ಈ ಬ್ಲಾಗ್ ಅನ್ನು ಹುಡುಕಿ

ಮಂಗಳವಾರ, ಜುಲೈ 18, 2017



ಜೀವನ ಪ್ರೀತಿಯ ಸತ್ಯಗಳಲ್ಲಿ ಕುವೆಂಪು ಅವರ ಪಕ್ಷಿಕಾಶಿಯ ಅನನ್ಯತೆ! 
-ಅಂಕುರ
ಈ ಕಿರುಬರಹದ ಧನ್ಯತೆಯನ್ನು ನಮ್ಮ ನಡುವಿನ ಸಾಧಕರತ್ನ ಡಾ.ಕೆ.ಎನ್ ಬಸವರಾಜು ಅವರಿಗೆ ಸಹೃದಯ ಅರ್ಪಣೆ.

ಪ್ರಕೃತಿಯೊಂದಿಗೆ ಆಧ್ಯಾತ್ಮ ಚಿಂತನೆಗಳನ್ನು ಸಮೃದ್ಧಗೊಳಿಸಿದ ಕನ್ನಡದ ಶ್ರೀ ಸಾಮಾನ್ಯ ಚಿಂತನೆಯ ಕವಿ ಕುವೆಂಪು.
ಜಗತ್ತನ್ನು ನಿಸರ್ಗದೊಂದಿಗೆ ಅನುಸಂಧಾನ ಮಾಡುತ್ತಾ ಮನುಷ್ಯನ ಬದುಕಿನ ಅರ್ಥಗಳನ್ನು ನಿರೂಪಿಸಿದವರು. ಅಂತಹ ಒಂದು ಕವಿತೆ ಪಕ್ಷಿಕಾಶಿಯಲ್ಲಿ ಕವಿಯ ಕಾವ್ಯ ಸಾಮರ್ಥ್ಯದ ನೈಜ ಕೈಪಿಡಿ ರೂಪಿಸಿದೆ ಅದೇ ಆನಂದ ಮಯ ಈ ಜಗ ಹೃದಯವೆನ್ನುವ ಸಾರ.
ಪ್ರತಿಯೊಬ್ಬ ಶ್ರೀ ಸಾಮಾನ್ಯನೂ ನಿಸರ್ಗದೊಂದಿಗೆ ಬದುಕನ್ನು ಸವಿಯುವ ಸುಂದರ ಚೈತನ್ಯ ಶಕ್ತಿ ಇಲ್ಲಿದೆ.
ನಿಸರ್ಗವೆಂಬುದು ಹಗಲಿನ ಸೂರ್ಯ ಬೆಳಕಲ್ಲಿ, ಚಂದ್ರನ ಇರುಳು ತಂಪಿನಲ್ಲಿ ಅಮೂರ್ತವಾದ ಆನಂದಧಾಮ. ಇದರಲ್ಲಿ ಸಕಲ ಜೀವಿಗಳೂ ಬದುಕುತ್ತಿವೆ, ಆಹಾರ ಹುಡುಕುವ, ಸಂತಾನ ಹಾಗೂ ವಂಶೋಭಿವೃದ್ಧಿಯ, ಹಾಗೂ ಮುಪ್ಪಿನ ನಿಸರ್ಗ ತಹ ಜನನದಂತೆ ಮರಣವನ್ನು ಕಾಣುವ ಆಹಾರ ಸರಪಳಿಯ ರೂಪವಿದೆ. ಮನುಷ್ಯನೂ ಒಂದು ಜೀವಿ! ಆದರೆ ಈತನ ಬದುಕು ಮಾತ್ರ ಸವಿಯುವ ಸೌಜನ್ಯತೆಯಿಂದಿಲ್ಲ. ಅದಕ್ಕೆ ಕವಿತೆ ಬದುಕುವ ಕಲೆಯ ಪಾಠವನ್ನು ಹೇಳುತ್ತಿದೆ. ನಿಸರ್ಗದಲ್ಲಿ ಅಭಿವ್ಯಕ್ತಗೊಳ್ಳುವ ಯಾವ ಬಗೆಯೂ ಅಪಾಯಕಾರಿಯಾದುದಲ್ಲ, ವಿಕೋಪವೂ ಅಲ್ಲ ಅದೊಂದು ಸಹಜ ಕ್ರಿಯೆ ಅದರೊಂದಿಗೆ ಹೊಂದಿಕೆಯ ಅನುಸಂಧಾನ ಮುಖ್ಯವೆಂದಿದ್ದಾರೆ.ಅದನ್ನೇ ಸೂರ್ಯನು ಬರಿ ರವಿಯಲ್ಲ ಅವನೊಂದು ವಿಜ್ಞಾನದ ಬೀಜ, ನಕ್ಷತ್ರ ಸ್ವರೂಪಿ, ಬೆಳಕಿನ ಅಭೇದ್ಯ ನೈಸರ್ಗಿಕ ಸೃಷ್ಠಿ ಆ ಭ್ರಾಂತಿಯನ್ನು ಅರಿಯುವ ಅಗತ್ಯವಿದೆ.
