ಕಳಚಿಬಿಡು ನೋವು - ಅಂಕುರ
ಪಡೆವ ಪ್ರೀತಿಗಳಂತೆ
ಕಳಚುವವು ಮಮತೆಗಳು
ಅಗಲಿಕೆಯು ಅನಿವಾರ್ಯ
ಅರ್ಥ ಮಾಡಿಕೊ ಮನವೆ
ಗೂಡು ಕಟ್ಟುವ ಹಕ್ಕಿ
ಕರುವನಾಕುವ ಪ್ರಾಣಿ
ಕಳಚುವ ಸಂಸಾರ, ತಿಳಿದುಕೊ ವಿಚಾರ
ಸೃಷ್ಟಿಗಳೆಲ್ಲಾ ನಾಶವಾಗಲೇಬೇಕು.
ಹೊಸಪ್ರೀತಿಗೆ ಮನಸು
ಹೊಂದಿಕೊಳ್ಳಲೇಬೇಕು
ಇದೇ ನಿತ್ಯ ಸತ್ಯ ಪ್ರಕಾರ.
ಗಡಿಯಾರದೋಟಕ್ಕೆ ಅರ್ಥವೇ ಇಲ್ಲ
ಹಣದ ಹಂಬಲಕೆ ಸೂತಕವೆ ಎಲ್ಲ
ಲೋಕದಸಿವನು ಕಣ್ತೆರದು ನೋಡು
ಸತ್ತವರಿಗಿಂತ, ಬದುಕಿ ಸಾಯುವರೆ ಜಾಸ್ತಿ.
ಎನ್ನಸಿವು, ನೋವುಗಳು ಲೆಕ್ಕವಲ್ಲ.
ನೆನಪುಗಳಿಗೆ ಅರ್ಥ ಹುಡುಕದೆ,
ಇರುವ ಸತ್ಯಗಳ ಒಪ್ಪಬೇಕಿದೆ.
ಭವಿಷ್ಯವೇ ಕಾಣದ ಜಗತ್ತಿನಲ್ಲಿ,
ಕನಸುಗಳಿಗೆ ಅಲ್ಪವಿರಾಮ ನೀಡಬೇಕಿದೆ.
ನೋವುಗಳು ಏನನ್ನೂ ಸೃಷ್ಟಿಸುವುದಿಲ್ಲ,
ಈಗಾಗಲೇ ಮನೆಗಳು
ಮನಸ್ಸುಗಳು ಖಾಲಿಯಾಗುತ್ತಿವೆ.
ಎಷ್ಟು ದಿನ ಮುಷ್ಟಿ ಗಾತ್ರದಲಿ
ಮುಚ್ಚಿಡುವೆ ಮನವೆ
ನೆನ್ನೆಗೆ ಎಂದಾದರೂ ಅರ್ಥವಿದೆಯೇ!
ನಮಗಿರುವ ಶಕ್ತಿಯಲಿ
ನೋವುಗಳು ಹೊರೆ ತುಂಬಿ
ಹೊರಲೇ ಬೇಕು ನಮ್ಮ ಬದುಕಿಗಾಗಿ.
ನಾಳೆಯ ಹೊಸ ಅರ್ಥಕ್ಕಾಗಿ.