ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಜೂನ್ 18, 2023

ಮೆಟ್ರೋ ಕಥನ - ೧೦೦

ಮೆಟ್ರೋ ಕಥನ - ೧೦೦

ಸೋತ ಮಗನ ತಲೆಯನ್ನು ಸವರುತ್ತ, ತಂದೆ ಹೀಗೆ ನುಡಿದರು. ನನ್ನ ಬಳಿ ಒಂದು ಗಡಿಯಾರವಿದೆ ನೋಡಿದ್ದೀಯಾ ಅಲ್ಲವೆ. ಅದಕ್ಕೆ ಪ್ರತಿದಿನ ಕೀ ಕೊಡಬೇಕು. ಕ್ರಮವನ್ನು ಅನುಸರಿಸಿದಷ್ಟೂ ಕಾಲ ಸರಿಯಾಗಿ ತೋರಿಸುತ್ತದೆ. ಮನುಷ್ಯ ಕೂಡ ಹಾಗೆಯೆ. ಕಳೆದುಹೋಗುವ ಮುನ್ನ ಕೀ ಕೊಟ್ಟರೆ ಕಾಲದಂತೆ ಕ್ರಮವಾಗಿರಬಹುದು. ಈಗಲೂ ನೀನು ಸೋತಿಲ್ಲ. ಒಂದು ಉತ್ತಮ ಅನುಭವ ಕಲಿತಿರುವೆ. ಸೋಲಿನ ಅರ್ಥ ತಿಳಿದಿರುವೆ" ಎಂದರು. ತನಗೆ ತಂದೆಯ ನುಡಿಗಳೇ ಕೀಲಿ ಎನಿಸಿತು, ಮಗನು ಎಚ್ಚರವಾದನು. - ಅಂಕುರ


ಶನಿವಾರ, ಜೂನ್ 17, 2023

ಮೆಟ್ರೋ ಕಥನ - ೯೯

 ಮೆಟ್ರೋ ಕಥನ - ೯೯

ಒಂದು ಊರು. ನೂರಾರು ಮನೆಗಳು. ಸಾವಿರಾರು ಮನಸುಗಳು. ಜಾತಿಗೊಂದು ಬೀದಿ, ಧರ್ಮಕ್ಕೊಂದು ಕೇರಿ. ಎಲ್ಲರೂ ತಮ್ಮ ಸ್ವಾರ್ಥಕ್ಕಾಗಿ ಇನ್ನೊಬ್ಬರಿಗೆ ಬಳಕೆಯಾಗುತ್ತಿದ್ದರು. ಬಳಸಿಕೊಳ್ಳುತ್ತಿದ್ದರು. ಊರಿನ ಅರಳಿಮರವು ಅರಳಿಕಟ್ಟೆ ಹೆಸರಲ್ಲಿ ಕಲ್ಲಿನ ಕಟ್ಟೆಕಟ್ಟಿ ನೀರಿನ ಸಂಪರ್ಕ ನಿಲ್ಲಿಸಿದ್ದರೂ, ಎಲ್ಲರಿಗೂ ಆಶ್ರಯವಾಗಿತ್ತು. ಊರ ಬಾವಿಗಳು ನಿತ್ಯ ಎಲ್ಲರೂ ಬಂದು ನೀರು ಸೇದಿದರೂ ಜಿನುಗುತ್ತಾ ನೀರು ನೀಡುತ್ತಿತ್ತು. ಊರಾಚೆಯ ಕಾಡು ಕಡಿದು ನಾಶಗೊಳಿಸುತ್ತಿದ್ದರೂ, ತಂಗಾಳಿ ನೀಡುತ್ತಿತ್ತು. ಇದರ ಸುಖಿ ಮನುಷ್ಯ ಮಾತ್ರ ಇದೆಲ್ಲವನ್ನೂ ಪುಸ್ತಕದಲ್ಲಿ ಮಾತ್ರ ಓದುತ್ತಿದ್ದನು.


- ಅಂಕುರ

ಮೆಟ್ರೋ ಕಥನ - ೯೮

 ಮೆಟ್ರೋ ಕಥನ - ೯೮


ಗರಿಕೆಯ ಹುಲ್ಲು ಕೃಷಿಗೆ ಕಸವಾಗಿ ಕಿತ್ತು ಹಾಕುತ್ತಿದ್ದರು. ಹಬ್ಬದ ದಿನ ಮಾತ್ರ ಹುಡುಕಿ, ಕಿತ್ತು ತಂದು ಅಲಂಕಾರಮಾಡಿ ಪೂಜಿಸುತ್ತಿದ್ದರು.  ಕಿತ್ತ ಜಾಗದಲ್ಲೇ ಮತ್ತೆ ಮತ್ತೆ ಚಿಗುರುವ ಗರಿಕೆಯು ಅದೆಷ್ಟೋ ಸೋಲಿಗೆ ಜೀವಂತಕಾವ್ಯಗಳನ್ನು ಹಾಡುತ್ತಿತ್ತು.


- ಅಂಕುರ

ಮೆಟ್ರೋ ಕಥನ - ೯೭

ಮೆಟ್ರೋ ಕಥನ - ೯೭


 ಆನಂದನು ಬಹಳ ಮಾತುಗಾರ. ಎಲ್ಲೇ ತಪ್ಪು ಅನಿಸಿದರೂ ಪ್ರಶ್ನಿಸಿ, ವಿರೋಧಿಸುತ್ತಿದ್ದ. ಎಲ್ಲರೂ ದ್ವೇಷಿಸುತ್ತಿದ್ದರು. ಇವನಿಗೂ ಬೇಸರಗಳೇ ಹೆಚ್ಚಾಗಿ, ಆರೋಗ್ಯ ಹಾಳಾಯಿತು. ಒಮ್ಮೆ ಸಾಧುಗಳನ್ನು ಭೇಟಿಯಾದ. ಸಾಧುಗಳು ಆನಂದದ ಅರ್ಥ ತಿಳಿಸಿ, ಮೌನದ ಪ್ರೀತಿ ಹೇಳಿಕೊಟ್ಟರು. ಆನಂದ ಈಗ ತುಂಬಾ ಮೌನಿಯಾಗಿದ್ದಾನೆ. ಎಲ್ಲಾ ಸಂದರ್ಭದಲ್ಲೂ ನಗುಚೆಲ್ಲಿ ಮುಂದೆ ಸಾಗುತ್ತಾನೆ. ಅವನಿಗೆ ತಿಳಿದಿರುವುದೊಂದೆ! ಲೋಕವನ್ನು ಬದಲಿಸಲಾಗದು, ತಾನು ಬದಲಾದರೆ ಸಾಕು. ಆನಂದನ ವರ್ತನೆಯು ಕೆಲವರಿಗೆ ಲಾಭ ಇರಬಹುದು, ಆದರೆ ಹಲವರು ಬದಲಾಗುತ್ತಿದ್ದಾರೆ.



- ಅಂಕುರ

ಮೆಟ್ರೋ ಕಥನ - ೯೬

 ಮೆಟ್ರೋ ಕಥನ - ೯೬

ಜಗತ್ತಿನ ಎಲ್ಲಾ ವಿಷಯಗಳನ್ನು ಸಂಗ್ರಹಿಸಿರುವ ಅಂತರ್ಜಾಲವನ್ನು ನಂಬಿ ವಿದ್ಯಾರ್ಥಿಗಳು ಖಾಲಿತಲೆಯಲ್ಲಿ ಗಿಣಿಪಾಠಗಳನ್ನು ಓದಿ, ಒಪ್ಪಿಸುತ್ತಿದ್ದರು. ಯಂತ್ರಗಳೇ ಮಾತಾಡುತ್ತಿದ್ದವು. ಮನುಷ್ಯ ಸೋಮಾರಿಯಾಗಿ, ಸುಖದ ಲೋಲುಪತೆಯನ್ನು ಅರಸುತ್ತಿದ್ದನು. ಒಂದು ದಿನ ಅಂತರ್ಜಾಲ ಬಳಕೆಯು ವಿನಾಶ ಹೊಂದಿದ ದುರಂತ ಕೇಳಿ, ಜಗತ್ತೇ ಹುಚ್ಚರ ಸಂತೆಯಾಯಿತು. ಎಲ್ಲಾ ಕೆಲಸಗಳು ನಿಂತವು. ಬೆವರಿನ ಭಾಷೆಯು ಉಸಿರಾಡಿತು. ಬುದ್ದಿಗೆ, ತೋಳಿಗೆ ಕೆಲಸ ಬಂದು ಮನುಷ್ಯನು ಜಗತ್ತನ್ನು ಮರೆತು ಗ್ರಾಮಸ್ವರಾಜ್ಯಕ್ಕೆ‌ ಹೆಜ್ಜೆ ಹಾಕಿದನು.


- ಅಂಕುರ

ಮೆಟ್ರೋ ಕಥನ - ೯೫

 ಮೆಟ್ರೋ ಕಥನ - ೯೫


ವೈದ್ಯರೊಬ್ಬರಿಗೆ ಸೇಬು ಹಣ್ಣು ಬಹಳ ಇಷ್ಟವಾಯಿತು. ಅದನ್ನು ಸ್ಥಳೀಯವಾಗಿ ಬೆಳೆಯುತ್ತಿರಲಿಲ್ಲ. ಅದನ್ನು ವ್ಯಾಪಾರ ಸರಕಾಗಿಸಿದ ಮಾರುಕಟ್ಟೆ ಮುಖ್ಯಸ್ಥನ ಬಳಿ ಸಂಧಾನ ಮಾಡಿಕೊಂಡ ವೈದ್ಯರು, ಸೇಬು ಅತ್ಯಂತ ಪೌಷ್ಟಿಕಾಂಶ ಹೊಂದಿದ ಆರೋಗ್ಯಕರ ಆಹಾರ, ರೋಗಿಗಳಿಗೆ ಚಿಕಿತ್ಸೆಯಂತೆ ಎಂಬ ಸುದ್ದಿಯನ್ನು ನೀಡಿದರು. ಅದು ಕಾಲ ದೇಶಗಳ ಮೀರಿ ಸ್ಥಳೀಯವಾದ ಎಲ್ಲಾ ಹಣ್ಣುಗಳನ್ನು ದುಬಾರಿ ಸ್ಟೇಟಸ್ ನಲ್ಲೇ ತಿಂದು ಹಾಕಿತು.


ಮೆಟ್ರೋ ಕಥನ - ೯೪

 ಮೆಟ್ರೋ ಕಥನ - ೯೪


ಮುಖಪುಟದ ಗೆಳೆಯರೆಲ್ಲಾ ಒಂದು ಕಾರ್ಯಕ್ರಮದಲ್ಲಿ ಭೇಟಿಯಾದರು. ಸತ್ಯನಾಥನು ಹೆಚ್ಚು ಲೈಕ್ ಮತ್ತು ಕಾಮೆಂಟ್ ಮಾಡದವನೆಂದು‌ ಅವನನ್ನು ಅಷ್ಟೇನೂ ಮಾತಾಡಿಸದೆ ಅವರವರೇ ಹೆಚ್ಚು ಆನಂದಿಸುತ್ತಿದ್ದರು.‌ ಎಲ್ಲರ ಮಾತು ನಂಬಿ ಹೋದ ಸತ್ಯನಾಥನಿಗೆ ಮುಖಪುಟವು ಸದಾ ಮುಖಪುಟವೇ ಆಗಿದೆ, ಮನದಪುಟವಲ್ಲವೆಂದು ತಿಳಿದು ಅಲ್ಲಿಂದ ಹೊರಟನು.