ರವಿವದನವಾದ ಈ ಜಗತ್ತಿನಲ್ಲಿ ಶಿವ ಸಾಕ್ಷಾತ್ಕಾರವಿದೆ. ಇಲ್ಲಿ ಶಿವ ಹಾಗೂ ಈಶ್ವರ ಬೇರೆ ಬೇರೆ. ಶಿವನೆಂದರೆ ಸರ್ವ ದೈವ ಸ್ವರೂಪಿ. ಅವನಿಗೆ ಪೋರೋಹಿತ ಬಂಧನವಿಲ್ಲ, ಆಡಂಬರದ ಶ್ರೀಮಂತಿಕೆಯಿಲ್ಲ, ಹೆಣ್ಣು ಗಂಡೆಂಬ ಲಿಂಗಭೇದವಿಲ್ಲ. ಸ್ಥಾವರವಿದ್ದರೂ ಅದೊಂದು ನಿಸರ್ಗರೂಢವಾದುದು. ಅದು ಕಲೆಯ ಬಲೆಯು.. ಕಲಾವೃತವಾದ ಕವಿಸಮಯ ಸ್ವರೂಪಿ. ಪ್ರತಿಜೀವಿಯೂ ಅದರ ಅಂಗ. ಇದು ಈ ರೀತಿ ಆಳದ ಸೌಂದರ್ಯವನ್ನು ಸಾಕ್ಷೀಭೂತವಾಗಿಸಿದೆ. ಆದರೆ ಅದನ್ನು ನೋಡುವ ಕಣ್ಣು ಕವಿಸಮಯದ ಕೈಪಿಡಿಯ ದರ್ಶನದಂತಿರಬೇಕು. ಸಾಮಾನ್ಯ ನೋಟಕ್ಕೆ ಇಲ್ಲಿ ಯಾವ ಸೌಂದರ್ಯವೂ ದಕ್ಕದು ಅದೊಂದು ಶವಮುಖದಂತೆ. ಸದಾ ಹಸನ್ಮಖಿ ಆದರೆ ನಿರ್ಜೀವ ಸಾಕ್ಷಿ. ಅದು ಮನುಷ್ಯ ಬದುಕಿನ ಸ್ವರೂಪವಲ್ಲ. 
ಉದಯವೆಂಬುದು ಕುವೆಂಪು ಕಾವ್ಯಕ್ಕೆ ಅನ್ವರ್ಥ. ಇಲ್ಲಿನ ಉದಯ ಕಾಣುವ ಬಗೆಯನ್ನು ತಿಳಿಸುತ್ತದೆ. ನಿಸರ್ಗದ ಪ್ರತಿಕ್ಷಣವೂ ಹಲವು ಉದಯಗಳ ಪ್ರಾರಂಭವನ್ನು ಸಂಖ್ಯೇತಿಸುತ್ತದೆ. ಅದನ್ನು ಕಾಣುವ ಹೃದಯ ನಮಗಿರಬೇಕು ಅದನ್ನು ಒಳಗಣ್ಣು, ಆತ್ಮ (ಮನಸ್ವರೂಪ) ಎನ್ನಬಹುದು. ಕವಿ ಈ ಜಗತ್ತಿನ ವ್ಯಾಪಾರವನ್ನು ರಸೋವೈಶಃವಾಗಿ ಕಾವ್ಯದ ಕಣ್ಣನ್ನು ತೆರೆದಿದ್ದಾರೆ.ಇದನ್ನು ಅಮೃತದ ಹಣ್ಣಾಗಿಸಲು ಪ್ರತಿ ಚರಾಚರದಲ್ಲೂ ಶಿವನ ಕಾಣುವ ಸೌಜನ್ಯತೆಬೇಕು ಏಕೆಂದರೆ ಈ ಜಗತ್ತು ಶಿವನ ಸದನ ನಾವೆಲ್ಲಾ ಇಲ್ಲಿ ಸದಸ್ಯರು, ಭಕ್ತರು, ಶ್ರೀ ಸಾಮಾನ್ಯ ಸಹೃದಯರು ಕಣ್ ತೆರೆದು ಕಲೆಯನ್ನು ವಿಜ್ಞಾನದೊಡನೆ ಮೇಳೈಸಿ ಕಾಣಬೇಕು. ಆನಂದಮಯ ಈ ಜಗಹೃದಯ ನೀ ಹರ್ಷಕಾಣು ಭಯವೇಕೆ ಅನಂತತಮನಾಗು ಎನ್ನುವರು ಕವಿ ಕುವೆಂಪು. ಇಂತಹ ಕಾವ್ಯ ವೈಖರಿ ಹೃದಯದೊಳಗಿನ ಪಕ್ಷಿಗೆ ಅಕ್ಷಿಯ ನೋಟವನ್ನು ತೆರೆದು ಕಾಶಿಯನ್ನೇ ಕೈಲಾಸವಾಗಿಸಿದ ನಮ್ಮ ನಿಸರ್ಗವನ್ನು ನಾವೆಲ್ಲಾ ಏಕತಾನತೆಯಲ್ಲಿ ಸವಿಯೋಣ!
ಸವಿಯ ಸಿಂಚನದಲ್ಲಿ ಹಲವು ಸಾಧಕರ ಕಿರಣ ಸ್ವರೂಪಿ ಕೃಷಿ ತತ್ವ ನಮ್ಮ ನಡುವೆ ದಾರಿ ದೀಪಗಳ ಸಹ ಇರುವುದು ಹರ್ಷನೀಯ  - ಅಂಕುರ





ಕಾಮೆಂಟ್‌ಗಳಿಲ್ಲ: