ಈ ಬ್ಲಾಗ್ ಅನ್ನು ಹುಡುಕಿ

ಬುಧವಾರ, ಜೂನ್ 7, 2023

ಮೆಟ್ರೋ ಕಥನ - ೭೭

 ಮೆಟ್ರೋ ಕಥನ - ೭೭


ಇಲಿಯನ್ನು ಕೊಲ್ಲಲು ಬೋನು ತಂದರು. ಆಲೋಚಿಸದ ಆತುರದ ಇಲಿಗಳೆಲ್ಲಾ ಸಾಯುತ್ತಿದ್ದವು. ಅಗಲ ಕಿವಿಯ ಹಿರಿ ಇಲಿಯೊಂದು ಈ ಮನುಷ್ಯನ ಬುದ್ದಿ ತಿಳಿದಿತ್ತು. ನಿಧಾನವಾಗಿ ಯೋಚಿಸುತ್ತಾ ಬರುವಾಗ ಯುವ ಇಲಿಯೊಂದು ದೊಪ್ಪನೆ ಬೋನಿನಲ್ಲಿ ಬಿದ್ದಿತು. ಹಿರಿ ಇಲಿ ಬಂದು ಬೋನನ್ನೆಲ್ಲಾ ಪರಿಶೀಲಿಸಿ ನಾಳೆ ತಾನೇ ಬೋನಿಗೆ ಹೋಗಲು ಸಿದ್ದವಾಯಿತು. ಕತ್ತಲಾದ ಕ್ಷಣ ಬೋನನ್ನೆ ಹುಡುಕಿತು. ನಿಧಾನವಾಗಿ ಬೋನಿನೊಳಗೆ ಹೋಗಿ, ಮನುಷ್ಯನ ತಂತ್ರ ತಿಳಿದು, ಪರಿಶೀಲಿಸಿ ಆಚೆ ಬಂದಿತು. ಬರುವ ಇಲಿಗಳಿಗೆಲ್ಲಾ ಸೂಚನೆ ನೀಡಿ, ಮನೆಯನ್ನೇ ಲೂಟಿ ಮಾಡಿಸಿತು. ಈಗ ಇಲಿಗಳು ಬೋನಿಗೆ ಹೆದರುವುದಿಲ್ಲ.


- ಅಂಕುರ

ಮೆಟ್ರೋ ಕಥನ - ೭೬

 ಮೆಟ್ರೋ ಕಥನ - ೭೬

ತಂಪು ಕಾಂತಿ ನೀಡುವ ಚಂದ್ರನ ಬೆಳಕಲ್ಲಿ ಅದೆಷ್ಟೋ ಜನಪದ ಕಥೆಗಳು ತಲೆಯಿಂದ ತಲೆಗೆ ನುಡಿಗಳಾಗಿದ್ದವು. ಕಥೆಯೊಂದಿಗೆ ಊಟ, ಕೆಲವೊಮ್ಮೆ ಕೆಲಸಗಳು ಹೀಗೆ ಕೃಷಿ- ಖುಷಿ ಎರಡೂ ಇತ್ತು. ಕಣದ ಬಣವೆ ಹುಲ್ಲಿನ ಗುಡಿಸಲು ಕಟ್ಟಿ ಆಕಾಶ ನೋಡುತ್ತಾ ಮಲಗುವ ಸ್ವರ್ಗವೇ ಹಾಲು ಚೆಲ್ಲುವ ಹಾದಿ. ಈಗ ನಮಗೆ ಚಂದ್ರನ ಸಹಾಯವೆಂದರೆ ಎಲ್ಲರ ಮೊಬೈಲ್ ನಲ್ಲೂ ತೊಂದರೆ ಕೊಡಬೇಡಿ ಎಂಬ ಬಟನ್ ಮೂಲಕ ನೆಮ್ಮದಿಯ ಸಂಕೇತವಾಗಿದೆ.


- ಅಂಕುರ


ಮೆಟ್ರೋ ಕಥನ - ೭೫

 ಮೆಟ್ರೋ ಕಥನ - ೭೫


ಶಾಲೆಯೊಂದರಲ್ಲಿ ಇಂಗ್ಲಿಷ್ ಭಾಷೆಯನ್ನು ಕ್ಯಾಂಪಸ್ ಲಾಂಗ್ವೇಜ್‌ ಮಾಡಿದ್ದರು. ಆದರೆ ಅದರೊಳಗೆ ನಗು, ಅಳುವೆಲ್ಲಾ ಆಯಾ ಮಾತೃಭಾಷೆಯಲ್ಲಿ ನಡೆದಿತ್ತು. ಮನುಷ್ಯನ ಭಾವನೆಗಳನ್ನು ಬಂಧಿಸಲಾಗದೆಂದು ತಿಳಿದ ಪ್ರಾಂಶುಪಾಲರು, ಆಡಳಿತ ಭಾಷೆ, ಮಾತೃಭಾಷೆ, ನಾಡಿನ ಭಾಷೆ ಎಂಬ ತ್ರಿಭಾಷೆಯ ಸ್ವಾತಂತ್ರ್ಯ ಘೋಷಿಸಿದರು. 


- ಅಂಕುರ