ಈ ಬರಹದ ಪೂರ್ಣ ರೂಪವಿದು...
ವಿಜಯ ಕರ್ನಾಟಕ-ಸಾಪ್ತಾಹಿಕ ಲವಲವಿಕೆ-ನಾನು ಓದಿದ ಪುಸ್ತಕ ವಿಭಾಗ
*ಯುದ್ದೋದ್ವೇಗ ಶಮನಕ್ಕೊಂದು ಅಭಯ: ನಿರಾಮಯ*
‘ನಿರಾಮಯ’ ಎಂಬುದು ಅಂಕುರ ಎಂಬ ಹೆಸರಲ್ಲಿ ಬರೆಯುತ್ತಿರುವ ಡಾ.ಎ.ಕೆ. ರವಿಶಂಕರ್ ಅವರ ವಿಶಿಷ್ಟ ಕೃತಿ. ಮುಖಪುಟದ ನಿರಾಮಯ ಶೀರ್ಷಿಕೆಯಡಿಯಲ್ಲಿರುವ ಬಾಲಂಗೋಚಿ (ಟ್ಯಾಗ್‌ಲೈನ್) ‘ಬಂದೂಕಿನ ವಿರುದ್ಧ ಪದ’ ಎಂಬುದೇ ನೋಡಿದ ತಕ್ಷಣ ಗಮನ ಸೆಳೆದುಬಿಡುತ್ತದೆ. ೩೦ ಆಪ್ತ ಕವಿತೆಗಳು, ಒಂದು ನಾಟಕ, ಒಂದು ಕಿರು ರೂಪಕದೊಂದಿಗೆ ಈ ಪುಟ್ಟ ಕೃತಿ ಹಿರಿದಾದ ಮೌಲ್ಯಗಳನ್ನು ಮತ್ತು ಆಶಯಗಳನ್ನು ಹೇಳುವಲ್ಲಿ ಗೆದ್ದಿದೆ.ಚಿಗುರು,ಶಾಂತಿ, ಗುಲಾಬಿ, ಪ್ರೇಮ. ಪ್ರೀತಿ, ಧ್ಯಾನ ಹೀಗೆ ೩೦ ಕವಿತೆಗಳೂ ಹೊಸ ಭರವಸೆ, ನವ ಚೈತನ್ಯ, ಹೊಸ ಹುಡುಕಾಟದಲ್ಲಿ ಕಂಡ ಜೀವನ್ಮುಖಿ ಹೊಳಹುಗಳನ್ನು ಸಮರ್ಥವಾಗಿ ಕಟ್ಟಿಕೊಡುತ್ತವೆ. ಚಿಗುರು ಕವಿತೆಯಲ್ಲಿ ‘ನಾನು ಚಿಗುರು, ನನ್ನೆದುರು ವಿನಾಶವೇ ಶರಣಾಗಿದೆ’, ಪ್ರೇಮ ಕವಿತೆಯ ‘ನೀನು ಬರಿ ಕಾಮವಲ್ಲ, ಆಕರ್ಷಣೆ, ಸಲ್ಲಾಪವಲ್ಲ, ಒಳತೋಟಿಗೆ ಲೇಪಿಸಿದ ಅಗಮ್ಯ ಸುಗಂಧ ದ್ರವ್ಯ’, ನಿರಾಮಯ ಕವಿತೆಯ ‘ನನಗಾಗಿಯೇ ಎಲ್ಲಾ ಹಿಂಸೆಗಳು ಮೂಡಿ ನನ್ನನ್ನೇ ಹುಡುಕುವ ಕರುಣೆ, ಪ್ರೀತಿ, ಅಹಿಂಸೆಗಳೇ, ನಿರಾಮಯವೇ ಕೊನೆಯ ದಾರಿ’ ಈ ಸಾಲುಗಳು ಹೊಸ ಆಶೋತ್ತರಗಳ ಚರಿತೆ ಸೃಷ್ಟಿಸುವಂತಿವೆ.
ಇನ್ನು ನಾಟಕ ತಾತ ಮಗುವಿಗೆ ಗೆದ್ದವರ ಕತೆ ಬದಲು ಸೋತವರ ಕತೆ ಹೇಳುವುದರೊಂದಿಗೆ ಪ್ರಾರಂಭವಾಗುತ್ತದೆ. ಯಜಮಾನನ ಪಾತ್ರ ಹೇಳುವ ‘ಎಲ್ಲಿಯ ತನಕ ನಾನು ಇರುತ್ತೇನೆಯೋ ಅಲ್ಲಿಯ ತನಕ ಯುದ್ದ ಹಿಂಸೆ ನೋವು, ಸಾವು ಮತ್ತೆ ಮತ್ತೆ ಚಿಗುರುತ್ತವೇ ಇರುತ್ತವೆ. ನಾನು ಇರುವ ತನಕ ಬಂದೂಕಿನಿಂದ ಗುಲಾಬಿ ಮೂಡುವುದಿಲ್ಲ, ಬರೀ ಗುಂಡುಗಳು ಹಾರುತ್ತವೆ ಏಕೆಂದರೆ ನಾನು ಗೆಲ್ಲಲೇಬೇಕು. ನಾನು ಸೋಲುವ ಪಠ್ಯ ವಿಶ್ವದಲ್ಲೇ ಇಲ್ಲ, ನಾನು ನಿಮ್ಮೊಳಗೂ ಇರಬಹುದು’ ಎಂಬುದು ಒಳಗಿನ ಅಹಂಕಾರ, ಸರ್ವಾಧಿಕಾರಿ ಧೋರಣೆ ಜೊತೆಗೆ ಪಕ್ಕಾ ಭಯೋತ್ಪಾದನೆಯ ಮನಸ್ಥಿತಿಯನ್ನೂ ಬಿಂಬಿಸುತ್ತದೆ. ಇಂತಹ ಯಜಮಾನ ಕೊರವಂಜಿಯು ಹೇಳುವ ‘ದಾರಿ ಗೊತ್ತಿರೋ ಮನುಷ್ಯ ದೂರ ಸಾಗ್ತಾನ, ದಾರಿನೇ ಇಲ್ಲದ ಮನುಷ್ಯ ಇಲ್ಲಿ ದರಿದ್ರನಾಗ್ತಾನ’ ಎಂಬ ಮಾತಿಗೆ ಅನುಗುಣವಾಗಿ ಬದಲಾಗಲು ಹೊರಡುತ್ತಾನೆ. ಹಣದ ಚಿಂತೆಯಿಲ್ಲದ, ಮನೆಯ ಬಾಗಿಲೇ ಮುಚ್ಚದ, ದುಡಿದು ತಿಂದುಂಡು, ಮಾತಾಡಿ ಕಣ್ತುಂಬ ನಿದ್ದೆ ಮಾಡುವ ಮನಸೂರಿಗೆ ಬಂದು ಅಲ್ಲೂ ತನ್ನ ಚಾಳಿ ಬಿಡದೆ ಅಲ್ಲಿನ ಜನರಿಗೆ ಹಣದ ಆಮಿಷ ತೋರಿಸಿ ಬಂಧಿಯಾಗುತ್ತಾನೆ. ದಿಬ್ಬದ ತಾಯಿಯ ದೆಸೆಯಿಂದ ಮುಕ್ತಗೊಂಡು ಪರಿವರ್ತನೆ ಹೊಂದುವ ಯಜಮಾನ ‘ಇವರೆಲ್ಲರೂ ನನ್ನ ರೂಪಗಳೇ, ಇವರೆಲ್ಲರೂ ನಿಜವಾಗಿ ನನ್ನ ವಿರುದ್ಧ ಪದಗಳು, ತಾನೊಂದು ಈ ಜಗತ್ತಿನ ಬಂದೂಕು, ಸುತ್ತಲೂ ವಿರುದ್ಧ ಪದಗಳಿವೆ, ನನ್ನಿಂದ ಹಾರುವ ಗುಂಡಿಗೆ ಅವುಗಳ ಸ್ವರೂಪ ಕಾಣುತ್ತಿಲ್ಲ, ನನಗೂ ಉತ್ತರ ಕಾಣಿಸಿಲ್ಲ' ಎಂದು ಉದ್ಗರಿಸುವುದರೊಂದಿಗೆ ನಾಟಕ ಮುಗಿಯುತ್ತದೆ.
