ಈ ಬ್ಲಾಗ್ ಅನ್ನು ಹುಡುಕಿ

ಸೋಮವಾರ, ಮೇ 25, 2020


ಭಾವನೆಗೆ ಭಾಷೆಯ ತೊಡುಗೆ

ಸಾಹಿತ್ಯ ಚಾಚಿರುವ ಸಹಸ್ರ ಬಾಹುಗಳಲ್ಲಿ ಅವರವರ ಸುಖದಂತೆ ಅಪ್ಪುಗೆ ನಡೆಯುತ್ತಿರುವುದು ವಾಸ್ತವದ ನೋಟ. ಸ್ವಯಂ ಅನುಭೂತಿ (Self Empathy)  ಎಂಬುದು ಸಾಹಿತ್ಯ ಗ್ರಹಿಸುವ ನಿಜವಾದ ಶಕ್ತಿ.

ಇತ್ತೀಚೆಗೆ ಮನಸ್ಸಿನ ಬಿಡುವಿನಲ್ಲಿ ಕೃಷಿಗೊಂಡ ಹಲವಾರು ಸಾಹಿತ್ಯ ಮುಖಗಳನ್ನು ನಿತ್ಯ ಕಾಣುತ್ತಿದ್ದೇವೆ. ತಂಪಾದ ಗಾಳಿಯಾದರೂ ತೂರುವ ಗಾಳಿಯಲ್ಲಿ ಹಲವೆಲೆಗಳ ಕಣ್ಣಾಟಕೆ ಕೆಲವೆಲೆಗಳು ತುಂಬಾ ಕಾಡುತ್ತವೆ. ಈ ಕಾಡುವ ಕ್ರಿಯೆಯಲ್ಲಿ ಸಾಹಿತ್ಯದ ಆಳವಾದ ಬೇರುಗಳಿರುತ್ತವೆ. ಜಿ. ಪಿ ರಾಜರತ್ನಂ ನೂರಾರು ಕೃತಿ ಬರೆದರೂ, ಅವರ ಪ್ರಾಯೋಗಿಕ ಸಾಹಿತ್ಯ ಅನ್ವೇಷಣೆಯಲ್ಲಿ ಕೆಲವು ಮಕ್ಕಳ ಪದ್ಯಗಳು, ಕುಡಕರತ್ನನ ಪದಗಳು ನೀಡಿದ ಅನಂತ ಆಕರ್ಷಣೆಯು, ನಿಸಾರ್ ಅವರು ಜೋಗದ ಸಿರಿಯಿಂದ ಜನಮನ್ನಣೆಯಾದ ಇನ್ನೊಂದು ಚಿತ್ತವೂ ಅತ್ಯಂತ ಅರ್ಥಪೂರ್ಣ.
ಯಾವುದೇ ಸಾಹಿತ್ಯ ರಚನೆಯು Self Empathyಯನ್ನು ಸೃಷ್ಟಿಸದಿದ್ದರೆ ಗಾಳಿಯಲ್ಲಿ ತೇಲುವ ತರಗೆಲೆಯಾಗುತ್ತದೆ.
ಇಂತಹ ಸಂದರ್ಭದಲ್ಲಿ ಕವಿ ಸರ್ವೇಶ್ ಬಂಟಹಳ್ಳಿ ಅವರ  ಮಗಳಿಗಾಗಿ ಬರೆದ ಹಾಡು ಹಲವು ಕಾರಣಗಳಿಂದ ನನಗೆ ಚಿಂತನೆ ಸೃಷ್ಠಿಸಿತು. ಅವರು ತಾಯಿಯ ಕುರಿತು ಬರೆದ ಒಂದು ಕವಿತೆ ಅವರದೇ ರಾಗದಲ್ಲಿ ಹಾಡಾಗಿ ಎಲ್ಲಾ ವಯೋಚೈತನ್ಯಗಳಲ್ಲಿ ಭಾವಮೌನವನ್ನು ಸೃಷ್ಠಿಸಿ ಮರೆಯದ ಹಾಡಿನಲ್ಲಿ ಸ್ಥಾನ ಪಡೆದಿತ್ತು.
ಒಂದು ಹಾಡು ಇಷ್ಟವಾಗಲು ಮೂರು ಕಾರಣ ಇರುತ್ತವೆ.
೧. ಕವಿತೆಯ ಪದಮಿಳಿತ
೨. ರಾಗದೊಂದಿಗೆ ಸಂಗೀತವಾಗುವ ಧ್ವನಿ ಚೈತನ್ಯ
೩. ನಮ್ಮೊಳಗೆ ಸೃಷ್ಠಿಸುವ ಭಾವ ಜಗತ್ತು

ಈ ಮೂರು ಕಾರಣಗಳಿಂದ ಕವಿಯು ಸಹೃದಯರ ಮನಸ್ಸು ಅರಳಿಸಿದ್ದಾರೆ. ಈಗ ಮಗಳಿಗಾಗಿ ಬರೆದ ಹಾಡು ಅತ್ಯಂತ ಆಪ್ತವಾಯಿತು. ತಾಯಿ ಕುರಿತು ಬರೆದ ಕಲ್ಪಿತ ಭಾವಕ್ಕೂ, ಮಗಳ ಕುರಿತು ಬರೆದ ವಾಸ್ತವ ನಿವೇದನೆಗೂ ತುಂಬಾ ವ್ಯತ್ಯಾಸವಿದೆ. ಅಬ್ರಹಾಂ ಲಿಂಕನ್  ತನ್ನ ಮಗನ ಕುರಿತು ಗುರುವಿಗೆ ಬರೆದ ಪತ್ರವು ಇಂದಿಗೂ ಸಾಕಷ್ಟು ತಂದೆ-ಮಕ್ಕಳು-ಗುರು ಇವರ ನಡುವಿನ ಮಾರ್ಗದರ್ಶಿ. ಆದರೆ ಇಲ್ಲಿ ಗುರುವಾಗಿ, ತಂದೆಯಾಗಿ ತನ್ನ ಮಗಳಿಗೆ ವ್ಯಕ್ತಿತ್ವ ಕಲಿಕೆಯ ಪಾಠವನ್ನು ತಿಳಿಸುವ ಕವಿಯು ಕವಿತೆಯಲ್ಲಿ ಮುಖ್ಯ ಪಾತ್ರವಾಗುತ್ತಾರೆ. ಆದರೆ ಆ ಕವಿತೆಯನ್ನು ಜಗತ್ತಿನ ಯಾವುದೇ ತಂದೆ-ಮಗುವಿನ ಸಂಬಂಧ, ಸಂಭಾಷಣೆ, ಮಾರ್ಗಸೂಚಿಯ ನಡುವೆ ಇಟ್ಟು ಗ್ರಹಿಸಬಹುದು.
ಒಂದು ಕವಿತೆಯು ಅರ್ಥಗಳನ್ನು ಸೃಷ್ಠಿಸುವ ಜೀವಕೋಶವಾಗುತ್ತದೆ. ಅರ್ಥಗಳನ್ನು ಕವಿಯ ಕಾವ್ಯಕಾರಣದ ಬಲೆಗೆ ಸಿಲುಕಿಸಿ ಸಾಯಿಸಬಾರದು. ಇತ್ತೀಚಿಗೆ ಸಾಯಿಸುವ ಹಾಗೂ ಸಂಪಾದಿಸುವ ಎರಡೂ ಮಾದರಿಯಲ್ಲಿ ಕವಿತೆಗಳು ಎಲ್ಲೆಲ್ಲೂ ಕಾಣುತ್ತಿವೆ. ಮಗಳಿಗಾಗಿ ಬರೆದ ಹಾಡಾಗಲಿ, ತಾಯಿ ಕುರಿತು ಅಮ್ಮನೆಂದರೆ ಕವಿತೆಯಾಗಲಿ ಸರಳ ಭಾವ ತನ್ಮಯತೆಯೊಂದಿಗೆ ಸಂಪಾದಿಸುವ ಕವಿತೆಯ ಸಾಲಿಗೆ ಸೇರುತ್ತಿವೆ. ಕವಿತೆ ಚೆನ್ನಾಗಿದೆ ಎನ್ನುವುದಕ್ಕಿಂತ ಯಾವ ಕಾರಣಗಳಿಂದ ಚೆನ್ನಾಗಿದೆ ಗಮನಿಸೋಣ!

ಕವಿತೆಯ ಪಠ್ಯ

ಮಗಳಿಗಾಗಿ ಬರೆದ ಹಾಡು

ಅಮ್ಮು ಪಾಪು, ಅಮ್ಮೂ ಪಾಪು
ನಾನ್ನ ಪಾಪು, ನಾನ್ನಾ ಪಾಪು
ಬಾರಮ್ಮ, ಮುದ್ದು ಕಂದಮ್ಮ, ಮುತ್ತು ನೀಡಮ್ಮ
ಅಪ್ಪ ಹೇಳೋ ಮಾತನೊಮ್ಮೆ ಕೇಳಮ್ಮ||ಅಮ್ಮು||

ಆಟದ ಜೊತೆಜೊತೆಗೆ ಜೀವನ ಪಾಠ ಕಲಿಯಮ್ಮ
ಮಾತಿನ ಜೊತೆಜೊತೆಗೆ ಮೌನದ ಭಾವ ತಿಳಿಯಮ್ಮ||
ನಗುವ ನಿನ್ನ ಕಂಗಳ ತುಂಬಾ
ತಂಪನು ಎರಚೊ ಚಂದ್ರನ ಬಿಂಬ
ಎಂದೂ ಇರಲಮ್ಮ, ನನ್ನ ಜೀವ ನೀನಮ್ಮ
ಎಂದೆಂದು ಇರಲಮ್ಮ, ನನ್ನ ಜೀವ ನೀನಮ್ಮ ||ಅಮ್ಮು||

ನಡೆಯೋ ಹಾದಿಯಲಿ ಮುಳ್ಳು ನೂರು ಇರಲಮ್ಮ
ಜಗದಾ ಮಾತುಗಳು ತಿದ್ದಿ ತೀಡುತಿರಲಮ್ಮ||
ಹಮ್ಮಿನ ಮನೆಯ ಗುಮ್ಮನ ಹಾಗೆ
ಸುಮ್ಮನೆ ಸಾಗು ಬಂದರು ಬೇಗೆ
ಗೆಲುವೆ ನೀನಮ್ಮ, ಸೋತು ಗೆದ್ದು ನೋಡಮ್ಮ||ಅಮ್ಮು||

ಬದುಕಿನ ಬಯಲಿನಲಿ ಕಾಣೋ ಬಣ್ಣಗಳೂ ನೂರು
ಕುಂಚದ ಆಸರೆಗೆ ಉಳಿಯೋ ಅಂದವೇ ಚೂರು||
ನಿನ್ನದೆ ಬದುಕು, ನೀನೆ ಬದುಕು
ಜತನದಿ ಚೆಂದಗಾಣಿಸಬೇಕು
ರಾಗವೆ ನೀನಮ್ಮ, ನಾದ ಹೊಮ್ಮುತಿರಲಮ್ಮ||ಅಮ್ಮು||

-ಡಾ. ಸರ್ವೇಶ್ ಬಂಟಹಳ್ಳಿ

ತೆಲುಗು ಪ್ರಭಾವಿತ ಭೂಮಿಕೆಯಲ್ಲಿರುವ ಕವಿಯು ತೆಲುಗು ಪದಗಳನ್ನು ಕನ್ನಡದೊಂದಿಗೆ ಸಹಜವಾಗಿ ತಂದು ಭಾಷೆಯ ಮೈಲಿಗೆಗಳನ್ನು ನಿವಾರಿಸಿದ್ದಾರೆ.
ಪ್ರೀತಿಯ ಮಗಳೆ, ತಂದೆಯ ಮಗಳೆ ನನ್ನ ಮಾತನ್ನು ಕೇಳಲು ಬಾ ಎನ್ನುವಾಗ ಕೃಷ್ಣಮೂರ್ತಿ ಬಿಳಿಗೆರೆ ಅವರ ಹಲವು ಮಕ್ಕಳ ಕವಿತೆಗಳ ಪೀಠಿಕಾ ಪ್ರಯೋಗ ನೆನಪಾಗುತ್ತದೆ. ಒಂದು ಮಗುವಿಗೆ ನಿಸರ್ಗಪಾಠ ಹಾಗೂ ಸಹಜ ಕಲಿಕೆ ಅತ್ಯಂತ ಸೂಕ್ತವೆಂಬ ಆಕಾಂಕ್ಷೆ ಇಲ್ಲಿದೆ. ಔಪಚಾರಿಕವಾಗಿ ಮಕ್ಕಳನ್ನು ಯಂತ್ರಗಳಾಗಿಸುತ್ತಿರುವ ನಮ್ಮ ಶಿಕ್ಷಣ ವ್ಯವಸ್ಥೆಗೆ ಇಲ್ಲಿ ವಿರೋಧವಿದೆ. ವಾಸ್ತವತೆಯ ನಿಸರ್ಗ ಶಾಲೆಯಲ್ಲಿ ಕಾಣುವ ಫಲಿತಾಂಶವಾಗಿ ಈ ಕವಿತೆ ಎಚ್ಚರಿಸುತ್ತದೆ. ಮಾತಿನ ಜೊತೆಜೊತೆಗೆ ಮೌನದ ಭಾವ ತಿಳಿಯಮ್ಮ ಎನ್ನುವ ಸತ್ಯವು ಸಮಾಜಕ್ಕೆ ಸಂಬಂಧಿಸಿದ ಕಿವಿಮಾತಾಗಿದೆ. ಮಗು ಇಲ್ಲಿ ಪಾತ್ರವಾದರೂ ಅದು ಸಮಾಜದ ಸಂಕೇತ!
ಕವಿಯು ಗೆಲುವಿನ ಉಪಮೆಗಳನ್ನು ನೀಡಿ ಅನರ್ಥ ಹಾಡಾಗಿಸುವ ಸಿನಿಮಾ ಮಾದರಿಯನ್ನು ವಿರೋಧಿಸುತ್ತಲೇ ಜೀವನದ ವಾಸ್ತವ ಸತ್ಯಗಳನ್ನು ಎರಡನೇ ಹಂತದಲ್ಲಿ ವಿವರಿಸಿದ್ದಾರೆ. ಸೋಲು ಸಹಜವಾದುದು, ಸೋತು ಗೆಲ್ಲುವ ಅರ್ಥ ಸಾತತ್ಯವು ನಿಜವಾದ ಬದುಕು ಎಂದಿದ್ದಾರೆ. ಜಗತ್ತಿನ ಎಲ್ಲಾ ರೀತಿಯ ಪಾಠಗಳನ್ನು ಎದುರಿಸಲು ಸಜ್ಜುಗೊಳಿಸುವುದು ತಂದೆಯ ಕರ್ತವ್ಯ. ಆ ಶಕ್ತಿಯನ್ನು ತುಂಬುವ ಕಾರಣಕ್ಕಾಗಿ ತಂದೆ ಮಗಳಿಗೆ ಇಷ್ಟವಾಗುವ ಐಕಾನ್ ಪ್ರತಿಭೆ.
ಬದುಕಿನ ಬಯಲಿನಲಿ ಕಾಣೋ ಬಣ್ಣಗಳೂ ನೂರು, ಕುಂಚದ ಆಸರೆಗೆ ಉಳಿಯೋ ಅಂದವೇ ಚೂರು
ವಾಸ್ತವ ಸಮಾಜವನ್ನು ಈ ಎರಡು ಸಾಲಿನಲ್ಲಿ ಸಂಕಲಿಸುವ ಕವಿಯು ಕುಂಚವೆಂಬ ಮಗಳ ಶಕ್ತಿಗೆ ದಕ್ಕುವ ಆಸೆಯ ಮಿತಿಯನ್ನು ಎಚ್ಚರಿಸಿದ್ದಾರೆ. ಈ ಮುಂದಿನ ಬದುಕು ನಿನ್ನದು ಎನ್ನುವಾಗ, ಮುಂದಿನ ಮಕ್ಕಳಿಗೆ ನೀವೆ ಈ ಬದುಕಿನ ಸಂಕೇತ ಹಾಗೂ ತಂದೆಗೆ ಮಕ್ಕಳೇ ಬದುಕೆನ್ನುವ ಭವಿಷ್ಯಕ್ಕೆ ಪರಂಪರೆಯ ಕೊಂಡಿಯನ್ನು ಅರ್ಥಪೂರ್ಣವಾಗಿ ಜೋಡಿಸಿದ್ದಾರೆ. ಸಾಧನೆಯನ್ನು ಸಮಾಜಕ್ಕೆ ಚೆಂದವಾಗಿ ಕಾಣಿಸಬೇಕು ನೀನು ಅಂತಹ ರಾಗವಾಗಿರುವೆ, ಸದಾ ಅದರ ನಾದವಾಗಿ ಹೊಮ್ಮುತ್ತಿರಬೇಕು ಎಂಬ ಆಶಯ ನುಡಿದ್ದಿದ್ದಾರೆ.
ಸರ್ವೇಶ್ ಬಂಟಹಳ್ಳಿ ಅವರು ಈ ಕವಿತೆಯ ಮೂಲಕ ನನಗಂತೂ ವಾಸ್ತವ ಪ್ರಪಂಚವನ್ನು ಮನುಷ್ಯರೆದೆಗಿಳಿಸುವ ಅರ್ಥಪೂರ್ಣ ಕವಿ ಎನಿಸುತ್ತಾರೆ. ಇವರು ಕಟ್ಟುವ ಭಾವಲೋಕದ ಪದಸಂಪತ್ತು ಸರಳವಾಗಿಯೂ, ಸತ್ತ್ವಪೂರ್ಣವಾಗಿಯೂ ಮೂಡಿಬರುತ್ತದೆ.
ಇಂತಹ ಕವಿತೆಯನ್ನು ಇನ್ನೂ ಹಲವು ಆಯಾಮಗಳಲ್ಲಿ ನೋಡಬಹುದು ಎಂಬುದೇ ನನ್ನ ವಿಚಾರ !

-ಅಂಕುರ ೨೫.೦೫.೨೦೨೦


ಫೇಸ್‌ಬುಕ್‌ನಲ್ಲಿ ಕವಿದನಿಯಸಾರದ ಕೊಂಡಿ: 


ಕಾಮೆಂಟ್‌ಗಳಿಲ್ಲ: