ಪಂಚಗವ್ಯ ಎಂಬ ಹೊಸ ರಂಗನಾಟಕ ಪ್ರಯೋಗ...
ಪುರಾಣದೊಳಗೆ ಪ್ರವೇಶ ಮಾಡುವ ಪಂಚಗವ್ಯ ನಾಟಕವು ವಿಭಿನ್ನ ಮನೋಭಿತ್ತಿಯ ಪ್ರಯೋಗ. ಅಧ್ಯಯನ, ಪ್ರಯೋಗಗಳ ಮೂಲಕ ಇದುವರೆಗೂ ಹಲವು ಸಾಮಾಜಿಕ, ಪೌರಾಣಿಕ ಹಾಗೂ ಮಕ್ಕಳ ನಾಟಕಗಳನ್ನು ರಚಿಸಿ, ಪ್ರಯೋಗಿಸಿದ ಡಾ. ರಘುನಂದನ್ ಅವರು 'ಚಿಟ್ಟೆ'ಯಿಂದ 'ಪಂಚಗವ್ಯ'ಕ್ಕೆ ಗೋಕುಲ ಸಹೃದಯನ ವಿಕಾಸವಾದವನ್ನು ನುರಿತ ನಿರ್ದೇಶಕರಿಂದ ಪ್ರಯೋಗಿಸಿದ್ದಾರೆ. ಅದರ ಫಲಿತವು ವೇದಿಕೆಯಲ್ಲಿ ಪೂರ್ಣಗೊಂಡಿದೆ.
ಪಂಚಗವ್ಯ ಎಂಬ ಭಾರತೀಯ ಪುರಾಣ ಕಾವ್ಯಗಳಲ್ಲಿ ಆದರ್ಶಗೊಂಡ ಪ್ರಹ್ಲಾದ, ನಚಿಕೇತ, ಧ್ರುವ, ಅಷ್ಟಾವಕ್ರ ಹಾಗೂ ಬಾಲಕ ಶಂಕರ(ಶಂಕರಾಚಾರ್ಯರು) ಈ ಪಾತ್ರಗಳು ತಂದೆ, ತಾಯಿ, ದೇವರು, ಗುರು ಮೊದಲಾದಂತೆ ಮುಖಾಮುಖಿಗೊಳ್ಳುವ ಮುಖ್ಯ ಕಥನಗಳನ್ನು ಒಂದೊಂದು ಭಾಗಗಳಲ್ಲಿ ಜೋಡಿಸಲಾಗಿದೆ. ಪ್ರತಿ ಕಥನವೂ ಕೂಡ ಪೂರ್ಣತೆ ಸಾರುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ 'ಪಂಚ' ವಿಶೇಷತೆಯನ್ನು ಹೇಳುತ್ತಲೇ ಅಂತಹ ವ್ಯಕ್ತಿತ್ವಗಳ ದರ್ಶನವಿಲ್ಲಿದೆ.
ಗೋಕುಲ ಸಹೃದಯನೆಂಬ ನಟನು ಕಟ್ಟುವ ಏಕವ್ಯಕ್ತಿ ಪ್ರಯೋಗವು ಆರಂಭದಿಂದ ಕೊನೆಯವರೆಗೂ ಜ್ಞಾನ, ಕುತೂಹಲ, ಅಭಿನಯಗಳ ಮೂಲಕವೇ ಪ್ರತಿ ಕ್ಷಣವನ್ನೂ ಹಿಡಿದಿಡುವ ಶಕ್ತಿಯು ಅದ್ಭುತವಾಗಿದೆ. ಈ ನಟನು ಈಗಾಗಲೇ ಬಹು ಎತ್ತರಕ್ಕೆ ಬೆಳೆದು ದಾಖಲೆಗಳನ್ನು ನಿರ್ಮಿಸಿರುವ ಕಾರಣ, ಶ್ರಮಕ್ಕೆ ತಕ್ಕ ಫಲ ಸಹಜವಾಗಿಯೇ ಲಭಿಸಿದೆ. ಹಿರಣ್ಯ ಕಶಿಪುವಿನ ಮೂಲಕ ಉಗ್ರನರಸಿಂಹ, ಯಮ, ವಂದಿನ ಮೊದಲಾದ ಧೀರ, ಉಗ್ರ ಪಾತ್ರಗಳ ಮೂಲಕ ತನ್ನ ವಯಸ್ಸನ್ನೇ ಮೀರಿ ಅಭಿನಯಿಸುವ ಕಲೆಗೆ ಸಾವಿರ ಶರಣು ಎನಿಸುತ್ತದೆ. ಈಗಾಗಲೇ ಚಿಟ್ಟೆಯಾಗಿ ಮಿಂಚಿದ್ದ ಈತನಿಗೆ ಪ್ರಹ್ಲಾದ, ನಚಿಕೇತ, ಧ್ರುವ, ಬಾಲ ಶಂಕರ ಪಾತ್ರಗಳ ಅಭಿನಯ ಕಷ್ಟವಾಗಲಿಲ್ಲ. ಈ ದೃಷ್ಟಿಯಿಂದ ಏಷ್ಯಾ ಬುಕ್ ಆಫ್ ರೆಕಾರ್ಡ್ಗೆ ಈತ ಅರ್ಹನು. ಚಿಟ್ಟೆಯ ಧ್ವನಿ ಬೆಳೆದು ಪಂಚಗವ್ಯದಲ್ಲಿ ಕಾಣುವ ಅಭಿವ್ಯಕ್ತಿಯು ಭವಿಷ್ಯದ ರಂಗ ಕಲಾ ನಟನ ಸ್ಥಾನಕ್ಕೆ ಅರ್ಹತೆ ಪಡೆದಿದ್ದಾನೆ. ನವರಸಗಳ ಲೀಲಾಜಾಲ ಅಭಿನಯದಿಂದ ಈ ಕಾಲದ ಯುವಕರಿಗೆ ಮಾದರಿ ಪಠ್ಯವಾಗುವ ಶಕ್ತಿ ಈ ನಟನೆಗಿದೆ.
ಮನ ಸೆಳೆಯುವ ಅಭಿನಯ...
ಅಷ್ಟಾವಕ್ರನ ಅಭಿನಯದಲ್ಲಿ ಪ್ರತಿ ಕ್ಷಣವೂ 'ಪ್ರೇಕ್ಷಕರ ಸಹೃದಯ ಸೆಳೆತ'ವು ಮುಂದಿನ ಬಾಲ ಶಂಕರಾಚಾರ್ಯರ ಪಾತ್ರದಲ್ಲಿ ಅಭಿಮಾನವನ್ನು ಧಕ್ಕಿಸಿಕೊಳ್ಳುತ್ತದೆ. ಹಿರಣ್ಯ ಕಶಿಪು, ಯಮ ಏಕಮುಖವಾಗಿಯೇ ಗಾಂಭೀರ್ಯ ಪಡೆದು ನಟನ ಶಕ್ತಿಯನ್ನು ಪ್ರದರ್ಶಿಸುತ್ತವೆ. ಈ ನಾಟಕವು ರಂಗಭೂಮಿ ಪ್ರಯೋಗದಂತೆ ಕಂಡು ಬಂದರೂ ಪೌರಾಣಿಕ ನಾಟಕದ ಎಲ್ಲಾ ಚಹರೆಗಳನ್ನು ಅಭಿವ್ಯಕ್ತಪಡಿಸುತ್ತದೆ. ಧ್ವನಿ ಪ್ರಯೋಗ, ಪೌರಾಣಿಕ ಸ್ವರೂಪದ ಹಾಡುಗಳು, ಸಂಗೀತದಲ್ಲಿ ತಬಲ, ಹಾರ್ಮೋನಿಯಂ ಬಳಕೆ ಇವೆಲ್ಲವೂ ನಮ್ಮ ನಾಟಕ ಸಂಸ್ಕೃತಿಯ ಗುರುತುಗಳನ್ನು ಪ್ರತಿನಿಧಿಸಿ ಪ್ರಯೋಗಗೊಂಡಿವೆ.
ಈಗಾಗಲೇ ಎರಡನೇ ಪ್ರದರ್ಶನ ಕಂಡ ಈ ನಾಟಕವು ನಾಡಿನಾದ್ಯಂತ ಹೆಜ್ಜೆ ಧರಿಸಲಿ. ಒಂದು ಉತ್ತಮ ನಾಟಕ ನೋಡಲು, ಪ್ರದರ್ಶನಮಾಡಲು ಪಂಚಗವ್ಯ ಸೂಕ್ತ ಆಯ್ಕೆ. ಗೋಕುಲ ಸಹೃದಯನಲ್ಲಿ ಬದಲಾವಣೆಯ ಶಕ್ತಿಯು ಅಗಾಧವಾಗಿರುವ ಕಾರಣ, ಅರ್ಥಪೂರ್ಣವಾಗಿ ಕನ್ನಡಿಗರು ಪಂಚಗವ್ಯ ಸವಿಯಬಹುದು.
ರಚನೆ, ವಿನ್ಯಾಸ, ಸಂಗೀತ, ನಿರ್ದೇಶನ - ಡಾ. ಎಸ್. ಎಲ್.ಎನ್ ಸ್ವಾಮಿ
ಡಾ. ರವಿಶಂಕರ್ ಎ.ಕೆ


.jpg)





