ಕೆಲಸವಿಲ್ಲದವರು
ನಿಜಕ್ಕೂ ಕರಾಳಯುಗದಲ್ಲಿ ಬದುಕುತ್ತಿದ್ದೇನೆ ನಾನು!
ಮುಗ್ಧತೆಯ ಮಾತುಗಳು
ನಗೆಪಾಟಲಾಗಿವೆ.
ತಿದ್ದಿ ಅಂದಗೊಳಿಸಿದ
ಹುಬ್ಬುಗಳ
ಹಿಂದೆ ಅ-ಸಂವೇದನೆಯು ಅಡಗಿ
ಕುಳಿತಿದೆ.
ಭೀಕರ ವರದಿಗಳು ನಮಗೇನೂ
ಗೊತ್ತೇಯಿಲ್ಲ
ಎಂಬಂತೆ ಮುಖದ ಮೇಲೆ ನಗುವು ಸುಳಿದಾಡುತ್ತಿದೆ.
- ಬರ್ಟಾಲ್ಟ್ ಬ್ರೆಕ್ಟ್ (೧೯೩೭-೩೮)
ನಾವು ಯಾವುದನ್ನು
ಯೋಚಿಸುತ್ತೇವೆಯೋ ಅದನ್ನು ಗಳಿಸಲು ಮಾಡುವ ಎಲ್ಲಾ ತಂತ್ರಗಳೇ ನಮ್ಮ ಸೋಲುಗಳು. ಈ ಸೋಲನ್ನೇ ಇಂದು
ಅಭಿವೃದ್ಧಿ ಹಾಗೂ ವ್ಯವಹಾರವೆಂದು ಭಾವಿಸಿದ್ದೇವೆ. ಇಲ್ಲಿ ನಮ್ಮ ಗೆಲವು ಮಾತ್ರ ನಮ್ಮ ಕಣ್ಣಿನ ಮುಂದೆ ಇರುತ್ತದೆ. ಆದರೆ
ಸುತ್ತಲೂ ಸೋಲುಗಳ ಶವದಿಂದ ನಮ್ಮ ಗೆಲುವಿನ ನೈಜತೆಯನ್ನು ತಿಳಿಯುವುದೇ ಇಲ್ಲ. ಇಂತಹ ನೈಜತೆಯ
ಬೆಳಕೇ ಯೌವನದ ಪಾತ್ರಗಳು.
ಪ್ರತಿಯೊಬ್ಬರೂ
ಜೀವನದಲ್ಲಿ ಹಂಬಲಿಸುವ ವಯಸ್ಸೆಂದರೆ ಅದುವೇ ಯೌವನ. ಆದರೆ ಅದೇ ಸಮಸ್ಯೆ ಎಂದರೆ ಒಪ್ಪುವುದಾದರೂ
ಹೇಗೆ? ಈ ಒಪ್ಪಿಗೆಯ ಹಿಂದೆ
ಸಮಸ್ಯೆಗಳನ್ನೆ ಚೆಲ್ಲಿಕೊಂಡು ಕುಳಿತಾಗ ಸಾಹಸಗಳೆಲ್ಲಾ ಗೌಣವಾಗುತ್ತವೆ. ಸೈನ್ಯದಲ್ಲಿ ಯೌವನಕ್ಕೆ
ಮಾತ್ರ ಅವಕಾಶ. ಯೌವನ ಮೀರಿದ ಪ್ರತಿಯೊಬ್ಬರೂ ನಿವೃತ್ತರು. ಜಗತ್ತನ್ನೇ ಕಾಪಾಡುವ ಮೊದಲ
ಹುದ್ದೆಯಾದ ಸೈನ್ಯದಲ್ಲಿಯೇ ಯುವ ಮನಸ್ಸುಗಳಿಗೆ ಸರಿಯಾದ ವ್ಯಾಖ್ಯಾನವಿದೆ.
‘ಕೆಲಸವಿಲ್ಲದವರು’ ಎಂಬ ಕಣ್ಣೋಟವು ಸಮಾಜದಲ್ಲಿ ಯೌವನದಲ್ಲಿರುವ ಪ್ರತಿಯೊಬ್ಬರಿಗೂ
ಬೀರುತ್ತದೆ. ಕಂಡ ತಕ್ಷಣವೇ ‘ಓದಿದ್ದು ಮುಗೀತಾ, ಏನ್ ಕೆಲಸ ಮಾಡ್ತಾ ಇದ್ದೀಯಾ, ಹೀಗಾದರೆ ಜೀವನಕ್ಕೆ ಹೇಗೆ?’ ಈ ಎಲ್ಲಾ ಪ್ರಶ್ನೆಗಳು
ಪ್ರತಿಹೆಜ್ಜೆಯಲ್ಲೂ ಕಾಡುತ್ತವೆ. ಪುರುಷರಿಗಾದರೆ ಈ ಪ್ರಶ್ನೆಗಳು ಆಯ್ಕೆಯಿಲ್ಲದ ಸೂಚನೆಗಳು.
ಮಹಿಳೆಗಾದರೆ ಇಷ್ಟು ಪ್ರಶ್ನೆಗಳೇ ಇಲ್ಲದೇ ಒಂದು ಜೈಲು ವಾಸಕ್ಕಾಗಿ ಸಕಲ ಸಿದ್ಧತೆಗಳು. ಅಂದರೆ
ಒಂದು ಗಂಡು ನೋಡಿ ಮದುವೆ ಮಾಡಿದರಾಯಿತು. ಮದುವೆಯಾದರಾಯಿತು ಅಂದರೆ ಎಲ್ಲಾ ಮುಗಿಯಿತು.
ಯೌವನವೆಂದರೆ ಕೆಲಸವಿಲ್ಲದ
ವಯಸ್ಸೆಂದು ಭಾವಿಸುವುದಾದರೂ ಹೇಗೆ? ಮನೆಯ ಎಲ್ಲಾ ಕೆಲಸಗಳು ಲೆಕ್ಕವಿಲ್ಲದೆ ಮಾಡುವವರು ಯಾರು? ತಾನು ಶಾಲೆಯಿಂದ ಕಾಪಾಡಿಕೊಂಡೋ, ಕಿತ್ತಾಡಿಕೊಂಡೊ ಬಂದಂತಹ ಸ್ನೇಹಿತರನ್ನೆಲ್ಲಾ ದಿನನಿತ್ಯ ವಿಚಾರಿಸಿಕೊಂಡು ಕಾಪಾಡುವವರು
ಯಾರು? ಇವರು ಸಾಲುವುದಿಲ್ಲವೆಂದು
ಜಾಲತಾಣಗಳಲ್ಲಿ ಜಾಲಾಡಿ ಹೊಸ ಸ್ನೇಹಿತರನ್ನು ಸಂಪಾದಿಸುವವರು ಯಾರು? ಈ ಸಂಪಾದಿಸಿದ ಸ್ನೇಹಿತರ ಕಷ್ಟ-ಸುಖಗಳಿಗಾಗಿ ಮಾಡುವ ಸಾಹಸಗಳು
ಅಷ್ಟಿಷ್ಟೇ. ಇದೆಲ್ಲವನ್ನೂ ಕೆಲಸವೆಂದು ಏಕೆ ಪರಿಗಣಿಸಿಲ್ಲ. ಅಂದರೆ ನಮ್ಮಲ್ಲಿ ಕೆಲಸವೆಂದರೆ ಸಂಬಳವಿರಬೇಕು.
ಹಣದಿಂದ ಅಳೆಯುವುದು, ಹಣಕ್ಕಾಗಿ ದುಡಿಯುವುದು ಮಾತ್ರ ಕೆಲಸವೆಂದು ಭಾವಿಸಲಾಗಿದೆ.
ಈ ವಿಚಾರವನ್ನು ಸೂಕ್ಷ್ಮವಾಗಿ ನೋಡಿದರೆ
ಪ್ರೀತಿಯನ್ನು ಈ ಜಗತ್ತಿನಲ್ಲಿ ಕಾಮವನ್ನಾಗಿ ಪರಿವರ್ತಿಸಿ ಅದರ ಮೌಲ್ಯವನ್ನು ನಾಶಗೊಳಿಸಲಾಗಿದೆ.
ಕೆಲಸವಿಲ್ಲದವರು ಎಂದು ಕರೆಯುವ ಪ್ರತಿಯೊಬ್ಬರೂ ಈ ಪ್ರೀತಿಯ ಕಾರ್ಯಗಳನ್ನು ಮಾಡುತ್ತಿರುತ್ತಾರೆ.
ಅದಕ್ಕೆ ಸರಿಯಾದ ಪೋಷಣೆ ದೊರೆತರೆ ಆಲದ ಮರವೂ ಆಗಬಹುದು. ಜಗತ್ತನ್ನೇ ವಿಶ್ವಾಸದ ಅಡಿಯಲ್ಲಿ ಬಿಳಲು
ಬಿಟ್ಟು ನೆರಳಾಗಬಹುದು. ಬರಿ ಋಣಾತ್ಮಕ ಘೋಷಣೆಯಿಂದ ಹಣೆಪಟ್ಟಿ ಕಟ್ಟಿದರೆ ಸತ್ಯದ ಜಾಗದಲ್ಲೆಲ್ಲಾ
ಸುಳ್ಳುಗಳು ಸಹಜವಾಗುತ್ತವೆ. ಪ್ರೀತಿಯು ಕೇವಲ ಕಾಮವಾಗುತ್ತದೆ. ತನ್ನ ಅಗತ್ಯವನ್ನು ಸದಾ ಆಸೆಪಡುತ್ತದೆ.
ತೃಪ್ತಿಯಿಲ್ಲದ ಅತೃಪ್ತಿಯಲ್ಲಿ ಸದಾ ಹಂಬಲಹೊಂದುತ್ತದೆ.
ಈ ಮಾರ್ಗದಲ್ಲಿ ನಿಮ್ಮ ಜಗತ್ತಿನಲ್ಲಿರುವ ಕೆಲಸವಿಲ್ಲದವರನ್ನು. ಗಮನಿಸಿ. ಅವರಿಗೆ ಪ್ರೀತಿ ತುಂಬಿ, ಅವರ ಕೆಲಸಗಳನ್ನು ಗೌರವಿಸಿ, ಪೋಷಿಸಿ, ಸರಿಯಾದ ರೂಪಕೊಡಿ. ಇದು ಸರಿಯಿಲ್ಲವೆಂದು ಹೇಳುವುದಕ್ಕಿಂತ, ಇದರಲ್ಲಿ ಸರಿಯಾದ ದಾರಿಯಿದು ಎಂದು ತೋರಿದರೆ ಅವರಿಂದ ಕಾಣುವ
ಬೆಳಕು ನಿಮ್ಮಿಂದ ಪ್ರಕಾಶವಾಗಿ ಜಗತ್ತನ್ನು ಬೆಳಗುತ್ತದೆ.
-ಅಂಕುರ ೧೧-೧೨-೨೦೨೦
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