ಜೀವನ ಪ್ರೀತಿ

ಸಾಹಿತ್ಯವು ಜೀವನದ ಸಂಸ್ಕೃತಿ

ಈ ಬ್ಲಾಗ್ ಅನ್ನು ಹುಡುಕಿ

ಶನಿವಾರ, ಫೆಬ್ರವರಿ 8, 2020

ಕೀರ್ತನೆಗಳು

ನಿನ್ನ ಧ್ಯಾನವ ಮಾಡುತ್ತಾ...
-ಶ್ರೀ ವ್ಯಾಸರಾಯರು

ನಿನ್ನ ಧ್ಯಾನವನ್ನು ಮಾಡುತ್ತಿದ್ದರೂ ನನ್ನ ಮನಸ್ಸು ಬೇರೆ ಬೇರೆ ವಿಚಾರಗಳ ಕಡೆಗೆ ಆಸಕ್ತಿ ತೋರುತ್ತಿದೆ. ನಿನ್ನ ಕುರಿತು ನನ್ನ ಭಕ್ತಿ ಕಡಿಮೆ ಆಗುತ್ತಿದೆ ಆದ್ದರಿಂದ ಈ ಮನಸ್ಸನ್ನು ಬೇರೆಕಡೆಗೆ ಸೆಳೆಯದಂತೆ ಕರುಣಿಸು ಸಿರಿಕೃಷ್ಣರಾಯ ಎಂದು ಶ್ರೀವ್ಯಾಸರಾಯರು ಹಾಡುತ್ತಿದ್ದಾರೆ.

ಮನಸ್ಸನ್ನು ಕೇಂದ್ರೀಕರಿಸಿ ನಮ್ಮ ಗುರಿಯನ್ನು ತಲುಪುವ ಕುರಿತು ಈ ಕೀರ್ತನೆ ತಿಳಿಸುತ್ತದೆ.

ಗಂಡನು ಪ್ರಿಯನಾಗಿದ್ದರೂ ಬೇರೆ ಪುರುಷನನ್ನು ಇಷ್ಟ ಪಡುವಂತ ಕೆಟ್ಟ ಮನಸ್ಸು ನೀಡಬೇಡ.
ಕಿವಿಗೆ ಹಿತವಾದ ಒಳ್ಳೆಯ ಜೀವನ ಸಂದೇಶಗಳಂತಹ ತತ್ವಗಳಿದ್ದರೂ ಕೆಟ್ಟ ವಿಚಾರಗಳ ಕಡೆಗೆ ಈ ಮನಸ್ಸು ಸೆಳೆಯುತ್ತಿದೆ. ಮತ್ತೆ ಹಿತನುಡಿಗಳ ಕಡೆಗೆ ವಾಲಿಸು ನನ್ನ ಮನಸ್ಸುನ್ನು ಎಂದು ನಮ್ಮ ಚಂಚಲತೆಯನ್ನು ಸರಿಪಡಿಕೊಳ್ಳುವ ಕುರಿತು ಹೇಳುತ್ತಿದ್ದಾರೆ.

ನಿತ್ಯವೂ ಶ್ರೇಷ್ಠವಾದ ಆಹಾರ ಸೇವಿಸುತ್ತಿದ್ದರೂ ಈ ಮನಸ್ಸು ಹೆಂಡವನ್ನು ಚಿಂತಿಸಿ ಆಸೆಪಡುವಂತೆ, ಆನೆಯು ಶ್ರೇಷ್ಠನದಿಯಲ್ಲಿ ಸ್ನಾನಮಾಡಿ ಬಂದು ತುಂಬಾ ಆನಂದದಿಂದ ಕೆಸರನ್ನು ಮೈಮೇಲೆ ಎರಚಿಕೊಳ್ಳುವಂತೆ ಉತ್ತಮವಾದ ನಮ್ಮ ಗುಣವನ್ನು, ಮನಸ್ಸನ್ನು ಕೆಟ್ಟ ಆಲೋಚನೆ ಮೂಲಕ ಹಾಳು ಮಾಡಿಕೊಳ್ಳುತ್ತಿದ್ದೇವೆ. ಇದನ್ನು ನಿಯಂತ್ರಣ ಮಾಡುವ ಮೂಲಕ ನಮ್ಮ ಶ್ರೇಷ್ಠತೆ ಉಳಿಸಿಕೊಳ್ಳಬೇಕಿದೆ.

ಶ್ರೇಷ್ಠನಾದ ಗುಣಪೂರ್ಣನಾದ ಸಿರಿ ಕೃಷ್ಣರಾಯನೇ ನಿನ್ನ ಜೋಡಿಪಾದಗಳ ಧ್ಯಾನಿಸುತ್ತಲೇ ನನ್ನ ಮನಸ್ಸು ಚಂಚಲವಾಗದಂತೆ ಕರುಣಿಸಿ ಸ್ಥಿರಗೊಳಿಸು ಎಂದು ಶ್ರೀ ವ್ಯಾಸರಾಯರು ತಿಳಿಸಿದ್ದಾರೆ.


ಬೆಳಗುತಿದೆ ಬೆಳಗುತಿದೆ ಭಾನುವಿನ ಬೆಳಕು
- ತಿಮ್ಮಪ್ಪ ದಾಸ

ಬೆಳಕು - ಜ್ಞಾನ


ಸೂರ್ಯನ ಬೆಳಕು ಸರ್ವವನ್ನು ಹೊಳೆಯುಂತೆ ಮಾಡುತ್ತಾ ಬೆಳಗುತಿದೆ.

ಈ ಬೆಳಕು ಅಮಿತಾಂಡಕೋಟಿ ಎಂದರೆ ಅಳತೆಗೆ ಮೀರಿದ ಪ್ರಕಾಶವನ್ನು ಬೆಳಗುವಂತಹ ಬೆಳಕಾಗಿದೆ. ವಿಶ್ವವ್ಯಾಪಿ ಅಣುವಿನಿಂದ ಆಕಾಶದ ತನಕ ಎಲ್ಲಕ್ಕೂ ಬೆಳಕು ನೀಡುತ್ತಿದ್ದಾನೆ ಸೂರ್ಯ.

ಕತ್ತಲೆಯ ಗುಂಪುಗಳ ಇಲ್ಲವಾಗಿಸುವಂತಹ ಬೆಳಕು. ಅಂದರೆ ಬೆಳಕು ಇಲ್ಲಿ ಜ್ಞಾನದ ಸಂಕೇತ. ಅಜ್ಞಾನವನ್ನು ದೂರಮಾಡಲು ಜ್ಞಾನದ ಬೆಳಕು ಬೇಕು.
ಬೆಳಕು ಒಳ್ಳೆಯ ಮನಸ್ಸಿನ ರೂಪವಾಗಿ, ನಿರ್ಮಲ ಆಲೋಚನೆಯ ನೀಡುವ, ಶೋಭಿಸುವ ರೂಪದಲ್ಲಿ ಬೆಳಕು ಬರುತ್ತದೆ. ಜ್ಞಾನಿ ಯಾವಾಗಲೂ ತೇಜಸ್ಸು ತುಂಬಿರುತ್ತಾನೆ.

ಪರಸ್ಪರ ಮನೆಮನೆಗಳ, ಮನಮನಗಳ ಎದುರಾಗಿ, ಜೊತಯಾಗಿ ಬೆಳಕು ವಿಶ್ವಾಸ ತುಂಬುತ್ತದೆ.
ತಪಸ್ಸಿನಂತೆ ಕಲಿತವರ ಮನಸ್ಸಿನಲ್ಲಿ ಮುಖ್ಯ ಪಾತ್ರದಲ್ಲಿ ಬೆಳಕು ಎಂದರೆ ಜ್ಞಾನ ಕಾಣುತ್ತದೆ.
ಈ ಜ್ಞಾನವೆಂಬ ಬೆಳಕು ದೇವತೆಗಳು ತಾವೇ ಸಂಪಾದಿಸಿದ ಶ್ರೇಷ್ಠತೆಯಂತೆ ವಿಶೇಷವಾದುದು.
ಈ ಬೆಳಕಿಗೆ ಅಂತ್ಯವೂ, ಪ್ರಾರಂಭವೂ ಇರುವುದಿಲ್ಲ.

ಈ ಬೆಳಕು ನಮ್ಮಿಂದ ಹಲವು ಕಾರ್ಯಗಳನ್ನು ಮಾಡಿಸುತ್ತದೆ. ಅಷ್ಟೇ ಅಲ್ಲದೆ ಕಮಲದಂತೆ ಕಾರ್ಯದ ಮೂಲಕ ನಮ್ಮ ಕಶ್ಮಲತೆಯನ್ನು ಕಳೆದು ನಿರ್ಮಲವಾಗಿಸುತ್ತದೆ.
ಆಕಾಶದಂತೆ ಅಪರಿಮಿತ ದೂರದಲ್ಲಿ ನಮ್ಮ ಆಲೋಚನೆಗೂ ಮೀರಿ ಬಹು ಎತ್ತರದಲ್ಲಿ ಸದಾ ಶೋಭಿಸುತ್ತದೆ ಈ ಬೆಳಕು. ಈ ಜಗತ್ತಿನ ಸರ್ವ ಚಲನೆಯನ್ನು ನಮ್ಮ ಕಣ್ಣಿನ ಮೂಲಕ ಕಾಣಿಸುತ್ತದೆ. ಅರಿವುಂಟುಮಾಡುತ್ತದೆ.  ಜ್ಞಾನವೂ ಕೂಡ ಹೀಗೆ ಶ್ರೇಷ್ಠ.

ಯಾವುದೇ ಕಾರ್ಯಕ್ಕೆ ಬೆಳಕು ಕಾರಣವಾಗಿ ಕಾಣುತ್ತದೆ. ಈ ಭೂಮಿಯ ಜೀವಿಗಳಲ್ಲೇ ಅಡಗಿ ಯಾರನ್ನೂ ಮೀರದೆ ಜೊತೆಯಾಗಿರುತ್ತದೆ. ಬೆಳಕು ಮೂರು ಲೋಕಕ್ಕೂ ಪಾಪಗಳ ಅಳಿಸಿ ಮುಕ್ತಿ ನೀಡುತ್ತಾ ಸುಖವನ್ನು  ತರುತ್ತದೆ. ಪಾರಮಾರ್ಥಿಕವಾದ ಪರಬ್ರಹ್ಮ ಅಂದರೆ ಸರ್ವವನ್ನೂ ಶ್ರೇಷ್ಠವಾಗಿ ವಿಚಾರಮಾಡುವಂತಹ ದ್ದು ಈ ಬೆಳಕು ಎಂದರೆ ಜ್ಞಾನ ಎಂದರ್ಥ.

ಶ್ರೇಷ್ಠತೆಯಲ್ಲಿ ಪರಿಶುದ್ಧವಾಗಿ ನಮ್ಮ ಪಾಪಗಳನ್ನು ಅಂದರೆ ತಪ್ಪುಗಳನ್ನು ಇಲ್ಲವಾಗಿಸುವ(ನಾಶಮಾಡುವ) ಬೆಳಕು.
ಯಾರು ಈ ಜ್ಞಾನಕ್ಕೆ (ಬೆಳಕು) ಶರಣಾಗುವರೋ ಕಾಯುತ್ತಾ ಸುಲಭವಾದ ಸುಖವನ್ನು ನೀಡುತ್ತದೆ.
ತಿಮ್ಮಪ್ಪದಾಸರು ತಮ್ಮ ಕೀರ್ತನೆಯ ಅಂಕಿತ ದೇವರಾದ ತಿರುಪತಿಯ ವಾಸಿ ವರದ ವೆಂಕಟರಮಣನ ಹೆಸರಿನ ಉಚ್ಚಾರವೇ ಈ ಸೂರ್ಯನ ಬೆಳಕು ಎಂದಿದ್ದಾರೆ. ಅಂದರೆ ನಮ್ಮ ಭಕ್ತಿಯು ನಮ್ಮ ಸರ್ವಕಾರ್ಯಗಳಲ್ಲೂ ನಾವು ನಂಬುವ ದೇವರ ಮೇಲೆ ಎಷ್ಟು ಇರುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ಇದ್ದರೆ ಎಲ್ಲಾ ಜ್ಞಾನಗಳು ಬೆಳಕಿನಂತೆ ಲಭಿಸುತ್ತವೆ. ಬದುಕನ್ನು ಬೆಳಗುತ್ತವೆ.






ವ್ಯಾಸರಾಯರ ಕುರಿತು ಮಾಹಿತಿ

ವ್ಯಾಸರಾಯರು

  • ಇನ್ನೊಂದು ಭಾಷೆಯಲ್ಲಿ ಓದು


ಸಂಪಾದಿಸಿ

ಜನ್ಮಸ್ಥಳ - ಮೈಸೂರು ಜಿಲ್ಲೆಯ ಬನ್ನೂರು. ವ್ಯಾಸರಾಯರ ತಂದೆ ರಾಮಾಚಾರ್ಯರು ಮತ್ತು ತಾಯಿಯ ಹೆಸರು ಸೀತಾಬಾಯಿ. ವ್ಯಾಸರಾಯರ ಪೂರ್ವಾಶ್ರಮದ ಹೆಸರು ಯತಿರಾಜ. ಅಬ್ಬೂರಿನ ಬ್ರಹ್ಮಣ್ಯತೀರ್ಥರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿದರೆಂದು ತಿಳಿದುಬರುತ್ತದೆ. ವ್ಯಾಸರಾಯರು ವಿಜಯ ನಗರ ಸಾಮ್ರಾಜ್ಯಕ್ಕೆ ರಾಜಗುರುಗಳಾಗಿದ್ದರು. ಮಠಾಧಿಪತಿಗಳಾಗಿ ಒಂದೆಡೆಗೆ ರಾಜಗುರುಗಳು ಎನ್ನಿಸಿದ್ದರೆ, ಮತ್ತೊಂದೆಡೆ ಧರ್ಮೋಪದೇಶಕರೂ ಆಗಿದ್ದರು. ಸಾಳುವ ನರಸಿಂಹನ ಆಳ್ವಿಕೆಯ ಕಾಲದಿಂದ, ಅಚ್ಚುತರಾಯನ ಆಳ್ವಿಕೆಯವರೆಗೆ, ಸುಮಾರು ಅರವತ್ತು ವರ್ಷಗಳ ಕಾಲ ಸಕಲ ರಾಜಮಹಾರಾಜರಿಂದ ಸನ್ಮಾನಿಸಲ್ಪಟ್ಟಿದ್ದರು. ವಿಜಯನಗರದ ಪ್ರಖ್ಯಾತ ದೊರೆಯೆನಿಸಿದ್ದ ಕೃಷ್ಣದೇವರಾಯನು ವ್ಯಾಸರಾಯರನ್ನು ಗುರುಗಳಾಗಿ ಸ್ವೀಕರಿಸಿದ್ದನೆಂದು ತಿಳಿದುಬಂದಿದೆ.

ಕಾಲವಾದ ಸ್ಥಳ ಮತ್ತು ದಿನಸಂಪಾದಿಸಿ

ವ್ಯಾಸರಾಯರು ೧೫೪೮ , ಫಾಲ್ಗುಣ ಮಾಸದ ಚತುರ್ಧಿ ದಿನದಂದು, ಹಂಪೆ ಯಲ್ಲಿ ಕಾಲವಾದರು. ಇವರ ಬೃಂದಾವನವು ಆನೆಗೊಂದಿಯ ಸಮೀಪವಿರುವ ತುಂಗಭದ್ರಾ ದ್ವೀಪದಲ್ಲಿದೆ. ಈ ಸ್ಥಳವನ್ನು ನವ ಬೃಂದಾವನ ಎಂದು ಕರೆಯಲಾಗುತ್ತದೆ.

ಕೃತಿಗಳುಸಂಪಾದಿಸಿ

ದಾಸಸಾಹಿತ್ಯ ಪರಂಪರೆಯನ್ನು ಶ್ರೀಪಾದರಾಜರ ತರುವಾಯ ಬೆಳೆಸಿದವರೆಂದರೆ ವ್ಯಾಸರಾಯರು. ಈವರೆಗೆ ವ್ಯಾಸರಾಯರು ರಚಿಸಿರುವ ೧೧೯ ಕೀರ್ತನೆಗಳು ಲಭ್ಯವಾಗಿವೆ. ಇದರಲ್ಲಿ ಉಗಾಭೋಗಗಳು ಸೇರಿವೆ. ಅಂಕಿತ ಪ್ರಧಾನ ಪಧ್ಧತಿ ಇವರಿಂದಲೇ ಪ್ರಾರಂಭವಾಯಿತು. ಶ್ರೀಕೃಷ್ಣ ಎಂಬುದು ವ್ಯಾಸರಾಯರ ಅಂಕಿತ. 



ಶಿಶುನಾಳ ಶರೀಫರು

  • ಇನ್ನೊಂದು ಭಾಷೆಯಲ್ಲಿ ಓದು
  • ವೀಕ್ಷಿಸಿ
  • ಸಂಪಾದಿಸಿ
ಶಿಶುನಾಳ ಶರೀಫರು ತತ್ವಪದಗಳ ರೂವಾರಿ.

ಜನನಸಂಪಾದಿಸಿ

ಶಿಶುನಾಳ ಶರೀಫರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ಕ್ರಿ.ಶ. ೧೮೧೯ ಮಾರ್ಚ ೭ರಂದು ಜನಿಸಿದರು. ಇವರ ತಂದೆ ದೇವಕಾರ ಮನೆತನದ ಇಮಾಮ ಹಜರತ ಸಾಹೇಬರು ಹಾಗು ತಾಯಿ ಹಜ್ಜೂಮಾ. ಇವರ ಪೂರ್ಣ ಹೆಸರು ಮಹಮ್ಮದ ಶರೀಫ. ಮುಲ್ಕಿ ಪರೀಕ್ಷೆ ಪಾಸು ಮಾಡಿದ ಬಳಿಕ ಶರೀಫರು ಕೆಲ ಕಾಲ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರೆಂದು ಕೆಲಸ ಮಾಡಿದರು.

ವಿದ್ಯಾಭ್ಯಾಸಸಂಪಾದಿಸಿ

ಆದರೆ ಮುಂದೆ ಈ ಕೆಲಸವನ್ನು ಬಿಟ್ಟು ಬಿಟ್ಟರು. ಈ ಸಮಯದಲ್ಲಿ ಶರೀಫರಿಗೆ ಕಳಸದ ಗುರು ಗೋವಿಂದಭಟ್ಟರಿಂದ ಅನುಗ್ರಹವಾಯಿತು. ಮಗನು ಕೆಲಸವನ್ನು ಬಿಟ್ಟು ಆಧ್ಯ್ಶಾತ್ಮಚಿಂತನೆಯಲ್ಲಿ ತೊಡಗಿಸಿಕೊಂಡದ್ದರಿಂದ ಶರೀಫರ ತಂದೆ ತಾಯಿ ಅವರಿಗೆ ಕುಂದಗೋಳ ನಾಯಕ ಮನೆತನದ ಫಾತಿಮಾ ಎಂಬ ಕನ್ಯೆಯೊಂದಿಗೆ ಮದುವೆ ಮಾಡಿದರು.
ಕೆಲವು ಸಮಯದ ನಂತರ ಇವರಿಗೆ ಒಂದು ಹೆಣ್ಣು ಮಗು ಜನಿಸಿತು. ದುರ್ದೈವದಿಂದ ಕೆಲವು ತಿಂಗಳುಗಳಲ್ಲಿ ಹೆಂಡತಿ ತೀರಿಕೊಂಡರು. ಶರೀಫರಿಗೆ ಜೀವನದಲ್ಲಿ ಬೇಸರವಾದರೂ, ದೇವರಲ್ಲಿ ನಂಬಿಕೆ ಉಳಿದಿತ್ತು. ಶರೀಫರು ಆ ಬಳಿಕ ತಮ್ಮ ಜೀವನವನ್ನು ಆಧ್ಯಾತ್ಮಸಾಧನೆಗೆ ಮುಡಿಪಿಟ್ಟರು. ತಾಳ್ಮೆಯಿಂದ ಸಜ್ಜನರ ಹಾಗೂ ವಿದ್ಯಾವಂತರ ಸಹವಾಸದಲ್ಲಿಯೇ ಕಾಲ ಕಳೆಯುತ್ತಾ ಬಂದರು. ತಮಗೆ ಸರಿಯಾಗಿ ಮಾರ್ಗದರ್ಶನ ನೀಡುವಂತಹ ಗುರುವಿಗಾಗಿ ಅವರು ಊರೂರು ಅಲೆದರು.
ಕೊನೆಗೆ ಗೋವಿಂದಭಟ್ಟ ಎಂಬ ಗುರುವಿನಲ್ಲಿ ಸರಿಯಾದ ಮಾರ್ಗದರ್ಶನ ದೊರೆಯಿತು. ಯಾವುದೇ ಮತತ ಬಗ್ಗೆ ಮೂಡನಂಬಿಕೆ ಇಲ್ಲದ ಈ ಗುರುಗಳು ಶರೀಫರಿಗೆ ತುಂಬಾ ಮೆಚ್ಚುಗೆಯಾದರು. ಗುರುಶಿಷ್ಯರಿಬ್ಬರೂ ಮಸೀದಿಗಳಿಗೆ, ದೇವಾಲಯಗಳಿಗೆ ಸಂದರ್ಶನಕ್ಕಾಗಿ ಹೊರಟರು. ಶರೀಫರು ಅನೇಕ ಹಾಡುಗಳನ್ನು ರಚಿಸಿ ಹಾಡಿದರು. ಈ ಗುರುಗಳ ಜೊತೆಗೆ ನವಲಗುಂದದ ನಾಗಲಿಂಗಮತಿ ಮತ್ತು ಗಂಗೆಯ ಮಡಿವಾಳಪ್ಪ ಎಂಬುವರು ಸಹ ಶರೀಫರ ಮೇಲೆ ಹೆಚ್ಚಿನ ಪರಿಣಾಮ ಬೀರಿದರು.
ಶರೀಫರು ಹಾಡಿದ ಪದಗಳು ಧಾರವಾಡ ಜಿಲ್ಲೆಯ ಆಡುಭಾಷೆಯ ಶೈಲಿಯಲ್ಲಿವೆ. ಈ ಪದಗಳಲ್ಲಿ ಕೆಲವು ದೇವತಾಸ್ತುತಿಯ ಪದಗಳಾದರೆ, ಇನ್ನು ಕೆಲವು ಪದಗಳು ತತ್ವಬೋಧನೆಯ ಪದಗಳಾಗಿವೆ.ಹೆಚ್ಚಿನ ಪದಗಳು ಕನ್ನಡದಲ್ಲಿ ಇದ್ದರೂ ಸಹ ಕೆಲವು ಪದಗಳು ಉರ್ದು ಭಾಷೆಯಲ್ಲಿವೆ.
ಹೊಸಗನ್ನಡ ಅರುಣೋದಯ ಸಾಹಿತ್ಯದ ಮುಂಬೆಳಗಿನ ಕಾಲದಲ್ಲಿ ತಮ್ಮ ಅನುಭಾವಕಾವ್ಯದ ಹೊಂಗಿರಣವೊಂದನ್ನು ಹಾಯಿಸಿದ ಪ್ರಸಿದ್ಧ ಅನುಭಾವಿ ಕವಿ. ಇವರ ಮೊದಲಿನ ಹೆಸರು ಮಹಮ್ಮದ್ ಶರೀಫ್. ಶಿಗ್ಗಾವಿ ತಾಲ್ಲೂಕಿನ ಶಿಶುವಿನಾಳ ಇವರ ಜನ್ಮಸ್ಥಳ. 1819 ಮಾರ್ಚ್ 7 ರಂದು ಜನಿಸಿದರು. ಕನ್ನಡ ಮುಲ್ಕೀ ಪರೀಕ್ಷೆಯವರೆಗೆ ಓದಿದ ಇವರು, ಆರಂಭದಲ್ಲಿ ಕೆಲಕಾಲ ಹಳ್ಳಿಯ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರಾದರೂ ಬೇಗನೆ ಅದರ ಹಂಗು ಹರಿದುಕೊಂಡು ಆಧ್ಯಾತ್ಮಸಾಧನೆಗೆ ತಮ್ಮನ್ನು ಸಮರ್ಪಿಸಿ ಕೊಂಡರು.
ಅಭಿಜಾತ ಕಲಾವಿದರಾಗಿದ್ದ ಶಿಶುನಾಳರು ಚಿಕ್ಕಂದಿನಲ್ಲಿಯೇ ಹಳ್ಳಿಯ ಜಾತ್ರೆ ಉತ್ಸವಗಳಲ್ಲಿ ಶರಣರ ವಚನಗಳನ್ನೂ ಅನುಭಾವ ಪದಗಳನ್ನೂ ಹಾಡುತ್ತ, ಬಹುರೂಪಿಗಳ ಹಾಗೆ ವಿವಿಧ ವೇಷ ಹಾಕುತ್ತ, ಬಗೆಬಗೆಯ ಬಯಲಾಟಗಳಲ್ಲಿ ಪಾತ್ರವಹಿಸುತ್ತ ತಮ್ಮ ಕಲೆಗಾರಿಕೆಯನ್ನು ಜನಮನದ ವಿಲಾಸ-ವಿಕಾಸಗಳಿಗೆ ಮುಡಿಪಿಡಲು ಮೊದಲುಮಾಡಿದರು. ಮೊಹರಂ ಪರ್ವ ಸಮಯದಲ್ಲಿ ತಲೆ ಎತ್ತುವ ಕರ್ಬಲಾ ಮೇಳಗಳಿಗಾಗಿ ರಿವಾಯತ್ ಪದ ರಚಿಸಿಕೊಟ್ಟರು, ಲಾವಣಿಗಳನ್ನೂ ಬರೆದರು. ಹೀಗೆ ನಿಧಾನವಾಗಿ ಸಾಹಿತ್ಯಪಥದಲ್ಲಿ ತಮ್ಮ ಹೆಜ್ಜೆ ಮೂಡಿಸಿ, ಮುಂದಿನ ಸೃಷ್ಟಿಗೆ ಅಗತ್ಯ ವಾದ ಪೂರ್ವಸಿದ್ಧತೆ ಮಾಡಿಕೊಂಡರು. ಕಳಸದ ಗುರುಗೋವಿಂದ ಭಟ್ಟರು, ಅಂಕಲಗಿಯ ಅಡವಿ ಸ್ವಾಮಿಗಳು, ಗರಗದ ಮಡಿವಾಳಪ್ಪ ನವರು, ನವಿಲುಗುಂದದ ನಾಗಲಿಂಗಪ್ಪನವರು, ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳು ಮುಂತಾದ ಸಮಕಾಲೀನ ಸಾಧುಸತ್ಪುರುಷರ ಸಾನ್ನಿಧ್ಯ, ಸಂಸರ್ಗಗಳಿಂದ ಅನುಭಾವಿಯಾಗಿ ಮಾಗಿದರು.
ಕನ್ನಡ ಸಂಸ್ಕಂತಿಯ ಸರ್ವಧರ್ಮಸಹಿಷ್ಣುಭಾವ ಮತ್ತು ಆಧ್ಯಾತ್ಮಿಕ ಪರಂಪರೆಯ ಸರ್ವಸಮನ್ವಯ ಅನುಭಾವ ಸಂಪತ್ತನ್ನು ಅರಗಿಸಿಕೊಂಡು ಇವರು ರಚಿಸಿದ ಅನುಭವ ಪದಗಳು ಆಪ್ತವಾದ ಕಳಕಳಿಗೆ ನೆಲೆ ಯಾಗಿವೆ. ಹಳ್ಳಿಯ ಬಾಳಿನ ದಿನದಿನದ ಬದುಕಿನಲ್ಲಿ ತಮ್ಮ ಕಣ್ಮನಗಳನ್ನು ಸೆಳೆದ ಒಂದೊಂದು ಸನ್ನಿವೇಶ-ಸಂಗತಿ, ವಸ್ತು-ವ್ಯಕ್ತಿ, ಪಶು-ಪಕ್ಷಿ ಮೊದಲಾದವುಗಳನ್ನೇ ಒಂದು ರೂಪಕವನ್ನಾಗಿಯೋ ದೃಷ್ಟಾಂತವ ನ್ನಾಗಿಯೋ ಪ್ರತಿಮೆಯನ್ನಾಗಿಯೋ ಮಾಡಿಕೊಂಡು ಅವುಗಳಲ್ಲಿ ತಮ್ಮ ಅನುಭವದ ಬೆಳಕು ಮತ್ತು ಅನುಭಾವದ ಬೆಳಗನ್ನು ವರ್ಣಮಯವಾಗಿ ಹೇಳಿದ್ದಾರೆ. ತಮ್ಮ ಜೀವಮಾನದುದ್ದಕ್ಕೂ ಇವರು ಬರೆದ ಹಾಡು, ಒರೆದ ಪಾಡು ಒಂದೇ ಆಗಿದೆ. ಬೋಧ ಒಂದೇ, ಬ್ರಹ್ಮನಾದ ಒಂದೇ ಎಂಬುದು ಅವರ ಬೀಜಮಂತ್ರವಾಗಿದ್ದು ನಡಿಯೊ ದೇವರ ಚಾಕರಿಗೆ, ಮುಕ್ತಿಗೊಡೆಯ ಖಾದರ ಲಿಂಗ ನೆಲಸಿರ್ಪ ಗಿರಿಗೆ ಎಂಬುದು ಇವರು ತಮ್ಮ ಮನಕ್ಕೂ ಜನಕ್ಕೂ ಕೊಟ್ಟ ಜೀವಾಳದ ಕರೆಯಾಗಿದೆ. ಇವರ ದೃಷ್ಟಿಯಲ್ಲಿ ಸನಾತನ ವೈದಿಕ ಮತ ಎತ್ತಿಹಿಡಿಯುವ ಬ್ರಹ್ಮತತ್ತ್ವ, ತಮ್ಮ ಪರಿಸರದಲ್ಲಿ ಪ್ರಭಾವಕಾರಿಯಾಗಿದ್ದ ವೀರಶೈವ ಮತದ ಲಿಂಗತತ್ತ್ವ ಹಾಗೂ ತಮ್ಮ ಮನೆತನಕ್ಕೆ ಪೂಜ್ಯವಾಗಿದ್ದ ಹುಲಗೂರ ಖಾದರಶಾ ಸಾಧುವಿನ ಸಮಾಧಿತತ್ತ್ವ-ಇವೆಲ್ಲವೂ ಮೂಲತಃ ಒಂದೇ. ಇದರಿಂದಾಗಿ ಇವರು ಸರ್ವಧರ್ಮಸಮನ್ವಯದ ಉಜ್ಜ್ವಲ ಮೂರ್ತಿಯಾಗಿ ಹಿಂದು-ಮುಸ್ಲಿಮ್ ಬಾಂಧವ್ಯದ ಧವಲಕೀರ್ತಿಯಾಗಿ ಉತ್ತರ ಭಾರತದ ಮಹಾತ್ಮ ಕಬೀರರಂತೆ ಉತ್ತರ ಕರ್ನಾಟಕದ ಭಾಗದಲ್ಲಿ ಜನಮನದ ಗದ್ದುಗೆ ಏರಿದರು. ಇದಲ್ಲದೆ ತಮ್ಮ ಅಭಿವ್ಯಕ್ತಿಯಲ್ಲಿ ಅಳವಡಿಸಿಕೊಂಡ ಜನಪದ ಭಾಷೆಯ ಸೊಗಡು-ಗತ್ತು, ಗ್ರಾಮೀಣ ಸಂಗೀತದ ಲಯ-ಲಾಸ್ಯಗಳಿಂದಾಗಿಯೂ ಇವರು ಜನಮನವನ್ನು ಸೂರೆಗೊಂಡರು. ಹೀಗೆ ಆಧ್ಯಾತ್ಮಿಕ ಸಾಧನೆಯ ಸಿದ್ಧಿಯನ್ನು ಮುಟ್ಟಿದಮೇಲೆ ತಮ್ಮಲ್ಲಿ ಬಂದವರಿಗೆ ಧರ್ಮನೀತಿ ಬೋಧೆ ಮಾಡಲೆಂದು ಇವರು ತಮ್ಮ ಮನೆ ಹತ್ತಿರದಲ್ಲಿ ಕುಳಿತುಕೊಳ್ಳುತ್ತಿದ್ದ ಕಟ್ಟೆಯೊಂದು ಇಂದಿಗೂ ಇದ್ದು ಬೋಧಪೀಠ ಎಂಬುದಾಗಿ ಪೂಜಿಸಲ್ಪಡುತ್ತದೆ.
Posted by ಡಾ. ರವಿಶಂಕರ್ ಎ.ಕೆ. ಅಂಕುರ on ಫೆಬ್ರವರಿ 08, 2020 ಕಾಮೆಂಟ್‌ಗಳಿಲ್ಲ:
ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!X ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ
ಡಾ. ರವಿಶಂಕರ್ ಎ.ಕೆ. ಅಂಕುರ
ಸಹೃದಯ ಓದು ಮತ್ತು ಬರಹದಲ್ಲಿ ಜೀವನ ಪ್ರೀತಿ ಕಾಣುವೆ

ಬುಧವಾರ, ಜನವರಿ 22, 2020

ಜಲಗಾರ ನಾಟಕ ಅಧ್ಯಯನ ಪಠ್ಯಗಳು





ಜಲಗಾರ - ಕುವೆಂಪು


Jump to navigationJump to search
ಕುವೆಂಪು
೧೯೨೭-೨೮ ಕುವೆಂಪು ಅವರ ಸಾಹಿತ್ಯಕ ಜೀವನದ ಮಹತ್ತರ ಘಟ್ಟ. ಅವರು ಎಂ.ಎ. ಕನ್ನಡ ತರಗತಿಗೆ ಸೇರಿದ್ದರಿಂದ ಕನ್ನಡ ಸಾಹಿತ್ಯ ಸಂಸ್ಕೃತಿ ಪರಂಪರೆಯ ಶಾಸ್ತ್ರೀಯವಾದ ಅಭ್ಯಾಸದ ಅವಕಾಶ ಲಭಿಸಿತು. ಕವಿಯ ಸೃಜನ ಪ್ರತಿಭೆಯ ತಾಯಿಬೇರಿಗೆ ಅಮೃತಾಹಾರ ಒದಗಿದಂತಾಗಿತ್ತು. ಕನ್ನಡದಲ್ಲಿ ಇಂಗ್ಲೀಷಿನಂತೆ ಸರ್ವವಿಧವಾದ ಛಂದೋವೈವಿಧ್ಯತೆಯಿಂದ ಕೂಡಿದ ಸಾಹಿತ್ಯವನ್ನು ಸೃಷ್ಟಿಸಬೇಕೆಂಬ ಅವರ ಹಂಬಲ ಕ್ಷಣಿಕವಾದುದಾಗಿರಲಿಲ್ಲ. ಕುಳಿತಲ್ಲಿ, ನಿಂತಲ್ಲಿ, ಓದುವಾಗ, ಬರೆಯುವಾಗ - ಕೊನೆಗೆ ನಿದ್ದೆ ಮಾಡುವಾಗಲೂ ಅದರ ಬಗ್ಗೆ ಚಿಂತಿಸಿತ್ತಿದ್ದರು. ಸಾನೆಟ್ ಮತ್ತು ಬ್ಲಾಂಕ್‌ವರ್ಸ್ ಛಂದಸ್ಸುಗಳಲ್ಲಿ ಪರಿಣಿತಿ ಸಾಧಿಸುತ್ತಿದ್ದಂತೆ, ಅವುಗಳಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಮನಸ್ಸು ಹಾತೊರೆಯುತ್ತಿತ್ತು. ಬ್ಲಾಂಕ್‌ವರ್ಸ್ ಗತಿಯಲ್ಲಿ ಆಗಲೇ ಕರಿಸಿದ್ದ ಮತ್ತು ಪ್ರಾಯಶ್ಚಿತ್ತ ಎಂಬ ದೀರ್ಘ ಕಥನಕವನಗಳು ರಚಿತವಾಗಿದ್ದವು. ಆಗ ಕವಿಗೆ, ಈ ಬ್ಲಾಂಕ್‌ವರ್ಸ್ ಛಂದೋಶೈಲಿಯನ್ನು ಬಳಸಿಕೊಂಡು ಕನ್ನಡದಲ್ಲಿ ನಾಟಕ ರಚಿಸಬಹುದಲ್ಲ ಎಂಬ ಯೋಚನೆ ಪ್ರಬಲವಾಗಿ, ಒಳಗಿನ ಒತ್ತಡವಾಗಿ ಬೆಳೆಯತೊಡುಗುತ್ತದೆ. ಅದುವರೆಗೆ ಯಾರೂ ಕನ್ನಡದಲ್ಲಿ ನಾಟಕಕ್ಕೆ ಬ್ಲಾಂಕ್‌ವರ್ಸ್ ಪ್ರಯೋಗ ಮಾಡಿರಲೂ ಇಲ್ಲ. ಅದಕ್ಕೆ ಅನುಗುಣವಾದ ನಾಟಕದ ವಸ್ತು, ವಿಷಯ, ರೂಪ ಇವುಗಳ ಬಗ್ಗೆ ಏನೊಂದೂ ಹೊಳೆಯದೆ ಕವಿ ಭಾವಶೂನ್ಯನಾಗಿದ್ದಾಗಲೇ ಒಂದು ದಿನ ಅಸಮಾನ್ಯವೆನ್ನಬಹುದಾದ ಘಟನೆಯೊಂದು ನಡೆದುಬಿಡುತ್ತದೆ.
ದಿವಾನರ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿದ್ದ ಆಶ್ರಮದಲ್ಲಿ ಕವಿಯ ವಾಸ. ಮನೆ ಚಿಕ್ಕದಾಗಿದ್ದುದರಿಂದ, ಪ್ರತ್ಯೇಕ ದೇವರ ಮನೆಯಿರಲಿಲ್ಲ. ಪೂಜೆ ಮುಗಿದ ಮೇಲೆ, ಪರದೆಯೊಂದನ್ನು ಅಡ್ಡ ಎಳೆದು, ದೇವರ ಕಡೆ ತಲೆ ಹಾಕಿ ಮಲಗುವ ವ್ಯವಸ್ಥೆ ಮಾಡಿಕೊಂಡಿದ್ದರು. ಒಂದು ಭಾನುವಾರ ಹಗಲು ವೇಳೆಯಲ್ಲಿಯೇ ಕವಿ ಗಡದ್ದಾದ ನಿದ್ದೆಯಲ್ಲಿ ಮುಳುಗಿಬಿಟ್ಟಿರುತ್ತಾರೆ. ಕನ್ನಡ, ನಾಟಕ, ಬ್ಲಾಂಕ್‌ವರ್ಸ್ ಈ ವಿಚಾರಗಳೇ ತಲೆಯಲ್ಲಿದ್ದುರಿಂದಲೋ ಏನೋ ಕವಿಗೆ ಅದರದೇ ಒಂದು ಕನಸು ಬೀಳುತ್ತದೆ. ಅದು ಹೀಗಿತ್ತು: ನಾನೊಂದು ಬೃಹದ್‌ಗಾಥ್ರದ ಅಪ್ರಾಸಛಂದಸ್ಸಿನ (ಬ್ಲಾಂಕ್‌ವರ್ಸ್) ಮಹಾಕಾವ್ಯ (ಎಪಿಕ್) ರಚಿಸಿದ್ದೇನೆ. ಅದು ಅಚ್ಚಾಗಿ ಬಂದಿದೆ! ಕೈಯಲ್ಲಿ ಹಿಡಿದಿದ್ದೇನೆ. ತೂಕವಾಗಿದೆ! ಎಷ್ಟು ಮನೋಹರವಾಗಿ ಮುದ್ರಿತವಾಗಿದೆ! ಅದರ ಕ್ಯಾಲಿಕೊ ಬೈಂಡಿನ ಸೌಂದರ್ಯವೊ ಹೇಳತೀರದು! ಹಾಳೆಗಳನ್ನು ಮಗುಚಿ ನೋಡುತ್ತಿದ್ದೇನೆ: ನುಣ್ಣನೆ ಕಾಗದ, ಮುದ್ದಾದ ಅಚ್ಚು! ಓದುತ್ತಿದ್ದೇನೆ....
ಅಷ್ಟರಲ್ಲಿ ರೀ, ರೀ ಪುಟ್ಟಪ್ಪ! ಎಷ್ಟು ನಿದ್ದೆ ಮಾಡ್ತೀರ್ರಿ? ಏಳ್ರಿ! ಎಂದು ಭುಜ ಹಿಡಿದು ಅಲುಗಿಸುತ್ತ ಎಚ್.ಬಿ.ನಂಜಯ್ಯ ಎಂಬುವವರು ಕವಿಯ ನಿದ್ರೆಗೂ ಅದಕ್ಕಿಂತ ಹೆಚ್ಚಾಗಿ ಕನಸಿಗೂ ಭಂಗ ತಂದುಬಿಡುತ್ತಾರೆ. ಪಾಪ! ಆತನಿಗೆ ಹೇಗೆ ಗೊತ್ತಾಗಬೇಕು ತಾನೆಸಗಿದ ಮಹಾ ಅನರ್ಥ? - ಕವಿಯ ಪ್ರತಿಕ್ರಿಯೆಯಿದು. ಆದರೂ ಕವಿಗೆ ಸಂತೋಷವಾಗುತ್ತದೆ; ಕನಸಿನಲ್ಲಾದರೂ ಎಪಿಕ್ಕಿಗೆ ಬೇಕಾದ ಅಪ್ರಾಸ ಛಂದಸ್ಸಿನ ಗುಟ್ಟು ಸಿಕ್ಕಿತಲ್ಲಾ ಎಂದು. ಆದರೆ ಕನಸಿನಲ್ಲಿ ಕಂಡಿದ್ದ ಪುಸ್ತಕದಲ್ಲಿದ್ದ ಭಾಷೆ ಲಿಪಿ ಯಾವುದೂ ನೆನಪಾಗುವುದಿಲ್ಲ. ಅದರ ಒಂದು ಸಾಲನ್ನಾದರೂ ನೆನಪಿಗೆ ತಂದುಕೊಳ್ಳುವ ಪ್ರಯತ್ನ ಸಫಲವಾಗುವುದಿಲ್ಲ.
ಅಂದು ಕನಸಿನಲ್ಲಿ ಸಿಕ್ಕ ಅಪ್ರಾಸ ಛಂದಸ್ಸಿನ ಗುಟ್ಟು ವ್ಯರ್ಥವಾಗಲಿಲ್ಲ. ಆ ಛಂದೋಲಯದಲ್ಲಿ ಹಿಡಿತ ಸಾಧಿಸಿದ ಕವಿ ಕೇವಲ ನಾಲ್ಕು ದಿನಗಳಲ್ಲಿ ’ಜಲಗಾರ’, ’ಯಮನಸೋಲು’ ಮತ್ತು ’ಮಹಾರಾತ್ರಿ’ ಎಂಬ ಮೂರು ನಾಟಕಗಳನ್ನು ಬರೆದು ಮಗಿಸಿಬಿಡುತ್ತಾರೆ. ಇವುಗಳಲ್ಲಿ ಮೊದಲನೆಯದೇ ಅಪ್ರಾಸ ಛಂದಸ್ಸಿನ ’ಸರಳರಗಳೆ’ ರೂಪದಲ್ಲಿರುವ, ಕೇವಲ ಎರಡು ದೀರ್ಘ ದೃಶ್ಯಗಳಿರುವ ಜಲಗಾರ ಎಂಬ ನಾಟಕ. ನಾಟಕ ರಚನೆಯಾದ ದಿನವೇ, ರಚಿಸುವಾಗ ಇದ್ದ ಆವೇಶದಲ್ಲಿಯೇ, ಆಶ್ರಮದಲ್ಲಿ ಸ್ವಾಮೀಜಿ, ನಾ.ಕಸ್ತೂರಿ ಮುಂತಾದವರ ಮುಂದೆ ಓದುತ್ತಾರೆ. ಅದರಲ್ಲಿದ್ದ ಹೊಸ ಆಲೋಚನೆಗಳು, ಹೊಸ ಭಾವಗಳು ಎಲ್ಲರ ಗಮನ ಸೆಳೆಯುತ್ತವೆ. ಹೀಗೆ ಕನ್ನಡದ ಮೊತ್ತಮೊದಲ ಸರಳರಗಳೆಯ ನಾಟಕ ಸಿದ್ಧವಾಗುತ್ತದೆ.
ಮಹಾಶಿವರಾತ್ರಿಯ ದಿನ ಶರತ್ಕಾಲದ ಸುಂದರ ಮುಂಜಾನೆ. ಊರಿನ ಕಾಯಕಯೋಗಿಜಲಗಾರನು ಸಂತೋಷವಾಗಿ ’ಮಂಜು ಹರಿಯುವವರೆಗೆ ಕುಳಿತಿಲ್ಲಿ, ನಲಿಯುವೆನು ನಲ್ಗಬ್ಬಗಳ ಹಾಡಿ’ ಎಂದು ಹಾಡುತ್ತಿದ್ದಾನೆ. ಮುಂಜಾವಿನ ಸೊಬಗಿಗೆ ಆತನೂ ಮಾರುಹೋಗಿದ್ದಾನೆ. ’ಸೃಷ್ಟಿಕರ್ತನನೆಮಗೆ ಸಾಧಿಸಲು, ತೋರಿಸಲು, ಸೃಷ್ಟಿಯಿದು ಸಾಲದೇ? ..... ಬಿಜ್ಜೆಯೇಂ ತೋರ್ಕುಮೇ ಎದೆಯರಿವು ತೋರದಾ ಪರಮನಂ?’ ಎನ್ನಿಸಿಬಿಡುತ್ತದೆ. ಆಗ ’ನೇಗಿಲ ಯೋಗಿಯು ನಾನು; ಮಣ್ಣಿನ ಭೋಗಿಯು ನಾನು!’ ಎಂದು ಹಾಡುತ್ತಾ ಒಬ್ಬ ರೈತನ ಆಗಮನವಾಗುತ್ತದೆ. ಆಗ ಜಲಗಾರ ’ಮುಂಜಾನೆಯೊಳಗೆಲ್ಲಿ ಹೋಗುತಿಹೆ, ರೈತ?’ ಎನ್ನುತ್ತಾನೆ. ಆಗ ರೈತ-

ಓಹೊ ನೀನರಿಯೆಯಾ? ಇಂದು ನಮ್ಮೂರ
ಶಿವಗುಡಿಯ ಜಾತ್ರೆ! ಬರುವುದಿಲ್ಲವೆ ನೀನು?
ತೇರೆಳೆಯಲೆಂದನಿಬರೂ ಬರುತಿಹರು.

ಎಂದು ಆ ದಿನದ ಮಹತ್ವವನನು ಹೇಳುತ್ತಾನೆ. ’ನನಗೇಕೆ ಶಿವಗುಡಿಯ ಜಾತ್ರೆ? ಜೋಯಿಸರು ದೇಗುಲದ ಬಳಿಗೆನ್ನ ಸೇರಿಸರು’ ಎನ್ನುತ್ತಾನೆ ಜಲಗಾರ. ಪಾಪ ರೈತನಿಗೆ ಜಲಗಾರನ ಮಾತುಗಳಲ್ಲಿದ್ದ ನೋವು ಅರ್ಥವಾಗುವುದಿಲ್ಲ. ’ದೂರದಲ್ಲಿಯೇ ನಿಂತು ಕೈಮುಗಿದು ಬಾ.’ ಎನ್ನುತ್ತಾನೆ. ಶಿವದರ್ಶನಕ್ಕೆ ದೇವಾಲಯಕ್ಕೆ ಹೋಗುವ ಅವಶ್ಯಕತೆ ಜಲಗಾರಿನಿಗೆ ಕಾಣುವುದಿಲ್ಲ.
ಶಿವಗುಡಿಯ ಶಿವನು ಜೋಯಿಸರ ಶಿವನಂತೆ; ನನ್ನ ಶಿವನೀ ಮಣ್ಣಿನಲ್ಲಿಹನು. ಕಪ್ಪುರದೊಳಗಿಲ್ಲ, ಮಂಗಳಾರತಿಯೊಳಗಿಲ್ಲ, ಹೂವುಗಳಲ್ಲಿಲ್ಲ; ಕೊಳೆತ ಕಸದೊಳಗಿಹನು ನನ್ನ ಶಿವ’ ಎಂದು ’ಲೋಕ ನಗಬೇಕಾದರೆ ಆರಾದರೂ ಅಳಬೇಕು’ ಎನ್ನುವಂತೆ ತಾನು ಮಾಡುತ್ತಿದ್ದ ಕೆಲಸವನ್ನು ಮುಂದುವರೆಸುತ್ತಾನೆ. ರೈತ ’ಪೂಜೆಯೆಂಬುದನರಿಯ; ದೇವನೆಂಬುದನರಿಯ; ಹುಟ್ಟುಗುಣ ಸುಟ್ಟರೂ ಹೋಗುವುದೆ?’ ಎಂದು ತಾನು ತಂದಿದ್ದ ಹೂವು ಹಣ್ಣುಗಳೊಂದಿಗೆ ಶಿವಾಲಯದೆಡೆಗೆ ಹೊರಡುತ್ತಾನೆ. ’ತಿರೆಗಿಂತ ದೇಗುಲವದೊಳದೇನ್?’ ಎಂದು ಜಲಗಾರ ಹಾಡುತ್ತಾನೆ.
ಆಗ ಇಬ್ಬರು ಪಾರ್ವರ ಪ್ರವೇಶವಾಗುತ್ತದೆ. ದೂರದಿಂದ ಹಾಡು ಕೇಳಿದ ಅವರಲ್ಲೊಬ್ಬ

ಕೊಳಲಿನಿದನಿಯಂತೆ ಸವಿಗೊರಲಿನಿಂದೊಗೆದ
ಗಾಯನವದೆನಿತಿಂಪು! ಹಾಡಿದವರಾರೊ?
ಎನ್ನುತ್ತಾನೆ. ಎರಡನೆಯವನು-
ಯಾರೋ ದಿವ್ಯಾತ್ಮನಿರಬೇಕು. ಮಧುರತಮ
ಗಾಯನವು ಅಮಲತಮ ಹೃದಯದಿಂದಲ್ಲದೆ
ಹೊರಹೊಮ್ಮಲರಿಯದು! ಗುಡಿಯ ಬಳಿಯಾದರೂ
ಹಾಡಿದನೆ!

ಎನ್ನುತ್ತಾನೆ. ಜಲಗಾರನನ್ನು ನೋಡಿ ಹಾಡಿದವನು ಅವನೇ ಎಂದು ತಿಳಿಯುತ್ತಿದ್ದ ಹಾಗೆ ಅವರ ವರ್ತನೆಯೇ ಬದಲಾಗಿಬಿಡುತ್ತದೆ.

ಸಂಗೀತವನಿತೇನು ಮನಮೋಹಿಪಂತೆ
ಇರಲಿಲ್ಲ. ಗಾನದೇವಿಯು ಹೀನ ಜಲಗಾರನನ್
ಒಲಿಯುವಳೇ? ಎಂದಿಗೂ ಇಲ್ಲ

ಎಂದು ಒಬ್ಬನು,

ಶೂದ್ರರೊಳ್
ಕವಿವರ್ಯರುದಿಸುವರೆ? ಹುಟ್ಟುವರೆ ಪಂಡಿತರ್?
ಜನಿಸುವರೆ ಶಿಲ್ಪಿಗಳ್? ಗಾಯಕರ್? ಯೋಗಿಗಳ್?
ಅಸದಳಂ! ಹೊತ್ತಾಯ್ತು ಹೋಗೋಣ

ಎಂದು ಹೊರಡುತ್ತಾರೆ. ಶ್ರೇಷ್ಠತೆಯನ್ನು ಗುರುತಿಸುವಲ್ಲಿ ಸಫಲರಾದರೂ, ಸಾಮಾಜಿಕ ಕಾರಣದಿಂದ ಅದನ್ನು ಸ್ವೀಕರಿಸುವ ಮನೋಭಾವ ಅವರಿಗಿರುವುದಿಲ್ಲ.
ಮುಂದೆ ಒಬ್ಬ ಯುವಕ ಬಂದು ಜಲಗಾರನಿಗೆ ’ಒಂದು ದಿನವಾದರೂ ವಿಶ್ರಾಂತಿಯಿರಲಿ; ಬಾ, ಹೋಗೋಣ’ ಎನ್ನುತ್ತಾನೆ. ಆದರೆ ಜಲಗಾರ ’ನೀನು ಶಿವನ ಗುಡಿಯೊಳಗರಸು; ನಾನು ಪುಡಿಯೊಳಗರಸುವೆನು’ ಎಂದು ಬೀಳ್ಕೊಡುತ್ತಾನೆ. ’ತ್ವಮೇವ ಮಾತಾ ಚಿ ಪಿತಾ ತ್ವಮೇವ!’ ಎಂದು ಮಂತ್ರ ಹೇಳುತ್ತ ಬರುವ ಭಟ್ಟನೊಬ್ಬ, ’ಕಣ್ಣಿಲ್ಲ, ಧರ್ಮರೇ, ಕಾಸು ಕೊಡಿರಪ್ಪಾ!’ ಎನ್ನುತ್ತಾ ಬರು ತಿರುಕನಿಗೆ ’ನೀ ಸತ್ತರೆನಗೇನೊ? ಮಡಿಬಟ್ಟೆ ಮುಟ್ಟುವೆಯಾ? ಅದಕೆ ದೇವರು ನಿನ್ನ ಕಣ್ಣಿಂಗಿಸಿದ್ದು’ ಎಂದು, ಮತ್ತೆ ’ತ್ವಮೇವ ಮಾತಾ ಚ......’ ಹೇಳುತ್ತಾ ಸಾಗಿ ಹೋಗುತ್ತಾನೆ. ನಂತರ ವಿಚಾರವಾದಿಗಳಂತೆ ಕಾಣುವ ಇಬ್ಬರು ತರುಣರ ಪ್ರವೇಶವಾಗುತ್ತದೆ. ’ಜಗವೆಲ್ಲ ದೇವನಿಹ ಗುಡಿಯಲ್ಲವೇ, ಗೆಳೆಯ?’ ಎನ್ನುವ ಒಬ್ಬ;

ಮೊದಲ ಠಕ್ಕನು ಮೊದಲ ಬೆಪ್ಪನಂ ಸಂಧಿಸಲು
ಸಂಭವಿಸಿತೆಂಬರೀ ಮತ ಎಂಬ ಮತಿವಿಕಾರಂ.
ದೊರೆ ಪುರೋಹಿತರ್ ಅವಳಿಮೊಲೆಯೂಡಿ ಸಲುಹಿದರದಂ.
ಮತದ ಮದಿರೆಯನೀಂಟಿ ಮಂಕುಬಡಿದಿದೆ ಜನಕೆ.
ಕೊನೆ ದೊರೆಯ ಕೊರಳಿಗಾ ಕೊನೆ ಪುರೋಹಿತನ ಕರುಳ್
ಉರುಳಾಗುವಾ ವರೆಗೆ ಸುಖವಿಲ್ಲ ಈ ಧರೆಗೆ!

ಎನ್ನುವ ಇನ್ನೊಬ್ಬ ತಮ್ಮ ವಿಚಾರಧಾರೆಯನ್ನು ಹರಿಯಬಿಡುತ್ತಾರೆ. ತಿರುಕ ಅವರ ಬಳಿ ಭಿಕ್ಷೆ ಬೇಡಿದಾಗ ಕೊಡುವಂತೆ ನಟಿಸಿ, ಕೊಡದೆ ಆತನನ್ನು ಗೋಳು ಹುಯ್ದುಕೊಳ್ಳುತ್ತಾರೆ. ’ಭಿಕ್ಷುಕರ ದೆಸೆಯಿಂದ ದೇಶವೇ ಹಾಳಾಯ್ತು! ಲೋ! ನಿನ್ನ ಕಣ್ಣು ಕುರುಡೇನೊ, ಠಕ್ಕ!’ ಎಂದು ಆತನನ್ನು ಹಿಂಸಿಸುತ್ತಾರೆ. ಜಲಗಾರ ಬಂದು ತಿರುಕನನ್ನು ಬಿಡಿಸಿಕೊಳ್ಳುತ್ತಾನೆ. ಆ ಯುವ ವಿಚಾರವಾದಿಗಳ ವಿಚಾರ ಕೇವಲ ಪುಸ್ತಕದ ಬದನೆಯಾಗುತ್ತದೆ!

ಎದ್ದೇಳು ಭಿಕ್ಷುಕನೆ, ನನ್ನನ್ನದೊಳೆ, ಮುಷ್ಟಿ
ನಿನಗಿಕ್ಕಿ, ಶಿವಪೂಜೆ ಮಾಡುವೆನು. ನೀನೆನ್ನ
ಸೋದರ, ನೀನೆನ್ನ ದೇಗುಲ!...........

ಎನ್ನುತ್ತಾನೆ ಜಲಗಾರ. ಮುಂದೆ, ಎರಡನೆಯ ದೃಶ್ಯದಲ್ಲಿ ಜಲಗಾರ ತನ್ನ ಸಂಜೆಯ ಕೆಲಸವನ್ನು ಮಾಡುತ್ತಿರುತ್ತಾನೆ. ಜಾತ್ರೆಗೆ ಹೋದವರೆಲ್ಲಾ ಹಿಂತಿರುಗುತ್ತಿರುತ್ತಾರೆ. ಜಾತ್ರೆಯ ವೈಭವ, ಆಡಂಬರದ್ದೇ ಮಾತು! ’ಜಲಗಾರ ಪುಣ್ಯವಿಲ್ಲವೊ ನಿನಗೆ!’ ಎನ್ನುತ್ತಾನೆ ರೈತ. ’ಶಿವಗುಡಿಯಿಂದ ಏನು ತಂದೆ’ ಎಂಬ ಜಲಗಾರನ ಮಾತಿಗೆ ’ಹಣ್ಣು ಕಾಯಿ ಹೂವು ಕರ್ಪೂರ ಕುಂಕುಮ’ ಎನ್ನುತ್ತಾನೆ; ದೇವಾಲಯದ ಕಲಾವೈಭವವನ್ನು ವರ್ಣಿಸುತ್ತಾನೆ! ತನ್ನ ಬದುಕಿನ ಕಷ್ಟವನ್ನು ಹಾಡುತ್ತಾ ಹುಡುಗಿಯೊಬ್ಬಳು ಹೋಗುತ್ತಾಳೆ. ಪಾರ್ವರಿಬ್ಬರು ಬರುತ್ತಾರೆ. ಅಂದಿನ ಅವರ ದಕ್ಷಿಣೆ, ಹಣ್ಣುಕಾಯಿನ ದುಡ್ಡು, ತೀರ್ಥ ಮಾರಿದ ದುಡ್ಡುಗಳ ಬಾರಿ ಲೆಕ್ಕಾಚಾರದಲ್ಲಿ ಅವರಿಬ್ಬರೂ ಮುಳುಗಿರುತ್ತಾರೆ. ’ಅಂತೂ ನಮಗೆಲ್ಲ ಶಿವಗುಡಿಯ ದೆಸೆಯಿಂದ ಹಿಟ್ಟು ಹೊಟ್ಟೆಗೆ, ದುಡ್ಡು ಬಟ್ಟೆಗೆ’ ಎಂದು ಒಬ್ಬ; ’ಗುಟ್ಟು ಬಿಟ್ಟರೆ ಕೆಟ್ಟೆ. ನಡೆ ಬೇಗ’ ಎಂದು ಇನ್ನೊಬ್ಬ ಹೇಳುತ್ತಾ ಹೋಗುತ್ತಾರೆ. ಇವರ ಮಾತು ಕೇಳಿದ ಜಲಗಾರ-

ಜೋಯಿಸರು
ಗುಡಿಯ ನುಗ್ಗುವ ಮುನ್ನವೇ ಶಿವನ ಹೊರಗಟ್ಟಿ
ನುಗ್ಗುವರು. ಶಿವಶಿವಾ ಗುಡಿಯೊಳಿದ್ದರು ಕೂಡ
ದೇವರಿಂದತಿ ದೂರವಿಹ ಪಾಪಿಯೆಂಥವನು?

ಎಂದು ಪ್ರಶ್ನಿಸಿಕೊಳ್ಳುತ್ತಾನೆ. ಕವಿಯೊಬ್ಬ ತನಗೂ ಇದಕ್ಕೂ ಏನೂ ಸಂಬಂಧವಿಲ್ಲವೆನ್ನುವಂತೆ ’ಕೊರಗಲೇಕೆ? ಮರುಗಲೇಕೆ? ಬರಿದೆ ಬಾಳನು ಜರೆವುದೇಕೆ? ಎಂದು ಹಾಡುತ್ತಾನೆ. ಹುಡುಗರ ಗುಂಪೊಂದು ’ನಾವು ಮರುಳರು, ನಾವು ಕುಡುಕರು, ಮರುಳುತನವೆಮ್ಮಾಟವು’ ಎಂದು ಹಾಡುತ್ತಾ ಸಾಗುತ್ತದೆ! ಇವೆಲ್ಲವನ್ನೂ ಕಂಡ, ಕೆಲಸ ಮುಗಿಸಿದ ಜಲಗಾರ ’ಕುಳಿತಿಲ್ಲಿ ಶಿವನಂ ಧ್ಯಾನಿಸುವೆ’ ಎಂದು ಮಧುರವಾಗಿ ಹಾಡತೊಡಗುತ್ತಾನೆ. ಜಲಗಾರನ ವೇಷದಲ್ಲಿ ಶಿವ ಪ್ರತ್ಯಕ್ಷನಾಗುತ್ತಾನೆ. ಆಗ ಜಲಗಾರ-

ನೀನಾರು ಆಕೃತಿಯೆ! ನೀನಾರು? ಯಾರು?
ಮಾನುಷವಾಗಿ ಕಂಡರೂ ಅಮಾನುಷವಾಗಿ
ತೋರುತಿಹೆ! ಮಿಣುಕುತಿಹ ತಾರೆಗಳನೇಳಿಸುವ
ಕಂಗಳಿಂದೇಕೆನ್ನ ನೋಡುತಿಹೆ ಇಂತು?
ನೀನಾರು? ಆಕೃತಿಯೆ?

ಎಂದು ಹೆದರುತ್ತಲೇ ಕೇಳುತ್ತಾನೆ. ಆಗ ಶಿವ-

ನಾನೊಬ್ಬ ಜಲಗಾರ.
ಅಂಜದಿರು, ಸೋದರನೆ! ಜಗದ ಜಲಗಾರ
ನಾನು! ಶಿವನೆಂದು ಕರೆಯುವರು ಎನ್ನ!
........................................................
ರುದ್ರನೆಂಬರು ಎನ್ನ; ಶಿವನೆಂಬರೆನ್ನ;
ಹೇಸುವರು, ಅಂಜುವರು, ಜಲಗಾರನೆನಲು!

ಎನ್ನುತ್ತಾನೆ. ಆಗ ಜಲಗಾರ ಮುಗ್ಧವಾಗಿ, ವಿನಯದಿಂದ-

ನಿನ್ನನಾ ಶಿವನೆಂದು ನಂಬುವುದೆಂತು? ಹೇ ದೇವ,
ನಿನ್ನೀ ರೂಪಮಂ ನಾನೆಂದುಮಾವೆಡೆಯೊಳುಂ
ಕಂಡರಿಯೆ, ಕೇಳರಿಯೆ. ತಿಳಿದವರು, ಪಂಡಿತರು,
ಬೇರೊಂದು ರೀತಿಯಲ್ಲಿ ಬಣ್ಣಿಸಿರುವರು ನಿನ್ನ

ಎಂದು ಕೇಳುತ್ತಾನೆ. ಆಗ ಶಿವ, ’ನಾನು ಶಾಸ್ತ್ರಿಗಳ ಶಿವನಲ್ಲ, ಕಾವ್ಯಗಳ ಶಿವನಲ್ಲ, ಬೆಳ್ಳಿಬೆಟ್ಟದ ಮೇಲೆ ಗಿರಿಜೆಯೊಡಗೂಡಿ ಸರಸವಾಡುವ ರಸಿಕ ಶಿವನಲ್ಲ! ಬ್ರಹ್ಮಾಂಡ ಒತ್ತುತಿಹ ಕಸದ ರಾಸಿಯ ಮೇಲೆ ಹತ್ತಿ, ನಿಂತು ನರ್ತನವೆಸಗುತಿಹ ತೋಟಿ ನಾನು! ನಿಜಶಿವನು ಜಲಗಾರ! ನಿನ್ನ ಮುಂದಿಹನು, ನೋಡು’ ಎನ್ನುತ್ತಾನೆ. ಆದರೂ, ”ಪಂಡಿತರದೇಕಂತು ಬಣ್ಣಿಪರು ನಿನ್ನ?’ ಎಂಬ ಜಲಗಾರನ ಪ್ರಶ್ನೆಗೆ, ಶಾಸ್ತ್ರಿಗಳ ಕಂಗಳಿಗೆ ನಾನು ನೋಡಲು ಕುರೂಪಿಯಾಗಿದರಿಂದ ತಣ್ಗದಿರನೊಡವೆ ಮಾಡಿದರು. ಅವರ ಭಾಗಕೆ ನಾನು ಪಾಪಿಯಾಗಿದ್ದರಿಂದ ಗಂಗೆಯನ್ನು ತಲೆಯಲ್ಲಿಟ್ಟು ಶುದ್ಧ ಮಾಡಿದರು! ಅಸ್ಪೃಶ್ಯನಾಗಿದ್ದರಿಂದ ಹಣೆಗಣ್ಣಿನ ಬೆಂಕಿಯಿಂದ ಸುಟ್ಟರು. ರೌದ್ರವಾಗಿ ನಾನು ಕಾಣಬೇಕೆಂದು ಹಾವುಗಳ ಸುತ್ತಿದರು ಎಂದೆಲ್ಲಾ ಹೇಳಿ,

ಚಂದ್ರನಿಲ್ಲದೆ, ಗೆಂಗೆ
ಇಲ್ಲದೆಯೆ, ಹೆಣೆಗಣ್ಣು ಹಾವುಗಳು ಇಲ್ಲದೆಯೆ,
ಜಿನವಾರ ಬೂದಿಗಳು ಇಲ್ಲದೆಯೆ, ಶಿವಗುಡಿಗೆ
ಸೇರಿಸರು ಶಿವನಾದ ಎನ್ನ. ಅದರಿಂದ
ನಿಜವಾದ ಶಿವನು, ಜಲಗಾರ ಶಿವನು,
ಶಿವಗುಡಿಯ ಪೀಠದಲಿ ಎಂದೆಂದಿಗೂ ಇಲ್ಲ!

ಎನ್ನುತ್ತಾನೆ. ’ನೀನು ಮತ್ತೆಲ್ಲಿರುವೆ?’ ಎಂಬ ಜಲಗಾರನ ಪ್ರಶ್ನೆಗೆ-

ಬೀದಿ ಗುಡಿಸುವ ಬಡವನೆದೆಯಲ್ಲಿ ನಾನಿರುವೆ!
ಉಳುತಿರುವ ಒಕ್ಕಲಿಗನೆಡೆಯಲ್ಲಿ ನಾನಿರುವೆ!
ಎಲ್ಲಿ ಹೊಲೆಯನು ನನ್ನ ಕಾರ್ಯದಲಿ ತೊಡಗಿಹನೊ
ಅಲ್ಲಿ ನಾನವನ ಪಕ್ಕದೊಳಿರುವೆ. ಕುಂಟರನು,
ಕುರುಡರನು, ದೀನರನು, ಅನಾಥರನು ಕೈಹಿಡಿದು
ಪೊರೆಯುತಿಹನೆಡೆಯಿರುವೆ................
....................................
ಊರ ತೋಟಿಯು ನೀನು; ಜಗದ ತೋಟಿಯು ನಾನು!
ಬಾ ಎನ್ನ ಸೋದರನೆ. ನೀನೆನ್ನ ನಿಜಭಕ್ತ!
ನಿನ್ನದೇ ಶಿವಭಕ್ತಿ! ನೀನೇ ಶಿವಭಕ್ತ!
ನೀನೆ ನಾನಾಗಿಹೆನು! ನಾನೆ ನೀನಾಗಿರುವೆ!
ಶಿವ ನೀನು! ಶಿವ ನೀನು!

ಎಂದು ಜಲಗಾರ ರೂಪಿಯಾದ ಶಿವ ಹಾಡುತ್ತಾನೆ. ಆಗ ಭಾವಪರವಶನಾದ ಜಲಗಾರ ’ಶಿವ ನಾನು! ಶಿವ ನಾನು!’ ಎಂದು ಹೇಳುತ್ತಾ ಶಿವನ ತೆಕ್ಕೆಯೊಳಗಾಗುತ್ತಾನೆ. ನಾಟಕ ಮುಗಿಯುತ್ತದೆ.
ಈ ನಾಟಕ ಆರಂಭದಲ್ಲಿಯೇ, ಮೈಸೂರಿನ ಸಾಹಿತ್ಯ ವಲಯದಲ್ಲಿ ಹಲವರ ಪ್ರಶಂಸೆಯನ್ನೂ ಕೆಲವರ ನಿಂದನೆಯನ್ನೂ ಎದುರಿಸಬೇಕಾಯಿತು. ನಾ.ಕಸ್ತೂರಿಯವರು ಸ್ವತಃ ತಾವೇ ನಿರ್ದೇಶಿಸಿ, ಸ್ಕೌಟು ದಳದ ವಾರ್ಷಿಕೋತ್ಸವದಲ್ಲಿ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ ಮುಂದೆ ಪ್ರದರ್ಶಿಸುತ್ತಾರೆ. (ನಾನು ನನ್ನ ರೂಢಿಯಂತೆ ಆ ನಾಟಕ ಪ್ರದರ್ಶನಕ್ಕೆ ಹೋಗಿರಲಿಲ್ಲ-ಕುವೆಂಪು) ಅದಕ್ಕೆ ಸಾಕಷ್ಟು ಶ್ಲಾಘನೆಯೂ ವ್ಯಕ್ತವಾಗುತ್ತದೆ. ಆದರೆ ಆಗ್ಗೆ ಮೈಸೂರಿನ ವೃದ್ಧಪಿತಾಮಹರೆಂದು ಪ್ರಸಿದ್ಧರಾಗಿದ್ದ ಎಂ.ವೆಂಕಟಕೃಷ್ಣಪ್ಪಯ್ಯನವರು ತಮ್ಮ ಪತ್ರಿಕೆಯಲ್ಲಿ, ’ಆ ನಾಟಕ ಬ್ರಾಹ್ಮಣರನ್ನು ಅವಹೇಳನ ಮಾಡುವುದಕ್ಕೆ ಬರೆಯಲಾಗಿದೆ’ ಎಂದೂ ’ಜಾತಿದ್ವೇಷದ ವಿಷದ ಹಲ್ಲನ್ನು ಬಿತ್ತುವವರು ವಿಷದ ಫಲವನ್ನೆ ಅನುಭವಿಸಬೇಕಾಗುತ್ತದೆ’ ಎಂದೂ ಟೀಕಿಸಿದ್ದರಂತೆ. ಆದರೆ, ನಾಟಕದಲ್ಲಿ ವ್ಯಕ್ತವಾಗಿದ್ದ ಹೊಸ ವಿಚಾರಗಳಿಂದಾಗಿ ನಾಟಕ ದಿನದಿಂದ ದಿನಕ್ಕೆ ಆಸಕ್ತರನ್ನು ಸೆಳೆಯುತ್ತಲೇ ಹೋಯಿತು. ಎಷ್ಟೋ ದಿನಗಳವರೆಗೂ ನಾಟಕಕ್ಕೆ ವ್ಯಕ್ತವಾಗಿದ್ದ ಪ್ರಶಂಸೆ-ನಿಂದನೆಗಳು ಕವಿಗೆ ತಿಳಿಯಲೇ ಇಲ್ಲ! ತಿಳಿದಾಗಲೂ ಒಂದು ನಗುವಷ್ಟೇ ಕವಿಯ ಉತ್ತರವಾಗಿತ್ತು.
೧೯೨೮ ಅಥವಾ ೧೯೨೯ನೆಯ ವರ್ಷದ ಶಿವರಾತ್ರಿಯ ದಿನ ಹಲವರ ಒತ್ತಾಯದ ಮೇರೆಗೆ ಜಲಗಾರ ನಾಟಕವನ್ನು ಸ್ವತಃ ಕವಿಯ ಬಾಯಿಂದ ಕೇಳುವ ಕಾರ್ಯಕ್ರಮವನ್ನು ಯೋಜಿಸಲಾಗಿತ್ತು. ನಾಟಕದ ಕೊನೆಯಲ್ಲಿ ಶಿವ ಪ್ರತ್ಯಕ್ಷನಾಗುತ್ತಾನೆ ಎಂಬುದರಿಂದಲೋ ಅಥವಾ ಶಿವರಾತ್ರಿಯಾಗಿದ್ದರಿಂದಲೋ ಏನೋ ಸಾಕಷ್ಟು ಜನ ಸೇರಿದ್ದರು. ಕವಿಯೂ ಅಪ್ರಾಸಛಂದಸ್ಸಿನ ಹೊಸ ಶೈಲಿಯಲ್ಲಿ ಅದನ್ನು ಧ್ವನಿಯ ಮಟ್ಟಿಗಾದರು ಅಭಿನಯಪೂರ್ವಕವಾಗಿ ವಾಚಿಸಿದರು. ಜನರೆಲ್ಲಾ ಮೆಚ್ಚಿಕೊಂಡರು. ಆದರೆ ಲಿಂಗಾಯಿತ ಶಿವಭಕ್ತರೊಬ್ಬರು ಮಾತ್ರ ಕುವೆಂಪು ಕಡೆಗೆ ಕೈದೋರುತ್ತಾ, ಭಯಂಕರವಾಗಿ ’ಶಿವದ್ರೋಹಿ! ಶಿವದ್ರೋಹಿ!’ ಎಂದು ಆರ್ಭಟಿಸುತ್ತಾ, ಶಿವನಿಂದೆಯಾದಲ್ಲಿ ನಿಲ್ಲಬಾರದು ಎನ್ನುವಂತೆ ಸಭಾತ್ಯಾಗ ಮಾಡಿದರಂತೆ! ಮೊದಲು ವಿಷಯ ತಿಳಿಯದೆ, ಶಿವಭಕ್ತರ ಆರ್ಭಟದಿಂದ ಗಾಬರಿಯಾಗಿದ್ದ ಸ್ವಾಮೀಜಿಗಳು, ತಾತಗಾರು, ನಾ.ಕಸ್ತೂರಿಯವರು ಮತ್ತಿತರರು ಜೋರಾಗಿ ನಕ್ಕುಬಿಟ್ಟರಂತೆ!
ಕುವೆಂಪು ಅವರು ನಿಧನರಾದಾಗ, ಅಂತಿಮದರ್ಶನಕ್ಕಾಗಿ ಉದಯರವಿಯ ಮುಂದೆ ಸಾಲುಗಟ್ಟಿದ ಸಾವಿರಾರು ಜನರುಗಳಲ್ಲಿ ಜಾಡಮಾಲಿಗಳ ಗುಂಪೊಂದು ಸಹ ಸಾಲಿನಲ್ಲಿ ನಿಂತಿತ್ತು. ಅವರಾರು ಕುವೆಂಪು ಅವರಿಗೆ ಪರಿಚಿತರಲ್ಲ, ಅವರ ಸಾಹಿತ್ಯವನ್ನು ಓದಿದವರೂ ಅಲ್ಲ. ಅದನ್ನು ನೋಡಿ, ಕುತೂಹಲದಿಂದ ರಾಮದಾಸ್ ಮೊದಲಾದವರು ಅವರನ್ನು ಮಾತನಾಡಿಸಿದಾಗ, ಅವರೆಲ್ಲರೂ ಕುವೆಂಪು ಮತ್ತು ಜಲಗಾರ ನಾಟಕದ ಹೆಸರುಗಳನ್ನು ಹೇಳಿದರಂತೆ! ಒಬ್ಬ ಬರಹಗಾರ ಅಥವಾ ಆತನ ಒಂದು ಕೃತಿ ಜನರ ಸ್ವತ್ತಾಗಿರುವುದಕ್ಕೆ ಇದೊಂದು ಉತ್ತಮ ಉದಾಹರಣೆ.
ಇಂದು ಶಿವರಾತ್ರಿ. ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎಂದು ಹಾಡಿದ ಬಸವನ ಹೆಸರನ್ನು ಹೇಳಿಕೊಂಡು, ಆತನ ಧರ್ಮದ ವಾರಸುಧಾರರೆನಸಿಕೊಂಡವರು, ರಾಜಕಾರಣಿಗಳು, ಮಠಾಧಿಪತಿಗಳು ನೂರು - ಇನ್ನೂರು ಅಡಿಯ ಶಿವಮೂರ್ತಿಗಳನ್ನು ಲಿಂಗಗಳನ್ನು ಮಾಡಿಸುತ್ತಾ - ಎದೆಯೊಳಗಿನ ಶಿವನಿಗೆ ಸಮಾಧಿ ಕಟ್ಟುತ್ತಾ - ಕಾಂಕ್ರೀಟ್ ಶಿವನ ಆರಾಧಕರಾಗುತ್ತಿದ್ದಾರೆ. ’ನಿಜಶಿವನಾರು?’ ಎಂಬುದನ್ನು ಅರಿಯುವುದೇ ನಿಜವಾದ ಶಿವರಾತ್ರಿಯಲ್ಲವೆ? --

ನಾಟಕ ಪ್ರದರ್ಶನದ ಲಿಂಕುಗಳು
https://youtu.be/uAYbrqCC1k8


Posted by ಡಾ. ರವಿಶಂಕರ್ ಎ.ಕೆ. ಅಂಕುರ on ಜನವರಿ 22, 2020 ಕಾಮೆಂಟ್‌ಗಳಿಲ್ಲ:
ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!X ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ
ಡಾ. ರವಿಶಂಕರ್ ಎ.ಕೆ. ಅಂಕುರ
ಸಹೃದಯ ಓದು ಮತ್ತು ಬರಹದಲ್ಲಿ ಜೀವನ ಪ್ರೀತಿ ಕಾಣುವೆ

ಭಾನುವಾರ, ಜನವರಿ 19, 2020

ಕ್ರಿಸ್ತು ಜಯಂತಿ ಕಾಲೇಜಿನ *ನೈರತಿ* ನಾಟಕ ಪ್ರದರ್ಶನಕ್ಕೆ ಪ್ರಥಮ ಬಹುಮಾನ


ಮೈಸೂರಿನಲ್ಲಿ ಜರುಗಿದ *ವಿದ್ಯಾರ್ಥಿ ಸಂಸ್ಕೃತಿ ಚಳುವಳಿ ೨* ಕಾರ್ಯಕ್ರಮದಲ್ಲಿ ಕ್ರಿಸ್ತು ಜಯಂತಿ ಕಾಲೇಜಿಗೆ ಪ್ರಥಮ ಬಹುಮಾನ ದೊರಕಿದೆ. *ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ* ನಮ್ಮ ಕಾಲೇಜನ್ನು ಆಯ್ಕೆಮಾಡಿ ಕಳುಹಿಸಿದ್ದು ಈ ಗೆಲುವಿನ‌ ಸಾರ್ಥಕತೆ ನಮ್ಮ ಕಾಲೇಜಿನಷ್ಟೇ ವಿಶ್ವವಿದ್ಯಾಲಯಕ್ಕೂ ಸಲ್ಲುತ್ತದೆ.

ಕರ್ನಾಟಕದಾದ್ಯಂತ ಸುಮಾರು ಐವತ್ತಕ್ಕೂ ಹೆಚ್ಚು  ಉತ್ತಮ ಟೀಮ್ ಗಳ ಮೂಲಕ ಸ್ಪರ್ಧೆ ಜರುಗಿದೆ.
ನಾನೇ ನಾಲ್ಕೈದು ನಾಟಕಗಳ ಶ್ರಮವನ್ನು ನೋಡಿದ್ದೇನೆ. ಆದರೆ ನಮ್ಮ ನಾಟಕವು ಈ ಎಲ್ಲಾ ಶಕ್ತಿಗಳನ್ನು ಮೀರಿಸಿ, ಕಡಿಮೆ ನೋಡುಗರಿದ್ದರೂ ಹೆಚ್ಚು ಶ್ರಮ ನೀಡಿ ನಿರ್ವಹಿಸಿದರು. ಇಡೀ ನಾಟಕದ ವಿಡಿಯೋ ಕೂಡ ಫೇಸ್ ಬುಕ್ *(ರವಿಶಂಕರ ಎ.ಕೆ ಅಂಕುರ https://m.facebook.com/story.php?story_fbid=1192372967619010&id=100005389539367)* ನಲ್ಲಿ ಲಭ್ಯ ಇದೆ.
ನಮ್ಮ ಕಾಲೇಜಿನ ವಿದ್ಯಾರ್ಥಿಗಳು *ಪ್ರಥಮ  ಬಹುಮಾನ* ಗೆದ್ದದ್ದು ನನಗೂ ಹಿರಿಮೆಯೇ ಆಗಿದೆ.
ನಿರ್ದೇಶನ ಮಾಡಿದ ಪವಿತ್ರ ಮೇಡಂ ಅವರಿಗೂ...
ಅಭಿನಯಿಸಿದ ಕ್ರಿಸ್ತು ಜಯಂತಿ ಕಾಲೇಜಿನ *ರಂಗಾಂತರಂಗ*  ತಂಡಕ್ಕೂ ಅಭಿನಂದನೆಗಳು.
-ಅಂಕುರ
Posted by ಡಾ. ರವಿಶಂಕರ್ ಎ.ಕೆ. ಅಂಕುರ on ಜನವರಿ 19, 2020 ಕಾಮೆಂಟ್‌ಗಳಿಲ್ಲ:
ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!X ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ
ಡಾ. ರವಿಶಂಕರ್ ಎ.ಕೆ. ಅಂಕುರ
ಸಹೃದಯ ಓದು ಮತ್ತು ಬರಹದಲ್ಲಿ ಜೀವನ ಪ್ರೀತಿ ಕಾಣುವೆ

ಬುಧವಾರ, ಜನವರಿ 15, 2020








ಕುವೆಂಪು ಕುರಿತು ಮಾಹಿತಿ










ಕುವೆಂಪು
ಕನ್ನಡದ ಎರಡನೇ ರಾಷ್ಟ್ರಕವಿ


ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪[೧] - ನವೆಂಬರ್ ೧೧, ೧೯೯೪), ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು
ಕುವೆಂಪು

ಶ್ರೀ ಕೆ. ವಿ. ಪುಟ್ಟಪ್ಪ
ಜನನಡಿಸೆಂಬರ್ ೨೯, ೧೯೦೪
ಹಿರೇಕೊಡಿಗೆ, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ
ಮರಣನವೆಂಬರ್ 11, 1994
ಮೈಸೂರು, ಕರ್ನಾಟಕ, ಭಾರತ
ಅಂತ್ಯ ಸಂಸ್ಕಾರ ಸ್ಥಳಕುಪ್ಪಳಿ, ಶಿವಮೊಗ್ಗ ಜಿಲ್ಲೆ
ಕಾವ್ಯನಾಮಕುವೆಂಪು
ವೃತ್ತಿಕವಿ, ಲೇಖಕ, ಪ್ರಾಧ್ಯಾಪಕ, ಪ್ರಾಂಶುಪಾಲ, ಕುಲಪತಿ
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಮೈಸೂರು ವಿಶ್ವವಿದ್ಯಾನಿಲಯ
ಕಾಲ20ನೆಯ ಶತಮಾನ
ಪ್ರಕಾರ/ಶೈಲಿಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕಥೆ, ಜೀವನ ಚರಿತ್ರೆ, ಮಹಾಕಾವ್ಯ
ವಿಷಯಪ್ರೇಮ, ದೇಶಪ್ರೇಮ, ಪ್ರಕೃತಿ, ಅಧ್ಯಾತ್ಮ, ವಿಚಾರ
ಸಾಹಿತ್ಯ ಚಳುವಳಿನವೋದಯ
ಪ್ರಮುಖ ಪ್ರಶಸ್ತಿ(ಗಳು)ಜ್ಞಾನಪೀಠ ಪ್ರಶಸ್ತಿ, ಪದ್ಮ ವಿಭೂಷಣ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಪಂಪ ಪ್ರಶಸ್ತಿ
ಬಾಳ ಸಂಗಾತಿಹೇಮಾವತಿ
ಮಕ್ಕಳುಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ, ತಾರಿಣಿ
ಸಂಬಂಧಿಗಳುಚಿದಾನಂದ ಗೌಡ

ಪ್ರಭಾವಗಳು
  • ಕುಮಾರವ್ಯಾಸ, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಮಹಾತ್ಮ ಗಾಂಧಿ, ರವೀಂದ್ರನಾಥ ಟಾಗೋರ್ ಮಿಲ್ಟನ್, ವರ್ಡ್ಸ್ ವರ್ತ್,

ಪ್ರಭಾವಿತರು
  • ದೇ. ಜವರೇಗೌಡ, ಜಿ. ಎಸ್. ಶಿವರುದ್ರಪ್ಪ

ಸಹಿ

www.kuvempu.com
ಕುವೆಂಪು
ಜನನ29 ಡಿಸೆಂಬರ್ ೧೯೦೪
ಹಿರೇಕೊಡಿಗೆ, ಕೊಪ್ಪ, ಚಿಕ್ಕಮಗಳೂರು
ನಿಧನ೧೧ ನವೆಂಬರ್ ೧೯೯೪
ರಾಷ್ಟ್ರೀಯತೆಭಾರತೀಯ
Other namesಕೆ.ವಿ. ಪುಟ್ಟಪ್ಪ
ವೃತ್ತಿಕವಿ
Known forಕವಿತೆಗಳು
Notable work
ರಾಮಾಯಣ ದರ್ಶನಂ
ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ 'ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು.

ಜೀವನ

ಸಾಹಿತ್ಯ ಕೃಷಿ

ಕೃತಿಗಳು








ಮಹಾಕಾವ್ಯ

  1. ಶ್ರೀ ರಾಮಾಯಣ ದರ್ಶನಂ (1949)

ಖಂಡಕಾವ್ಯಗಳು

  1. ಚಿತ್ರಾಂಗದಾ (1936)

ಕವನ ಸಂಕಲನಗಳು

  1. ಕೊಳಲು (1930)
  2. ಪಾಂಚಜನ್ಯ (1933)
  3. ನವಿಲು (1934)
  4. ಕಲಾಸುಂದರಿ (1934)
  5. ಕಥನ ಕವನಗಳು (1937)
  6. ಕೋಗಿಲೆ ಮತ್ತು ಸೋವಿಯಟ್ ರಷ್ಯಾ (1944)
  7. ಪ್ರೇಮ ಕಾಶ್ಮೀರ (1946)
  8. ಅಗ್ನಿಹಂಸ (1946)
  9. ಕೃತ್ತಿಕೆ (1946)
  10. ಪಕ್ಷಿಕಾಶಿ (1946)
  11. ಕಿಂಕಿಣಿ (ವಚನ ಸಂಕಲನ) (1946)
  12. ಷೋಡಶಿ (1946)
  13. ಚಂದ್ರಮಂಚಕೆ ಬಾ ಚಕೋರಿ (1957)
  14. ಇಕ್ಷುಗಂಗೋತ್ರಿ (1957)
  15. ಅನಿಕೇತನ (1963)
  16. ಜೇನಾಗುವ (1964)
  17. ಅನುತ್ತರಾ (1965)
  18. ಮಂತ್ರಾಕ್ಷತೆ (1966)
  19. ಕದರಡಕೆ (1967)
  20. ಪ್ರೇತಕ್ಯೂ (1967)
  21. ಕುಟೀಚಕ (1967)
  22. ಹೊನ್ನ ಹೊತ್ತಾರೆ (1976)
  23. ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ(1981)

ಕಥಾ ಸಂಕಲನ

  1. ಸಂನ್ಯಾಸಿ ಮತ್ತು ಇತರ ಕಥೆಗಳು (1936)
  2. ನನ್ನ ದೇವರು ಮತ್ತು ಇತರ ಕಥೆಗಳು (1940)

ಕಾದಂಬರಿಗಳು

  1. ಕಾನೂರು ಹೆಗ್ಗಡತಿ (1936)
  2. ಮಲೆಗಳಲ್ಲಿ ಮದುಮಗಳು (1967)

ನಾಟಕಗಳು

  1. ಯಮನ ಸೋಲು (1928)
  2. ಜಲಗಾರ (1928)
  3. ಬಿರುಗಾಳಿ (1930)
  4. ವಾಲ್ಮೀಕಿಯ ಭಾಗ್ಯ (1931)
  5. ಮಹಾರಾತ್ರಿ (1931)
  6. ಸ್ಶಶಾನ ಕುರುಕ್ಷೇತ್ರಂ (1931)
  7. ರಕ್ತಾಕ್ಷಿ (1933)
  8. ಶೂದ್ರ ತಪಸ್ವಿ (1944)
  9. ಬೆರಳ್‍ಗೆ ಕೊರಳ್ (1947)
  10. ಬಲಿದಾನ (1948)
  11. ಚಂದ್ರಹಾಸ (1963)
  12. ಕಾನೀನ (1974)

ಪ್ರಬಂಧ

  1. ಮಲೆನಾಡಿನ ಚಿತ್ರಗಳು (1933)

ವಿಮರ್ಶೆ

  1. ಕಾವ್ಯವಿಹಾರ (1946)
  2. ತಪೋನಂದನ (1950)
  3. ವಿಭೂತಿಪೂಜೆ (1953)
  4. ದ್ರೌಪದಿಯ ಶ್ರೀಮುಡಿ (1960)
  5. ರಸೋ ವೈ ಸಃ (1963)
  6. ಇತ್ಯಾದಿ (1970)

ಆತ್ಮಕಥೆ

  1. ನೆನಪಿನ ದೋಣಿಯಲ್ಲಿ: ಕುವೆಂಪು ಮದುವೆ ಪ್ರಸಂಗ

ಜೀವನ ಚರಿತ್ರೆಗಳು

  1. ಸ್ವಾಮಿ ವಿವೇಕಾನಂದ
  2. ರಾಮಕೃಷ್ಣ ಪರಮಹಂಸ

ಅನುವಾದ

  1. ಗುರುವಿನೊಡನೆ ದೇವರಡಿಗೆ (ಭಾಗ 1, 2) (1954)
  2. ಕೊಲಂಬೋ ಇಂದ ಆಲ್ಮೋರಕೆ

ಭಾಷಣ-ಲೇಖನ

  1. ಸಾಹಿತ್ಯ ಪ್ರಚಾರ (1930)
  2. ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ (1944)
  3. ಷಷ್ಠಿನಮನ (1964)
  4. ಮನುಜಮತ-ವಿಶ್ವಪಥ (1971)
  5. ವಿಚಾರ ಕ್ರಾಂತಿಗೆ ಆಹ್ವಾನ (1976)

ಶಿಶು ಸಾಹಿತ್ಯ

  1. ಅಮಲನ ಕಥೆ (1924)
  2. ಮೋಡಣ್ಣನ ತಮ್ಮ (ನಾಟಕ) (1926)
  3. ಹಾಳೂರು (1926)
  4. ಬೊಮ್ಮನಹಳ್ಳಿಯ ಕಿಂದರಿಜೋಗಿ (1928)
  5. ನನ್ನ ಗೋಪಾಲ (ನಾಟಕ) (1930)
  6. ನನ್ನ ಮನೆ (1946)
  7. ಮೇಘಪುರ (1947)
  8. ಮರಿವಿಜ್ಞಾನಿ (1947)
  9. ನರಿಗಳಿಗೇಕೆ ಕೋಡಿಲ್ಲ (1977)

ಇತರೆ

  1. ಜನಪ್ರಿಯ ವಾಲ್ಮೀಕಿ ರಾಮಾಯಣ

ಆಯ್ದ ಸಂಕಲನಗಳು

  1. ಕನ್ನಡ ಡಿಂಡಿಮ (1968)
  2. ಕಬ್ಬಿಗನ ಕೈಬುಟ್ಟಿ (1973)
  3. ಪ್ರಾರ್ಥನಾ ಗೀತಾಂಜಲಿ (1972)


ಶೂದ್ರ ತಪಸ್ವಿ
- ಕುವೆಂಪು
ಶೂದ್ರ ತಪಸ್ವಿ ಕುವೆಂಪುರವರ ಪ್ರಸಿದ್ಧ ನಾಟಕ ಕೃತಿ. ಮೂಲ ರಾಮಾಯಣದ ಕಥೆ ಆಧರಿಸಿ ಅಲ್ಪ, ಸ್ವಲ್ಪ ಬದಲಾವಣೆಗಳೊಂದಿಗೆ ಈ ನಾಟಕವನ್ನು ಸಿದ್ದಪಡಿಸಲಾಗಿದೆ. ಗುಣಕ್ಕೆ ಮಾತ್ಸರ್ಯ ಇರಬಾರದು. ಒಳ್ಳೆಯದು ಎಲ್ಲಿದ್ದರೂ ಅದನ್ನು ಗೌರವಿಸ ಬೇಕೆಂಬ ತತ್ವ್ತದ ಅಡಿಯಲ್ಲಿ ನಾಟಕ ರೂಪುಗೊಂಡಿರುವುದನ್ನು ಕಾಣಬಹುದಾಗಿದೆ.

