ಈ ಬ್ಲಾಗ್ ಅನ್ನು ಹುಡುಕಿ

ಗುರುವಾರ, ಮೇ 18, 2023

ಮೆಟ್ರೋ ಕಥನ - ೫೦

 ಮೆಟ್ರೋ ಕಥನ - ೫೦



ಅಂದು,

ಕಾಡು ಬಯಲಿನ ನಡುವೆ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ನೂರಾರು ಮೈಲಿ ಸಾಗುತ್ತಿದ್ದ ಕಾಲವದು. ರಸ್ತೆ ಪಕ್ಕ ಸಾಲು ಮರಗಳ ನೆರಳು. ಅಲ್ಲಲ್ಲೆ ನೀರು, ಮಜ್ಜಿಗೆಗಳ ಅರವಟ್ಟಿಗೆಯನ್ನಿಡುತ್ತಿದ್ದ ಪುಟ್ಟ ಹಳ್ಳಿಗಳು. ಕೊರತೆಯೇ ತುಂಬಿರುವ ಕಾಲದಲ್ಲಿ ಎಲ್ಲರಿಗೂ ಆತ್ಮತೃಪ್ತಿ ಇತ್ತು. 

ಇಂದು, 

ಅದೇ ರಸ್ತೆ, ಅದೇ ನೆರಳು, ಅದೇ ಪಾನಕಗಳಿಗೆ ಹಣಕೊಟ್ಟು ವೇಗವಾಗಿ ಕಾಲದ ಹಿಂದೆ ತೃಪ್ತಿಗಾಗಿ ಓಡುತ್ತಿದ್ದೇವೆ.


ಅಂದು,

ತಿನ್ನಲು ಸಮಯವಿತ್ತು,

ಅನ್ನ ವಿರಲಿಲ್ಲ.

ಇಂದು, 

ಅನ್ನವಿದೆ

ತಿನ್ನಲು ಸಮಯವಿಲ್ಲ.

ಅಂದನಿಗೆ ಸಾಧು ಹೇಳಿದ ಈ ನುಡಿಗಳಲ್ಲಿ ತೃಪ್ತಿ - ಆತ್ಮತೃಪ್ತಿಯ ಸರಳ ಸಾರವಿತ್ತು.


- ಅಂಕುರ

ಮೆಟ್ರೋ ಕಥನ - ೪೯

 ಮೆಟ್ರೋ ಕಥನ - ೪೯

ನೀರು ಕುಡಿಯುತ್ತಿದ್ದ ಜಿಂಕೆಗೆ ತನ್ನ ದಾಳಿಯ ಪ್ರಾಣಿಗಳ ಕುರಿತು ಭಯವಿತ್ತು. ಮೀನಿನ ಉಸಿರಾಟವೂ ಒಂದು ಕ್ಷಣ ತಲ್ಲಣ ಉಂಟುಮಾಡಿತು. ಗೋಡೆಯ ಮೇಲೆ ಈ ಚಿತ್ರವು ನೇತಾಡುತ್ತಿತ್ತು. ಈ ಚಿತ್ರವನ್ನು ನೋಡುತ್ತಿದ್ದ ಕಾಂಕ್ರೀಟ್ ಜಗತ್ತಿನ ಮೇಸ್ತ್ರಿ ಮಹಾಶಯನಿಗೆ ಯಾವ ಭಯವೂ ಆಗಲಿಲ್ಲ.


