ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಜುಲೈ 17, 2022

ಅವನು ಅವಳು ಇವನು !

 











ಈ ಪದ್ಯ 

ಅವಳಿಗಾಗಿ ಬರೆದೆ

ಎಂದು ಭಾವಿಸಬೇಡಿ,

ಅವಳು

ಈಗಾಗಲೇ ಅವನನ್ನು

ಇಷ್ಟಪಟ್ಟಾಯ್ತು.

ಅವಳ ಪ್ರೇಮಕಥೆಯಲ್ಲಿ

ನಾನೇ ಮೊದಲಿಗ.

ನನ್ನ ಪ್ರೇಮದ ಸ್ವಾದವು

ಅದೆಷ್ಟು ನಿರ್ಮಲವಲ್ಲವೆ,

ಅವಳಿಗಾಗಿ 

ಸಾವಿರ ಪತ್ರಗಳನ್ನು ಬರೆದೆ...

ಅಂದರೆ,

ನಮ್ಮ ಪ್ರೇಮದ ಸ್ವಾದವು

ಸಾವಿರ ದಿನಕ್ಕೂ ಮಿಗಿಲಲ್ಲವೆ!

ವೃತ್ತಿ-ಬಣ್ಣ-ಜಾತಿಗಳ

ಶಪಿಸದ ಅವಳು

ನನಗಾಗಿ ಪರಿತಪಿಸಿದಳು.

ಮೊದಲ ಭೇಟಿಯಲ್ಲಿಯೆ,

ನನ್ನ ಕನಸಂತೆ

ಅಲ್ಲೇ ಸಿಕ್ಕ ಭಿತ್ತಿ ಚಿತ್ರದ 

ಹಾಳೆಯ ಹರಿದು

ನಾಲ್ಕು ಸಾಲು ಬರೆದೆ..

ಹರಿದ ಕೋನಗಳಿಗೆ

ವಿಚಿತ್ರ ರೇಖೆಗಳ ಗೀಚಿ

ಸುಂದರವಾಗಿ ಮಡಚಿ

ನೀಡಿದೆ.

ಹೀಗೆ ಶುರುವಾದ

ಕಥೆಯಲ್ಲಿ

ನನ್ನ ಕವಿತೆಗಳ ಪತ್ರಗಳಿಗಿಂತ,

ನನ್ನ ಹತ್ತಿರದ ಕೆಲವು

ನೆಪಗಳೆ ಹಲವು

ಅವಳ ಕಥೆಗೆ.


ಮುಗಿದ ಕಥೆಗೆ

ಇಷ್ಟೆಲ್ಲಾ ಪೀಠಿಕೆ ಬೇಕೆ?

ಮುಗಿದಲ್ಲೇ ಪ್ರಾರಂಭವಾಗಿದ್ದರೆ,

ಇಷ್ಟು ಬರಹ ಸಾಕೆ!


ಅವನು ಅವಳಿಗಾಗಿ

ಬದಲಾಗಬೇಕಿದೆ

ಲಘಿಮಾ ಕೌಶಲದ ಪಯಣ

ಭವನೀ ಮಜ್ಜನದಲ್ಲಿ

ತಿರುಗಬೇಕಿದೆ

ಅಲ್ಲಿಯೂ ಅವಳನ್ನೇ

ಕಾಣಬೇಕಿದೆ

ಏಕೆಂದರೆ,

ಅವಳ ಎಲ್ಲಾ ಹೊಸ

ಆಯ್ಕೆಗಳೂ ಇವನೇ ಆಗಿವೆ.


ಅವನು ಇವಳಾಗಿ

ಇವಳು ಅವನಾಗಿ

ಒಂದಾಗುವ ಪರಿಗೆ

ನಾನು ಬದಲಾಗಬೇಕಿದೆ.


ನಾನು ಬದಲಾಗದೆಯೆ

ಅವನು ಅವನಾಗುವುದು

ಹೇಗೆ.. ನನ್ನ ಹಾಗೆ!

ಈ ಪರಿಯ ಪದವಿಗೆ

ಈ ಕವಿತೆಯೇ ಕಾರಣ!


ಮತ್ತೆ ಬರೆದಿದ್ದೇನೆ ಕವಿತೆ

ಅವನಾಗುವ ಹಲವು

ಸಿದ್ಧತೆಗಳು ಬೇಕಿವೆ

ಕವಿತೆಯ ನಿಲ್ಲಿಸಿ, ಹೊಸ

ಕಥೆಯಾಗುವ ಪರಿಗೆ

ಅವನು-ಅವಳು ಕಥಾನಾಯಕರು.

ಈ ಪದ್ಯ

ಅವಳಿಗಾಗಿ ಬರೆದೆ

ಎಂದು ಭಾವಿಸಬೇಡಿ.


- ಅಂಕುರ

ಕಾಮೆಂಟ್‌ಗಳಿಲ್ಲ: