ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಆಗಸ್ಟ್ 16, 2019

ವಚನಗಳ ನಿರ್ವಚನ


    ದಾಸಿಮಯ್ಯ ಎಂಬುದು ಶ್ರದ್ಧೆ, ಭಕ್ತಿ, ಸೂಕ್ಷ್ಮತೆಯ ಸಂಕೇತ. ವಚನ ಸಾಹಿತ್ಯದಲ್ಲಿ ಅತ್ಯಂತ ಸರಳವಾಗಿ ವಚನಗಳನ್ನು ತಿಳಿಸಿ ಸಮಾಜದ ಆರೋಗ್ಯಕ್ಕಾಗಿ ಶ್ರಮಿಸಿದವನು. ಬದುಕಿನ ಅರ್ಥಸಾರವನ್ನು ತಾನು ಮಾಡುವ ಕಾಯಕದ ಕಾರ್ಯ, ಪರಿಕರಗಳಿಂದಲೇ ಪರಿಚಯಿಸಿದ ಮೊದಲ ವಚನಕಾರನಾಗಿ ಕಂಡುಬರುತ್ತಾನೆ.

ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ?
ಕಡೆಗೀಲು ಬಂಡಿಗಾಧಾರ
ಕಡುದರ್ಪವೇರಿದ ಒಡಲೆಂಬ ಬಂಡಿಗೆ
ಮೃಡಭಕ್ತರ ನುಡಿಗಡಣವೇ ಕಡೆಗೀಲು ಕಾಣಾ ರಾಮನಾಥ.


    ಈ ವಚನವು ದೇವರ/ಜೇಡರ ದಾಸಿಮಯ್ಯ ಅವರ ಸರಳವಾದ ವಚನ. ಮನುಷ್ಯನ ಬದುಕನ್ನು ಸರಿಪಡಿಸುವ ಸರಿಯಾದ ಮಾರ್ಗವನ್ನು ಈರೀತಿಯಾಗಿ ನುಡಿದಿದ್ದಾರೆ. ಬಂಡಿ ಎಂದರೆ ಗಾಡಿ, ಎತ್ತಿನ ಗಾಡಿ ಅಥವಾ ಯಾವುದೇ ರಥ. ಇದಕ್ಕೆ ಎರಡು ಚಕ್ರಗಳಿವೆ. ಈ ಚಕ್ರಗಳನ್ನು ಒಂದು ಅಚ್ಚಿಗೆ ಜೋಡಿಸಲಾಗಿರುತ್ತದೆ. ಈ ಅಚ್ಚಿನ ಕೊನೆಯ ಭಾಗದಲ್ಲಿ ಚಕ್ರ ಜಾರದಂತೆ, ಕಳಚದಂತೆ ಬಂಧಿಸುವುದೇ ಕಡೆಗೀಲು ಅಥವಾ ಕಡಾಣಿ. ಈ ಕಡೆಗೀಲಿಲ್ಲದೆ ಬಂಡಿಯನ್ನು ಚಲಿಸಲು ಸಾಧ್ಯವಿಲ್ಲ. ಬಂಡಿಗೆ ಕಡೆಗೀಲೇ ಆಧಾರ. ಹಾಗೇಯೇ ಅಹಂಕಾರ ತುಂಬಿದ ನಮ್ಮ ಶರೀರಕ್ಕೆ(ಮನಸ್ಸು) ಮೃಡ(ಶಿವ)ಭಕ್ತರ ಹಿತವಚನಗಳೇ ಆಧಾರ. ಅಹಂಕಾರ ಇಲ್ಲವಾಗಿಸಿ ಉತ್ತಮ ಜೀವನ ನಡೆಸಲು ಶರಣರ ಮಾತುಗಳು ದಾರಿದೀಪವಾಗುತ್ತವೆ. ಇಲ್ಲಿ ಬಂಡಿಗೆ ಈ ಶರೀರವನ್ನು ಹೋಲಿಸಿ, ಕಡೆಗೀಲಿಗೆ ಶರಣರ ನುಡಿಗಳನ್ನು ಹೋಲಿಸಿದ್ದಾರೆ. ದಾಸಿಮಯ್ಯನ ಈ ವಚನವು ಆದರ್ಶ ಬದುಕಿಗೆ ನಾವು ಯಾರನ್ನು ಅನುಸರಿಸಬೇಕು ಎಂಬ ಎಚ್ಚರವನ್ನು ನೀಡುತ್ತದೆ.

ಒಡಲುಗೊಂಡವ ಹಸಿವ
ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು ನಿನೆನ್ನ ಜಡಿದೊಮ್ಮೆ ನುಡಿಯದಿರಾ
ನೀನೆನ್ನಂತೊಮ್ಮೆ ಒಡಲುಗೊಂಡು ನೋಡಾ ರಾಮಾನಾಥ


ಈ ದೇಹವೆಂಬುದು ಹಸಿವಿನಿಂದ ಕೂಡಿದೆ. ಈ ದೇಹವನ್ನು ಹೊಂದಿರುವ ಜೀವಗಳೆಲ್ಲವೂ ಹಸಿವಿಗಾಗಿ ಈ ಸಮಾಜದಲ್ಲಿ ನಾನಾ ಕಾರ್ಯಗಳನ್ನು ಮಾಡುತ್ತಿವೆ. ಮನುಷ್ಯನೂ ಕೂಡ ಅದೇ ಕಾರ್ಯದಲ್ಲಿ ‘ಉದರನಿಮಿತ್ಥಂ ಬಹುವಿಧಕಾರ್ಯಂ’ ಎಂಬಂತೆ ಹಲವು ಕಾರ್ಯದಲ್ಲಿ ತೊಡಗಿದ್ದಾನೆ. ಸುಳ್ಳನ್ನು ಕೂಡ ಈ ಕಾರಣದಿಂದಲೇ ಹೇಳುತ್ತಾನೆ. ಆದರೆ ದೇವರು ನಿರಾಕಾರ ಸ್ವರೂಪಿ, ಆಕಾರವಿಲ್ಲದವನು, ಅವನಿಗೆ ಶರೀರವಾಗಲೀ, ಹಸಿವಾಗಲಿ ಇರಲಾರದು. ಹೀಗಿರುವಾಗ ದೇಹವನ್ನು ಹೊಂದಿ ಸುಳ್ಳಿನಲ್ಲಿ ತೊಡಗಿರುವವನು ಅಂದರೆ ಅನ್ನಕ್ಕಾಗಿ ಬದುಕುವವನು ಎಂದು ನಿಂದಿಸದಿರು ಎಂದು ದೇವರಿಗೆ ಸವಾಲು ಹಾಕಿದ್ದಾರೆ. ನನ್ನಂತೆ ನೀನು ದೇಹ ಹೊಂದಿ ನೋಡು ಎಂದು ತನ್ನ ದೇಹದ ಹಸಿವಿನ ಕಷ್ಟವನ್ನು ಬಡವರ, ದೀನದಲಿತರ ಪರವಾಗಿ ನಿಂತು ಅವರ ಕಷ್ಟಗಳನ್ನು ಸರಳವಾಗಿ ಸಮರ್ಥಿಸಿದ್ದಾನೆ.

ಮಡದಿಯ ಪ್ರಾಣಕ್ಕೆ ಮೊಲೆಮುಡಿ ಇದ್ದಿತೇ?
ಒಡೆಯರ ಪ್ರಾಣಕ್ಕೆ ಇದ್ದಿತೆ ಯಜ್ಞಪವೀತ?
ಕಡೆಯಲ್ಲಿದ್ದ ಅಂತ್ಯಜನು ಹಿಡಿದಿದ್ದನೇ ಪ್ರಾಣದಲ್ಲಿ ಹಿಡಿಗೋಲ
ನೀ ತೊಡಕಿಕ್ಕಿದ ತೊಡಕಿಕ್ಕಿದ ತೊಡಕನೀ ಲೋಕದ ಜಡರೆತ್ತ
ಬಲ್ಲರೈ ರಾಮನಾಥ?


    ದೇವರ ದಾಸಿಮಯ್ಯನು ವಚನ ಸಾಹಿತ್ಯದಲ್ಲಿ ವೈಚಾರಿಕವಾಗಿ ದನಿ ಎತ್ತಿದ ಮೊದಲಿಗ. ವಚನ ಸಾಹಿತ್ಯದ ಮೊದಲ ವಚನಕಾರನೂ ಹೌದು. ಮನುಷ್ಯನ ನಡುವೆ ಆಗಾಧವಾಗಿದ್ದ ಅಭಿಪ್ರಾಯ ಬೇಧಗಳನ್ನು ಖಂಡಿಸುವ ನುಡಿಗಳನ್ನು ವಚನವನ್ನಾಗಿಸಿದ್ದಾನೆ.
ಪ್ರಾಣವೆಂದರೆ ಉಸಿರು. ವಿಶಾಲ ಅರ್ಥದಲ್ಲಿ ಜೀವನ ಎಂದರ್ಥ. ಜೀವನ, ಬದುಕು ಎಂದರ್ಥ. ಇಲ್ಲಿ ಬದುಕಲು ಎಲ್ಲರಿಗೂ ಸಮಾನವಾದ ಅವಕಾಶಗಳಿವೆ. ಈ ಪ್ರಾಣಕ್ಕೆ ಯಾವುದೇ ಹಂಗಿಲ್ಲ. ಹೆಣ್ಣು-ಗಂಡು ಬೇಧವಿಲ್ಲ. ಯಾವುದೇ ಜಾತಿಯ ತೊಡಕಿಲ್ಲ. ಆದರೆ ಸಮಾಜದಲ್ಲಿ ಲಿಂಗ, ಜಾತಿಗಳ ಆಧಾರದ ಮೇಲೆ ವರ್ಗೀಕರಿಸುತ್ತಾ ಮೇಲು-ಕೀಳು ಎಂಬ ಭಾವನೆಗಳನ್ನು ಅತ್ಯಂತ ಬೌದ್ಧಿಕವಾಗಿ ನಿರ್ಮಿಸಲಾಗಿದೆ.
    ದಾಸಿಮಯ್ಯನವರ ಒಂದು ವಚನ ಅತ್ಯಂತ ಮುಖ್ಯವಾಗಿ ಗ್ರಹಿಸುತ್ತಾ ಈ ಮೇಲಿನ ವಚನದ ವ್ಯಾಖ್ಯಾನಮಾಡಬಹುದು. “ಮೊಲೆ ಮುಡಿ ಬಂದರೆ ಹೆಣ್ಣೆಂಬರು, ಗಡ್ಡ ಮೀಸೆ ಬಂದರೆ ಗಂಡೆಂಬರು, ನಡುವೆ ಸುಳಿವಾತ್ಮನು ಹೆಣ್ಣು ಅಲ್ಲ ಗಂಡು ಅಲ್ಲ ರಾಮನಾಥ..” ಈ ವಚನದಲ್ಲಿ ದೇಹದ ಆಕಾರಗಳು ಲಿಂಗವನ್ನು ತಿಳಿಸುತ್ತವೆ ಅಷ್ಟೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಈ ದೇಹದ ಆಕಾರಗಳ ಮೂಲಕವೇ ಮೇಲು-ಕೀಳೆಂಬ ಬೇಧ ಎಣಿಸುವುದು ತಪ್ಪೆಂದು ಹೇಳುತ್ತಾರೆ.
    ಮೊದಲ ಸಾಲು ಲಿಂಗದ ವಿಚಾರದಲ್ಲಿ ಹೆಣ್ಣು ಹೊರೆತು. ಪ್ರಾಣದ ವಿಚಾರದಲ್ಲಿ ಗಂಡಿಗೆ ಸಮಾನಳು ಅಲ್ಲಿ ಮೇಲು-ಕೀಳಿಲ್ಲ ಎಂದಿದ್ದಾರೆ. ಇನ್ನು ಎರಡನೇ ಸಾಲಿನಲ್ಲಿ ಒಡೆಯ ಎಂದರೆ ಪ್ರಾಚೀನ ಕಾಲದಲ್ಲಿ ಜನಸಾಮಾನ್ಯರು ಕರೆಯುತ್ತಿದ್ದ ಬ್ರಾಹ್ಮಣನ ಹೆಸರು. ಬ್ರಾಹ್ಮಣನು ಯಜ್ಞಪವೀತ ಅಂದರೆ ಜನಿವಾರ ಧರಿಸುವ ಮೂಲಕ ಬ್ರಾಹ್ಮಣನಾದನೇ ಹೊರೆತು ಪ್ರಾಣದ ವಿಚಾರದಲ್ಲಿ ಆತನೂ ಮನುಷ್ಯನೇ ಆಗಿದ್ದಾನೆ. ಇದು ಸಮಾಜದಲ್ಲಿದ್ದ ವರ್ಗಬೇಧವನ್ನು ಕುರಿತು ಹೇಳುತ್ತದೆ. ಮೂರನೆಯ ಸಾಲು ಜಾತಿಬೇಧ ಕುರಿತ ವಿಚಾರ. ಅಂತ್ಯಜ ಎಂದರೆ ಕೊನೆಯವ, ದಲಿತ, ಕೆಳಜಾತಿಯವ ಎಂಬ ಅಭಿಪ್ರಾಯವಿತ್ತು. ಅವನು ಊರನ್ನು ಪ್ರವೇಶಿಸುವಾಗ ಹಿಡಿಗೋಲು ಅಥವಾ ಸಂಬಳಿಗೋಲು ಹಿಡಿದು ಕುಟ್ಟುತ್ತಾ ಬರಬೇಕಿತ್ತು. ಆಗ ಅವನ ಬರುವ ಸೂಚನೆ ಕೇಳಿ ಬ್ರಾಹ್ಮಣರು ಆಚೆ ಬರುತ್ತಿರುತ್ತಿಲ್ಲ. ಇಂತಹ ಮೈಲಿಗೆಯೊಂದಿಗಿನ ಮೂಢನಂಬಿಕೆಗಳು ಸಾಕಷ್ಟಿದ್ದವು. ಇವನೂ ಕೂಡ ಹಿಡಿಗೋಲು ಹಿಡಿದ ಕ್ಷಣ ಕೀಳಲ್ಲ. ಸಮಾಜದಲ್ಲಿ ಪ್ರತಿಯೊಬ್ಬನ ಪ್ರಾಣಕ್ಕೂ ಸಮಾನ ಗೌರವ ಇರಬೇಕು ಏಕೆಂದರೆ ಹುಟ್ಟುತಹಃ ಎಲ್ಲರೂ ಮನುಷ್ಯರೇ ಆಗಿದ್ದಾರೆ. ಗಂಡ-ಹೆಂಡತಿ, ಒಡೆಯ-ಅಂತ್ಯಜ, ಯಜ್ಞಪವೀತ-ಹಿಡಿಗೋಲು ಇಂತಹ ಬೇಧಗಳೆಲ್ಲಾ ಸಮಾಜದಲ್ಲಿ ತಮ್ಮ ತಮ್ಮ ಅನುಕೂಲಕ್ಕಾಗಿ ಮಾಡಿಕೊಂಡ ಉಪಾದಿಗಳಾಗಿವೆ ಎನ್ನಬಹುದು ಏಕೆಂದರೆ ಎಲ್ಲರೂ ಸೇವಿಸುವ ಗಾಳಿ, ನೀರು ಮೊದಲಾದ ಪಂಚಭೂತಗಳಲ್ಲಿ ಈ ಪ್ರಕೃತಿ ಸಮಾನತೆ ನೀಡಿದೆ. ದಾಸಿಮಯ್ಯನವರು ಲಿಂಗ-ವರ್ಗ-ಜಾತಿ ಈ ಸಂಬಂಧಿಯಾಗಿ ಸಮಾನತೆ ರೂಪಿಸುವ ವೈಚಾರಿಕತೆಯನ್ನು ತಿಳಿಸಿದ್ದಾರೆ.