ಶೂದ್ರ ತಪಸ್ವಿ, ವಸ್ತು ವಿಷಯ
ರಾಮಾಯಾಣದ ಉತ್ತರಾಕಾಂಡದಲ್ಲಿ ಬರುವ ಪ್ರಕ್ಷಿಪ್ತ ಭಾಗದಲ್ಲಿ ಬರುವ ಕಥೆ. ಶಂಬೂಕ ವಧಾ ಪ್ರಸಂಗ.
ರಾಮನು ರಾಜ್ಯಭಾರ ಮಾಡುವ ಸಂದರ್ಭದಲ್ಲಿ ಒಮ್ಮೆ ಬ್ರಾಹ್ಮಣನ ಮಗನು ಸತ್ತು ಹೋಗುತ್ತಾನೆ. ಇದಕ್ಕೆ ಕಾರಣ ಶೂದ್ರನೊಬ್ಬ ತಪಸ್ಸು ಮಾಡುವುದು ಎಂದು ಬ್ರಾಹ್ಮಣ ರಾಮನ ಬಳಿ ಬಂದು ಆರೋಪಿಸಿ ರಾಮರಾಜ್ಯದಲ್ಲಿ ತನ್ನ ಮಗು ಅಕಾಲಿಕ ಮರಣಕ್ಕೆ ತುತ್ತಾಗಿರುವುದರಿಂದ ನ್ಯಾಯ ಕೊಡಬೇಕೆಂದು ಪರಿಪರಿಯಾಗಿ ಬೇಡುತ್ತಾನೆ. ರಾಮ ಬ್ರಾಹ್ಮಣನ ಮನವೊಲಿಸಲು ಪ್ರಯತ್ನಿಸಿ ಸೋಲುತ್ತಾನೆ.
ಕಡೆಗೆ ಶೂದ್ರ ತಪಸ್ವಿ ತಪಸ್ಸು ಮಾಡುವ ಜಾಗಕ್ಕೆ ಬ್ರಾಹ್ಮಣನೊಂದಿಗೆ ರಾಮನೂ ಬಂದು, ಅವನ ಮನಸ್ಸಿನ ಸಮಾಧಾನಕ್ಕೋಸ್ಕರ ಶೂದ್ರ ತಪಸ್ವಿಯನ್ನು ಸಂಹರಿಸಲು ಮುಂದಾಗಿ ಬಾಣವನ್ನು ಹೂಡುತ್ತಾನೆ. ಆದರೆ ಆ ಭಾಣ ಶೂದ್ರ ತಪಸ್ವಿಯನ್ನು ಪ್ರದಕ್ಷಿಣೆ ಹಾಕಿ, ಬ್ರಾಹ್ಮಣನನ್ನು ಕೊಲ್ಲಲು ಧಾವಿಸಿದಾಗ, ಬ್ರಾಹ್ಮಣ ಕಂಗಾಲಾಗುತ್ತಾನೆ. ನಂತರ ರಾಮನ ಅನುಜ್ಞೆಯಂತೆ ಶೂದ್ರ ತಪಸ್ವಿಗೆ ವಂದಿಸುತ್ತಾನೆ. ತನ್ನ ಪ್ರಾಣ ಮತ್ತು ಮಗುವಿನ ಪ್ರಾಣ ಎರಡನ್ನು ಕಾಪಾಡಿಕೊಳ್ಳುತ್ತಾನೆ.
ಶೂದ್ರ ತಪಸ್ವಿ ೧೯೪೪ರಲ್ಲಿ ಕುವೆಂಪು ರಚಿಸಿದ ‘ಶೂದ್ರ ತಪಸ್ವಿ’ ನಾಟಕಕ್ಕೆ ರಾಮಾಯಣದ ಒಂದು ತುಣುಕನ್ನು ಕಥೆಯಾಗಿ ಆಯ್ದುಕೊಂಡಿದ್ದಾರೆ. ಶೂದ್ರ ತಪಸ್ವಿ ನಾಟಕ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಬಹುಮುಖ್ಯವಾಗಿದ್ದು ಶೋಷಿತರ ಗಟ್ಟಿದನಿಯಾಗಿ ಹೊರಹೊಮ್ಮುತ್ತಲೇ ಅಂದಿನ ಮೇಲ್ವರ್ಗದ ಘಟಾನುಘಟಿ ಸಾಹಿತಿ, ಟೀಕಾಕಾರರ ವಾಗ್ಧಾಳಿ ಮತ್ತು ಅಸಡ್ಡೆಗಳನ್ನು ಧೂಳಿಪಟ ಮಾಡಿ ಒಂದು ಅದ್ಭುತ ಕೃತಿಯಾಗಿ, ಕೆಳವರ್ಗದ ಜನತೆಯ ಆತ್ಮಸ್ಥೈರ್ಯವಾಗಿ ನಿಂತಿದೆ.

ಶೂದ್ರ ಶಂಬೂಕನ ತಲೆ ಉರುಳಿಸುವ ಮೂಲ ರಾಮಾಯಣ: ಮೂಲ ರಾಮಾಯಣ ಕಾವ್ಯದಲ್ಲಿ ಶ್ರೀರಾಮ ಸೀತೆಯನ್ನು ಕಾಡಿಗಟ್ಟಿದ ನಂತರ ವೃದ್ದ ಬ್ರಾಹ್ಮಣನೊಬ್ಬ ತನ್ನ ಮೃತ ಬಾಲಕನನ್ನು ಹೊತ್ತು ತಂದು ರಾಮನ ಅರಮನೆಯ ಮುಂದೆ ಗೋಳಿಡುತ್ತಾನೆ. ರಾಮ ರಾಜ್ಯದಲ್ಲಿ ಶೂದ್ರ ಶಂಬೂಕನು ತಪಸ್ಸು ಮಾಡುತ್ತಿರುವುದರಿಂದಲೇ ತನ್ನ ಮಗನಿಗೆ ಸಾವುಂಟಾಗಿದೆ ಎನ್ನುತ್ತಾನೆ. ರಾಮ ಶೂದ್ರ ಶಂಬೂಕನನ್ನು ಹುಡುಕಿ ತನ್ನ ಖಡ್ಗದಿಂದ ಶಂಬೂಕನ ತಲೆ ಕಡಿಯುತ್ತಾನೆ. ಈ ಕಾರ್ಯವನ್ನು ಗಮನಿಸಿ ಇಂದ್ರಾದಿಗಳೆಲ್ಲಾ ರಾಮನ ಧರ್ಮಪಾಲನೆಗಾಗಿ ಮನಮೆಚ್ಚಿ, ರಾಮನಿಗೆ ವರ ನೀಡುತ್ತಾರೆ. ರಾಮ ಆ ವರದಿಂದ ಸತ್ತಿರುವ ಬ್ರಾಹ್ಮಣ ಬಾಲಕನನ್ನು ಬದುಕಿಸಿಕೊಳ್ಳುತ್ತಾನೆ.

ಶೂದ್ರ ತಪಸ್ವಿಯ ಹಿಂದಿರುವ ಸೃಜನಶೀಲ ಪ್ರತಿಭೆ: ಕುವೆಂಪು ಮೂಲ ರಾಮಾಯಣದಲ್ಲಿರುವ ರಾಮನನ್ನು ಜೀವ-ವಿರೋಧಿ ಮನೋಗುಣದಿಂದ ಶೂದ್ರ ತಪಸ್ವಿಯಲ್ಲಿ ಬಿಡುಗಡೆಗೊಳಿಸಿ ರಾಮ ಮತ್ತು ಬ್ರಾಹ್ಮಣನ ಮನ:ಪರಿವರ್ತನೆಗೊಳಿಸುತ್ತಾರೆ. ಮೃತ್ಯುವನ್ನು ಅಥವಾ ಮನುಷ್ಯ-ವಿರೋಧಿ ಧರ್ಮವನ್ನು ಮನುಷ್ಯ ಧರ್ಮ ಗೆಲ್ಲಬೇಕು ಎಂಬ ನಾಟಕ ಆಶಯ ಭಿತ್ತಿಗೊಳ್ಳುತ್ತದೆ. ಕುವೆಂಪು ಜಾತಿಯ ವಿಷ ಬೀಜ ಬಿತ್ತುವ ಮೂಲ ರಾಮಾಯಣಕ್ಕೆ ವಿಶ್ವಪಥದ ಉಸಿರು ತುಂಬುತ್ತಾರೆ. ನಾಟಕದ ಪ್ರಮುಖ ಮೂರು ದೃಶ್ಯಗಳಲ್ಲಿ ಮೊದಲಿಗೆ, ಮೃತ್ಯುವು ಕೂಡ ಒಂದು ಪಾತ್ರವಾಗಿ ಬರುವ, ಅರಣ್ಯ ಕಾಯುವ ವೃಕ್ಷ ಭೈರವನೊಂದಿಗೆ ಸಂಘರ್ಷಿಸುವ ದೃಶ್ಯ ರೋಚಕವಾಗಿ ಮೂಡಿಬಂದಿದೆ. ಶೂದ್ರ ಶಂಬೂಕ ಋಷಿಯು ತಪಸ್ಸು ಮಾಡುತ್ತಿರುವ ಅರಣ್ಯದೊಳಕ್ಕೆ ಪ್ರವೇಶಿಸುವ ಮೃತ್ಯುವನ್ನು ಅರಣ್ಯ ರಕ್ಷಕ ತಾನೆಂದು ಅಪ್ಪಣೆಯಿಲ್ಲದೆ ಪ್ರವೇಶಿಸಕೂಡದೆಂದು ವೃಕ್ಷ ಭೈರವ ತಡೆಯುತ್ತಾನೆ. ಶೂದ್ರ ತಪಗೈಯುತ್ತಿರುವುದು ಅಧರ್ಮವೆಂಬಂತೆ ಬ್ರಾಹ್ಮಣ ಬಾಲಕ ಅದನ್ನು ನೋಡಿರುವುದರಿಂದ ಮೃತ್ಯುವು ಒಳಹೋಗುವುದು ಅನಿವಾರ್ಯವೆನ್ನುತ್ತಾ ಮೆಲ್ಲ ಮೆಲ್ಲನೆ ಕರಿಮಂಜಾಗಿ ಆಶ್ರಮದ ಕಡೆ ಚಲಿಸುತ್ತದೆ. ಭೈರವನಿಗೆ ರೋಷವುಕ್ಕಿ ‘ಶಿವ ಶಿವಾ! ಏನ್ ಭಯಂಕರಂ ಪಾಪಂ, ಶ್ರೀರಾಮನಾಳು ತಿರ್ಪ್ಪೀ ಧರ್ಮರಾಜ್ಯದೊಳ್!’ ಎಂದು ಹಲುಬುತ್ತಾನೆ. ಎರಡನೆಯ ದೃಶ್ಯದಲ್ಲಿ ಬ್ರಾಹ್ಮಣನೊಬ್ಬ ರೋದಿಸುತ್ತಾ ಶ್ರೀ ರಾಮಚಂದ್ರನ ಅಯೋಧ್ಯೆಯ ಬಳಿಯ ಉದ್ಯಾನವನದಲ್ಲಿ, ಮಗನ ದುರ್ಮರಣ ರಾಮರಾಜ್ಯದಲ್ಲಿ ಅಧರ್ಮವನ್ನು ಹುಟ್ಟು ಹಾಕುತ್ತಿದೆ ಎಂದು ಬೊಬ್ಬಿಡುತ್ತಾನೆ. ಅಲ್ಲಿಗೆ ಬರುವ ರಾಮ ಬ್ರಾಹ್ಮಣನನ್ನುದ್ದೇಶಿಸಿ ‘ನೀಂ ಏನಾದೊಡಂ ಅಪೂಜ್ಯಗೆಯ್ದಿರೇನ್’ ಎಂದಾಗ ಬ್ರಾಹ್ಮಣ ಹೆದರಿ ತೊದಲುತ್ತಾ, ಈ ಅಪರಾಧಕ್ಕೆ ಮೂಲ ರಾಮನೇ ಎನ್ನುತ್ತಾನೆ. ಶೂದ್ರ ತಪಸ್ವಿಯ ದರ್ಶನದ ಫಲವಾಗಿ ನನ್ನ ಮಗನಿಗೆ ಮರಣ ಉಂಟಾಗಿದೆ ಎನ್ನುತ್ತಾನೆ. ರಾಮರಾಜ್ಯದಲ್ಲಿ ತಪಸ್ಸು, ವೇದಾಧ್ಯಯನ, ದರ್ಶನ ಎಲ್ಲವೂ ತನ್ನ ವರ್ಗಕ್ಕೆ ಮಾತ್ರ ಮೀಸಲು, ಶೂದ್ರ ತಪಸ್ಸು ಒಂದು ಅಧರ್ಮ ಎನ್ನುವುದು ಬ್ರಾಹ್ಮಣನ ಅಭಿಪ್ರಾಯ. ಕುವೆಂಪುರವರ ರಾಮ ಬ್ರಾಹ್ಮಣನ ಮಾತಿಗೆ ಪ್ರತ್ಯುತ್ತರವನ್ನು ಮನಸ್ಸಿನಲ್ಲಿ ಯೋಚಿಸುತ್ತಾನೆ: “ವರ್ಣಗರ್ವಾಂಧಂಗೆ ಈ ಶಾಸ್ತ್ರ ಮೂರ್ಖಂಗೆಂತು ಬುದ್ದಿಗಲಿಪೆನ್!’. ಅವನ ಒಡಗೂಡಿ ಪುಷ್ಪಕ ವಿಮಾನವೇರಿ ಹೊರಡುತ್ತಾನೆ. ಮೂರನೆಯ ದೃಶ್ಯದಲ್ಲಿ, ಮಹಾತಪ್ಪಸ್ಸಿನಲ್ಲಿರುವ ಶಂಬೂಕ ಮಹರ್ಷಿ ಆಶ್ರಮಕ್ಕೆ ಶ್ರೀರಾಮ, ಬ್ರಾಹ್ಮಣನ ಪ್ರವೇಶವಾಗುತ್ತದೆ. ತಪೋಗುಣ, ಶಾಂತಿನೆಲೆಸಿರುವ ವಾತಾವರಣ ಕಂಡು ಶ್ರೀರಾಮ ಭಾವಪರವಶನಾಗಿ ಶಂಬೂಕ ಋಷಿಗೆ ಶ್ರೀರಾಮ ಕೈಮುಗಿಯುತ್ತಿದ್ದರೆ, ರೋಷವುಕ್ಕಿದ ಬ್ರಾಹ್ಮಣ ರೋದಿಸುವ ನಾಟಕವಾಡುತ್ತಾ ಶಂಬೂಕನ ಶಿರಚ್ಛೇದ ಮಾಡಬೇಕೆಂದು ಅಲವತ್ತು ಮಾಡುತ್ತಾನೆ. ರಾಮ ಬ್ರಾಹ್ಮಣನಿಗೆ ಕೆಲ ಪ್ರಶ್ನೆ ಹಾಕುತ್ತಾನೆ: ತಪಸ್ಸುಗೈಯುವವನು ಪೂಜ್ಯನಲ್ಲವೇ? ಈ ತಪಸ್ವಿಯಂ ಕೊಲ್ವುದುಂ ಪಾಪಮಾಗದೆ? ಅದಕ್ಕೆ ಬ್ರಾಹ್ಮಣ ‘ನಾಯಿಯ ಹಾಲಿಗೆ ಈ ಶೂದ್ರನ ತಪಸ್ಸು ಸಮ’ ಎಂದಾಗ ರಾಮ ವ್ಯಂಗ್ಯದಿಂದ ‘ಸಾರ್ಥಕವಾಯ್ತು ನೀ ಕಲಿತ ವಿದ್ಯೆ ಆಚಾರ್‍ಯ’ ಎನ್ನುತ್ತಾನೆ. ಬ್ರಾಹ್ಮಣನನ್ನು ಸಂತೈಸಲು ರಾಮ ಶಸ್ತ್ರ ಹೂಡಲು ನಿರ್ಧರಿಸಿದಾಗಲೂ, ತೊಡುವುದಿದ್ದರೆ ಬ್ರಹ್ಮಾಸ್ತ್ರವನ್ನೇ ತೊಡಬೇಕು ಎಂದು ಬ್ರಾಹ್ಮಣ ಪಟ್ಟು ಹಾಕುತ್ತಾನೆ. ಕುವೆಂಪು ರಾಮನ ಜಿಜ್ಞಾಸೆಯನ್ನು ಇಲ್ಲಿ ಪರಿಹರಿಸುವ ಪರಿಯೇ ವಿಶಿಷ್ಟ. ತಾನು ಹೂಡುವ ಬ್ರಹ್ಮಾಸ್ತ್ರ ಅಧರ್ಮದ ವಿರುದ್ದ ಹೋರಾಡಲಿ ಎನ್ನುತ್ತಾ ರಾಮ ಶಸ್ತ್ರ ಹೂಡುತ್ತಾನೆ. ಬ್ರಹ್ಮಾಸ್ತ್ರವು ಶಂಬೂಕ ತಪಸ್ವಿಯ ಬಳಿ ತೆರಳಿ ತಪೋಮಹಿಮೆಗೆ ನಮಿಸುತ್ತದೆ. ನಂತರ ಬ್ರಾಹ್ಮಣನೆಡೆಗೆ ತಿರುಗಿ ಧಾವಿಸತೊಡಗಿದಾಗ ಅಧರ್ಮಿ ಯಾರು ಎಂಬುದು ಬ್ರಾಹ್ಮಣನಿಗೆ ಅರಿವಾಗಿ ರಕ್ಷಣೆಗಾಗಿ ಬೊಬ್ಬಿಡುತ್ತಾನೆ. ಅಂತಿಮವಾಗಿ ಬ್ರಹ್ಮಾಸ್ತ್ರವನ್ನು ಹಿಂಪಡೆಯುವ ವೇಳೆಗೆ ಬಾಲಕ ಬ್ರಾಹ್ಮಣನನ್ನು ಹುಡುಕುತ್ತಾ ಬರುತ್ತಾನೆ. ತನ್ನ ತಾತನೊಂದಿಗೆ ಹೂವು ತರಲು ಕಾಡಿಗೆ ಬಂದ ತಾನು ಮೂರ್ಛೆ ಹೋಗಿ ಪ್ರಜ್ಞೆ ಬರುವಷ್ಟರಲ್ಲಿ ದಾರಿ ತಪ್ಪಿದೆ ಎನ್ನುತ್ತಾನೆ ಬಾಲಕ. ಬಾಲಕ ಮತ್ತು ಬ್ರಾಹ್ಮಣರಿಬ್ಬರು ಶೂದ್ರ ಶಂಬೂಕ ತಪಸ್ವಿಗೆ ನಮಿಸುವ ದೃಶ್ಯದೊಂದಿಗೆ ನಾಟಕ ಮುಕ್ತಾಯಗೊಳ್ಳುತ್ತದೆ. ಮೂಲ ರಾಮಾಯಣದಲ್ಲಿ ಶೂದ್ರ ಶಂಬೂಕನ ಮೇಲೆ ಧಾಳಿ ಮಾಡಿ ಜೀವ-ವಿರೋಧಿಯಂತೆ ರಾಮ ಅವನನ್ನು ಕೊಂದಿದ್ದರೆ, ಇಲ್ಲಿ ಕುವೆಂಪುರವರ ರಾಮ ಜೀವ-ಪರನಂತೆ, ಸತ್ಯದ ಅಸ್ತ್ರವಿಡಿದು ಮನ:ಪರಿವರ್ತನೆಗೆ ಸಾಕ್ಷಿಯಾಗುತ್ತಾನೆ.

ಶೂದ್ರತಪಸ್ವಿಯಲ್ಲಿ ಬರುವ ಧಾರ್ಮಿಕ ವಿಚಾರಶೀಲತೆ. ಇಲ್ಲಿ ಬ್ರಾಹ್ಮಣ –ಶೂದ್ರ ಪ್ರಜ್ಞೆಗಳು ಧರ್ಮಾಧರ್ಮದ ಪ್ರಶ್ನೆಯಾಗಿ ರಾಮನಿಗೆ ಉಧ್ಭವಿಸುತ್ತವೆ. ಇದನ್ನು ಅರಿತ ರಾಮ, ಬ್ರಾಹ್ಮಣನಿಗೆ ತಮ್ಮ ಮೇಲು ಕೀಳುಗಳ ಅಹಮಿಕೆಯ ಅರಿವೆಯನ್ನು ಮನವರಿಕೆಯಾಗುವಂತೆ ಮಾಡುತ್ತಾನೆ. ಇಲ್ಲಿ ಬ್ರಾಹ್ಮಣ ಮತ್ತು ಶಂಬೂಕ ಇಬ್ಬರ ಘನತೆ, ಧರ್ಮದ ಔನತ್ಯ ಮಾತು ಶ್ರೀ ರಾಮನ ಮಹೋನ್ನತ ವ್ಯಕ್ತಿತ್ವ ಏಕಕಾಲಕ್ಕೆ ಅನಾವರಣವಾಗುವಂತೆ ಕುವೆಂಪುರವರು ವ್ಯಾಖ್ಯಾನಿಸುವ ರೀತಿಯಲ್ಲಿ ಅವರ ವೈಚಾರಿಕತೆ ಹೊಮ್ಮುತ್ತದೆ.



ಶೂದ್ರ ತಪಸ್ವಿ ನಾಟಕ
ಯೂಟ್ಯೂಬ್ ಲಿಂಕ್ ಗಳು
ಮೂಲನಾಟಕದ ಕೃತಿಭಾಷೆಯಲ್ಲಿ
https://youtu.be/uzUH8HH_974


BEL ಸಾಹಿತ್ಯ ಕೂಟ ಅಭಿನಯಿಸಿದ ಸರಳಗನ್ನಡದಲ್ಲಿ
ಒಟ್ಟು ಐದು ಭಾಗಗಳು
ಭಾಗ ೧

https://youtu.be/wArgbW3GVkk

ಭಾಗ ೨
https://youtu.be/N-WZSmb--Iw

ಭಾಗ ೩
https://youtu.be/aGO9ZwJGkI4

ಭಾಗ ೪
https://youtu.be/XDu4UFroN2U


ಈ ಲಿಂಕ್ ಗಳನ್ನು ಆಯ್ಕೆಮಾಡಿಕೊಂಡು ಯೂಟ್ಯೂಬ್ ನಲ್ಲಿ ನೋಡಬಹುದು.

ಈ ಎಲ್ಲಾ ಮಾಹಿತಿಯನ್ನು ಅಧ್ಯಯನ ದೃಷ್ಟಿಯಿಂದ ಗೂಗಲ್ ಮೂಲಕ ವಿಕಿಪೀಡಿಯ ಸಹಾಯದಿಂದ ಸಂಗ್ರಹಿಸಲಾಗಿದೆ

ಧನ್ಯವಾದಗಳು
Posted by ಡಾ. ರವಿಶಂಕರ್ ಎ.ಕೆ. ಅಂಕುರ on ಜನವರಿ 15, 2020 ಕಾಮೆಂಟ್‌ಗಳಿಲ್ಲ:
ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!X ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ
ಡಾ. ರವಿಶಂಕರ್ ಎ.ಕೆ. ಅಂಕುರ
ಸಹೃದಯ ಓದು ಮತ್ತು ಬರಹದಲ್ಲಿ ಜೀವನ ಪ್ರೀತಿ ಕಾಣುವೆ
ನವೀನ ಪೋಸ್ಟ್‌ಗಳು ಹಳೆಯ ಪೋಸ್ಟ್‌ಗಳು ಮುಖಪುಟ
ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ: ಕಾಮೆಂಟ್‌ಗಳು (Atom)

ಬರಹವೆಂಬ ಬೆವರು...

ನನ್ನ ಫೋಟೋ
ಡಾ. ರವಿಶಂಕರ್ ಎ.ಕೆ. ಅಂಕುರ
ಸಹೃದಯ ಓದು ಮತ್ತು ಬರಹದಲ್ಲಿ ಜೀವನ ಪ್ರೀತಿ ಕಾಣುವೆ
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ

ಬ್ಲಾಗ್ ಆರ್ಕೈವ್

  • ಸೆಪ್ಟೆಂ 30 (3)
  • ಅಕ್ಟೋ 03 (2)
  • ಜನ 15 (2)
  • ಜೂನ್ 21 (1)
  • ಜುಲೈ 17 (1)
  • ಜುಲೈ 18 (1)
  • ಜುಲೈ 20 (1)
  • ಜುಲೈ 22 (1)
  • ಜುಲೈ 24 (1)
  • ಜುಲೈ 26 (1)
  • ಜುಲೈ 31 (1)
  • ಆಗ 06 (1)
  • ಆಗ 13 (2)
  • ಆಗ 20 (1)
  • ಆಗ 27 (1)
  • ಅಕ್ಟೋ 09 (1)
  • ಆಗ 24 (1)
  • ಸೆಪ್ಟೆಂ 02 (2)
  • ಡಿಸೆಂ 25 (1)
  • ಜನ 14 (1)
  • ಫೆಬ್ರ 12 (1)
  • ಮೇ 15 (1)
  • ಜೂನ್ 26 (1)
  • ಜುಲೈ 31 (1)
  • ಆಗ 08 (1)
  • ಆಗ 12 (1)
  • ಆಗ 16 (1)
  • ಆಗ 23 (3)
  • ಜನ 15 (1)
  • ಜನ 19 (1)
  • ಜನ 22 (1)
  • ಫೆಬ್ರ 08 (1)
  • ಫೆಬ್ರ 22 (1)
  • ಏಪ್ರಿ 05 (1)
  • ಏಪ್ರಿ 08 (1)
  • ಮೇ 25 (1)
  • ಜೂನ್ 13 (1)
  • ಜೂನ್ 15 (1)
  • ಜೂನ್ 19 (2)
  • ಜೂನ್ 29 (1)
  • ಜುಲೈ 04 (1)
  • ಆಗ 11 (2)
  • ಆಗ 14 (1)
  • ಆಗ 20 (1)
  • ಅಕ್ಟೋ 13 (1)
  • ಅಕ್ಟೋ 27 (1)
  • ಫೆಬ್ರ 26 (1)
  • ಮಾರ್ಚ್ 21 (1)
  • ಮೇ 17 (1)
  • ಮೇ 24 (1)
  • ಅಕ್ಟೋ 14 (1)
  • ಜನ 26 (1)
  • ಮೇ 31 (1)
  • ಜೂನ್ 01 (1)
  • ಜುಲೈ 02 (1)
  • ಜುಲೈ 04 (1)
  • ಜುಲೈ 17 (1)
  • ಅಕ್ಟೋ 02 (1)
  • ಅಕ್ಟೋ 25 (1)
  • ಅಕ್ಟೋ 26 (1)
  • ಮೇ 08 (1)
  • ಮೇ 09 (1)
  • ಮೇ 10 (1)
  • ಮೇ 11 (1)
  • ಮೇ 18 (7)
  • ಮೇ 20 (2)
  • ಮೇ 22 (2)
  • ಜೂನ್ 02 (15)
  • ಜೂನ್ 03 (2)
  • ಜೂನ್ 05 (3)
  • ಜೂನ್ 07 (3)
  • ಜೂನ್ 12 (8)
  • ಜೂನ್ 17 (14)
  • ಜೂನ್ 18 (1)
  • ಅಕ್ಟೋ 12 (2)
  • ಅಕ್ಟೋ 13 (1)
  • ಅಕ್ಟೋ 14 (1)
  • ಅಕ್ಟೋ 15 (1)
  • ಅಕ್ಟೋ 16 (1)
  • ಅಕ್ಟೋ 21 (1)
  • ಅಕ್ಟೋ 24 (1)
  • ಡಿಸೆಂ 18 (1)
  • ಏಪ್ರಿ 12 (1)
  • ಮೇ 10 (1)
  • ಜೂನ್ 17 (2)
  • ಅಕ್ಟೋ 14 (1)
  • ಜನ 25 (1)

ಸಾಹಿತ್ಯ ಕಾರ್ಯ

  • ಇರುವ ಭಾಗ್ಯವ ನೆನೆದು
  • ಬೇಂದ್ರೆ
  • ಬೇರು ತೇರು
  • ಮೆಚ್ಚುವ ಕಾರ್ಯವಿದು
  • ಮೆಟ್ರೋ ಕಥನ

ನಿಂದನೆ ವರದಿ ಮಾಡಿ

ಲೇಬಲ್‌ಗಳು

  • ಇರುವ ಭಾಗ್ಯವ ನೆನೆದು
  • ಬೇಂದ್ರೆ
  • ಬೇರು ತೇರು
  • ಮೆಚ್ಚುವ ಕಾರ್ಯವಿದು
  • ಮೆಟ್ರೋ ಕಥನ

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

  • ಮುಖಪುಟ

ಆಧ್ಯಾತ್ಮದೊಂದಿಗೆ ಗಣರಾಜ್ಯದ ಚಿಂತನೆಗಳು

ಜೀವನ ಪ್ರೀತಿ

ಸಾಹಿತ್ಯವು ಜೀವನದ ಸಂಸ್ಕೃತಿ

ಪ್ರಚಲಿತ ಪೋಸ್ಟ್‌ಗಳು

  • ವಚನಗಳ ನಿರ್ವಚನ
    ವಚನಗಳ ನಿರ್ವಚನ     ದಾಸಿಮಯ್ಯ ಎಂಬುದು ಶ್ರದ್ಧೆ, ಭಕ್ತಿ, ಸೂಕ್ಷ್ಮತೆಯ ಸಂಕೇತ. ವಚನ ಸಾಹಿತ್ಯದಲ್ಲಿ ಅತ್ಯಂತ ಸರಳವಾಗಿ ವಚನಗಳನ್ನು ತಿಳಿಸಿ ಸಮಾಜದ ಆರೋಗ್ಯಕ್ಕಾಗ...
  • 'ಪಂಚಗವ್ಯ' ಎಂಬ ಹೊಸ ರಂಗನಾಟಕ ಪ್ರಯೋಗ...
      ಪಂಚಗವ್ಯ ಎಂಬ ಹೊಸ ರಂಗನಾಟಕ  ಪ್ರಯೋಗ...    ಪುರಾಣದೊಳಗೆ ಪ್ರವೇಶ ಮಾಡುವ ಪಂಚಗವ್ಯ ನಾಟಕವು ವಿಭಿನ್ನ ಮನೋಭಿತ್ತಿಯ ಪ್ರಯೋಗ. ಅಧ್ಯಯನ, ಪ್ರಯೋಗಗಳ ಮೂಲಕ ಇದುವರೆಗೂ ಹಲವ...
  • ವಿಹಾರಿಕಾ ಎಂಬ ಪ್ರವಾಸ ಪರಿಧಿ
      ವಿಹಾರಿಕಾ ಎಂಬ ಪ್ರವಾಸ ಪರಿಧಿ ಏನು ಸವಿಯೊ ಅದನೆ ಕುಡಿ ನಿನ್ನ ರುಚಿಯ ಹದವ ಹಿಡಿ ನನ್ನನೇನು ಕೇಳುವೆ,  ಆದರೂನು ಹೇಳುವೆ -ದ.ರಾ ಬೇಂದ್ರೆ ಪ್ರವಾಸವು ಮನುಷ್ಯನ ಉಗಮದಿಂದಲ...

ಕ್ಲಿಕ್ ಮಾಡಿ ಜೀವನ ಪ್ರೀತಿಯ ಬರಹಗಳನ್ನು ತಕ್ಷಣ ಪಡೆಯಿರಿ.

ಪೋಸ್ಟ್‌ಗಳು
Atom
ಪೋಸ್ಟ್‌ಗಳು
ಕಾಮೆಂಟ್‌ಗಳು
Atom
ಕಾಮೆಂಟ್‌ಗಳು
ಆಸಮ್‌‌ ಇಂಕ್‌. ಥೀಮ್. molotovcoketail ಅವರಿಂದ ಥೀಮ್ ಚಿತ್ರಗಳು. Blogger ನಿಂದ ಸಾಮರ್ಥ್ಯಹೊಂದಿದೆ.