ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಆಗಸ್ಟ್ 20, 2017

ಜಾನಿಕೆ! - ಅಂಕುರ


ಜಾನಿಕೆ!


ಸೀತಾ!
ನೀನೊಬ್ಬಳೇ ಹೀಗೆ..
ಅದೇ ರಾಮನ ನೆನೆದು
ಚಿತ್ರಪಟದಲಿ ಕನಸು
ಸುತ್ತಿ ಬೇಯುತ್ತಾ
ಸೌಮ್ಯದಲಿ ಕುಳಿತ ಹೆಣ್ಣು!
ರಾಮ ಬದಲಾಗಿ ಎಷ್ಟು ದಿನವಾಯ್ತು!
ಅವನೀಗ ಭಜನೆಯ
ಪಾತ್ರಧಾರಿ..

ಸೀತಾ!
ನಿನ್ನ ಕಷ್ಟಗಳಿಗೆಲ್ಲ
ಸಿಕ್ಕಿತೇ ಉತ್ತರ
ನೊಂದ ನೋವುಗಳಿಗೆ
ಪ್ರಶ್ನೆಯಾದರೂ
ಹುಟ್ಟಿತೇ ಹೇಳು..
ನೀ ಮಾಡಿದ ಪುಣ್ಯಕೆ
ನಿನ್ನ ಏಕಾಂತವೂ ಸ್ವರ್ಗ..

ಸೀತಾ!
ರಾಮ ವೇಷಧಾರಿಯಾದ
ನಾನೀಗ ಅಪರಾಧಿ..
ನಿನ್ನ ಒಂಟಿಯೇ ಬಿಟ್ಟು
ಗುಡಿಯಲಿ ಗೊಂಬೆಯ ಹಾಗೆ
ನಿನ್ನ ಜೊತೆ ನಿಂತು
ಜನ ಮೆಚ್ಚಿಸುವ ಢಾಂಬಿಕ
ಸೋಲುವ ಮುನ್ನ
ಧರ್ಮವ ತೊಳೆಯಲೇ ಬೇಕು
ಸೀತೆ ಇಳೆಗಿಳಿಯಲಿಲ್ಲ
ನೋಡಿ ನನ್ನೊಳಗೆ ಅವಳೀಗ 
ಭದ್ರಕೋಟೆಯೆಂದು
ಲೋಕದ ಕಣ್ಣಿಗೆ ಕಾಣಬೇಕು
ಮನದ ಕಣ್ಣಿಗೆ ನಿನ್ನ ನಾ ಪೂರ್ಣನಾಗಬೇಕು..

ಸೀತಾ,
ಕ್ಷಮಿಸು ನಿನ್ನ ಏಕಾಂತದ
ಈ ಭಗ್ನ ಮೂರ್ತಿಯನ್ನು... - ಅಂಕುರ

 ಜಾನಿಕೆ ಎಂದರೆ ಮೌನದೊಳಗಿನ ಧ್ಯಾನ
 


ಜಾನಿಕೆ ಕುರಿತು ಚಿಂತನೆಗಳು...
    ರಾಮಾಯಣವನ್ನು ಪುರಾಣ ದೃಷ್ಠಿಯಲ್ಲೇ ನೋಡುತ್ತಾ ಅದರ ಪಾತ್ರಗಳಿಗೆ ನ್ಯಾಯ ಒದಗಿಸುತ್ತಾ ಬಂದಿರುವ ನಮ್ಮ ಕವಿಗಳ ಪ್ರಯತ್ನ ದಿನದಿಂದ ದಿನಕ್ಕೆ ಹೊಸ ರೂಪಕವಾಗಿದೆ ವಾಲ್ಮೀಕಿ ವನಕ್ಕೆ. ಆದರೆ ರಾಮಾಯಣವನ್ನು ಆಧ್ಯಾತ್ಮಿಕವಾಗಿಯೂ ಗಮನಿಸುವಾಗ ದೈವೀಪುರುಷ ರಾಮ ವಿಧಿಯ ಲೀಲೆಯನ್ನು ಧರ್ಮಾರ್ಥವಾಗಿ ನಿರ್ವಹಿಸುತ್ತಾನೆ. ರಾಮಾಯಣದಲ್ಲಿ ಹಲವು ಮೌನಗಳಿವೆ, ಹಲವು ಧ್ಯಾನಗಳಿವೆ. ರಾಮನಿಗೆ ಸೀತೆಯ ವಿರಹವಿದ್ದರೂ ಧ್ಯಾನಕ್ಕೆ ತಲ್ಲೀನನಾಗುವುದು. ಹನುಮಂತನಂತಹ ಪಾತ್ರವೂ ಧ್ಯಾನದೊಂದಿಗೆ ಸಂಗೀತಗಳಲ್ಲಿ ಮಹತ್ ಸಾಧಕನಾಗುವುದು ವಿಶಿಷ್ಠವಾಗಿ ನೋಡುತ್ತಲೇ ಬಂದಿದ್ದೇವೆ. ಆದರೆ ಈ ಮೌನದೊಳಗಿನ ಧ್ಯಾನವನ್ನು ಯಾರೂ ತುಂಬಲಾಗಲಿಲ್ಲ.. ರಾಮನಂತೂ ಅದಕ್ಕೆ ಮತ್ತೆ ಮತ್ತೆ ಧರ್ಮಾರ್ಥವಾಗಿ ಪೆಟ್ಟು ನೀಡುತ್ತಲೇ ಬಂದನು. ಹನುಮಂತ, ಲಕ್ಷ್ಮಣ ಇವರಿಗೆಲ್ಲಾ ತಿಳಿಯಲು ಇನ್ನು ಅದೆಷ್ಟು ಶತಮಾನ ಬೇಕೋ! ರಾಮನನ್ನು ಶ್ರೀರಾಮನನ್ನಾಗಿ ನೋಡಿದ ಮೇಲೆ ಅವನ ತಪ್ಪುಗಳು ಧರ್ಮ ಕಾರ್ಯಗಳೇ ಆಗಿಬಿಡುತ್ತವೆ. ಹಾಗೇಯೇ ನಮ್ಮ ವಾಸ್ತವದ ಅದೆಷ್ಟೋ ಬೆಳಕಿನ ಕಿನ್ನರ ಜಗತ್ತು ನಿರ್ವಹಿಸುವ ತಪ್ಪುಗಳು ಸತ್ಯದ ಬಟ್ಟೆತೊಟ್ಟು ಇದೇ ವಾಸ್ತವ ಅನಿಸಿಕೊಂಡಿವೆ. ರಾಮಾಯಣದಲ್ಲಿ ಸೀತೆಗೆ ಅನ್ಯಾಯವಾಗಿದೆ ಎಂಬಂತೆ ನೋಡಿದ ವಿಮರ್ಶಾ ಪಂಥವೊಂದಿದೆ. ಚಿತ್ರಪಟ ರಾಮಾಯಣದಿಂದ, ಸೀತಾಯಣ ಹೀಗೆ ಇತ್ತೀಚಿನ ಉತ್ತರಕಾಂಡದವರೆಗೂ ಸೀತೆಗೆ ನ್ಯಾಯಕೊಡಿಸುವ ಬರಹಗಳೇ ಬಂದವು. ಆದರೆ ಸೀತೆ ವಾಲ್ಮೀಕಿಕಥೆಯಿಂದ ಬದಲಾಗಬಹುದೇ.. ಆಧುನಿಕ ಸೀತಾಸಂವತ್ಸರಗಳು ಜರುಗದಿರುವವೇ.. ಇದು ಬದಲಾವಣೆಯಲ್ಲ ಬರೀ ಬೆಳಕೇ ಹೊರೆತು ಕ್ರಿಯೆಯಲ್ಲ. ಅಗತ್ಯವಾಗಿ ಬೇಕಾಗಿರುವುದು ಸೀತೆಯರ ಕಥೆಗೆ ರಾಮನ ಉತ್ತರ ಬೇಕು ಈಗ ಸೀತೆ ಜಾನಿಕೆ.
    ಸೀತೆ ರಾಮಾಯಣದಲ್ಲಿ ಕೋಪಗೊಳ್ಳಲಿಲ್ಲ, ಕಣ್ಣೀರು ಹಾಕಲಿಲ್ಲ ಏಕೆಂದರೆ ಆಕೆಯದು ಪತಿಭಕ್ತಿಯ ವ್ರತವೆಂದು ಕವಿ ಅಣೆಪಟ್ಟಿ ಕಟ್ಟಿದ ಮೇಲೆ ಸೀತೆಗೆ ಹೇಗೆ ಇವೆಲ್ಲಾ ಸಾಧ್ಯ. ಆದರೆ ಬರಹಗಾರನ ಬಲವಂತದ ಮಾತುಗಳನ್ನು ವ್ಯಾಕರಣದ ಹಾದಿಯಿಂದ ಛಂದಸ್ಸಿನ ಬೀದಿಯಲ್ಲಿ ನುಡಿದರೂ ಇದು ಕೇವಲ ಸೀತೆಯ ಪಾತ್ರದ ದುಡಿಮೆ. ಆದರೆ ನಿಜವಾದ ಸ್ವರೂಪವನ್ನು ಕಣ್ತೆರೆದು ನೋಡಿದರೆ ಸೀತೆಯದು ಜಾನಿಕೆಯ ಸ್ಥಿತಿ. ಅಂದರೆ ಮೌನದೊಳಗಿನ ಧ್ಯಾನ. ಆಕೆ ಎಲ್ಲದಕ್ಕೂ ಮೌನವಾಗಿ ಉತ್ತರಿಸಿದ್ದಾಳೆ. ಧ್ಯಾನದಲ್ಲಿಯೇ ಉತ್ತರ ಕಂಡುಕೊಂಡಿದ್ದಾಳೆ ಸೀತೆಗೆ ಪ್ರಶ್ನೆಗಳು ಹುಟ್ಟಲೇ ಇಲ್ಲ ಹುಟ್ಟಿದರೂ ಅದೊಂದು ಉಪಮೆಯ ಹೊಸಬರಹ. ಇಂತಹ ಜಾನಿಕೆ ಸ್ಥಿತಿಯಲ್ಲಿ ಹಲವು ಸ್ವರೂಪಕ್ಕೆ ಸಿಕ್ಕಿ ಮೌನವಾಗಿರುವ ಹೆಣ್ಣುರೂಪಗಳು ನಮ್ಮ ಸಮಾಜದಲ್ಲಿವೆ. ಇವರಿಗೆ ನ್ಯಾಯಕೊಡುವ ಬರಹ ನಮ್ಮದಲ್ಲ.. ಇವರಂತಾಗದೆ ಹೆಣ್ಣಿನ ಕಣ್ಣು ತೆರೆಸುವುದು ಹಾಗೂ ರಾಮನೊಳಿಗಿನ ಅಂತಃಕರಣವನ್ನು ತೆರೆದು ಸೀತೆಗೆ ತನ್ನ ತಪ್ಪನ್ನು ಒಪ್ಪಿಕೊಂಡು ಕಥೆಯ ರಾಮನ ವಿಧಿಯ ಲೀಲೆಯ ಶಮನಮಾಡಿ ಮನುಷ್ಯ ರಾಮನನ್ನು ಕಣ್ತೆರೆಸಿ ಸೀತೆಗೂ ಜೀವ-ಜೀವನ ಇದೆ ಎಂಬುದನ್ನು ರಾಮನಿಂದಲೇ ಅರ್ಥೈಸುವುದು. ಕಾಲೇಜು ಹಂತದಲ್ಲಿ ಕಣ್ತೆರೆಯಬೇಕಾದ ವಿಶ್ವಪ್ರಜ್ಞೆಯ ಜೀವನ ಪ್ರೀತಿಯನ್ನು ಇಂದಿನ ವ್ಯಾಪಾರಿ ಜಗತ್ತು ಮೊಸಳೆಯಾದಿಯಲಿ ನುಂಗುತಿದೆ. ಸಿನಿಮಾ, ಮಾಧ್ಯಮ, ಪೋಷಕ ಜಗತ್ತು, ಸಾಹಿತ್ಯ ಜಗತ್ತು ಪ್ರಶ್ನಿಸಿಕೊಳ್ಳಬೇಕಿದೆ. ಪ್ರೀತಿಯನ್ನು ಕಾಮವ್ಯಾಮೋಹದಲಿ ತೊಳೆಯುವ ಅನೈತಿಕತೆ ದೂರವಾಗಬೇಕಿದೆ. ಮೌನಕೆ ಧರ್ಮದ ಪೆಟ್ಟು ಇಲ್ಲಿ ಅನಗತ್ಯ. ಧರ್ಮವೆಂದರೆ ಮನುಷ್ಯನನ್ನು ರೂಪಿಸುದೇ ಹೊರೆತು ಹಿಂದಿನಿಂದ ನಿರ್ಮಿಸಿಕೊಂಡು ಬಂದುದಲ್ಲ ಎಂಬ ಸಂದೇಶ ಸಮಾಜಕ್ಕೆ ಮೌನದೊಳಗಿನ ಧ್ಯಾನ ಉತ್ತರಿಸಬೇಕೆದೆ ಸಕಲರೂ ಈ ಕುರಿತು ಚಿಂತಿಸುವ ಪ್ರಯತ್ನ ಮಾಡೋಣ.
 

2 ಕಾಮೆಂಟ್‌ಗಳು:

Unknown ಹೇಳಿದರು...

ಎಂತಹ ಕಲ್ಪನೆ....ವ್ಹಾ..

Unknown ಹೇಳಿದರು...

ಚೆನ್ನಾಗಿದೆ