ಗೋವಿನ ಹಾಡು ನಮ್ಮ ಹಿರಿಮೆ
'ಗೋವಿನ ಕಥೆ'ಯೆಂದರೆ ನಮ್ಮ ಜನರಿಗೆ ಬಲು ಅಕ್ಕರೆ. ಅದನ್ನು ಓದದ, ಹಾಡಿ ಕುಣಿಯದ ಕನ್ನಡದ ಮಕ್ಕಳಿಲ್ಲ. ಅವರ ಮನಸ್ಸನ್ನು ಅದು ಮುಟ್ಟಿ ಕರಗಿಸಿದೆ. ದೊಡ್ಡವರಿಗೆ ಕೂಡ ಮರಳಿ ಓದಿದಾಗ ಹೊಸ ಅರ್ಥ ಹೊಳೆಯುತ್ತದೆ. ಚಿಕ್ಕತನದಲ್ಲಿ ಕಥೆಯ ಸ್ವಾರಸ್ಯಕ್ಕೆ ಮಾತ್ರ ಮೆಚ್ಚಿದ್ದರೆ ಈಗ ಅದರ ಒಳಗಡೆ ಅಡಗಿರುವ ತತ್ವ ಸುಂದರವಾಗಿರುವಂತೆ ಕಂಡುಬಂದು ಕವಿತೆಯಲ್ಲಿ ಹೆಚ್ಚು ಅದರ ಉಂಟಾಗುತ್ತದೆ. ಎಲ್ಲ ತಿಳಿವಿನ ಎಲ್ಲ ಮಟ್ಟದ ಜನರಿಗೂ ಈ ಕವಿತೆ ಸಕ್ಕರೆಯಾಗಿದೆ.
ಈ ಹಾಡನ್ನು ಕಟ್ಟಿದ ಕವಿ ಯಾರೆಂಬುದು ತಿಳಿಯದು, ಅವನು ಯಾವಾಗ ಇದ್ದನೋ ಅದೂ ಗೊತ್ತಿಲ್ಲ. ಹಾಡಿನ ಕೊನೆಯಲ್ಲಿ ಮದ್ದೂರಿನ ನರಸಿಂಹದೇವರ ಹೆಸರು ಇರುವುದರಿಂದ ಅದನ್ನು ಬರೆ ದಾತ ಆ ಊರಿಗೆ ಸೇರಿದವನೋ ಇಲ್ಲವೇ ಆ ದೇವರ ಒಕ್ಕಲಿನವನೋ ಆಗಿರಬೇಕೆಂದು ತೋರುತ್ತದೆ.
ಇಲ್ಲಿ ಹೇಳಿರುವ ಕಥೆ ಬಹಳ ಹಳೆಯದು. ಇತಿಹಾಸ ಸಮುಚ್ಚಯ' ಎಂಬ ಪುರಾಣ ಕಥೆಗಳ ಪುಸ್ತಕದಲ್ಲಿ ಈ ಕಥೆ ಬರುತ್ತದೆ.(ಈ ವಿಷಯವನ್ನು ನನಗೆ ದಯವಿಟ್ಟು ತಿಳಿಸಿದ ಮೈಸೂರು ಓರಿಯಂಟಲ್ ಲೈಬ್ರರಿಯಲ್ಲಿರುವ ವಿದ್ವಾನ್ ಶ್ರೀನಿವಾಸಚಾರರಿಗೆ ಕೃತಜ್ಞನಾಗಿದ್ದೇನೆ) ಈ ಗ್ರಂಥ ಸಂಸ್ಕೃತ ಭಾಷೆಯಲ್ಲಿದೆ. ಇದರ ೩೦ನೆಯ ಅಧ್ಯಾಯಕ್ಕೆ 'ಬಹುಲೋಪಾಖ್ಯಾನ' ಎಂದು ಹೆಸರು.
ಬಹುಲಾ ಎಂಬುದು ಹಸುವಿನ ಹೆಸರು ; ಕಾಮರೂಪಿ ಎಂಬುದು ಹುಲಿಯ ಹೆಸರು. ಕಥೆಯೆಲ್ಲ ಬಹುಮಟ್ಟಿಗೆ ಗೋವಿನ ಹಾಡಿನಲ್ಲಿ ಇರುವಂತೆಯೇ ಇದೆ. ಈ ಕಥೆಯನ್ನು ಮೊದಲು ಭೀಷ್ಮನು ಧರ್ಮ ರಾಜನಿಗೆ ಹೇಳಿದನಂತೆ.
