ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಫೆಬ್ರವರಿ 26, 2021

ಪ್ರೇಮ ಉಪಜ್ಞೆ!

 ಪ್ರೇಮ ಉಪಜ್ಞೆ!



ಮಣ್ಣಿನ ಹಸಿ ವಾಸನೆಯಲ್ಲಿ

ನಿನ್ನ ಮನಸನ್ನು ಹರಡಿದ್ದೇನೆ

ಸ್ವಚ್ಛವಾದ ಹಳತಂತೆ ಕಳೆಯಲಿ

ನೆನ್ನೆಯ ಎಲ್ಲಾ ಮೈಲಿಗೆಯು


ಪ್ರೇಮವನ್ನು ಬಸಿದು ಈ ಮಣ್ಣಲಿ

ಮೆಚ್ಚಿನ ಗೊಂಬೆಯನು ಮಾಡು

ಆಕಾರವು, ಅಲಂಕಾರವು ಹೇಗೆ ಇರಲಿ

ನೋಟಗಳ ಕೋಣೆಯಲಿ ಬೆಳಕಾಗಲಿ


ಬಂದೇ ಬರುತ್ತೇನೆ, ಹಚ್ಚಿ ಬಿಡು ಬೆಳಕು

ಕಥೆಗಳೆಲ್ಲವೂ ಸಾವಿಗೆ ಬರುವುದಿಲ್ಲ

ಸೃಷ್ಟಿಯ ಪಥದಲ್ಲಿ ಒಂದಿಷ್ಟು ಕಾಲ

ವಿಹರಿಸೋಣ ವಿರಹಗಳ ಮರೆತು


ನೀನೂ ನಾನು ಅವಳೂ ಅವನೂ 

ಸರಳ ರೇಖೆಯ ಸುಖಗಳು

ರೆಕ್ಕೆಗಳು ಮೂಡಲಿ ಸುಕ್ಕುಗಳ ಕಳಚಿ

ಇದು ಪ್ರಕೃತಿಯ ಪ್ರೇಮ ಉಪಜ್ಞೆ!


-ಅಂಕುರ (ಫೆಬ್ರವರಿ ೨೬)

ಮಂಗಳವಾರ, ಅಕ್ಟೋಬರ್ 27, 2020

ಮನೆಗೆ ಬಂದರು ಮೇಷ್ಟ್ರು

 ಮನೆಗೆ ಬಂದರು ಮೇಷ್ಟ್ರು










ಬಿಳಿಕಚ್ಚೆಯ ಕರಿಕೋಟಿನ

ಶಾಸ್ತ್ರಿ, ಭಟ್ಟರೆಲ್ಲರೂ

ಸವಿಯನುಂಡು, ಕಿವಿಯನಿಂಡಿ

ಎಲೆ ಅಡಕೆ ಮುಡಿ ಮಲ್ಲಿಗೆಯ

ಮನೆಗೆ ಮೇಷ್ಟ್ರು ಇದ್ದರು.


ಉಳ್ಳವರ ಒಲೆಯಲ್ಲಿ

ಭೋಜನ-ಭಾಜನದ ವೇಳೆಯಲ್ಲಿ

ಜಾತಿ-ಧರ್ಮವಿಲ್ಲವೆಂದು

ಸಮಾನತೆಯ ನುಡಿದರು

ಶಾಸ್ತ್ರ, ಕಥೆ, ಕಾವ್ಯಗಳ ಬರೆದರು


ದುಡಿವ ಜನಕೆಲ್ಲಿ ಗುಡಿಯ ಚಿಂತೆ

ದುಡಿಯ ಬಡಿದಂತೆ ದುಡಿದರು

ಎಲ್ಲದಕ್ಕೂ ಹಲ್ಲು ಕಿರಿದರು

ತಲೆಮಾರುಗಳ ತಲೆ ತೂಗಿ

ಹೊಸ ವೇಷಗಳ ತೊಟ್ಟರು


ಅವರು ಬಂದರು ಜೊತೆಗೆ ತಂದರು

ಮೇಷ್ಟ್ರು ಶಾಲೆಗೆ ಎಂದರು

ಪಾಠ ಬಂದಿತು ಬೀದಿಗೆ

ಕಲಿವ ಮಕ್ಕಳು ಕಿಟಕಿ ಗಾಳಿಯ ಕಲಿತು

ಕಿಟಕಿಗಾಗಿಯೇ ದುಡಿಯುತ

ಮನೆಗೆ ಕಿಟಕಿಯಾದರು


ಊರ ಸಂತೆಯ, ಗದ್ದೆ ತೊಗರಿಯ

ಗಾಳ-ದಾಳದ, ಹಾಳು ಬಾವಿಯ

ಚೋಳು  ಚಂದಿರ, ಗೋಳು ಮಂದಿರ

ಕುಣಿವ ಕೈಗಳು ನಿಂತವು

ಹಾಡು, ಕಥೆಗಳು ದನಿಯ ಮರೆತವು


ಯಂತ್ರ ಬಂದಿತು, ಬೆವರು ನಿಂತಿತು

ತಂತ್ರದೊಳಗಿದೆ ತತ್ತ್ವವು

ತನ್ನ ಸುಖವನು ಮರೆತ ಕಲಿಕೆಯು

ಪರರ ಸುಖಕೆ ಮೈಚಾಚಿತು

ಹಗಲು ರಾತ್ರಿ ಎನ್ನದೆ ಹೊಟ್ಟೆ ಬಿರಿಯೆ ಬಾಚಿತು


ಎಲ್ಲಾ ಹೋಯಿತು, ಇಲ್ಲೇ ಹಾಯಿತು

ಮೌಲ್ಯ ಮಾರಿದೆ ಮನವನು

ತಾನು ತತ್ತ್ವ, ನೀನು ಸತ್ತ್ವ

ಹೇಳಲೋಸುಗ ಬಾಳು ಮರೆತು

ಮನೆಗೆ ಬಂದರು ಮೇಷ್ಟ್ರು

ಇದೋ...

ನಿರ್ಜೀವ ನಾಕದಿ ಸಜೀವ ಲೋಕ ಎಂದರು.


- ಅಂಕುರ

ಮಂಗಳವಾರ, ಅಕ್ಟೋಬರ್ 13, 2020

ಸಂಶೋಧನೆ ಎಂಬ ಹೊಸ ಅನುಭವಗಳ ಓದು...

ಸಂಶೋಧನೆ ಎಂಬ ಹೊಸ ಅನುಭವಗಳ ಓದು...

    ಕನ್ನಡ ಸಾಹಿತ್ಯ ಅಧ್ಯಯನಕಾರನಾದ ನನಗೆ ಸಂಶೋಧನೆ ಎಂಬುದು ಈಗ ಅರ್ಥವಾಗುತ್ತಿದೆ. ಬರಹದ ಕಲೆಗೆ ಪ್ರವೇಶ ದೊರೆಯುತ್ತಿದೆ. ಪಿಎಚ್.ಡಿ ಎಂಬುದು ಅಧ್ಯಯನದ ಫಲಿತವನ್ನು ಒಂದು ನಿರ್ದಿಷ್ಠ ವಿಷಯದ ಮೇಲೆ ಮಂಡಿಸುವ ಅಧ್ಯಯನವಾಗಲಿ, ಆಯಸ್ಸಾಗಲಿ ನಮಗೆ ಲಭ್ಯವಾಗುವ ವೇಳೆಗೆ ನಮ್ಮ ಅಕಾಡೆಮಿಕ್ ಪಿಎಚ್.ಡಿ ಮುಗಿಯಿತು.

          ನನ್ನ ತಂದೆ, ತಾಯಿ ಹಾಗೂ ಅಣ್ಣ ನನ್ನ ಓದುವಿಗಾಗಿ ಜಗತ್ತಿಗೆ ಪರಿಚಯಿಸಿದರು. ಗುಬ್ಬಿ, ತುಮಕೂರುಗಳಲ್ಲಿ ಓದನ್ನು ಮುಗಿಸಿ, 2011ರಲ್ಲಿ ಕೋಲಾರದ ಬಾಲಕರ ಕಾಲೇಜಿನಲ್ಲಿ ಓದುತ್ತಿದ್ದೆ. ನನ್ನ ಗುರುಗಳಾದ ಡಾ. ಗೋವಿಂದರಾಯರ ಸಂಶೋಧನಾ ಕಾರ್ಯವನ್ನು ಅವರ ಮಾರ್ಗದರ್ಶಕರಾದ ನೆನಪಲ್ಲಿ ಸೇರಿ ಹೋದ ವಿ. ನಾಗರಾಜ್ ಮೇಷ್ಟ್ರ ಬಳಿ ಸುಳಿದಾಡಿದ ದಿನಗಳಲ್ಲಿ ಗಮನಿಸುತ್ತಿದ್ದ ನನಗೆ ಸಂಶೋಧನಾ ಆಸಕ್ತಿ ಮೂಡಿತು. ಬೇಂದ್ರೆ ಕೃಷ್ಣಪ್ಪನವರು ಎಂ.ಎ ಓದುವ ಹಂತಕ್ಕೆ ಸ್ಪರ್ಧೆಯ ನೆಪದಲ್ಲಿ ‘ಬೇಂದ್ರೆ ಸಾಹಿತ್ಯ’ ಓದುವಿನ ಕುತೂಹಲ ಸೃಷ್ಠಿದರು. ಈ ಕುತೂಹಲದಲ್ಲಿ ನನ್ನ ಅಧ್ಯಯನ ಗಮನಿಸಿದ ಡಾ. ಪಿ ಸಂಗೀತ ಮೇಡಂ ಅವರು ಸಂಶೋಧನೆ ಮಾಡಲು ಪ್ರೇರಣೆ ನೀಡಿದರು. 2012-13ರ ಸಮಯದಲ್ಲಿ ಕೆಲವೇ ವಿದ್ವಾಂಸರು ಮಾತ್ರ ಬೇಂದ್ರೆ ಸಾಹಿತ್ಯ ಕುರಿತು ಮಾತನಾಡುತ್ತಿದ್ದರು. ಡಾ. ಜಿ. ಕೃಷ್ಣಪ್ಪ ಅವರು ಅಭಿಮಾನದ ಬೇಂದ್ರೆಯಾಗಿ ಸಾಹಿತ್ಯ ಪರಿಚಾರಿಕೆಯನ್ನು ಕರ್ನಾಟಕದಾದ್ಯಂತ ಪಸರಿಸುತ್ತಿದ್ದರೆ, ಡಾ ಕೆ.ಸಿ ಶಿವಾರೆಡ್ಡಿ ಅವರು ಬೇಂದ್ರೆ-ಕುವೆಂಪು ಅವರ ಸಾಹಿತ್ಯ ತಾತ್ವಿಕತೆಯನ್ನು ಗಂಭೀರವಾಗಿ ಚರ್ಚಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಬೇಂದ್ರೆ ಕುರಿತ ನನ್ನ ಅಧ್ಯಯನದ ಆಸಕ್ತಿಗೆ ಡಾ. ಕೆ.ಸಿ ಶಿವಾರೆಡ್ಡಿ  ಅವರನ್ನು ಮಾರ್ಗದರ್ಶಕರಾಗಿ ಆಯ್ಕೆಮಾಡಿಕೊಂಡೆನು. ಲೀಲೆ ಎಂಬಂತೆ ಕನ್ನಡ ವಿಶ್ವವಿದ್ಯಾಲಯದ ಸಂಯೋಜಿತ ಕೇಂದ್ರ ‘ಕುವೆಂಪು ಕನ್ನಡ ಅಧ್ಯಯನ ಕೇಂದ್ರ’ ಕುಪ್ಪಳಿಯ ಆಂತರಿಕ ವಿದ್ಯಾರ್ಥಿಯಾಗಿ ಆಯ್ಕೆಯಾದೆನು. ಪ್ರಯಾಣ  ಕುಪ್ಪಳಿಯ ಕಡೆಗೆ ಸಾಗಿತು.

          ಕುಪ್ಪಳಿಯಲ್ಲಿನ ಬದುಕು ನನ್ನ ಜೀವನದ ಪ್ರಮುಖ ಅಧ್ಯಾಯ. ಅಲ್ಲಿನ ಏಕಾಂತ ಬದುಕು, ಹೋಟೆಲ್ ಆಹಾರ, ಸರೋಜಮ್ಮ ಅವರ ಮಾತೃ ಸೇವೆ, ಹಿರೇಕೊಡಿಗೆಯ ನಿವಾಸ, ವಾಜ್ಹಿ ನೋರೋನ್ನ ಅವರ ಚಿಂತನೆ ಎಲ್ಲವೂ ನನಗೆ ಸಾಕಷ್ಟು ಅನುಭವಗಳ ಮೂಲಕ ಮಲೆನಾಡನ್ನು ಪರಿಚಯಿಸಿತು. ಇದೇ ಸಂದರ್ಭದಲ್ಲಿ ಪ್ರಾಧ್ಯಾಪಕರ ಹುದ್ದೆ ಕುರಿತ ನನ್ನ ಅಧ್ಯಯನದಲ್ಲಿ ಆತ್ಮೀಯ ಪ್ರವೀಣ್ ಕುಮಾರ್ ಹಾಗೂ ರತ್ನಾಕರ ಸಿ ಎಂಬ ಇಬ್ಬರ ಸ್ನೇಹ ದೊರೆಯಿತು. ಬರೀ ಸ್ನೇಹವಲ್ಲ, ನನ್ನ ಎಲ್ಲಾ ಬಲವೂ ಆದರು. ಪಿಎಚ್ ಡಿ ಯಲ್ಲಿ ಜೊತೆಯಾದ ಅಕ್ಕರೆಯ ಅರುಣಕುಮಾರಿ ಮೇಡಂ ಹಾಗೂ ಮೃಣಾಲಿನಿ ಮೇಡಂ ಇವರು ನೀಡಿದ ಅಧ್ಯಯನದ ಆತ್ಮೀಯತೆ, ಧೈರ್ಯ ಹೇಗೆ ಮರೆಯಲಿ. ಇವರ ಹಿಂದಿನ ಶಕ್ತಿಗಳಾದ ರವಿನಂದನ ಸರ್ ಹಾಗೂ ಮಹದೇವಯ್ಯ ಸರ್ ಅವರ ಪ್ರೀತಿಯೂ ಒಂದೊಂದು ಅತಿಮಧುರ.

          ಹಸಿವಿನ ಚಿಂತೆಯಲ್ಲಿ ಕುಪ್ಪಳಿಯಿಂದ ಕರಾವಳಿಗೆ ಹೋದೆ, ಆಳ್ವಾಸ್ ನಲ್ಲಿ ಮೇಷ್ಟ್ರಾದೆ. ಇಲ್ಲೆಲ್ಲಾ ಪಿಎಚ್.ಡಿ ಎಂಬುದು ಬಹು ದೊಡ್ಡ ಜವಾಬ್ದಾರಿಯಾಗಿ ಕಾಡುತ್ತಿತ್ತು. ಗುರುಗಳಾದ ಗೋವಿಂದರಾಯರು ಹಾಗೂ ಜಿ ಕೃಷ್ಣಪ್ಪನವರು ನನ್ನ ಕುಟುಂಬವಾಗಿ ನಿತ್ಯ ಎಚ್ಚರಿಸುತ್ತಿದ್ದರು. ಅಂತೂ ವಿಶ್ವವಿದ್ಯಾಲಯ ನಿಯಮಕ್ಕೆ ಅನುಗುಣವಾಗಿ ಅಧ್ಯಯನಮಾಡುತ್ತಾ ಬಂದೆ. ಕರಾವಳಿಯಿಂದ ಬೆಂಗಳೂರು ಬಂದು ಉದ್ಯೋಗ ಬಿಟ್ಟು  ಪ್ರಬಂಧ ಬರೆಹವನ್ನು ಮುಗಿಸುವ ವೇಳೆಗೆ ನೆರಳಾಗಿ ನಿಂತವರು ಆತ್ಮೀಯ ಅನಿತ ಅಕ್ಕ ಅವರು ಹಾಗೂ ಅವರ ಕುಟುಂಬ. ಒಟ್ಟಾರೆ ಅಧ್ಯಯನವೆಂಬುದು ಒಂದು ಪ್ರಯಾಣ ಎಂದು ತಿಳಿಯಿತು. ಇಷ್ಟೆಲ್ಲಾ ಆತ್ಮೀಯರು ಎಲ್ಲರ ಅಧ್ಯಯನದಲ್ಲೂ ಒಂದೊಂದು ಶಕ್ತಿಯಾಗುತ್ತಾರೆ ಎಂದು ಸದಾ ಬಯಸುತ್ತೇನೆ. ಕನ್ನಡ ವಿಶ್ವವಿದ್ಯಾಲಯ ಸೆಪ್ಟಂಬರ್ 08ರಂದು ನನಗೆ ಮೌಖಿಕ ಪರೀಕ್ಷೆ ಏರ್ಪಡಿಸಿ, ಅಧಿಸೂಚನೆ ಹೊರಡಿಸಿತು.

          ಇದರ ನಡುವೆ ಸಂಶೋಧನೆ ಎಂಬುದು ಒಬ್ಬ ಪ್ರಾಧ್ಯಾಪಕ ವೇದಿಕೆಯಲ್ಲಿ ಇದ್ದವರಿಗೆ ನಿತ್ಯ ಕಾರ್ಯವೆಂದು ನನ್ನ ಮಾರ್ಗದರ್ಶಕರಾದ ಕೆ.ಸಿ ಶಿವಾರೆಡ್ಡಿ ಅವರು, ರಹಮತ್ ತರೀಕೆರೆ ಅವರು ಹೇಳುತ್ತಲೇ ಅದೇ ದಾರಿಯಲ್ಲಿ ನಡೆಸಿದರು. ನನ್ನ ಕ್ರಿಸ್ತು ಜಯಂತಿ ಕಾಲೇಜು ನನಗೆ ನಿತ್ಯವೂ ಸಮಯ, ಸೂಕ್ತ ವ್ಯವಸ್ಥೆ ರೂಪಿಸಿರುವುದು ನಾ ಕಂಡ ಶ್ರೇಷ್ಠ ಶಿಕ್ಷಣ ಸಂಸ್ಥೆಯಲ್ಲೊಂದು. ಸಂಶೋಧಕರ ವೇದಿಕೆಯನ್ನು ರೂಪಿಸಿ ಜೊತೆಯಾದ ಗೆಳೆಯ ಕುಮಾರಸ್ವಾಮಿ ಬೆಜ್ಜಿಹಳ್ಳಿ  ಈ ವಿಚಾರದಲ್ಲಿ ಒಳ್ಳೆಯ ಆತ್ಮೀಯ.

          ನನ್ನ ಎಲ್ಲಾ ಸಂತೋಷವನ್ನು ನಿತ್ಯ ತಮ್ಮ ಸಂತೋಷವಾಗಿ ಬೆನ್ನು ತಟ್ಟುವ ಸಹೋದ್ಯೋಗಿ ಆತ್ಮೀಯರಾದ ಸರ್ವೇಶ್ ಬಂಟಹಳ್ಳಿ ಅವರು, ಚಂದ್ರಶೇಖರ್ ಅವರು, ಸೈಯದ್ ಮುಯಿನ್ ಅವರು. ಇವರಂತ ಆತ್ಮೀಯತೆ ಎಲ್ಲಾ ಅಧ್ಯಯನಕಾರರಿಗೂ ಉದ್ಯೋಗದಲ್ಲಿ ಸಿಗಬೇಕು.

           ನನ್ನ ಪಿಎಚ್ ಡಿ ಪರೀಕ್ಷೆ ಮುಗಿಯಿತು ಎಂಬ ವಿಚಾರ ತಿಳಿದ ಡಾ. ಜಿ ಕೃಷ್ಣಪ್ಪ ಅವರು ಅನಾರೋಗ್ಯದ ನಡುವೆಯೂ ನನಗೆ ಮತ್ತೊಂದು ಡಾಕ್ಟರೇಟ್ ದೊರೆಯಿತು ಎಂದು ಕುಟುಂಬ ಸಮೇತ ಖುಷಿ ಪಟ್ಟರು. ಈ ವಿಚಾರ ಪತ್ರಿಕೆಯಲ್ಲಿ ಬಂದಾಗ ನನ್ನ ವಿದ್ಯಾರ್ಥಿಗಳು, ಸ್ನೇಹಿತರು ಇದು ತಮಗೆ ದೊರೆತ ಗೌರವವೆಂದು ಆನಂದಿಸಿದರು. ಇದೆಲ್ಲವೂ ಅಧ್ಯಯನಕ್ಕಿರುವ ಶಕ್ತಿ ಹಾಗೂ ಸಾಧ್ಯತೆ.

          ಸಂಶೋಧನೆ ಎಂಬುದು ನನ್ನ ಪ್ರಕಾರ ಹೊಸ ಅಧ್ಯಯನ. ಅದೊಂದು ಅನುಭವದ ದಾರಿಯ ಸಹಪ್ರಯಾಣ. ಜೊತೆಯಲ್ಲಿ ಸದಾ ಸಾಗೋಣ ಬನ್ನಿ.





ಗುರುವಾರ, ಆಗಸ್ಟ್ 20, 2020

ಎಲ್. ಎಸ್ ಶೇಷಗಿರಿರಾವ್

 ಎಲ್. ಎಸ್ ಶೇಷಗಿರಿರಾವ್

ಕನ್ನಡ ಸಾಹಿತ್ಯಕ್ಕೆ ನೀಡಿದ ಅಮೂಲ್ಯ ಶಬ್ದಕೋಶ
ಕನ್ನಡ ಸಾಹಿತ್ಯಕ್ಕೆ ನೀಡಿದ ಅಮೂಲ್ಯ ಸಾಹಿತ್ಯ ಚರಿತ್ರೆ

 ಎಲ್. ಎಸ್ ಶೇಷಗಿರಿರಾವ್ ಅವರು

 ಎಲ್. ಎಸ್ ಶೇಷಗಿರಿರಾವ್ ಅವರ ಕುರಿತು ಮಾಹಿತಿ :

ವಿಕಿಪೀಡಿಯಾದಿಂದ ಪರಿಶೀಲಿತ ಮಾಹಿತಿ:

ಎಲ್.ಎಸ್.ಶೇಷಗಿರಿರಾವ್ (೧೯೨೫ ಫೆಬ್ರುವರಿ ೧೬ - ೨೦ ಡಿಸೆಂಬರ್ ೨೦೧೯) ಅವರು ಕನ್ನಡದ ಒಬ್ಬ ಹಿರಿಯ ಸಾಹಿತಿ, ವಿಮರ್ಶಕ ಮತ್ತು ನಿಘಂಟು ತಜ್ಞರು.

ಜೀವನ[ಬದಲಾಯಿಸಿ]

ಎಲ್.ಎಸ್.ಶೇಷಗಿರಿರಾವ್ ಅವರು ೧೯೨೫ ಫೆಬ್ರುವರಿ ೧೬ರಂದು ಬೆಂಗಳೂರಿನಲ್ಲಿ ಜನಿಸಿದರು. ಮೂಲತಃ ದೇಶಪಾಂಡೆ ಮನೆತನದವರಾದ ಇವರ ತಂದೆ, ಲಕ್ಷ್ಮೇಶ್ವರ ಸ್ವಾಮಿರಾಯರು. ಶೇಷಗಿರಿರಾಯರು, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಏ.(ಗೌರವ) ಪದವಿ ಪರೀಕ್ಷೆಯಲ್ಲಿ ಪ್ರಥಮ ತರಗತಿಯಲ್ಲಿ ಉತ್ತೀರ್ಣರಾದರು. ಎಚ್.ವಿ. ನಂಜುಂಡಯ್ಯ ಚಿನ್ನದ ಪದಕ ಪಡೆದ ಮೊದಲ ವಿದ್ಯಾರ್ಥಿ ಇವರು.ತದನಂತರ ಬೆಂಗಳೂರು ಇಂಟರಮೀಡಿಯೆಟ್ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾದರು.

ಸಾಹಿತ್ಯ ಸೇವೆ[ಬದಲಾಯಿಸಿ]

೧೯೪೮ರಲ್ಲಿ ಶೇಷಗಿರಿರಾವ್ ಅವರ ಮೊದಲ ಕಥಾಸಂಕಲನ “ ಇದು ಜೀವನ ” ಪ್ರಕಟವಾಯಿತು. ಕನ್ನಡ ಸಾರಸ್ವತಲೋಕದಲ್ಲಿ ತಮ್ಮದೆ ಒಂದು ಛಾಪನ್ನು ಸ್ಥಾಪಿಸಿರುವ ಎಲ್. ಎಸ್. ಎಸ್, ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಮಾಡಿರುವ ಕಾರ್ಯಗಳು ನಿಜಕ್ಕೂ ಶ್ಲಾಘನೀಯ. ನೂರಾರು ಚಿಕ್ಕ-ಪುಟ್ಟ ಹೊತ್ತಿಗೆಗಳನ್ನು ಅವರು ರಾಷ್ಶ್ಟೋತ್ಥಾನ ಪರಿಷತ್ ವತಿಯಿಂದ ಪ್ರಕಟಿಸಿದ್ದಾರೆ. ಇದು ಮಕ್ಕಳ ಜ್ಞಾನವರ್ಧನೆಗೆಂದು ಹಮ್ಮಿಕೊಂಡ ಕೆಲಸವಾಗಿತ್ತು. ಅದರ ಬೆಲೆ ಕೇವಲ, ೭೫ ಪೈಸೆಗಳು. ಈ ಪುಸ್ತಕಗಳು ಹಿರಿಯರಿಗೂ, ಅತ್ಯಂತ ಉಪಯುಕ್ತಮಾಹಿತಿಗಳನ್ನು ಕೊಟ್ಟಿವೆ. ತುಂಬಾ ಚೆನ್ನಾಗಿವೆ. ರಾಯರ ಸಂಪಾದನೆಯ ಚಟುವಟಿಕೆಯಲ್ಲಿ, ಬೆಂಗಳೂರು ದರ್ಶನ ಸಂಪುಟಗಳು, ಅತ್ಯಂತ ಉಪಯುಕ್ತಮಾಹಿತಿಗಳನ್ನು ಬೆಂಗಳೂರಿನ ಜನರಿಗೆ ಕೊಟ್ಟಿವೆ. ವಿಶ್ವಕೋಶದತರಹವೇ ಸಂಯೋಜಿಸಿರುವ ಈ ಬೃಹದ್ ಸಂಪುಟಗಳು, ಅತ್ಯಂತ ಶ್ರಮವಹಿಸಿ, ವಿದ್ವಾಂಸರಿಂದ ತಯಾರಿಸಲ್ಪಟ್ಟ ಮಾಹಿತಿಗಳು. ಪ್ರತಿಯೊಬ್ಬ ಬೆಂಗಳೂರಿನ ನಾಗರಿಕನ ಮನೆಯಲ್ಲೂ ಪಡಸಾಲೆಯ ಕಪಾಟಿನ ಶೋಭೆಯನ್ನು ವಿಜೃಂಭಿಸುವ ಕೃತಿಗಳಿವು.[೧]

ಪ್ರಮುಖ ಕೃತಿಗಳು[ಬದಲಾಯಿಸಿ]

ಸಣ್ಣಕಥೆಗಳ ಸಂಕಲನಗಳು[ಬದಲಾಯಿಸಿ]

ಅ) ಇದು ಜೀವನ. ಆ) ಜಂಗಮಜಾತ್ರೆಯಲ್ಲಿ. ಇ) ಮುಟ್ಟಿದ ಗುರಿ ಮತ್ತು ಇತರ ಕಥೆಗಳು. ಈ) ಮುಯ್ಯಿ.

ಸಾಹಿತ್ಯವಿಮರ್ಶೆ[ಬದಲಾಯಿಸಿ]

ಅ. ಕಾದಂಬರಿ-ಸಾಮಾನ್ಯಮನುಷ್ಯ. ಆ. ಆಲಿವರ್ ಗೋಲ್ಡ್ ಸ್ಮಿತ್, ಇ. ಮಾಸ್ತಿ ವೆಂಕಟೇಶ ಐಯ್ಯಂಗಾರ್. ಈ. ಇಂಗ್ಲೀಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ.

ವಿಮರ್ಶೆ[ಬದಲಾಯಿಸಿ]

  • ಅ) ಪಾಶ್ಚಾತ್ಯಸಾಹಿತ್ಯ ವಿಹಾರ.
  • ಆ) ಸಾಹಿತ್ಯ ವಿಶ್ಲೇಷಣೆ.
  • ಇ) ಹೊಸಗನ್ನಡ ಸಾಹಿತ್ಯ .
  • ಈ) ಫ್ರಾನ್ಸ್ ಕಾಫ್ಕಾ,
  • ಉ) ಗ್ರೀಕ್ ರಂಗಭೂಮಿ ಮತ್ತು ನಾಟಕ.
  • ಊ) ವಿಲಿಯಮ್ ಶೇಕ್ಸ್ ಪಿಯರ್,
  • ಋ) ಸಾಹಿತ್ಯ-ಬದುಕು,
  • ೠ) ಟಿ. ಪಿ. ಕೈಲಾಸಂ,
  • ಏ). ಪಾಶ್ಚಾತ್ಯ ಮತ್ತು ಭಾರತೀಯಮಹಾಕಾವ್ಯ ಪರಂಪರೆಗಳ ಮನೋಧರ್ಮ,
  • ಏ). ಮಾಸ್ತಿ : ಜೀವನ ಮತ್ತು ಸಾಹಿತ್ಯ,
  • ಐ). ಇಂಗ್ಲೀಷ್ ಸಾಹಿತ್ಯ ಚರಿತ್ರೆ,
  • ಒ). ಸಾಹಿತ್ಯದ ಕನ್ನಡಿಯಲ್ಲಿ,
  • ಓ). ಪಾಶ್ಚಾತ್ಯಸಾಹಿತ್ಯಲೋಕದಲ್ಲಿ,
  • ಔ). ಎಲ್. ಎಸ್. ಎಸ್. ಕಂಡ ತ. ರಾ. ಸು.
  • ಅಂ.) ಮಹಾಭಾರತ( ನಾಲ್ಕು ಸಂಪುಟಗಳು).

ನಾಟಕಗಳು[ಬದಲಾಯಿಸಿ]

ಅ) ಆಕಾಂಕ್ಷೆ ಮತ್ತು ಆಸ್ತಿ. ಆ) ಜೀವನ ಚರಿತ್ರೆ ಇ) ಸಾರ್ಥಕ ಸುಬೋಧ, ಈ) ಎಂ. ವಿಶ್ವೇಶ್ವರಯ್ಯ,

ನಿಘಂಟುಗಳು[ಬದಲಾಯಿಸಿ]

  • ಅ) ಐ.ಬಿ.ಎಚ್. ಕನ್ನಡ- ಕನ್ನಡ-ಇಂಗ್ಲೀಷ್ ನಿಘಂಟು,
  • ಆ). ಐ.ಬಿ.ಎಚ್ ಇಂಗ್ಲೀಷ್-ಕನ್ನಡ ನಿಘಂಟು,
  • ಇ). ಐ. ಬಿ. ಎಚ್ ಕನ್ನಡ -ಕನ್ನಡ ನಿಘಂಟು,
  • ಈ) ಸುಭಾಸ್ ಇಂಗ್ಲೀಷ್-ಇಂಗ್ಲೀಷ್-ಕನ್ನಡ ನಿಘಂಟು,
  • ಉ) ಸುಭಾಶ್ ವಿದ್ಯಾರ್ಥಿ ಮಿತ್ರ ಇಂಗ್ಲೀಷ್-ಕನ್ನಡ್ ನಿಘಂಟು,
  • ಊ) ಸುಲಭ ಇಂಗ್ಲೀಷ್ ( ಏನ್ಗ್ಲಿಶ್ ಮದೆ ಎಅಸ್ಯ್.)

ಇತರೆ[ಬದಲಾಯಿಸಿ]

  • ಅ) ಮಕ್ಕಳ ಸಾಹಿತ್ಯ- ೯ ಕೃತಿಗಳು,
  • ಆ) ಮಕ್ಕಳಿಗಾಗಿ-೪ ಕೃತಿಗಳು.
  • ಇ) ಇತರ-೯
  • ಈ) ಅನುವಾದಿತ-೪,
  • ಉ) ಸಂಪಾದಿತ-೯ ಕೃತಿಗಳು ಹಾಗೂ
  • ಊ) ಇಂಗ್ಲೀಷ್ ನಲ್ಲಿ -ಮೂಲ ಅನುವಾದಿತ-ಸಂಪಾದಿತ- ೩೧ ಕೃತಿಗಳು.[೨]

ಪ್ರಶಸ್ತಿ, ಪುರಸ್ಕಾರಗಳು[ಬದಲಾಯಿಸಿ]

  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
  • ಸಾಹಿತ್ಯಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ.
  • ವರ್ಧಮಾನ ಪ್ರಶಸ್ತಿ.
  • ಡಾ. ಅ.ನ.ಕೃ. ಪ್ರಶಸ್ತಿ.
  • ಬಿ.ಎಮ್.ಶ್ರೀ ಪ್ರಶಸ್ತಿ.
  • ಬಿ.ಎಮ್.ಇನಾಮದಾರ ಪ್ರಶಸ್ತಿ.
  • ಕಾವ್ಯಾನಂದ ಪ್ರಶಸ್ತಿ.
  • ದೇವರಾಜ ಬಹಾದ್ದೂರ ಪ್ರಶಸ್ತಿ.
  • ಮಾಸ್ತಿ ಪ್ರಶಸ್ತಿ.
  • ೨೦೦೭ ರ ಕರ್ನಾಟಕ ಸಾಹಿತ್ಯ ಸಮ್ಮೆಲನದ ಅದ್ಯಕ್ಶರಾಗಿದ್ದರು (ಉಡುಪಿ)

ನಿಧನ[ಬದಲಾಯಿಸಿ]

೨೦ಡಿಸೆಂಬರ್೨೦೧೯ರಂದು ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು[೩][೪] 

ಶುಕ್ರವಾರ, ಆಗಸ್ಟ್ 14, 2020

ಡಾ. ರಾಜೇಂದ್ರ ಎಸ್. ಗಡಾದ



ಡಾ. ರಾಜೇಂದ್ರ ಎಸ್. ಗಡಾದ

'ವಿಸ್ಮಯ ವಿಜ್ಞಾನ' ಎಂಬ ವೈದ್ಯಕೀಯ ಲೇಖನಗಳ ಮೂಲಕ ಪ್ರಸಿದ್ಧರಾಗಿರುವ ಡಾ. ರಾಜೇಂದ್ರ ಎಸ್. ಗಡಾದ ಅವರು ಗದಗದಲ್ಲಿ ವಾಸವಾಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಇವರಿಗೆ ಎಳವೆಯಿಂದಲೂ ವಿಜ್ಞಾನ ಸಾಹಿತ್ಯದಲ್ಲಿ ಅಪರಿಮಿತವಾದ , ಆಸಕ್ತಿ, ಇಂದಿನ ವೈಯಕ್ತಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಾಗೂ

ಸಾಂಸ್ಕತಿಕ ನಿರ್ವಹಣೆಗೆ ನಾವು ತಿಳಿದಿರಲೇಬೇಕಾದ ಜ್ಞಾನವೇ ಜನಪ್ರಿಯ ವಿಜ್ಞಾನವೆಂಬ ತಿಳಿವಳಿಕೆಯಿಂದ ಬರೆಯುತ್ತಿರುವ ವಿಜ್ಞಾನ ಲೇಖಕರಲ್ಲಿ ರಾಜೇಂದ್ರ ಅವರದು ಪ್ರಮುಖ ಹೆಸರು. ನಾಡಿನ ಅನೇಕ ಜನಪ್ರಿಯ ದಿನಪತ್ರಿಕೆಗಳಲ್ಲಿ, ವಾರಪತ್ರಿಕೆಗಳಲ್ಲಿ ಮತ್ತು ಆಕಾಶವಾಣಿಗಳಲ್ಲಿ ಇವರ ವೈಜ್ಞಾನಿಕ ಬರಹಗಳು ಪ್ರಸಾರಗೊಂಡಿವೆ.









 ಮಕ್ಕಳ ಸಾಹಿತ್ಯ ಕುರಿತು ಡಾ. ರಾಜೇಂದ್ರ ಎಸ್. ಗಡಾದ ಅವರ ನುಡಿಗಳು



ಮಂಗಳವಾರ, ಆಗಸ್ಟ್ 11, 2020

ಭಾಷೆಯ ಮಾಂತ್ರಿಕತೆ – ಕೆ. ವಿ ನಾರಾಯಣ

 ಭಾಷೆಯ ಮಾಂತ್ರಿಕತೆ – ಕೆ. ವಿ ನಾರಾಯಣ

ಕೆ. ವಿ. ನಾರಾಯಣ ಅವರ ಚಿತ್ರ



ಪರಿಚಯ:
ಡಾ. ಕೆ.ವಿ. ನಾರಾಯಣ :- ಹುಟ್ಟಿದ್ದು 1948ರಲ್ಲಿ. ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲೋಕು ಕಂಪಲಾಪುರದಲ್ಲಿ. ಅಮ್ಮ ಕೆಂಚಮ್ಮ. ಅಪ್ಪ ವೀರಣ್ಣ. ಕೆ. ಆರ್. ಮೊದಲ ಹಂತದ ಓದು ಹುಟ್ಟೂರು ಮತ್ತು ತಾಲೋಕು ಕೇಂದ್ರ ಪಿರಿಯಾಪಟ್ಟಣದಲ್ಲಿ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಙ್ಞಾನವನ್ನು ತೆಗೆದುಕೊಂಡು ಪಿ.ಯು.ಸಿ. ಓದಿದರು. ಇಂಜಿನಿಯರಿಂಗ್ ಮಾಡಲು ಅವಕಾಶವಿದ್ದರೂ ಇಂಜಿನಿಯರ್ ಆಗಕೂಡದೆಂದು ತೀರ್ಮಾನಿಸಿದ ಕೆ.ವಿ.ಎನ್ ಮತ್ತೆ ಮೈಸೂರಿನ ಯುವರಾಜಾಸ್ ಕಾಲೇಜಿನಲ್ಲಿ ವಿಙ್ಞಾನದ ಪದವಿ ಅಭ್ಯಾಸವನ್ನು ಮುಗಿಸಿದರು. ಆನಂತರದಲ್ಲಿ ಬಿಎಡ್ ಮುಗಿಸಿ ಆರಂಭಿಸಿದ್ದು ಹೈಸ್ಕೂಲಿನಲ್ಲಿ ಅಧ್ಯಾಪನ. ಮುಂದಿನ ಓದಿಗಾಗಿ ಮತ್ತೆ ಬೆಂಗಳೂರಿನತ್ತ ಪಯಣ. ಆ ಹೊತ್ತಿಗೇನೆ ಸಾಹಿತ್ಯದ ಓದಿಗೂ ಬಿದ್ದು. ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದ ಕೆ.ವಿ.ಎನ್ ಮುಂದಿನ ಓದಿಗೆ ಆರಿಸಿಕೊಂಡಿದ್ದು ಸಾಹಿತ್ಯವನ್ನು. ಬೆಂಗಳೂರು ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಎಂ.ಎ. ತಮ್ಮ ಒಡನೋದಿಯಾಗಿದ್ದ, ಕನ್ನಡದಲ್ಲಿ ಮಹತ್ವದ ಸ್ತ್ರೀವಾದಿ ಚಿಂತಕಿಯಾಗಿರುವ ಶ್ರೀಮತಿಯವರೊಡನೆ ಒಲುಮೆ ಸಂಭವಿಸಿದ್ದು ಇಲ್ಲೆ. ಗೆಳೆಯರ ಸಮ್ಮುಖದಲ್ಲಿ ಮದುವೆ. ಅಧ್ಯಾಪನ ಕೆಲಸ ಆರಂಭಿಸಿದ್ದು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದ ಜಿ.ಎಸ್.ಎಸ್ ನೇತೃತ್ತ್ವದಲ್ಲಿದ್ದ ಕನ್ನಡ ಅಧ್ಯಯನ ಕೇಂದ್ರಕ್ಕೆ ಸೇರ್ಪಡೆ. ಜಿ.ಎಸ್.ಎಸ್ ಮಾರ್ಗದರ್ಶನದಲ್ಲಿ ಆನಂದವರ್ಧನನ "ಧ್ವನ್ಯಾಲೋಕ -ಒಂದು ಅಧ್ಯಯನ" ಮಾಡಿ ಪಿಎಚ್ ಡಿ ಪದವಿ ಪಡೆದರು. ಬೋಧಿಸಿದ್ದು ಸಾಹಿತ್ಯ, ಸಾಹಿತ್ಯ ಮೀಮಾಂಸೆ ಮತ್ತು ಭಾಷಾಶಾಸ್ತ್ರವನ್ನು. ವಿಙ್ಞಾನದ ತಾತ್ವಿಕತೆಯನ್ನಿರಿಸಿಕೊಂಡೇ ಕೆ.ವಿ.ಎನ್ ಬೆಳೆದಿದ್ದು ವಿಮರ್ಶಕರಾಗಿ, ಭಾಷಾಶಾಸ್ತ್ರಜ್ಞರಾಗಿ, ಕನ್ನಡ ಸಂಸ್ಕೃತಿ ಚಿಂತಕರಾಗಿ. ತಿಳುವಳಿಕೆ ಮತ್ತು ನಡವಳಿಕೆ ಎರಡರಲ್ಲೂ ಸರಳವಾಗಿರುವ ಕೆ.ವಿ.ಎನ್ 1993ರಲ್ಲಿ ಕನ್ನಡಿಗರ ಕನಸಿನ ಸಂಸ್ಥೆಯಾಗಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಬಂದ ಶುರುವಿನಲ್ಲೇ ರಿಜಿಸ್ಟ್ರಾರ್ ಆಗಿ ಅಲ್ಲಿನ ಆಡಳಿತ ನಿರ್ವಹಣೆಯೊಳಗೂ ಪ್ರವೇಶ ಪಡೆದರು. ಅಲ್ಲಿಂದ ನಿವೃತ್ತಿಯಾಗಿ ಹೊರಗೆ ಬರುವವರೆಗೆ ಹಲವು ಜನ ಕುಲಪತಿಗಳ ಆವಧಿಯಲ್ಲಿ ಆಡಳಿತ ಮತ್ತು ಅಧ್ಯಯನಗಳ ಮೂಲಕ ಕನ್ನಡ ವಿಶ್ವವಿದ್ಯಾಲಯವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ತಮ್ಮ ಅಧ್ಯಾಪನ ಸಂದರ್ಭದಲ್ಲೇ ಶುರುಮಾಡಿದ್ದ ಕನ್ನಡಭಾಷೆ ಮತ್ತು ಕನ್ನಡ ಸಂಸ್ಕೃತಿಯ ಚಿಂತನೆಗಳನ್ನು ಕನ್ನಡ ಸಮಾಜದ ಬೇರುಗಳ ಮೂಲಕ ಅರಸುವ ಕೆಲಸವನ್ನು ಮತ್ತಷ್ಟು ಸ್ಪಷ್ಟವಾಗಿ ಮಂಡಿಸುತ್ತಾ ಬಂದರು. ಈಗಲೂ ಭಾಷೆ, ಸಾಹಿತ್ಯ, ಶಿಕ್ಷಣ ಮತ್ತು ವಿಙ್ಞಾನ ಮೊದಲಾಗಿ ಕನ್ನಡ ಸಮಾಜಕ್ಕೆ ಸಂಬಂಧಿಸಿದ ಯಾವುದರಲ್ಲೂ ಜರೂರಾಗಿ ನಡೆಯಬೇಕಿರುವ ಕೆಲಸ ಇದೆ ಎಂದು ತೊಡಗಿಸಿಕೊಂಡು ಈ ಕಾಲದ ಕನ್ನಡದ ಮಹತ್ವದ ಚಿಂತಕರಾಗಿದ್ದಾರೆ.
(ವಿಕಿಪೀಡಿಯಾ ಮಾಹಿತಿಯನ್ನು ಪಡೆದು ಪರಿಶೀಲಿಸಲಾಗಿದೆ)
ಕೃತಿ ತೊಂಡು ಮೇವು ಮುಖಪುಟ


