ತುಂಗಭದ್ರೆ ಎಂಬ ತವಕ
ಮಕ್ಕಳೆಂದರೆ ವಿಶ್ವಾಸದ ವಿಶ್ವಗಳು. ಅವು ಭವಿಷ್ಯತ್ತಿನ ಸಂಪತ್ತುಗಳು. ಮಕ್ಕಳನ್ನು ನಿರ್ಮಿಸಲು ತಂದೆ-ತಾಯಿಯಿಂದ ಪ್ರಾರಂಭವಾಗಿ ಸಮಾಜ, ವಿಶ್ವವೇ ಜವಾಬ್ದಾರಿ ಹೊರುತ್ತದೆ. ಇಂತಹ ವಿಶ್ವದ ಸಂಗಾತಿ ಮಕ್ಕಳನ್ನು ಕುರಿತು ಒಂದು ಸಾಹಿತ್ಯಲೋಕವೇ ಸೃಷ್ಠಿಗೊಂಡಿದೆ. ಈ ದಿಸೆಯಲ್ಲಿ ಒಂದು ಮಗುವಿನ ಕುರಿತು ಚರ್ಚಿಸುವುದು ಈ ಲೇಖನದ ಉದ್ದೇಶ.
ಒಲವಿನ ಕವಿ ಎಂದೇ ಪ್ರಸಿದ್ಧವಾದ ಕೆ. ಎಸ್ ನರಸಿಂಹಸ್ವಾಮಿ ಅವರು ಜನಸಾಮಾನ್ಯರಿಗಾಗಿ ಕವಿತೆಯನ್ನು ಬರೆದ ಮಲ್ಲಿಗೆಯ ಕವಿ. ಈ ಕವಿಯು ನಲ್ಲ-ನಲ್ಲೆಯ ಕುರಿತು ನಲ್ಮೆಯಿಂದ ಬರೆದ ಸಾಹಿತ್ಯ ಇಂದಿಗೂ ಪ್ರಸಿದ್ಧ. ಅವರ 'ಮೈಸೂರು ಮಲ್ಲಿಗೆ' ಸಂಕಲನವು ಒಂದು ಸಂಸಾರದ ಸಾರವನ್ನೇ ವಿಚಾರ ವಿವರವಾಗಿ ನೀಡುವ ಏಕೈಕ ಕೃತಿಯಾಗಿದೆ. ಈ ಕವಿಯು ಎಲ್ಲಾ ಪ್ರಕಾರದಲ್ಲೂ ಸಾಹಿತ್ಯ ರಚನೆ ಮಾಡಿದ್ದರೂ ಪ್ರೀತಿ ತುಂಬುವ ವಿಷಯದಲ್ಲಿ ಜನಜನಿತವಾದವರು. ‘ತುಂಗಭದ್ರೆ’ ಎಂಬ ಕವಿತೆ ಒಲವಿನ ಕವಿತೆಗಳ ಮುಂದುವರೆದ ಭಾಗದಲ್ಲಿ ಕಾಣುವ ದಾರಿಯಂತೆ ಗೋಚರವಾಗುತ್ತದೆ. ಈ ಕವಿತೆಯು ವಿಶೇಷವಾಗಿ ಆಕರ್ಷಿತವಾಗುತ್ತದೆ.
ತಂದೆ-ತಾಯಿ ಎಂಬ ಎರಡು ದಡಗಳ ನಡುವೆ ಮಗಳು ಚಂದಿರನ ಹಾಗೆ ಮೂಡಿದವಳು, ಶಾಂತ ಸ್ವರೂಪಿ. ಈ ತುಂಗಭದ್ರೆಯ ಬಾಲ್ಯದ ರೂಪವನ್ನು ಅತ್ಯಂತ ಸರಳವಾಗಿ ತಿಳಿಸಿದ್ದಾರೆ. ಈ ಮಗಳ ತುಂಟತನ, ಆಟ, ವೈಯಾರದ ಸೊಬಗು ವಿಶೇಷವಾದುದು. ಈ ತುಂಗಭದ್ರೆಯು ಹೊಳೆಯಲ್ಲವೆಂದು ಮೊದಲೇ ಅರ್ಥೈಸುವ ಮೂಲಕ ವಿಶೇಷ ಅರ್ಥಗಳಿಗೆ ಕಡಿವಾಣ ಹಾಕಿದ್ದಾರೆ. ಇವಳು ವರ್ಷದ ಮಗಳು ಈಗತಾನೇ ಬಾಲ್ಯದ ಅರ್ಥಕ್ಕೆ ಪದವಾಗಿ ಪದವಿಯೇರುತ್ತಿರುವ ಜೀವ. ಇವಳು ನನ್ನ ದೇವರು ಎನ್ನುವಾಗ ಅನಂತ ಸ್ವರೂಪವನ್ನೇ ನೀಡುತ್ತಾರೆ. ಕುವೆಂಪು ಈ ಸ್ಥಿತಿಯನ್ನು ‘ವಿಶ್ವಮಾನವ’ ಬಿಂಬವಾಗಿ ಕಾಣುತ್ತಾರೆ. ಜಗತ್ತಿನ ಯಾವುದೇ ರೂಪಗಳಿಗೂ ಸಿಲುಕದ ಮುಗ್ಧರೂಪ. ನಿರ್ಮಲ ಮನಸ್ಸು ಮಕ್ಕಳ ಸ್ವರೂಪ. ಇಂತಹ ಮಗುವಿನ ಪಾಲನೆಯನ್ನು ಮೊದಲಿಗೆ ತಿಳಿಹಾಸ್ಯದಲ್ಲಿ ನವಿರಾಗಿ ಬಿಂಬಿಸಿದ್ದಾರೆ. ಮದರಾಸಿನಲಿ ಬಿರುಗಾಳಿ ಎದ್ದು ಮೈಸೂರಿನಲಿ ಹತ್ತು ಹನಿ ಮಳೆ ಬಿದ್ದರೆ ತುಂಗಭದ್ರೆಗೆ ನೆಗಡಿ, ಬೀದಿಯಲಿ ಬಿಸಿಲು ಸುಳಿದರೆ ಉಷ್ಣ. ಈ ವ್ಯತ್ಯಾಸವು ಸಾಮಾನ್ಯವಾದ ವಿಚಾರವಾದರೂ ಅತ್ಯಂತ ಗಂಭೀರವಾದ ಹಿಂಸೆಗಳು ಆದ್ದರಿಂದ ಈ ವಿಚಾರದಲ್ಲಿ ಎಲ್ಲರೂ ಎಚ್ಚರವಹಿಸುತ್ತಾರೆ. ‘ತುಂಗಭದ್ರೆ’ಗೆ ಉಂಟಾಗುವ ಈ ಬದಲಾವಣೆಗೆ ಇಡೀ ಮನೆಯೇ ರಕ್ಷಣೆಗೆ ನಿಲ್ಲುತ್ತದೆ. ಎಲ್ಲರೂ ಈಕೆ ಕುರಿತು ಮಾತಾಡುವವರೇ. ಮಗುವಾದ ಕಾರಣ ದೇಹದ ಚಿಕ್ಕ ಬದಲಾವಣೆಗೂ ಸ್ಪಂದಿಸುತ್ತದೆ. ಮಾತುಬಾರದು ಮುಗ್ಧ ಕೂಸು ಅಳುವಿನ ಮೂಲಕ ಮಾತಾಡುತ್ತದೆ. ಈ ಅಳು ಕವಿಯ ಒಳಗಣ್ಣಿನ ಪ್ರೀತಿ. ತನ್ನ ಕಣ್ಣಿನ ಕಪ್ಪು ಬಿಂಬದ ದೀಪ್ತಿ. ಈ ಕಾರಣ ಮಗುವನ್ನು ಹಲವು ವಿಧದಲ್ಲಿ ಮುದ್ದಿಸಬೇಕು. ಬೆಚ್ಚಗೆ ಮಲಗಿಸುವ, ಆರೋಗ್ಯಕ್ಕಾಗಿ ಧೂಪವನಿಡುವ, ತೊಟ್ಟಿಲು ತೂಗುವ, ಲಾಲಿ ಹಾಡುವ, ಕಥೆ ಹೇಳುವ ಕೆಲಸ ಮಾಡಬೇಕು. ಆದರೆ ಈ ಮಗಳು ಮಲಗುವುದಿಲ್ಲ. ಮಾಯಾಂಗನೆಯಂತೆ ಅಳುವಿಂದ ನಗುವಿಗೆ ತನ್ನ ಸ್ವರೂಪವನ್ನೇ ಬದಲಿಸುತ್ತಾಳೆ. ಹೆಡೆ ಬಿಚ್ಚಿ ನಯನ ಮನೋಹರವಾಗಿ ನರ್ತಿಸುವ ಹಾವಿನಂತೆ ಸುಂದರವಾಗಿ ಈಕೆಯನ್ನು ಲಾಲಿಸುವವರಿಗೂ ನಗು ತುಂಬುತ್ತಾಳೆ.
ಮಗಳಿಗೆ ವರ್ಷ ತುಂಬಿರುವ ಕಾರಣ ತೊಟ್ಟಿಲಿನಿಂದ ಮಂಡಿಯೂರಿ ನಡೆವ ನಾಲ್ಕು ಕಾಲಿನ ಕೂಸಾಗಿ ತನ್ನವರನ್ನು ಅಚ್ಚಿಕೊಳ್ಳುತ್ತದೆ. ಅದರಲ್ಲೂ ತುಂಗಭದ್ರೆ ಮಗಳು ತಂದೆಯೆಂದರೆ ತುಂಬಾ ಪ್ರೀತಿ. ಏಕೆಂದರೆ ದಿನವೆಲ್ಲಾ ತಾಯಿ ಬಳಿಯೇ ಅಧಿಕಾರ ನಡೆಸಿ ರಾತ್ರಿಯಾದರೆ ಸಾಕು ಹೊರಗಿನಿಂದ ಬರುವ ತಂದೆಗೆ ದೇವರ ಪದಕದಂತೆ ಆಕರ್ಷಣೆ, ಆಪ್ತಪ್ರೀತಿ. ಹೊಸಿಲು ದಾಟಲು ಬಿಡದೆ ಸರ್ಪದ ಕಾವಲಿನಂತೆ ಸದಾ ತಂದೆಯೂ ನನ್ನ ಜೊತೆಯಲ್ಲಿರಲಿ ಎಂದು ಬಯಸುವ ಮುಗ್ಧ ಭಾವ. ಈ ಮಗಳು ತುಟಿತೆರೆದರೆ ಸಾಕು ಹಾಲುಹಲ್ಲಿನ ರೂಪದ ದರ್ಶನ ಮೇಲಿನ ತುಂಟಿಯಂಚಲಿ ಸಣ್ಣಕ್ಕಿಯಂತೆ ಹಾಗೂ ಕೆಳದುಟಿಯ ಹಿಂದೆ ಹಾಲಿನ ಚುಕ್ಕಿಯಂತೆ. ಬಟ್ಟತಲೆ, ದುಂಡಾದ ಮುಖ ಹಾಗೂ ಕಣ್ಣಿನ ರೂಪವು ಕಿವಿಯತನಕವೆಂದು ಮುಖದ ಮನೋಹರತೆಯನ್ನು ವರ್ಣಿಸಿದ್ದಾರೆ. ಆ ಮಗುವಿನ ತಲೆಯ ಮೇಲೆ ಶಾಸ್ತçಕ್ಕೆ ಅಂದರೆ ಲೆಕ್ಕಕ್ಕಾಗಿ ಹತ್ತು ಕೂದಲು, ಆ ಕೂದಲನ್ನೇ ಸೇರಿಸಿ ಒಂದು ಮರಳು ಜಡೆ, ಅಂದರೆ ಬ್ರಹ್ಮಗಂಟು. ಇಲ್ಲಿ ಕೆಲವು ವಿಷಯಗಳು ಮುಖ್ಯವಾಗಿವೆ. ಬ್ರಹ್ಮಗಂಟಿನ ಮೂಲಕ ಹೆಣ್ಣಿನ ಸಂಕೇತವನ್ನು ನೀಡುವುದು ಅಂದರೆ ಸಂಬಂಧದ ಶಾಶ್ವತತೆ ಹಾಗೂ ಪವಿತ್ರದ ಗಂಟಾಗಿ ಜೈವಿಕ ಬೆಳವಣಿಗೆ ಸ್ವರೂಪ ತುಂಬುವುದು, ಬಿಡಿಸಲಾಗದ ಸಮಸ್ಯೆಯಾಗಿಯೂ ಅವಲೋಕಿಸುತ್ತಾರೆ.
ಈ ಮಗುವಿನ ಆಟದ ಕ್ರಿಯೆಯೇ ಒಂದು ಸೋಜಿಗ. ಲೋಕದ ಯಾವುದೇ ಚೇಷ್ಠೆಗಳು ತಿಳಿಯದ ಈ ವರ್ಷದ ವಯಸ್ಸಿನಲ್ಲಿ ಪರಿಚಯದ ಪದನಿಧಿಗೆ ಹೆಜ್ಜೆಯಿಡುತ್ತದೆ. ಎಲ್ಲವನ್ನೂ ಮುಕ್ತವಾಗಿ ಮುಗ್ಧವಾಗಿ ಅವಲೋಕಿಸುತ್ತಾ ಸಾಗುವ ಜೀವಕ್ಕೆ ಅನುಭವದ ಮೊದಲ ಶಿಕ್ಷಣ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಧೈರ್ಯವೇ ಧೈರ್ಯ. ಆಗಾಗ ಮುಂಗೋಪ. ಎಲ್ಲರೂ ನನ್ನ ಇಷ್ಟಪಡಲಿ ಎಂದು ಭಾವಿಸುವ ‘ಇಷ್ಟ’ ಪ್ರವೃತ್ತಿ ಪ್ರಾರಂಭವಾಗುವುದೇ ಈ ವರ್ಷದ ವಯಸ್ಸಿನಲ್ಲಿ ಎನ್ನಬಹುದು. ಇದನ್ನು ‘ಇಗೋ’ವಿನ ಮೊದಲ ಹೆಜ್ಜೆ ಎಂದು ಮನೋವಿಜ್ಞಾನ ತಿಳಿಸುತ್ತದೆ. ತಂದೆ ಬೇಸರ ಮಾಡಿದ ತಾಯಿಯ ಬಳಿಗೆ ಓಡಿಹೋಗುವ ‘ತುಂಗಭದ್ರೆ’ಯು ತಾಯಿ ಗದರಿದರೆ ಅಂಬೆಗಾಲಿಡುತ ಕಣ್ಣೀರು ಸುರಿಸುತ್ತಾ ತಂದೆಯ ಬಳಿ ಬಂದು ಸೇರುತ್ತಾಳೆ. ಅಂದರೆ ಕೋಪವೇ ತಿಳಿಯದ ಕಂದನಿಗೆ ಪ್ರೀತಿಯೇ ಪ್ರಾಧಿಕಾರ, ಅಪೇಕ್ಷೆ.
ಕೆ. ಎಸ್ ನರಂಸಿಂಹಸ್ವಾಮಿ ಅವರು ಈ ಕವಿತೆಯಲ್ಲಿ ‘ಸಂಸಾರವು ಒಂದು ಸಾಗರ'ವೆಂದಿದ್ದಾರೆ. ಸಾಗರಕ್ಕೆ ಎರಡು ದಡಗಳಿದ್ದಂತೆ ತಂದೆ ಹಾಗೂ ತಾಯಿ. ಮಗು ಎರಡು ದಡಗಳಿಗೂ ಚಲಿಸುವ ಚಂದ್ರ ರೂಪ. ಶಾಂತ ಸ್ವರೂಪ. ಈ ಮಗುವಿನ ತರಹ ನಮಗೆ ಯೋಗವಿಲ್ಲವೆಂದು ಕೊರಗುತ್ತಾರೆ. ಏಕೆಂದರೆ ಬಾಲ್ಯದಲ್ಲಿ ಜೀವದ ಕಣ್ಣಾಗಿ ಮಕ್ಕಳನ್ನು ಕಾಪಾಡುವ ತಂದೆ, ತಾಯಿ ಎಷ್ಟೊ ಜನ ಆ ವೇಳೆಗೆ ಅನಾಥರಾಗಿರುತ್ತಾರೆ. ಈ ಬದುಕಿನ ದಡವು ಬೇಸರವಾದರೆ ಇನ್ನೊಂದು ದಡಕ್ಕೆ ಪ್ರೀತಿ ಹುಡುಕಿ ಹೋಗಲು ಆ ದಡವೇ ಮುಳುಗಿ ಹೋಗಿರುತ್ತದೆ. ಇದೇ ರೀತಿ ಮುಂದೆ ಈ ಪುಟ್ಟ ಮಗಳು ದೊಡ್ಡವಳಾಗುತ್ತಾಳೆ. ಅವಳಿಗೂ ಈ ಅನಾಥಭಾವ ಕಾಡಬಹುದು. ಇಂದು ನಮ್ಮ ಅನಾಥಭಾವವನ್ನು ಹೋಗಲಾಡಿಸಲು ನಂಬಿಕೆಯನ್ನೆ ಹೊತ್ತು ತಂದವಳು ತನ್ನ ನಂಬಿಕೆಯನ್ನೆ ಕಳಚಿ ನಿಂತು ಅನಾಥವಾಗುವ ಕಾಡುದಾರಿಯ ಪರಿತಪವನ್ನು ನೆನೆದು ಭಯಗೊಳ್ಳುತ್ತಾರೆ. ತಳಮಳದಿಂದ ಕನವರಿಸಿ ಪ್ರತಿ ನಿದ್ದೆಯಿಂದ ಎಚ್ಚರಗೊಳ್ಳುವ ನನ್ನ ಜೀವಂತಿಕೆಯಲ್ಲಿ ಆಕೆಯ ಭವಿಷ್ಯದ ಚಿಂತೆಯಿದೆ ಎನ್ನುತ್ತಾರೆ. ಮುಂದೆ ಏನಾಗುವುದೋ ಎಂದು ನೋವುಪಡುವ ತಂದೆಯ ಈ ತವಕ ಭಾವದಲ್ಲಿ ಮಗಳೆಂಬ ಮುಗ್ಧತೆಯು ಕೂಡಿ ಕಳಚುವ ಕೊಂಡಿಯಾಗಿದೆ.
ಪ್ರತಿ ತಂದೆಗೂ ಪ್ರಾಣತುಂಬುವ ಮಗಳ ಸ್ವರೂಪವು ಸಿಗ್ಮಂಡ್ ಫ್ರಾಯ್ಡ್ ಥಿಯರಿಯನ್ನು ತಿಳಿಸಿದರೂ ಸಹ ಅದು ಕೂಡಿ-ಕಳಚುವ ಕೊಂಡಿಯಲ್ಲಿ ಅನಾಥಭಾವದ ನಂಟಿದೆ. ತನ್ನ ಮಗಳು ಎರಡು ಸಂಸಾರದಲ್ಲಿ ಬದುಕುವಾಗ ಅನಾಥಳಾಗುವ ನೋವು ತಂದೆಯಲ್ಲಿ ಅಭಿವ್ಯಕ್ತಗೊಳ್ಳುತ್ತದೆ. ಈ ದೃಷ್ಠಿಕೋನದಲ್ಲಿ ‘ತುಂಗಭದ್ರೆ’ ಎಂಬ ಕವಿತೆಯು ತಂದೆ-ಮಗಳ ನಂಟನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದೆ. ಕೆ.ಎಸ್.ನ ಅವರು ಪ್ರತಿ ಜೀವದಲ್ಲೂ ಒಲುಮೆಯನ್ನು ಕಾಣುವ ಕವಿ. ಜೀವನವೆಂದರೆ ನಂಟು. ಅದೊಂದು ಸಂಬಂಧಗಳನ್ನು ಬೆಸೆಯುವ ಬ್ರಹ್ಮಗಂಟಾಗಿ ಕಾವ್ಯ ನಿರ್ಮಿಸಿದ್ದಾರೆ.
ಕೆ. ಎಸ್ ನರಸಿಂಹಸ್ವಾಮಿ ಅವರ ಕುರಿತು ಮಾಹಿತಿಗಾಗಿ ವಿಕಿಪಿಡಿಯಾ ಲಿಂಕ್ :
https://kn.wikipedia.org/s/jf