪಾಠಗಳನ್ನು ಓದಿ, ಒಪ್ಪಿಸುತ್ತಿದ್ದರು. ಯಂತ್ರಗಳೇ ಮಾತಾಡುತ್ತಿದ್ದವು. ಮನುಷ್ಯ ಸೋಮಾರಿಯಾಗಿ, ಸುಖದ ಲೋಲುಪತೆಯನ್ನು ಅರಸುತ್ತಿದ್ದನು. ಒಂದು ದಿನ ಅಂತರ್ಜಾಲ ಬಳಕೆಯು ವಿನಾಶ ಹೊಂದಿದ ದುರಂತ ಕೇಳಿ, ಜಗತ್ತೇ ಹುಚ್ಚರ ಸಂತೆಯಾಯಿತು. ಎಲ್ಲಾ ಕೆಲಸಗಳು ನಿಂತವು. ಬೆವರಿನ ಭಾಷೆಯು ಉಸಿರಾಡಿತು. ಬುದ್ದಿಗೆ, ತೋಳಿಗೆ ಕೆಲಸ ಬಂದು ಮನುಷ್ಯನು ಜಗತ್ತನ್ನು ಮರೆತು ಗ್ರಾಮಸ್ವರಾಜ್ಯಕ್ಕೆ‌ ಹೆಜ್ಜೆ ಹಾಕಿದನು.


- ಅಂಕುರ

ಮೆಟ್ರೋ ಕಥನ - ೯೫

 ಮೆಟ್ರೋ ಕಥನ - ೯೫


ವೈದ್ಯರೊಬ್ಬರಿಗೆ ಸೇಬು ಹಣ್ಣು ಬಹಳ ಇಷ್ಟವಾಯಿತು. ಅದನ್ನು ಸ್ಥಳೀಯವಾಗಿ ಬೆಳೆಯುತ್ತಿರಲಿಲ್ಲ. ಅದನ್ನು ವ್ಯಾಪಾರ ಸರಕಾಗಿಸಿದ ಮಾರುಕಟ್ಟೆ ಮುಖ್ಯಸ್ಥನ ಬಳಿ ಸಂಧಾನ ಮಾಡಿಕೊಂಡ ವೈದ್ಯರು, ಸೇಬು ಅತ್ಯಂತ ಪೌಷ್ಟಿಕಾಂಶ ಹೊಂದಿದ ಆರೋಗ್ಯಕರ ಆಹಾರ, ರೋಗಿಗಳಿಗೆ ಚಿಕಿತ್ಸೆಯಂತೆ ಎಂಬ ಸುದ್ದಿಯನ್ನು ನೀಡಿದರು. ಅದು ಕಾಲ ದೇಶಗಳ ಮೀರಿ ಸ್ಥಳೀಯವಾದ ಎಲ್ಲಾ ಹಣ್ಣುಗಳನ್ನು ದುಬಾರಿ ಸ್ಟೇಟಸ್ ನಲ್ಲೇ ತಿಂದು ಹಾಕಿತು.


ಮೆಟ್ರೋ ಕಥನ - ೯೪

 ಮೆಟ್ರೋ ಕಥನ - ೯೪


ಮುಖಪುಟದ ಗೆಳೆಯರೆಲ್ಲಾ ಒಂದು ಕಾರ್ಯಕ್ರಮದಲ್ಲಿ ಭೇಟಿಯಾದರು. ಸತ್ಯನಾಥನು ಹೆಚ್ಚು ಲೈಕ್ ಮತ್ತು ಕಾಮೆಂಟ್ ಮಾಡದವನೆಂದು‌ ಅವನನ್ನು ಅಷ್ಟೇನೂ ಮಾತಾಡಿಸದೆ ಅವರವರೇ ಹೆಚ್ಚು ಆನಂದಿಸುತ್ತಿದ್ದರು.‌ ಎಲ್ಲರ ಮಾತು ನಂಬಿ ಹೋದ ಸತ್ಯನಾಥನಿಗೆ ಮುಖಪುಟವು ಸದಾ ಮುಖಪುಟವೇ ಆಗಿದೆ, ಮನದಪುಟವಲ್ಲವೆಂದು ತಿಳಿದು ಅಲ್ಲಿಂದ ಹೊರಟನು.


- ಅಂಕುರ

ಮೆಟ್ರೋ ಕಥನ - ೯೩

 ಮೆಟ್ರೋ ಕಥನ - ೯೩


ಅನ್ಯಾಯಕಾರಿ ಬ್ರಹ್ಮ ಸುಂದರನನ್ನು ಬ್ರಹ್ಮಚಾರಿ ಮಾಡಿದನೆಂದು ಹೆಣ್ಣು ಮಕ್ಕಳು ಕುಣಿಯುತ್ತಿದ್ದರು. ಇದನ್ನು ವ್ಯಾಖ್ಯಾನ ಮಾಡಿದ ಯುವತಿಯರು ಇಲ್ಲಿ ಸುಂದರರ ಕೊರತೆ ಇದೆ ಎಂದು ನೋವು ತೋಡಿಕೊಂಡರು. ಆದರೆ ಹುಡುಗರು ಮಾತ್ರ ವ್ಯಾಯಾಮಶಾಲೆಯಲ್ಲಿ ಫಿಟ್ ಆಗುತ್ತಿದ್ದರು.

ಮೆಟ್ರೋ ಕಥನ - ೯೨

 ಮೆಟ್ರೋ ಕಥನ - ೯೨


ಬಸ್ಸಿನ ಪ್ರಯಾಣ ಉಚಿತವೆಂದು ಮನೆಯ ಹೆಣ್ಣುಮಕ್ಕಳನ್ನು ಹೊರಗಿನ ವ್ಯವಹಾರಗಳಿಗೆ ಕಳಿಸಲಾಗುತ್ತಿತ್ತು. ಇದರಿಂದ ಜವಾಬ್ದಾರಿಯನ್ನು ಕಲಿಯುವ ಹೆಣ್ಣುಮಕ್ಕಳು ಮನೆಯ ಯಜಮಾನಿಕೆ ಕುರಿತು ಹಲವು ಅನುಭವ ಕಲಿತರು. ಆ ಪ್ರದೇಶದ ಕುಟುಂಬಗಳು ಸಮಾನತೆಯ ಕಡೆಗೆ ಸಾಗಲು ಒಂದು ಯೋಜನೆಯು ಅನುಕೂಲವಾಯಿತೆಂದು ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ಪ್ರಬಂಧ ಬರೆದಳು.


- ಅಂಕುರ

ಮೆಟ್ರೋ ಕಥನ - ೯೧

 ಮೆಟ್ರೋ ಕಥನ - ೯೧


ಒಣಗಿದ ಭೂಮಿಯು ಮೊದಲ ಮಳೆಗೆ ತಂಪಾದಂತೆ ಕಂಡಿತು. ಆದರೆ ಭೂಮಿಯೊಳಗಿನ ಕಾವು ಆಗ ಪ್ರಾರಂಭವಾಯಿತು. ಮಿಡತೆಗಳು, ಕಪ್ಪೆ, ಹಾವು ಎಲ್ಲವೂ ಕಾವು ತಡೆಯಲಾರದೆ ಮೇಲೆ ಬಂದವು. ಆಗ ತಾನೆ ಚಿಗುರುತ್ತಿದ್ದ ಹಸಿರು ಹುಲ್ಲನ್ನು ಮಿಡತೆಗಳು ತಿಂದವು. ಈ ಮಿಡತೆಗಳನ್ನು ಕಪ್ಪೆ ತಿಂದಿತು. ಕಪ್ಪೆಯನ್ನು ಹಾವು ನುಂಗಿತು. ಈ ಹಾವಿಗೂ ಹದ್ದಿನ ಕಣ್ಣಿತ್ತು. ಇದನ್ನೆಲ್ಲಾ ಯೋಚಿಸಿದ ತಿಮ್ಮನು ತನ್ನ ಬದುಕು ನೆನಪಾಯಿತು.

