ಅಪೂರ್ವ ಒಡನಾಟಕ್ಕೆ
ಗೌರವ ಲಭಿಸಿದೆ
ಮನುಷ್ಯನಿಗೆ ಲೋಕವಿರಾಮದ
ಹಸಿವು ಉಂಟಾದರೆ ಆ ದಿಕ್ಕಿನ ಕಡೆಗೆ ತುಡಿಯುತ್ತಾನೆ. ಅಂತಹ ಲೋಕವಿರಾಮವನ್ನು ತನ್ನ ಯೌವನದಲ್ಲಿಯೇ
ತುಳಿದಿದ್ದರು ಎನಿಸುತ್ತದೆ. ಈ ಆಸಕ್ತಿಯಲ್ಲಿಯೇ ಕನ್ನಡ ನುಡಿಸೇವಕರ ಕುರಿತು ಅಪೂರ್ವ ಒಡನಾಟ ಇವರದು.
ಗಂಭೀರವಾದ ವಿಚಾರಗಳಿಗೆ ಹಾಸ್ಯದ ಲೇಪನವಚ್ಚಿ, ಅವರವರ ರುಚಿ-ಅಭಿರುಚಿಗಳಿಗೆ ಮಾತಿನ ಮಜಲನ್ನು ಕಟ್ಟಿ
ಎಲ್ಲರೊಂದಿಗೆ ಬೆರೆತವರು. ಕುವೆಂಪು, ಹಾ.ಮಾ.ನಾ, ಬೇಂದ್ರೆ ಎಲ್ಲರನ್ನೂ ತನ್ನ ಸಮಕಾಲೀನರಂತೆ ಚಿತ್ರಸುವ
ವ್ಯಕ್ತಿ-ಸಾಹಿತ್ಯ-ಚಿತ್ರಮಾಂತ್ರಿಕರಾಗಿ ನಮ್ಮ ನಡುವೆ ವೇದಿಕೆ ಕೊಟ್ಟಲ್ಲೆಲ್ಲಾ ಬಿಗುಮಾನವಿಲ್ಲದೆ
ಸಂಚಲನ ಮೂಡಿಸುತ್ತಾರೆ. ಸತ್ಯನಾರಾಯಣ ಎಂಬ ಹೆಸರು ಈಗ ಕನ್ನಡದ ಮುಕ್ಕಾಲು ಪಾಲು ಸಾಹಿತ್ಯ ಆಸಕ್ತರ
ಮನೆ-ಮನಗಳಲ್ಲಿದೆ. ಸತ್ಯ, ಸತ್ಯಣ್ಣ, ಮೇಷ್ಟ್ರು ಮೊದಲಾದ ಹೆಸರುಗಳೊಂದಿಗೆ ಹಿರಿಯರಿಂದ-ಕಿರಿಯರವರೆಗೂ
ಪ್ರೀತಿಯ ಸ್ಪರ್ಷತೆ. ಇದಕ್ಕೆ ಕಾರಣವೆಂದರೆ ಅವರ ಸಮನ್ವಯತೆ, ನಿರಂಹಕಾರ, ಎಲ್ಲರೊಂದಿಗೂ ಆಪ್ತವಾಗಿ
ಬೆರೆಯುವ ಗುಣ.
ಕುವೆಂಪು ಕುರಿತು ಗಂಭೀರ ವಿಚಾರಗಳನ್ನೂ ಸರಳವಾಗಿ ಪರಿಚಯಿಸಿಕೊಳ್ಳಲು ‘ಕುವೆಂಪು ಅಲಕ್ಷಿರೆದೆಯ ದೀಪ’ ಕೃತಿಯನ್ನು ನೀಡಿದ್ದಾರೆ. ಹದಿನೈದು ಸಾಹಿತಿಗಳ ಒಡನಾಟದ ಆಪ್ತತೆಯನ್ನು, ಸಂಕ್ಷಿಪ್ತವಾಗಿ ಫೇಸ್ ಬುಕ್ ನಲ್ಲಿ ಕವಿಸಮಯ-ಅಂಕಣ ಬರಹ ರೂಪದಲ್ಲಿ ಹಂಚಿಕೊಂಡ ಪ್ರಸಿದ್ಧಿಯ ಫಲವೇ ‘ಅಪೂರ್ವ ಒಡನಾಟ’. ಇವರು ಈ ಹಿಂದೆ ದ್ವಿತೀಯ ಪಿ.ಯು.ಸಿ.ಯ ಕನ್ನಡ ಭಾಷಾ ಪಠ್ಯ ‘ಸಾಹಿತ್ಯ ಸಂಪದ’ವನ್ನು ಸಂಪಾದಿಸಿದ ಕಾರ್ಯದ ಮೂಲಕ ಮೇಷ್ಟ್ರುಗಳ, ಮಕ್ಕಳ ಮನಸ್ಸಿನಲ್ಲಿ ಇದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ ‘ಕನ್ನಡ ಸಾಹಿತ್ಯ ಸಂಗಾತಿ’, ‘ಸಾಹಿತ್ಯ ವಿಮರ್ಶೆ-2016’ ಹಾಗೂ ತೇಜಸ್ವಿ ಕುರಿತು ಇವರ ಸಂಶೋಧನಾ ಪ್ರಬಂಧ ಕಾರ್ಯವು ಅತ್ಯಂತ ವಿಭಿನ್ನವಾದುದು. ಅಪೂರ್ವ ಒಡನಾಟ ಪ್ರಕಟವಾದ ಮೇಲೆ ಇವರ ಆಪ್ತರು ಸುಮಾರು ಐವತ್ತು ವರ್ಷಗಳ ನಿರಂತರ ಓದಿನ ಫಲವನ್ನು ಆಚೆ ತರಲು ಹಂಬಲಿಸಿದರು. ಚಿಕ್ಕಮಗಳೂರಿನಲ್ಲಿ ತಪಸ್ವಿಯಂತೆ ಬರವಣಿಗೆ ಪ್ರಾರಂಭಿಸಿರುವ ಇವರು ಡುಂಡಿರಾಜರ ಸಾಹಿತ್ಯ ವಿಮರ್ಶೆ ಕುರಿತ ‘ಡುಂಡಿಮಲ್ಲಿಗೆ’, ಅಂಕಣ ಬರಹಗಳ ಕೃತಿರೂಪ ‘ನುಡಿಚಿತ್ರ’, ವಿಮರ್ಶಾ ಲೇಖನಗಳನ್ನು ‘ಕಣ್ಣೋಟ’ವಾಗಿ, ಅಪೂರ್ವ ಒಡನಾಟದಲ್ಲಿ ನೆನಪು ಕಡಿಮೆ ಇದೆ ಎಂದು ಬರೆಯದೆ, ಮುಂದೆ ಮಾಸ್ತಿ ಕುರಿತು ಅಧ್ಯಯನ ಜಾಸ್ತಿಯಿದೆ ಎಂಬಂತೆ ‘ನಗೆಮೊಗದ ಅಜ್ಜ ಮಾಸ್ತಿ’ಯಾಗಿ, ಲಾಲಿತ್ಯದ ಔತಣ ನೀಡುವ ಸತ್ಯಣ್ಣನವರು ‘ಪನ್ನೇರಳೆ’ ಎಂಬ ಲಲಿತ ಪ್ರಬಂಧವನ್ನೂ ಬರೆದಿದ್ದಾರೆ. ಈ ಎಲ್ಲಾ ಕೃತಿಗಳು ವರ್ತಮಾನದ ಹಸಿವಿಗೆ, ಬಾಳ್ವೆಯ ಅರ್ಥಪೂರ್ಣ ಸ್ವೀಕಾರಕ್ಕೆ ಸರಿಯಾದ ಮಾರ್ಗಸೂಚಿ ನೀಡಬಲ್ಲವು ಅನಿಸುತ್ತದೆ.
ಇಂತಹ ನಮ್ಮ ಅಪೂರ್ವ ಒಡನಾಡಿ ವ್ಯಕ್ತಿತ್ವಕ್ಕೆ 2021ನೇ ಸಾಲಿನ ಪ್ರೊ. ಸಿ.ಎಚ್. ಮರಿದೇವರು ಪ್ರತಿಷ್ಠಾನ ದತ್ತಿ ಪ್ರಶಸ್ತಿ ಗೌರವ ಲಭಿಸಿದ್ದು ನಮಗೆ ಸಂತಸ ಮೂಡಿತ್ತು. ಅದೇ ಸಂತಸವು ಹಿಮ್ಮಡಿಯಾಗಿ ಈಗ ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು ನೀಡುವ 2021ರ ಸಾಲಿನ ಪ್ರತಿಷ್ಠಿತ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಲಭಿಸಿರುವುದು ಸಂತಸ ಮೂಡಿಸಿದೆ. ಎಷ್ಟೋ ಸಂದರ್ಭದಲ್ಲಿ ಪ್ರಶಸ್ತಿ ನೀಡುವ, ಪಡೆಯುವ ಕಾರಣಗಳಿಗೆ ಅರ್ಥವಿರದ ಕಾಲದಲ್ಲಿದ್ದೇವೆ. ಆದರೆ ಇಂತಹ ವಿದ್ವಾಂಸರಿಗೆ ಲಭಿಸುವ ಹೊಸಬಗೆಯು ಪ್ರಶಸ್ತಿಯ ಗೌರವವನ್ನು ಹೆಚ್ಚಿಸುತ್ತದೆ.
ಡಾ. ಎಚ್. ಎಸ್ ಸತ್ಯನಾರಾಯಣ ಅವರ ಕುರಿತು- ಚಿತ್ರ ಹಾಗೂ ಅವರ ಭಾಷಣದ ಒಂದು ಮಾದರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