- ಅಂಕುರ

ಮೆಟ್ರೋ ಕಥನ - ೯೩

 ಮೆಟ್ರೋ ಕಥನ - ೯೩


ಅನ್ಯಾಯಕಾರಿ ಬ್ರಹ್ಮ ಸುಂದರನನ್ನು ಬ್ರಹ್ಮಚಾರಿ ಮಾಡಿದನೆಂದು ಹೆಣ್ಣು ಮಕ್ಕಳು ಕುಣಿಯುತ್ತಿದ್ದರು. ಇದನ್ನು ವ್ಯಾಖ್ಯಾನ ಮಾಡಿದ ಯುವತಿಯರು ಇಲ್ಲಿ ಸುಂದರರ ಕೊರತೆ ಇದೆ ಎಂದು ನೋವು ತೋಡಿಕೊಂಡರು. ಆದರೆ ಹುಡುಗರು ಮಾತ್ರ ವ್ಯಾಯಾಮಶಾಲೆಯಲ್ಲಿ ಫಿಟ್ ಆಗುತ್ತಿದ್ದರು.

ಮೆಟ್ರೋ ಕಥನ - ೯೨

 ಮೆಟ್ರೋ ಕಥನ - ೯೨


ಬಸ್ಸಿನ ಪ್ರಯಾಣ ಉಚಿತವೆಂದು ಮನೆಯ ಹೆಣ್ಣುಮಕ್ಕಳನ್ನು ಹೊರಗಿನ ವ್ಯವಹಾರಗಳಿಗೆ ಕಳಿಸಲಾಗುತ್ತಿತ್ತು. ಇದರಿಂದ ಜವಾಬ್ದಾರಿಯನ್ನು ಕಲಿಯುವ ಹೆಣ್ಣುಮಕ್ಕಳು ಮನೆಯ ಯಜಮಾನಿಕೆ ಕುರಿತು ಹಲವು ಅನುಭವ ಕಲಿತರು. ಆ ಪ್ರದೇಶದ ಕುಟುಂಬಗಳು ಸಮಾನತೆಯ ಕಡೆಗೆ ಸಾಗಲು ಒಂದು ಯೋಜನೆಯು ಅನುಕೂಲವಾಯಿತೆಂದು ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ಪ್ರಬಂಧ ಬರೆದಳು.


- ಅಂಕುರ

ಮೆಟ್ರೋ ಕಥನ - ೯೧

 ಮೆಟ್ರೋ ಕಥನ - ೯೧


ಒಣಗಿದ ಭೂಮಿಯು ಮೊದಲ ಮಳೆಗೆ ತಂಪಾದಂತೆ ಕಂಡಿತು. ಆದರೆ ಭೂಮಿಯೊಳಗಿನ ಕಾವು ಆಗ ಪ್ರಾರಂಭವಾಯಿತು. ಮಿಡತೆಗಳು, ಕಪ್ಪೆ, ಹಾವು ಎಲ್ಲವೂ ಕಾವು ತಡೆಯಲಾರದೆ ಮೇಲೆ ಬಂದವು. ಆಗ ತಾನೆ ಚಿಗುರುತ್ತಿದ್ದ ಹಸಿರು ಹುಲ್ಲನ್ನು ಮಿಡತೆಗಳು ತಿಂದವು. ಈ ಮಿಡತೆಗಳನ್ನು ಕಪ್ಪೆ ತಿಂದಿತು. ಕಪ್ಪೆಯನ್ನು ಹಾವು ನುಂಗಿತು. ಈ ಹಾವಿಗೂ ಹದ್ದಿನ ಕಣ್ಣಿತ್ತು. ಇದನ್ನೆಲ್ಲಾ ಯೋಚಿಸಿದ ತಿಮ್ಮನು ತನ್ನ ಬದುಕು ನೆನಪಾಯಿತು.

ಬಾಲ್ಯದಲ್ಲಿ ತಿಮ್ಮನಾಗಿ ಊರೆಲ್ಲಾ ಬಾಯಲ್ಲಿ ಕೆಲಸಮಾಡಿದೆ. ಬೆಳೆಯುತ್ತಾ ತಿಮ್ಮಣ್ಣನಾಗಿ ಕೆಲಸಮಾಡಿದೆ. ನಗರಕ್ಕೆ ಹೋಗಿ ತಿಮ್ಮೇಶನಾದೆ. ನಾನೂ ಒಂದು ರೀತಿಯ ಆಹಾರ ಚಕ್ರದಲ್ಲಿ ಬಲಿಯಾದವನೇ! ನನ್ನದೇ ಬದುಕು, ನನ್ನದೇ ಚಕ್ರ. ಇದು ತಿಮ್ಮನು ಬರೆದ ಜಗದ ಕಥೆ.


- ಅಂಕುರ

ಮೆಟ್ರೋ ಕಥನ - ೯೦

 ಮೆಟ್ರೋ ಕಥನ - ೯೦


ಫಲಿತಾಂಶ ಬಂದಾಗ ರಮೇಶನು ಅದೇಕೋ ಹೀಗೆ ಹೇಳುತ್ತಿದ್ದನು. ಎಲ್ಲಾ ಬರೀ ಮೋಸ, ತಗೊಂಡು ವ್ಯವಹಾರ ಮಾಡ್ತಾರೆ. ನಮ್ಮಂತರು ಎಷ್ಟೆ ಓದಿರೂ ನ್ಯಾಯ ಸಿಗಲ್ಲ. ಓದೋದಕ್ಕಿಂತ ಕೆಲಸಕ್ಕೆ ಹೋಗೋದು ಮೇಲು ಎಂದು ಬೇಸರ ವ್ಯಕ್ತಪಡಿಸುತ್ತಿದ್ದನು. ಉಮೇಶನು ಇದರ ವಿರುದ್ಧವಿತ್ತು. ಅತ್ಯಂತ ಪ್ರಾಮಾಣಿಕ ಪರೀಕ್ಷೆ ಇದು. ನನ್ನ ಶ್ರಮಕ್ಕೆ ಫಲ ಸಿಕ್ಕಿದೆ. ಅದೆಷ್ಟು ನಿದ್ರೆ, ಸಂಬಂಧಗಳ ಕಳಚಿ ಏಕಾಂಗಿಯಾಗಿ ಸಂಘರ್ಷ ಮಾಡಿದುದರ ಫಲ ಇದು ಎಂದನು.


ವಿಶೇಷ ಅಂದರೆ ಇಬ್ಬರೂ ಒಂದೇ ಕೇಂದ್ರ, ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದರು.



- ಅಂಕುರ

ಮೆಟ್ರೋ ಕಥನ -೮೯

 ಮೆಟ್ರೋ ಕಥನ -೮೯


ಸೂರ್ಯಕಾಂತಿ ಗಿಡದಲ್ಲಿ ಮೊಗ್ಗಾಗಿ, ಹೂವರಳಿ, ತೆನೆ ಬಲಿತು ತಲೆದೂಗುತ್ತಿತ್ತು. ಗಿಳಿಗಳು ಬಂದು ತೆನೆಯಲ್ಲಿ ಕುಕ್ಕಿ ಕುಕ್ಕಿ ತಿಂದು ಹಾರಿಹೋದವು. ಇದನ್ನು ನೋಡಿದ ಸನ್ಯಾಸಿಯೊಬ್ಬರು ತನ್ನ ಶಿಷ್ಯರಿಗೆ ಈ ರೀತಿಯಲ್ಲಿ ಪುರಾಣ ಬಿಗಿದರು. ಈ ತೆನೆಯು ಆ ಗಿಳಿಗಳಿಗಾಗಿಯೇ ಹುಟ್ಟಿತ್ತು. ಆ ಗಿಳಿಗಳು ಇದನ್ನು ತಿಂದು ಈ ಗಿಡಕ್ಕೆ ಮೋಕ್ಷ ನೀಡಿದವು ಎಂದರು. ಖಾಲಿ ತೆನೆಯೊಂದು ಮಡಿಲು ಕಳಚಿದ ಅನಾಥಪ್ರಜ್ಞೆಯಲ್ಲಿ ನೋಡುತ್ತಿತ್ತು.


- ಅಂಕುರ

ಮೆಟ್ರೋ ಕಥನ - ೮೮

 ಮೆಟ್ರೋ ಕಥನ - ೮೮


ಸಾಲುಮರದ ತಿಮ್ಮಕ್ಕನ ಎದುರು ಸಾಲು ಸಾಲು ಪ್ರಶಸ್ತಿಗಳು, ನೆನಪಿನ ಕಾಣಿಕೆಗಳು. ಮರದಲ್ಲಿ ಮಾಡಿದ್ದ ನೆನಪಿನ ಕಾಣಿಕೆಗಳೆಲ್ಲಾ ಅಜ್ಜಿ ಎದುರು ಬಿಕ್ಕಿ ಬಿಕ್ಕಿ ಅಳುತ್ತಿದ್ದವು. ಅಸಹಾಯಕತೆಯ ಅಜ್ಜಿ, ಬಂದವರಿಗೆಲ್ಲಾ ನಗುತ್ತಲೇ ಆಶೀರ್ವಾದ ಮಾಡುತ್ತಿತ್ತು.


- ಅಂಕುರ

ಮೆಟ್ರೋ ಕಥನ - ೮೭

 ಮೆಟ್ರೋ ಕಥನ - ೮೭


ಭಾರಿ ಮಳೆಯು ಹಲವಾರು ತೊಂದರೆಗಳನ್ನು ಸೃಷ್ಟಿಸಿತು. ಮರಗಳು, ಮನೆಗಳು ಉರುಳಿದರೆ, ರಸ್ತೆ ಹಾಳಾಗಿ ಕಾಲುವೆ ಒಡೆದು, ಹಳ್ಳಗಳು ತೇಲಿ, ಕೆರೆ ಕೋಡಿ ಬಿದ್ದಿತು. ರಾತ್ರಿಯ ಈ ಆರ್ಭಟದಿಂದ ತತ್ತರಿಸಿ ಬೆಳಗ್ಗೆ ತೋಟ ನೋಡಲು ಹೋದೆ. ಇರುವೆ, ರೆಕ್ಕೆಹುಳ, ಗೆದ್ದಲು ನಿಧಾನವಾಗಿ ಭೂಮಿಯಿಂದ ಹಸಿಮಣ್ಣು ತೆಗೆದು ಆಚೆ ಬರುತ್ತಿವೆ. ಹಾಳಾಗದೆ ಉಳಿದ ನಿಸರ್ಗವೆಲ್ಲಾ ನಗುತ್ತಿದೆ. ಕಪ್ಪೆಗಳು ನೀರಿನಲ್ಲಿ ಜೈಕಾರಮಾಡುತ್ತಿವೆ. ಇದನ್ನೆಲ್ಲಾ ನೋಡಿ, ಇರುವ ಭಾಗ್ಯವ ನೆನೆದು ಡಿವಿಜಿ ಸಾಲು ನೆನಪಾಗಿ ಖುಷಿಯಾದೆನು.


- ಅಂಕುರ

ಮೆಟ್ರೋ ಕಥನ - ೮೬

 ಮೆಟ್ರೋ ಕಥನ - ೮೬


ಸರ್ಕಾರದ ಯೋಜನೆಯನ್ನು ಟೀಕಿಸಿದ ಸರ್ಕಾರಿ ನೌಕರರಿಗೆ ನೋಟಿಸು ಕಳಿಸಿದರು. ಇದನ್ನು ತಿಳಿದ ಇನ್ನೊಬ್ಬ ನೌಕರನು ಹೀಗೆಂದನು. ಸರ್ಕಾರಿ ಉದ್ಯೋಗ ಅಂದರೆ ಸ್ವಾತಂತ್ರ್ಯ ಕಳೆದುಕೊಳ್ಳುವುದು ಎಂದರ್ಥ. ನಾವೆಲ್ಲಾ ಮೌನವಾಗಿಲ್ವ, ಏಕೆ ಬೇಕಿತ್ತು ಇವರಿಗೆ ನಮ್ಮ ಜನ ಇನ್ನೂ ಸ್ಮಾರ್ಟ್ ಆಗಬೇಕು ಎಂದು ನಕ್ಕರು. ಅಜಾದಿ ಕೀ ಅಮೃತ್ ಮಹೋತ್ಸವ ಎಂಬ ಅಕ್ಷರಗಳು ಗೋಡೆಯಲ್ಲಿ ಮಾಸುತ್ತಿದ್ದವು.


- ಅಂಕುರ

ಸೋಮವಾರ, ಜೂನ್ 12, 2023

ಮೆಟ್ರೊ ಕಥನ - ೮೫

 ಮೆಟ್ರೊ ಕಥನ - ೮೫


ಅರೆಕಾಲಿಕ ಉದ್ಯೊಗಿ ಹೆಂಗಸು ಖುಷಿಯಿಂದ ಬಂದಳು. ಏನಮ್ಮ ಇಷ್ಟು ಖುಷಿಯಾಗಿದ್ದೀಯಾ ಎಂದಾಗ ಏನಿಲ್ಲ ಸಾ.. ನಿಜವಾಗಿಯೂ ಇವತ್ತಿಂದ ಬಸ್ ಚಾರ್ಜ್ ತೆಗೆದುಕೊಳ್ಳಲಿಲ್ಲ. ಬರೋ  ಸಂಬಳದಲ್ಲಿ ಸಾವಿರದೈನೂರು ಚಾರ್ಜೆ ಆಗ್ತಿತ್ತು. ಇನ್ಮೆಲೆ ಇದನ್ನಾದರೂ ಉಳಿಸಬಹುದು ಎಂದಳು. ಈಕೆ ಖುಷಿಯಲ್ಲಿ ಯಾವ ಸರ್ಕಾರ, ಯಾವ ಮಂತ್ರಿ ಏನೂ ಮುಖ್ಯವಾಗದೆ ತನ್ನ ಬಡತನವಷ್ಟೆ ಮಾತಾಡಿಸುತ್ತಿತ್ತು.


- ಅಂಕುರ

ಮೆಟ್ರೊ ಕಥನ - ೮೪

 ಮೆಟ್ರೊ ಕಥನ - ೮೪

ಮೆಟ್ರೋ ಕಥನ 


ಸರ್ಕಾರಿ ಉದ್ಯೋಗಿಯೊಬ್ಬ, ತನ್ನ ನೆಮ್ಮದಿಯ ಜೊತೆಯಲ್ಲಿ  ನಿರುದ್ಯೋಗಿಗಳಿಗೆ ಸೇವೆ ಮಾಡಲು ಪ್ರಾರಂಭಿಸಿದನು. ಆರಂಭದಲ್ಲಿ ತನ್ನ ಸೇವೆಗೆ ಆಸಕ್ತರ ಪ್ರತಿಕ್ರಿಯೆ ಲಕ್ಷ ಜನರ ತಲುಪಿತು. ಖುಷಿಯೂ ಆಯಿತು. ತನ್ನ ಶ್ರಮಕ್ಕೆ ಪ್ರತಿಫಲವಾಗಿ ಹೀಗೆ ಆಲೋಚಿಸುವಾಗ ಒಬ್ಬೊಬ್ಬರಿಂದ ಒಂದೊಂದು ರೂ ಸಂಗ್ರಹಿಸೋಣ ಸಾಕು ಎನಿಸಿ, ಉಪಾಯ ಹುಡುಕಿದ. ಅದರ ಫಲವಾಗಿ ಲಕ್ಷಾಂತರ ಹಣ ದೊರೆಯಿತು. ಸೇವೆ ಉದ್ಯಮವಾಯಿತು. ಈಗ ನೌಕರಿಯನ್ನೇ ಬಿಡುವ ಆಲೋಚನೆ ಮಾಡಿದ್ದಾನೆ.


- ಅಂಕುರ


ಮೆಟ್ರೋ ಕಥನ - ೮೩

 ಮೆಟ್ರೋ ಕಥನ - ೮೩

ನಮ್ಮೂರ ಎಲ್ಲಾ ಹೆಣ್ಮಕ್ಕಳಿಗೆ ದುಡ್ಡಿಲ್ಲದೆ ಅರಾಮಾಗಿ ಸರ್ಕಾರಿ ಬಸ್ಸಲ್ಲಿ ತಿರುಗಾಡುವ ಯೋಗ ದೊರೆಯಿತು. ಅಕ್ಕಿ, ಬೇಳೆ, ಎಣ್ಣೆ,ಗ್ಯಾಸು ಅದು ಇದು ಅಂತ ಸಿಟ್ಟಿಗೆದ್ದವರೆಲ್ಲಾ ತಣ್ಣಗಾದರು. ಸ್ವಸಹಾಯ ಹಾಗೂ ಸಾವಿತ್ರಿ, ಅಕ್ಕ, ಅಮ್ಮ ಸಂಘದ ಮಹಿಳೆಯರೆಲ್ಲಾ ಪ್ರವಾಸ ಹೊರಟರು. ಧರ್ಮಸ್ಥಳ, ಕುಕ್ಕೆ, ಕಟೀಲು, ಮುರುಡೇಶ್ವರ, ಸಿಗಂಧೂರು, ಜೋಗ, ಹೊರನಾಡು, ಶೃಂಗೇರಿ ಒಂದು ಸುತ್ತು ಹೋಗಬೇಕು ಅಂತ ಯೋಚ್ನೆ ಮಾಡ್ತಾವ್ರೆ. ಫುಲ್ ಟೈಟಾಗಿ ಇದನ್ನೆಲ್ಲಾ ಗಮನಿಸುತ್ತಿದ್ದ ಪರಮೇಶಿಯು ಈ ಸರ್ಕಾರ ಸರಿ ಇಲ್ಲ ಎಂದನು.

- ಅಂಕುರ 

ಮೆಟ್ರೋ ಕಥನ -೮೨

 ಮೆಟ್ರೋ ಕಥನ -೮೨

ಇತ್ತೀಚಿನ ಸಚಿವ ದೇವಾಲಯಕ್ಕೆ ಲಕ್ಷ ನೀಡಿದ್ದು, ಮನೆಯಲ್ಲಿ ಹೋಮ ಮಾಡಿಸಿದ್ದು, ಇವತ್ತು ಅಲ್ಲೆಲ್ಲೊ ಹರಕೆ ತೀರಿಸಿದ್ದು ಕುರಿತು ಅರಳಿಕಟ್ಟೆ ಮಾತು ಜೋರಾಗಿ ನಡೆದಿತ್ತು. ಕೇಳುವ ತನಕ ಕೇಳಿ ರಾಜಣ್ಣ ಹೀಗೆ ನುಡಿದನು. ದುಡ್ಡು ಇರೋರು ಕಥೆ ಒಂತರಾ, ಇಲ್ಲದೆ ಇರೋರು ಕತೆ ಇನ್ನೊಂತರ. ಅಲ್ಲೋಡು ಶ್ಯಾಮಣ್ಣ ಕಾಸಿಲ್ಲದೆ  ಹಾಗೇ ಮರೆಲಿ ಹೋಗ್ತಾ ಇದಾನೆ. ಇಲ್ಲೋಡು ಲಕ್ಷ್ಮಮ್ಮ ಯಾರಾದರೂ ಒಂದು ಮೊಳ ಹೂ ಕೊಳ್ಳಲಿ ಅಂತ ನಾಲ್ಕು ದಿಕ್ಕು ನೋಡ್ತಾವ್ಳೆ. ಆ ನಿಂಗಮ್ಮ ಹಣ ಮಾಡೋ ಆಸೆಲಿ ದಿನಕ್ಕೆ ಒಂದೊತ್ತು ಊಟ ಮಾಡುತ್ತೆ, ಇದೆ ಪ್ರಪಂಚ. ಅವರವರ ಅವರವರ ದೃಷ್ಟಿಯಲ್ಲಿ ಅವರು ಮಾಡಿದ್ದೆಲ್ಲ ಸರಿನೆ.


- ಅಂಕುರ

ಮೆಟ್ರೋ ಕಥನ - ೮೧

ಮೆಟ್ರೋ ಕಥನ - ೮೧ 

ಹಣವು ಜೇಬಿನಿಂದ ಜೇಬಿಗೆ ಸಾಗುತ್ತಿತ್ತು. ಅದು ಯಾವುದೇ ಮೈಲಿಗೆ ಇಲ್ಲದೆ ಮೌಲ್ಯ ಪಡೆಯುತ್ತಿತ್ತು. ಸುಳ್ಳು ಹೇಳಿಸಿತು. ಮೋಸ ಮಾಡಿಸಿತು. ಅನ್ಯಾಯ, ಅಧರ್ಮ, ಅತ್ಯಾಚಾರ ಎಲ್ಲಕ್ಕೂ ಕಾರಣವಾಯಿತು. ಒಟ್ಟಾರೆ ಬೆವರಲ್ಲಿ ತೃಪ್ತಿ ಕಂಡಿತು. ಕಾರಣಕ್ಕಿಂತ ಕಾರ್ಯದಲ್ಲಿ ಸಾಗಿತು.

ಮೆಟ್ರೋ ಕಥನ - ೮೦

 ಮೆಟ್ರೋ ಕಥನ - ೮೦


ರಾತ್ರೋರಾತ್ರಿ ವೈರಲ್ ಮೂಲಕ ಪ್ರಚಲಿತವಾದ ಹೆಣ್ಣೊಬ್ಬಳು ನಾಳೆಯೇ ನಟಿಯಾಗುವ ಕನಸು ಕಂಡಳು. ಕರೆದಲ್ಲೆಲ್ಲಾ ಸನ್ಮಾನ, ಗೌರವ ಪಡೆದಳು. ಆಕೆಯ ಅಜ್ಜಿ 'ತಾಳಿದವಳು ಬಾಳಿಯಾಳು' ಅಷ್ಟೆಲ್ಲಾ ಕನಸು ಕಾಣಬೇಡಮ್ಮ ನಿಧಾನವಾಗಿ ಹೆಜ್ಜೆ ಇಡು ಎಂದಿತು. ಅಜ್ಜಿ, ಸಿಗುವಾಗ ಪಡೆಯದವರು ಮೂರ್ಖರು ಎಂದು ಸಮಾಧಾನ ಮಾಡಿದಳು. ಆಕೆಯ ಕನಸು, ವೇಗ ಎಲ್ಲವೂ ವಿಚಿತ್ರವಾಗಿತ್ತು. ಸಿನಿಮಾ, ಧಾರವಾಹಿ, ತೆರೆಯ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲೂ ಆಕೆಯೆ. ಆದರೆ ದಿನ ಕಳೆದಂತೆ ಅವಕಾಶ ಕಡಿಮೆಯಾದವು. ಜ್ಞಾನವಿಲ್ಲದ ಕಾರಣ, ಕಲಿಕೆಯ ಆಸಕ್ತಿಗಿಂತ ಪ್ರಸಿದ್ದಿಯ ಹುಚ್ಚು ಇರುವ ಕಾರಣ ಅವಕಾಶ ಇಲ್ಲವಾದವು. ಈಗ ಮನೆಯಿಂದ ಆಚೆ ಬರುವುದೇ ಕಷ್ಟವಾಗಿದೆ. ಚಿಕ್ಕಪುಟ್ಟ ಖರ್ಚಿಗೂ ಕಷ್ಟವಿದೆ. ದೇಹಮಾರುವ ಹಂತಕ್ಕೆ ಬಂದಳು. ಆದರೆ ಸಮಾಜವು ಆ ತರಹ ಇರಲಿಲ್ಲ. ಈಗ ಅವಳ ಬದುಕು ಅಜ್ಜಿಯ ಮಾತನ್ನು ಆಲೋಚಿಸುತ್ತಿದೆ. ಅಜ್ಜಿ ಈಗ ಗೋಡೆಯ ಮೇಲೆ ಚಿತ್ರದಲ್ಲಿ ನಗುತ್ತಿದೆ.

- ಅಂಕುರ

ಮೆಟ್ರೋ ಕಥನ - ೭೯

ಮೆಟ್ರೋ ಕಥನ - ೭೯ 

ಫೋಟೋದಲ್ಲಿ ಕಾಣುತ್ತಿದ್ದ ಗಾಂಧಿ ಮತ್ತು ಬೋಸ್ ಪರಸ್ಪರ ಮಾತನಾಡುತ್ತಿದ್ದರು. ನೋಡಿ ಗಾಂಧಿಯವರೇ ಸರಿಯಾಗಿ ಓದದೇ ಇದ್ದರೆ ತಮ್ಮ ಕರ್ತವ್ಯ ಮರೆತು ತಿಲಕ, ಶಾಲು, ಧರ್ಮ, ಜಾತಿ ಅಂತ ಅಧಿಕಾರಿಗಳೇ ಅವಿದ್ಯೆ ಪ್ರದರ್ಶನ ಮಾಡ್ತಾರೆ ಎಂದರು. ಗಾಂಧಿ ಅದಕ್ಕೆ ಉತ್ತರವಾಗಿ ಹೌದದು ಮೂರ್ತಿ, ಜಯಂತಿ, ಮೆರವಣಿಗೆ ಅಂತ ವಿದ್ಯೆ ಕಲಿತವರೆ ನಮ್ಮ ಹೆಸರುಗಳನ್ನು ಬಳಸಿ ಲಾಭಿ ಮಾಡ್ತಾ ಇದ್ದಾರೆ. ನಾವು ಎಂದಾದರೂ ಇಂತಹ ಅನಾಗರಿಕತೆ ಬಯಸಿದ್ದೆವಾ? ಎಂದಾಗ ಬೋಸ್ ಅವರು 'ನಾವು ಇಲ್ಲ ಅಂತ ಅವರಿಗೆ ಈಗಾಗಲೇ ಗೊತ್ತಿದೆ' ಎಂದು ನಕ್ಕರು.

- ಅಂಕುರ

ಮೆಟ್ರೋ ಕಥನ - ೭೮

ಮೆಟ್ರೋ ಕಥನ - ೭೮ 

ಚಂದ್ರನೆಂದರೆ ಶಾಂತಿ, ನೆಮ್ಮದಿ ಎಂದರ್ಥ. ತಂಪು ಕಾಂತಿ ನೀಡುವ ಚಂದ್ರನ ಬೆಳಕಲ್ಲಿ ಅದೆಷ್ಟೋ ಜನಪದ ಕಥೆಗಳು ತಲೆಯಿಂದ ತಲೆ ನುಡಿಯಾಗಿದ್ದವು. ಕಥೆಯೊಂದಿಗೆ ಊಟ, ಕೆಲವೊಮ್ಮೆ ಕೆಲಸಗಳು ಹೀಗೆ ಕೃಷಿ- ಖುಷಿ ಎರಡೂ ಇತ್ತು. ಕಣದ ಬಣವೆ ಹುಲ್ಲಿನ ಗುಡಿಸಲು ಕಟ್ಟಿ ಆಕಾಶ ನೋಡುತ್ತಾ ಮಲಗುವ ಸ್ವರ್ಗವೇ ಹಾಲು ಚೆಲ್ಲುವ ಹಾದಿ. ಈಗ ನಮಗೆ ಚಂದ್ರನ ಸಹಾಯವೆಂದರೆ ಎಲ್ಲರ ಮೊಬೈಲ್ ನಲ್ಲೂ ತೊಂದರೆ ಕೊಡಬೇಡಿ ಎಂಬ ಬಟನ್ ಮೂಲಕ ನೆಮ್ಮದಿಯ ಸಂಕೇತವಾಗಿದೆ.


- ಅಂಕುರ

ಬುಧವಾರ, ಜೂನ್ 7, 2023

ಮೆಟ್ರೋ ಕಥನ - ೭೭

 ಮೆಟ್ರೋ ಕಥನ - ೭೭


ಇಲಿಯನ್ನು ಕೊಲ್ಲಲು ಬೋನು ತಂದರು. ಆಲೋಚಿಸದ ಆತುರದ ಇಲಿಗಳೆಲ್ಲಾ ಸಾಯುತ್ತಿದ್ದವು. ಅಗಲ ಕಿವಿಯ ಹಿರಿ ಇಲಿಯೊಂದು ಈ ಮನುಷ್ಯನ ಬುದ್ದಿ ತಿಳಿದಿತ್ತು. ನಿಧಾನವಾಗಿ ಯೋಚಿಸುತ್ತಾ ಬರುವಾಗ ಯುವ ಇಲಿಯೊಂದು ದೊಪ್ಪನೆ ಬೋನಿನಲ್ಲಿ ಬಿದ್ದಿತು. ಹಿರಿ ಇಲಿ ಬಂದು ಬೋನನ್ನೆಲ್ಲಾ ಪರಿಶೀಲಿಸಿ ನಾಳೆ ತಾನೇ ಬೋನಿಗೆ ಹೋಗಲು ಸಿದ್ದವಾಯಿತು. ಕತ್ತಲಾದ ಕ್ಷಣ ಬೋನನ್ನೆ ಹುಡುಕಿತು. ನಿಧಾನವಾಗಿ ಬೋನಿನೊಳಗೆ ಹೋಗಿ, ಮನುಷ್ಯನ ತಂತ್ರ ತಿಳಿದು, ಪರಿಶೀಲಿಸಿ ಆಚೆ ಬಂದಿತು. ಬರುವ ಇಲಿಗಳಿಗೆಲ್ಲಾ ಸೂಚನೆ ನೀಡಿ, ಮನೆಯನ್ನೇ ಲೂಟಿ ಮಾಡಿಸಿತು. ಈಗ ಇಲಿಗಳು ಬೋನಿಗೆ ಹೆದರುವುದಿಲ್ಲ.


- ಅಂಕುರ

ಮೆಟ್ರೋ ಕಥನ - ೭೬

 ಮೆಟ್ರೋ ಕಥನ - ೭೬

ತಂಪು ಕಾಂತಿ ನೀಡುವ ಚಂದ್ರನ ಬೆಳಕಲ್ಲಿ ಅದೆಷ್ಟೋ ಜನಪದ ಕಥೆಗಳು ತಲೆಯಿಂದ ತಲೆಗೆ ನುಡಿಗಳಾಗಿದ್ದವು. ಕಥೆಯೊಂದಿಗೆ ಊಟ, ಕೆಲವೊಮ್ಮೆ ಕೆಲಸಗಳು ಹೀಗೆ ಕೃಷಿ- ಖುಷಿ ಎರಡೂ ಇತ್ತು. ಕಣದ ಬಣವೆ ಹುಲ್ಲಿನ ಗುಡಿಸಲು ಕಟ್ಟಿ ಆಕಾಶ ನೋಡುತ್ತಾ ಮಲಗುವ ಸ್ವರ್ಗವೇ ಹಾಲು ಚೆಲ್ಲುವ ಹಾದಿ. ಈಗ ನಮಗೆ ಚಂದ್ರನ ಸಹಾಯವೆಂದರೆ ಎಲ್ಲರ ಮೊಬೈಲ್ ನಲ್ಲೂ ತೊಂದರೆ ಕೊಡಬೇಡಿ ಎಂಬ ಬಟನ್ ಮೂಲಕ ನೆಮ್ಮದಿಯ ಸಂಕೇತವಾಗಿದೆ.


- ಅಂಕುರ


ಮೆಟ್ರೋ ಕಥನ - ೭೫

 ಮೆಟ್ರೋ ಕಥನ - ೭೫


ಶಾಲೆಯೊಂದರಲ್ಲಿ ಇಂಗ್ಲಿಷ್ ಭಾಷೆಯನ್ನು ಕ್ಯಾಂಪಸ್ ಲಾಂಗ್ವೇಜ್‌ ಮಾಡಿದ್ದರು. ಆದರೆ ಅದರೊಳಗೆ ನಗು, ಅಳುವೆಲ್ಲಾ ಆಯಾ ಮಾತೃಭಾಷೆಯಲ್ಲಿ ನಡೆದಿತ್ತು. ಮನುಷ್ಯನ ಭಾವನೆಗಳನ್ನು ಬಂಧಿಸಲಾಗದೆಂದು ತಿಳಿದ ಪ್ರಾಂಶುಪಾಲರು, ಆಡಳಿತ ಭಾಷೆ, ಮಾತೃಭಾಷೆ, ನಾಡಿನ ಭಾಷೆ ಎಂಬ ತ್ರಿಭಾಷೆಯ ಸ್ವಾತಂತ್ರ್ಯ ಘೋಷಿಸಿದರು. 


- ಅಂಕುರ

ಸೋಮವಾರ, ಜೂನ್ 5, 2023

ಮೆಟ್ರೋ ಕಥನ - ೭೪

 ಮೆಟ್ರೋ ಕಥನ - ೭೪

ಮೆಟ್ರೋ ಕಥನ - ೭೩

 ಮೆಟ್ರೋ ಕಥನ - ೭೩


ಅವಳು ಸಿಗರೇಟು ಸೇದುತ್ತಿದ್ದಾಳೆ, ಅವಳ ಅಣ್ಣ ಹೊಸ ಬೈಕು ಕೊಂಡನು. ಅಪ್ಪನ ಹಳೆಯ ಬಜಾಜ್ ರಿಪೇರಿ ಬಂದರೂ ಓಡಿಸುತ್ತಿದ್ದಾರೆ. ಅಮ್ಮ ದೂರದರ್ಶನದಲ್ಲೇ ಮುಳುಗಿದ್ದಾರೆ. ಆದರೆ ಮನೆಯ ಎದುರೇ ಇರುವ ಹಳೆಯ ಶಾಲೆಯಲ್ಲಿ ಇಂದು ಪರಿಸರ ದಿನಾಚರಣೆ ಕಾರ್ಯಕ್ರಮ. ಮಕ್ಕಳು ಸಡಗರದಿಂದ ಹೂ ಕಿತ್ತು ಕಟ್ಟಿ ಮುಡಿದ್ದಾರೆ.  ಮೇಷ್ಟ್ರು ಗೂಗಲ್ ನಲ್ಲಿ ಸುಲಭವಾಗಿ ಸಿಕ್ಕ ಸಾಲುಮರದ ತಿಮ್ಮಕ್ಕನ ಚಿತ್ರ ಮುದ್ರಿಸಿ ಆದರ್ಶವಾಗಿ ಇಟ್ಟು, ತಿಮ್ಮಕ್ಕನ ಸಾಹಸಗಳನ್ನು ಹೇಳುತ್ತಿದ್ದಾರೆ. ಲೆಕ್ಕಕ್ಕೆ ಎಲ್ಲೆಲ್ಲೂ ಒಂದೊಂದು ಗಿಡ ನೆಡುವಂತೆ ನೆಡುತ್ತಿದ್ದಾರೆ. ವಾರದ ನಂತರ ಆ ಗಿಡಗಳು ಅನಾಥವಾಗಲು ಸಿದ್ಧವಾಗಿವೆ.

ಇಲ್ಲಿಗೆ ಪರಿಸರ ದಿನಾಚರಣೆ ಮುಗಿಯಿತು.


- ಅಂಕುರ

ಮೆಟ್ರೊ ಕಥನ - ೭೨

 ಮೆಟ್ರೋ ಕಥನ - ೭೨

ರೈಲುಗಳು ಢಿಕ್ಕಿ ಹೊಡೆದು ಸಾವಿರಾರು ಗಾಯಾಳುಗಳು, ನೂರಾರು ಸಾವುಗಳು. ರಕ್ತ ನೀಡಲು ಜನ ಸಾಲುಗಟ್ಟಿ ನಿಂತಿದ್ದಾರೆ. ಇವರ ನಡುವೆ ಮಾಹಿತಿ ಹೆಸರಲ್ಲಿ, ಯ್ಯೂಟ್ಯೂಬ್ ಹೆಸರಲ್ಲಿ ನಿಧಿ ಎತ್ತುವ ಹೆಸರಲ್ಲಿ ದುಡ್ಡು ಮಾಡುವ ಪಾಪಿಗಳ ಕಂಡು ಬೂದಿಯಾದ ಹೆಣವೊಂದು ನಗುತ್ತಿದೆ.


- ಅಂಕುರ


ಶನಿವಾರ, ಜೂನ್ 3, 2023

ಮೆಟ್ರೋ ಕಥನ - ೭೧

 ಮೆಟ್ರೋ ಕಥನ - ೭೧


ಅಂದನು ಮುಂಗಾರಿನ ಹೆಸರಲ್ಲಿ ಮಳೆ ಬಿದ್ದ ನೆಲದಲ್ಲಿ, ಖುಷಿಯಿಂದ ಬೀಜಗಳನ್ನು ಬಿತ್ತಿದನು. ದಿನವಿಡೀ ಶ್ರಮವನ್ನು, ಬೀಜಗಳ ಹಸಿವನ್ನು, ರಾತ್ರಿಯ ಮಳೆಯು ತೇಲಿಸಿತ್ತು. ಕಳೆದೆಂಟು ದಿನದಲ್ಲಿ ಹುಟ್ಟಿದ್ದು ಬರಿಕಸವು, ಅಂದನಿಗೆ ಇದು ಹೊಸತೇನೂ ಅಲ್ಲ. ಮತ್ತೆ ಹೊಲವನ್ನು ಹದ ಮಾಡಿ ಬಿತ್ತಿದನು. ಹಠದಂತೆ ಬಂದ ಮಳೆಯು ಮತ್ತೆ ನಾಶದ ಯುದ್ಧ ಮಾಡಿತು. ರೈತನಾದ ಅಂದನಿಗೆ ತಾಳ್ಮೆ ಇದೆ, ಬೇಸರಿಸದೆ ಹಿಂಗಾರು ಮಳೆಗಾಗಿ ಈಗ ಹೊಲವನ್ನು ಹದ ಮಾಡುತ್ತಿದ್ದಾನೆ.

- ಅಂಕುರ

ಮೆಟ್ರೋ ಕಥನ - ೭೦

 ಮೆಟ್ರೋ ಕಥನ - ೭೦


ನೀಲಗಿರಿ ಮರವೊಂದು ತಾನೆಷ್ಟು ಎತ್ತರಕ್ಕೆ ಹೋಗುವುದೋ, ಬೇರುಗಳನ್ನು ಅಷ್ಟೇ ಆಳವಾಗಿ ನೆಲಕ್ಕಿಳಿಸುವ ಪರಿಯಲ್ಲಿ ವಿಜ್ಞಾನದ ಸಿದ್ಧಾಂತವಿದೆ. ಸಂಶೋಧಕನ ಈ ಪತ್ತೇಪರಿಗೆ ರೈತನೊಬ್ಬ ಈ ನೀಲಗಿರಿ ಇದ್ರೆ ಭೂಮಿಯೆಲ್ಲಾ ಬರಡಾಗುತ್ತೆ, ಆದ್ರೆ ಜೌಗು ನೆಲ ಇದ್ರೆ ನೀರು ನಿಲ್ಲಲ್ಲ  ಸ್ವಾಮಿ, ಸೊಳ್ಳೆ ಜೊತೆಗೆ ಸಾಕಷ್ಟು ಈ ಬೆಳೆ ಕೀಟ ಬರಲ್ಲ ಸ್ವಾಮಿ ಒಂತರಾ ಒಳ್ಳೆದೇ ಈ ಮರ ಎಂದನು. ವಿಜ್ಞಾನಿಗೆ ಕುತೂಹಲ ಹೆಚ್ಚಾಗಿ ಅಧ್ಯಯನಗಳನ್ನ ಹುಡುಕಿದಾಗ ಇದೇ ಉತ್ತರವಿತ್ತು.


- ಅಂಕುರ

ಶುಕ್ರವಾರ, ಜೂನ್ 2, 2023

ಮೆಟ್ರೋ ಕಥನ - ೬೯

 ಮೆಟ್ರೋ ಕಥನ - ೬೯


ಅವನು ಮಾತಿನ ಮೋಡಿಗಾರ. ಮೌನವನ್ನೂ ನಾಜೂಕಿನಿಂದ ಮಾತನಾಡಿಸಬಲ್ಲ. ಸುಳ್ಳನ್ನು ಸತ್ಯದಂತೆ ನಂಬಿಸಬಲ್ಲ. ಎಲ್ಲರಿಗೂ ಅವನ ಬರುವಿಕೆಯೇ ಕಾತುರ. ಇರುವಿಕೆಯಂತೂ ಹರ್ಷದಬ್ಬ. ಏಕೆಂದರೆ ಅವನು ರೇಡಿಯೋ ನಿರೂಪಕ.


- ಅಂಕುರ


ಮೆಟ್ರೋ ಕಥನ - ೬೮

 ಮೆಟ್ರೋ ಕಥನ - ೬೮


ಮೇಷ್ಟ್ರು ಹೇಳಿದರು,

ದಿನ ಎರಡು ನಿಮಿಷ ನಿಮ್ಮ ಬೆಸ್ಟ್ ಪ್ರೆಂಡ್ ಗೆ ಸಮಯಕೊಡಿ. ನಿಮ್ಮನ್ನು ಬೌದ್ಧಿಕವಾಗಿ ಗೆಲ್ಲಿಸುತ್ತಾನೆ ಎಂದರು.

ಸರ್ ಸಾಕಷ್ಟು ಸಮಯ ಕೊಡ್ತಿವಿ ಸರ್, ಫ್ರೆಂಡ್ಸ್ ಜೊತೆಯಲ್ಲೇ ವಾಸ ಸರ್, ಜೊತೆಯಲ್ಲಿಯೇ ತಿಂಡಿ-ಊಟ ಸರ್ ಒಬ್ಬೊಬ್ಬರು ಒಂದೊಂದು ಹೇಳಿದರು. 

ಬೆಸ್ಟ್ ಫ್ರೆಂಡ್ ಎಂದರೆ ಸುದ್ದಿ ಪತ್ರಿಕೆಗಳು ನೀವು ಇವರಿಗಾಗಿ ಅಷ್ಟು ಸಮಯ ಕೊಡ್ತಿರಾ ಎಂದು ಮೇಷ್ಟ್ರು ಆಶ್ಚರ್ಯವಾದಾಗ, ವಿದ್ಯಾರ್ಥಿಗಳು ನಾಚಿ ನೀರಾದರು.

ಪರಿಣಾಮವೆಂಬಂತೆ ಪತ್ರಿಕೆಗಳ ಓದು ಹೆಚ್ಚಾಯಿತು. ಅದೇ ವಿದ್ಯಾರ್ಥಿಗಳು ಸಾಧಿಸಿ, ಅದೇ ಪತ್ರಿಕೆಯಲ್ಲಿ ವಿದ್ಯಾರ್ಥಿಗಳು ಬೆಸ್ಟ್ ಫ್ರೆಂಡ್ ಕಥೆ ಹೇಳಿದ್ದರು.


- ಅಂಕುರ

ಮೆಟ್ರೋ ಕಥನ - ೬೭

 ಮೆಟ್ರೋ ಕಥನ - ೬೭


ಹೆಣ್ಣು ಹುಡುಗಿಯು ಕುರಿಯನ್ನು ಕತ್ತರಿಸಿದ ಬಗೆಗೆ ಎಲ್ಲರೂ ವಾವ್! ಎಂದರು. ಪವರ್ ಅಂದ್ರೆ ಇದು ಎಂದರು. ಆದರೆ, ಯಾವ ಬಲಿಯನ್ನೂ ಕೊಡದೆ, ಮನೆಯನ್ನು ಸ್ವಚ್ಛ ಮಾಡಿ, ಮನಸ್ಸುಗಳನ್ನು ಶುದ್ಧಮಾಡಿ, ಬೆಂದು-ಬೇಯಿಸಿ ಎದೆಗೆ ಅಕ್ಷರವಿತ್ತ ಹೆಣ್ಣನ್ನು ಕಂಡು ಯಾರೂ ವಾವ್ ಎನ್ನಲಿಲ್ಲ. ಅದು ಬಳೆ ತೊಟ್ಟುಕೊಂಡ ಹೇಡಿ ಎಂದೆ ಪ್ರಚಾರವಾಯಿತು. 

ಸಾಹಿತಿಗಳು ಬರೆದದ್ದು ಅಕ್ಷರದಲ್ಲೆ ಉಳಿಯಿತು. ಏಕೆಂದರೆ ಸ್ಥಿತ್ಯಂತರ ಹೊಂದದಿರುವವರು ಎಂದಿಗೂ ಓದುವುದೇ ಇಲ್ಲ.


- ಅಂಕುರ

ಮೆಟ್ರೋ ಕಥನ - ೬೬

 ಮೆಟ್ರೋ ಕಥನ - ೬೬


ಯುವಕನ ಸಾವಿಗೆ ಎಲ್ಲರೂ ಮಮ್ಮಲ ಮರುಗಿದರು. ಓಂ ಶಾಂತಿ, ಮತ್ತೆ ಹುಟ್ಟಿ ಬಾ, ಇದು ತುಂಬಲಾರದ ನಷ್ಟ ಹೀಗೆ ಹಲವಾರು ನೊಂದ ನುಡಿಗಳ ಸಿಕ್ಕಲ್ಲೆಲ್ಲಾ ಬರೆದರು. ಹುಡುಗನ ತಾಯಿ ಆಸ್ಪತ್ರೆಯಲ್ಲಿ ಬಿಲ್ಲು ಕಟ್ಟಲಾಗದೆ, ತಾಳಿ ಮಾರಿ ಹೆಣ ತಂದಳು. ಸಂಸ್ಕಾರಕ್ಕೆ ಹಣ ಇಲ್ಲದೆ, ಸಿಕ್ಕಸಿಕ್ಕವರಲ್ಲಿ ಅಂಗಲಾಚಿ ಮಣ್ಣು ಮಾಡಿದಳು. ಆದರೆ ಮಾಧ್ಯಮ ಇನ್ನೂ ಮಾತಾಡುತ್ತಲೆ ಇತ್ತು. ಇದ್ದಾಗ ಮಾತಾಡಿಸದ, ಕಷ್ಟ ಎಂದಾಗ ಕೈ ಹಿಡಿಯದ ಜನರೆಲ್ಲಾ ಎಲ್ಲದನ್ನೂ ಸೂತಕದಂತೆ ಕಳುಚುತ್ತಾರೆ. ಮಾತು ಕೃತಿಯಾಗಲಿಲ್ಲ.


- ಅಂಕುರ

ಮೆಟ್ರೋ ಕಥನ - ೬೫

 ಮೆಟ್ರೋ ಕಥನ - ೬೫


ಮೇಷ್ಟ್ರು ಹೇಳಿದರು,

ನೀವು ನಿತ್ಯವೂ ಬಿಟ್ಟುಕೊಡುವುದರಲ್ಲಿ ಖುಷಿ ಕಾಣುತ್ತಿರಿ. ಪಡೆದುಕೊಳ್ಳುವ ಖುಷಿ ಕಾಣಬೇಕು ಎಂದರು.

ಈ ಬಿಟ್ಟುಕೊಡುವುದು ಎಂದರೇನು ಸರ್ ಎಂದನು ವಿದ್ಯಾರ್ಥಿ.

ನನ್ನ ಆಸಕ್ತಿ, ಕ್ಷೇತ್ರ, ವಿಷಯ ಎಂದು ಬೇಲಿ ಹಾಕಿಕೊಂಡು ಕಲಿಕೆಯನ್ನು ಮಿತಗೊಳಿಸಿಕೊಳ್ಳುತ್ತಿದ್ದೇವೆ. ನಮಗೆ ಮನುಷ್ಯ ಕಲಿಯುವ ಎಲ್ಲದನ್ನೂ ಕಲಿಯುವ ಶಕ್ತಿ ಇದೆ. ಸಾಯುವವರೆಗೂ ಕೇವಲ ೨೦% ಅಷ್ಟೇ ನಮ್ಮ ಮಿದುಳಿನ ಬಳಕೆಯಾಗುವುದು ಎಂದರು ಮೇಷ್ಟ್ರು.

ವಿದ್ಯಾರ್ಥಿಗಳಿಗೆ ತಮ್ಮ ಶಕ್ತಿಯ ಕುರಿತು ಆಶ್ಚರ್ಯವಾಯಿತು.


- ಅಂಕುರ

ಮೆಟ್ರೋ ಕಥನ - ೬೪

 ಮೆಟ್ರೋ ಕಥನ - ೬೪

ಗಂಡ ಹೆಂಡತಿಗೆ ಜಗಳವಾಗಿ ತನ್ನ ಊರಿನ ಅಜ್ಜಿಯ ಬಳಿ ಹೋದರು‌. ಇಬ್ಬರೂ ಸಾಕಷ್ಟು ದೂರು ಹೇಳಿಕೊಂಡರು. ಅಜ್ಜಿ ಕೇಳುವ ತನಕ ಕೇಳಿ, ಕೊನೆಗೆ ಒಂದೇ ಒಂದು ಮಾತು ಹೇಳಿತು. 'ಗಂಡಿಗೆ ಚಟ, ಹೆಣ್ಣಿಗೆ ಹಠ' ಇಲ್ಲದೆ ಇದ್ರೆ, ನೀವೆ ಬಂಗಾರ ಆಗ್ತಿರಿ. ಅರ್ಥಮಾಡಿಕೊಂಡು ಬದುಕಿ ಅಂತು. ಇಬ್ಬರೂ ಮೌನವಾಗಿ ಮನೆಗೆ ಬಂದರು. ಎನೋ ಅರ್ಥವಾದಂತಾಗಿ ಮೆಲ್ಲಗೆ ನಕ್ಕರು.


- ಅಂಕುರ

ಮೆಟ್ರೋ ಕಥನ - ೬೩

 ಮೆಟ್ರೋ ಕಥನ - ೬೩

ಒಂದು ಊರಿನ ಜನರು ಸಿಗುವ ಆಸೆಗಾಗಿ ಕಳೆದುಕೊಂಡ, ಕೊಳ್ಳುವ ಎಲ್ಲವನ್ನೂ ಮರೆತರು. ೧ರೂ ಪಡೆದುಕೊಂಡು ೧೦೦ಕ್ಕಿಂತಲೂ ಹೆಚ್ಚು ದಂಡ ತೆರುವ ಲೆಕ್ಕಾಚಾರ ಕುರಿತು ಯಾವ ಅರಳಿಕಟ್ಟೆಯಲ್ಲೂ ಚರ್ಚೆಯಾಗಲಿಲ್ಲ. ಏಕೆಂದರೆ ಅವರ ರಾಜನು ಅವರಿಗೆಲ್ಲಾ ದೇವರು. ದೇವರ ಕುರಿತು ಕನಸಿನಲ್ಲೂ ಪ್ರಶ್ನಿಸಬಾರದೆಂಬ ನಂಬಿಕೆಯ ಮೂರ್ಖರಾಗಿದ್ದರು.


- ಅಂಕುರ

ಮೆಟ್ರೋ ಕಥನ - ೬೨

 ಮೆಟ್ರೋ ಕಥನ - ೬೨


ಮೊಲವೊಂದು ಮಕ್ಕಳನ್ನು ಮಣ್ಣಿನ ಗೂಡಿನಲ್ಲಿ ಮಡಗಿತ್ತು. ಆಹಾರ ಹುಡುಕಿ, ಹೊಟ್ಟೆ ತುಂಬಿಸಿಕೊಂಡು ಬಂದು ಮಣ್ಣು ತೆಗೆದು ಗೂಡಿನಿಂದ ಬರುವ ಮಕ್ಕಳಿಗೆ ಹಾಲುಣಿಸುತ್ತಿತ್ತು. ಎಂದಿನಂತೆ ಆಹಾರಕ್ಕೆ ಹೋದ ಮೊಲವು ತಿಂದದ್ದು ಚಿಗುರೆಲೆ, ಗರಿಕೆ ಅಷ್ಟೇ. ಆದರೆ ಆಚೆ ಬರುವಾಗ ಉರುಳಿಗೆ ಸಿಕ್ಕಿ ನರಳಾಡಿ ಸತ್ತಿತು.  ಉರುಳು ಬಿಟ್ಟ ನಾಗರಾಜನ ಮನೆಯಲ್ಲಿ ಮೊಲದ ಮಾಂಸ ಕುದಿಯುತ್ತಿದೆ. ತಾಯಿ ಬರುವ ಆಸೆಯಿಂದ ಮಕ್ಕಳು ಕಾಯುತ್ತಿವೆ.

ಕಾಡಿನಲ್ಲಿ ಅದೆಷ್ಟೋ ತಾಯಿಗಳು ಅನ್ನಕ್ಕಾಗಿ ಹೋಗಿ, ಮತ್ತೊಂದು ಪ್ರಾಣಿಗೆ ಅನ್ನವಾಗುತ್ತವೆ.


ಉರುಳು - ಉಳ್ಳು ಎಂದು ಕರೆಯುವರು. ತೆಳುವಾದ ತಂತಿಯಲ್ಲಿ ನೇಣಿನಂತೆ ಚಿಕ್ಕ ಚಿಕ್ಕ ವೃತ್ತಾಕಾರಗಳ ಜೋಡಣೆಯ ಬಲೆ


- ಅಂಕುರ

ಮೆಟ್ರೋ ಕಥನ - ೬೧

 ಮೆಟ್ರೋ ಕಥನ - ೬೧

ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕನಿಗೆ ಹೆಣ್ಣು ಕೊಡಲಿಲ್ಲ. ಸರ್ಕಾರಿ ಉದ್ಯೋಗಿಯನ್ನೇ ಹುಡುಕಿ ಮದುವೆಯಾದ ದಂಪತಿಗಳು, ತಮ್ಮ ಮಗುವನ್ನು ಶಾಲೆಗೆ ಸೇರಿಸಲು ಖಾಸಗಿ ಶಾಲೆಯನ್ನೇ ಹುಡುಕಿ ಬಂದರು.  


- ಅಂಕುರ

ಮೆಟ್ರೋ ಕಥನ - ೬೦

 ಮೆಟ್ರೋ ಕಥನ - ೬೦

ಇವಳು ಯಾವಾಗಲೂ ಹುಡುಕುತ್ತಲೇ ಇದ್ದಾಳೆ. ಅವಳ ಕಣ್ಣೀರು ಹೇಳಿಕೊಳ್ಳಲು ಒಂದು ನಂಬಿಕೆಯ ಜೀವ ಬೇಕಿದೆ. ಮುಖವಾಡಗಳೇ ಸ್ವಾರ್ಥದ ವೇಗದಲ್ಲಿ ಸಾಗುವಾಗ ಅವಳು ನಿತ್ಯ ಮೌನಿಯಾಗಿದ್ದಾಳೆ. ಎಲ್ಲರೊಂದಿಗೂ ಹರಟುವ, ತಿನ್ನುವ, ಸಾಗುವ ಇವಳಿಗೆ ಒಂದು ಸಾಂಗತ್ಯದ ಅಗತ್ಯವಿದೆ. ತಂದೆಯಲ್ಲಿ ಹುಡುಕಿದರೆ ವ್ಯವಹಾರದಲ್ಲೇ ಕಳೆದುಹೋಗಿದ್ದಾರೆ. ತಾಯಿಯೋ ತನ್ನದೇ ಲೋಕಕ್ಕಾಗಿ ಹಪಾಹಪಿಸುತ್ತಿದ್ದಾರೆ‌. ಸ್ನೇಹಿತರೋ ಒಬ್ಬೊಬ್ಬರು ಒಂದೊಂದು ರೀತಿ. ಲಾಭವೋ, ಸ್ವಾರ್ಥವೋ, ಕಾಮವೋ ಎನೋ ಉಪಯೋಗಿ ಮನಸ್ಸುಗಳ ಕಂಡು ಬೇಸತ್ತಿದ್ದಾಳೆ.

ಇವಳಿಗೆ ಇವಳದೇ ಮನಸ್ಸಿನ ಮತ್ತೊಂದು ಆಲೋಚನೆಯ ಮನಸ್ಸು ಬೇಕಿದೆ. ಇವಳು ಎಲ್ಲಾ ಕಡೆಯೂ ಇದ್ದಾಳೆ. ಎಲ್ಲರೊಳಗೂ ಇದ್ದಾಳೆ.


- ಅಂಕುರ

ಮೆಟ್ರೋ ಕಥನ - ೫೯

 ಮೆಟ್ರೋ ಕಥನ - ೫೯

ಕ್ಷೌರ ಮಾಡುತ್ತಿದ್ದ ಹುಡುಗ ಬಹಳ ಮಾತುಗಾರ. ಏನೇನೋ ಕೇಳಿದ. ನಾನು ಸ್ವಲ್ಪ ಮಾತು ಇಷ್ಟ ಪಡುವ ಕಾರಣ ಕೇಳಿದ್ದಕ್ಕೆಲ್ಲಾ ಹೇಳುತ್ತಿದ್ದೆ. ಎಲ್ಲಿ ತನಕ ಓದು ನಿಲ್ಲಿಸಿದೆ ಎಂದೆ. ಅದಕ್ಕೆ ಓದಲಿಲ್ಲ ಸಾರ್, ಎಂಟನೆ ತರಗತಿಗೆ ಹೋಗಲೇ ಇಲ್ಲ ಎಂದನು. ಹಾಗೇ ಮುಂದುವರೆಸುತ್ತಾ... ಸಾರ್ ಇದೆಲ್ಲಾ ಸುಮ್ಮನೆ ಕೆಲಸ ಮಾಡೋದು.. ನಾನೇನಿದ್ರು ಡೀಲಿಂಗ್ ಜಾಸ್ತಿ ಸಾರ್. ಆಗಂತ ದುಡ್ಡಿಗಾಗಿ ಮಾಡಲ್ಲ. ನನಗೆ ದೋಸ್ತಿಗಳು ಜಾಸ್ತಿ. ನಾವು ಯಾರು ತಂಟೆಗೂ ಹೋಗಲ್ಲ, ನಮ್ ತಂಟೆಗೆ ಬಂದ್ರೆ ಸುಮ್ಮನೆ ಬಿಡಲ್ಲ ಅಷ್ಟೇ. ಸಾರ್ ಒಂದು ವಿಚಾರ ಗೊತ್ತಾ! ನಮ್ಮದೆ ತಪ್ಪು ಜಾಸ್ತಿ ಇದ್ರೆ ಸೀದಾ ಸ್ಟೇಷನ್ ಗೆ ಹೋಗಿ ತಪ್ಪು ಒಪ್ಕೊತಿವಿ. ತಪ್ಪಿಲ್ಲ ಅಂದ್ರೆ ಯಾರೇ ಬಂದ್ರು ಫೈಟ್ ಮಾಡ್ತಿವಿ. ನಮಗೆ ಒಬ್ಬ ಅಣ್ಣ ಇದಾನೆ ಸಾರ್. ಯಾವಾಗಲೂ ಆತನೆ ನಮಗೆಲ್ಲ ದಾರಿ. ಸುಮ್ಮನೆ ಇರಬಾರದಲ ಅದಕೆ ಈ ಕೆಲಸ ಮಾಡ್ತಿನಿ ಎಂದ.

ಮಾತಾಡುತ್ತಲೇ ಬ್ಲೇಡು ಒತ್ತಿ, ಅಮ್ಮಾ! ಎಂದೆ. ಅಯ್ಯೋ, ನೋವಾಯ್ತ ಸಾರ್ ಎಂದನು. ಹಾಗೇನಿಲ್ಲ, ನೀವು ಕೊಲೆ ಮಾಡುವಾಗ ಪಾಪ! ಅದೆಷ್ಟು ನೋವಾಗಬಹುದು ಅಂತ ಭಯ ಆಯ್ತು ಅಂದೆ.

ಹೌದಲ್ವ ಸಾರ್ ಆದರೆ ಆ ತರ ಯೋಚನೆ ಬರಲಿಲ್ಲ ಎಂದನು.

ಅಂತೂ ಕ್ಷೌರ ಮುಗಿದು ಬರುವಾಗ, ಯೋಚನೆ ಮಾಡಪ್ಪ! ನೋವು ಚಿಕ್ಕದಾದ್ರೆನು, ದೊಡ್ಡದಾದ್ರೆನು..

ಬರ್ತಿನಿ ಎಂದು ಹೊರಟೆ.


- ಅಂಕುರ

ಮೆಟ್ರೋ ಕಥನ - ೫೮

 ಮೆಟ್ರೋ ಕಥನ - ೫೮


ಜೊತೆಯಲ್ಲಿ ಬೆಳೆದ ಎರಡು ಗಿಡಗಳಲ್ಲಿ ಮೊಗ್ಗುಗಳ ಕುಡಿ ಬಂದವು. ಪರಸ್ಪರ ನೋಟದಲ್ಲಿಯೇ ಪ್ರೇಮ ಬೆಳೆದು ಅರಳಿ ಪರಿಮಳ ಬೀರಲು ಸಿದ್ಧವಾದವು. ವಿಳಾಸವಿಲ್ಲದ ಮನುಷ್ಯನೊಬ್ಬ ಎಲ್ಲಾ ಕಿತ್ತನು. ಎಲ್ಲೋ ಕೊಂಡೊಯ್ದು, ಎಲ್ಲೋ ವ್ಯಾಪಾರ ಮಾಡಿದನು. ಎರಡೂ ಹೂಗಳು ಬೇರೆ ಬೇರೆ ಮನೆ ತಲುಪಿದವು. ಅವರವರ ಆಸೆಯಂತೆ ಎಲ್ಲಿಯೋ ಸುಂದರಗೊಳಿಸಿ ಒಣಗಿಸುವ ಕಾರ್ಯ ನಡೆದಿತ್ತು.

ಪ್ರೇಮ ವಿರಹದಲ್ಲಿದ್ದ ಹೂವುಗಳಿಗೆ ಬಾಡುವಾಸೆ ಇರದೆ, ಬಣ್ಣ ಮಂಕಾಗಿ, ಅರಳಿದ ಪರಿಮಳವು ಪ್ರೇಮದಲಿ ನಗುವ ಕನಸು ಕನಸಾಗಿಯೇ ಉಳಿದಿತು. ಆದರೆ ಹುಟ್ಟಿದ್ದ ಗಿಡಗಳು ಇನ್ನೂ ಅಲ್ಲೇ ಇವೆ, ಮತ್ತೊಮ್ಮೆ ಹೂಬಿಟ್ಟು ಪ್ರೇಮಿಸಬಹುದು. ಅಗಲಿಸುವ ಅದೆಷ್ಟೋ ಆಸೆಗಳು ದಿನದಿನವೂ ಕಿತ್ತು ಖುಷಿಪಟ್ಟರೂ ಗಿಡಗಳು ಮುನಿದಿಲ್ಲ. ಹತ್ತಿರದಿಂದ ಮನವಿಟ್ಟು ನೋಡಿದಾಗ ತಿಳಿಯಿತು. ಪ್ರೇಮಕ್ಕೆ ನೋವು - ಸಾವು ಇಲ್ಲ, ಅದೊಂದು ಸಂಚಲನ ಸವಿ.


- ಅಂಕುರ

ಮೆಟ್ರೋ ಕಥನ - ೫೭

 ಮೆಟ್ರೋ ಕಥನ - ೫೭


ಆ ರಾಗದಲ್ಲಿ ಪ್ರೇಮದ ಸೆಳೆತವಿತ್ತು. ಮಧು ನಿಶೆಯ ಮನೆಯಂತೆ, ನೀರಿನ ಸಂಚಲನದಂತೆ ಆವರಿಸಿದನು. ಕಾತುರದಿಂದ ಕಂಗೆಟ್ಟು ಹೋದೆ. ಹೃದಯ ಬಡಿತ ಹೆಚ್ಚಾಯಿತು. ಇಷ್ಟು ದಿನ ಅವನ ನೃತ್ಯವನ್ನು ಹಣಕೊಟ್ಟು ನೋಡುತ್ತಿದ್ದೆ. 

ಈಗ ಇಲ್ಲೆ, ಕಣ್ಣೆದುರಲ್ಲೆ, ಹುಡುಕಿದೆ...

ಆ ಪ್ರಶಾಂತ ಬಯಲಲ್ಲಿ ತಂಪು ಸಲಿಲದ ಸನಿಹ ಗರಿಬಿಚ್ಚಿ ಕುಣಿಯುತ್ತಿದ್ದನು ನವಿಲು ಚೆಲುವ.


- ಅಂಕುರ

ಮೆಟ್ರೋ ಕಥನ - ೫೬

 ಮೆಟ್ರೋ ಕಥನ - ೫೬


ಕಾಡಿನಲ್ಲಿ ಆಡಳಿತ ಮಂಡಳಿ ರಚನೆಯಾಯಿತು. ಆಯ್ಕೆಯಾದ ಎಲ್ಲಾ ಪ್ರಾಣಿ ಪಕ್ಷಿಗಳಿಗೆ ಅಲ್ಲಲ್ಲೆ ಸನ್ಮಾನ ನಡೆಯುತ್ತಿತ್ತು. ಆಯಾ ಜಾತಿಯ, ಧರ್ಮದ ಪಕ್ಷಗಳು ಅಭಿನಂದಿಸಿಕೊಳ್ಳುತ್ತಿದ್ದವು. ಸೋತ  ಜೀವಿಗಳು ನಿಂದನೆಯಲ್ಲೇ ಸಮಾಧಾನ ಮಾಡಿಕೊಳ್ಳುತ್ತಿದ್ದವು. ತಾನೇ ಮಾಡಿದ ತಪ್ಪು, ಇಷ್ಟು ಬೃಹತ್ತಾಗಿ ಬೆಳೆದು, ಕೆಟ್ಟದ್ದೇ ಒಳಿತಾಗಿರುವ ಕ್ರೂರ ಸತ್ಯವನ್ನು ನಿಶಕ್ತವಾದ ಮುದಿಸಿಂಹ ನೋಡುತ್ತಿತ್ತು. ಅಲ್ಲೇ ನೇತು ಹಾಕಿದ್ದ ಕಾಡಿನ ಸಂವಿಧಾನದ ಬೋರ್ಡಿನಲ್ಲಿ ಜಾತ್ಯಾತೀತ, ಧರ್ಮಾತೀತ ಅರಣ್ಯ ಸರ್ವಸಮನ್ವಯತೆಯ ಸಾಲುಗಳು ವಿಜೃಂಭಣೆಯಿಂದ ಕಾಣುತ್ತಿದ್ದವು.


