ಸಂಶೋಧನೆ ಎಂಬ ಹೊಸ ಅನುಭವಗಳ ಓದು...
ನನ್ನ ತಂದೆ, ತಾಯಿ ಹಾಗೂ ಅಣ್ಣ ನನ್ನ ಓದುವಿಗಾಗಿ
ಜಗತ್ತಿಗೆ ಪರಿಚಯಿಸಿದರು. ಗುಬ್ಬಿ, ತುಮಕೂರುಗಳಲ್ಲಿ ಓದನ್ನು ಮುಗಿಸಿ, 2011ರಲ್ಲಿ ಕೋಲಾರದ ಬಾಲಕರ
ಕಾಲೇಜಿನಲ್ಲಿ ಓದುತ್ತಿದ್ದೆ. ನನ್ನ ಗುರುಗಳಾದ ಡಾ. ಗೋವಿಂದರಾಯರ ಸಂಶೋಧನಾ ಕಾರ್ಯವನ್ನು ಅವರ ಮಾರ್ಗದರ್ಶಕರಾದ
ನೆನಪಲ್ಲಿ ಸೇರಿ ಹೋದ ವಿ. ನಾಗರಾಜ್ ಮೇಷ್ಟ್ರ ಬಳಿ ಸುಳಿದಾಡಿದ ದಿನಗಳಲ್ಲಿ ಗಮನಿಸುತ್ತಿದ್ದ ನನಗೆ ಸಂಶೋಧನಾ ಆಸಕ್ತಿ ಮೂಡಿತು. ಬೇಂದ್ರೆ ಕೃಷ್ಣಪ್ಪನವರು ಎಂ.ಎ ಓದುವ ಹಂತಕ್ಕೆ ಸ್ಪರ್ಧೆಯ ನೆಪದಲ್ಲಿ ‘ಬೇಂದ್ರೆ
ಸಾಹಿತ್ಯ’ ಓದುವಿನ ಕುತೂಹಲ ಸೃಷ್ಠಿದರು. ಈ ಕುತೂಹಲದಲ್ಲಿ ನನ್ನ ಅಧ್ಯಯನ ಗಮನಿಸಿದ ಡಾ. ಪಿ ಸಂಗೀತ
ಮೇಡಂ ಅವರು ಸಂಶೋಧನೆ ಮಾಡಲು ಪ್ರೇರಣೆ ನೀಡಿದರು. 2012-13ರ ಸಮಯದಲ್ಲಿ ಕೆಲವೇ ವಿದ್ವಾಂಸರು ಮಾತ್ರ
ಬೇಂದ್ರೆ ಸಾಹಿತ್ಯ ಕುರಿತು ಮಾತನಾಡುತ್ತಿದ್ದರು. ಡಾ. ಜಿ. ಕೃಷ್ಣಪ್ಪ ಅವರು ಅಭಿಮಾನದ ಬೇಂದ್ರೆಯಾಗಿ
ಸಾಹಿತ್ಯ ಪರಿಚಾರಿಕೆಯನ್ನು ಕರ್ನಾಟಕದಾದ್ಯಂತ ಪಸರಿಸುತ್ತಿದ್ದರೆ, ಡಾ ಕೆ.ಸಿ ಶಿವಾರೆಡ್ಡಿ ಅವರು
ಬೇಂದ್ರೆ-ಕುವೆಂಪು ಅವರ ಸಾಹಿತ್ಯ ತಾತ್ವಿಕತೆಯನ್ನು ಗಂಭೀರವಾಗಿ ಚರ್ಚಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ
ಬೇಂದ್ರೆ ಕುರಿತ ನನ್ನ ಅಧ್ಯಯನದ ಆಸಕ್ತಿಗೆ ಡಾ. ಕೆ.ಸಿ ಶಿವಾರೆಡ್ಡಿ ಅವರನ್ನು ಮಾರ್ಗದರ್ಶಕರಾಗಿ ಆಯ್ಕೆಮಾಡಿಕೊಂಡೆನು. ಲೀಲೆ ಎಂಬಂತೆ
ಕನ್ನಡ ವಿಶ್ವವಿದ್ಯಾಲಯದ ಸಂಯೋಜಿತ ಕೇಂದ್ರ ‘ಕುವೆಂಪು ಕನ್ನಡ ಅಧ್ಯಯನ ಕೇಂದ್ರ’ ಕುಪ್ಪಳಿಯ ಆಂತರಿಕ
ವಿದ್ಯಾರ್ಥಿಯಾಗಿ ಆಯ್ಕೆಯಾದೆನು. ಪ್ರಯಾಣ ಕುಪ್ಪಳಿಯ ಕಡೆಗೆ ಸಾಗಿತು.
ಕುಪ್ಪಳಿಯಲ್ಲಿನ ಬದುಕು ನನ್ನ ಜೀವನದ ಪ್ರಮುಖ ಅಧ್ಯಾಯ.
ಅಲ್ಲಿನ ಏಕಾಂತ ಬದುಕು, ಹೋಟೆಲ್ ಆಹಾರ, ಸರೋಜಮ್ಮ ಅವರ ಮಾತೃ ಸೇವೆ, ಹಿರೇಕೊಡಿಗೆಯ ನಿವಾಸ, ವಾಜ್ಹಿ
ನೋರೋನ್ನ ಅವರ ಚಿಂತನೆ ಎಲ್ಲವೂ ನನಗೆ ಸಾಕಷ್ಟು ಅನುಭವಗಳ ಮೂಲಕ ಮಲೆನಾಡನ್ನು ಪರಿಚಯಿಸಿತು. ಇದೇ ಸಂದರ್ಭದಲ್ಲಿ
ಪ್ರಾಧ್ಯಾಪಕರ ಹುದ್ದೆ ಕುರಿತ ನನ್ನ ಅಧ್ಯಯನದಲ್ಲಿ ಆತ್ಮೀಯ ಪ್ರವೀಣ್ ಕುಮಾರ್ ಹಾಗೂ ರತ್ನಾಕರ ಸಿ ಎಂಬ
ಇಬ್ಬರ ಸ್ನೇಹ ದೊರೆಯಿತು. ಬರೀ ಸ್ನೇಹವಲ್ಲ, ನನ್ನ ಎಲ್ಲಾ ಬಲವೂ ಆದರು. ಪಿಎಚ್ ಡಿ ಯಲ್ಲಿ ಜೊತೆಯಾದ
ಅಕ್ಕರೆಯ ಅರುಣಕುಮಾರಿ ಮೇಡಂ ಹಾಗೂ ಮೃಣಾಲಿನಿ ಮೇಡಂ ಇವರು ನೀಡಿದ ಅಧ್ಯಯನದ ಆತ್ಮೀಯತೆ, ಧೈರ್ಯ ಹೇಗೆ
ಮರೆಯಲಿ. ಇವರ ಹಿಂದಿನ ಶಕ್ತಿಗಳಾದ ರವಿನಂದನ ಸರ್ ಹಾಗೂ ಮಹದೇವಯ್ಯ ಸರ್ ಅವರ ಪ್ರೀತಿಯೂ ಒಂದೊಂದು
ಅತಿಮಧುರ.
ಹಸಿವಿನ ಚಿಂತೆಯಲ್ಲಿ ಕುಪ್ಪಳಿಯಿಂದ ಕರಾವಳಿಗೆ
ಹೋದೆ, ಆಳ್ವಾಸ್ ನಲ್ಲಿ ಮೇಷ್ಟ್ರಾದೆ. ಇಲ್ಲೆಲ್ಲಾ ಪಿಎಚ್.ಡಿ ಎಂಬುದು ಬಹು ದೊಡ್ಡ ಜವಾಬ್ದಾರಿಯಾಗಿ
ಕಾಡುತ್ತಿತ್ತು. ಗುರುಗಳಾದ ಗೋವಿಂದರಾಯರು ಹಾಗೂ ಜಿ ಕೃಷ್ಣಪ್ಪನವರು ನನ್ನ ಕುಟುಂಬವಾಗಿ ನಿತ್ಯ ಎಚ್ಚರಿಸುತ್ತಿದ್ದರು.
ಅಂತೂ ವಿಶ್ವವಿದ್ಯಾಲಯ ನಿಯಮಕ್ಕೆ ಅನುಗುಣವಾಗಿ ಅಧ್ಯಯನಮಾಡುತ್ತಾ ಬಂದೆ. ಕರಾವಳಿಯಿಂದ ಬೆಂಗಳೂರು
ಬಂದು ಉದ್ಯೋಗ ಬಿಟ್ಟು ಪ್ರಬಂಧ ಬರೆಹವನ್ನು ಮುಗಿಸುವ
ವೇಳೆಗೆ ನೆರಳಾಗಿ ನಿಂತವರು ಆತ್ಮೀಯ ಅನಿತ ಅಕ್ಕ ಅವರು ಹಾಗೂ ಅವರ ಕುಟುಂಬ. ಒಟ್ಟಾರೆ ಅಧ್ಯಯನವೆಂಬುದು
ಒಂದು ಪ್ರಯಾಣ ಎಂದು ತಿಳಿಯಿತು. ಇಷ್ಟೆಲ್ಲಾ ಆತ್ಮೀಯರು ಎಲ್ಲರ ಅಧ್ಯಯನದಲ್ಲೂ ಒಂದೊಂದು ಶಕ್ತಿಯಾಗುತ್ತಾರೆ ಎಂದು ಸದಾ ಬಯಸುತ್ತೇನೆ. ಕನ್ನಡ ವಿಶ್ವವಿದ್ಯಾಲಯ ಸೆಪ್ಟಂಬರ್ 08ರಂದು ನನಗೆ ಮೌಖಿಕ ಪರೀಕ್ಷೆ ಏರ್ಪಡಿಸಿ,
ಅಧಿಸೂಚನೆ ಹೊರಡಿಸಿತು.
ಇದರ ನಡುವೆ ಸಂಶೋಧನೆ ಎಂಬುದು ಒಬ್ಬ ಪ್ರಾಧ್ಯಾಪಕ
ವೇದಿಕೆಯಲ್ಲಿ ಇದ್ದವರಿಗೆ ನಿತ್ಯ ಕಾರ್ಯವೆಂದು ನನ್ನ ಮಾರ್ಗದರ್ಶಕರಾದ ಕೆ.ಸಿ ಶಿವಾರೆಡ್ಡಿ ಅವರು,
ರಹಮತ್ ತರೀಕೆರೆ ಅವರು ಹೇಳುತ್ತಲೇ ಅದೇ ದಾರಿಯಲ್ಲಿ ನಡೆಸಿದರು. ನನ್ನ ಕ್ರಿಸ್ತು ಜಯಂತಿ ಕಾಲೇಜು
ನನಗೆ ನಿತ್ಯವೂ ಸಮಯ, ಸೂಕ್ತ ವ್ಯವಸ್ಥೆ ರೂಪಿಸಿರುವುದು ನಾ ಕಂಡ ಶ್ರೇಷ್ಠ ಶಿಕ್ಷಣ ಸಂಸ್ಥೆಯಲ್ಲೊಂದು.
ಸಂಶೋಧಕರ ವೇದಿಕೆಯನ್ನು ರೂಪಿಸಿ ಜೊತೆಯಾದ ಗೆಳೆಯ ಕುಮಾರಸ್ವಾಮಿ ಬೆಜ್ಜಿಹಳ್ಳಿ ಈ ವಿಚಾರದಲ್ಲಿ ಒಳ್ಳೆಯ ಆತ್ಮೀಯ.
ನನ್ನ ಎಲ್ಲಾ ಸಂತೋಷವನ್ನು ನಿತ್ಯ ತಮ್ಮ ಸಂತೋಷವಾಗಿ
ಬೆನ್ನು ತಟ್ಟುವ ಸಹೋದ್ಯೋಗಿ ಆತ್ಮೀಯರಾದ ಸರ್ವೇಶ್ ಬಂಟಹಳ್ಳಿ ಅವರು, ಚಂದ್ರಶೇಖರ್ ಅವರು, ಸೈಯದ್
ಮುಯಿನ್ ಅವರು. ಇವರಂತ ಆತ್ಮೀಯತೆ ಎಲ್ಲಾ ಅಧ್ಯಯನಕಾರರಿಗೂ ಉದ್ಯೋಗದಲ್ಲಿ ಸಿಗಬೇಕು.
ನನ್ನ ಪಿಎಚ್ ಡಿ ಪರೀಕ್ಷೆ ಮುಗಿಯಿತು ಎಂಬ ವಿಚಾರ ತಿಳಿದ ಡಾ. ಜಿ ಕೃಷ್ಣಪ್ಪ ಅವರು ಅನಾರೋಗ್ಯದ ನಡುವೆಯೂ ನನಗೆ ಮತ್ತೊಂದು ಡಾಕ್ಟರೇಟ್ ದೊರೆಯಿತು ಎಂದು ಕುಟುಂಬ ಸಮೇತ ಖುಷಿ ಪಟ್ಟರು. ಈ ವಿಚಾರ ಪತ್ರಿಕೆಯಲ್ಲಿ ಬಂದಾಗ ನನ್ನ ವಿದ್ಯಾರ್ಥಿಗಳು, ಸ್ನೇಹಿತರು ಇದು ತಮಗೆ ದೊರೆತ ಗೌರವವೆಂದು ಆನಂದಿಸಿದರು. ಇದೆಲ್ಲವೂ ಅಧ್ಯಯನಕ್ಕಿರುವ ಶಕ್ತಿ ಹಾಗೂ ಸಾಧ್ಯತೆ.
ಸಂಶೋಧನೆ ಎಂಬುದು ನನ್ನ ಪ್ರಕಾರ ಹೊಸ ಅಧ್ಯಯನ.
ಅದೊಂದು ಅನುಭವದ ದಾರಿಯ ಸಹಪ್ರಯಾಣ. ಜೊತೆಯಲ್ಲಿ ಸದಾ ಸಾಗೋಣ ಬನ್ನಿ.