ಟ್ರೋಲು ಸ್ವಾಮಿ! ಟ್ರೋಲು..
ಟ್ರೋಲು ಸ್ವಾಮಿ! ಟ್ರೋಲು..
ಪ್ರಸಿದ್ಧಿಯಾಗಬೇಕಂದ್ರೆ
ಟ್ರೋಲೇ ಆಗಬೇಕು !
ಅಧಿಕಾರ ಇದ್ದ ಕಡೆ ವಾಲಬೇಕು
ವಾಲಾಟದಲ್ಲೇ ತೇಲಬೇಕು!
ಹಿಂದೂ ಬಗ್ಗೆ ಮಾತಾಡಬೇಕು
ಕೆಲವರನ್ನು ಮೆಚ್ಚಿಸಬೇಕು
ಕೆಲವರನ್ನು ಚುಚ್ಚಬೇಕು
ಮುಸ್ಲಿಂ ಕುರಿತು ಮಾತಾಡಬೇಕು
ಕೆಲವರನ್ನು ಮೆಚ್ಚಿಸಬೇಕು
ಕೆಲವರನ್ನು ಚುಚ್ಚಬೇಕು
ಸಮಯ ಸಿಕ್ರೆ ಹಿಜಾಬ್ ಕುರಿತೂ
ಮಾತಾಡಬೇಕು...
ದಲಿತರಿಗೆ ನ್ಯಾಯ ಕೊಡಿ
ಅನ್ನುತ್ತಲೇ ಇರಬೇಕು!
ಮಹಿಳೆಯೋ, ಮಾಂಸವೋ, ಪಕ್ಷವೋ
ಪುಡಾರಿಯೋ ಮಾತಾಡುತ್ತಲೇ ಇರಬೇಕು
ಸಾಧ್ಯವಾದಷ್ಟೂ ಶುದ್ಧವೆಂದು ವಿರುದ್ಧ ಮಾತಾಡಬೇಕು
ಮಠವೋ ಮಾನ್ಯವೋ ಪರವಾದಿ
ಸಂಘ ಕಟ್ಟಬೇಕು,
ಹೊಗಳು ಭಟ್ಟರಿಗೆ ಹಣ ನುಂಗಿಸಬೇಕು
ಕೃಪಾಪೋಷಿತವಾಗಿಯೇ ಬದುಕಬೇಕು
ಕುತ್ತಿಗೆಗೆ ಬಂದ್ರೆ,
ಅರಾಮಾಗಿ ಇರಬೇಕಾದ್ರೆ,
ಮಾಡಿದ ತಪ್ಪು ಮರೆಸಬೇಕಂದ್ರೆ
ಆಸ್ಪತ್ರೆ ಇದೆ, ಜೈಲೂ ಇದೆ.
ಹೆಸರು ಕುದುರೆ ಹತ್ತಿಕೊಂಡು
ಬಿರುದು ಭವಾವಳಿ ಹೊತ್ತುಕೊಂಡು
ಅಪ್ಪ ಮಾಡಿದ ಆಸ್ತಿಯಲ್ಲಿ,
ಇಲ್ಲದಿದ್ರೇನು..
ಸರ್ಕಾರದ ಗದ್ದುಗೆ ಇವೆಯಲ್ವ
ಮಸ್ತಿ ಮಾಡೋ ಸಿಂಪಲ್ ಐಡಿಯಾ
ಬುಸಿನೆಸ್ ಆದ್ರೂ ಮಾಡ್ಲೇಬೇಕು
ಅಗತ್ಯ ಅನಿಸೋ ಕಡೆ
ಬಡವರನ್ನೇ ಗಾಣ ಹಾಕಿ
ಹಗಲು ರಾತ್ರಿ ರಕ್ತ ಹೀರಬೇಕು
ಶಾಲೆ, ಮಂದಿರ, ಆಹಾರ
ಬೇಕಾದಷ್ಟು ಸ್ವಾಮಿ!
ಅಂತರಂಗ ಶುದ್ಧಿ ಇಲ್ಲದೆ
ಬಹಿರಂಗ ಹಾರಾಟ ಮಾಡ್ತ
ಲೋಕದ ಕಣ್ಣಿಗೆ ಟ್ರೋಲ್ ಆಗಬೇಕು
ಟ್ರೋಲು ಸ್ವಾಮಿ, ಟ್ರೋಲು
ಇವರೇ ಜಗತ್ತು ಮೆಚ್ಚುವ ಹೊಸ ಮಾಲು.