ಬಾಲಪಾಠದ ಪುಸ್ತಕಗಳಲ್ಲಿ ಈ ಹಾಡಿನ ಸಂಗ್ರಹ ಮಾತ್ರ ಸಿಕ್ಕುತ್ತದೆ. ಇದನ್ನು ಮೆಚ್ಚಿರುವವರಿಗೆ ಇದರ ಮೂಲವನ್ನು ನೋಡ ಬೇಕೆಂಬ ಅಪೇಕ್ಷೆ ಬರುವುದು ಸಹಜ. ಪೇಟೆಯಲ್ಲಿ ಮಾರುವ 'ಗೋವಿನ ಹಾಡು' ಎಂಬ ಪುಸ್ತಕವನ್ನು ಅನೇಕರು ನೋಡಿರ ಬಹುದು. ಅದರಲ್ಲಿರುವ ತಪ್ಪುಗಳನ್ನು ಬೇರೆ ಎರಡು ಕೈ ಬರಹದ ಪ್ರತಿಗಳ ಸಹಾಯದಿಂದ ತಿದ್ದಿ ಇಲ್ಲಿ ಮುದ್ರಿಸಿದೆ. ಇದನ್ನು ಮೊದಲು ಹೇಳಿದ ಕವಿ ಇದರಲ್ಲಿ ಎಷ್ಟು ಪದ್ಯಗಳನ್ನು ಬಳಸಿದ್ದನೋ ತಿಳಿಯದು. ಈಚಿನವರು ಅದೇ ಧಾಟಿಯಲ್ಲಿ ಪದ್ಯಗಳನ್ನು ಕಟ್ಟಿ ನಡುನಡುವೆ ಸೇರಿ ಸಿದ್ದಾರೆ. ಹೀಗೆ ಸೇರಿರುವ ಪದ್ಯಗಳು ಯಾವುವು ಎಂದು ಬೆರಳಿಟ್ಟು ತೋರಿಸುವುದಕ್ಕಾಗುವುದಿಲ್ಲವಾದರೂ ಅವು ಇಂಥವೇ ಇರಬೇಕೆಂದು ಊಹಿಸಬಹುದು. ಎಲ್ಲಾ ಸೇರಿ ಈಗ ಒಟ್ಟು ೧೩೭ ಪದ್ಯಗಳು ಈ ಹಾಡಿನಲ್ಲಿವೆ. ಇತರರು ಸೇರಿಸಿರುವುದನ್ನು ಬಿಟ್ಟು ೧೧೪ ಪದ್ಯ ಗಳನ್ನು ಇಲ್ಲಿ ಅಚ್ಚು ಮಾಡಿದೆ. ಬಿಟ್ಟಿರುವ ಪದ್ಯಗಳನ್ನು ಬೇರೆ ಮುದ್ರಿಸಿದೆ.
ಈ ಪುಸ್ತಕವನ್ನು ಮುದ್ದಾಗಿ ಮುದ್ರಿಸಿರುವ ಶಾರದಾಮಂದಿರದ ಒಡೆಯರಿಗೆ ನಾನು ತುಂಬ ಕೃತಜ್ಞನಾಗಿದ್ದೇನೆ.
- ಮುನ್ನುಡಿ - ಡಿ.ಎಲ್. ನರಸಿಂಹಾಚಾರ್
ಗೋವಿನ ಹಾಡು : ಸಂ. ಡಿ.ಎಲ್ ನರಸಿಂಹಾಚಾರ್
ಮೊದಲ ಮುದ್ರಣ - ೧೯೬೦
ಪ್ರಕಟಣೆ : ಶಾರದಾ ಮಂದಿರ, ಮೈಸೂರು
ಬೆಲೆ : ೦.೬೦ ಪೈಸೆ
ಈ ಕೃತಿಯ ಹಲವು ಸಂಪಾದನೆ ಹಾಗೂ ವಿಮರ್ಶೆಗಳು ಈಗಾಗಲೇ ಬಂದಿವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