ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಜೂನ್ 19, 2020

ಮೂರನೇ ಸೆಮಿಸ್ಟರ್ ಬಿ.ಎ., ಬಿ.ಎಸ್ ಸಿ ತರಗತಿಗಳ ಪಠ್ಯ



. ನಮ್ಮ ಭಾಷೆ
- ಎಂ. ಮರಿಯಪ್ಪ ಭಟ್ಟ
ಆಶಯ :
ಭಾಷೆ ಸಂವಹನ ಮಾಧ್ಯಮ ಅದು ಮಾತು ಮತ್ತು ಬರಹ ರೂಪದಲ್ಲಿ ಅಭಿವ್ಯಕ್ತಗೊಳ್ಳುತ್ತದೆ. ಅದನ್ನು ಶ್ರವಣ, ಚಾಕ್ಷುಕ ಎಂದು ಪರಿಗಣಿಸಿದೆ. ಮಾತಿನ ಸಾಂಕೇತಿಕ ರೂಪವೇ ಬರಹ, ಭಾಷೆಗೆ ರೂಪ, ಆಕಾರ, ಭೌತಿಕ ಅಥವಾ ರಾಚನಿಕ ಗುಣಗಳೇನೂ ಇಲ್ಲ. ಅದು ಪ್ರಾದೇಶಿಕವಾಗಿ ಸನ್ನಿವೇಶವನ್ನು ಅರ್ಥೈಸುವ ಹೊಂದಾಣಿಕೆ ಕೆಲಸವನ್ನು ಪ್ರಾತಿನಿಧಿಕವಾಗಿ ನಿರ್ವಹಿಸುತ್ತದೆ. ಮಾನವನಿಗಿರುವ ಚಿಂತಿಸುವ ಪರಿಭಾವಿಸುವ ಸದಾ ಚೈತನ್ಯದಾಯಕವಾಗಿ ಪ್ರತಿಕ್ರಿಯಿಸುವ ಬೌದ್ಧಿಕ ಶಕ್ತಿಯೇ ಇದಕ್ಕೆ ಹಿನ್ನೆಲೆ, ಅದರ ಸಾಧ್ಯತೆಯ ಪರಿಣಾಮವೇ ಸಂವಹನ, ಭಾಷೆಯ ಸುಸಂಘಟಿತ ರೂಪದ ಧ್ವನಿ ಶರೀರದಿಂದ ಅರ್ಥ ಸ್ಪುರಿಸುತ್ತದೆ. ಭಾಷೆ ಬಲ್ಲವರಿಗೆ ಭಾವನೆ ಪರಸ್ಪರ ಸಂಲಗ್ನಗೊಳ್ಳುವುದು, ಭಾವನೆಗಳೆಲ್ಲವನ್ನೂ ಭಾಷೆಯ ತೆಕ್ಕೆಗೆ ತರಲು ಸಾಧ್ಯವಿಲ್ಲವಾದರೂ ಮೂಲ ಆಶಯಕ್ಕೆ ಧಕ್ಕೆ ಬಾರದಂತೆ ಬಳಸಿದಾಗ ಮಾತ್ರ ಉದ್ದೇಶ ಸಾಧಿತವಾಗುತ್ತದೆ.


ನಮ್ಮ ಸುತ್ತಮುತ್ತಲಿನವರೊಡನೆ ವ್ಯವಹರಿಸುವುದಕ್ಕೆ ಹಾಗೂ ವಿಚಾರ ವಿನಿಮಯ ಮಾಡುವುದಕ್ಕೆ ಭಾಷೆ ಒಂದು ಅಮೂಲ್ಯ ಸಾಧನ. - ಇಂಥ ಅಮೂಲ್ಯವಾದ ಭಾಷೆಯ ಉತ್ಪತ್ತಿ ಎಂದು ಮತ್ತು ಹೇಗಾಯಿತು ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಹೇಳುವುದು ಕಷ್ಟಸಾಧ್ಯ. ಭಾಷೆಯ ಮೂಲವನ್ನು ಮಾನವನು ಕಂಡುಹಿಡಿಯುವುದೆಂದರೆ, ನಿರೀಕ್ಷಕನೂ ವಸ್ತುವೂ ಒಂದೇ ಆದಂತೆಯೇ ಸರಿ. ಮಾನವನು ತನ್ನ ವಿಶಿಷ್ಟ ಮೇಧಾಶಕ್ತಿಯಿಂದ ಜಂಗಮ ಜಗತ್ತಿನ ಇತರ ಜಂತುಗಳಿಗಿಂತ ಭಿನ್ನವಾಗಿದ್ದಾನೆ.
ಮಕ್ಕಳಿಗೆ ಮೊಲೆಯೂಡುವ ಎಲ್ಲ ಪ್ರಾಣಿಗಳೂ ಚಲನವಲನಗಳ ವಿಷಯವಾಗಿ, ಆಹಾರ ವಿಚಾರಗಳ ವಿಚಾರವಾಗಿ ತಮ್ಮ ಮಕ್ಕಳಿಗೆ ಸಹಜವಾಗಿ ತರಪೇತು ಕೊಡುವುದನ್ನು ಕಾಣುತ್ತೇವೆ. ಅನುಕರಣದಿಂದ ಕಿರಿಯವು ಹಿರಿಯ ಪ್ರಾಣಿಗಳಂತೆ ಕಾರ್ಯ ಮಾಡುವುದನ್ನು ಕಲಿಯುತ್ತವೆ. ಇಲ್ಲಿಗೆ ಅವುಗಳ ಸಾಮಾನ್ಯ ಸಂಸ್ಕೃತಿ ಮುಗಿಯಿತು: ಮಾನವನಾದರೋ ತನ್ನ ಸಮಕಾಲೀನ ಜನತೆಯದು ಮಾತ್ರವೇ ಅಲ್ಲ, ಗತಕಾಲದ ಹಿರಿಯರ ಜ್ಞಾನಾನುಭವಗಳ ಸಾರಸರ್ವಸ್ವವನ್ನೂ ಉಳಿಸಿಕೊಂಡು ಬೆಳೆಸಬಲ್ಲ. ಇದಕ್ಕೆ ಮೂಲ ಸಾಧನ ಭಾಷೆ, ಭಾಷೆಯ ಪ್ರಯೋಜನ ಮನುಷ್ಯನಿಗೆ ಇಲ್ಲದೆ ಹೋಗಿದ್ದರೆ ಆತ ಬರಿಯ ಜಂತುವಾಗಿಯೇ ಉಳಿಯುತ್ತಿದ್ದ. ಭಾಷೆ ಇದ್ದೂ ಅದರ ಪೀಯೂಷವನ್ನು ಕುಡಿದು ಅರಗಿಸಿಕೊಳ್ಳದ, ಅಂತೆಯೇ ಕರ್ಮವೆಸಗದ ವ್ಯಕ್ತಿ ಜಂತುವೇ ಸರಿ.
ವಿಶ್ವದ ಬಹುಭಾಷಾ ಪ್ರಪಂಚದಲ್ಲಿ ಸುಮಾರು ನಾಲ್ಕು ಸಾವಿರ ಭಾಷೆಗಳಿರುತ್ತವೆ ಎಂದು ತಿಳಿದುಬಂದಿದೆ. ದೇಶ, ಕಾಲ, ವಂಶ, ಪರಂಪರೆ ಇತ್ಯಾದಿ ಕಾರಣಗಳಿಂದ ಅವು ಬೇರೆ ಬೇರೆಯಾಗಿ ಭಿನ್ನ ಭಿನ್ನ ಸನ್ನಿವೇಶಗಳಲ್ಲಿ ಬೆಳೆದು ಬಂದಿರುತ್ತವೆ. ಆಯಾ ಸನ್ನಿವೇಶಗಳಿಗನುಸಾರ ಆಯಾ ಜನತೆಯ ಜ್ಞಾನಾರ್ಜಿತ ಸ್ವತ್ತುಗಳಿಗನುಸಾರ ಭಾಷೆಗಳ ಬೆಳವಣಿಗೆಯಾಗುತ್ತಿದೆ ಭಾಷೆಗಳನ್ನು ವ್ಯಾವಹಾರಿಕ ಮತ್ತು ಗ್ರಾಂಥಿಕ ಎಂದು ಎರಡು ತೆರನಾಗಿ ವಿಭಾಗಿಸುವುದುಂಟು, ವ್ಯಾವಹಾರಿಕವೆಂದರೆ ಜೀವದ್ಯಾಷೆ, ಅದರಲ್ಲಿ ಜನರು ಮಾತನಾಡುತ್ತಾರೆ, ವ್ಯವಹರಿಸುತ್ತಾರೆ. ಕನ್ನಡ, ತಮಿಳು, ತೆಲುಗು, ತುಳು, ಮರಾಠಿ, ಉರ್ದು, ಇಂಗ್ಲಿಷ್ ಇವು ಇದಕ್ಕೆ ಉದಾಹರಣೆ. ಗ್ರಾಂಥಿಕವೆಂದರೆ ಅಭಿವೃದ್ಧಿ ಹೊಂದಿ ಗ್ರಂಥ ರಚನೆಯಲ್ಲಿ ಉಪಯೋಗವಾದ ಭಾಷೆ, ಸಂಸ್ಕೃತ, ಕನ್ನಡ, ಇಂಗ್ಲಿಷ್, ಪಾಳಿ ಇತ್ಯಾದಿ ವರ್ಗಕ್ಕೆ ಉದಾಹರಣೆ. ಎಲ್ಲ ವ್ಯಾವಹಾರಿಕ ಭಾಷೆಗಳು ಗ್ರಾಂಥಿಕವಾಗಬೇಕಿಲ್ಲ. ತುಳು ಒಂದು ಸುಂದರ ವ್ಯಾವಹಾರಿಕ ಭಾಷೆ. ಆದರೆ ಅದು ಗ್ರಾಂಥಿಕ ಭಾಷೆಯಲ್ಲ. ಹಾಗೆಯೇ ಎಲ್ಲ ಗ್ರಾಂಥಿಕ ಭಾಷೆಗಳು ಇಂದು ವ್ಯಾವಹಾರಿಕವಾಗಿ ಇರುವುದಿಲ್ಲ. ದೇವಭಾಷೆ ಎನ್ನಿಸಿಕೊಂಡ ಸಂಸ್ಕತ ಸರ್ವ ಸಂಪನ್ನತೆಯಿಂದ ಕೂಡಿದ ಗ್ರಾಂಥಿಕ ಭಾಷೆಯಾಗಿದೆ. ಆದರೆ ಇಂದು ಯಾವೊಂದು ಪ್ರದೇಶದಲ್ಲಿಯೂ ಅದು ವ್ಯಾವಹಾರಿಕ ಭಾಷೆಯಾಗಿರುವುದಿಲ್ಲ.
ನವಶಿಲಾಯುಗದ ಮಾನವ, ಸಂಚಾರಿ ಜೀವನವನ್ನು ತ್ಯಜಿಸಿ ಒಂದು ಬೀಡುಬಿಟ್ಟು ಆಸ್ತಿ, ಮನೆ, ಬದುಕು ಮೊದಲಾದ ಭಾವನೆಗಳನ್ನು ತಳೆಯುವುದಕ್ಕೆ ಎಂದು ಮೊದಲು ಮಾಡಿದನೋ ಅಂದು ಆತನಿಗೆ ಲೆಕ್ಕವಿಡುವ ಅವಶ್ಯಕತೆ ಉಂಟಾಯಿತು. ಇದೇ ಲಿಪಿಯ ಉಗಮದ ಕಾಲವೆನ್ನುವರು. ಇದು ಸಹಜವೆಂಬುದನ್ನು ಪ್ರಸ್ತುತ ಉದಾಹರಣೆಯೊಂದರಿಂದ ಸಾಧಿಸಬಹುದು. ಯಾವ ಓದುಬರಹವಿಲ್ಲದ ಹಳ್ಳಿಯ ಕೆಲಸಗಾರನಾದರೂ ಸರಿಯೆ, ತಾನು ದಿನಗೆಲಸಕ್ಕೆ ಹೋದ ಲೆಕ್ಕವನ್ನು ಗೋಡೆಯ ಮೇಲೆ ದಿನಂಪ್ರತಿ ಒಂದೊಂದು
ಇದು ಗುರುತಿಸಿ, ಕೊನೆಯಲ್ಲಿ ಎಣಿಸಿ, ಲೆಕ್ಕಹಾಕಿ ಸಂಬಳವನ್ನು ಪಡೆಯುತ್ತಾನೆ. ಮಾರುವವರೂ ಹೀಗೆಯೇ ಲೆಕ್ಕವಿಡುವುದುಂಟು. ಅಲ್ಲಿ ವಿಮರ್ಶಕ ಸುಮೆರ್ (Super) ನೈಲ್ (ಈಜಿಪ್), ಕ್ರಿಟಗಿರಿ (Crete) ಇತ್ಯಾದಿ ಪ್ರದೇಶಗಳಲ್ಲಿ ಉಪಸ್ಥಿಬ್ಬವಾದ ಅತ್ಯಂತ ಪುರಾತನ ಅವಶೇಷಗಳು ವ್ಯಾಪಾರ, ವ್ಯವಹಾರ ಲೆಕ್ಕಗಳಿಗೆ ಸಂಬಂಧಿಸಿದ ಬಗೆಯ ಲಿಪಿ ಸಾಕ್ಷ್ಯಗಳನ್ನು ಕಂಡುಕೊಂಡಿದ್ದಾರೆ. ಇದೇ ಲಿಪಿಯ ಮೊದಲಿನ ಜಾಡು.
