ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಸೆಪ್ಟೆಂಬರ್ 30, 2016

1. ಕನ್ನಡವೆಂಬ ಹಕ್ಕುಗಾರಿಕೆ

ಒಂದು ಭಾಷೆಯ ಮೇಲೂ ಹಕ್ಕುಗಾರಿಕೆ ಇದೆಯೇ? ಭಾಷೆ ಭಾವನೆಗಳಿಗೆ ಸಂಬಂಧಿಸಿದ ಮಾಧ್ಯಮವೆಂದರೆ ಹಕ್ಕುಗಾರಿಕೆ ಯಾರದು ನೀವೇ ಯೋಚಿಸಿ.

        ಇತ್ತೀಚಿಗೆ ಮಕ್ಕಳ ಮಾತಿನಲ್ಲಿ ಭವಿಷ್ಯದ ಭಯ ಕಾಡುತ್ತಿದೆ. ‘ಕನ್ನಡ ಮಾತಾಡಿದಕ್ಕಾಗಿ ದಂಡ ಕಟ್ಟಿದ ನಮ್ಮ ಖಾಸಗಿ ಶಾಲೆಯ ಮಕ್ಕಳು, ನಮ್ಮ ಶಾಲಾ ಆವರಣ ಪೂರ್ತಿ ಕನ್ನಡ ಮಾತನಾಡುವುದನ್ನು ನಿಷೇಧಿಸಲಾಗಿದೆ ಎನ್ನುವ ಮಕ್ಕಳ ನುಡಿಗಳು, ನಮ್ಮ ಶಾಲೆ ಕನ್ನಡ ವಿಷಯವೇ ಇಲ್ಲ ಆದ್ದರಿಂದ ಊರಿಗೆ ಬಂದಾಗ ಮಾತ್ರ ಕನ್ನಡ ಮಾತನಾಡಬೇಕಿದೆ ಎನ್ನುವ ಮಕ್ಕಳು ಇವರೆಲ್ಲಾ ನಮ್ಮ ಮುಂದೆ ಸಾಕಷ್ಟು ಪ್ರಶ್ನೆಗಳನ್ನು ಇಡುತ್ತಿದ್ದಾರೆ. ಎಕೆ ಈ ದನಿ ನಮಗೆ ಕೇಳುತ್ತಿಲ್ಲ.
           ಸ್ವಲ್ಪ ಯೋಚಿಸೋಣ! ನಿಜವಾಗಿಯೂ ಕರ್ನಾಟಕದಲ್ಲಿ ಕನ್ನಡವೆಂಬ ಹಕ್ಕುಗಾರಿಕೆ ಕಿತ್ತುಕೊಂಡವರಾರು? ಇದುವರೆಗೂ ಯಾವುದಾದರೂ ಮಗುವಿನಿಂದ ಈ ಕನ್ನಡ ಭಾಷೆ ಸರಿಯಿಲ್ಲ ಈ ಭಾಷೆಯನ್ನು ಶಾಲಾ ವಾತಾವರಣದಿಂದಲೇ ತೆಗೆದು ಹಾಕಿ ಎಂಬ ದನಿ, ಕೂಗು, ಕೊರಗು ಈ ಕರ್ನಾಟಕದಲ್ಲಿ ಮೂಡಿದೆಯೇ. ಇಲ್ಲವಲ್ಲ. ಈ ಹಕ್ಕುಗಾರಿಕೆ ಕಿತ್ತುಕೊಂಡ ಹೀನ ಸಂಸ್ಕøತಿ ಮೊದಲು ಹುಟ್ಟಿದ್ದು ನಮ್ಮ ಶಿಕ್ಷಣ ಕಲಿತವರಿಂದಲೇ. ಅದರಲ್ಲೂ ಶಿಕ್ಷಕರಿಂದಲೇ. ಎರಡನೇ ವರ್ಗ ಎಡಬಿಡಂಗಿ ಪೋಷಕರದು. ಇವರು ಮಕ್ಕಳನ್ನು ದುಡ್ಡುಬಿಡುವ ಮರವನ್ನಾಗಿ ಮಾಡುವ ಕನಸು ಕಂಡವರು. ಮಕ್ಕಳಿಗೂ ಒಂದು ಮನಸ್ಸಿದೆ ಎಂದು ಈ ಎರಡೂ ವರ್ಗಕ್ಕೂ ಯಾವತ್ತಿಗೂ ತಿಳಿಯುವುದಿಲ್ಲ ಏಕೆಂದರೆ ಇವರದು ರಿಪೇರಿಯಾಗದ ಮನಸು.
ಇನ್ನು ಸಮಾಜಕ್ಕೆ ಬಂದರೆ ಇದೊಂದು ಮಾರುಕಟ್ಟೆ ಇಲ್ಲಿ ಭಾಷೆಗೆ ಬೆಲೆ ಇರುವಷ್ಟೂ ಬೇರೆಲ್ಲೂ ಇರಲಾರದು. ನೂರು ವರ್ಷದ ಹಿಂದೆ ಕನ್ನಡ ಇಲ್ಲಿ ಹೇಗಿತ್ತೋ ಈಗಲೂ ಹಾಗೆ ಇದೆ. ಇದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇಲ್ಲಿ ಕೆಲವರು ಕನ್ನಡ ಉಳಿಸುವ ಮುಖವಾಡ ಹಾಕಿಕೊಂಡು ಕುಷ್ಠರೋಗಿಗಳಂತೆ ತಿರುಗುತ್ತಿದ್ದಾರೆ. ಇವರಿಗೆ ಸಂಘವಿದೆ, ಬಳಗವಿದೆ, ಉಕ್ಕಿ ಹರಿಯುವ ಕನ್ನಡ ಪ್ರೀತಿಯೂ ಇದೆ ಎಂದು ನಂಬಿಸಲಾಗಿದೆ. ಇವರು ಹೋರಾಟ, ಅರಿವು, ಜಾತ್ರೆ ಸಾಕಷ್ಟು ಮಾರ್ಗಗಳಿವೆ. ಅಷ್ಟೇ ಯಾಕೆ ಕಷ್ಟ ಪಟ್ಟು ಬರೆದು ನಿದ್ರಿಸುತ್ತಿರುವ ಸಾಹಿತಿಗಳೂ ಇದ್ದಾರೆ ಇವರು ಉಪ್ಪಿನಕಾಯಿಯಂತೆ. ಎನಾದರೂ ಮಾಡಿ ಸರ್ಕಾರದ ಹಣ ದೋಚಲು ಕಾಸಿಗೊಂದರ ಕಜ್ಜಾಯವಿದ್ದಂತೆ. (ಸಾಹಿತಿಗಳೇ ನಿಮ್ಮ ತೂಕದ ಭಾಷಣಕ್ಕೆ ಸಮಾಜ ಎಂದಿಗೂ ಪಾಕವಾಗಲ್ಲಿಲ್ಲ ಸ್ವಾಮಿ ಏಕೆಂದರೆ ಸಮಾಜಕ್ಕೂ ನಿಮಗೂ ಬಸ್ಸು ರೈಲಿನ ಸಂಬಂಧ). ಇವರ ಈ ಹುಚ್ಚುಗಾರಿಕೆಗೆ ಅರ್ಥವಿದೆ, ಸಾಕಷ್ಟು ಹಣವೂ ದೊರಕುತ್ತಿದೆ ಆದರೆ ಇವರ ಪ್ರಯೋಗ ಆರೋಗ್ಯವಂತನ ಮೇಲೆ ಅತಿಯಾದ ಕಾಳಜಿಯಿದ್ದಂತೆ. ನಿಜವಾಗಿ ಸಮಸ್ಯೆಯಿರುವುದು ಔಪಚಾರಿಕ ಕ್ಷೇತ್ರದಲ್ಲೇ. ನಿಮ್ಮ ಪ್ರಯೋಗ ಮೊದಲು ಪ್ರಯೋಗಗೊಳ್ಳಬೇಕಾದುದು ಶಾಲೆಗಳ ಮೇಲೆ. ಹೀಗೆ ಚಿಂತಿಸಿದರೆ ಹಲವು ಕ್ಷೇತ್ರಗಳು ಜೊತೆಯಾಗುತ್ತವೆ.
              ಕಿರು ಚಿಂತನೆಯ ಕೊನೆಯಲ್ಲಿ ಕನ್ನಡ ಬೋಧಿಸುವವರ ಗಮನಿಸೋಣ! (ಸರ್ಕಾರಿ  ಬಡವರ ಬಂಧುಗಳನ್ನು ಇಲ್ಲಿ ಪರಿಗಣಿಸಲಾಗದು) ಇವರು ಆಹಾರದಲ್ಲಿ ತಳ ಒತ್ತಿದ, ಸೀದು ಕಮಟಾದ ಇಲ್ಲವೇ ಆಟಕ್ಕುಂಟು ಲೆಕ್ಕಕ್ಕೆ ಇದ್ದೂ ಇಲ್ಲದ ವಿಧೂಷಕರು(ಕ್ಷಮಿಸಿ ಕಾಳಜಿಯಲ್ಲಿ ಸ್ವಲ್ಪ ಹೊಗಳಿಕೆ ಜಾಸ್ತಿಯಾಗಿರಬಹುದು). ಕನ್ನಡ ವಿಷಯವೆಂದರೆ ವೇಳಾಪಟ್ಟಿ ತಯಾರಕರು ಮೊದಲೇ ನಿರ್ಧರಿಸಿ ಬಿಟ್ಟಿರುತ್ತಾರೆ. ಮಕ್ಕಳಿಗೆ ಕೆಲವು ಬೋಧನೆಯ ನಂತರ ಬೇಸರಕ್ಕೆ ಮೀಸಲಾದ ವಿಷವೇ ಕನ್ನಡವೆಂದು. ಹೌದು ವೇಳೆವಾಳಿಗಳೇ ನಾವೂ ವಿಧೂಷಕರೇ ನಿಮ್ಮ ಅರೆ ಹುಚ್ಚು ಬೋಧನೆಯಿಂದ ನೊಂದ ಮಕ್ಕಳ ಹೃದಯ ಅರಳಿಸುತ್ತೇವೆ ಜೀವ ಚೈತನ್ಯ ನೀಡುತ್ತೇವೆ. ಏಕೆಂದರೆ ಈ ಮಣ್ಣಿನ ಭಾಷೆಗೆ ಈ ಮಕ್ಕಳ ಹೃದಯವಿಹಾರದ ದಾರಿ ಗೊತ್ತು. ಈಗ ಹೇಳಿ ಕನ್ನಡವೆಂಬ ಹಕ್ಕುಗಾರಿಕೆ ಯಾರದೆಂದು..!

1 ಕಾಮೆಂಟ್‌:

Unknown ಹೇಳಿದರು...

ಉತ್ತಮವಾದ ಯೋಚನಾ ಲಹರಿಗೆ ಮನ ಹಾಯಿಸಿರುವೆ ಗೆಳೆಯ...ನಿಜ ಮಕ್ಕಳ ಹೃದಯ ಅರಳಿಸುವವರೆ ನಾವು