ಬಾಲ್ಯದಲ್ಲಿ ತಿಮ್ಮನಾಗಿ ಊರೆಲ್ಲಾ ಬಾಯಲ್ಲಿ ಕೆಲಸಮಾಡಿದೆ. ಬೆಳೆಯುತ್ತಾ ತಿಮ್ಮಣ್ಣನಾಗಿ ಕೆಲಸಮಾಡಿದೆ. ನಗರಕ್ಕೆ ಹೋಗಿ ತಿಮ್ಮೇಶನಾದೆ. ನಾನೂ ಒಂದು ರೀತಿಯ ಆಹಾರ ಚಕ್ರದಲ್ಲಿ ಬಲಿಯಾದವನೇ! ನನ್ನದೇ ಬದುಕು, ನನ್ನದೇ ಚಕ್ರ. ಇದು ತಿಮ್ಮನು ಬರೆದ ಜಗದ ಕಥೆ.


- ಅಂಕುರ

ಮೆಟ್ರೋ ಕಥನ - ೯೦

 ಮೆಟ್ರೋ ಕಥನ - ೯೦


ಫಲಿತಾಂಶ ಬಂದಾಗ ರಮೇಶನು ಅದೇಕೋ ಹೀಗೆ ಹೇಳುತ್ತಿದ್ದನು. ಎಲ್ಲಾ ಬರೀ ಮೋಸ, ತಗೊಂಡು ವ್ಯವಹಾರ ಮಾಡ್ತಾರೆ. ನಮ್ಮಂತರು ಎಷ್ಟೆ ಓದಿರೂ ನ್ಯಾಯ ಸಿಗಲ್ಲ. ಓದೋದಕ್ಕಿಂತ ಕೆಲಸಕ್ಕೆ ಹೋಗೋದು ಮೇಲು ಎಂದು ಬೇಸರ ವ್ಯಕ್ತಪಡಿಸುತ್ತಿದ್ದನು. ಉಮೇಶನು ಇದರ ವಿರುದ್ಧವಿತ್ತು. ಅತ್ಯಂತ ಪ್ರಾಮಾಣಿಕ ಪರೀಕ್ಷೆ ಇದು. ನನ್ನ ಶ್ರಮಕ್ಕೆ ಫಲ ಸಿಕ್ಕಿದೆ. ಅದೆಷ್ಟು ನಿದ್ರೆ, ಸಂಬಂಧಗಳ ಕಳಚಿ ಏಕಾಂಗಿಯಾಗಿ ಸಂಘರ್ಷ ಮಾಡಿದುದರ ಫಲ ಇದು ಎಂದನು.


ವಿಶೇಷ ಅಂದರೆ ಇಬ್ಬರೂ ಒಂದೇ ಕೇಂದ್ರ, ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದರು.



- ಅಂಕುರ

ಮೆಟ್ರೋ ಕಥನ -೮೯

 ಮೆಟ್ರೋ ಕಥನ -೮೯


ಸೂರ್ಯಕಾಂತಿ ಗಿಡದಲ್ಲಿ ಮೊಗ್ಗಾಗಿ, ಹೂವರಳಿ, ತೆನೆ ಬಲಿತು ತಲೆದೂಗುತ್ತಿತ್ತು. ಗಿಳಿಗಳು ಬಂದು ತೆನೆಯಲ್ಲಿ ಕುಕ್ಕಿ ಕುಕ್ಕಿ ತಿಂದು ಹಾರಿಹೋದವು. ಇದನ್ನು ನೋಡಿದ ಸನ್ಯಾಸಿಯೊಬ್ಬರು ತನ್ನ ಶಿಷ್ಯರಿಗೆ ಈ ರೀತಿಯಲ್ಲಿ ಪುರಾಣ ಬಿಗಿದರು. ಈ ತೆನೆಯು ಆ ಗಿಳಿಗಳಿಗಾಗಿಯೇ ಹುಟ್ಟಿತ್ತು. ಆ ಗಿಳಿಗಳು ಇದನ್ನು ತಿಂದು ಈ ಗಿಡಕ್ಕೆ ಮೋಕ್ಷ ನೀಡಿದವು ಎಂದರು. ಖಾಲಿ ತೆನೆಯೊಂದು ಮಡಿಲು ಕಳಚಿದ ಅನಾಥಪ್ರಜ್ಞೆಯಲ್ಲಿ ನೋಡುತ್ತಿತ್ತು.