ಅನುಭಾವವಿಲ್ಲದವನ ಭಕ್ತಿ
ತಲೆಕೆಳಗಾದುದಯ್ಯ,
ಅನುಭಾವವೇ ಭಕ್ತಿಗಾಧಾರ
ಅನುಭಾವವುಳ್ಳವರ ಕಂಡು ತೂರ್ಯ
ಸಂಭಾಷಣೆಯ ಬೆಸಗೊಳ್ಳದಿದ್ದರೆ
ನರಕದಲ್ಲಿಕ್ಕಯ್ಯ ರಾಮನಾಥ !


ಅನುಭವವೆಂದರೆ ನಮ್ಮ ಇಂದ್ರಿಯಗಳಿಗೆ ದೊರಕುವ ಜ್ಞಾನ, ಅನುಭಾವವೆಂದರೆ ಇಂದ್ರಿಯಗಳಿಗೆ ಗೋಚರವಾಗದ ಜ್ಞಾನ ಎನ್ನಬಹುದು. ಅನುಭವಕ್ಕೆ ಈ ದೇಹ ಕೇಂದ್ರವಾದರೆ, ಅನುಭಾವಕ್ಕೆ ಮನಸ್ಸು ಕೇಂದ್ರವಾಗಿದೆ. ವಚನಕಾರ ಚೆನ್ನಬಸವಣ್ಣನು ‘ಭಕ್ತಿಗೆ ಅನುಭಾವವೇ ಬೀಜ ಕಾಣಿರೆ, ಆಚಾರ ಕಾಣಿರೆ, ಅನುಭಾವವಿಲ್ಲದವನ ಭಕ್ತಿ ಎಳತಟ(ಬಲವಂತ)ಗೊಳಿಸಿತ್ತು.’ ಎಂದಿದ್ದಾರೆ. ಈತ ಭಕ್ತಿಯನ್ನು ಅತ್ಯಂತ ಸಮರ್ಥವಾಗಿ ವ್ಯಾಖ್ಯಾನಿಸಿದ ವಚನಕಾರ. ಮೂಲ ಪ್ರೇರಣೆಯಾಗಿ ದಾಸಿಮಯ್ಯನ ಈ ಮೇಲಿನ ವಚನ ಉಳಿದ ವಚನಕಾರರಿಗೆ ಸ್ಪೂರ್ತಿ ತಂದಿದೆ.
    ಭಕ್ತಿಗೆ ಅನುಭಾವವಿರಬೇಕು. ಇಲ್ಲದಿದ್ದರೆ ಅದೊಂದು ವ್ಯರ್ಥ ಆಚರಣೆ. ಏಕೆಂದರೆ ಅನುಭಾವವೇ ಭಕ್ತಿಗೆ ಆಧಾರ. ಅದುವೆ ಮೂಲಸ್ಥಾನ. ಮನಸ್ಸಿನಿಂದ ಭಕ್ತಿಯನ್ನು ಪ್ರಕಟಿಸಬೇಕೆ ಹೊರೆತು ಈ ಬರೀ ದೇಹದಿಂದಲ್ಲ. ದೇಹದಿಂದ ಪ್ರಕಟಿಸುವ ಭಕ್ತಿಯು ಡಾಂಭಿಕ ಭಕ್ತಿಯಾಗುತ್ತದೆ. ಅನುಭಾವವುಳ್ಳವರ ಕಂಡು ಆನಂದದಿಂದ, ಮೋಕ್ಷ ಪಡೆಯುವ ಸ್ಥಿತಿಯಂತೆ ಪರಸ್ಪರ ಸಂಭಾಷಣೆಯ ಮಾಡದಿದ್ದರೆ ಅಂತಹವರನ್ನು ನರಕದಲ್ಲಿಡು ಎಂದು ನೇರವಾಗಿ ನುಡಿದಿದ್ದಾರೆ. ಇಲ್ಲಿ ಸರಳವಾಗಿ ತಿಳಿಯುವುದಾದರೆ ನಮ್ಮ ಪ್ರತಿ ಕಾರ್ಯದಲ್ಲೂ ಶ್ರದ್ಧೆ ಇರಬೇಕು. ಶ್ರದ್ಧೆಯಿಂದ ವರ್ತಿಸಬೇಕು ಆಗ ಮಾತ್ರ ಯಶಸ್ಸು ಸಾಧ್ಯ. ಶ್ರದ್ಧೆ ಇಲ್ಲದವರು ಯಾವುದೇ ಸಾಧನೆಗೆ ಅನರ್ಹರು ಎಂಬುದನ್ನು ಈ ವಚನ ತಿಳಿಸುತ್ತದೆ.

ಘಟವನೊಡೆದು ಬಯಲ ನೋಡಲದೇಕೆ ?
ಘಟದೊಳಿಪ್ಪುದೇ ಬಯಲೆಂದರಿದಡೆ ಸಾಲದೆ?
ಪಟವ ಹರಿದು ತಂತುವ ನೋಡಲದೇಕೆ?
ಪಟವೇ ತಂತುವೆಂದರಿದಡೆ ಸಾಲದೆ?
ಕಟಕವ ಮುರಿದು ಕಾಂಚನವ ನೋಡಲದೇಕೆ? ಆ
ಕಟಕವೇ ಕಾಂಚನವೆಂದರಿದಡೆ ಸಾಲದೆ?
ತನ್ನನಳಿದು ಘನವ ನೋಡಲದೇಕೆ?
ತಾನೇ ಘನವೆಂದರಿದಡೆ ಸಾಲದೆ ? ಹೇಳಾ ರಾಮನಾಥ !


ವಚನ ಸಾಹಿತ್ಯದ ಮೂಲಬೇರು ಜನಪದ ಮೂಲದಲ್ಲಿಂದ ಬಂದಿದೆ. ಆಧ್ಯಾತ್ಮ, ತತ್ವಶಾಸ್ತ್ರ ಮೊದಲಾದ ಪದಗಳಿಗೆ ವಚನಕಾರರು ‘ಅನುಭಾವ’ವೆಂಬ ಒಂದೇ ಪದವನ್ನು ಅತ್ಯಂತ ಸಹಜ ಹಾಗೂ ಸರಳವಾಗಿ ಬಳಸಿದ್ದಾರೆ. ಮಡಕೆ, ಬಟ್ಟೆ, ಕಂಚು ಇವೆಲ್ಲಾ ಒಂದೊಂದು ಸಾಮಾಜಿಕ ಕಸುಬುಗಳ ಸಂಕೇತವಾಗಿ ಮೂಡಿಬಂದಿವೆ. ಅಂತಹ ಕಸುಬುಗಳಲ್ಲಿ ಅಡಗಿದ್ದ ಕಾಯಕ ಶ್ರದ್ಧೆಯು ಅತ್ಯಂತ ಸಮರ್ಥನೀಯವಾದುದು. ಮಡಕೆಯನೊಡೆದು ಬಯಲನೋಡುವ ಅಗತ್ಯವಿಲ್ಲ. ಏಕೆಂದರೆ ಬಯಲೆಂಬುದು ಅಲ್ಲಮನ ಆಕಾಂಕ್ಷೆಯ ಪದ. ಅದು ಮುಕ್ತಿಯ ರೂಪಕ. ಬಯಲು ಎಲ್ಲವನ್ನೂ ಒಳಗೊಂಡಿರುವ ಸಂಕೇತ. ಇಂತಹ ಬಯಲನ್ನು ಪರೀಕ್ಷಿಸುವುದು ಮೂರ್ಖತನ. ಮಡಕೆಯೊಡೆದು ತಿಳಿವುದಕ್ಕಿಂತ ಅದರೊಳಗಿರುವುದೇ ಮುಕ್ತಿಯೆಂದು ಭಾವಿಸಿದರೆ ಸಾಲದೆ ಎಂದಿದ್ದಾರೆ ದಾಸಿಮಯ್ಯ. ಹಾಗೇಯೇ ಬಟ್ಟೆಯ ಹರಿದು ದಾರವ ನೋಡುವುದು ದಡ್ಡತನ. ಬಟ್ಟೆಯೇ ದಾರದಿಂದಾದುದು ಎಮದು ತಿಳಿದರೆ ಸಾಲದೆ? ಕಟಕವೆಂದರೆ ‘ಚಿನ್ನದ ಬಳೆ’, ಕೈಕಡಗ. ಕಟಕವ ಮುರಿದು ಚಿನ್ನವ ನೋಡುವುದು ಅಜ್ಞಾನ. ಏಕೆಂದರೆ ಚಿನ್ನದಿಂದಲೇ ಕಟಕವಾಗಿರುತ್ತದೆ. ಘನವೆಂದರೆ ಶ್ರೇಷ್ಠ ಮಹತ್ವ ಪೂರ್ಣವಾದುದು. ದೇವರು ಮೊದಲಾದ ಅರ್ಥಗಳಿಂದ ಕರೆದರೆ ತನ್ನನ್ನು ತಾನು ನಿಂದಿಸಿಕೊಳ್ಳುತ್ತಾ ಈ ಘನವನ್ನು ಹುಡುಕುವುದು ಆಚಾರವಲ್ಲ. ತನ್ನನ್ನೆ ಘನವನ್ನಾಗಿ ರೂಪಿಸಿಕೊಳ್ಳುವುದು, ಭಾವಿಸುವುದು ಘನದ ವಿಚಾರ. ಅದುವೆ ಆಚಾರ. ಬಸವಣ್ಣನವರು ‘ಉಳ್ಳವರು ಶಿವಾಲಯ ಮಾಡುವರು’ ಎಂಬ ವಚನದಲ್ಲಿ ತನ್ನ ದೇಹವನ್ನು  ದೇವಾಲಯವಾಗಿ ಆತ್ಮವನ್ನೆ ದೇವರನ್ನಾಗಿ ರೂಪಿಸಿದ ಬಗೆಯನ್ನು ನೆನಯಬಹುದು. ವಿಶ್ವ ಚೈತನ್ಯವನ್ನು ಪ್ರಾಣ ಪರಂಪರೆಯಿಂದ ಕಾಣುವ ಈ ಸಾಕ್ಷಿಪ್ರಜ್ಞೆ ಜಗತ್ತಿನ ಸಾಹಿತ್ಯದಲ್ಲಿ ವಚನಕಾರರ ವಿಶಿಷ್ಟ ಕೊಡುಗೆಯಾಗಿ ಗುರ್ತಿಸಲಾಗಿದೆ.

ಉಂಕೆಯ ನಿಗುಚಿ, ಸರಿಗೆಯ ಸಮಗೊಳಿಸಿ,
ಸಮಗಾಲನಿಕ್ಕಿ ಅಣಿಯೇಳಮೆಟ್ಟಿದೆ !
ಹಿಡಿದ ಲಾಳಿಯ ಮುಳ್ಳು ಕಂಡಿಕೆಯ ನುಂಗಿತ್ತು
ಈ ಸೀರೆ ನೇಯ್ದವ ನಾನೊ ನೀನೊ ರಾಮನಾಥ

    ವೃತ್ತಿಯನ್ನೆ ಕೇಂದ್ರವನ್ನಾಗಿಸಿ ವಚನಗಳನ್ನು ರಚಿಸಿದ ಮೊದಲ ವಚನಕಾರ ಈ ದಾಸಿಮಯ್ಯ. ಈತ ಬಟ್ಟೆಯನ್ನು ತಯಾರಿಸುವ ನೇಕಾರ ಜಾತಿಯವನು. ದಶಕಗಳ ಕಾಲ ನೇಯ್ದ ಬಟ್ಟೆಯನ್ನು ಸಿದ್ದಾಪುರ ಸಂತೆಯಲ್ಲಿ ಮಾರಲು ಹೋದಾಗ ಶಿವನು ಪರೀಕ್ಷಿಸಿ ಹರಿದು, ಮನೆಗೆ ಬಂದು ಹಸಿವಿಗೆ ಅನ್ನವನುಂಡು ದಾಸಿಮಯ್ಯನ ಎಲ್ಲಾ ತಾಳ್ಮೆಯನ್ನು ಪರೀಕ್ಷಿಸಿದ ಈತನಿಗೆ ‘ತವನಿಧಿ’(ಅನ್ನದ ಅಕ್ಷಯ ಪಾತ್ರೆ) ನೀಡಿದ ಕಥೆಗಳಿವೆ. ಈತನಿಗೆ ಜೇಡರ ದಾಸಿಮಯ್ಯ ಎಂಬ ಹೆಸರೂ ಇದೆ ಹಾಗೆಯೇ ಸಾಕಷ್ಟು ಈ ಹೆಸರಿನ ಚರ್ಚೆಗಳೂ ಇವೆ. ಈತನ ದೊರೆತ ೧೭೬ ವಚನಗಳಲ್ಲಿ ಮುಕ್ಕಾಲುಪಾಲು ವೃತ್ತಿಗೌರವ ಕುರಿತಾದವುಗಳೇ ಆಗಿವೆ.

    ಈ ವಚನವು ಬಟ್ಟೆಯನ್ನು ನೇಯ್ಗೆ ಮಾಡುವ ಕಾಯಕ ಎಷ್ಟು ಶ್ರಮದಾಯಕವಾದುದೋ. ಈ ಕಾಯದೊಳಗೆ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಅಷ್ಟೇ ಕಷ್ಟದ ಕಾರ್ಯ. ಇಲ್ಲಿ ತಾಳ್ಮೆ, ಸೂಕ್ಷö್ಮತೆ, ಶ್ರದ್ಧೆ ತುಂಬಾ ಮುಖ್ಯವಾದ ಅಂಶಗಳು. ಬಟ್ಟೆಯನ್ನು ನೇಯಲು ಹಾಸುವ ದಾರವನ್ನು ಮಗ್ಗಕ್ಕೆ ಸರಿಯಾಗಿ ಹಾಸಿ, ಮೇಲೆ ಕೆಳಗೆ ಸರಿಗೊಳಿಸಿ, ಸರಿಯಾದ ರೀತಿಯಲ್ಲಿ ನೆಯ್ಗೆ ಮಾಡಿದರೆ ಆ ದಾರಗಳ ನಡುವೆ ಅಡ್ಡದಾರವನ್ನು ಜೋಡಿಸುವ ಚಿಕ್ಕ ಮರದ ವಸ್ತು ಲಾಳಿಯು ದಾರದ ಉಂಡೆಯನ್ನೆ ಖಾಲಿಮಾಡಿತ್ತು ಹೀಗೆ ಸೀರೆಯು ತಯಾರಾಗುತ್ತದೆ. ಇಂತಹ ಸೀರೆಯು ನನ್ನ ತಾಳ್ಮೆ ಮತ್ತು ಶ್ರಮದಿಂದ ತಯಾರಾದುದು. ಎಂಬ ದೇವರನ್ನು ಪ್ರಶ್ನಿಸುವ ರೀತಿಯನ್ನು ಹೊಂದಿದ್ದರೂ ನಾನೊ, ನೀನೊ ಎನ್ನುವಾಗ ಇದೊಂದು ಅಭೂತಕಾರ್ಯ ಆದ್ದರಿಂದ ನಿನ್ನ ದಯೆಯಿದ್ದರೆ ಮಾತ್ರ ಇದು ಇಷ್ಟು ಪರಿಪೂರ್ಣವಾಗಿ ನೆಯ್ಗೆಯಾಗಲು ಸಾಧ್ಯವೆಂಬ ಭಕ್ತಿಯನ್ನೂ ಪ್ರಕಟಿಸಿದ್ದಾರೆ. ರಾಮನಾಥವೆಂಬುದು ವಚನಗಳ ಅಂಕಿತ. ದಾಸಿಮಯ್ಯನು ನಂಬಿದ ಕಾಯಕ ಶಕ್ತಿ.

ಅಲ್ಲಮಪ್ರಭು

ತನು ಬತ್ತಲಿದ್ದಡೇನೂ ಮನ ಶುಚಿಯಾಗದನ್ನಕ್ಕರ ?
ಮಂಡೆ ಬೋಳಾದಡೇನೊ, ಭಾವ ಬಯಲಾಗದನ್ನಕ್ಕರ ?
ಭಸ್ಮವ ಹೂಸಿದಡೇನೊ,
ಕರಣಾದಿ ಗುಣಂಗಳನೊತ್ತಿ ಮೆಟ್ಟಿ ಸುಡದನ್ನಕ್ಕರ ?
ಇಂತೀ ಆಶೆಯ ವೇಷದ ಭಾಷೆಗೆ,
ಗುಹೇಶ್ವರಾ, ನೀ ಸಾಕ್ಷಿಯಾಗಿ ಛೀ ಎಂಬೆನು.

