ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಅಕ್ಟೋಬರ್ 2, 2022

ಕಾಂತಾರವೆಂಬ ಅದ್ಭುತ ದೇಸಿ ಕಥನ

 

 ಕಾಂತಾರ ಹೆಸರಿನಂತೆಯೇ ಇರುವ ಅಭೇದ್ಯ ಶಕ್ತಿಯ ಸಿನಿಮಾ.

೨೦೨೨ರಲ್ಲಿ ನಾನು ನೋಡಿದ ಅತ್ಯುತ್ತಮ ಸಿನಿಮಾ. ಇದುವರೆಗೂ ರಿಷಬ್ ಶೆಟ್ಟಿಯವರು ಕಾಣಿಸಿದ ಬಗೆಗಿಂತ ಇದು ವಿಭಿನ್ನ ಹಾಗೂ ಹೊಸ ಮಾದರಿ.

ಕನ್ನಡದ ಉತ್ತಮ ನಟನನ್ನು ಗುರ್ತಿಸುವವರಿಗೆ ಇದು ಮಾದರಿ.


ದೈವದ ನೆಪವಾದರೂ, ಅಭಿನಯ ಕಲೆಯು ಪ್ರಾದೇಶಿಕ ಸ್ವರೂಪಕ್ಕೆ ಪೂರ್ಣ ಹೊಂದಿಕೊಂಡು ನೀಡುವ ಬಗೆಯೇ ವಿಶೇಷವಾದುದು.

ಎಲ್ಲಿಯೂ ನೋಡುಗರು ನಿರೀಕ್ಷಿಸುವ ಕಥೆ ಇರದೆ, ಕುತೂಹಲಕಾರಿ ಕಥೆಯನ್ನು ಹೆಣೆಯುತ್ತಾ ಸಾಗುತ್ತದೆ.

ಇದೊಂದು ಸಿನಿಮಾ ಎಂದು ನೋಡುತ್ತಾ ಸಾಗುವವರೂ ಕೂಡ, ಒಂದು ಕಾಲದ ಕರಾವಳಿಯ ಭೂಮಿಕೆಯ ಕಥೆಯನ್ನು ಓದುವ, ಕಾಣುವ ತಲ್ಲೀನತೆಯಲ್ಲಿ ಮುಳುಗಿಹೋಗುತ್ತಾರೆ. ಸಾಹಿತ್ಯ ಓದುಗರಾದ ನಮಗೆ ಇದು ಮತ್ತೆ ಮತ್ತೆ ನೋಡಬಹುದಾದ ಆಸಕ್ತಿ ಉಳಿಸಿದೆ ಎಂದಮೇಲೆ, ಸಾಮಾನ್ಯರಿಗೆ ಅದೆಷ್ಟು ಆಸಕ್ತಿ ಕೆರಳಿಸಬಹುದು ಅನಿಸಿತು.

     ಕೆಳಜಾತಿಯ ಸಮೂಹವು ಅನುಭವಿಸಿದ ನೋವು, ಭೂಮಿಯ ಹಕ್ಕು ಮೊದಲಾದವುಗಳನ್ನೇ ಕೇಂದ್ರವಾಗಿಸಿಕೊಂಡು, ಭೂಮಾಲಿಕರ ಕುತಂತ್ರಗಳನ್ನು ಪರಿಚಯಿಸುವ ಈ ಸಿನೆಮಾದಲ್ಲಿ ಕಂಬಳ, ಕೋಳಿ ಅಂಕ, ಭೂತಕೋಲ, ಯಕ್ಷಗಾನ ಮೊದಲಾದ ದಕ್ಷಿಣ ಕನ್ನಡದ ಸಂಸ್ಕೃತಿಗಳನ್ನು ಕಥೆಗೆ ತಕ್ಕಂತೆ ಮೇಳೈಸಲಾಗಿದೆ.

ರಿಷಿಬ್ ಅವರು ತೋರಿಸುವ ದೈವದಾಟ, ಭೂತಕೋಲದ ಕುಣಿತವು ಮನಸ್ಸಿನಲ್ಲಿ ಶಾಶ್ವತವಾಗಿ ಅಚ್ಚಳಿಯದೇ ಉಳಿಯುತ್ತದೆ. ಇಲ್ಲಿನ ಹಲವು ಪಾತ್ರಗಳು ಕೂಡ ದಕ್ಷಿಣ ಕನ್ನಡ, ಕುಂದಾಪುರ, ಉತ್ತರ ಕನ್ನಡ ಭಾಗಗಳ ದೇಸಿ ಪ್ರತಿಭೆಗಳೇ ಆಗಿರುವುದು ವಿಶೇಷ. 

ಭಾಷೆ, ಪ್ರದೇಶಗಳ ಮೀರಿ ನೋಡಬಹುದಾದ ಇದೊಂದು ಕನ್ನಡ, ತುಳು ಹಾಗೂ ಭಾರತೀಯ ಸಿನಿಮಾ ಎನಿಸಿತು.


- ಮೊದಲ ನೋಟದ ಅನಿಸಿಕೆ

ಡಾ. ರವಿಶಂಕರ್ ಎ.ಕೆ

ಸಹಾಯಕ ಪ್ರಾಧ್ಯಾಪಕ

ಕ್ರಿಸ್ತು ಜಯಂತಿ ಕಾಲೇಜು, ಬೆಂಗಳೂರು

ಕಾಮೆಂಟ್‌ಗಳಿಲ್ಲ: