ಈ ಬ್ಲಾಗ್ ಅನ್ನು ಹುಡುಕಿ

ಶನಿವಾರ, ಜುಲೈ 4, 2020

ಬೀದಿಗೆ ಬಂದಿದೆ ಸಾವು

ಬೀದಿಗೆ ಬಂದಿದೆ ಸಾವು


ಬೀದಿಗೆ ಬಂದಿದೆ ಸಾವು
ತಣ್ಣಗಾದೆವು ನಾವು
ಚೆಲುವಿಗೂ ಸೋಂಕು ಹತ್ತಿದೆ
ಚಳುವಳಿಕಾರರೆಲ್ಲಾ
ಚಳಿಯಿಡಿದು ಕೂತಿರಲು
ಕವಿಗೆ ಮಾತಿನ ಚಪಲವತ್ತಿದೆ
ವಿಮರ್ಶಕನಿಗೆ ಅರವಳಿಕೆ ನೀಡಿ
ಶ್ರೀ ಸಾಮಾನ್ಯನನ್ನು
ಭಯದಲ್ಲಿ ಅದ್ದುತ್ತಾ
ಸರ್ಕಾರ ಬೆಚ್ಚಾಗಾಗುತ್ತಿದೆ
ಸುದ್ದಿ ನಗರಿಯೆಲ್ಲಾ ಸಾವಿನಾಟ...

ಶಾಸ್ತ್ರ, ಪುರಾಣಗಳೆಲ್ಲಾ
ಓದಿನ ತರ್ಕಗಳಾಗಿ
ನೀತಿ-ಆದರ್ಶಗಳೂ
ಜೀವ ಕುಣಿಕೆಯಲ್ಲಿ
ನೇತಾಡುತ್ತಿವೆ
ಮೇಷ್ಟ್ರು ಹೇಳಿದ ಭಾವನೆಗಳು
ಧೈರ್ಯತುಂಬುತ್ತಿವೆ.

ಭಯವೇ ಬದುಕಾಗಿರುವಾಗ
ಹೊರ ಜಗತ್ತಿನಲ್ಲಿ
ನಂಬಿಕೆಯೂ ಅನುಮಾನದ
ಆಸರೆಪಡೆದಿದೆ
ಚೇತರಿಸಿಕೊಳ್ಳದಾಳಕ್ಕೆ
ಭೀತರಾಗಿದ್ದೇವೆ.

ಹೆಸರು, ಗೌರವಗಳನೆಲ್ಲಾ
ಕಳಚಿಟ್ಟು
ಆಸೆಗಳನ್ನು ಸುತ್ತಿಡು
ಸಾವಿನ ವಾಸನೆ ಎಲ್ಲಿಯಾದರೂ
ಬರಬಹುದು
ನಿನ್ನನ್ನು ಮೊದಲು ನಂಬು
ಯಾರ ದಾಳಕ್ಕೂ
ಬಲಿಯಾಗಬೇಡ.
ನಿನ್ನನ್ನೇ ಪ್ರೀತಿಸುವ
ಜೀವವನ್ನೊಮ್ಮೆ ಹಿತಮಾಡು.
ಈಗಲಾದರೂ
ಅರ್ಥಮಾಡಿಕೋ...
ಸಾವು ಬೀದಿಯಲಿಲ್ಲ,
ನಿನ್ನೊಳಗೆ ಅಡಗಿದೆ
ಕಾಪಾಡಿಕೋ, ನಿನ್ನ ಜ್ಞಾನದಲಿ.
- ಅಂಕುರ ೦೫.೦೭.೨೦೨೦

1 ಕಾಮೆಂಟ್‌:

Unknown ಹೇಳಿದರು...

ನಿಜ ಸರ್.. ನಮ್ಮ ಜಾಗ್ರತೆ ನಾವು ಮಾಡಿಕೊಂಡಿಲ್ಲ ಅಂದರೆ ಸಾವು ಖಚಿತ...