ಈ ಬ್ಲಾಗ್ ಅನ್ನು ಹುಡುಕಿ

ಶನಿವಾರ, ಫೆಬ್ರವರಿ 22, 2020

ಕುರುಡು ಕಾಂಚಾಣಾ………………………ದ. ರಾ. ಬೇಂದ್ರೆ



ಕುರುಡು ಕಾಂಚಾಣಾ ಕುಣಿಯುತಲಿತ್ತು |
ಕಾಲಿಗೆ ಬಿದ್ದವರ ತುಳಿಯುತಲಿತ್ತೋ ||
                        ಕುರುಡು ಕಾಂಚಾಣಾ ||
      ಬಾಣಂತಿಯೆಲುಬ ಸಾ-
      ಬಾಣದ ಬಿಳುಪಿನಾ
      ಕಾಣದ ಕಿರುಗೆಜ್ಜೆ ಕಾಲಾಗ ಇತ್ತೋ;
               ಸಣ್ಣ ಕಂದಮ್ಮಗಳ
               ಕಣ್ಣೀನ ಕವಡಿಯ
               ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ;
      ಬಡವರ ಒಡಲಿನ
      ಬಡಬಾsನಲದಲ್ಲಿ
      ಸುಡು ಸುಡು ಪಂಜು ಕೈಯೊಳಗಿತ್ತೋ;
               ಕಂಬನಿ ಕುಡಿಯುವ
               ಹುಂಬ ಬಾಯಿಲೆ ಮೈ-
               ದುಂಬಿದಂತುಧೋ ಉಧೋ ಎನ್ನುತಲಿತ್ತೋ;
      ಕೂಲಿ ಕುಂಬಳಿಯವರ
      ಪಾಲಿನ ಮೈದೊಗಲ
      ಧೂಳಿಯ ಭಂಡಾರ ಹಣೆಯೊಳಗಿತ್ತೋ;
               ಗುಡಿಯೊಳಗೆ ಗಣಣ, ಮಾ
               ಹಡಿಯೊಳಗೆ ತನನ, ಅಂ-
               ಗಡಿಯೊಳಗೆ ಝಣಣಣ ನುಡಿಗೊಡುತಿತ್ತೋ;
      ಹ್ಯಾಂಗಾರೆ ಕುಣಿಕುಣಿದು
      ಮಂಗಾಟ ನಡೆದಾಗ
      ಅಂಗಾತ ಬಿತ್ತೋ, ಹೆಗಲಲಿ ಎತ್ತೋ.

‘ಕುರುಡು ಕಾಂಚಾಣಾ’ ಕವನವು ಅಂಬಿಕಾತನಯದತ್ತರ ‘ನಾದಲೀಲೆ’ ಕವನಸಂಗ್ರಹದಲ್ಲಿ ಅಡಕವಾಗಿದೆ. ಈ ಕವನಸಂಕಲನವು ೧೯೩೮ನೆಯ ಇಸವಿಯಲ್ಲಿ ಪ್ರಕಟವಾಯಿತು. ಬ್ರಿಟಿಶ್ ಸರಕಾರದ ಶೋಷಣೆಯ ನೀತಿಯಿಂದಾಗಿ ಭಾರತೀಯರು ಕಡುಕಷ್ಟವನ್ನು ಎದುರಿಸುತ್ತಿದ್ದ ಕಾಲವದು; ಸಾಮಾನ್ಯ ಪ್ರಜೆಗಳು ಒಂದು ತುತ್ತು ಕೂಳಿಗಾಗಿ ಪರದಾಡುತ್ತಿರುವಾಗ, ಸರಕಾರವು ಹಾಗು ಸರಕಾರದ ಚೇಲಾಗಳಾದ ಲಾಭಬಡುಕರು ಮೆರೆದಾಡುತ್ತಿದ್ದ ಕಾಲವದು; ಮಾನವೀಯತೆಯು ಸತ್ತು ಹೋಗಿ, ನರಭಕ್ಷಣೆಯೇ ಮೇಲ್ಗೈ ಸಾಧಿಸಿದಂತಹ ಕಾಲವದು. ಈ ಸಂಕಟಮಯ ಪರಿಸ್ಥಿತಿಯು ಬೇಂದ್ರೆಯವರ ಕವನಗಳಲ್ಲಿ ವ್ಯಕ್ತವಾಗಿದೆ. ‘ನಾದಲೀಲೆ’ ಸಂಕಲನದಲ್ಲಿಯೇ ಇರುವ ‘ಮನುವಿನ ಮಕ್ಕಳು’, ‘ಅನ್ನಾವತಾರ’, ‘ಭೂಮಿತಾಯಿಯ ಚೊಚ್ಚಲ ಮಗ’  ಹಾಗು ‘ಗರಿ’ ಸಂಕಲನದಲ್ಲಿರುವ  ‘ತುತ್ತಿನ ಚೀಲ’ ಮೊದಲಾದ ಕವನಗಳು ಇದಕ್ಕೆ ನಿದರ್ಶನಗಳಾಗಿವೆ.
………………………………………………………………
ಕುರುಡು ಕಾಂಚಾಣಾ ಕುಣಿಯುತಲಿತ್ತು |
ಕಾಲಿಗೆ ಬಿದ್ದವರ ತುಳಿಯುತಲಿತ್ತೋ ||
                   ಕುರುಡು ಕಾಂಚಾಣಾ ||