- ಅಂಕುರ

ಮೆಟ್ರೋ ಕಥನ - ೮೮

 ಮೆಟ್ರೋ ಕಥನ - ೮೮


ಸಾಲುಮರದ ತಿಮ್ಮಕ್ಕನ ಎದುರು ಸಾಲು ಸಾಲು ಪ್ರಶಸ್ತಿಗಳು, ನೆನಪಿನ ಕಾಣಿಕೆಗಳು. ಮರದಲ್ಲಿ ಮಾಡಿದ್ದ ನೆನಪಿನ ಕಾಣಿಕೆಗಳೆಲ್ಲಾ ಅಜ್ಜಿ ಎದುರು ಬಿಕ್ಕಿ ಬಿಕ್ಕಿ ಅಳುತ್ತಿದ್ದವು. ಅಸಹಾಯಕತೆಯ ಅಜ್ಜಿ, ಬಂದವರಿಗೆಲ್ಲಾ ನಗುತ್ತಲೇ ಆಶೀರ್ವಾದ ಮಾಡುತ್ತಿತ್ತು.


- ಅಂಕುರ

ಮೆಟ್ರೋ ಕಥನ - ೮೭

 ಮೆಟ್ರೋ ಕಥನ - ೮೭


ಭಾರಿ ಮಳೆಯು ಹಲವಾರು ತೊಂದರೆಗಳನ್ನು ಸೃಷ್ಟಿಸಿತು. ಮರಗಳು, ಮನೆಗಳು ಉರುಳಿದರೆ, ರಸ್ತೆ ಹಾಳಾಗಿ ಕಾಲುವೆ ಒಡೆದು, ಹಳ್ಳಗಳು ತೇಲಿ, ಕೆರೆ ಕೋಡಿ ಬಿದ್ದಿತು. ರಾತ್ರಿಯ ಈ ಆರ್ಭಟದಿಂದ ತತ್ತರಿಸಿ ಬೆಳಗ್ಗೆ ತೋಟ ನೋಡಲು ಹೋದೆ. ಇರುವೆ, ರೆಕ್ಕೆಹುಳ, ಗೆದ್ದಲು ನಿಧಾನವಾಗಿ ಭೂಮಿಯಿಂದ ಹಸಿಮಣ್ಣು ತೆಗೆದು ಆಚೆ ಬರುತ್ತಿವೆ. ಹಾಳಾಗದೆ ಉಳಿದ ನಿಸರ್ಗವೆಲ್ಲಾ ನಗುತ್ತಿದೆ. ಕಪ್ಪೆಗಳು ನೀರಿನಲ್ಲಿ ಜೈಕಾರಮಾಡುತ್ತಿವೆ. ಇದನ್ನೆಲ್ಲಾ ನೋಡಿ, ಇರುವ ಭಾಗ್ಯವ ನೆನೆದು ಡಿವಿಜಿ ಸಾಲು ನೆನಪಾಗಿ ಖುಷಿಯಾದೆನು.


- ಅಂಕುರ

ಮೆಟ್ರೋ ಕಥನ - ೮೬

 ಮೆಟ್ರೋ ಕಥನ - ೮೬


ಸರ್ಕಾರದ ಯೋಜನೆಯನ್ನು ಟೀಕಿಸಿದ ಸರ್ಕಾರಿ ನೌಕರರಿಗೆ ನೋಟಿಸು ಕಳಿಸಿದರು. ಇದನ್ನು ತಿಳಿದ ಇನ್ನೊಬ್ಬ ನೌಕರನು ಹೀಗೆಂದನು. ಸರ್ಕಾರಿ ಉದ್ಯೋಗ ಅಂದರೆ ಸ್ವಾತಂತ್ರ್ಯ ಕಳೆದುಕೊಳ್ಳುವುದು ಎಂದರ್ಥ. ನಾವೆಲ್ಲಾ ಮೌನವಾಗಿಲ್ವ, ಏಕೆ ಬೇಕಿತ್ತು ಇವರಿಗೆ ನಮ್ಮ ಜನ ಇನ್ನೂ ಸ್ಮಾರ್ಟ್ ಆಗಬೇಕು ಎಂದು ನಕ್ಕರು. ಅಜಾದಿ ಕೀ ಅಮೃತ್ ಮಹೋತ್ಸವ ಎಂಬ ಅಕ್ಷರಗಳು ಗೋಡೆಯಲ್ಲಿ ಮಾಸುತ್ತಿದ್ದವು.


- ಅಂಕುರ