ಮನೆಗೆ ಬಂದರು ಮೇಷ್ಟ್ರು
ಬಿಳಿಕಚ್ಚೆಯ ಕರಿಕೋಟಿನ
ಶಾಸ್ತ್ರಿ, ಭಟ್ಟರೆಲ್ಲರೂ
ಸವಿಯನುಂಡು, ಕಿವಿಯನಿಂಡಿ
ಎಲೆ ಅಡಕೆ ಮುಡಿ ಮಲ್ಲಿಗೆಯ
ಮನೆಗೆ ಮೇಷ್ಟ್ರು ಇದ್ದರು.
ಉಳ್ಳವರ ಒಲೆಯಲ್ಲಿ
ಭೋಜನ-ಭಾಜನದ ವೇಳೆಯಲ್ಲಿ
ಜಾತಿ-ಧರ್ಮವಿಲ್ಲವೆಂದು
ಸಮಾನತೆಯ ನುಡಿದರು
ಶಾಸ್ತ್ರ, ಕಥೆ, ಕಾವ್ಯಗಳ ಬರೆದರು
ದುಡಿವ ಜನಕೆಲ್ಲಿ ಗುಡಿಯ ಚಿಂತೆ
ದುಡಿಯ ಬಡಿದಂತೆ ದುಡಿದರು
ಎಲ್ಲದಕ್ಕೂ ಹಲ್ಲು ಕಿರಿದರು
ತಲೆಮಾರುಗಳ ತಲೆ ತೂಗಿ
ಹೊಸ ವೇಷಗಳ ತೊಟ್ಟರು
ಅವರು ಬಂದರು ಜೊತೆಗೆ ತಂದರು
ಮೇಷ್ಟ್ರು ಶಾಲೆಗೆ ಎಂದರು
ಪಾಠ ಬಂದಿತು ಬೀದಿಗೆ
ಕಲಿವ ಮಕ್ಕಳು ಕಿಟಕಿ ಗಾಳಿಯ ಕಲಿತು
ಕಿಟಕಿಗಾಗಿಯೇ ದುಡಿಯುತ
ಮನೆಗೆ ಕಿಟಕಿಯಾದರು
ಊರ ಸಂತೆಯ, ಗದ್ದೆ ತೊಗರಿಯ
ಗಾಳ-ದಾಳದ, ಹಾಳು ಬಾವಿಯ
ಚೋಳು ಚಂದಿರ, ಗೋಳು ಮಂದಿರ
ಕುಣಿವ ಕೈಗಳು ನಿಂತವು
ಹಾಡು, ಕಥೆಗಳು ದನಿಯ ಮರೆತವು
ಯಂತ್ರ ಬಂದಿತು, ಬೆವರು ನಿಂತಿತು
ತಂತ್ರದೊಳಗಿದೆ ತತ್ತ್ವವು
ತನ್ನ ಸುಖವನು ಮರೆತ ಕಲಿಕೆಯು
ಪರರ ಸುಖಕೆ ಮೈಚಾಚಿತು
ಹಗಲು ರಾತ್ರಿ ಎನ್ನದೆ ಹೊಟ್ಟೆ ಬಿರಿಯೆ ಬಾಚಿತು
ಎಲ್ಲಾ ಹೋಯಿತು, ಇಲ್ಲೇ ಹಾಯಿತು
ಮೌಲ್ಯ ಮಾರಿದೆ ಮನವನು
ತಾನು ತತ್ತ್ವ, ನೀನು ಸತ್ತ್ವ
ಹೇಳಲೋಸುಗ ಬಾಳು ಮರೆತು
ಮನೆಗೆ ಬಂದರು ಮೇಷ್ಟ್ರು
ಇದೋ...
ನಿರ್ಜೀವ ನಾಕದಿ ಸಜೀವ ಲೋಕ ಎಂದರು.
- ಅಂಕುರ
4 ಕಾಮೆಂಟ್‌ಗಳು:
ಚನ್ನಾಗಿದೆ
ಸೊಗಸಾದ ಕವಿತೆ
ವರ್ತಮಾನದ ಶಿಕ್ಷಣ ವ್ಯವಸ್ಥೆಯ ತಲ್ಲಣಗಳಿಗೆ ಹಿಡಿದ ಕನ್ನಡಿಯಂತಿದೆ ಈ ಕವಿತೆ. ಹಾಗೆಯೇ ಕವಿತೆಯ ಕನ್ನಡಿಯಲ್ಲಿ ಕವಿಯ ಶಿಕ್ಷಣ ತಜ್ಞತೆಯ ಬಿಂಬವೂ ಗೊಚರವಾಗುತ್ತಿದೆ. ಸಮಕಾಲೀನ ಸಮ-ಸಮಸ್ಯೆಯ ಸ್ಪಂದನ ಕವಿತೆ ಇದು. ಅಭಿನಂದನೆಗಳು ರವಿಯಣ್ಣ
ವರ್ತಮಾನದ ಶಿಕ್ಷಣ ವ್ಯವಸ್ಥೆಯ ತಲ್ಲಣಗಳಿಗೆ ಹಿಡಿದ ಕನ್ನಡಿಯಂತಿದೆ ಈ ಕವಿತೆ. ಹಾಗೆಯೇ ಕವಿತೆಯ ಕನ್ನಡಿಯಲ್ಲಿ ಕವಿಯ ಶಿಕ್ಷಣ ತಜ್ಞತೆಯ ಬಿಂಬವೂ ಗೊಚರವಾಗುತ್ತಿದೆ. ಸಮಕಾಲೀನ ಸಮ-ಸಮಸ್ಯೆಯ ಸ್ಪಂದನ ಕವಿತೆ ಇದು. ಅಭಿನಂದನೆಗಳು ರವಿಯಣ್ಣ
ಕಾಮೆಂಟ್ ಪೋಸ್ಟ್ ಮಾಡಿ