‘ಕುರುಡು ಕಾಂಚಾಣಾ’ ಎನ್ನುವುದು ಒಂದು personification. ಕಾಂಚಾಣಲೋಭಿ ಹೃದಯಹೀನರ ಪ್ರತೀಕವಿದು. ಇವರು ಕುಣಿಯುವುದು ಸಂಪತ್ತಿನ ದೇವಿಯ ಎದುರಿನಲ್ಲಿ. ಸಂಪತ್ತು ಕೇವಲ ಕೆಲವರ ಐಶಾರಾಮಿಗಾಗಿ ಇರದೆ ಸರ್ವರ ಒಳಿತಿಗಾಗಿ, ಏಳ್ಗೆಗಾಗಿ ಇರಬೇಕು. ಮಾನವೀಯತೆಯನ್ನು ಕಡೆಗಣಿಸುವ ಸಂಪತ್ತನ್ನು ಬೇಂದ್ರೆಯವರು ‘ಕುರುಡು ಕಾಂಚಾಣಾ’ ಎಂದು ಕರೆಯುತ್ತಾರೆ. ಇಂತಹ ಕುರುಡು ಕಾಂಚಾಣದ ಉನ್ಮಾದದ ಕುಣಿತವನ್ನು ಬೇಂದ್ರೆಯವರು (ಎಲ್ಲಮ್ಮನ)ಜೋಗತಿಯ ಉನ್ಮಾದದ ಕುಣಿತದೊಂದಿಗೆ ಹೋಲಿಸುತ್ತಿದ್ದಾರೆ. ಪಲ್ಲದ ಮೊದಲ ಸಾಲಿನಲ್ಲಿ ‘ಕುಣಿಯುತಲಿತ್ತು’ ಎನ್ನುವ ಸಾಮಾನ್ಯ ನೋಟದೊಂದಿಗೆ ಪ್ರಾರಂಭವಾಗುವ ಕವನವು, ಎರಡನೆಯ ಸಾಲಿನಲ್ಲಿ ‘ತುಳಿಯುತಲಿತ್ತೋ’ ಎನ್ನುವ ಪದದಿಂದ ಉದ್ವಿಗ್ನತೆಯನ್ನು, ಹತಾಶೆಯನ್ನು ವ್ಯಕ್ತಪಡಿಸುತ್ತದೆ. ಎಲ್ಲಮ್ಮನ ಜೋಗತಿ ಹಾಗು ಕಾಂಚಾಣಜೋಗತಿ ಈರ್ವರೂ ಜೋಗತಿಯರೇ. ಎಲ್ಲಮ್ಮನ ಜೋಗತಿ ಭಕ್ತಿಯ ಉನ್ಮಾದದಲ್ಲಿದ್ದರೆ, ಕಾಂಚಾಣಜೋಗತಿ ದುಡ್ಡಿನ ಉನ್ಮಾದದಲ್ಲಿದ್ದಾಳೆ.  ಈ ಕವನದಲ್ಲಿ ಇವಳ ತೊಡುಗೆಯನ್ನು ಅವಳಿಗಿಟ್ಟು ಬೇಂದ್ರೆಯವರು ಚಿತ್ರಿಸಿದ್ದಾರೆ.