ಮುಂದೆ ಮಾನವನಿಗೆ ಬಿಡುವು ಹೆಚ್ಚಿದಂತೆ, ಜೀವನದ ಸೌಕರ್ಯಗಳನ್ನು ವಿಶಿಷ್ಟ ಮೇಧಾಶಕ್ತಿಯಿಂದ ಅಭಿವೃದ್ಧಿಗೊಳಿಸುತ್ತಾ ಹೋದಂತೆ ತನ್ನ ಆಗುಹೋಗುಗಳನ್ನು, ಸುಖ ದುಃಖಗಳನ್ನು ಕಾವ್ಯರೂಪಕ್ಕೆ ಇಳಿಸುವ ಮಾರ್ಗವನ್ನು ಕಂಡುಕೊಸ್ಥಿಡಿರಬೇಕು. ಸಾಹಿತ್ಯ. ವಿವಿಧ ರೂಪದಲ್ಲಿ ಬೆಳೆದಿರಬೇಕು. ಲೆಕ್ಕಪತ್ರಗಳನ್ನಿಡಲು ಉಪಯುಕ್ತವಾದ ಮೂಲಲಿಪಿಯನ್ನು ಮತ್ತಷ್ಟು ಪರಿಷ್ಕರಿಸುತ್ತಾ ಸುಂದರವಾದ ಸಾಹಿತ್ಯ ಕೃತಿಗಳನ್ನು ಬರೆದಿಡುವುದನ್ನು ಮಾನವ ಕಲಿತುಕೊಂಡ. ಲಿಪಿಯ ಮೂಲಕ ಪರಂಪರೆಯಿಂದ ಬಂದ ಎಷ್ಟೋ ವಿಷಯಗಳನ್ನು ಬರೆದಿಡಲು ಸಾಧ್ಯವಾಯಿತು. ಜ್ಞಾನ ಭಂಡಾರ ಭದ್ರವಾಯಿತು. ಸಂಸ್ಕೃತಿಯ ಇತಿಹಾಸ ಉಳಿಯಿತು. ಪ್ರಗತಿಪಥ ಸುಗಮವಾಯಿತು.
ಕನ್ನಡಕ್ಕೆ ಬಹಳ ಪ್ರಾಚೀನ ಕಾಲದಿಂದಲೂ ಸಂಸ್ಕೃತದ ಪೋಷಣೆ . ಚೆರೆಯುತ್ತ ಬಂದಿದೆ. ವೈದಿಕ ಹಾಗೂ ಜೈನ ಧಾರ್ಮಿಕ ತತ್ವಗಳನ್ನು
ಕನ್ನಡದಲ್ಲಿ ವಿವರಿಸಬೇಕೆಂಬ ಅಭಿಲಾಷೆಯಿಂದ ಅನೇಕ ಪಂಡಿತರು ಉತ್ತಮ * ಕಾವ್ಯಗಳನ್ನು ರಚಿಸಿದರು. ಆದರೆ ಅವರಲ್ಲಿ ಅನೇಕರು ಕನ್ನಡವನ್ನು 'ಸಂಸ್ಕತಮಯವನ್ನಾಗಿ ಮಾಡಿಬಿಟ್ಟರು. ಕನ್ನಡ ಮಾತ್ರ ತಿಳಿದವರಿಗೆ ಅವರ ರಚನೆ ಕಬ್ಬಿಣದ ಕಡಲೆಯೇ ಆಯಿತು. ಅವರ ಉದ್ದುದ್ದ ವಾಕ್ಯಗಳಲ್ಲಿ ಎಲ್ಲ ಸಂಸ್ಕೃತ ಶಬ್ದಗಳೇ ಒಂದು ಕ್ರಿಯಾಪದ ಮಾತ್ರ ಕನ್ನಡದಲ್ಲಿರುತ್ತಿತ್ತು. ಇಂಥ ಪರಿಸ್ಥಿತಿಯನ್ನು ಗಮನಿಸಿ ೧೨ನೆಯ ಶತಮಾನದ ನಯಸೇನ ಕವಿ ಹೀಗೆ ಹಲುಬಿದ.
"ಸಕ್ಕದಮಂ ಪೇಳ್ಕೊಡೆ ನೆಲೆ ಸಕ್ಕದಮಂ ಪೇಟ್ಟೆ ಶುದ್ಧ ಕನ್ನಡದೊಳ್ ತಂ ದಿಕ್ಕುವುದೆ ಸಕ್ಕದಂಗಳ ತಕ್ಕುದೆ ಬೆರಸಿ ಶೃತಮುಮಂ ತೈಲಮುಮಂ"
ನಮಗೆ ತುಪ್ಪವೂ ಬೇಕು; ಎಣ್ಣೆಯೂ ಬೇಕು. ಸಂಸ್ಕೃತವೂ ಬೇಕು: ಕನ್ನಡವೂ ಬೇಕು. ಆದರೆ ಎಣ್ಣೆ ತುಪ್ಪದ ಅಸ್ವಾದು ಮಿಶ್ರಣಬೇಡ ಎಂಬುದು ನಯಸೇನನ ಅಭಿಮತ.
ಅನೇಕ ಕವಿಗಳು ಕನ್ನಡ ಅಭಿವೃದ್ಧಿ ಹೊಂದಬೇಕಾದರೆ ಕನ್ನಡ ಪದಗಳ ಬಳಕೆ ಹೆಚ್ಚಾಗಬೇಕೆಂದು ಸಾರಿದ್ದಾರೆ. ಅಂಥವರ ವಾಣಿಯಿಂದ ಕನ್ನಡದ ವೀಣೆ ಮೃದು ಮಧುರವಾಗಿ ಮಿಡಿಯಿತು. ಮುಂದೆ ಬಸವೇಶ್ವರ, ಅಲ್ಲಮಪ್ರಭುಗಳಂತಹ ಶರಣವರೇಣ್ಯರು, ಚಾಮರಸ, ಕುಮಾರವ್ಯಾಸರಂತಹ ಕವಿಪುಂಗವರು, ಪುರಂದರದಾಸ, ಕನಕದಾಸರಂತಹ ದಾಸ ಶ್ರೇಷ್ಠರು ಸುಲಭ ಮಾರ್ಗವನ್ನೇ ತುಳಿದರು. ತಮ್ಮ ತಮ್ಮ ಅನುಭವ ಸಾರವನ್ನು ಸುಲಭವೂ ಸುಂದರವೂ ಸಹಜವೂ ಆದ ಮಾತುಗಳಿಂದ ಹೃದಯ ಮುಟ್ಟುವಂತೆ ಅಭಿವ್ಯಕ್ತಪಡಿಸಿದರು. ಹೀಗೆ ಕನ್ನಡ ಭಾಷೆ ಹದಗೊಂಡುದರಿಂದ ಅದು ಸುಲಿದ ಬಾಳೆಯ ಹಣ್ಣಿನಂತೆ, ಸಿಗುರುತೆಗೆದ ಕಬ್ಬಿನಂತೆ, ಉಷ್ಣ ಅಳಿದ ಹಾಲಿನಂತೆ ಸುಲಭವೂ ರುಚಿಯುಳ್ಳದ್ದೂ ಆಗಿದೆ ಎಂದು ಕವಿ ಮಹಲಿಂಗರಂಗ, ಉದ್ವೇಷಿಸಲು ಸಾಧ್ಯವಾಯಿತು.
ಒಂದು ಭಾಷೆ ಅನ್ಯಭಾಷೆಯಿಂದ ಏನನ್ನೂ ಎರವಲಾಗಿ ತೆಗೆದುಕೊಳ್ಳಬಾರದೆಂದು ಯಾರೂ ತಿಳಿಯಲಾಗದು, ನೆರೆಹೊರೆಯ ಭಾಷೆಗಳಲ್ಲಿ ಕೊಳುಕೊಡುಗೆಯ ವ್ಯವಹಾರ ನಡೆದೇ ನಡೆಯುತ್ತದೆ. ನಡೆಯಲೇಬೇಕು 'ಅದು ಸಜೀವ ಭಾಷೆಯ ಲಕ್ಷಣ ಆದರೆ ಸ್ವೀಕರಿಸುವಾಗ ತನ್ನತನವನ್ನು ಕಳೆದುಕೊಳ್ಳದಂತೆ ಕಾಪಾಡಿಕೊಳ್ಳಬೇಕು. ಹಿಂದೆ ಸಂಸ್ಕೃತ, ಪ್ರಾಕೃತ ಭಾಷೆಗಳಿಂದ (ತತ್ಸಮ ತದ್ಭವಗಳಾಗಿ) ಅನೇಕ ಶಬ್ದಗಳನ್ನು ಕನ್ನಡ ತನ್ನಲ್ಲಿ ಅಳವಡಿಸಿಕೊಂಡಿದೆ. ಮಹಮ್ಮದೀಯರ ಆಳ್ವಿಕೆಯ ಅವಧಿಯಲ್ಲಿ ಪರ್ಷಿಯನ್ ಭಾಷೆಯಿಂದ ಅನೇಕ ಶಬ್ದಗಳು ಕನ್ನಡಕ್ಕೆ ಬಂದಿವೆ..
ಉದಾಹರಣೆ - ದಿವಾನ, ಸರಕಾರ, ಮುನಷಿ, ಸರದಾರ, ಸವಲತ್ತು ಮುಸಾಫರ್, ಕಛೇರಿ, ಸುಭೇದಾರ, ಅಮಲ್ದಾರ, ತಹಸಿಲ್ದಾರ ಇತ್ಯಾದಿ ಆಡಳಿತಕ್ಕೆ ಸಂಬಂಧಪಟ್ಟ ಪಾರಿಭಾಷಿಕ ಶಬ್ದಗಳು ಕನ್ನಡನುಡಿ ಬೊಕ್ಕಸವನ್ನು ಸೇರಿಕೊಂಡಿವೆ.
ಹಾಗೆಯೇ ಅಸಂಖ್ಯಾತ ಇಂಗ್ಲಿಷ್ ಶಬ್ದಗಳು ಕನ್ನಡದ ಉಡುಪನ್ನು ಧರಿಸಿ ಒಳಗೆ ಬಂದುಬಿಟ್ಟಿವೆ. ರೈಲು, ಮೋಟರು, ಹೋಟ್ಲು, ಆಫೀಸು, ಇಸ್ಕೂಲು, ಸಿನಿಮಾ, ರೇಡಿಯೋ, ಆಸ್ಪತ್ರೆ ಕೋರ್ಟು, ಡಿಕ್ರಿ ಲೈಟು ಮೊದಲಾದವು ನಮ್ಮೆಲ್ಲರ ಮನೆ ಮಾತಾಗಿವೆ. ಪೋರ್ಚುಗೀಸಿನಿಂದ ಬಟಾಟೆ, ಅನಾನಸು, ಜಂಗಾಲ ಮುಂತಾದ ಕೆಲವು ಸ್ವಾರಸ್ಯ ಪದಗಳು ಆಗಮಿಸಿವೆ.
ಇವೆಲ್ಲಾ ಅನ್ಯದೇಶಗಳ ವಿಚಾರವಾಯಿತು. ಇನ್ನು ಕನ್ನಡದ ನೆರೆಯವರಿಂದ ಬಂದಿರುವ ಎರವುಗಳುಂಟು ಕನ್ನಡನಾಡಿನ ಎಲ್ಲೆಗಳಲ್ಲಿ ಕೆಲವೆಡೆ-ತಮಿಳು, ತೆಲುಗು, ಮಲೆಯಾಳಂ, ಮರಾಠಿಗಳನ್ನಾಡುವ ಜನರಿರುವುದು ಸರಿಯಷ್ಟೆ. ಅಂಥ ಗಡಿಪ್ರದೇಶಗಳನ್ನು ದ್ವಿಭಾಷಾ ಪ್ರದೇಶಗಳೆನ್ನುವರು. ಅಲ್ಲಿ ಸಾಮಾನ್ಯ ಜನರಿಗೆ ಎರಡೆರಡು ಭಾಷೆಗಳು ಬರುತ್ತಿರುತ್ತವೆ. ಕಾಸರಗೋಡಿನಲ್ಲಿರುವ ಕನ್ನಡಿಗರಿಗೆ ಮಲೆಯಾಳದ ವ್ಯವಹಾರ ಜ್ಞಾನವಿರುತ್ತದೆ. ಅಲ್ಲಿರುವ ಮಲಯಾಳಿಗಳಿಗೆ ಕನ್ನಡದ ವ್ಯವಹಾರ ಜ್ಞಾನವಿರುತ್ತದೆ. ಹಾಗೆಯೇ ಬಳ್ಳಾರಿ, ಅನಂತಪುರ ಜಿಲ್ಲೆಗಳ ಗಡಿಯಲ್ಲಿರುವ ಜನತೆಗೆ ಕನ್ನಡ, ತೆಲುಗು ಎರಡೂ ಬರುವುದು. ಸ್ವಾಭಾವಿಕವಾಗಿ ಗಡಿ ಜನರ ವ್ಯವಹಾರ ಸಂಪರ್ಕಗಳಿಂದ ನೆರೆ ಮಾತುಗಳಲ್ಲಿ ಕೊಳು ಕೊಡುಗೆ ನಡೆಯುತ್ತಲೇ ಇದೆ. ಇದರಿಂದ ಕನ್ನಡವೂ ಅದರ ನೆರೆನುಡಿಗಳೂ .ಪರಸ್ಪರ ಎರವುಗಳಿಂದ ಅಭಿವೃದ್ಧಿ ಹೊಂದುತ್ತಲಿವೆ.
ಭಾಷೆಯಲ್ಲಿದ್ದ ಸಾಮಗ್ರಿಯನ್ನೇ ಉಪಯೋಗಿಸಿಕೊಂಡು ಭಾಷಾಭಿವೃದ್ಧಿಯನ್ನು ಮಾಡುವ ಇನ್ನೊಂದು ವಿಧಾನ ನುಡಿಗಟ್ಟುಗಳಿಗೆ ಸೇರಿದುದು. ಎರಡು ಅಥವಾ ಹೆಚ್ಚು ಶಬ್ದಗಳು ಸೇರಿ ಒಂದು ನುಡಿಗಟ್ಟಾಗಿ ಅದಕ್ಕೊಂದು ನವೀನಾರ್ಥ ಬರುತ್ತದೆ. ಇದು ಎಲ್ಲ ಭಾಷೆಗಳಲ್ಲಿಯೂ ಕಾಣುವ ಸಹಜಶಕ್ತಿ, ವಿಚಿತ್ರ ಸಹಜಶಕ್ತಿ ಕನ್ನಡದಲ್ಲಿ ಅನೇಕ ಅಂದವಾದ ನುಡಿಗಟ್ಟುಗಳನ್ನು ಉಂಟು ಮಾಡಿರುತ್ತದೆ. ಕಣ್ ಎಂಬೊಂದು ಶಬ್ದದೊಡನೆ ಬೇರೆ ಶಬ್ದಗಳು ಸೇರಿ ನುಡಿಗಟ್ಟಾಗುವ ಸನ್ನಿವೇಶವನ್ನು ಗಮನಿಸಿ, ಕಣೋಳಿಸು, ಕಣ್ಣಿಡು, ಕಣ್ಯಟ್ಟು, ಕಣ್ಣುಹಾಕು (ಕಣ್ಣಾಕು), ಕಣ್ಣಾರೆ, ಕಣ್ಣೆಂಜಲು, ಕಂಗಾಲು, ಕಂಬನಿ, ಕಣ್ಣೀರು, ಕಣ್ಣಿಡು ಇತ್ಯಾದಿ. ನುಡಿಗಟ್ಟುಗಳನ್ನು ಪರಿಶೀಲಿಸಿದರೆ ಅವೆಲ್ಲದರಲ್ಲಿಯೂ ಬೇರೆ ಬೇರೆ ಹೊಸ ಅರ್ಥ ಬಂದಿರುವುದನ್ನು ಅರಿಯಬಹುದು.
ಒಂದು ಭಾಷೆ ಸತ್ವಪೂರ್ಣವಾಗಬೇಕಾದರೆ ಅದನ್ನಾಡುವ ಜನ ಅಭಿಮಾನಧನರೂ ಬುದ್ದಿಶಾಲಿಗಳೂ ಪ್ರಯೋಗಶೀಲರೂ ಆಗಿರಬೇಕು. ನಾಲೈದು ಶತಮಾನಗಳ ಹಿಂದೆ ಆಂಗ್ಲಭಾಷೆ ಯೂರೋಪಿನ ಸಾಮಾನ್ಯ ಭಾಷೆಗಳಲ್ಲಿ ಒಂದಾಗಿತ್ತು. ಆಂಗ್ಲ ಜನತೆ ಸಾಹಸಜೀವಿಯಾಯಿತು. ಬುದ್ದಿಶಾಲಿಯಾಯಿತು, ಸೂರ್ಯನು ಎಂದೂ ಮುಳುಗನೆನ್ನುವಂತಹ ವಿಸ್ತಾರವಾದ ಸಾಮ್ರಾಜ್ಯವನ್ನು ಸ್ಥಾಪಿಸಿತು. ದೇಶ-ವಿದೇಶಗಳ ಭಾಷೆ ಹಾಗೂ ಸಾಹಿತ್ಯ ಸಂಸ್ಕೃತಿಯನ್ನು ಆಂಗ್ಲ ಪಂಡಿತರು ಮುಕ್ತ ಮನಸ್ಸಿನಿಂದ ಅಭ್ಯಸಿಸಿದರು. ತನ್ಮೂಲಕ ತಮ್ಮ ಭಾಷೆ ಮತ್ತು ಸಾಹಿತ್ಯವನ್ನು ಹಿಗ್ಗಿಸಿದರು, ಅರಳಿಸಿದರು.
ಎಲ್ಲಕ್ಕೂ ಮೇಲಾಗಿ ಮಹಾ ಮೇಧಾವಿಗಳು ತಮ್ಮ ಆಸೆ, ಆಕಾಂಕ್ಷೆ, .ಬಾರ ಮುಂತಾದುವನ್ನು ಭಾಷೆಯ ಮುಖಾಂತರವಾಗಿಯೇ ಹೇಳಬೇಕೆಂಬ ಉಜ್ವಲ ಅಭಿಮಾನವುಳ್ಳವರಾಗಿದ್ದರು. ಆಂಗ್ಲ ವಿಜ್ಞಾನಿಗಳು, ರಾಜಕಾರಣಿಗಳು, ಅರ್ಥಶಾಸ್ತ್ರಜ್ಞರು ಹೀಗೆ ಎಲ್ಲರೂ ತಮ್ಮ ಭಾಷೆಯನ್ನೇ ಬಳಸಿದುದರ ಪರಿಣಾಮವಾಗಿ ಭಾಷೆ ಬೆಳೆದು ಇಂದು ಪ್ರಪಂಚದ ದೊಡ್ಡ ಭಾಷೆಗಳಲ್ಲಿ ಒಂದಾಗಿದೆ. ಇದಕ್ಕೆಲ್ಲ ಆಂಗ್ಲ-ಜನರ ಸಂಕಲ್ಪ, ಕೃಷಿ ಕಾರಣವೆಂದು ಬೇರೆ ಹೇಳಬೇಕಿಲ್ಲ.
ಸ್ವಭಾಷೆಯನ್ನು ಪ್ರೀತಿಸಬೇಕು, ಗೌರವಿಸಬೇಕು, ಬೆಳೆಸಬೇಕು ಎಂದರೆ ಅನ್ಯಭಾಷೆಗಳನ್ನು ತಿರಸ್ಕರಿಸಬೇಕು ಎಂದು ಅರ್ಥವಲ್ಲ. ಭಾಷೆಗಳಲ್ಲಿ ಮೇಲುಕೀಳೆಂಬುದಿಲ್ಲ. ನಾಲ್ಕು ಜನ ಮಾತನಾಡುತ್ತಿದ್ದ ಭಾಷೆಗೂ ನಲವತ್ತು ಲಕ್ಷ ಜನ ಮಾತನಾಡುತ್ತಿದ್ದ ಭಾಷೆಗೂ ಸತ್ಯ ಹಾಗೂ ಸತ್ಯದೃಷ್ಟಿಯಿಂದ ಅಂತರವೇ ಇಲ್ಲ. ಎಲ್ಲ ಭಾಷೆಗಳೂ ಅಷ್ಟೇ. ಒಬ್ಬ ತಾಯಿಯ ಗಾನದ ಶ್ರುತಿಯಂತೆ ಎಲ್ಲಕ್ಕೂ ಅಷ್ಟೇ ಸ್ಥಾನವಿದೆ. ಇದನ್ನರಿತು ಭಾರತೀಯರಾದ ನಾವು ನೆರೆಹೊರೆಯ ಭಾಷೆಗಳನ್ನು ದ್ವೇಷಿಸದೆ ನಮ್ಮ ನಮ್ಮ ಭಾಷೆಗಳನ್ನು ಗೌರವಿಸಿ, ಪ್ರೀತಿಸಿ ಅಭಿವೃದ್ಧಿಗೊಳಿಸಿದರೆ ದೇಶದ ಸಂಸ್ಕೃತಿ ಮುಂದುವರಿಯುತ್ತದೆ.

ಲೇಖಕರ ಪರಿಚಯ ಎಂ. ಮರಿಯಪ್ಪ ಭಟ್ಟ (೧೯೦೬-೧೯೮೦) : ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನ ಕಬಕ ಗ್ರಾಮದವರು. ಬಹುಭಾಷಾ ವಿದ್ವಾಂಸರಾದ ಅವರು ದ್ರಾವಿಡ ಭಾಷೆಗಳನ್ನು ತುಲನಾತ್ಮಕ ಅಧ್ಯಯನ ಮಾಡುವುದರೊಂದಿಗೆ ನಿಘಂಟು ರಚನೆಯಲ್ಲಿ ಅನುಪಮ ಸೇವೆಗೈದವರು. ಮದ್ರಾಸು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ದುಡಿದವರು. ತುಳು-ಇಂಗ್ಲಿಷ್ ನಿಘಂಟು, ಅಭಿನವ ಮಂಗರಾಜನ ನಿಘಂಟು, ಜಾತಲ ತಿಲಕಂ, ಛಂದಸ್ಸಾರ ಮೊದಲಾದ ಕೃತಿಗಳ-ಕರ್ತೃವಾಗಿ ಪ್ರಸಿದ್ಧರಾದವರು. ಅವರಿಗೆ ಕರ್ನಾಟಕ ಸರ್ಕಾರದ ಪುರಸ್ಕಾರ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಅಭ್ಯಾಸ/ಚಟುವಟಿಕೆ :
. ಭಾಷೆ ಸತ್ವಪೂರ್ಣವಾಗಿ ವಿಕಾಸಗೊಳ್ಳುವುದು ಯಾವಾಗ?
. ಕನ್ನಡ ಭಾಷೆ ಸಮೃದ್ಧವಾಗಿ ರೂಪುಗೊಂಡ ಬಗೆ ಹೇಗೆ? ವಿವರಿಸಿ.
ಲಿಪಿಯ ಮೂಲಕ ಜ್ಞಾನ ಭಂಡಾರ ಯಾವ ರೀತಿ ಭದ್ರವಾಯಿತು?
. ವ್ಯಾವಹಾರಿಕ ಮತ್ತು ಗ್ರಾಂಥಿಕ ಭಾಷೆಯ ಲಕ್ಷಣಗಳೇನು?
. ಭಾಷೆ ಯಾವುದಕ್ಕೆ ಸಾಧನವಾಗಿದೆ?

ಭಾಷೆ ಕುರಿತು ಹೆಚ್ಚಿನ ಮಾಹಿತಿಗಾಗಿ ವಿಕಿಪಿಡಿಯಾ ಮಾಹಿತಿ