ಕೊನೆಯ ೮ ಪುಟಗಳ ಕಿರು ರೂಪಕವಂತೂ ಇನ್ನೂ ಅದ್ಭುತವಾಗಿದೆ.ಬ್ರಹ್ಮಾಂಡದೊಂದಿಗೆ ಪಂಚಭೂತಗಳಾದ ಆಕಾಶ, ನೀರು, ಗಾಳಿ, ಬೆಂಕಿ, ಭೂಮಿ ಸಂವಾದ ನಡೆಸುತ್ತವೆ. ಸದಾ ಶೋಷಣೆಗೊಳಗಾಗಿ ವಿಷಾಧ ಮಡುಗುಟ್ಟಿದ ಭೂಮಿ, ತಾನು ಹರಿಯಲಾರದೆ ನಿಂತು ಕಲ್ಮಶಗೊಂಡೆನೆಂದು ಕೊರಗುವ ನೀರು, ನಾಲ್ಕು ಭೂತಗಳ ಪೋಷಕಳೂ, ಜೀವಜಂತುಗಳ ಉಸಿರೂ ಆದ ತಾನೂ ಮಾಯೆಗೆ ಸಿಲುಕಿದ್ದೇನೆ ಎನ್ನುವ ಗಾಳಿ, ಎಲ್ಲವನ್ನೂ ಶುದ್ಧ ಮಾಡುವ ನಾನೆ ಅಶುದ್ಧವಾಗಿದ್ದೇನೆ ಎಂದು ಹಪಹಪಿಸುವ ಬೆಂಕಿ, ಎಲ್ಲರನ್ನೂ ಪೊರೆಯುವ ಪರದೆ ಜಾರದಿರಲಿ ಎಂದು ಅವಲತ್ತುಕೊಳ್ಳುವ ಆಕಾಶ ಎಲ್ಲಾ ಒಟ್ಟಿಗೆ ಸೇರಿ ಬ್ರಹ್ಮಾಂಡವನ್ನು ಮುತ್ತುತ್ತವೆ. ಬಿಡುಗಡೆಗಾಗಿ ಹಂಬಲಿಸುತ್ತವೆ. ಇವಕ್ಕೆಲ್ಲ ಬ್ರಹ್ಮಾಂಡ ವಸ್ತುಸ್ಥಿತಿ ಮತ್ತು ಅವರವರ ಅಂತರಾಳದ ಸಾಮರ್ಥ್ಯದ ಅರಿವು ಮೂಡಿಸುತ್ತದೆ. ‘ಎಲ್ಲರೂ ಬದಲಾಗೋಣ, ನಿಮ್ಮ ಹೃದಯದಲ್ಲಿ ಜಾಗ ಕೊಡಿ, ನಾವು ನಿಮ್ಮ ಬೆಳಕು, ಹಿಂಸೆ ಕ್ರೋಧಗಳ ಕಳಚಿ ನಮ್ಮನ್ನು ಪ್ರೀತಿಸಿ ಸ್ವಚ್ಛಂದವಾಗಿ ಬದುಕಿ ಉಳಿಯೋಣ, ಉಳಿಸೋಣ’ ಎಂಬ ಆಶಯದೊಂದಿಗೆ ರೂಪಕ ಮುಗಿಯುತ್ತದೆ.
ನಮ್ಮ ಸ್ವಾಭಿಮಾನ, ಸುರಕ್ಷತೆಗೆ ಇನ್ನೊಂದು ದೇಶ ಸವಾಲಾದಾಗ ಯುದ್ಧ ಅನಿವಾರ್ಯ. ಆದರೆ ಮುಗ್ಧ ಹೃದಯಗಳಲ್ಲಿ ಯುದ್ಧ ಯಾವತ್ತೂ ತಲ್ಲಣಗಳನ್ನು ಉಂಟುಮಾಡುತ್ತದೆ, ಉದ್ವೇಗ ಸೃಷ್ಟಿಸುತ್ತದೆ. ಯುದ್ಧದ ಈ ಹೊತ್ತಿನಲ್ಲಿ ನಿರಾಮಯ ಓದು ನಮ್ಮ ಮನಸ್ಸಿನ ದುಗುಡವನ್ನು ಸ್ವಲ್ಪ ಮಟ್ಟಿಗಾದರೂ ಶಮನ ಮಾಡಬಹುದು. ಡಾ. ರವಿಶಂಕರ್ ಸಂಪರ್ಕ: ೯೬೬೩೪೩೩೪೦೩
~ತುರುವೇಕೆರೆ ಪ್ರಸಾದ್