ವಚನಕಾರರು ಸಮಾಜದ ನಿಜವಾದ ವಿಮರ್ಶಕರು ಹಾಗೂ ಚಿಕತ್ಸಕರು. ಸಮಾಜದ ಅಸಮಾನತೆ, ಭಿನ್ನ ಅಭಿಪ್ರಾಯಗಳಿಗೆ ಸಮಾಜದ ಮಾದರಿಗಳನ್ನೆ ಉದಾಹರಣೆಯಾಗಿ, ಪ್ರತಿಮೆಯಾಗಿ ಬಳಸುತ್ತಾ ಚಿಕಿತ್ಸೆ ನೀಡಿದರು.
ಈ ಮೇಲಿನ ವಚನವನ್ನು ಸೂಕ್ಷ್ಮವಾಗಿ ಗ್ರಹಿಸಿದರೆ ಜೈನಧರ್ಮ, ವೈಷ್ಣವ ಧರ್ಮದ ಅಂಧ ಆಚರಣೆಗಳನ್ನು ಪ್ರಶ್ನಿಸಿರುವುದಾಗಿ ಕಂಡುಬರುತ್ತದೆ. ಅಥವಾ ನಮ್ಮೊಳಗೆ ಇರುವ ನಿತ್ಯ ನಾರಕವನ್ನು ನೂತನಗೊಳಿಸಿ ಪ್ರಶ್ನಿಸಿದ್ದಾರೆ. ಬಾಹ್ಯದ ಡಂಭಾಚಾರಕ್ಕಿಂತ ಅಂತರಂಗದ ಪರಿಶುದ್ಧ ಮೌನವೇ ಮಿಗಿಲೆಂದು ಅಲ್ಲಮಪ್ರಭುಗಳು ಸ್ಪಷ್ಟಪಡಿಸಿದ್ದಾರೆ.
ಇಲ್ಲಿ ಹೊರಗೆ ವೇಷ ಧರಿಸುತ್ತಾ ಆಚರಣೆಯ ನೆಪದಲ್ಲಿ ತೋರಿಕೆಯಲ್ಲಿರುತ್ತಾರೆ. ದಿಗಂಬರರಾಗುತ್ತಾರೆ. ಆದರೆ ಮನದಲ್ಲಿ ಆ ಶುಚಿತ್ವ ಇರದೆ ಈ ಹೊರಗಣದ ಎಲ್ಲಾ ಆಚಾರ ವ್ಯರ್ಥವೆಂದಿದ್ದಾರೆ. ಕೇವಲ ತಲೆಯನ್ನು ಬೋಳಿಸಿದರೆ ತನ್ನ ಹರಕೆ ತೀರಿಸಬಹುದೇ ಹೊರೆತು ಭಾವನೆಗಳು ಶುದ್ಧವಾಗಲಾರದು. ಭಾವನೆಗಳು ಶುದ್ಧವಿಲ್ಲದೆ ಮಾಡಿದ ಭಕ್ತಿ ವ್ಯರ್ಥ ಕಾರ್ಯ. ಬೂದಿ(ಭಸ್ಮ)ಗಳನ್ನು ಪೂಸಿಕೊಂಡರೆ ಅಂದರೆ ಬಳಿದುಕೊಂಡರೆ ಭಕ್ತನಾಗಲಾರನು. ಅಂತರಂಗ ಶುದ್ಧವಿರಬೇಕು. ಕರಣಗಳು ಎಂದರೆ ಕಾಯ ವಾಚ ಮನಸಾ ಈ ಮೂರು ಅಂಶಗಳ ನಿಯಂತ್ರಣ ಮುಖ್ಯ ಇವುಗಳ ಮೇಲೆ ಪ್ರಯೋಗವಾಗುವ ಇಂದ್ರಿಯ ವ್ಯಾಮೋಹಗಳ ನಿಯಂತ್ರಣ, ಅವುಗಳ ನಾಶ ಮುಖ್ಯ ಎಂದಿದ್ದಾರೆ. ಇಂತಹ ತೋರಿಕೆಯ ಭಕ್ತರ ಆಸೆಯ, ವೇಷದ, ನುಡಿಗಳ ಕಂಡರೆ ಛೀ ಎನ್ನುತ್ತೇನೆ, ಇಂತಹವರನ್ನು ತ್ಯಜಿಸುತ್ತೇನೆ ಗುಹೇಶ್ವರನ ಸಾಕ್ಷಿಯಾಗಿ ಎಂದಿದ್ದಾರೆ. ಅಲ್ಲಮನ ವಚನಗಳು ಬೆಡಗಿನಿಂದ ಕೂಡಿದ್ದರೂ ನೇರ ನಿಷ್ಠುರತೆಯನ್ನು ಸಾರುತ್ತವೆ.

ತನುವ ತೋಂಟವ ಮಾಡಿ, ಮನವ ಗುದ್ದಲಿ ಮಾಡಿ,
ಅಗೆದು ಕಳೆದೆನಯ್ಯಾ ಭ್ರಾಂತಿಯ ಬೇರ.
ಒಡೆದು ಸಂಸಾರದ ಹೆಂಟೆಯ, ಬಗಿದು ಬಿತ್ತಿದೆಯ್ಯಾ ಬ್ರಹ್ಮಬೀಜವ.
ಅಖಂಡಮಂಡಲವೆಂಬ ಬಾವಿ, ಪವನವೆ ರಾಟಾಳ,
ಸುಷುಮ್ನನಾಳದಿಂದ ಉದಕವ ತಿದ್ದಿ,
ಬಸವಗಳೈವರು ಹಸಗೆಡಿಸಿಹವೆಂದು
ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ,
ಆವಾಗಳೂ ಈ ತೋಂಟದಲ್ಲಿ ಜಾಗರವಿದ್ದು
ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ.


    ವಚನಕಾರರ ಕೆಲವು ಕಾಯಕಗಳ ಕುರಿತು ಅಲ್ಲಮನು ನೇರವಾಗಿ ಹೇಳಿದಂತಿದ್ದರೂ ಮನದ ಕಾಯಕ ಮೊದಲಿಗೆ ಇರಬೇಕೆಂಬ ಅನಂತ ಸತ್ಯದ ತಿಳಿ ಹೇಳಿದ್ದಾರೆ. ಗೊಗ್ಗಯ್ಯನೆಂಬ ಕೃಷಿಕ ವಚನಕಾರನಿಗೆ ಮನದ ತೋಟವ ಸಿದ್ಧಮಾಡೆಂದು ಈ ರೀತಿಯಲ್ಲಿ ಹೇಳಿದ್ದಾರೆ.
    ಇದೊಂದು ಸರಳವಾದ ಹಾಗೂ ವಿಶಾಲ ಅರ್ಥವನ್ನು ಒಂದು ಕಾರ್ಯವಿವರಣೆಯಂತೆ ಮೂಡಿದ ವಚನವಾಗಿದೆ. ಅಲ್ಲಮರು ಬಾಹ್ಯ ತೋಟವನ್ನು ಸಿದ್ಧಮಾಡುವ ಕ್ರಮದಲ್ಲಿಯೇ ಮನಸ್ಸನ್ನು ಶುದ್ಧಮಾಡಬೇಕೆಂಬ ಎಚ್ಚರ ಮೂಡಿಸಿದ್ದಾರೆ. ಈ ದೇಹವನ್ನು ತೋಟವೆಂದು ಭಾವಿಸಿ, ಮನವನ್ನೆ ಗುದ್ದಲಿಯನ್ನಾಗಿ ಮಾಡಿಕೊಂಡು ಮೊದಲಿಗೆ ಸ್ವಚ್ಛಮಾಡಬೇಕು, ಹಸನುಗೊಳಿಸಬೇಕು. ಅಗೆದು ತೆಗೆಯಬೇಕು ಈ ಶರೀರ ಹೊಂದಿರುವ ಭ್ರಮೆಗಳನೆಲ್ಲವನ್ನು ಹಾಗೆಯೇ ಸಂಸಾರದ ತೊಡಕುಗಳನ್ನು ಮಣ್ಣಿನ ಹೆಂಟೆಗಳನ್ನು ಉಡಿಗೊಳಿಸಿದಂತೆ ಸರಿಪಡಿಸಿಕೊಳ್ಳಬೇಕು. ಸರಿಯಾದ ಅರ್ಥಗಳನ್ನು ತುಂಬಿಕೊಳ್ಳಬೇಕು. ಇಂತಹ ತೋಟದಲ್ಲಿ ಅಂದರೆ ಶರೀರದಲ್ಲಿ ಬಿತ್ತಬೇಕು ಬ್ರಹ್ಮಬೀಜವನ್ನು ಎಂದಿದ್ದಾರೆ. ಇಲ್ಲಿ ಬ್ರಹ್ಮಬೀಜವೆಂದರೆ ಬದುಕಿನ ನಿಶ್ಚಲವಾದ ಗುರಿಯೆಂದು ಭಾವಿಸಬಹುದು. ಇಂತಹ ತೋಟಕ್ಕೆ ನೀರು, ಗಾಳಿಯನ್ನು ಈ ಅಖಂಡಮಂಡಲವೆಂಬ ವಿಶ್ವವೇ ಅಂದರೆ ನಮ್ಮ ಜ್ಞಾನಕೋಶವೆಂಬ ಬಾವಿ, ಈ ಗಾಳಿಯೇ ಅಂದರೆ ಉಸಿರಾಟವೇ ಚಕ್ರವಾಗಿ ಸುಷುಮ್ನನಾಳದಿಂದ ನೀರು ತಂದು ಹಾಕಬೇಕು. ಅಂದರೆ ನಮ್ಮ ದೇಹದಲ್ಲಿ ಯೋಗಶಾಸ್ತçವೇಳುವಂತೆ ಮೂರು ನಾಳಗಳಿವೆ ಒಂದು ಇಹಾ, ಪಿಂಗಳ, ಸುಷುಮ್ನ(ಕುಂಡಲಿನಿ). ಈ ಇಹಾ ಮತ್ತು ಪಿಂಗಳಗಳ ನಡುವೆ ಸುಷುಮ್ನ ನಾಳವಿದೆ. ಇವೆರಡು ಉಸಿರಾಟದ ಉಚ್ವಾಸ ಹಾಗೂ ನಿಚ್ವಾಸಗಳಾದರೆ ಸುಷುಮ್ನನಾಳವು ಪ್ರಾಣಶಕ್ತಿಯನ್ನು ಈ ದೇಹಕ್ಕೆ ಒದಗಿಸುತ್ತದೆ. ಇಂತಹ ನಾಳದಿಂದ ನಾವು ಈ ತನುವೆಂಬ ತೋಟಕ್ಕೆ ನೀರು ತರಬೇಕು ಎಂದಿದ್ದಾರೆ ಅಲ್ಲಮಪ್ರಭು. ಈ ರೀತಿಯಲ್ಲಿ ಬೆಳೆಸುತ್ತಿರುವ ತೋಟವನ್ನು ಬಸವಗಳೈವರು ಎಂದರೆ ಪಂಚೇಂದ್ರಿಯಗಳು(ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ) ತಮ್ಮ ಇಷ್ಟ ಸುಖಕ್ಕಾಗಿ ಹಾಳುಮಾಡುತ್ತಾರೆ ಎಂದು ಈ ಪಂಚೇಂದ್ರಿಯಗಳನ್ನು ಸಮತೆ, ಸೈರಣೆಯೆಂಬ ಬೇಲಿಯನ್ನು ಅಂದರೆ ನಿಯಂತ್ರಣವನ್ನು ಹೊಂದಿ ಯಾವಾಗಲೂ ಈ ತೋಟದಲ್ಲಿ ಎಚ್ಚರವಿದ್ದು(ಜಾಗ್ರತೆವಹಿಸಿ) ಬಿತ್ತಿ ಬೆಳದ ಸಸಿಯನ್ನು ಕಾಪಾಡಿದೆನು. ಎಂದರೆ ಬದುಕಿನ ಧ್ಯೇಯವನ್ನು ಬರೀ ಹೊಂದುವುದಷ್ಟೆ ಅಲ್ಲದೇ ಕಾಪಾಡಬೇಕಾದ ಎಚ್ಚರವನ್ನು ಈ ರೀತಿಯಲ್ಲಿ ಅರ್ಥಪಡಿಸಿದ್ದಾರೆ. 