2021ರ ಸಾಲಿನ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಡಾ. ಎಚ್. ಎಸ್ ಸತ್ಯನಾರಾಯಣ ಅವರು

ಅಪೂರ್ವ ಒಡನಾಟಕ್ಕೆ ಗೌರವ ಲಭಿಸಿದೆ


        ಅಧ್ಯಯನ ಎಂಬುದು ಎಲ್ಲರಿಗೂ ದಕ್ಕುವುದಿಲ್ಲ. ಕಾಣುವುದನ್ನು ಗ್ರಹಿಸುವುದು, ಗ್ರಹಿಸಿದಕ್ಕೆ ತನ್ನ ಹಿಂದಿನ ಗ್ರಹಿಕೆಗಳನ್ನು ತುಲನೆಮಾಡುವುದು ಅದೊಂದು ವಿಮರ್ಶೆಯ ಚಾಣಾಕ್ಷತೆ. ಅಡುಗೆಮಾಡುವ ರುಚಿ ಮಾಂತ್ರಿಕರು ಕಂಡದ್ದಕ್ಕೆಲ್ಲಾ ರುಚಿ ಮೂಡಿಸಿ ಅರ್ಥ ನೀಡುವಂತೆ ಈ ವಿಮರ್ಶಕರು ಕಾಣಸಿಗುತ್ತಾರೆ.
ಈ ಜ್ಞಾನ ಮೂಡುವುದರ ಹಿಂದೆ ಸರಿಯಾದ, ಶಾಂತವಾದ ಓದು ನಡೆದಿರುತ್ತದೆ. ಆ ಕಾರ್ಯದಲ್ಲಿ ಭಾರತೀಯ, ಪಾಶ್ಚಾತ್ಯವೆಂಬ ಎಲ್ಲೆಗಳನ್ನು ಮೀರಿ, ವಿಶ್ವಮಾನವ ತತ್ವದೊಳಗೆ ತಮ್ಮ ದರ್ಶನಗಳನ್ನು ತಾವು ರುಚಿಸಿಕೊಂಡಾಗ ತಮ್ಮ ನುಡಿ-ನಡೆ, ವಿಚಾರಗಳು ಲೋಕಕ್ಕೆ ಹೊಸ ಮಾದರಿಗಳನ್ನು ನೀಡುತ್ತವೆ. ಇಂತಹ ಹೊಸ ಮಾದರಿಗಳನ್ನು ಪರಿಚಯಿಸುತ್ತಿರುವ ಕನ್ನಡದ ಜನಪ್ರಿಯ ಲೇಖಕರು ನಮ್ಮ ಎಚ್. ಎಸ್. ಸತ್ಯನಾರಾಯಣ ಅವರು.  

    ಮನುಷ್ಯನಿಗೆ ಲೋಕವಿರಾಮದ ಹಸಿವು ಉಂಟಾದರೆ ಆ ದಿಕ್ಕಿನ ಕಡೆಗೆ ತುಡಿಯುತ್ತಾನೆ. ಅಂತಹ ಲೋಕವಿರಾಮವನ್ನು ತನ್ನ ಯೌವನದಲ್ಲಿಯೇ ತುಳಿದಿದ್ದರು ಎನಿಸುತ್ತದೆ. ಈ ಆಸಕ್ತಿಯಲ್ಲಿಯೇ ಕನ್ನಡ ನುಡಿಸೇವಕರ ಕುರಿತು ಅಪೂರ್ವ ಒಡನಾಟ ಇವರದು. ಗಂಭೀರವಾದ ವಿಚಾರಗಳಿಗೆ ಹಾಸ್ಯದ ಲೇಪನವಚ್ಚಿ, ಅವರವರ ರುಚಿ-ಅಭಿರುಚಿಗಳಿಗೆ ಮಾತಿನ ಮಜಲನ್ನು ಕಟ್ಟಿ ಎಲ್ಲರೊಂದಿಗೆ ಬೆರೆತವರು. ಕುವೆಂಪು, ಹಾ.ಮಾ.ನಾ, ಬೇಂದ್ರೆ ಎಲ್ಲರನ್ನೂ ತನ್ನ ಸಮಕಾಲೀನರಂತೆ ಚಿತ್ರಸುವ ವ್ಯಕ್ತಿ-ಸಾಹಿತ್ಯ-ಚಿತ್ರಮಾಂತ್ರಿಕರಾಗಿ ನಮ್ಮ ನಡುವೆ ವೇದಿಕೆ ಕೊಟ್ಟಲ್ಲೆಲ್ಲಾ ಬಿಗುಮಾನವಿಲ್ಲದೆ ಸಂಚಲನ ಮೂಡಿಸುತ್ತಾರೆ. ಸತ್ಯನಾರಾಯಣ ಎಂಬ ಹೆಸರು ಈಗ ಕನ್ನಡದ ಮುಕ್ಕಾಲು ಪಾಲು ಸಾಹಿತ್ಯ ಆಸಕ್ತರ ಮನೆ-ಮನಗಳಲ್ಲಿದೆ. ಸತ್ಯ, ಸತ್ಯಣ್ಣ, ಮೇಷ್ಟ್ರು ಮೊದಲಾದ ಹೆಸರುಗಳೊಂದಿಗೆ ಹಿರಿಯರಿಂದ-ಕಿರಿಯರವರೆಗೂ ಪ್ರೀತಿಯ ಸ್ಪರ್ಷತೆ. ಇದಕ್ಕೆ ಕಾರಣವೆಂದರೆ ಅವರ ಸಮನ್ವಯತೆ, ನಿರಂಹಕಾರ, ಎಲ್ಲರೊಂದಿಗೂ ಆಪ್ತವಾಗಿ ಬೆರೆಯುವ ಗುಣ.

          ಕುವೆಂಪು ಕುರಿತು ಗಂಭೀರ ವಿಚಾರಗಳನ್ನೂ ಸರಳವಾಗಿ ಪರಿಚಯಿಸಿಕೊಳ್ಳಲು ‘ಕುವೆಂಪು ಅಲಕ್ಷಿರೆದೆಯ ದೀಪ’ ಕೃತಿಯನ್ನು ನೀಡಿದ್ದಾರೆ. ಹದಿನೈದು ಸಾಹಿತಿಗಳ ಒಡನಾಟದ ಆಪ್ತತೆಯನ್ನು, ಸಂಕ್ಷಿಪ್ತವಾಗಿ ಫೇಸ್ ಬುಕ್ ನಲ್ಲಿ ಕವಿಸಮಯ-ಅಂಕಣ ಬರಹ ರೂಪದಲ್ಲಿ ಹಂಚಿಕೊಂಡ ಪ್ರಸಿದ್ಧಿಯ ಫಲವೇ ‘ಅಪೂರ್ವ ಒಡನಾಟ’. ಇವರು ಈ ಹಿಂದೆ ದ್ವಿತೀಯ ಪಿ.ಯು.ಸಿ.ಯ ಕನ್ನಡ ಭಾಷಾ ಪಠ್ಯ ಸಾಹಿತ್ಯ ಸಂಪದವನ್ನು ಸಂಪಾದಿಸಿದ ಕಾರ್ಯದ ಮೂಲಕ ಮೇಷ್ಟ್ರುಗಳ, ಮಕ್ಕಳ ಮನಸ್ಸಿನಲ್ಲಿ ಇದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ ಕನ್ನಡ ಸಾಹಿತ್ಯ ಸಂಗಾತಿ’, ‘ಸಾಹಿತ್ಯ ವಿಮರ್ಶೆ-2016’ ಹಾಗೂ ತೇಜಸ್ವಿ ಕುರಿತು ಇವರ ಸಂಶೋಧನಾ ಪ್ರಬಂಧ ಕಾರ್ಯವು ಅತ್ಯಂತ ವಿಭಿನ್ನವಾದುದು. ಅಪೂರ್ವ ಒಡನಾಟ ಪ್ರಕಟವಾದ ಮೇಲೆ ಇವರ ಆಪ್ತರು ಸುಮಾರು ಐವತ್ತು ವರ್ಷಗಳ ನಿರಂತರ ಓದಿನ ಫಲವನ್ನು ಆಚೆ ತರಲು ಹಂಬಲಿಸಿದರು. ಚಿಕ್ಕಮಗಳೂರಿನಲ್ಲಿ ತಪಸ್ವಿಯಂತೆ ಬರವಣಿಗೆ ಪ್ರಾರಂಭಿಸಿರುವ ಇವರು ಡುಂಡಿರಾಜರ ಸಾಹಿತ್ಯ ವಿಮರ್ಶೆ ಕುರಿತ ಡುಂಡಿಮಲ್ಲಿಗೆ’, ಅಂಕಣ ಬರಹಗಳ ಕೃತಿರೂಪ ‘ನುಡಿಚಿತ್ರ’, ವಿಮರ್ಶಾ ಲೇಖನಗಳನ್ನು ‘ಕಣ್ಣೋಟ’ವಾಗಿ, ಅಪೂರ್ವ ಒಡನಾಟದಲ್ಲಿ ನೆನಪು ಕಡಿಮೆ ಇದೆ ಎಂದು ಬರೆಯದೆ, ಮುಂದೆ ಮಾಸ್ತಿ ಕುರಿತು ಅಧ್ಯಯನ ಜಾಸ್ತಿಯಿದೆ ಎಂಬಂತೆ ‘ನಗೆಮೊಗದ ಅಜ್ಜ ಮಾಸ್ತಿ’ಯಾಗಿ, ಲಾಲಿತ್ಯದ ಔತಣ ನೀಡುವ ಸತ್ಯಣ್ಣನವರು ‘ಪನ್ನೇರಳೆ’ ಎಂಬ ಲಲಿತ ಪ್ರಬಂಧವನ್ನೂ ಬರೆದಿದ್ದಾರೆ. ಈ ಎಲ್ಲಾ ಕೃತಿಗಳು ವರ್ತಮಾನದ ಹಸಿವಿಗೆ, ಬಾಳ್ವೆಯ ಅರ್ಥಪೂರ್ಣ ಸ್ವೀಕಾರಕ್ಕೆ ಸರಿಯಾದ ಮಾರ್ಗಸೂಚಿ ನೀಡಬಲ್ಲವು ಅನಿಸುತ್ತದೆ.

        ಇಂತಹ ನಮ್ಮ ಅಪೂರ್ವ ಒಡನಾಡಿ ವ್ಯಕ್ತಿತ್ವಕ್ಕೆ 2021ನೇ ಸಾಲಿನ ಪ್ರೊ. ಸಿ.ಎಚ್. ಮರಿದೇವರು ಪ್ರತಿಷ್ಠಾನ ದತ್ತಿ ಪ್ರಶಸ್ತಿ ಗೌರವ ಲಭಿಸಿದ್ದು ನಮಗೆ ಸಂತಸ ಮೂಡಿತ್ತು. ಅದೇ ಸಂತಸವು ಹಿಮ್ಮಡಿಯಾಗಿ ಈಗ ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು ನೀಡುವ 2021ರ ಸಾಲಿನ ಪ್ರತಿಷ್ಠಿತ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಲಭಿಸಿರುವುದು ಸಂತಸ ಮೂಡಿಸಿದೆ. ಎಷ್ಟೋ ಸಂದರ್ಭದಲ್ಲಿ ಪ್ರಶಸ್ತಿ ನೀಡುವ, ಪಡೆಯುವ ಕಾರಣಗಳಿಗೆ ಅರ್ಥವಿರದ ಕಾಲದಲ್ಲಿದ್ದೇವೆ. ಆದರೆ ಇಂತಹ ವಿದ್ವಾಂಸರಿಗೆ ಲಭಿಸುವ ಹೊಸಬಗೆಯು ಪ್ರಶಸ್ತಿಯ ಗೌರವವನ್ನು ಹೆಚ್ಚಿಸುತ್ತದೆ. 




ಡಾ. ಎಚ್. ಎಸ್ ಸತ್ಯನಾರಾಯಣ ಅವರ ಕುರಿತು- ಚಿತ್ರ ಹಾಗೂ ಅವರ ಭಾಷಣದ ಒಂದು ಮಾದರಿ

https://youtu.be/c9V5_EhjEPk

 

ಶನಿವಾರ, ಜುಲೈ 4, 2020

ಬೀದಿಗೆ ಬಂದಿದೆ ಸಾವು

ಬೀದಿಗೆ ಬಂದಿದೆ ಸಾವು


ಬೀದಿಗೆ ಬಂದಿದೆ ಸಾವು
ತಣ್ಣಗಾದೆವು ನಾವು
ಚೆಲುವಿಗೂ ಸೋಂಕು ಹತ್ತಿದೆ
ಚಳುವಳಿಕಾರರೆಲ್ಲಾ
ಚಳಿಯಿಡಿದು ಕೂತಿರಲು
ಕವಿಗೆ ಮಾತಿನ ಚಪಲವತ್ತಿದೆ
ವಿಮರ್ಶಕನಿಗೆ ಅರವಳಿಕೆ ನೀಡಿ
ಶ್ರೀ ಸಾಮಾನ್ಯನನ್ನು
ಭಯದಲ್ಲಿ ಅದ್ದುತ್ತಾ
ಸರ್ಕಾರ ಬೆಚ್ಚಾಗಾಗುತ್ತಿದೆ
ಸುದ್ದಿ ನಗರಿಯೆಲ್ಲಾ ಸಾವಿನಾಟ...

ಶಾಸ್ತ್ರ, ಪುರಾಣಗಳೆಲ್ಲಾ
ಓದಿನ ತರ್ಕಗಳಾಗಿ
ನೀತಿ-ಆದರ್ಶಗಳೂ
ಜೀವ ಕುಣಿಕೆಯಲ್ಲಿ
ನೇತಾಡುತ್ತಿವೆ
ಮೇಷ್ಟ್ರು ಹೇಳಿದ ಭಾವನೆಗಳು
ಧೈರ್ಯತುಂಬುತ್ತಿವೆ.

ಭಯವೇ ಬದುಕಾಗಿರುವಾಗ
ಹೊರ ಜಗತ್ತಿನಲ್ಲಿ
ನಂಬಿಕೆಯೂ ಅನುಮಾನದ
ಆಸರೆಪಡೆದಿದೆ
ಚೇತರಿಸಿಕೊಳ್ಳದಾಳಕ್ಕೆ
ಭೀತರಾಗಿದ್ದೇವೆ.

ಹೆಸರು, ಗೌರವಗಳನೆಲ್ಲಾ
ಕಳಚಿಟ್ಟು
ಆಸೆಗಳನ್ನು ಸುತ್ತಿಡು
ಸಾವಿನ ವಾಸನೆ ಎಲ್ಲಿಯಾದರೂ
ಬರಬಹುದು
ನಿನ್ನನ್ನು ಮೊದಲು ನಂಬು
ಯಾರ ದಾಳಕ್ಕೂ
ಬಲಿಯಾಗಬೇಡ.
ನಿನ್ನನ್ನೇ ಪ್ರೀತಿಸುವ
ಜೀವವನ್ನೊಮ್ಮೆ ಹಿತಮಾಡು.
ಈಗಲಾದರೂ
ಅರ್ಥಮಾಡಿಕೋ...
ಸಾವು ಬೀದಿಯಲಿಲ್ಲ,
ನಿನ್ನೊಳಗೆ ಅಡಗಿದೆ
ಕಾಪಾಡಿಕೋ, ನಿನ್ನ ಜ್ಞಾನದಲಿ.
- ಅಂಕುರ ೦೫.೦೭.೨೦೨೦

ಸೋಮವಾರ, ಜೂನ್ 29, 2020

ಪ್ರೊ. ಎಂ. ಮರಿಯಪ್ಪ ಭಟ್ಟರು (ಜುಲೈ ೨೭೧೯೦೬ - ಮಾರ್ಚ್ ೨೧೧೯೮೦) ಕನ್ನಡದ ಉದ್ದಾಮ ಪಂಡಿತರಲ್ಲಿ ಒಬ್ಬರು. ಅವರು ಮೂರು ದಶಕಗಳ ಕಾಲ ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಪಂಡಿತರಾಗಿ, ನಿಘಂಟುತಜ್ಞರಾಗಿ, ಸಂಶೋಧಕರಾಗಿ ಕೀರ್ತಿವಂತರಾಗಿದ್ದವರು. ದ್ರಾವಿಡ ಭಾಷೆಗಳ ದೊಡ್ಡ ವಿದ್ವಾಂಸರು ಮತ್ತು ಭಾರತದಲ್ಲಿ ಭಾಷಾಶಾಸ್ತ್ರದ ಮುಖ್ಯ ಪರಿಣತರಲ್ಲೊಬ್ಬರಾಗಿದ್ದರು.

ಜೀವನ

ಮರಿಯಪ್ಪಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಮುಂಗ್ಲಿ ಮನೆಯಲ್ಲಿ ಜುಲೈ ೨೭, ೧೯೦೬ರ ವರ್ಷದಲ್ಲಿ ಜನಿಸಿದರು. ತಂದೆ ಗೋವಿಂದ ಭಟ್ಟರು. ತಾಯಿ ಕಾವೇರಿ ಅಮ್ಮನವರು. ಮರಿಯಪ್ಪ ಭಟ್ಟರ ಪ್ರಾರಂಭಿಕ ವಿದ್ಯಾಭ್ಯಾಸ ಪುತ್ತೂರು ಸಮೀಪದ ಪೊಳ್ಯದಲ್ಲಿ ನೆರವೇರಿತು. ಅವರು ಹೈಸ್ಕೂಲಿಗೆ ಸೇರಿದ್ದು ಪುತ್ತೂರಿನಲ್ಲಿ. ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜಿನಿಂದ ಬಿ. ಎ. ಪದವಿ ಪಡೆದರು.

ಪ್ರಾಧ್ಯಾಪನ

ಮುಂದೆ ಮರಿಯಪ್ಪ ಭಟ್ಟರು ಮದರಾಸಿನ ಪ್ರಾಚ್ಯ ಹಸ್ತ ಪ್ರತಿ ಸಂಶೋಧನ ಗ್ರಂಥ ಭಂಡಾರದಲ್ಲಿ ಜ್ಯೂ. ಅಸಿಸ್ಟೆಂಟ್‌ರಾಗಿ ಕೆಲಸಕ್ಕೆ ಸೇರಿದರು. ನಂತರ ಗಣಿತ ಶಾಸ್ತ್ರದ ಉಪಾಧ್ಯಾಯರಾಗಿ ಮದರಾಸಿನ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ವೃತ್ತಿ ನಡೆಸಿದರು. ಸ್ವಂತ ಪರಿಶ್ರಮದಿಂದ ಕನ್ನಡ ಎಂ.ಎ. ಪದವಿ, ಎಲ್.ಟಿ. ಪದವಿ ಸಂಪಾದಿಸಿದ್ದಲ್ಲದೆ, ಕನ್ನಡ ವಿದ್ವಾನ್ ಪದವಿಯನ್ನೂ ಗಳಿಸಿದರು. ೧೯೪೦ರಲ್ಲಿ ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಉಪನ್ಯಾಸಕರಾಗಿ ನೇಮಕಗೊಂಡು, ರೀಡರ್, ಪ್ರೊಫೆಸರ್ ಸ್ಥಾನಗಳಿಗೇರಿ, ಅದೇ ವಿಭಾಗದಲ್ಲಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ೧೯೭೨ರಲ್ಲಿ ನಿವೃತ್ತಿ ಹೊಂದಿದರು. ಮೂರು ದಶಕಗಳಿಗೂ ಹೆಚ್ಚು ಕಾಲ ಅವರು ಕನ್ನಡ ವಿಭಾಗದ ಏಳಿಗೆಗಾಗಿ ಪರಿಶ್ರಮಪಟ್ಟು ಕಾರ್ಯನಿರ್ವಹಿಸಿದರು.

ನಿಘಂಟು ರಚನಾ ಕ್ಷೇತ್ರ

ನಿಘಂಟು ರಚನಾ ಕ್ಷೇತ್ರ ಅವರು ಬಹು ತಜ್ಞರೆಂದು ಪರಿಗಣಿಸಲ್ಪಟ್ಟ ಮುಖ್ಯವಾದೊಂದು ಕ್ಷೇತ್ರ. ಅವರು ಪರಿಷ್ಕರಿಸಿದ ಕನ್ನಡ ಕಿಟೆಲ್ ನಿಘಂಟನ್ನು ನಾಲ್ಕು ಸಂಪುಟಗಳಲ್ಲಿ ಪ್ರಕಟಿಸಿದರು. ೧೯೬೮ರಲ್ಲಿ ಅವರು ಕಿಟೆಲ್ ಕೋಶದ ಸಂಪುಟಗಳನ್ನು ಪ್ರಕಟಿಸತೊಡಗಿದಾಗ ಕನ್ನಡ ಜನ ಪ್ರೀತಿಯಿಂದ ಅವರನ್ನು ಅಭಿನವ ಕಿಟೆಲ್ ಎಂದು ಗೌರವಿಸಿದರು. ಪರಿಷ್ಕರಿಸಿದ ಕಿಟೆಲ್ ಅವರ ಕನ್ನಡ – ಇಂಗ್ಲಿಷ್ ನಿಘಂಟುವಿನ ನಾಲ್ಕು ಸಂಪುಟಗಳು ಮಾತ್ರವಲ್ಲದೆ ಅವರು ದ್ರಾವಿಡಿಯನ್ ಕಂಪಾರೆಟಿವ್ ವಕಾಬ್ಯುಲರಿ (ದ್ರಾವಿಡ ಭಾಷೆಗಳ ಹೋಲಿಕೆಯ ಶಬ್ದಕೋಶ) , ತುಳು – ಇಂಗ್ಲಿಷ್ ನಿಘಂಟು ಹಾಗೂ ಹವ್ಯಕ ಭಾಷೆಯ ನಿಘಂಟುಗಳನ್ನೂ ಪ್ರಕಟಿಸಿದ್ದಾರೆ.

ಸಂಪಾದನೆ

೧೯೪೦ನೇ ಇಸವಿಯ ಆದಿಯಲ್ಲಿ ಕನ್ನಡದ ಮುಖ್ಯ ಕೃತಿಗಳ ಸಂಪಾದನೆ ಇನ್ನೂ ನಡೆಯುತ್ತಿದ್ದ ಕಾಲದಲ್ಲಿ ಅವರು ಕನ್ನಡದ ಮುಖ್ಯವಾದ ೧೪ ಕೃತಿಗಳನ್ನು ಸಂಪಾದಿಸಿದರು. ಅವುಗಳಲ್ಲಿ ಮುಖ್ಯವಾದ ಕೆಲವು ಕೃತಿಗಳೆಂದರೆ ಮಂಗರಾಜನ ಅಭಿನವಾಭಿದಾನಂ, ಸೆಲೆಕ್ಟೆಡ್ ಕನ್ನಡ ಇನ್‌ಸ್ಕ್ರಿಪ್ಷನ್ಸ್, ಆಚಣ್ಣನ ವರ್ಧಮಾನ ಪುರಾಣಂ, ಪಾರ್ಶ್ವನಾಥ ಪುರಾಣಂ, ಶ್ರೀಧರಾಚಾರ್ಯವರ ಜಾತಕ ತಿಲಕಂ, ಚಿಕುಪಾಧ್ಯಾಯನ ವಿಷ್ಣುಪುರಾಣಂ, ಹಳಗನ್ನಡ, ನಡುಗನ್ನಡ ಕಾವ್ಯ ಸಂಗ್ರಹ, ಹೊಸಗನ್ನಡ ಕಾವ್ಯಶ್ರೀ, ನಾಲ್ನುಡಿ-ನಾಣ್ಣುಡಿ, ಸರ್ವಜ್ಞನ ವಚನ ಸಂಗ್ರಹ ಮೊದಲಾದವು. ‘ಖಗಮಣಿ ದರ್ಪಣ’ ಎಂಬ ವೈದ್ಯಕ್ಷೆತ್ರದ ಕನ್ನಡ ಕೃತಿಯೂ ಸೇರಿ ಕಳೆದು ಹೋಗಬಹುದಾದ ಕೆಲವಾರು ಕೃತಿಗಳನ್ನೂ ಅವರು ಸಂಪಾದಿಸಿ ಪ್ರಕಟಿಸಿದ್ದಾರೆ. ಪ್ರೊ. ಎಂ. ಮರಿಯಪ್ಪ ಭಟ್ಟರು ಅನೇಕ ಸಂಶೋಧನಾ ಲೇಖನಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಕೂಡಾ ಪ್ರಕಟಿಸಿದ್ದಾರೆ. ಅವುಗಳಲ್ಲಿ ಆಯ್ದ 28 ಲೇಖನಗಳನ್ನು ಒಟ್ಟುಮಾಡಿ ‘ಡ್ರಾವಿಡಿಕ್ ಸ್ಟಡೀಸ್’ ಎಂಬ ಲೇಖನಗಳ ಸಂಗ್ರಹವನ್ನು ಅವರ ಪುತ್ರಿ ಡಾ. ಶಾರದಾ ಜಯಗೋವಿಂದ ಸಂಪಾದಿಸಿದ್ದಾರೆ.

ಅನುವಾದ

‘ಸಂತರ ಚರಿತ್ರೆ’ ಎಂಬುದು ಅನುವಾದ.

ಸ್ವತಂತ್ರ ಕೃತಿಗಳು

ಭಟ್ಟರು ಕೆಲವೊಂದು ಸ್ವತಂತ್ರ ಕೃತಿಗಳನ್ನೂ ರಚಿಸಿದರು. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಕನ್ನಡ ಸಂಸ್ಕೃತಿ, ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ, ಕೇಶೀರಾಜ ಮೊದಲಾದವು. ಇವಲ್ಲದೆ ಹಳೆಗನ್ನಡ ಕಾವ್ಯ ಸಂಗ್ರಹಗಳು ಹಾಗೂ ಅನೇಕ ಸಂಶೋಧನಾ ಲೇಖನಗಳನ್ನೂ ಬರೆದರು.

ಭಾಷಾ ವಿಜ್ಞಾನ ಪ್ರವರ್ತಕ

ಕನ್ನಡ, ತುಳು ಹಾಗೂ ಮಲಯಾಳ ಭಾಷೆಗಳು ಮರಿಯಪ್ಪ ಭಟ್ಟರಿಗೆ ಅವರ ಹುಟ್ಟೂರಾದ ದಕ್ಷಿಣ ಕನ್ನಡ ಜಿಲ್ಲೆಯ ಪರಿಸರದಲ್ಲಿ ದೊರೆತವು. ಮದ್ರಾಸಿನಲ್ಲಿದ್ದು ಅವರು ತಮಿಳು ಭಾಷೆಯನ್ನು ಕರಗತ ಮಾಡಿಕೊಂಡರು. ತೆಲುಗು ಭಾಷೆಯ ತಿಳುವಳಿಕೆಯನ್ನು ವಿಶೇಷವಾದ ಅಭ್ಯಾಸದಿಂದ ಪಡೆದರು. ೧೯೫೫-೫೬ರಲ್ಲಿ ಅವರು ವಿಶೇಷ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ತೆರಳಿ ಅಲ್ಲಿ ಭಾಷಾ ವಿಜ್ಞಾನವನ್ನು ಅಭ್ಯಾಸ ಮಾಡಿದರು. ಭಾರತದಲ್ಲಿ ಭಾಷಾ ವಿಜ್ಞಾನದ ಮೊದಲ ಪ್ರವರ್ತಕರಲ್ಲಿ ಪ್ರೊ. ಮರಿಯಪ್ಪ ಭಟ್ಟರೂ ಒಬ್ಬರು.

ವಿಶೇಷ ಸೇವೆಗಳು

ಪ್ರೊ. ಎಂ. ಮರಿಯಪ್ಪ ಭಟ್ಟರು ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ ಹೊಂದಿದವರಾಗಿದ್ದರು. ಕೇಂದ್ರ ಫಿಲಂ ಸೆನ್ಸಾರ್ ಮಂಡಳಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿ, ಪಠ್ಯಪುಸ್ತಕ ಸಮಿತಿ, ಅಧ್ಯಯನ ಮಂಡಲಿ, ನಿಘಂಟು ರಚನಾ ಸಮಿತಿ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ರಚನಾ ಸಮಿತಿಯ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು.

ಪ್ರಶಸ್ತಿ ಗೌರವಗಳು

ಪ್ರೊ. ಎಂ. ಮರಿಯಪ್ಪ ಭಟ್ಟರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಸೋವಿಯತ್ ಲ್ಯಾಂಡ್ ಫೆಲೋಷಿಪ್, ಶ್ರೀನಗರದಲ್ಲಿ ನಡೆದ ಅಖಿಲ ಭಾರತ ಪ್ರಾಚ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಗೌರವಗಳು ಸಂದಿದ್ದವು. ಅವರ ಅಭಿಮಾನಿಗಳು ಅರ್ಪಿಸಿದ ಸಂಸ್ಮರಣ ಗ್ರಂಥ ‘ಸಾರ್ಥಕ.’

ವಿದಾಯ

ತಮ್ಮ ಬದುಕನ್ನು ಸಾರ್ಥಕವಾಗಿ ಬಾಳಿದ ಪ್ರೊ. ಎಂ. ಮರಿಯಪ್ಪ ಭಟ್ಟರು ಮಾರ್ಚ್ ೨೧, ೧೯೮೦ರ ವರ್ಷದಲ್ಲಿ ಈ ಲೋಕವನ್ನಗಲಿದರು.




ಶುಕ್ರವಾರ, ಜೂನ್ 19, 2020

ಮೂರನೇ ಸೆಮಿಸ್ಟರ್ ಬಿ.ಎ., ಬಿ.ಎಸ್ ಸಿ ತರಗತಿಗಳ ಪಠ್ಯ



. ನಮ್ಮ ಭಾಷೆ
- ಎಂ. ಮರಿಯಪ್ಪ ಭಟ್ಟ
ಆಶಯ :
ಭಾಷೆ ಸಂವಹನ ಮಾಧ್ಯಮ ಅದು ಮಾತು ಮತ್ತು ಬರಹ ರೂಪದಲ್ಲಿ ಅಭಿವ್ಯಕ್ತಗೊಳ್ಳುತ್ತದೆ. ಅದನ್ನು ಶ್ರವಣ, ಚಾಕ್ಷುಕ ಎಂದು ಪರಿಗಣಿಸಿದೆ. ಮಾತಿನ ಸಾಂಕೇತಿಕ ರೂಪವೇ ಬರಹ, ಭಾಷೆಗೆ ರೂಪ, ಆಕಾರ, ಭೌತಿಕ ಅಥವಾ ರಾಚನಿಕ ಗುಣಗಳೇನೂ ಇಲ್ಲ. ಅದು ಪ್ರಾದೇಶಿಕವಾಗಿ ಸನ್ನಿವೇಶವನ್ನು ಅರ್ಥೈಸುವ ಹೊಂದಾಣಿಕೆ ಕೆಲಸವನ್ನು ಪ್ರಾತಿನಿಧಿಕವಾಗಿ ನಿರ್ವಹಿಸುತ್ತದೆ. ಮಾನವನಿಗಿರುವ ಚಿಂತಿಸುವ ಪರಿಭಾವಿಸುವ ಸದಾ ಚೈತನ್ಯದಾಯಕವಾಗಿ ಪ್ರತಿಕ್ರಿಯಿಸುವ ಬೌದ್ಧಿಕ ಶಕ್ತಿಯೇ ಇದಕ್ಕೆ ಹಿನ್ನೆಲೆ, ಅದರ ಸಾಧ್ಯತೆಯ ಪರಿಣಾಮವೇ ಸಂವಹನ, ಭಾಷೆಯ ಸುಸಂಘಟಿತ ರೂಪದ ಧ್ವನಿ ಶರೀರದಿಂದ ಅರ್ಥ ಸ್ಪುರಿಸುತ್ತದೆ. ಭಾಷೆ ಬಲ್ಲವರಿಗೆ ಭಾವನೆ ಪರಸ್ಪರ ಸಂಲಗ್ನಗೊಳ್ಳುವುದು, ಭಾವನೆಗಳೆಲ್ಲವನ್ನೂ ಭಾಷೆಯ ತೆಕ್ಕೆಗೆ ತರಲು ಸಾಧ್ಯವಿಲ್ಲವಾದರೂ ಮೂಲ ಆಶಯಕ್ಕೆ ಧಕ್ಕೆ ಬಾರದಂತೆ ಬಳಸಿದಾಗ ಮಾತ್ರ ಉದ್ದೇಶ ಸಾಧಿತವಾಗುತ್ತದೆ.


ನಮ್ಮ ಸುತ್ತಮುತ್ತಲಿನವರೊಡನೆ ವ್ಯವಹರಿಸುವುದಕ್ಕೆ ಹಾಗೂ ವಿಚಾರ ವಿನಿಮಯ ಮಾಡುವುದಕ್ಕೆ ಭಾಷೆ ಒಂದು ಅಮೂಲ್ಯ ಸಾಧನ. - ಇಂಥ ಅಮೂಲ್ಯವಾದ ಭಾಷೆಯ ಉತ್ಪತ್ತಿ ಎಂದು ಮತ್ತು ಹೇಗಾಯಿತು ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಹೇಳುವುದು ಕಷ್ಟಸಾಧ್ಯ. ಭಾಷೆಯ ಮೂಲವನ್ನು ಮಾನವನು ಕಂಡುಹಿಡಿಯುವುದೆಂದರೆ, ನಿರೀಕ್ಷಕನೂ ವಸ್ತುವೂ ಒಂದೇ ಆದಂತೆಯೇ ಸರಿ. ಮಾನವನು ತನ್ನ ವಿಶಿಷ್ಟ ಮೇಧಾಶಕ್ತಿಯಿಂದ ಜಂಗಮ ಜಗತ್ತಿನ ಇತರ ಜಂತುಗಳಿಗಿಂತ ಭಿನ್ನವಾಗಿದ್ದಾನೆ.
ಮಕ್ಕಳಿಗೆ ಮೊಲೆಯೂಡುವ ಎಲ್ಲ ಪ್ರಾಣಿಗಳೂ ಚಲನವಲನಗಳ ವಿಷಯವಾಗಿ, ಆಹಾರ ವಿಚಾರಗಳ ವಿಚಾರವಾಗಿ ತಮ್ಮ ಮಕ್ಕಳಿಗೆ ಸಹಜವಾಗಿ ತರಪೇತು ಕೊಡುವುದನ್ನು ಕಾಣುತ್ತೇವೆ. ಅನುಕರಣದಿಂದ ಕಿರಿಯವು ಹಿರಿಯ ಪ್ರಾಣಿಗಳಂತೆ ಕಾರ್ಯ ಮಾಡುವುದನ್ನು ಕಲಿಯುತ್ತವೆ. ಇಲ್ಲಿಗೆ ಅವುಗಳ ಸಾಮಾನ್ಯ ಸಂಸ್ಕೃತಿ ಮುಗಿಯಿತು: ಮಾನವನಾದರೋ ತನ್ನ ಸಮಕಾಲೀನ ಜನತೆಯದು ಮಾತ್ರವೇ ಅಲ್ಲ, ಗತಕಾಲದ ಹಿರಿಯರ ಜ್ಞಾನಾನುಭವಗಳ ಸಾರಸರ್ವಸ್ವವನ್ನೂ ಉಳಿಸಿಕೊಂಡು ಬೆಳೆಸಬಲ್ಲ. ಇದಕ್ಕೆ ಮೂಲ ಸಾಧನ ಭಾಷೆ, ಭಾಷೆಯ ಪ್ರಯೋಜನ ಮನುಷ್ಯನಿಗೆ ಇಲ್ಲದೆ ಹೋಗಿದ್ದರೆ ಆತ ಬರಿಯ ಜಂತುವಾಗಿಯೇ ಉಳಿಯುತ್ತಿದ್ದ. ಭಾಷೆ ಇದ್ದೂ ಅದರ ಪೀಯೂಷವನ್ನು ಕುಡಿದು ಅರಗಿಸಿಕೊಳ್ಳದ, ಅಂತೆಯೇ ಕರ್ಮವೆಸಗದ ವ್ಯಕ್ತಿ ಜಂತುವೇ ಸರಿ.
ವಿಶ್ವದ ಬಹುಭಾಷಾ ಪ್ರಪಂಚದಲ್ಲಿ ಸುಮಾರು ನಾಲ್ಕು ಸಾವಿರ ಭಾಷೆಗಳಿರುತ್ತವೆ ಎಂದು ತಿಳಿದುಬಂದಿದೆ. ದೇಶ, ಕಾಲ, ವಂಶ, ಪರಂಪರೆ ಇತ್ಯಾದಿ ಕಾರಣಗಳಿಂದ ಅವು ಬೇರೆ ಬೇರೆಯಾಗಿ ಭಿನ್ನ ಭಿನ್ನ ಸನ್ನಿವೇಶಗಳಲ್ಲಿ ಬೆಳೆದು ಬಂದಿರುತ್ತವೆ. ಆಯಾ ಸನ್ನಿವೇಶಗಳಿಗನುಸಾರ ಆಯಾ ಜನತೆಯ ಜ್ಞಾನಾರ್ಜಿತ ಸ್ವತ್ತುಗಳಿಗನುಸಾರ ಭಾಷೆಗಳ ಬೆಳವಣಿಗೆಯಾಗುತ್ತಿದೆ ಭಾಷೆಗಳನ್ನು ವ್ಯಾವಹಾರಿಕ ಮತ್ತು ಗ್ರಾಂಥಿಕ ಎಂದು ಎರಡು ತೆರನಾಗಿ ವಿಭಾಗಿಸುವುದುಂಟು, ವ್ಯಾವಹಾರಿಕವೆಂದರೆ ಜೀವದ್ಯಾಷೆ, ಅದರಲ್ಲಿ ಜನರು ಮಾತನಾಡುತ್ತಾರೆ, ವ್ಯವಹರಿಸುತ್ತಾರೆ. ಕನ್ನಡ, ತಮಿಳು, ತೆಲುಗು, ತುಳು, ಮರಾಠಿ, ಉರ್ದು, ಇಂಗ್ಲಿಷ್ ಇವು ಇದಕ್ಕೆ ಉದಾಹರಣೆ. ಗ್ರಾಂಥಿಕವೆಂದರೆ ಅಭಿವೃದ್ಧಿ ಹೊಂದಿ ಗ್ರಂಥ ರಚನೆಯಲ್ಲಿ ಉಪಯೋಗವಾದ ಭಾಷೆ, ಸಂಸ್ಕೃತ, ಕನ್ನಡ, ಇಂಗ್ಲಿಷ್, ಪಾಳಿ ಇತ್ಯಾದಿ ವರ್ಗಕ್ಕೆ ಉದಾಹರಣೆ. ಎಲ್ಲ ವ್ಯಾವಹಾರಿಕ ಭಾಷೆಗಳು ಗ್ರಾಂಥಿಕವಾಗಬೇಕಿಲ್ಲ. ತುಳು ಒಂದು ಸುಂದರ ವ್ಯಾವಹಾರಿಕ ಭಾಷೆ. ಆದರೆ ಅದು ಗ್ರಾಂಥಿಕ ಭಾಷೆಯಲ್ಲ. ಹಾಗೆಯೇ ಎಲ್ಲ ಗ್ರಾಂಥಿಕ ಭಾಷೆಗಳು ಇಂದು ವ್ಯಾವಹಾರಿಕವಾಗಿ ಇರುವುದಿಲ್ಲ. ದೇವಭಾಷೆ ಎನ್ನಿಸಿಕೊಂಡ ಸಂಸ್ಕತ ಸರ್ವ ಸಂಪನ್ನತೆಯಿಂದ ಕೂಡಿದ ಗ್ರಾಂಥಿಕ ಭಾಷೆಯಾಗಿದೆ. ಆದರೆ ಇಂದು ಯಾವೊಂದು ಪ್ರದೇಶದಲ್ಲಿಯೂ ಅದು ವ್ಯಾವಹಾರಿಕ ಭಾಷೆಯಾಗಿರುವುದಿಲ್ಲ.
ನವಶಿಲಾಯುಗದ ಮಾನವ, ಸಂಚಾರಿ ಜೀವನವನ್ನು ತ್ಯಜಿಸಿ ಒಂದು ಬೀಡುಬಿಟ್ಟು ಆಸ್ತಿ, ಮನೆ, ಬದುಕು ಮೊದಲಾದ ಭಾವನೆಗಳನ್ನು ತಳೆಯುವುದಕ್ಕೆ ಎಂದು ಮೊದಲು ಮಾಡಿದನೋ ಅಂದು ಆತನಿಗೆ ಲೆಕ್ಕವಿಡುವ ಅವಶ್ಯಕತೆ ಉಂಟಾಯಿತು. ಇದೇ ಲಿಪಿಯ ಉಗಮದ ಕಾಲವೆನ್ನುವರು. ಇದು ಸಹಜವೆಂಬುದನ್ನು ಪ್ರಸ್ತುತ ಉದಾಹರಣೆಯೊಂದರಿಂದ ಸಾಧಿಸಬಹುದು. ಯಾವ ಓದುಬರಹವಿಲ್ಲದ ಹಳ್ಳಿಯ ಕೆಲಸಗಾರನಾದರೂ ಸರಿಯೆ, ತಾನು ದಿನಗೆಲಸಕ್ಕೆ ಹೋದ ಲೆಕ್ಕವನ್ನು ಗೋಡೆಯ ಮೇಲೆ ದಿನಂಪ್ರತಿ ಒಂದೊಂದು
ಇದು ಗುರುತಿಸಿ, ಕೊನೆಯಲ್ಲಿ ಎಣಿಸಿ, ಲೆಕ್ಕಹಾಕಿ ಸಂಬಳವನ್ನು ಪಡೆಯುತ್ತಾನೆ. ಮಾರುವವರೂ ಹೀಗೆಯೇ ಲೆಕ್ಕವಿಡುವುದುಂಟು. ಅಲ್ಲಿ ವಿಮರ್ಶಕ ಸುಮೆರ್ (Super) ನೈಲ್ (ಈಜಿಪ್), ಕ್ರಿಟಗಿರಿ (Crete) ಇತ್ಯಾದಿ ಪ್ರದೇಶಗಳಲ್ಲಿ ಉಪಸ್ಥಿಬ್ಬವಾದ ಅತ್ಯಂತ ಪುರಾತನ ಅವಶೇಷಗಳು ವ್ಯಾಪಾರ, ವ್ಯವಹಾರ ಲೆಕ್ಕಗಳಿಗೆ ಸಂಬಂಧಿಸಿದ ಬಗೆಯ ಲಿಪಿ ಸಾಕ್ಷ್ಯಗಳನ್ನು ಕಂಡುಕೊಂಡಿದ್ದಾರೆ. ಇದೇ ಲಿಪಿಯ ಮೊದಲಿನ ಜಾಡು.
ಮುಂದೆ ಮಾನವನಿಗೆ ಬಿಡುವು ಹೆಚ್ಚಿದಂತೆ, ಜೀವನದ ಸೌಕರ್ಯಗಳನ್ನು ವಿಶಿಷ್ಟ ಮೇಧಾಶಕ್ತಿಯಿಂದ ಅಭಿವೃದ್ಧಿಗೊಳಿಸುತ್ತಾ ಹೋದಂತೆ ತನ್ನ ಆಗುಹೋಗುಗಳನ್ನು, ಸುಖ ದುಃಖಗಳನ್ನು ಕಾವ್ಯರೂಪಕ್ಕೆ ಇಳಿಸುವ ಮಾರ್ಗವನ್ನು ಕಂಡುಕೊಸ್ಥಿಡಿರಬೇಕು. ಸಾಹಿತ್ಯ. ವಿವಿಧ ರೂಪದಲ್ಲಿ ಬೆಳೆದಿರಬೇಕು. ಲೆಕ್ಕಪತ್ರಗಳನ್ನಿಡಲು ಉಪಯುಕ್ತವಾದ ಮೂಲಲಿಪಿಯನ್ನು ಮತ್ತಷ್ಟು ಪರಿಷ್ಕರಿಸುತ್ತಾ ಸುಂದರವಾದ ಸಾಹಿತ್ಯ ಕೃತಿಗಳನ್ನು ಬರೆದಿಡುವುದನ್ನು ಮಾನವ ಕಲಿತುಕೊಂಡ. ಲಿಪಿಯ ಮೂಲಕ ಪರಂಪರೆಯಿಂದ ಬಂದ ಎಷ್ಟೋ ವಿಷಯಗಳನ್ನು ಬರೆದಿಡಲು ಸಾಧ್ಯವಾಯಿತು. ಜ್ಞಾನ ಭಂಡಾರ ಭದ್ರವಾಯಿತು. ಸಂಸ್ಕೃತಿಯ ಇತಿಹಾಸ ಉಳಿಯಿತು. ಪ್ರಗತಿಪಥ ಸುಗಮವಾಯಿತು.
ಕನ್ನಡಕ್ಕೆ ಬಹಳ ಪ್ರಾಚೀನ ಕಾಲದಿಂದಲೂ ಸಂಸ್ಕೃತದ ಪೋಷಣೆ . ಚೆರೆಯುತ್ತ ಬಂದಿದೆ. ವೈದಿಕ ಹಾಗೂ ಜೈನ ಧಾರ್ಮಿಕ ತತ್ವಗಳನ್ನು
ಕನ್ನಡದಲ್ಲಿ ವಿವರಿಸಬೇಕೆಂಬ ಅಭಿಲಾಷೆಯಿಂದ ಅನೇಕ ಪಂಡಿತರು ಉತ್ತಮ * ಕಾವ್ಯಗಳನ್ನು ರಚಿಸಿದರು. ಆದರೆ ಅವರಲ್ಲಿ ಅನೇಕರು ಕನ್ನಡವನ್ನು 'ಸಂಸ್ಕತಮಯವನ್ನಾಗಿ ಮಾಡಿಬಿಟ್ಟರು. ಕನ್ನಡ ಮಾತ್ರ ತಿಳಿದವರಿಗೆ ಅವರ ರಚನೆ ಕಬ್ಬಿಣದ ಕಡಲೆಯೇ ಆಯಿತು. ಅವರ ಉದ್ದುದ್ದ ವಾಕ್ಯಗಳಲ್ಲಿ ಎಲ್ಲ ಸಂಸ್ಕೃತ ಶಬ್ದಗಳೇ ಒಂದು ಕ್ರಿಯಾಪದ ಮಾತ್ರ ಕನ್ನಡದಲ್ಲಿರುತ್ತಿತ್ತು. ಇಂಥ ಪರಿಸ್ಥಿತಿಯನ್ನು ಗಮನಿಸಿ ೧೨ನೆಯ ಶತಮಾನದ ನಯಸೇನ ಕವಿ ಹೀಗೆ ಹಲುಬಿದ.
"ಸಕ್ಕದಮಂ ಪೇಳ್ಕೊಡೆ ನೆಲೆ ಸಕ್ಕದಮಂ ಪೇಟ್ಟೆ ಶುದ್ಧ ಕನ್ನಡದೊಳ್ ತಂ ದಿಕ್ಕುವುದೆ ಸಕ್ಕದಂಗಳ ತಕ್ಕುದೆ ಬೆರಸಿ ಶೃತಮುಮಂ ತೈಲಮುಮಂ"
ನಮಗೆ ತುಪ್ಪವೂ ಬೇಕು; ಎಣ್ಣೆಯೂ ಬೇಕು. ಸಂಸ್ಕೃತವೂ ಬೇಕು: ಕನ್ನಡವೂ ಬೇಕು. ಆದರೆ ಎಣ್ಣೆ ತುಪ್ಪದ ಅಸ್ವಾದು ಮಿಶ್ರಣಬೇಡ ಎಂಬುದು ನಯಸೇನನ ಅಭಿಮತ.
ಅನೇಕ ಕವಿಗಳು ಕನ್ನಡ ಅಭಿವೃದ್ಧಿ ಹೊಂದಬೇಕಾದರೆ ಕನ್ನಡ ಪದಗಳ ಬಳಕೆ ಹೆಚ್ಚಾಗಬೇಕೆಂದು ಸಾರಿದ್ದಾರೆ. ಅಂಥವರ ವಾಣಿಯಿಂದ ಕನ್ನಡದ ವೀಣೆ ಮೃದು ಮಧುರವಾಗಿ ಮಿಡಿಯಿತು. ಮುಂದೆ ಬಸವೇಶ್ವರ, ಅಲ್ಲಮಪ್ರಭುಗಳಂತಹ ಶರಣವರೇಣ್ಯರು, ಚಾಮರಸ, ಕುಮಾರವ್ಯಾಸರಂತಹ ಕವಿಪುಂಗವರು, ಪುರಂದರದಾಸ, ಕನಕದಾಸರಂತಹ ದಾಸ ಶ್ರೇಷ್ಠರು ಸುಲಭ ಮಾರ್ಗವನ್ನೇ ತುಳಿದರು. ತಮ್ಮ ತಮ್ಮ ಅನುಭವ ಸಾರವನ್ನು ಸುಲಭವೂ ಸುಂದರವೂ ಸಹಜವೂ ಆದ ಮಾತುಗಳಿಂದ ಹೃದಯ ಮುಟ್ಟುವಂತೆ ಅಭಿವ್ಯಕ್ತಪಡಿಸಿದರು. ಹೀಗೆ ಕನ್ನಡ ಭಾಷೆ ಹದಗೊಂಡುದರಿಂದ ಅದು ಸುಲಿದ ಬಾಳೆಯ ಹಣ್ಣಿನಂತೆ, ಸಿಗುರುತೆಗೆದ ಕಬ್ಬಿನಂತೆ, ಉಷ್ಣ ಅಳಿದ ಹಾಲಿನಂತೆ ಸುಲಭವೂ ರುಚಿಯುಳ್ಳದ್ದೂ ಆಗಿದೆ ಎಂದು ಕವಿ ಮಹಲಿಂಗರಂಗ, ಉದ್ವೇಷಿಸಲು ಸಾಧ್ಯವಾಯಿತು.
ಒಂದು ಭಾಷೆ ಅನ್ಯಭಾಷೆಯಿಂದ ಏನನ್ನೂ ಎರವಲಾಗಿ ತೆಗೆದುಕೊಳ್ಳಬಾರದೆಂದು ಯಾರೂ ತಿಳಿಯಲಾಗದು, ನೆರೆಹೊರೆಯ ಭಾಷೆಗಳಲ್ಲಿ ಕೊಳುಕೊಡುಗೆಯ ವ್ಯವಹಾರ ನಡೆದೇ ನಡೆಯುತ್ತದೆ. ನಡೆಯಲೇಬೇಕು 'ಅದು ಸಜೀವ ಭಾಷೆಯ ಲಕ್ಷಣ ಆದರೆ ಸ್ವೀಕರಿಸುವಾಗ ತನ್ನತನವನ್ನು ಕಳೆದುಕೊಳ್ಳದಂತೆ ಕಾಪಾಡಿಕೊಳ್ಳಬೇಕು. ಹಿಂದೆ ಸಂಸ್ಕೃತ, ಪ್ರಾಕೃತ ಭಾಷೆಗಳಿಂದ (ತತ್ಸಮ ತದ್ಭವಗಳಾಗಿ) ಅನೇಕ ಶಬ್ದಗಳನ್ನು ಕನ್ನಡ ತನ್ನಲ್ಲಿ ಅಳವಡಿಸಿಕೊಂಡಿದೆ. ಮಹಮ್ಮದೀಯರ ಆಳ್ವಿಕೆಯ ಅವಧಿಯಲ್ಲಿ ಪರ್ಷಿಯನ್ ಭಾಷೆಯಿಂದ ಅನೇಕ ಶಬ್ದಗಳು ಕನ್ನಡಕ್ಕೆ ಬಂದಿವೆ..
ಉದಾಹರಣೆ - ದಿವಾನ, ಸರಕಾರ, ಮುನಷಿ, ಸರದಾರ, ಸವಲತ್ತು ಮುಸಾಫರ್, ಕಛೇರಿ, ಸುಭೇದಾರ, ಅಮಲ್ದಾರ, ತಹಸಿಲ್ದಾರ ಇತ್ಯಾದಿ ಆಡಳಿತಕ್ಕೆ ಸಂಬಂಧಪಟ್ಟ ಪಾರಿಭಾಷಿಕ ಶಬ್ದಗಳು ಕನ್ನಡನುಡಿ ಬೊಕ್ಕಸವನ್ನು ಸೇರಿಕೊಂಡಿವೆ.
ಹಾಗೆಯೇ ಅಸಂಖ್ಯಾತ ಇಂಗ್ಲಿಷ್ ಶಬ್ದಗಳು ಕನ್ನಡದ ಉಡುಪನ್ನು ಧರಿಸಿ ಒಳಗೆ ಬಂದುಬಿಟ್ಟಿವೆ. ರೈಲು, ಮೋಟರು, ಹೋಟ್ಲು, ಆಫೀಸು, ಇಸ್ಕೂಲು, ಸಿನಿಮಾ, ರೇಡಿಯೋ, ಆಸ್ಪತ್ರೆ ಕೋರ್ಟು, ಡಿಕ್ರಿ ಲೈಟು ಮೊದಲಾದವು ನಮ್ಮೆಲ್ಲರ ಮನೆ ಮಾತಾಗಿವೆ. ಪೋರ್ಚುಗೀಸಿನಿಂದ ಬಟಾಟೆ, ಅನಾನಸು, ಜಂಗಾಲ ಮುಂತಾದ ಕೆಲವು ಸ್ವಾರಸ್ಯ ಪದಗಳು ಆಗಮಿಸಿವೆ.
ಇವೆಲ್ಲಾ ಅನ್ಯದೇಶಗಳ ವಿಚಾರವಾಯಿತು. ಇನ್ನು ಕನ್ನಡದ ನೆರೆಯವರಿಂದ ಬಂದಿರುವ ಎರವುಗಳುಂಟು ಕನ್ನಡನಾಡಿನ ಎಲ್ಲೆಗಳಲ್ಲಿ ಕೆಲವೆಡೆ-ತಮಿಳು, ತೆಲುಗು, ಮಲೆಯಾಳಂ, ಮರಾಠಿಗಳನ್ನಾಡುವ ಜನರಿರುವುದು ಸರಿಯಷ್ಟೆ. ಅಂಥ ಗಡಿಪ್ರದೇಶಗಳನ್ನು ದ್ವಿಭಾಷಾ ಪ್ರದೇಶಗಳೆನ್ನುವರು. ಅಲ್ಲಿ ಸಾಮಾನ್ಯ ಜನರಿಗೆ ಎರಡೆರಡು ಭಾಷೆಗಳು ಬರುತ್ತಿರುತ್ತವೆ. ಕಾಸರಗೋಡಿನಲ್ಲಿರುವ ಕನ್ನಡಿಗರಿಗೆ ಮಲೆಯಾಳದ ವ್ಯವಹಾರ ಜ್ಞಾನವಿರುತ್ತದೆ. ಅಲ್ಲಿರುವ ಮಲಯಾಳಿಗಳಿಗೆ ಕನ್ನಡದ ವ್ಯವಹಾರ ಜ್ಞಾನವಿರುತ್ತದೆ. ಹಾಗೆಯೇ ಬಳ್ಳಾರಿ, ಅನಂತಪುರ ಜಿಲ್ಲೆಗಳ ಗಡಿಯಲ್ಲಿರುವ ಜನತೆಗೆ ಕನ್ನಡ, ತೆಲುಗು ಎರಡೂ ಬರುವುದು. ಸ್ವಾಭಾವಿಕವಾಗಿ ಗಡಿ ಜನರ ವ್ಯವಹಾರ ಸಂಪರ್ಕಗಳಿಂದ ನೆರೆ ಮಾತುಗಳಲ್ಲಿ ಕೊಳು ಕೊಡುಗೆ ನಡೆಯುತ್ತಲೇ ಇದೆ. ಇದರಿಂದ ಕನ್ನಡವೂ ಅದರ ನೆರೆನುಡಿಗಳೂ .ಪರಸ್ಪರ ಎರವುಗಳಿಂದ ಅಭಿವೃದ್ಧಿ ಹೊಂದುತ್ತಲಿವೆ.
ಭಾಷೆಯಲ್ಲಿದ್ದ ಸಾಮಗ್ರಿಯನ್ನೇ ಉಪಯೋಗಿಸಿಕೊಂಡು ಭಾಷಾಭಿವೃದ್ಧಿಯನ್ನು ಮಾಡುವ ಇನ್ನೊಂದು ವಿಧಾನ ನುಡಿಗಟ್ಟುಗಳಿಗೆ ಸೇರಿದುದು. ಎರಡು ಅಥವಾ ಹೆಚ್ಚು ಶಬ್ದಗಳು ಸೇರಿ ಒಂದು ನುಡಿಗಟ್ಟಾಗಿ ಅದಕ್ಕೊಂದು ನವೀನಾರ್ಥ ಬರುತ್ತದೆ. ಇದು ಎಲ್ಲ ಭಾಷೆಗಳಲ್ಲಿಯೂ ಕಾಣುವ ಸಹಜಶಕ್ತಿ, ವಿಚಿತ್ರ ಸಹಜಶಕ್ತಿ ಕನ್ನಡದಲ್ಲಿ ಅನೇಕ ಅಂದವಾದ ನುಡಿಗಟ್ಟುಗಳನ್ನು ಉಂಟು ಮಾಡಿರುತ್ತದೆ. ಕಣ್ ಎಂಬೊಂದು ಶಬ್ದದೊಡನೆ ಬೇರೆ ಶಬ್ದಗಳು ಸೇರಿ ನುಡಿಗಟ್ಟಾಗುವ ಸನ್ನಿವೇಶವನ್ನು ಗಮನಿಸಿ, ಕಣೋಳಿಸು, ಕಣ್ಣಿಡು, ಕಣ್ಯಟ್ಟು, ಕಣ್ಣುಹಾಕು (ಕಣ್ಣಾಕು), ಕಣ್ಣಾರೆ, ಕಣ್ಣೆಂಜಲು, ಕಂಗಾಲು, ಕಂಬನಿ, ಕಣ್ಣೀರು, ಕಣ್ಣಿಡು ಇತ್ಯಾದಿ. ನುಡಿಗಟ್ಟುಗಳನ್ನು ಪರಿಶೀಲಿಸಿದರೆ ಅವೆಲ್ಲದರಲ್ಲಿಯೂ ಬೇರೆ ಬೇರೆ ಹೊಸ ಅರ್ಥ ಬಂದಿರುವುದನ್ನು ಅರಿಯಬಹುದು.
ಒಂದು ಭಾಷೆ ಸತ್ವಪೂರ್ಣವಾಗಬೇಕಾದರೆ ಅದನ್ನಾಡುವ ಜನ ಅಭಿಮಾನಧನರೂ ಬುದ್ದಿಶಾಲಿಗಳೂ ಪ್ರಯೋಗಶೀಲರೂ ಆಗಿರಬೇಕು. ನಾಲೈದು ಶತಮಾನಗಳ ಹಿಂದೆ ಆಂಗ್ಲಭಾಷೆ ಯೂರೋಪಿನ ಸಾಮಾನ್ಯ ಭಾಷೆಗಳಲ್ಲಿ ಒಂದಾಗಿತ್ತು. ಆಂಗ್ಲ ಜನತೆ ಸಾಹಸಜೀವಿಯಾಯಿತು. ಬುದ್ದಿಶಾಲಿಯಾಯಿತು, ಸೂರ್ಯನು ಎಂದೂ ಮುಳುಗನೆನ್ನುವಂತಹ ವಿಸ್ತಾರವಾದ ಸಾಮ್ರಾಜ್ಯವನ್ನು ಸ್ಥಾಪಿಸಿತು. ದೇಶ-ವಿದೇಶಗಳ ಭಾಷೆ ಹಾಗೂ ಸಾಹಿತ್ಯ ಸಂಸ್ಕೃತಿಯನ್ನು ಆಂಗ್ಲ ಪಂಡಿತರು ಮುಕ್ತ ಮನಸ್ಸಿನಿಂದ ಅಭ್ಯಸಿಸಿದರು. ತನ್ಮೂಲಕ ತಮ್ಮ ಭಾಷೆ ಮತ್ತು ಸಾಹಿತ್ಯವನ್ನು ಹಿಗ್ಗಿಸಿದರು, ಅರಳಿಸಿದರು.
ಎಲ್ಲಕ್ಕೂ ಮೇಲಾಗಿ ಮಹಾ ಮೇಧಾವಿಗಳು ತಮ್ಮ ಆಸೆ, ಆಕಾಂಕ್ಷೆ, .ಬಾರ ಮುಂತಾದುವನ್ನು ಭಾಷೆಯ ಮುಖಾಂತರವಾಗಿಯೇ ಹೇಳಬೇಕೆಂಬ ಉಜ್ವಲ ಅಭಿಮಾನವುಳ್ಳವರಾಗಿದ್ದರು. ಆಂಗ್ಲ ವಿಜ್ಞಾನಿಗಳು, ರಾಜಕಾರಣಿಗಳು, ಅರ್ಥಶಾಸ್ತ್ರಜ್ಞರು ಹೀಗೆ ಎಲ್ಲರೂ ತಮ್ಮ ಭಾಷೆಯನ್ನೇ ಬಳಸಿದುದರ ಪರಿಣಾಮವಾಗಿ ಭಾಷೆ ಬೆಳೆದು ಇಂದು ಪ್ರಪಂಚದ ದೊಡ್ಡ ಭಾಷೆಗಳಲ್ಲಿ ಒಂದಾಗಿದೆ. ಇದಕ್ಕೆಲ್ಲ ಆಂಗ್ಲ-ಜನರ ಸಂಕಲ್ಪ, ಕೃಷಿ ಕಾರಣವೆಂದು ಬೇರೆ ಹೇಳಬೇಕಿಲ್ಲ.
ಸ್ವಭಾಷೆಯನ್ನು ಪ್ರೀತಿಸಬೇಕು, ಗೌರವಿಸಬೇಕು, ಬೆಳೆಸಬೇಕು ಎಂದರೆ ಅನ್ಯಭಾಷೆಗಳನ್ನು ತಿರಸ್ಕರಿಸಬೇಕು ಎಂದು ಅರ್ಥವಲ್ಲ. ಭಾಷೆಗಳಲ್ಲಿ ಮೇಲುಕೀಳೆಂಬುದಿಲ್ಲ. ನಾಲ್ಕು ಜನ ಮಾತನಾಡುತ್ತಿದ್ದ ಭಾಷೆಗೂ ನಲವತ್ತು ಲಕ್ಷ ಜನ ಮಾತನಾಡುತ್ತಿದ್ದ ಭಾಷೆಗೂ ಸತ್ಯ ಹಾಗೂ ಸತ್ಯದೃಷ್ಟಿಯಿಂದ ಅಂತರವೇ ಇಲ್ಲ. ಎಲ್ಲ ಭಾಷೆಗಳೂ ಅಷ್ಟೇ. ಒಬ್ಬ ತಾಯಿಯ ಗಾನದ ಶ್ರುತಿಯಂತೆ ಎಲ್ಲಕ್ಕೂ ಅಷ್ಟೇ ಸ್ಥಾನವಿದೆ. ಇದನ್ನರಿತು ಭಾರತೀಯರಾದ ನಾವು ನೆರೆಹೊರೆಯ ಭಾಷೆಗಳನ್ನು ದ್ವೇಷಿಸದೆ ನಮ್ಮ ನಮ್ಮ ಭಾಷೆಗಳನ್ನು ಗೌರವಿಸಿ, ಪ್ರೀತಿಸಿ ಅಭಿವೃದ್ಧಿಗೊಳಿಸಿದರೆ ದೇಶದ ಸಂಸ್ಕೃತಿ ಮುಂದುವರಿಯುತ್ತದೆ.

ಲೇಖಕರ ಪರಿಚಯ ಎಂ. ಮರಿಯಪ್ಪ ಭಟ್ಟ (೧೯೦೬-೧೯೮೦) : ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನ ಕಬಕ ಗ್ರಾಮದವರು. ಬಹುಭಾಷಾ ವಿದ್ವಾಂಸರಾದ ಅವರು ದ್ರಾವಿಡ ಭಾಷೆಗಳನ್ನು ತುಲನಾತ್ಮಕ ಅಧ್ಯಯನ ಮಾಡುವುದರೊಂದಿಗೆ ನಿಘಂಟು ರಚನೆಯಲ್ಲಿ ಅನುಪಮ ಸೇವೆಗೈದವರು. ಮದ್ರಾಸು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ದುಡಿದವರು. ತುಳು-ಇಂಗ್ಲಿಷ್ ನಿಘಂಟು, ಅಭಿನವ ಮಂಗರಾಜನ ನಿಘಂಟು, ಜಾತಲ ತಿಲಕಂ, ಛಂದಸ್ಸಾರ ಮೊದಲಾದ ಕೃತಿಗಳ-ಕರ್ತೃವಾಗಿ ಪ್ರಸಿದ್ಧರಾದವರು. ಅವರಿಗೆ ಕರ್ನಾಟಕ ಸರ್ಕಾರದ ಪುರಸ್ಕಾರ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಅಭ್ಯಾಸ/ಚಟುವಟಿಕೆ :
. ಭಾಷೆ ಸತ್ವಪೂರ್ಣವಾಗಿ ವಿಕಾಸಗೊಳ್ಳುವುದು ಯಾವಾಗ?
. ಕನ್ನಡ ಭಾಷೆ ಸಮೃದ್ಧವಾಗಿ ರೂಪುಗೊಂಡ ಬಗೆ ಹೇಗೆ? ವಿವರಿಸಿ.
ಲಿಪಿಯ ಮೂಲಕ ಜ್ಞಾನ ಭಂಡಾರ ಯಾವ ರೀತಿ ಭದ್ರವಾಯಿತು?
. ವ್ಯಾವಹಾರಿಕ ಮತ್ತು ಗ್ರಾಂಥಿಕ ಭಾಷೆಯ ಲಕ್ಷಣಗಳೇನು?
. ಭಾಷೆ ಯಾವುದಕ್ಕೆ ಸಾಧನವಾಗಿದೆ?

ಭಾಷೆ ಕುರಿತು ಹೆಚ್ಚಿನ ಮಾಹಿತಿಗಾಗಿ ವಿಕಿಪಿಡಿಯಾ ಮಾಹಿತಿ