- ಅಂಕುರ

ಮೆಟ್ರೋ ಕಥನ - ೪೮

 ಮೆಟ್ರೋ ಕಥನ - ೪೮


ಸುನಾಮಿಯು ಆವರಿಸಿ, ಜನ ತಮ್ಮ ಸ್ಥಳಗಳನ್ನು ಬಿಟ್ಟು ಸಾಗುತ್ತಿದ್ದರು. ಕೆಲವರು ದೋಣಿಯಲ್ಲಿ, ತೆಪ್ಪದಲ್ಲಿ, ಈಜುತ್ತಾ ಹೀಗೆ ಒಬ್ಬೊಬ್ಬರೂ ಒಂದೊಂದು ನಂಬಿಕೆಯ ಬೆನ್ನತ್ತಿದ್ದರು. ವೃದ್ಧನೊಬ್ಬನು ದೇವಿ, ಆಂಜನೇಯ, ರಾಮ, ಮಂಜುನಾಥ ಎಂದು ದೇವರ ಪೋಟೋಗಳನ್ನು ಭದ್ರವಾಗಿ ಹಿಡಿದು ನಡದೇ ಹೋಗುತ್ತಿದ್ದನು. ಎಲ್ಲರೂ ಆತನನ್ನು ದಡ್ಡ, ಅತಿ ಆಸ್ತಿಕ, ಮೂರ್ಖ ಎಂದೆಲ್ಲಾ ತಲೆಗೊಂದು ನುಡಿದರು. ಆದರೆ ಆತ ಹಿಡಿದದ್ದು ಬರಿ ಪೋಟೋ ಅಲ್ಲ. ಅದು ಸದಾ ಧೈರ್ಯ ತುಂಬುವ ನಂಬಿಕೆಯಾಗಿತ್ತು. ಅದೇ  ರೀತಿಯಲ್ಲಿ ಎಲ್ಲರೂ ಏನನ್ನಾದರೂ ಒಂದೊಂದು ಹಿಡಿದಿದ್ದರು. ಇದನ್ನು ಅರ್ಥೈಸಲು ಕಷ್ಟವಾಗಿತ್ತು. ಏಕೆಂದರೆ ಅವರ ಕುರಿತು ಅವರಿಗೆ ಸರಿಯಾದ ನಂಬಿಕೆ ಇರಲಿಲ್ಲ.


- ಅಂಕುರ

ಮೆಟ್ರೋ ಕಥನ - ೪೭

 ಮೆಟ್ರೋ ಕಥನ - ೪೭


ಮನೆಯ ಕಾಂಪೌಂಡ್ ಗೋಡೆಯ ಮೇಲೆ ಯಾರೂ ಹತ್ತಬಾರದೆಂದು ಒಡೆದ ಗಾಜುಗಳನ್ನು ನೆಟ್ಟಿದ್ದರು. ಕಳ್ಳರಂತೂ ಈ ತರಬೇತಿಯನ್ನು ಮೊದಲೆ ಪಡೆದು ಬರುತ್ತಾರೆ. ಈ ಸತ್ಯವೂ ಮನೆಯೊಡೆಯನಿಗೆ ತಿಳಿದಿತ್ತು. ಹಾಗಾದರೆ ಈ ಗಾಜು, ಮನೆಗೆ ಬೀಗ, ಮತ್ತೊಂದು-ಮಗದೊಂದು ಯಾರಿಗಾಗಿ ಎಂಬ ಯಕ್ಷಪ್ರಶ್ನೆ ಮೂಡಿತು. 


ಉತ್ತರವೂ ಸರಳವಾಗಿತ್ತು. ನಮ್ಮ ಸಮಾಧಾನ, ನಂಬಿಕೆ ಹಾಗೂ ಧೈರ್ಯಕ್ಕಾಗಿ ಎಂದು. ನಮ್ಮೊಳಗಿನ  ಅನುಮಾನವೇ ಇಷ್ಟೆಲ್ಲಾ ರಕ್ಷಣೆಮಾಡುತ್ತದೆ ಎಂದು ತಿಳಿದ ಮನೆಯೊಡೆಯ ತುಸು ನಕ್ಕು ಎದೆಯುಬ್ಬಿಸಿ ನಡೆದನು.


- ಅಂಕುರ

ಮೆಟ್ರೋ ಕಥನ - ೪೬

 ಮೆಟ್ರೋ ಕಥನ - ೪೬


ಆತ್ಮೀಯರಿಬ್ಬರು ಪಡೆದ ಅಂಕಗಳ ಮೇಲೆ ಕಾಲೇಜು ಬದಲಾಯಿತು. ಊರಿನಿಂದ ವಿರುದ್ಧ ದಿಕ್ಕಿಗೆ ಹೊರಡುತ್ತಿದ್ದ ದುಃಖದ ಸ್ನೇಹಿತರನ್ನು ಕಂಡ ಕಂಡಕ್ಟರ್ ಹೀಗೆ ನುಡಿದನು. ಯೋಚ್ನೆ ಮಾಡಬೇಡ್ರೋ ದೋಣಿ ಬದಲಾದರೇನು ನೀರು ಒಂದೇ... ನಿಮ್ಮ ಪ್ರಯಾಣದಲ್ಲಿ ಸರಿಯಾಗಿ ಕಣ್ಬಿಡಿ, ಬಲೆ ತುಂಬಾ ಮೀನು ಹಿಡಿಬಹುದು. ಬದುಕು ಅಂದ್ಕೊಣೊದಲ್ಲ, ಅರ್ಥಮಾಡಿಕೊಳ್ಳೋದು.


- ಅಂಕುರ

ಮೆಟ್ರೋ ಕಥನ - ೪೫

 ಮೆಟ್ರೋ ಕಥನ - ೪೫

ಆಕೆಗೆ ಅವನ ಪರಿಚಯವಿರಲಿಲ್ಲ. ಹೇಳಿದ್ದನ್ನೆಲ್ಲಾ ನಂಬಿದಳು. ಮದುವೆಗೂ ಒಪ್ಪಿದಳು. ಆರಂಭವು ಕವಿತೆಯಂತೆ ಲಯಬದ್ದ ಗೀತೆ, ಬದುಕು ಮುಂದುವರೆದಂತೆ ಕಥೆಯಾಗುತ್ತಾ ಹಿತವೆನಿಸಿತು. ನೆನಪಿಸಿಕೊಂಡಷ್ಟೂ  ಅದೇಕೋ ಇತ್ತಿಚೆಗೆ ಕಾದಂಬರಿಯಂತೆ ಸುದೀರ್ಘ, ಕುತೂಹಲ. ಈಗ ಅವಳು ಮೋಸವನ್ನೂ ಅರಿತಿದ್ದಾಳೆ, ಸುಳ್ಳನ್ನು ನಂಬಿ, ನಂಬಿಸುತ್ತಾಳೆ.

ಪ್ರೇರಣ - ರಮಾಮಣಿಯಾದ ಕಥೆ

 ಪ್ರೇರಣ - ರಮಾಮಣಿಯಾದ ಕಥೆ

 


ಮಲೆನಾಡಿನ ಚೆಲುವೆ, ಬೆಂಗಳೂರಿನ ಗೊಂಬೆಯು ಸಿನಿಮಾ ನಟಿಯಾಗುವುದು ಸಾಮಾನ್ಯ ವಿಚಾರವೇನಲ್ಲ. ಪ್ರೇರಣಾ ಈಗ ಬೆಳೆದು ದೊಡ್ಡವಳಾಗಿ ಓದುಗರೇ ನಿರ್ಮಿಸಿದ ಕನ್ನಡದ ಮೊದಲ ಸಿನಿಮಾ ಡೇರ್ ಡೆವಿಲ್ ಮುಸ್ತಾಫ ಸಿನಿಮಾದಲ್ಲಿ ನಾಯಕಿಯಾಗಿದೆ. ಕನ್ನಡ ನಾಡಿಗೆ ಕುತೂಹಲ ಭರಿಸುವಷ್ಟು ಡಿಡಿಎಂ ತಂಡವು ಸೋಸಿಯಲ್ ಮೀಡಿಯಾವನ್ನು ಬಳಸಿಕೊಂಡಿದೆ. ಹಂತ ಹಂತವಾಗಿ ಜನರನ್ನು ತಲುಪಿದ್ದು ಶ್ರಮದಿಂದಲೇ ಆಗಿದೆ. ಅಭಿಮಾನವನ್ನು ಬಂಡವಾಳಮಾಡಿಕೊಂಡು ಮುಂದೆ ಬಂದಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ತೇಜಸ್ವಿ ಎಂದರೆ ವಿಭಿನ್ನ ಹಾಗೂ ಸೃಜನಶೀಲ ಪ್ರತಿಭೆಯ ಸ್ಥಾನವಿದೆ. ಸಾಮಾನ್ಯ ಓದುಗರಿಂದ, ಸಾಪ್ಟ್ವೇರ್ ಕ್ಷೇತ್ರದ ತನಕ ಓದುಗರನ್ನು ತುಂಬಿಕೊಂಡಿರುವ ತೇಜಸ್ವಿ ಈ ಮಕ್ಕಳ ವಿಚಿತ್ರ ಓದು ಕಾರ್ಯಗಳನ್ನು ತೇಜಸ್ವಿ ನೋಡಬೇಕಿತ್ತು. ಮೂರು ವರ್ಷಗಳ ಹಿಂದೆ, ಸಿನಿಮಾ ಕ್ಷೇತ್ರ ಕುರಿತು ಕನಸು ಕಾಣುತ್ತಿದ್ದ ಹೊಸ ಪ್ರತಿಭೆಗಳು, ಅವಕಾಶ ಸಿಗದ ಹಳೆಯ ಪ್ರತಿಭೆಗಳು ಒಟ್ಟಿಗೆ ಸೇರಿ ಪ್ರಾರಂಭಿಸಿದ ಚಿಕ್ಕ ಕಥೆ ಇದು. ಪ್ರಾರಂಭವೇನೋ ಚಿಕ್ಕ ಕಥೆಯಾಗಿ ಬೆಳೆದು ದೊಡ್ಡ ಆಲದಮರವಾಗಿ ನಿಂತ ಈ ಪ್ರಯಾಣದಲ್ಲಿ ಅದೆಷ್ಟು ಬಿಳಿಲುಗಳ ಶ್ರಮವಿದೆಯೋ ಆ ತಂಡಕ್ಕೆ ಗೊತ್ತು. ಅಂತು ಕಾಲ ಕಾಲಕ್ಕೆ ಟೀಶರ್ಟ್ ಮಾರಿ ಹಣ ಹೊಂದಿಸುವುದು, ಬ್ಯಾಡ್ಜ್ ಮಾರಾಟ ಇವೆಲ್ಲವೂ ಡಿಡಿಎಂ ತಂಡದ ಶ್ರಮ. ೨೦೨೧ರಲ್ಲಿ ರಾಜ್‌ಕುಮಾರ್ ಕುರಿತು ನಿನ್ನಂರ‍್ಯಾರು ಇಲ್ವಲ್ಲೋ ಹಾಡು ಅನಿಮೇಶನ್ ಮೂಲಕ ಕ್ರಾಂತಿಮಾಡಿತು. ಎರಡು ವರ್ಷಗಳ ಹಿಂದೆ ಮಕ್ಕಳಿಗೆ ಪೂಚಂತೆ ಪ್ಯಾರಾಗ್ರಾಫ್‌ನಂತಹ ಸ್ಪರ್ಧೆಗಳು, ಓದಿನ ಸ್ಪರ್ಧೆಗಳನ್ನೆಲ್ಲಾ ಏರ್ಪಡಿಸುತ್ತಾ, ತನ್ನ ಸಿನಿಮಾ ಯಾನವನ್ನು ಯುವಕರಲ್ಲಿ ಭಿತ್ತಿದರು. ಇಂತಹ ಯುವಕರೇ ಸೇರಿ ಇಷ್ಟು ಸುಲಲಿತ ಸಿನಿಮಾಯಾನವನ್ನು ಮಾಡಿದ್ದು ಈ ಶತಮಾನದ ವಿಶೇಷ. ಶಂಕರ್‌ನಾಗ್‌ನತಹ ನಿರ್ದೇಶಕರ ಕನಸು ಈಡೇರಿದಂತೆ ಎನ್ನಬಹುದು. ಇಂತಹ ಕಾರ್ಯಕ್ಕೆ ಯುವಕರ ತಂಡವಂತೂ ತುಂಬಾ ಸಾಥ್ ಕೊಡುತ್ತಿದೆ. ಉನ್ಮಾದ ಹೆಚ್ಚಿಸುವ ಕೆಟ್ಟ ಸಿನಿಮಾವನ್ನು ಬೆಳೆಸುವ ಸಂಸ್ಕೃತಿಯನ್ನು ಮುರಿದು ಮಲೆನಾಡ ಪರಿಸರದಲ್ಲಿ ಮಕ್ಕಳ ಮನೋಲೋಕವನ್ನು ಚಿತ್ರಿಸಿದ ತೇಜಸ್ವಿ ಕಥೆಯನ್ನು ಸ್ವಯಂ ಪ್ರೇರಿತರಾಗಿಯೇ ಇಷ್ಟಪಡಬೇಕಿದೆ. ಸಿನಿಮಾದ ರಮಾಮಣಿ ಈಗ ಕರುನಾಡು, ವಿಶ್ವವೇ ಗಮನಿಸುವ ಪ್ರತಿಭೆ. ಎಲ್ಲಾ ಯುವ ಪ್ರತಿಭೆಗಳಿಗೆ ಶುಭವಾಗಲಿ. ಎಲ್ಲರೂ ತಮ್ಮ ತಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡೋಣ. ನೋಡಿಸೋಣ. ಕನ್ನಡ ಸೃಜನಶೀಲರ ಶ್ರಮಕ್ಕೆ ಗೌರವ ನೀಡುವುದಕ್ಕೆ ಇದೇ ಸೂಕ್ತ ಸಮಯ.

 


ಪ್ರೇರಣ ನನಗೆ ಹೇಗೆ ಗೊತ್ತು ಅಂದ್ರೆ ಈ ಕಿರು ಕತೆ ಓದಿ...

ನಾನು ತುಂಬಾ ಹತ್ತಿರದಿಂದ ಮನೆಯ ಮಗುವಾಗಿ ನೋಡಿದ ಪ್ರತಿಭೆ ಈಕೆ. ೨೦೧೪-೧೫ರ ಸಂದರ್ಭದಲ್ಲಿ ಮಲೆನಾಡಿನಲ್ಲಿ ಸಂಶೋಧನೆಯಲ್ಲಿ ತೊಡಗಿದ್ದೆ. ಮನೆಯಿಲ್ಲದೆ ನೂರು ರೂಪಾಯಿಗೆ ಒಂದು ಚಿಕ್ಕದೊಂದು ಕೊಠಡಿಯಲ್ಲಿ ಬಾಡಿಗೆ ಇದ್ದ ಸಮಯ. ಒಂದು ದಿನ ಸರೋಜಮ್ಮ ಅವರು ಮನೆಗೆ ಬಂದು ನಿಮ್ಮ ಬಗ್ಗೆ ತಿಳ್ಕೊಂಡಿದಿವಿ ಮನೆಗೆ ಬಾರಪ್ಪ ಅಂತ ಔತಣ ಕೊಟ್ಟು ಕರೆದಾಗ ಹೋಗಲೇಬೇಕಾಯಿತು. ನಾನೇ ಅಲೆಮಾರಿ, ನನ್ನ ಜೊತೆಯಲ್ಲಿ ನನ್ನ ಸ್ನೇಹಿತ ಪ್ರವೀಣ್ ಅವರು ಕೂಡ ಜೊತೆಯಲ್ಲಿ ಓದಲು ಬಂದಿದ್ರು. ಇಬ್ಬರು ಅವರ ಮನೆಗೆ ಹೋದೆವು. ಸರೋಜಮ್ಮ ಅವರ ಬಗ್ಗೆ ನಾಲ್ಕು ಮಾತು ಇಲ್ಲಿ ಹೇಳಲೇಬೇಕು. ಅವರ ಬಗ್ಗೆ ಪ್ರತ್ಯೇಕ ಒಂದು ಪ್ರಬಂಧವೇ ಬರೆದಿರುವೆ. ಅವರು ಒಂಥರಾ ಏಕಾಂಗಿ ಹೋರಾಟಗಾರ್ತಿ, ಬಸವಣ್ಣನ ಕಾಯಕವೇ ಕೈಲಾಸತತ್ವದೊಟ್ಟಿಗೆ ಬದುಕುತ್ತಿರುವ ಸ್ವಾಭಿಮಾನಿ. ನಮ್ಮಂತವರನ್ನು ತಿಳಿದು ಆಶ್ರಯ ನೀಡಿ, ಅಮ್ಮನಾದ ತೆರೆದಮನ.

ಇಂಗ್ಲೆಂಡ್ನಲ್ಲಿ ತನ್ನದೇ ಕಂಪನಿ ನಡೆಸುತ್ತಿರುವ ರಾಜೇಶ್ ಅವರು ಹಾಗೂ ಸರೋಜಮ್ಮ ಅಂದು ಅಷ್ಟು ಪ್ರೀತಿ ತೋರಿ, ನಾವು ನಾಲ್ಕು ತಿಂಗಳು ಇಂಗ್ಲೆಂಡ್ಗೆ ಹೋಗ್ತಾ ಇದ್ದೀವಿ, ನೀವು ಇದೆ ಮನೆಯಲ್ಲಿ ಬಂದು ಇದ್ದುಬಿಡಿ. ದೊಡ್ಡಮನೆ ಬೀಗ ಹಾಕಬಾರದು ಎಂದು ಹೇಳಿದಾಗ ಏನೂ ತಿಳಿಯದೆ ಒಪ್ಪಿಕೊಂಡೆ. ಆದರೆ ಅವರು ಹೋಗಿಬಂದರೂ, ಅದೇ ಪ್ರೀತಿಯಲ್ಲಿ ಆ ಮನೆಯಲ್ಲಿ ಆಶ್ರಯಕೊಟ್ಟು, ಬದುಕೆಂದರೆ ಏನು ಎಂಬುದನ್ನು ಕಣ್ಣೆದುರು ಕಾಣಿಸಿದವರು. ಮಲೆನಾಡು ಪರಿಚಯಿಸಿದವರು. ಕೂರಿಸಿ ಅನ್ನ ಕೊಟ್ಟವರು. ಕುವೆಂಪು ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯವನ್ನು ಅದೇ ಮನೆಯಲ್ಲಿ ನಿತ್ಯವೂ ಓದಿದ್ದು ನನ್ನ ಪುಣ್ಯ. ಹೀಗೆ ಆ ಮನೆಯ ಸದಸ್ಯನಾದ ನನಗೆ ಅವರ ಮನೆಯವರೆಲ್ಲಾ ಸ್ವಂತ ತಮ್ಮನಂತೆ ಕಂಡರು. ರಾಜೇಶಣ್ಣ ಹಾಗೂ ರಮ್ಯಕ್ಕ ಎಂಬ ಅಣ್ಣತಂಗಿ ಎಂದರೆ ಗೌರವ ಹಾಗೂ ಹೆಮ್ಮೆ ಅನಿಸುತ್ತದೆ. ರಾಜೇಶಣ್ಣ ಇಂಗ್ಲೆಂಡ್, ರಮ್ಯಕ್ಕ ಬೆಂಗಳೂರು. ಈ ರಮ್ಯಕ್ಕನ ಮಗಳೇ ಪ್ರೇರಣ. ರಜೆ ಬಂದರೆ ಸಾಕು, ಈ ರಮಾಮಣಿ ಅಂದ್ರೆ ಪ್ರೇರಣ ಅಲಿಯಾಸ್ ಪ್ರೆಟ್ಟಿ ಮಲೆನಾಡಿಗೆ ಬರುತ್ತಿದ್ದ ಪುಟ್ಟ ಹುಡುಗಿ. ಮುದ್ದಾಗಿ ಮಾತಾಡಿಸುವ, ಅಜ್ಜಿ ಹಿಂದೆ ತಿರುಗಾಡುವ, ಓದುವ, ಚಿತ್ರ ಬರೆಯುವ ಜಾಣ ಮಗು ಅದು. ಟ್ಯಾಬ್ ಕೈಲಿದ್ದರೆ ಸಾಕು ಟಾಕಿಂಗ್ ಟಾಮ್ - ಕ್ಯಾಟ್ ಗೇಮ್ ನಲ್ಲಿ ಬೆಕ್ಕಿಗೆ ಸ್ನಾನ, ನಿದ್ರೆ, ದಿನದ ಎಲ್ಲಾ ಕೆಲಸವನ್ನು ಮಾಡಿಸುತ್ತಾ ಆಟದಲ್ಲಿ ಮುಳುಗಿಹೋಗುತ್ತಿತ್ತು. ಚಿಕ್ಕ ವಯಸ್ಸಿಗೆ ಸದ್ಗುಣಗಳು ತಂದೆಯಿಂದ ಧ್ಯಾನ, ತಾಯಿಯಿಂದ ಮೌನ ಮತ್ತು ಮಾತು ಕಲಿತು ಬೆಳೆದ ಕಿನ್ನರಿ ಈಕೆ. ರಜೆಯನ್ನು ಮಲೆನಾಡಿನಲ್ಲಿ ಕಳೆಯುತ್ತಿದ್ದ ಪ್ರೇರಣ ಭರತನಾಟ್ಯ, ಯೋಗ ಹೀಗೆ ಪ್ರತಿಭೆಯನ್ನು ತಾನೇ ಅರ್ಥಪೂರ್ಣವಾಗಿ ನಿರ್ಮಿಸಿಕೊಂಡ ಮಗು. ಈಗ ತನ್ನ ಪ್ರತಿಭೆಯ ಮೂಲಕವೇ ನಟಿಯಾಗುವ ಎಲ್ಲಾ ಲಕ್ಷಣವನ್ನೂ ಹೊಂದಿರುವುದು ನಮಗೆಲ್ಲಾ ಹರ್ಷನೀಯ. 
 


https://in.bookmyshow.com/bengaluru/movies/daredevil-musthafa/ET00358461