ನೀಲಮ್ಮನ ವಚನಗಳು
ನನ್ನನಾರೂವರಿಯರು
ನಾನು ಸ್ವರ್ಗಿಯಲ್ಲ ಅಪವರ್ಗಿಯಲ್ಲ
................................
.....................................
..........................
ನನ್ನನಾರೂ ಅರಿಯರು
       ನೀಲಾಂಬಿಕೆ, ನೀಲಲೋಚನೆ, ನೀಲಮ್ಮ, ಮಾಯಾದೇವಿ ಎಂತೆಲ್ಲ ಹೆಸರಿರುವ ನೀಲಮ್ಮನು ವಚನ ಸಾಹಿತ್ಯದಲ್ಲಿ ವೈಚಾರಿಕ ಚಿಂತಕಿ. ಹರಿಹರ ಮತ್ತು ಭೀಮ ಕವಿಗಳು ಬಸವಣ್ಣನವರ ಮಡದಿ ನೀಲಾಂಬಿಕೆಯವರನ್ನು ಮಾಯಿದೇವಿ ಎಂದು ಕರೆದಿದ್ದಾರೆ.  ನೀಲಮ್ಮ ವಿಚಾರದಲ್ಲಿ ವಿಶಿಷ್ಟ ವ್ಯಕ್ತಿತ್ವದವಳು. ಆಕೆಯೇ ತನ್ನ ವಚನಗಳಲ್ಲಿ ತಿಳಿಸುವಂತೆ ಯಾರೂ ತನ್ನನ್ನು ಅರಿಯಲು ಸಾಧ್ಯವಿಲ್ಲ ಎನ್ನುವಾಗ ಯಾವುದೇ ಒಂದು ಆಯಾಮದ ವ್ಯಕ್ತಿತ್ವವಾಗಿ ತನ್ನನ್ನು ಅಳೆಯಬೇಡಿ ಎಂಬ ಸೂಕ್ಷ್ಮತೆಯನ್ನೂ ತಿಳಿಸಿದ್ದಾರೆ.
    ತನ್ನ ವ್ಯಕ್ತಿತ್ವವನ್ನು ತಾನೇ ಪರಿಚಯಿಸುವ ಈಕೆ ತಾನೊಬ್ಬಳು ವಿಶಿಷ್ಟವಲ್ಲವೆಮದು ಸಾರುತ್ತಿದ್ದಾಳೆ. ನನ್ನನ್ನು ಯಾರು ಅರಿಯಲು ಸಾಧ್ಯವಿಲ್ಲ. ಏಕೆಂದರೆ ಒಂದು ಆಯಾಮದಲ್ಲಿ ನನ್ನ ವ್ಯಕ್ತಿತ್ವ ಇರಲಾರದು. ನಾನು ಸ್ವರ್ಗ ನಿರೀಕ್ಷಕಳು ಅಲ್ಲ, ಅಂತಹ ನಿಯಮಕ್ಕೂ ಒಳಗಾದವಳಲ್ಲ. ನನ್ನನ್ನು ಯಾರೂ ತಿಳಿಯಲಾಗದು. ನಾನು ಈ ಲೌಕಿಕದಿಂದ ಮುಕ್ತಳೂ ಅಲ್ಲ, ಅಮುಕ್ತಳೂ ಅಲ್ಲ. ನಿತ್ಯ ಸಂಸಾರದಲ್ಲಿ ಇರುವೆ. ಆದರೆ ಸಂಸಾರವೇ ನನ್ನ ಬದುಕಲ್ಲ. ಸಂಗಯ್ಯನೊಳಗಿನ ವ್ಯಕ್ತಿತ್ವ ನಾನು. ನನಗೆ ಯಾವುದೇ ರೂಪವಿಲ್ಲ. ಆದ್ಧರಿಂದ ನನ್ನನ್ನು ಯಾರೂ ಅರಿಯರು. 
ತಾನು ಬಿಜ್ಜಳನ ಕುಟುಂಬದವಳು ಎಂದು ಸೂಕ್ಷ್ಮವಾಗಿ ಹೇಳುತ್ತಾ:

ನಾಡನಾಳಹೋದರೆ,
ಆ ನಾಡು ಆಳುವ ಒಡೆಯಂಗೆ ನಾಡೆ ಹಗೆಯಾಯಿತ್ತು.
ಹಗೆಯಳಿದು ನಿಸ್ಸಂಗವಾಯಿತ್ತು.
ನಿಸ್ಸಂಗ ವೇದ್ಯವಾಗಿ ಸಂಗಯ್ಯನಲ್ಲಿ ಮುಕ್ತಳಾದೆನು ನಾನು.

ನಾಡನ್ನು ಆಳ ಹೋದರೆ ಅದು, ಆ ನಾಡಿನ ಕೋಪಕ್ಕೆ ಕೆಂಗಣ್ಣಿಗೆ ಗುರಿಯಾಗಿ ನಾಡು ಹಾಳಾಯಿತ್ತು ಎಂದು ಬಿಜ್ಜಳನ ವೈಫಲ್ಯವನ್ನು ಎತ್ತಿ ತೋರುತ್ತಾರೆ. ಹಗೆಯು ಅಳಿದು ನಿಸ್ಸಂಗವಾಯಿತ್ತು, ಮುಂದೆ ನಿಸ್ಸಂಗವೇ ವೇದ್ಯವಾಗಿ ಸಂಗಯ್ಯನಲ್ಲಿ ಮುಕ್ತಳಾದೆನು ಎಂದು ಹೇಳಿದ್ದಾರೆ.


ಕೊನೆಕಾಲದಲ್ಲಿ ಬಸವಣ್ಣನವರನ್ನು ಭೇಟಿಯಾಗಿ ಅವರ ಮುಂದಿನ ಗೊತ್ತು ಗುರಿಗಳನ್ನು ಅರಿತು ಅದರಂತೆ ಸಮಾಜ ಕಟ್ಟುವ ಕೆಲಸಕ್ಕೆ ಬದ್ಧಳಾಗಬೇಕೆಂದು ನೀಲಮ್ಮ, ಹಿರಿಯ ಶರಣ ಹಡಪದ ಅಪ್ಪನವರ ಜೊತೆಗೆ ಕೂಡಲ ಸಂಗಮಕ್ಕೆ ಪಯಣ ಬೆಳೆಸುತ್ತಾರೆ. ಆದರೆ ರಕ್ಕಸ ತಂಗಡಗಿ ಮುಟ್ಟುವಷ್ಟರಲ್ಲಿ ಬಸವಣ್ಣನವರು ಸಂಗಮದಲ್ಲಿ ಐಕ್ಯರಾದ ಸುದ್ದಿ ಬರ ಸಿಡಿಲಿನಂತೆ ಅಪ್ಪಳಿಸುತ್ತದೆ. ನೀಲಮ್ಮನವರಿಗೆ ಅಗಾಧ ನೋವು ಕಳವಳ ಆತಂಕವಾಗುತ್ತದೆ.



2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

Tq bro I was searching for this tq so much

ಅನಾಮಧೇಯ ಹೇಳಿದರು...

Tq bro I was searching for this tq so much