ಮೈಮೇಲೆ ದೇವಿ ಬಂದಾಗ, ಎಲ್ಲಮ್ಮನ ಜೋಗತಿಯು ಉನ್ಮಾದದಿಂದ ಕುಣಿಯುತ್ತಾಳೆ. ಅನೇಕ ಭಕ್ತರು ಜೋಗತಿಯ ಕಾಲಿಗೆ ಬಿದ್ದು, ಅವಳಿಂದ (ಎಲ್ಲಮ್ಮನ) ಅನುಗ್ರಹವನ್ನು ಪಡೆಯುತ್ತಾರೆ. ಕುರುಡು ಕಾಂಚಾಣವೂ ಸಹ ಅದೇ ರೀತಿಯಲ್ಲಿ ಉನ್ಮಾದದಿಂದ ಕುಣಿಯುತ್ತಿದೆ. ಹೊಟ್ಟೆಗಿಲ್ಲದ ಜನರು ಎರಡು ತುತ್ತು ಕೂಳಿಗಾಗಿ ಇವಳ ಕಾಲಿಗೆ ಬೀಳುತ್ತಾರೆ. ಅವರನ್ನೆಲ್ಲ ಈ ಜೋಗತಿ ತುಳಿದು ಹಾಕುತ್ತಾಳೆ. ಈ ರೀತಿಯಾಗಿ ಕವನದ ಪಲ್ಲದಲ್ಲಿ ‘ಕಾಂಚಾಣ-ಜೋಗತಿಯ’ ಕುಣಿತವನ್ನು  ಬೇಂದ್ರೆಯವರು (ಎಲ್ಲಮ್ಮನ) ಜೋಗತಿಗೆ ಹೋಲಿಸಿ ಚಿತ್ರಿಸಿದ್ದಾರೆ; ಮುಂದಿನ ನುಡಿಗಳಲ್ಲಿ, ಅವಳ ವೇಷಭೂಷಗಳನ್ನು ವರ್ಣಿಸಿದ್ದಾರೆ.

     ಬಾಣಂತಿಯೆಲುಬ ಸಾ-
     ಬಾಣದ ಬಿಳುಪಿನಾ
     ಕಾಣದ ಕಿರುಗೆಜ್ಜೆ ಕಾಲಾಗ ಇತ್ತೋ;
              ಸಣ್ಣ ಕಂದಮ್ಮಗಳ
             ಕಣ್ಣೀನ ಕವಡಿಯ
             ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ;

(ಎಲ್ಲಮ್ಮನ) ಜೋಗತಿಯು ತನ್ನ ಕಾಲಲ್ಲಿ ಬೆಳ್ಳಿಯ ಕಿರುಗೆಜ್ಜೆಗಳನ್ನು ಧರಿಸಿರುತ್ತಾಳೆ. ಕಾಂಚಾಣಜೋಗತಿಯೂ ಸಹ ತನ್ನ ಕಣಕಾಲುಗಳಲ್ಲಿ ಕಿರುಗೆಜ್ಜೆಗಳನ್ನು ಧರಿಸಿದ್ದಾಳೆ. ಆದರೆ ಇವು ಬಾಣಂತಿಯ ಎಲುವಿನಿಂದ ಮಾಡಿದ ಗೆಜ್ಜೆಗಳು. ಈ ಗೆಜ್ಜೆಗಳು ಸವೆದು ಹೋದ ಸಾಬಾಣದಷ್ಟು (soap) ಬೆಳ್ಳಗಿವೆ. ‘ಬಾಣಂತಿಯೆಲುಬು’ ಇಲ್ಲಿ ಎರಡು ಅರ್ಥಗಳನ್ನು ಧ್ವನಿಸುತ್ತದೆ. ಬಾಣಂತಿಯು ಮಗುವನ್ನು ಹೆತ್ತು ಸೃಷ್ಟಿಕ್ರಿಯೆಯನ್ನು ಮುಂದುವರಿಸುವಂತಹ ಹೆಂಗಸು. ಬಡತನದ ಹೊಡೆತದಿಂದಾಗಿ ಹಾಗು ಸಾಮಾಜಿಕ ಅನ್ಯಾಯದಿಂದ ಬಾಣಂತಿಯು ಈಗ ಸತ್ತು ಹೆಣವಾಗಿದ್ದಾಳೆ; ನಿಸರ್ಗಸಹಜವಾದ ಸೃಷ್ಟಿಕಾರ್ಯವು ನಿಂತು ಹೋಗಿದೆ. ಸವೆದು ಹೋಗಿ ಬೆಳ್ಳಗಾದ ಸಾಬಾಣವು ದುಡಿದುಡಿದು ಕ್ಷೀಣವಾದ ಬಾಣಂತಿಯನ್ನು ಸೂಚಿಸುತ್ತದೆ.

ಎರಡನೆಯ ಅರ್ಥವೆಂದರೆ, ಬಾಣಂತಿಯ ಎಲುಬಗಳನ್ನು ಮಾಟಗಾರರು ಅಭಿಚಾರಕ್ರಿಯೆಯಲ್ಲಿ ಬಳಸುತ್ತಾರೆ. ಈ ಕಾಂಚಾಣಜೋಗತಿಯು ತನ್ನ ಕಣಕಾಲುಗಳಲ್ಲಿ ಬಾಣಂತಿಯ ಎಲುವುಗಳ ಕಿರುಗೆಜ್ಜೆಯನ್ನು ಕಟ್ಟಿಕೊಂಡು ಕುಣಿಯುವ ಮಾಟಗಾತಿಯಾಗಿದ್ದಾಳೆ. ಇವಳ ಅಂತಿಮ ಉದ್ದೇಶವು ಸಮಾಜವನ್ನು ಹಾಳುಗೆಡುವುದಾಗಿದೆ. ಆದರೆ ಈ ಗೆಜ್ಜೆಗಳು ‘ಕಾಣದ ಕಿರುಗೆಜ್ಜೆಗಳು’. ಆದುದರಿಂದ ಕಾಂಚಾಣಜೋಗತಿಯ ಕಿರುಗೆಜ್ಜೆಗಳಾಗಲಿ ಅಥವಾ ಅವಳ ಹೀನ ಉದ್ದೇಶವಾಗಲಿ ಸಮಾಜಕ್ಕೆ ಅದೃಶ್ಯವಾಗಿಯೇ ಇರುತ್ತವೆ.

ಇನ್ನು ಈ ಜೋಗತಿ ಧರಿಸಿದಂತಹ ‘ಜೋಮಾಲೆ’(=ಜೋಗತಿಯ ಮಾಲೆ) ಎಂತಹದು? ಬಾಣಂತಿಯನ್ನು ಕೊಂದವಳು ಅವಳ ಮಕ್ಕಳನ್ನು ಬಿಟ್ಟಾಳೆಯೆ?  ಸಣ್ಣ ಕಂದಮ್ಮಗಳು ಮುಗ್ಧ, ಅಸಹಾಯಕ ಜೀವಿಗಳು. ಅವುಗಳ ಕಣ್ಣುಗುಡ್ಡಿಗಳನ್ನೆ ಕಿತ್ತು, ಕವಡಿಗಳ ಮಾಲೆಯನ್ನು ಮಾಡಿಕೊಂಡು ಈ ಜೋಗತಿ ಕೊರಳಲ್ಲಿ ಧರಿಸಿದ್ದಾಳೆ. ಭವಿಷ್ಯದ ಸಂಕೇತಗಳಾದ ಈ ಕಂದಮ್ಮಗಳು ಇದೀಗ ಕುರುಡರಾಗಿದ್ದಾರೆ. ಈ ಮಾಲೆಯು ‘ತಣ್ಣನ್ನ ಜೋಮಾಲೆ’! ಜೋಗತಿಯ ತಣ್ಣನೆಯ ಕ್ರೌರ್ಯಕ್ಕೆ ಇದು ಸಂಕೇತವಾಗಿದೆ.


     ಬಡವರ ಒಡಲಿನ
     ಬಡಬಾsನಲದಲ್ಲಿ
     ಸುಡು ಸುಡು ಪಂಜು ಕೈಯೊಳಗಿತ್ತೋ;
            ಕಂಬನಿ ಕುಡಿಯುವ
            ಹುಂಬ ಬಾಯಿಲೆ ಮೈ-
            ದುಂಬಿದಂತುಧೋ ಉಧೋ ಎನ್ನುತಲಿತ್ತೋ;

ಕೈಯಲ್ಲಿ ಉರಿಯುವ ಪಂಜನ್ನು ಹಿಡಿದುಕೊಂಡು, ದೇವಿಗೆ ‘ಉಧೋ ಉಧೋ’ ಎಂದು ಘೋಷಿಸುವುದು ಜೋಗತಿಯ ಪೂಜೆಯ ಭಾಗವಾಗಿದೆ. ಕಾಂಚಾಣಜೋಗತಿಯ ಕೈಯಲ್ಲೂ ಸಹ ಉರಿಯುತ್ತಿರುವ ಪಂಜಿದೆ. ಇವಳೂ ಸಹ ‘ಉಧೋ ಉಧೋ’ ಎಂದು ಗರ್ಜಿಸುತ್ತಿದ್ದಾಳೆ. ಆದರೆ ಇವಳು ಹಿಡಿದಿರುವುದು ಸಾಧಾರಣ ಪಂಜಲ್ಲ. ಇದು ಬಡವರ ಒಡಲಿನ ಬೆಂಕಿಯ ಪಂಜು. ಬಡವರ ಒಡಲೇ ಒಂದು ಸಮುದ್ರದಷ್ಟು ವಿಶಾಲವಾಗಿದೆ. ಏಕೆಂದರೆ ಇವರ ಹಸಿವೆಯನ್ನು ಹಿಂಗಿಸುವಷ್ಟು ಕೂಳು ಇವರಿಗೆ ಸಿಗುವುದಿಲ್ಲ. ಅಲ್ಲದೆ ಒಬ್ಬನು ಸಿರಿವಂತನಾಗಬೇಕಾದರೆ ನೂರು ಜನ ಬಡವರಾಗಿರಬೇಕಾಗುತ್ತದೆ! ಆದುದರಿಂದ ಬಡವರ ಒಡಲು ಅಪಾರ ಹಾಗು ಅನಂತ ಸಮುದ್ರದಷ್ಟು ಆಳ ಹಾಗು ವಿಶಾಲ! ಸಮುದ್ರದಲ್ಲಿ ಇರುವ ಬೆಂಕಿಗೆ ‘ಬಡಬಾನಲ’ ಎಂದು ಕರೆಯುತ್ತಾರೆ. ಬಡವರ ಒಡಲೊಳಗಿರುವ ಬೆಂಕಿಯು ಹಸಿವಿನ ಬೆಂಕಿ. ಆ ಬೆಂಕಿಯಿಂದ ಹೊತ್ತಿಸಿದ ಪಂಜನ್ನು ಈ ಜೋಗತಿ ಹಿಡಿದಿದ್ದಾಳೆ. (ಬಡಬಾನಲವು ಸಮುದ್ರದ ಬೆಂಕಿ ಎಂದು ಅರ್ಥ ನೀಡುವುದರ ಜೊತೆಗೇ ‘ಬಡವರ+ಅನಲ’ ಎಂದು  ಶ್ಲೇಷೆಯ ಮೂಲಕ ಸೂಚಿಸುವದನ್ನೂ ಗಮನಿಸಬೇಕು.)

’ಉಧೋ ಉಧೋ’ ಎಂದು ಉಗ್ಗಡಿಸುವ ಜೋಗತಿಯ ಮೈಯಲ್ಲಿ ದೇವಿಯ ಆವೇಶ ಬಂದಿರುತ್ತದೆ. ಈ ಕಾಂಚಾಣಜೋಗತಿಯ ಮೈಯಲ್ಲಿಯೂ ಆವೇಶವಿದೆ. ಆದರೆ ಇದು ಕಾಂಚಾಣದ ಆವೇಶ. ಕಾಂಚಾಣವನ್ನು ಹೇಗಾದರೂ ಸಂಪಾದಿಸಬೇಕೆನ್ನುವ ಲೋಭವು ಅವಳನ್ನು ಕುರುಡಳನ್ನಾಗಿ ಮಾಡಿದೆ. ಅವಳ ಬಾಯಿಯಿಂದ ಬರುವ ‘ಉಧೋ ಉಧೋ’ ಎನ್ನುವ ಉಗ್ಗಡಣೆಯು ಪವಿತ್ರವಾದ ಘೋಷವಲ್ಲ; ಇದು ಹುಂಬತನದ ಘೋಷ.  ಇದು ಮುಗ್ಧ, ಅಸಹಾಯಕರ ಕಂಬನಿಯನ್ನು ಕುಡಿಯುವ ಅಪವಿತ್ರ ಬಾಯಿಯಿಂದ ಹೊರಡುತ್ತಿರುವ ಸಂವೇದನಾಶೂನ್ಯ ಘೋಷ.

    ಕೂಲಿ ಕುಂಬಳಿಯವರ
     ಪಾಲಿನ ಮೈದೊಗಲ
     ಧೂಳಿಯ ಭಂಡಾರ ಹಣೆಯೊಳಗಿತ್ತೋ;
            ಗುಡಿಯೊಳಗೆ ಗಣಣ, ಮಾ
            ಹಡಿಯೊಳಗೆ ತನನ, ಅಂ-
            ಗಡಿಯೊಳಗೆ ಝಣಣಣ  ನುಡಿಗೊಡುತಿತ್ತೋ;

ಎಲ್ಲಮ್ಮನ ಜೋಗತಿಯು ಹಣೆಯ ಮೇಲೆ  ಭಂಡಾರವನ್ನು (ಅಂದರೆ ಎಲ್ಲಮ್ಮ ದೇವಿಯ ಅರಿಶಿಣವನ್ನು) ಧರಿಸಿರುತ್ತಾಳೆ. ಈ ಕಾಂಚಾಣಜೋಗತಿಯು ಧರಿಸಿರುವ ಭಂಡಾರವೆಂತಹುದು? ಒಬ್ಬನು ದುಡ್ಡನ್ನು ಕೂಡಿಹಾಕಬೇಕಾದರೆ ನೂರು ಜನ ಬೆವರು ಹರಿಸಬೇಕಲ್ಲವೆ? ಈ ಕೂಲಿ ಜನರು ದುಡಿದುಡಿದು ಸೋತು ಸಣ್ಣಗಾದಾಗ ಇವರ ಮೈಯ ತೊಗಲೂ ಸಹ ಜೋತು ಬಿದ್ದಿರುತ್ತದೆ. ಅದೇ ಇವರ  ಪಾಲಿಗೆ ಉಳಿದಿರುವ ಸಂಪತ್ತು. ಆ ಮೈದೊಗಲಿಗೆ ಹತ್ತಿದ ಧೂಳಿಯೇ ಈ ಕಾಂಚಾಣಜೋಗತಿಯು ತನ್ನ ಹಣೆಯ ಮೇಲೆ ಹಚ್ಚಿಕೊಂಡಂತಹ ಭಂಡಾರವಾಗಿದೆ. (ಭಂಡಾರ ಎಂದರೆ ಸಂಪತ್ತಿನ ಸಂಗ್ರಹಾಲಯ ಎನ್ನುವ ಶ್ಲೇಷೆ ಇಲ್ಲಿದೆ.)

ಇದಾದ ಬಳಿಕ, ದೇವಿಯ ಜೋಗತಿಯು ಗುಡಿಯೊಳಗೆ ಹೋಗಿ ಗಂಟೆ ಬಾರಿಸಿ ಪೂಜೆ ಸಲ್ಲಿಸುವಳಷ್ಟೆ? ಕಾಂಚಾಣಜೋಗತಿಯೂ ಸಹ ತನ್ನ ಹಣದ ಬಲದಿಂದ ಗುಡಿಗಳೊಳಗೆ ಪೂಜೆಯ ಅಧಿಕಾರವನ್ನು ಕೊಳ್ಳುವವಳೇ. (ದುಡ್ಡಿದ್ದವರಿಗೆ ‘ಸ್ಪೆಶಲ್ ದರ್ಶನ’ ಎನ್ನುವುದು ಎಲ್ಲರಿಗೂ ಗೊತ್ತಿದ್ದದ್ದೇ!) ಗುಡಿಗಳಲ್ಲಿ ‘ಗಣಣ’ ಎಂದು ಗಂಟೆ ಬಾರಿಸುವ ಇವಳು ಮಹಡಿಯ ಮನೆಗಳಲ್ಲಿ, ಹಣವುಳ್ಳವರ ಎದುರಿಗೆ ‘ತನನ’ ಎಂದು ಕುಣಿಯುವ ಸಾಮಾನ್ಯ ನಾಚುಗಾತಿಯಾಗುತ್ತಾಳೆ. ಇನ್ನು ದುಡ್ಡಿನ ಕಾರಾಗಾರಗಳಾದ ಅಂಗಡಿಗಳ ಒಳಗಂತೂ ಇವಳ ಝಣಝಣ ಪ್ರತಿಧ್ವನಿ ಯಾವಾಗಲೂ ಕೇಳಿ ಬರುವಂತಹದು. ಹಣದ ಕುಣಿತ ಹೇಗೆ ಸರ್ವವ್ಯಾಪಿಯಾಗಿದೆ, ಸರ್ವಮಾನ್ಯವಾಗಿದೆ ಎನ್ನುವುದನ್ನು ಬೇಂದ್ರೆಯವರು ಇಲ್ಲಿ ವ್ಯಂಗ್ಯವಾಗಿ ಸೂಚಿಸಿದ್ದಾರೆ.

ಹ್ಯಾಂಗಾರೆ ಕುಣಿಕುಣಿದು
     ಮಂಗಾಟ ನಡೆದಾಗ
     ಅಂಗಾತ ಬಿತ್ತೋ,  ಹೆಗಲಲಿ ಎತ್ತೋ.

ಆದರೆ ಇಂತಹ ವಿನಾಶಕಾರಿ ಧಂಧೆ ಎಲ್ಲಿಯವರೆಗೆ ನಡೆದೀತು? ಅದು ಅತಿಶಯಕ್ಕೆ ಮುಟ್ಟಿದಾಗ (--ಪಾಪದ ಕೊಡ ತುಂಬಿದಾಗ ಎಂದು ಹೇಳುತ್ತಾರಲ್ಲವೆ?--) ಈ ಮಂಗಾಟದ ಕುಣಿತಕ್ಕೆ ಕೊನೆಯಾಗಲೇ ಬೇಕು. ತನ್ನ (ಪಾಪದ) ಭಾರ ತಾಳಲಾರದೆ ಈ ಜೋಗತಿ ಕುಸಿದು ಬೀಳಲೇ ಬೇಕು. ‘ಅದು ಬಿದ್ದಾಗ, ತಡ ಮಾಡದೇ ಆ ಶವವನ್ನು ಎತ್ತಿ ಹಾಕಿರಿ’ (--ಅದು ಮತ್ತೆ ಮೈದುಂಬೀತು ಎನ್ನುವ ಹೆದರಿಕೆಯಿಂದಲೆ?--) ಎಂದು ಬೇಂದ್ರೆಯವರು ಹೇಳುತ್ತಾರೆ. ತುಳಿತಕ್ಕೆ ಒಳಗಾದವರ ಆಸೆ ಹಾಗು ಆಶಯವೂ ಸಹ ಇದೇ ಆಗಿದೆ.
                                                                                                         
ಟಿಪ್ಪಣಿ: ಬೇಂದ್ರೆಯವರ ಕವನಗಳು ಕೇವಲ ಹಾಡುವ ಅಥವಾ ಮನನ ಮಾಡುವ ಕವನಗಳಷ್ಟೇ ಅಲ್ಲ. ಅವರು ತಮ್ಮ ಕವನಗಳ ಬರಹವನ್ನೂ ಸಹ ನಿರ್ದಿಷ್ಟ ರೀತಿಯಲ್ಲಿ ಬರೆಯುತ್ತಿದ್ದರು. ಯಾವ ಸಾಲಿನ ಕೆಳಸಾಲು ಎಲ್ಲಿ ಬರಬೇಕು, ಯಾವ ವಿರಾಮಗಳನ್ನು ಎಲ್ಲಿ ಬಳಸಬೇಕು ಎನ್ನುವುದರ ಬಗೆಗೆ ಅವರು ತುಂಬ ಕಾಳಜಿಯಿಂದ ಇರುತ್ತಿದ್ದರು. ಈ ಕವನದ ಮೊದಲ ಆರು ನುಡಿಗಳ ಕೊನೆಯ ಸಾಲುಗಳ ಕೊನೆಯಲ್ಲಿ ಅರ್ಧವಿರಾಮ ಬರುತ್ತದೆ. ಕೊನೆಯ (ಏಳನೆಯ ಸಾಲಿನ) ಕೊನೆಯಲ್ಲಿ ಮಾತ್ರ ಪೂರ್ಣವಿರಾಮ ಬರುತ್ತದೆ. ಕಾಂಚಾಣ-ಜೋಗತಿಯ ಪೂರ್ಣಚಿತ್ರವನ್ನು, ಯಾವುದೇ ವಿರಾಮವಿಲ್ಲದೆ ನೀಡುತ್ತಿದ್ದೇನೆ ಎನ್ನುವುದರ ಸೂಚನೆಯನ್ನು ಬೇಂದ್ರೆಯವರು ನೀಡುತ್ತಿದ್ದಾರೆ. 


ಸಲ್ಲಾಪ ಬ್ಲಾಗ್ ನಿಂದ..

         ಆಡಿಯೋ ಲಿಂಕ್                               https://youtu.be/HKPetWFxqZM