ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಆಗಸ್ಟ್ 6, 2017

            ಸ್ನೇಹಕ್ಕೆ ಒಂದು ಸಂವಿಧಾನ


         ಸ್ನೇಹವನ್ನು ಬಾಲ್ಯ ಮತ್ತು ವೃದ್ಧಾಪ್ಯದಲ್ಲಿ ಕಂಡಷ್ಟು ನಿರ್ಮಲವಾಗಿ ಯೌವನದಲ್ಲಿ ಕಾಣುವುದು ಕಷ್ಟ. ಯೌವನವೆಂಬುದು ಕ್ರಿಯೆಯ ಕಾಲದ ಚೋದ್ಯ. ಅಲ್ಲಿ ಪ್ರವೇಶಿಸುವ ಪ್ರೇಮವು ಪ್ರೀತಿಯ ತಾತ್ತ್ವಿಕತೆ ಪಡೆದು ಮನುಷ್ಯನ ಇರುವಂತಿಕೆಯನ್ನೇ ಪ್ರಶ್ನಿಸುತ್ತದೆ. ಆಗ ನಾವು ಸೋಲುತ್ತೇವೆ. ಬಾಲ್ಯ ಬೆಳವಣಿಗೆ ಕಾಣುತ್ತಾ ಯೌವನದ ವೇಳೆಗೆ ನಿರ್ಮಿಸಿಕೊಳ್ಳುವ ಜಗತ್ತು ತನ್ನ ಆಯ್ಕೆಯ ಪ್ರಪಂಚ ಇಲ್ಲಿ ಸದಾ ‘ನಾನು’ ಎಂಬ ಇರುವಂತಿಕೆಯನ್ನು ಗುರ್ತಿಸಿಕೊಳ್ಳುವಾಗ ಸ್ವಾರ್ಥ ಸಹಜವಾಗಿ ನೆರವಾಗುತ್ತದೆ. ಅದಕ್ಕಾಗಿ ವ್ಯಕ್ತಿತ್ವವು ಸ್ನೇಹ, ಪ್ರೀತಿ ಮೊದಲಾದ ಅಸ್ತ್ರ ಬಳಸಿ ಮಾನಸಿಕ ಸಾಂತ್ವಾನ ತಂದುಕೊಳ್ಳುವುದು. ಆಚರಣೆ, ಸಂಭ್ರಮಗಳಲ್ಲಿ ಪರಸ್ಪರ ಕಾಣುವ ಸಾಮೂಹಿಕ ವಿಶ್ವಪ್ರಜ್ಞೆ ನಿತ್ಯ ಕಾಣಲಾಗದು. 
ಸ್ನೇಹವೆ
ಪರಸ್ಪರ ಕಾಣುವ ವ್ಯಕ್ತಿ ಗೌರವ. ಯಾರೂ ಮೇಲಲ್ಲ ಎಂಬ ಗುಣದ ಜೊತೆಗೆ ಇಲ್ಲಿ ಎಲ್ಲರೂ ಮುಖ್ಯವೆಂಬ ಧೀಮಂತಿಕೆ. ಮುಗ್ಧಹಂಚಿಕೆ, ಪರಸ್ಪರ ಪೂರ್ಣ ಅರ್ಪಿಸಿಕೊಳ್ಳುವ ನೈತಿಕ ಜವಬ್ದಾರಿ. ಇನ್ನೊಬ್ಬರನ್ನು ಗೆಲ್ಲಿಸಬೇಕಂಬ ಹಪಾಹಪಿ.

ಸ್ನೇಹದ ಬದ್ಧತೆ..


          ಮನುಷ್ಯ ಸ್ವಾರ್ಥವಾಗುತ್ತಾ ತಾನು ಗಳಿಸಿಕೊಂಡ ಆಪ್ತತೆಯನ್ನು ಕಳಿಚಿಕೊಳ್ಳುವನು. ಕಾರಣ, ಅವನು ಗೆಲ್ಲುವ ದಿಕ್ಕಿನಲ್ಲಿ ತನ್ನ ಸಕಲ ಚಿಂತನೆಗೂ ಬೆಂಬಲ ಇಲ್ಲದಿರುವುದು. ಒಮ್ಮೆ ನಂಬಿಕೆಯನ್ನು ಒಪ್ಪಿಕೊಂಡ ಮೇಲೆ ಅದನ್ನು ಸೂಕ್ಷ್ಮ ಎಳೆಯಲ್ಲೂ ಅನುಮಾನಿಸದೇ ಕಾಪಾಡುವುದೇ ಸ್ನೇಹ ಬದ್ಧತೆಯ ಜವಬ್ದಾರಿ.

                  ಹೀಗೆ ಕಂಡಾಗ..

ಇಂದು ಮಾಧ್ಯಮಗಳೊಂದಿಗೆ ಕಟ್ಟಿಕೊಂಡ ಜವಬ್ದಾರಿಯುತ ಸಂಬಂಧಗಳಲ್ಲಿ ಸ್ನೇಹ ಪ್ರಾಥಮಿಕ ಹಾಗೂ ಫಲಿತ ಗೆಲುವೂ ಕೂಡ. ಪರಿಚಯ ನಿಧಾನವಾಗಿ ಸ್ನೇಹಕ್ಕೆ ಸಿಲುಕುವಾಗ ಬರೀ ಸಂದೇಶವಾಗಿ ಉಳಿದಿರುವ ತೋರಿಕೆಯ ವಾಸ್ತವತೆಯೂ ದರ್ಶನವಾಗುತ್ತದೆ.

       ಸ್ನೇಹವನ್ನು ಮೊದಲು ನಾಶಮಾಡುವ ಅಸ್ತ್ರ ನಂಬಿಕೆಯ ಪ್ರಶ್ನೆ. ಹಣವೇ ಮತ್ತೊಂದು ಮಾರ್ಗದ ಶ್ಮಶಾನ. ಪ್ರೀತಿಗೆ ಹಂಬಲಿಸುವ ಮನೋವಿಕಾರಗಳ ಸಂತೆಯಲ್ಲಿ ಕಾಮವೂ ಒಂದು ನಿಲ್ದಾಣ. ಜವಾಬ್ದಾರಿಗಳಿದಂತೆ ಪಡೆದುಕೊಳ್ಳುವ ಸಮಯ ಸಾಧಕತನ ಪೂರ್ಣ ಕೈಗೊಂಬೆಯಾಗಿ ಆತ್ಮವನ್ನು ಕಳಚಿ ಬಿಡುತ್ತದೆ. ಇಲ್ಲೆಲ್ಲಾ ಸ್ನೇಹ ಸುಂದರ ಹಾಳೆಯಾಗಿ ಬಂದು ನೆನೆಪುಗಳ ಶಾಹಿಯಲಿ ಮಿಂದು ಮತ್ತೆ ನೋಡದ, ಎಂದೂ ಕೂಡದ ಹಿತಶತ್ರು ವ್ಯಾಖ್ಯಾನದಲಿ ಚೂರಾಗುತ್ತದೆ.
ಉಳಿದದ್ದು..

        ಅದೊಂದು ಪೂರ್ಣ ವೃತ್ತಾಕಾರ. ಯಾರೋ ಹೇಗೆ ತಿರುಗಿಸಿದರೂ ಸುಂದರವಾಗಿ ಕಾಣುವ ವಿನೋದ ಶೈಲಿ. ಇಲ್ಲಿ ನಂಬಿಕೆ ರಕ್ತಗತವಾಗಿರುವುದರಿಂದ ಅದನ್ನು ತೋರ್ಪಡಿಸುವ ಅಗತ್ಯ ಇರದು. ಹಾಸ್ಯ ರಸದಲಿ ಹೊರಡುವ ಇದರ ಅಂತರ್ಯಾನವು ಆನಂದದಲ್ಲಿಯೇ ತೇಲುತ್ತಾ ಸುಖಿಸುತ್ತದೆ. ದುಃಖದಲ್ಲಿ ತನ್ನ ಜವಬ್ದಾರಿಯನ್ನು ನಿಭಾಯಿಸುತ್ತಾ ಪೂರ್ಣ ಹೊರೆ ಹೊರುತ್ತದೆ. ಈ ಸ್ನೇಹಕ್ಕೆ ಫಲಾಪೇಕ್ಷೆಯ ನಿರೀಕ್ಷೆ ಇರಲಾರದು. 


         ಜಗತ್ತು ಸ್ನೇಹದ ಹೆಗಲಾದರೆ ಕೂತು ಸವಾರಿಮಾಡುವ ಮನಸುಗಳು ಬೇಕಿದೆ ಬನ್ನಿ ವಯಸಿನ ಅಂತರವಿಲ್ಲ, ಮನಸಿನ ಮಂತ್ರವೇ ಎಲ್ಲ.


ಯಾವುದು ಸದಾ ಸಂತೋಷ ನೀಡುವುದೋ, ಶಾಶ್ವತವಾಗಿ ಉಳಿಯುವುದೋ ಅದೇ ‘ಒಳ್ಳೆಯ’ದು – ಡಿವಿಜಿ

1 ಕಾಮೆಂಟ್‌:

Unknown ಹೇಳಿದರು...

ಗೆಳೆತನಕೆ ನಿಜವಾದ ಕಲ್ಪನೆ ಈ ನಿನ್ನ ಆಲೋಚನೆ, ಗೆಳೆತನವಿರಲಿ ಸದಾ ಆತ್ಮೀಯತೆಯ ಮಡಿಲಲ್ಲಿ.