ಈ ಬ್ಲಾಗ್ ಅನ್ನು ಹುಡುಕಿ

ಗುರುವಾರ, ಅಕ್ಟೋಬರ್ 14, 2021

ಆಳಾಗ ಬಲ್ಲವನು ಆಳುವನು

 

ಆಳಾಗ ಬಲ್ಲವನು ಆಳುವನು

ಕಾಯಕವು ಉಳ್ಳನಕ| ನಾಯಕನು ಎನಿಸಿಪ್ಪ|

ಕಾಯಕವು ತೀರ್ದ ಮರುದಿನವೆ ಸುಡಗಾಡ

ನಾಯಕನು ಎನಿಪ ಸರ್ವಜ್ಞ||

ಕಾಯಕ ಎಂದರೆ ಕೆಲಸ. ಎಲ್ಲರೂ ಯಾವುದೇ ಒಂದು ಉದ್ಯೋಗವನ್ನು ಮಾಡಬೇಕು. ಆಗ ತಾನೇ ನಾಯಕನಾಗುತ್ತಾನೆ. ಇನ್ನೊಬ್ಬರನ್ನು ಬೇಡದೆ ಬದುಕಬಹುದು. ಕಾಯಕ ಇಲ್ಲದೆ ನಿರುದ್ಯೋಗಿಯಾದರೆ ಯಾವ ಪ್ರಯೋಜನಕ್ಕೂ ಬಾರನು. ಸುಡುಗಾಡಿನ ಅಂದರೆ ಶ್ಮಶಾನದ ನಾಯಕನಂತೆ ಅಪ್ರಯೋಜಕನಾಗುತ್ತಾನೆ. ನಾವು ಬದುಕಬೇಕೆಂದರೆ ಯಾವುದೇ ಒಂದು ಕಾರ್ಯವನ್ನು ಭೇದವಿಲ್ಲದೆ ನಿರ್ವಹಿಸಬೇಕು.

ಆಳಾಗ ಬಲ್ಲವನು ಆಳುವನು ಅರಸಾಗಿ

ಆಳಾಗಿ ಬಾಳಲರಿಯದವನು-ಕಡೆಯಲ್ಲಿ

ಹಾಳಾಗಿ ಹೋಹ ಸರ್ವಜ್ಞ

ಯಾವುದೇ ಕೆಲಸವನ್ನು ಒಲವು ನಲಿವಿನಿಂದ ಮಾಡಬಲ್ಲವನು ಮಾತ್ರ ಜೀವನವನ್ನು ಚೆನ್ನಾಗಿ ರೂಪಿಸಿಕೊಳ್ಳುತ್ತಾನೆ ಎಂಬುದನ್ನು ಹೇಳಲಾಗಿದೆ. ಆಳಾಗಿ ದುಡಿ ಅರಸಾಗಿ ಉಣ್ಣು ಎಂಬ ಗಾದೆ ಇದೆ. ಕಷ್ಟಪಟ್ಟು ದುಡಿದರೆ ಮಾತ್ರ ಅದಕ್ಕೆ ಸೂಕ್ತವಾದ ಪ್ರತಿಫಲ ದೊರೆಯುವುದು. ದುಡಿಮೆಯ ಪ್ರತಿಫಲದಿಂದ ಲಾಭ ಬರುತ್ತದೆ. ಕನಸಿನ ಎಲ್ಲವನ್ನೂ ಸೃಷ್ಟಿಸಿಕೊಳ್ಳಬಹುದು. ನಾಲ್ಕಾರು ಜನಕ್ಕೆ ಉದ್ಯೋಗವನ್ನೂ ಕೂಡ ನೀಡಬಹುದು. ಕಷ್ಟಪಟ್ಟು ಆಳಿನಂತೆ ದುಡಿಯಲು ಇಚ್ಚಿಸದೆ ಸೋಮಾರಿಯಾದರೆ ಕೊನೆಗೆ ಆಳಾಗಿ ಹೋಗುವನು ಎಂದಿದ್ದಾರೆ ಸರ್ವಜ್ಞ.

ಅಲಸಿಕೆಯಲಿರುವಂಗೆ| ಕಲಸಲಂಬಲಿಯಿಲ್ಲ

ಕೆಲಸಕ್ಕೆ ಅಲಸದಿರುವಂಗೆ ಬೇರಿಂದ

ಹಲಸು ಕಾತಂತೆ ಸರ್ವಜ್ಞ||

ಸೋಮಾರಿತನವನ್ನು ಸರ್ವಜ್ಞ ಇಲ್ಲಿ ವಿರೋಧಿಸಿದ್ದಾನೆ. ಸೋಮಾರಿಗಳು ಕೆಲಸಮಾಡದೆ, ಆಲಸ್ಯದಿಂದ(ಸೋಮಾರಿತನ) ಇದ್ದರೆ ತಿನ್ನಲು ಅನ್ನ ಸಿಗುವುದಿಲ್ಲ. ಯಾವುದೇ ಕೆಲಸವಾಗಲಿ ಆಲಸ್ಯ ತೋರದೆ, ಆಸಕ್ತಿ ತೋರಿದರೆ ಶ್ರೀಮಂತಿಕೆ ತಾನಾಗಿಯೇ ದೊರೆಯುತ್ತದೆ. ಅದು ಅಲಸಿನ ಮರವು ಬೇರಿನಿಂದಿಲ್ಲಾ ಅಲಸಿನ ಹಣ್ಣು ಬಿಡುತ್ತಾ ಸಂಭ್ರಮಿಸುವಂತೆ ಕ್ರಿಯಾಶೀಲವ್ಯಕ್ತಿ ಸದಾ ಆನಂದದಲ್ಲಿರುತ್ತಾನೆ.

ಉದ್ಯೋಗ ಉಳ್ಳವನ| ಹೊದ್ದುವುದು ಸಿರಿಬಂದು

ಉದ್ಯೋಗವಿಲ್ಲದಿರುವವನ ಕರದೊಳಗೆ

ಇದ್ದುದೂ ಪೋಕು ಸರ್ವಜ್ಞ||

ಉದ್ಯೋಗ ಇರುವವನು| ಬಿದ್ದಲ್ಲಿ ಬಿದ್ದಿರನು|

ಹದ್ದು ನೆವನವನು ಈಡಾಡಿ ಹಾವ ಕೊಂದೆದ್ದು

ಹೋದಂತೆ ಸರ್ವಜ್ಞ||

        ಈ ಮೇಲಿನ ಎರಡೂ ವಚನಗಳು ಉದ್ಯೋಗವನ್ನು ಕುರಿತು ತಿಳಿಸುತ್ತವೆ. ಕಾಯಕವೇ ಕೈಲಾಸವೆಂದರು ಬಸವಣ್ಣ. ಕಾಯಕವಿದ್ದರೆ ನಾಲ್ಕಾರು ಜನ ನಮ್ಮನ್ನು ಗೌರವಿಸುತ್ತಾರೆ.

ಶ್ರೀಮಂತಿಕೆಯು ತಾನಾಗಿಯೇ ಬರುತ್ತದೆ. ಇರುವ ಬಡತನವ ಕಳೆದು, ತನ್ನ ಕನಸುಗಳನ್ನು ಸಾಕಾರಗೊಳಿಸಬಹುದು. ಇಂದು ವಿದ್ಯೆಯು ಉದ್ಯೋಗ ನಿಮಿತ್ತವಾಗಿ ಸಂಘಟಿತಗೊಂಡಿದೆ. ಉತ್ತಮ ಜ್ಞಾನವಿಲ್ಲದೆಯೂ ಉದ್ಯೋಗ ಲಭಿಸದು. ಇರುವ ಉದ್ಯೋಗವೂ ಇಲ್ಲವಾಗುತ್ತದೆ. ಇರುವ ಸಂಪತ್ತನ್ನು ಸೋಮಾರಿತನದಲ್ಲಿ ಖಾಲಿ ಮಾಡುತ್ತಾ ಬಡವನಾಗುತ್ತಾನೆ, ಬಿಕ್ಷುಕನೂ ಆಗಿಬಿಡುತ್ತಾನೆ. ಉದ್ಯೋಗವನ್ನು ನಾವೇ ಸೃಷ್ಟಿಮಾಡಿಕೊಳ್ಳಬೇಕು. ಅದಕ್ಕೆ ಉತ್ತಮ ಶಿಕ್ಷಣ, ತರಬೇತಿಯೂ ಮುಖ್ಯ. ಇಂತಹ ಕ್ರಿಯಾಶೀಲರು ಎಂದಿಗೂ ಸೋಮಾರಿಗಳಾಗದೆ ಸದಾ ಯಾವುದಾದರೊಂದು ಉದ್ಯೋಗವನ್ನು ಸೃಷ್ಟಿಸಿಕೊಳ್ಳುತ್ತಾರೆ. ಸೋಮಾರಿಯು ಆಲಸ್ಯ, ನಿದ್ರೆಯಲ್ಲಿ ಕಾಲಕಳೆಯುತ್ತಾನೆ. ಕ್ರಿಯಾಶೀಲವ್ಯಕ್ತಿತ್ವವು ಯಾವುದಾದರೊಂದು ಉದ್ಯೋಗದಲ್ಲಿ ನಿರತನಾಗುತ್ತಾನೆ. ಅಂತಹ ಮನಸ್ಸನ್ನು ಸರ್ವಜ್ಞನನು ‘ಆಕಾಶದಿಂದಲೇ ಸಂಚು/ಉಪಾಯವನ್ನು ಮಾಡಿ ಭೂಮಿಯಲ್ಲಿ ಸಾಗುವ ಹಾವನ್ನು ವೇಗವಾಗಿ ಬಂದು ಹಿಡಿದು, ಕೊಂದು ಹೊತ್ತೊಯ್ಯುವಂತೆ’ ಯಾವುದೇ ಅವಕಾಶವನ್ನೂ ಬಿಡದೆ ಉಪಾಯದಿಂದ ಬಳಸಿಕೊಳ್ಳುವುದು ಕ್ರಿಯಾಶೀಲ ವ್ಯಕ್ತಿತ್ತ್ವವಾಗಿರುತ್ತದೆ.

 ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೆ ಮೇಲು

ಮೇಟಿಯಿಂ ರಾಟೆ ನಡೆದುದಲ್ಲದೆ-ದೇಶ

ದಾಟವೆ ಕೆಡುಗು ಸರ್ವಜ್ಞ

ಜೀವಿಗಳ ಹಸಿವನ್ನು ತಣಿಸುವುದಕ್ಕಾಗಿ ದವಸದಾನ್ಯಗಳನ್ನು ಬೆಳೆಯುವ ಬೇಸಾಯದ ವಿದ್ಯೆಯೇ ಮಾನವನ ಎಲ್ಲಾ ಬಗೆಯ ಕಸುಬುಗಳಿಗಿಂತಲೂ ಮೇಲು/ದೊಡ್ಡದೆಂಬುದನ್ನು ಹೇಳಲಾಗಿದೆ .

ಮೇಟಿ ವಿದ್ಯೆ ಎಂದರೆ ಬೇಸಾಯವನ್ನು ಮಾಡುವ ಕುಶಲತೆ ಮತ್ತು ಕಸುಬು. ಮೇಟಿ=ರಾಗಿ/ಬತ್ತ/ಜೋಳ ಮುಂತಾದ ಬೆಳೆಗಳನ್ನು ಒಕ್ಕಣೆ ಮಾಡುವಾಗ ಕಣದ ನಟ್ಟನಡುವೆ ನೆಡುವ ಮರದ ದಪ್ಪನೆಯ ಕಂಬ. ರಾಟೆ ಎಂದರೆ ನೂಲು ತೆಗೆಯುವ ಚರಕ/ಗಾಲಿ/ಚಕ್ರ. ಮೇಟಿಯಿಂದ  ರಾಟೆ ನಡೆಯುವುದು ಎನ್ನುವುದು ಒಂದು ನುಡಿಗಟ್ಟು. ಕೆಲಸಗಳು ಚೆನ್ನಾಗಿ ನಡೆಯುವುದು ಎಂಬ ತಿರುಳಿನಲ್ಲಿ ಬಳಕೆಯಾಗುತ್ತದೆ. ಮೇಟಿಯಿಂ ರಾಟಿ ನಡೆದುದು ಎಂದರೆ ಬೇಸಾಯದಿಂದಲೇ ದೇಶದ ಸಾಮಾಜಿಕ ಬದುಕು, ಸಂಸ್ಕೃತಿ ಮತ್ತು ನಾಗರೀಕತೆಗಳು ಉಳಿದು ಬೆಳೆದು ಬಾಳುತ್ತಿವೆ. ಬೇಸಾಯ ನಡೆಯದಿದ್ದರೆ ದೇಶದ+ಆಟವೇ=ದೇಶದ ಎಲ್ಲಾ ಬಗೆಯ ಚಟುವಟಿಕೆಗಳು  ಕೂಡ  ಕೆಡುಗು=ನಾಶವಾಗುತ್ತವೆ/ಹಾಳಾಗುತ್ತವೆ ಎಂದರ್ಥ. ಕೃಷಿಯನ್ನು ಕುರಿತು ಹೇಳುವ ಸರ್ವಜ್ಞನು ಕೃಷಿಯೇ ದೇಶಕ್ಕೆ ಮೂಲ ಎಂದು ತೀರ್ಮಾನಿಸಿರುವುದು ಸತ್ಯವೆನಿಸುತ್ತದೆ.



ಕಾಮೆಂಟ್‌ಗಳಿಲ್ಲ: