ಭಾಷೆಯ ಮಾಂತ್ರಿಕತೆ – ಕೆ. ವಿ ನಾರಾಯಣ
ಕೆ. ವಿ. ನಾರಾಯಣ ಅವರ ಚಿತ್ರ
ಪರಿಚಯ:
ಡಾ. ಕೆ.ವಿ. ನಾರಾಯಣ :- ಹುಟ್ಟಿದ್ದು 1948ರಲ್ಲಿ. ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲೋಕು ಕಂಪಲಾಪುರದಲ್ಲಿ. ಅಮ್ಮ ಕೆಂಚಮ್ಮ. ಅಪ್ಪ ವೀರಣ್ಣ. ಕೆ. ಆರ್. ಮೊದಲ ಹಂತದ ಓದು ಹುಟ್ಟೂರು ಮತ್ತು ತಾಲೋಕು ಕೇಂದ್ರ ಪಿರಿಯಾಪಟ್ಟಣದಲ್ಲಿ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಙ್ಞಾನವನ್ನು ತೆಗೆದುಕೊಂಡು ಪಿ.ಯು.ಸಿ. ಓದಿದರು. ಇಂಜಿನಿಯರಿಂಗ್ ಮಾಡಲು ಅವಕಾಶವಿದ್ದರೂ ಇಂಜಿನಿಯರ್ ಆಗಕೂಡದೆಂದು ತೀರ್ಮಾನಿಸಿದ ಕೆ.ವಿ.ಎನ್ ಮತ್ತೆ ಮೈಸೂರಿನ ಯುವರಾಜಾಸ್ ಕಾಲೇಜಿನಲ್ಲಿ ವಿಙ್ಞಾನದ ಪದವಿ ಅಭ್ಯಾಸವನ್ನು ಮುಗಿಸಿದರು. ಆನಂತರದಲ್ಲಿ ಬಿಎಡ್ ಮುಗಿಸಿ ಆರಂಭಿಸಿದ್ದು ಹೈಸ್ಕೂಲಿನಲ್ಲಿ ಅಧ್ಯಾಪನ. ಮುಂದಿನ ಓದಿಗಾಗಿ ಮತ್ತೆ ಬೆಂಗಳೂರಿನತ್ತ ಪಯಣ. ಆ ಹೊತ್ತಿಗೇನೆ ಸಾಹಿತ್ಯದ ಓದಿಗೂ ಬಿದ್ದು. ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದ ಕೆ.ವಿ.ಎನ್ ಮುಂದಿನ ಓದಿಗೆ ಆರಿಸಿಕೊಂಡಿದ್ದು ಸಾಹಿತ್ಯವನ್ನು. ಬೆಂಗಳೂರು ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಎಂ.ಎ. ತಮ್ಮ ಒಡನೋದಿಯಾಗಿದ್ದ, ಕನ್ನಡದಲ್ಲಿ ಮಹತ್ವದ ಸ್ತ್ರೀವಾದಿ ಚಿಂತಕಿಯಾಗಿರುವ ಶ್ರೀಮತಿಯವರೊಡನೆ ಒಲುಮೆ ಸಂಭವಿಸಿದ್ದು ಇಲ್ಲೆ. ಗೆಳೆಯರ ಸಮ್ಮುಖದಲ್ಲಿ ಮದುವೆ. ಅಧ್ಯಾಪನ ಕೆಲಸ ಆರಂಭಿಸಿದ್ದು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದ ಜಿ.ಎಸ್.ಎಸ್ ನೇತೃತ್ತ್ವದಲ್ಲಿದ್ದ ಕನ್ನಡ ಅಧ್ಯಯನ ಕೇಂದ್ರಕ್ಕೆ ಸೇರ್ಪಡೆ. ಜಿ.ಎಸ್.ಎಸ್ ಮಾರ್ಗದರ್ಶನದಲ್ಲಿ ಆನಂದವರ್ಧನನ "ಧ್ವನ್ಯಾಲೋಕ -ಒಂದು ಅಧ್ಯಯನ" ಮಾಡಿ ಪಿಎಚ್ ಡಿ ಪದವಿ ಪಡೆದರು. ಬೋಧಿಸಿದ್ದು ಸಾಹಿತ್ಯ, ಸಾಹಿತ್ಯ ಮೀಮಾಂಸೆ ಮತ್ತು ಭಾಷಾಶಾಸ್ತ್ರವನ್ನು. ವಿಙ್ಞಾನದ ತಾತ್ವಿಕತೆಯನ್ನಿರಿಸಿಕೊಂಡೇ ಕೆ.ವಿ.ಎನ್ ಬೆಳೆದಿದ್ದು ವಿಮರ್ಶಕರಾಗಿ, ಭಾಷಾಶಾಸ್ತ್ರಜ್ಞರಾಗಿ, ಕನ್ನಡ ಸಂಸ್ಕೃತಿ ಚಿಂತಕರಾಗಿ. ತಿಳುವಳಿಕೆ ಮತ್ತು ನಡವಳಿಕೆ ಎರಡರಲ್ಲೂ ಸರಳವಾಗಿರುವ ಕೆ.ವಿ.ಎನ್ 1993ರಲ್ಲಿ ಕನ್ನಡಿಗರ ಕನಸಿನ ಸಂಸ್ಥೆಯಾಗಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಬಂದ ಶುರುವಿನಲ್ಲೇ ರಿಜಿಸ್ಟ್ರಾರ್ ಆಗಿ ಅಲ್ಲಿನ ಆಡಳಿತ ನಿರ್ವಹಣೆಯೊಳಗೂ ಪ್ರವೇಶ ಪಡೆದರು. ಅಲ್ಲಿಂದ ನಿವೃತ್ತಿಯಾಗಿ ಹೊರಗೆ ಬರುವವರೆಗೆ ಹಲವು ಜನ ಕುಲಪತಿಗಳ ಆವಧಿಯಲ್ಲಿ ಆಡಳಿತ ಮತ್ತು ಅಧ್ಯಯನಗಳ ಮೂಲಕ ಕನ್ನಡ ವಿಶ್ವವಿದ್ಯಾಲಯವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ತಮ್ಮ ಅಧ್ಯಾಪನ ಸಂದರ್ಭದಲ್ಲೇ ಶುರುಮಾಡಿದ್ದ ಕನ್ನಡಭಾಷೆ ಮತ್ತು ಕನ್ನಡ ಸಂಸ್ಕೃತಿಯ ಚಿಂತನೆಗಳನ್ನು ಕನ್ನಡ ಸಮಾಜದ ಬೇರುಗಳ ಮೂಲಕ ಅರಸುವ ಕೆಲಸವನ್ನು ಮತ್ತಷ್ಟು ಸ್ಪಷ್ಟವಾಗಿ ಮಂಡಿಸುತ್ತಾ ಬಂದರು. ಈಗಲೂ ಭಾಷೆ, ಸಾಹಿತ್ಯ, ಶಿಕ್ಷಣ ಮತ್ತು ವಿಙ್ಞಾನ ಮೊದಲಾಗಿ ಕನ್ನಡ ಸಮಾಜಕ್ಕೆ ಸಂಬಂಧಿಸಿದ ಯಾವುದರಲ್ಲೂ ಜರೂರಾಗಿ ನಡೆಯಬೇಕಿರುವ ಕೆಲಸ ಇದೆ ಎಂದು ತೊಡಗಿಸಿಕೊಂಡು ಈ ಕಾಲದ ಕನ್ನಡದ ಮಹತ್ವದ ಚಿಂತಕರಾಗಿದ್ದಾರೆ.
(ವಿಕಿಪೀಡಿಯಾ ಮಾಹಿತಿಯನ್ನು ಪಡೆದು ಪರಿಶೀಲಿಸಲಾಗಿದೆ)
ಕೃತಿ ತೊಂಡು ಮೇವು ಮುಖಪುಟ
1 ಕಾಮೆಂಟ್:
ಭಾಷೆಯ ಮಾಂತ್ರಿಕತೆ
ಕಾಮೆಂಟ್ ಪೋಸ್ಟ್ ಮಾಡಿ