- ಅಂಕುರ

ಮೆಟ್ರೋ ಕಥನ - ೫೫

 ಮೆಟ್ರೋ ಕಥನ - ೫೫


ರಾಜನು ಕುದುರೆಯ ಮೇಲೆ ಹೋಗುವಾಗ ರಾಜನಷ್ಟೇ ಕಂಡನು. ಏಕೆಂದರೆ ಅವನಲ್ಲಿ ಸುಖವಿತ್ತು. ನಿಜವಾಗಿಯೂ ಕುದುರೆ ಅಲ್ಲಿ ಶೋಷಣೆಯೊಳಗಿತ್ತು. ಅದು ಪ್ರತಿ ಕ್ಷಣವೂ ನೋವನ್ನೇ ಅನುಭವಿಸುತ್ತಿತ್ತು. ಆದರೆ ರಾಜನ ಕಾರ್ಯ ದೇವರ ಸೇವೆ ಅನಿಸಿತ್ತು. ಕುದುರೆಯ ಕ್ಷೇಮಕ್ಕಾಗಿ ರಾಜನು ಹಲವು ಯೋಜನೆಗಳನ್ನು ತಂದನು. ಉನ್ನತವಾದ ಪೋಷಣೆ, ಗುಣಮಟ್ಟದ ಆಹಾರ, ಹೊಸತಾದ ಲಾಳ, ರತ್ನಗಂಬಳಿ ಹೀಗೆ. ಕುದುರೆ ಆನಂದಪಟ್ಟಿತು. ಆದರೆ ಈ ಪೋಷಣೆಯು ತನ್ನ ಶೋಷಣೆಗಾಗಿಯೇ ಎಂದು ಕುದುರೆಗೆ ತಿಳಿಯಲೇ ಇಲ್ಲ. ರತ್ನಗಂಬಳಿಯ ಮೇಲೆ ರಾಜ ಕುಳಿತಿದ್ದಾನೆ. ಕುದುರೆ ಚಲಿಸುತ್ತಲೇ ಇದೆ. ಇದು ದೇವರ ಸೇವೆಯೆಂದೇ ತಿಳಿದಿದೆ.


- ಅಂಕುರ

ಸೋಮವಾರ, ಮೇ 22, 2023

ಮೆಟ್ರೋ ಕಥನ - ೫೪

 ಮೆಟ್ರೋ ಕಥನ - ೫೪


ಹೆಚ್ಚು ನೀರಿನಲ್ಲಿ ಎಣ್ಣೆಯ ಹನಿ ತೇಲುತ್ತದೆ. ಹೆಚ್ಚು ಎಣ್ಣೆಯಲ್ಲಿ ನೀರಿನ ಹನಿ ತೇಲುತ್ತದೆ. ಕೆಡುಕಿನೊಳಗೆ ಒಳಿತು, ಒಳಿತಿನೊಳಗೆ ಕೆಡುಕು ಹೀಗೆಯೇ ಇರುತ್ತದೆ. ಮಿಶ್ರಣದಂತೆ ಕಂಡರೂ ಹೆಚ್ಚು ಇರುವುದು ತಾನಾಗಿಯೇ ತೇಲಿಸುತ್ತದೆ. 


- ಅಂಕುರ

ಮೆಟ್ರೋ ಕಥನ - ೫೩

 ಮೆಟ್ರೋ ಕಥನ - ೫೩


ಒಂದು ಸುಂದರವೆಂಬ ಹೊಗಳಿಕೆಯ ಮಹಾನಗರವಿದೆ. ರಾಜ, ರಾಣಿ, ಶ್ರೀಮಂತ ದೊರೆಗಳು ಇರುವ ನಗರವಿದು. ಎಲ್ಲಾ ಮಾಧ್ಯಮಗಳೂ ನಗರದಲ್ಲೇ ಇವೆ. ಇಲ್ಲಿನ ತೆರಿಗೆಯೇ ಕೋಟಿ ಲೆಕ್ಕದಲ್ಲಿ. ಈ ಮಹಾನಗರಕ್ಕೆ ಎಂದಿನಂತೆ ಮಳೆ ಬಂದಿತು. ಗೊತ್ತಿಲ್ಲದೆ ಬಂದ ಹೆಣ್ಣು ಮಗಳು ರಸ್ತೆಯಲ್ಲಿ ಮುಳುಗಿ ಸತ್ತಳು. ಮಹಾನಗರಕ್ಕೆ ಕಣ್ಣು ಬಂದು ಶತಮಾನವೇ ಕಳೆದರೂ ರಸ್ತೆ, ಕೊಳಚೆ, ಬಡತನ ಹಾಗೆಯೇ ಉಳಿದಿವೆ. ಕಂಡರೂ ಕಾಣದಂತೆ ಬಹು ಎಚ್ಚರದಲ್ಲಿ ಸಾಗುತ್ತಿರುವ ಬುದ್ಧಿವಂತರಿಗೆ ಇಲ್ಲಿ ಕಣ್ಣಿಲ್ಲ. ಮುಳುಗಿ ಸತ್ತವರಂತೆ ನಿತ್ಯವೂ ಕೊಳಚೆ, ಬಡತನಗಳ ಹಾಸಿ-ಹೊದ್ದು ಸಾಯುವ ಮಂದಿಗಳು ಲೆಕ್ಕವಿಲ್ಲ. ಸುಂದರ ಸುಳ್ಳು ಹೇಳುವ ಮಂದಿಗೆ ಬೇಕಾಗಿಯೂ ಇಲ್ಲ. ಮಗಳನ್ನು ಕಳೆದುಕೊಂಡ ತಾಯಿಯ ಕಣ್ಣೀರಲ್ಲಿ ಈ ಕಥೆ ಕಾಣುತ್ತಿತ್ತು.


- ಅಂಕುರ

ಶನಿವಾರ, ಮೇ 20, 2023

ಮೆಟ್ರೋ ಕಥನ - ೫೨

 ಮೆಟ್ರೋ ಕಥನ - ೫೨


ಚೆನ್ನನು ಇತ್ತೀಚೆಗೆ ಟೀವಿಯನ್ನು ಗಂಭೀರವಾಗಿ ನೋಡುತ್ತಾನೆ. ಜೊತೆಯಾಗುವ ನಾಲ್ಕಾರು ಜನಕ್ಕೆ ಅವರು ಹೀಗೆ ಮಾಡಿದರು, ಇವರು ಹೀಗೆ ಮಾಡಿದರು ಎಂದು ಹೇಳುತ್ತಿದ್ದಾನೆ. ಇವರೇ ಮಂತ್ರಿ, ಮುಖ್ಯಮಂತ್ರಿ ಆಗಿದ್ದರೆ ಚೆಂದವೆಂದು ಸಲಹೆ ನೀಡುತ್ತಾನೆ. ಉಚಿತ ಯೋಜನೆಗಳು ಸರಿ, ಸರಿಯಲ್ಲ, ಹಣ ಎಲ್ಲಿಂದ ತರುವರು! ಏನೇನೋ ತಲೆಗೊಂದು ಪ್ರಶ್ನೆಗಳ ತಂದು ದಿನ ತಳ್ಳುತ್ತಾನೆ. ದುರಂತವೆಂದರೆ, ಚೆನ್ನನ ಅಭಿಪ್ರಾಯಕ್ಕಾಗಿ ಅಧಿಕಾರದಲ್ಲಿ ಯಾರೂ ಕಾಯುವುದಿಲ್ಲ. ಕಾದಿದ್ದು ಅವನ ಮೇವಿಲ್ಲದಿದ್ದರೂ ಹಾಲು ನೀಡುತ್ತಾ ಹಂಬಲಿಸುವ ಹಸು, ನೀರಿಲ್ಲದೆ ನೆರಳಾದ ತೆಂಗು, ಬೇಸಿಗೆಯ ತಣಿಸುವ ಮಾವು, ಕೂಲಿಯಂತೆ ದುಡಿವ ಹೆಂಡತಿ, ಓದಲಾಗದೆ ಹಾಳಾಗುತ್ತಿರುವ ಮಕ್ಕಳು. 

ಚೆನ್ನನು ಯಜಮಾನ, ಅವನಿಗೆ ಮರ್ಯಾದೆ ಮುಖ್ಯ. ಮರ್ಯಾದೆಗಾಗಿ ಅವನು ಎಲ್ಲಾ ಮನೆಯಲ್ಲೂ ಕಾಣುತ್ತಿದ್ದಾನೆ.



- ಅಂಕುರ

ಮೆಟ್ರೋ ಕಥನ - ೫೧

 ಮೆಟ್ರೋ ಕಥನ - ೫೧


ಕಾಡು ಹರಟೆಯ ಸ್ನೇಹಗಳು ಕೈಯಲ್ಲಿ ಸಿಗರೇಟು, ಚಹಾ, ಕಾಫಿಯಿಡಿದು ಕುಡಿಯುತ್ತಾ, ಕೆಲವರು ತಂಬಾಕು ಜಗಿಯುತ್ತಾ, ದೊಡ್ಡ ದೊಡ್ಡ ವಿಚಾರಗಳೊಂದಿಗೆ ಕಾಲಹರಣ ಮಾಡುತ್ತಿರುವ ಯುವಸಮೂಹವು ಎಲ್ಲೆಲ್ಲೂ ಕಾಣುತ್ತವೆ. 

ಆದರೆ, 

ರೂಪಾಯಿ ನಾಣ್ಯದಿಂದ ಹಿಡಿದು, ಸೌಧಗಳನ್ನು ನಿರ್ಮಿಸುವ ಯಾರೂ ಕೂಡ ಕಾಣಿಸಿಕೊಳ್ಳದೆ ಚಿಕ್ಕ ಚಿಕ್ಕ ಹೊಸ ನಿರ್ಮಿತಿಗಳ ಸೃಷ್ಟಿಸುತ್ತಲೇ ಇದ್ದಾರೆ. ವಿಜ್ಞಾನಿಯೊಬ್ಬರು ದೆವ್ವ ಮತ್ತು ದೇವರಿಗೆ ಈ ರೀತಿಯಲ್ಲಿ ಉದಾಹರಣೆ ನೀಡಿದರು.


- ಅಂಕುರ