ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಸೆಪ್ಟೆಂಬರ್ 30, 2016

                        @2

                    ಕನಕದಾಸರ ಮರು ಓದು: ಏಕೆ? ಹೇಗೆ?

ಕನಕ ರೂಪಿಸಿದ ಚಿಂತನೆ ಮತ್ತು ಕರ್ನಾಟಕದ ಪರಂಪರೆಯ ಮುಖಾಮುಖಿಯ ನೆಲೆಗಳು

    ಕರ್ನಾಟಕವೂ ಮೂಲತಃ ಜನಪದ ಪರಂಪರೆಯ ಬೇರಿನಿಂದಲೇ ಉದಿಸಿತು. ಇಲ್ಲಿಯ ಎಲ್ಲಾ ಸಾಂಸ್ಕøತಿಕ ಆಯಾಮಗಳು ಇಂತಹ ಪಲ್ಲಟಗಳಿಂದಲೇ ಉತ್ತರ ಕಂಡುಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿವೆ. ಸಾಹಿತ್ಯದ ಅಭಿವ್ಯಕ್ತಿಯ ಕ್ರಮವೇ ವಿಭಿನ್ನವಾದುದು. ಇದೇ ದೃಷ್ಠಿಯಿಂದ ಸಂಗೀತ ವಾಙ್ಮಯವು ಶಾಸ್ತ್ರೀಯದಂತೆ ಜನಪದರ ನೆಲೆಯಲ್ಲೂ ಮೂಡಿ ಸಾಹಿತ್ಯವನ್ನು ಉದುಗಿಸಿಕೊಂಡಿತ್ತು. ಅಂತಹ ಸಾಹಿತ್ಯದ ಎಳೆಗಳು ವಚನ, ಕೀರ್ತನೆ, ಹಾಡುಗಳ ರೂಪದಲ್ಲಿ ಪ್ರಸರಣಗೊಂಡು ಅದು ನೀತಿಯೋಪಾದಿಯಲ್ಲಿ ಶಕ್ತಿ ಹಾಗೂ ಭಕ್ತಿಯ ಸಮನ್ವಯ ಮಾರ್ಗವನ್ನು ಕುರಿತು ಇಪ್ಪತ್ತನೆಯ ಶತಮಾನದವರೆಗೂ ಒಂದು ಪರಂಪರೆಯ ರೀತಿ ಬೆಳೆದು ತುಂಬಾ ವಿಸ್ತಾರವಾದ ಆಯಾಮವನ್ನು ಪಡೆಯುತ್ತಿವೆ.
    15ನೇ ಶತಮಾನದಲ್ಲಿ ರಚನೆಗೊಂಡಿರಬಹುದೆಂಬ ಸಾಹಿತ್ಯದ ಆಧಾರದ ಮೇಲೆ ಕನಕದಾಸರ ಕಾಲಮಾನ ತನ್ನ ಪೂರ್ವಕ್ಕೂ ಹಾಗೂ ಪ್ರಸ್ತುತತೆಗೂ ಒಂದು ಪರಂಪರೆಯನ್ನೇ ರೂಪಿಸಿದೆ ಎಂದು ಅಭಿಪ್ರಾಯಪಡಬಹುದು. ಇಲ್ಲಿ ಪರಂಪರೆಯನ್ನು ಬೇರೆ ಬೇರೆ ರೀತಿಯಲ್ಲಿ ನೋಡುವುದಾದರೂ ಕನಕದಾಸರ ಸಾಹಿತ್ಯ ಮತ್ತು ಅವರ ಆದಿಕೇಶವನ ಭಕ್ತಿ ಎಲ್ಲದಕ್ಕೂ ಅನ್ವಯಗೊಳ್ಳುತ್ತಲೇ ಬೆಳೆವಣಿಗೆ ಸಾಧಿಸುತ್ತಾ ಮತ್ತೆ ಮರು ಓದುವಿಗೆ ದಕ್ಕುತ್ತಿರುವುದು “ಶ್ರೇಷ್ಠ ಸತ್ವ” ಎಂದೇ ಕಾಣುತ್ತದೆ.
    ಕನಕದಾಸರ ಸಾಹಿತ್ಯದ ಮೇಲೆ ಉಂಟಾಗಿರುವ ಅಧ್ಯಯನಗಳನ್ನು ಗಮನಿಸಿದರೆ ಸಂಶೋಧನೆಗಳು, ಗಣಕಾನ್ವಯ, ದರ್ಶನ ಸಂಪುಟಗಳು ಇವೆಲ್ಲಾ ಶಿಸ್ತು ಬದ್ಧವಾಗಿಯೇ ನಡೆದಿವೆ. ಇನ್ನೂ ಕೀರ್ತನೆಗಳಂತೂ ಸಾಮಾನ್ಯರ ಹಾಡುಗಳಾಗಿ ಬೆಳೆದು ಬಂದು ದೇವರ ಸನ್ನಿಧಿಯ ಡಾಳಗಳಾಗಿವೆ ಎಂದು ಬಾಹ್ಯ ನೋಟದಲ್ಲಿ ಗಮನಿಸಬಹುದು. ಆದರೆ ದಾಸಪರಂಪರೆಯ ಸಾಹಿತ್ಯ ನಿರ್ಮಿತಿಯು ವಚನ ಸಾಹಿತ್ಯದಷ್ಟು ಜನರ ಬಳಿ ಸಾಗದೇ ಇರುವುದು ಅದರ ದೌರ್ಬಲ್ಯವಲ್ಲ, ಮಿತಿಯು ಅಲ್ಲ, ಅದು ಹೊಂದಿರುವ ಭಕ್ತಿ ಮಾರ್ಗ. ಸಾಹಿತ್ಯದಲ್ಲಿ ಯಾವುದೇ ಪರಂಪರೆ ಮುಖ್ಯವಾಗಿ ನಿಲ್ಲದೇ ಅಮುಖ್ಯವಾಗಿ ಮರೆಯಾಗದೇ ವಿಶ್ವಮಾನವತ್ವಕ್ಕೆ ಸ್ವಯಂ ಏಣಿಗಳನ್ನು ನಿರ್ಮಿಸುವ ಪ್ರಕ್ರಿಯೆಯೇ ನಿಜವಾದ ಬೆಳವಣಿಗೆ. ಇದೊಂದು ಕನ್ನಡ ಸಾಹಿತ್ಯದ ವೈಶಿಷ್ಟ್ಯ.
    ‘ರಾಮಧಾನ್ಯ ಚರಿತೆ’ ಕನಕದಾಸರ ಕಥನರೂಪದ ಕಾವ್ಯ. ಇದು ತನ್ನೊಡಲ ಕಥೆಯಿಂದಲೇ ಪ್ರಸಿದ್ಧಿ. ಕನ್ನಡ ಕಾವ್ಯ ಪರಂಪರೆಯಲ್ಲಿ ಎರಡು ಮುಖ್ಯ ನೆಲೆಗಳಿವೆ. ಲಿಖಿತ ಹಾಗೂ ಮೌಖಿಕ ಕಾವ್ಯವೆಂಬ ಗ್ರಹಿಕೆಗಳು. ಈ ಎರಡೂ ನೆಲೆಯಲ್ಲಿ ಕನಕದಾಸರು ಸಾಹಿತ್ಯವನ್ನು ಗಮನಿಸಿದ್ದಾರೆ. ಕನ್ನಡ ಪ್ರಾದೇಶಿಕ ಸಂಸ್ಕøತಿಯ ಆವರಣದಲ್ಲಿ ಸಂಸ್ಕøತ ಕಾವ್ಯ, ಛಂದಸ್ಸುಗಳ ಸಮೇತವಾಗಿ ದೀರ್ಘ ಜ್ಞಾನವನ್ನು ಪಡೆದ ಈ ಕವಿಗೆ ಜನಸಾಮಾನ್ಯರ ಅರಿವಿನ ಕಾರ್ಯವೇ ಬಹುಮುಖ್ಯ ನೆಲೆಯಾಗಿತ್ತು. ಆದ್ದರಿಂದಲೇ ಕೀರ್ತನೆಗಳು, ನಳಚರಿತೆ, ಮೋಹನ ತರಂಗಿಣಿ, ಹರಿಭಕ್ತಿಸಾರದಂತಹ ಕೃತಿಗಳು ರಚನೆಗೊಂಡವು.
    ದಾಸ ಪರಂಪರೆಯ ಹಿನ್ನಲೆಯಲ್ಲಿ ಇವರೊಬ್ಬ ಕೀರ್ತನಾಕಾರರು. ಕವಿದೃಷ್ಟಿಕೋನದಲ್ಲಿ ಲಕ್ಷ್ಮೀಶ, ಕುಮಾರವ್ಯಾಸರ ಸಾಲಿನಲ್ಲಿ ಧೀಮಂತವಾಗಿ ಕೂರುವ ಕನ್ನಡ ಪಂಡಿತ. ಇವರ ಸಾಹಿತ್ಯ ಶೈಲಿಯಲ್ಲಿ ಜನಪದ ತತ್ವದ ಸತ್ವವನ್ನು ಪಡೆದು ತನ್ನ ಪ್ರಾದೇಶಿಕ ವಸ್ತು, ಪ್ರಾಣಿ, ಪಕ್ಷಿ, ಸಸ್ಯ, ಧಾನ್ಯ ಸಂಪತ್ತು ಸಾಹಿತ್ಯಕ್ಕೆ ಪ್ರಮುಖ ವಸ್ತುಗಳಾಗಿ ವಚನಕಾರರ ಮೌಖಿಕ ನೆಲೆಗಟ್ಟಿನ ಆಶಯವನ್ನು ಒಂದು ಪರಂಪರೆಯಂತೆ ಮುಂದುವರೆಸಿರುವುದನ್ನು ಕಾಣಬಹುದು. ರಾಮಧಾನ್ಯ ಚರಿತೆಯಂತಹ ಕೃತಿಯು 158 ಪದ್ಯಗಳ ಭಾಮಿನಿ ಷಟ್ಪದಿಯ ರಚನೆಯನ್ನು ಹೊಂದಿದ್ದು, ಸರಳ ನಿರೂಪಣೆ, ಪಾರಾಯಣ ಪರಿಕಲ್ಪನೆಗೂ ದಕ್ಕುವ ಜನಮಾನಸ ಅಂತರ್ವಿಕ್ಷಣೆಯನ್ನು ಹೊಂದಿದೆ. ಕಥೆ ಹೇಳುವ ಜನಪದ ಸೊಗಡು ದೇಶಿಕಾವ್ಯಗಳಾದ ರಾಮಾಯಣ ಹಾಗೂ ಮಹಾಭಾರತದೊಳಗೆ ನಿಂತು ಶಾಂಡಿಲ್ಯಮುನಿಯು ಧರ್ಮ, ನೀತಿಯ ಅಭಿಪ್ರೇರಕನಾದ ಯುಧಿಷ್ಟಿರನಿಗೆ ಕನ್ನಡ ಮಣ್ಣಿನ ಕಥೆ ಹೇಳುವ ಕೌಶಲವೇ ನಮ್ಮ ಸಾಹಿತ್ಯದಲ್ಲಿ ಮೊದಲ ಪ್ರಯತ್ನವೆನ್ನಬಹುದು.     ಕಥೆಯೆಂದರೆ ರಾಗಿ ಭತ್ತಗಳೆಂಬ ಮೇಲು ಕೀಳಿನ ಬರಿ ವಿಡಂಬನೆಯ ವೈರುಧ್ಯದ ಸೊಗಸಷ್ಟೇ ಅಲ್ಲ. ಈ ಕಥೆಯೊಳಗೆ ಒಂದು ವಿಶ್ವ ಮಾನವತ್ವ ಇದೆ. ‘ಯಾರೂ ಮುಖ್ಯರಲ್ಲ; ಯಾರೂ ಅಮುಖ್ಯರಲ್ಲ’ ಎಂಬ ಅಂಶವನ್ನು ಸಹಜವಾಗಿಯೇ ನಿರೂಪಿಸುವ ಕಾವ್ಯವಿದು. ವರ್ಣಭೇದದೊಳಗೆ ಹುಟ್ಟಿಕೊಳ್ಳುವ ಪ್ರಶ್ನೆ ವರ್ಗಭೇದದೊಳಗೆ ಇಂದು ಐಕ್ಯವಾಗುವ ಪ್ರಸ್ತುತ ಸಮಾಜದ ಕನ್ನಡಿಗೆ ಇದೊಂದು ಮಾದರಿ ಕಥೆ. ಉಳ್ಳವರು ಶಿವಾಲಯವ ಮಾಡುವರು ನಾನೇನ ಮಾಡಲಿ ಬಡವನಯ್ಯ ಎಂಬ ಬಡತನದಲ್ಲಿ ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ ಎಂಬ ವಚನಕಾರರ ತಾತ್ವಿಕ ಶ್ರೇಷ್ಠತೆಯು ಪ್ರಸ್ತುತ ಬಡತನವನ್ನು ಪ್ರೀತಿಸುವ ಮದ್ಯಮ ಹಾಗೂ ಕೆಳವರ್ಗಗಳಿಗೆ ಈ ಕಥೆ ಶಕ್ತಿಯನ್ನು ತುಂಬುತ್ತದೆ. ಅದಕ್ಕೆ ರಾಘವನಲ್ಲೇ ರಾಗಿಯ ಮಹಿಮೆಯ ಹೊಗಳಿಕೆಯೊಳಗೆ ಉತ್ತರವಿದೆ. “ಮರುಳೆ ಬಾರೈ ವ್ರಿಹಿಯೆ ಮನದಲಿ ಕೊರಗಿ ಚಿಂತಿಸಲೇಕೆ ನಾವೀ ನರೆದಲಗನತಿಶಯವ ಮಾಡಿದೆವೆಂದು ಕನಲಿದೆಯ ಧರೆಗೆ ಹೊದ್ದಿದ ಕ್ಷಾಮಗಾಲದಿ ಕರುಣದಿಂ ನಡೆತಂದು ಲೋಕವ ಹೊರೆವನದು ಕಾರಣವೆ ಪತಿಕರಿಸಿದೆವು ಕೇಳೆಂದ” ಎಂಬ ರಾಮನ ಸಮನ್ವಯ ತೀರ್ಪು ಲೋಕದ ರಕ್ಷಣೆಯ ಬಹುಮುಖ್ಯ ಜವಬ್ದಾರಿ ಯಾರಮೇಲಿದೆ ಅಗತ್ಯವಾಗಿ ನಾವು ಯಾರನ್ನು ಪ್ರೀತಿಯಿಂದ ಕಾಣಬೇಕೆಂಬ ಸಾರ್ವಕಾಲಿಕ ಸತ್ಯ ಮುಖ್ಯವೆನಿಸುತ್ತದೆ.
    ಇಲ್ಲಿ ಕನಕದಾಸರು ಕಾವ್ಯದ ವಸ್ತು, ಛಂದೋ ಬಂಧ, ಕಥಾ ಹಂದರದ ಜವಾಬ್ದಾರಿಯ ಜೊತೆಗೆ ದೇಸಿ ಚಿಂತನೆಯನ್ನು, ಕನ್ನಡ ಸಂಸ್ಕøತಿಯೊಳಗೆ ಕಟ್ಟಿಕೊಡುವ ಕ್ರಿಯೆ ವಿಶೇಷವಾದುದು. ಆದ್ದರಿಂದಲೇ ಕಿ.ರಂ ನಾಗರಾಜ ಅವರ ಅವರ ರಂಗ ಕಲ್ಪನೆಗೆ ಕಾಲಜ್ಞಾನಿ ಕನಕನಂತೆ ಕಂಡಿರುವುದು. ಈ ದೃಷ್ಟಿ ಕೋನದಲ್ಲಿ ಒಂದು ಪೀಠಿಕೆಯಾಗಿ ಗಮನಿಸುತ್ತಾ ಈಗಾಗಲೇ ನಡೆದಿರುವ ಸಂಶೋಧನೋಪಾದಿಯ ಹಲವು ಬರಹಗಳ ಅಧ್ಯಯನದೊಂದಿಗೆ, ಪ್ರಸ್ತುತ ಸಮಾಜದ ವೈರುಧ್ಯಗಳ ಗ್ರಹಿಕೆಯೊಂದಿಗೆ ರಾಮಧಾನ್ಯ ಚರಿತೆ ಹೊಸ ಓದುವಿಗೆ ದಕ್ಕುತ್ತದೆ. ಧಾನ್ಯಗಳ ಚರಿತ್ರೆ ಒದಗಿಸುವ ಮನುಷ್ಯ ಸಂಬಂಧಿ ಬಿಕ್ಕಟ್ಟಿನ ಪ್ರಶ್ನೆಗಳಿಗಿಂತ ಸತ್ವಶಾಲಿ ಎಂಬ ದರ್ಶನದೊಳಗಿನ ತೀರ್ಪು ಸಮಾಜದ ಎಲ್ಲರಿಗೂ ದಕ್ಕಬೇಕಾದುದು ರಾಮ ಇಲ್ಲಿ ನೆಪ. ಅದೊಂದು ಪಾತ್ರ ಅದನ್ನು ಯಾರೂ ಬೇಕಾದರೂ ನಿರ್ವಹಿಸಬಹುದು. ಏಕೆಂದರೆ ರಾಮನ ಚಿಂತನೆ ಸಮರ್ಥರು ಸದಾ ಗೆಲ್ಲುವರು ಅದಕ್ಕೆ ಸೂಕ್ತ ನೋಟದ ಪರೀಕ್ಷೆ ಮುಖ್ಯ, ಇಲ್ಲಿ ಯಾರನ್ನು ಯಾರೂ ಅಳೆಯಲಾಗದು ಆದ್ದರಿಂದ ಗೌತಮನ ತ್ರಿಮೂರ್ತಿ ನ್ಯಾಯಕ್ಕಿಂತ ಸೆರೆ ಸತ್ಯದಲಿ ಸತ್ವ ಹುಡುಕುವ ಜಾಣ್ಮೆ ಮುಖ್ಯವೆನಿಸುತ್ತದೆ. ಇಲ್ಲಿ ಸತ್ವವೆಂದರೆ ಯಾವುದು ದೀರ್ಘವಾಗಿ, ಶ್ರೇಷ್ಠತೆಯೊಂದಿಗೆ ಇಲ್ಲಿ ಉಳಿಯಬಲ್ಲುದೋ ಅದುವೇ ಆಗಿದೆ. ಡಿ.ವಿ.ಜಿ ಅವರ ಸಾಹಿತ್ಯ ಶಕ್ತಿಯ ಬಹುಮುಖ್ಯ ಚಿಂತನೆ ಇದೇ ಆಗಿದೆ. ಕನಕದಾಸರ ಎಲ್ಲವನೂ ಒಂದರೊಳಗೆ ಅಳವಡಿಸಿಕೊಳುವ ದೇಸಿನೆಲೆಯ ಕಲ್ಪನೆ ಪ್ರಸ್ತುತ ಕೆಲವು ಅರ್ಥಗಳಿಗೆ ಅಖಂಡವೆಂಬ ವಿಶ್ವನೆಲೆ ಸೂಕ್ಷ್ಮವಾಗಿ ಕಾಣಬಹುದು.
                                                                                                                                     -ರವಿಶಂಕರ ಎ.ಕೆ

1 ಕಾಮೆಂಟ್‌:

Unknown ಹೇಳಿದರು...

ಕನಕದಾಸರ ಚಿಂತನೆಗೆ ಕುವೆಂಪುರವರ ಆಲೋಚನೆ ಬೆರೆಸಿ ತಯಾರಿಸಿದ ರಸಪಾಕವೇ ಈ ನಿನ್ನ ಅಕ್ಷರಗಳ ವನಮಾಲೆ...