ನಾವು ಮಧ್ಯಮ ವರ್ಗದವರೇ ಹೀಗೆ...
ನಾವು ಮಧ್ಯಮ ವರ್ಗದವರೇ ಹೀಗೆ...
ಮಾತು ಮಾತಿಗೂ
ಜೋತು ಬೀಳುತ್ತೇವೆ.
ಆಡಿದ ಮಾತಿಗೆಲ್ಲಾ
ಅರ್ಥ ಹುಡುಕುತ್ತೇವೆ.
ಹುಡುಕಿದ್ದಕ್ಕೆಲ್ಲಾ
ರೆಕ್ಕೆ ಪುಕ್ಕ ಕಟ್ಟಿ
ನಾವೇ ನೋಯುತ್ತೇವೆ,
ಇಲ್ಲವೆ, ಸದಾ ಬೇಯುತ್ತೇವೆ.
ಮಾತೆಲ್ಲವನ್ನೂ
ಮರೆಯದೇ ಉಳಿಸುತ್ತೇವೆ..
ತಕ್ಕಮಟ್ಟಿಗೆ ರುಚಿ ನೀಡಿ ಬೆಳೆಸುತ್ತೇವೆ.
ನಾವು ಯಾವಾಗಲೂ ಹೀಗೆ,
ಬೆಳೆವವರ ಕಾಲೆಳೆಯುತ್ತಾ
ಮೂಗು ತೂರಿಸುತ್ತಾ
ನಮ್ಮುದ್ದವ, ನಮ್ಮಗಲವ
ತೋರುತ್ತಲೇ
ಇರುತ್ತೇವೆ.
ಮಾರುಕಟ್ಟೆಯಲ್ಲಿ
ಮೆಣಸಿನಕಾಯಿಗೂ,
ಅಕ್ಕಪಕ್ಕದ ತೋಟಗಳಿಗೂ,
ದೂರದೂರಿನ
ಜಮೀನು-ಸೈಟುಗಳಿಗೂ,
ಆಗ ತಾನೇ ಸಿಕ್ಕ
ಸಾಬರು, ಸೇಟುಗಳಿಗೂ,
ನಮ್ಮ ರಾಜ್ಯಗಳ ಮುಖ್ಯಮಂತ್ರಿಗಳಿಗೂ,
ಪ್ರಧಾನಿಗೂ, ವಿದೇಶಾಂಗಕ್ಕೂ
ನಮ್ಮ ಸಲಹೆಗಳು
ಸದಾ ಇರುತ್ತವೆ...
ಬೆಲೆ ಹೆಚ್ಚಳಕೆ ಕುದಿಯುತ್ತೇವೆ
ಕಡಿಮೆ ಎಂದ ಕಡೆ
ಕೈ ಚಾಚುತ್ತೇವೆ...
ಯಾರೂ ಕಾಣದಿದ್ದರೆ
ಜೇಬು ತೆರೆಯುತ್ತೇವೆ.
ಅಪ್ಪ-ಅಮ್ಮನ ಕುರಿತು
ನಮ್ಮದು ಸದಾ
ಭಗವದ್ಗೀತೆಯ ನೀತಿ..
ಗಂಡ-ಹೆಂಡತಿ-ಮಕ್ಕಳ ಕುರಿತು
ಇನ್ನಿಲ್ಲದ ಭೀತಿ.
ಸ್ನೇಹಕ್ಕೆ ಕರ್ಣರಸಾಯನ.
ಅಕ್ಷರಗಳ ಓದಿ-ಬರೆದು
ಬೆಳೆಯಬೇಕಾದ ನಾವು
ಅಳಿಸಿಹೋಗುವ ಮಾತಿಗೆ
ಸದಾ ಮೈಲಿಗೆಯಾಗುತ್ತೇವೆ.
ಕಣ್ತೆರೆಯ ಬೇಕಾದ ನಾವು
ಕಣ್ತೆರಸಲು ಹಂಬಲಿಸುತ್ತೇವೆ.
ನಮ್ಮ ದಾರಿಗೆ ನಾವೇ ಶತ್ರು..
ಲೋಕ ಮೆಚ್ಚಿಸಲು ನಾವೇ
ನಿತ್ಯ ಸಾರ್ವತ್ರಿಕ ಮಿತ್ರು.
-ಅಂಕುರ
1 ಕಾಮೆಂಟ್:
ಹೌದು. ಮಧ್ಯಮವರ್ಗವೇ ಹೀಗೆ
ಇನ್ನೂ ಬಡವರು...
ಕಾಮೆಂಟ್ ಪೋಸ್ಟ್ ಮಾಡಿ