ಈ ಬ್ಲಾಗ್ ಅನ್ನು ಹುಡುಕಿ

ಸೋಮವಾರ, ಜುಲೈ 17, 2017

ಜೀವನಪ್ರೀತಿ ಅನುಸರಿಸುವ ಹಕ್ಕು

ಜೀವನಪ್ರೀತಿ ಅನುಸರಿಸುವ ಹಕ್ಕು

ಮನುಷ್ಯನಿಗೆ ಸ್ವಾಭಿಮಾನ ಮುಖ್ಯವಾಗಿ ತನ್ನ ಸಖ್ಯದ ಬದುಕನ್ನು ತಂತಿಯ ಮೇಲೋ
ಮುಳ್ಳಿನ ಮೇಲೋ ಸಾಗಿಸುತ್ತಾನೆ.

ಇಲ್ಲಿ ಸಂಬಂಧ, ಜಾತಿ, ರೀತಿ ನೀತಿಗಳನ್ನು ಮೀರಲಾಗದ, ಮೀರಿದ್ದೇ ಮಹಾ ಹೀನಾಯವಾಗುವ ಜಡಬೇರುಗಳು ಕೂಡ ಇವನ ಹೆಗಲೇರುತ್ತವೆ.

ಇಂತಹ ಸಂದರ್ಭದಲ್ಲಿ ಹಳೆಯಬೇರುಗಳಿಗೆ ನಲುಗಿಹೋದ ಹೊಸ ಚಿಗುರುಗಳು ಇಂತಹ ಸಾಕ್ಷ್ಯಾಧಾರ.

ಇಲ್ಲಿ ಹೆಣ್ಣು ಗಂಡು ಮದುವೆ ಆಗಲೇಬೇಕಾ! ಆಗದಿದ್ದವರ ಕಥೆಗಳೇನು..
ಮನಸ್ಸಿನ ತೀರ್ಮಾನಗಳೇನು! ಅಬ್ಬಾ! ನಾವು ಗೋಡೆ ಬರಹಗಳಾಗಿದ್ದೇವೆ ಓದಲು ಚೆಂದ ಅದರಲ್ಲಿ ಬದುಕಿನ ಆನಂದ ಸಖ್ಯ ಸ್ವಲ್ಪ ಕಷ್ಟತಮ.

ಬದುಕನ್ನು ಹೋರಾಟದ ವಿಧಿ ನಾದದಲ್ಲಿ ಕೊಂಡೊಯ್ಯುವ ಹಕ್ಕಿರುವ ಪ್ರತಿ ಮನುಷ್ಯ ಸಮಾಜದ ಕೊಂಕಿಗಳಿಗೆ ಹೆದರುವ ಅಗತ್ಯವಿಲ್ಲ. ಸಮಾಜ ರೂಪಿಸಲ್ಪಟ್ಟಿದ್ದೇ  ಹೊರೆತು ಸೃಷ್ಟಿ ಅಲ್ಲ. ಮದುವೆ ಒಂದು ಉತ್ತಮ ಆಯ್ಕೆ, ಸ್ಪಷ್ಟವಾದ ಅಲೋಚನೆ ಅದರ ವಿಧಿ..
ಜಾತಿ ನೆಪಗಳಲ್ಲಿ ಇನ್ನು ಬೇಯುವ ಅಗತ್ಯವಿಲ್ಲ. ದುಡಿಯುವ ಮನಸ್ಸಿಗೆ ಬದುಕುವ ಕಲೆಗೆ ಜಾತಿ ಎಂದಿಗೂ ನೆರವಾಗಿಲ್ಲ.. ಆಗಂತ ಜಾತಿ ಕೆಟ್ಟದ್ದು ಅಲ್ಲ, ಅದೊಂದು ಹಿಂದಿನಿಂದ ಆಚರಿಸಲ್ಪಟ್ಟದ್ದು. ಅದಕ್ಕೆ ಶರಣಾಗುತ್ತಾ ಸಾಗುವ ಹೆಜ್ಜೆ ಹೆಜ್ಜೆಯ ಸಂಬಂಧಗಳಲ್ಲೂ ಊಹಿಸಲಾರದಷ್ಟು ಗಾಯಗಳಿವೆ..
ಬದುಕು ಒಂದು ಆಯ್ಕೆ. ಗೆಲ್ಲುವ ಧೀಮಂತಿಕೆ ನಮ್ಮನ್ನು ಸದಾ ಹರ್ಷಗೊಳಿಸುತ್ತದೆ. ಸೋಲನ್ನು ಎಂದಿಗೂ ಒಪ್ಪಿಕೊಳ್ಳುವ ಅಗತ್ಯಕ್ಕೆ ಸಿಲುಕಬಾರದು..
ಕೆಲವೊಮ್ಮೆ ಕೆಲವು ಅನಿವಾರ್ಯಗಳಿಗೆ ರಾಜಿಯಾಗುತ್ತಾ ಅದರಾಚೆಗೆ ಅತಿಬೇಗ ಬರುವ ಲಘಿಮಾಕೌಶಲ ಕಲೆಯ ಅರಿವು ಬೇಕು.

ಸೋತ ಕಗ್ಗಸಾರ, ನುಡಿಯಾದ ಗುರುಪಾಠ ಇವೆಲ್ಲವೂ ಪ್ರಮಾಣಿಕತೆಗೆ ಒದಗಿದ ಅತ್ಯಂತ ಹೀನಾಯ ಸೋಲುಗಳು. ಆದರೆ ನಿಜವಾಗಿಯೂ ಸಮಾಜ ಗೆದ್ದಿರುವುದು ಸ್ವತಂತ್ರ ಆಯ್ಕೆಯ ಪ್ರಾಮಾಣಿಕ ಸತ್ವದಲ್ಲಿ ಮಾತ್ರ.
ಅದನ್ನು ಜೀವನಪ್ರೀತಿ ಎನ್ನೋಣ...
ಯಾವುದೇ ಜೀವಿ ಇಲ್ಲಿ ಸುಂದರವಾಗಿ ಬದುಕನ್ನು ಸಾಗಿಸುತ್ತಿದೆ ಎಂದು ಗಮನಿಸಿದಾಗ ಅದಕ್ಕೆ ಜೀವನಪ್ರೀತಿಯೇ ಮೂಲಾಧಾರ. ಈ ಜಾತಿ, ಅಪ್ರಮಾಣಿಕ ಹಠಗಳು, ಹಿರಿತನದ ಜಡ್ಡು ಕಟ್ಟಳೆಗಳು ಬದುಕನ್ನು ರೂಪಿಸಲಾರವು ಅವು ನಮ್ಮನ್ನು ಸದಾ ಒಂದು ಬಂಧನದೊಳಗೆ ಕಾಣಲು ಯತ್ನಿಸುವ ಅಚರಣೆಗಳಾಗಿವೆ ಅಷ್ಟೇ.
ಬದುಕಿಗೆ ಜೀವನಪ್ರೀತಿ ಮೂಲತಳಹದಿ. ಇದರಿಂದ ಆಯ್ಕೆ ನಮ್ಮ ಸ್ವತಂತ್ರ, ಅಲೋಚನಾ ಪರವಾದ ಹಕ್ಕು. ಅನಿವಾರ್ಯತೆಯಲ್ಲ.

ಉದ್ಯೋಗ, ಆನಂದ, ನೆಮ್ಮದಿಯ ನಲ್ಮೆತನಗಳಿಗೆ ಜೀವನಪ್ರೀತಿ ಒದಗಿಸೋಣ ಇಲ್ಲಿ ಗೆದ್ದವರಿಗೆ, ಪ್ರಮಾಣಿಕತೆಗೆ ಎಂದಿಗೂ ಗೌರವ ಇದೆ.

ಹೀಗೂ ಸಾಗೋಣ ಬನ್ನಿ - ಅಂಕುರ

ಬುಧವಾರ, ಜೂನ್ 21, 2017

ಅವಳೆಂದರೆ..
ಅವಳೆಂದರೆ ಗರಿಕೆಯ ಹಾಗೆ
ಕಸವೆಂದರೂ ಪೂಜಿಸುವ
ಅಲಂಕಾರ ದ್ರವ್ಯ,
ಕಿತ್ತರೂ ಚಿಗುರುವ
ಜೀವಂತಕಾವ್ಯ.
-ಅಂಕುರ

ಭಾನುವಾರ, ಜನವರಿ 15, 2017

ಅನ್ನದೇಗುಲದೊಳಗೆ
ನಿನ್ನ ನಾ ಕಾಣುತಿಹೆ
ನಿನ್ನೊಳಗೂ ನಾ ಕಾಣಬಹುದೇ!

ನನ್ನೆದೆಯ ಇತಿಹಾಸ
ನಿನ್ನೆದೆಗೆ ಮಧುಪ್ರಾಸ
ಬಡತನವೆ ಇರಲಿ
ಬಾಳ ಕೊನೆಗೆ..

ಎಲ್ಲದೇವರನಿಲ್ಲಿ
ಆಯ್ದು ಹುಡುಕುತಲಿರುವೆ
ನನ್ನ ಜೀವದ ದೇವ
ನೀನೆ ಇಲ್ಲಿ..

ಕುರುಡೆಂಬ ಕತ್ತಲೆಗೆ
ಬರಡು ಬೀಜವ ಬಿತ್ತಿ
ಇದು ಜೀವದೆರಡು
ಸೊಲ್ಲು ಕೇಳು ಇಲ್ಲಿ

ನಾ ನಿನಗೆ ನೀ ನನಗೆ
ನಿನ್ನಾಗೆ ನನ್ನನಗೆ
ಇರಲಿ ಬಿಡು ಬೆವರೂಟ
ಈ ಬಾಳ ಪದಿಗೆ..
- ಅಂಕುರ

*ಎನಿಸುತ್ತದೆ*

 ಒಬ್ಬನೇ ಏಕಾಂತ
ವಹಿಸೋಣ
ಎನಿಸುತ್ತದೆ,

ಯಾರಿಗೂ ಅರ್ಥವಾಗದ
ದನಿಯ ನಿಲ್ಲಿಸೋಣ
ಎನಿಸುತ್ತದೆ,

ನಮ್ಮನ್ನೇ ನಾವು
ನೀಡುತ್ತಾ ಬೇಡುತ್ತಾ
ನನ್ನನಿಮ್ಮೊಳಗೆ
ಕಾಣಲೊರಟ ಎನಗೆ
ನನ್ನ ತನವನ್ನೇ
ಕ್ಷಣ ನೋಡದೆ, ಕಾಡದೆ..
ನಮ್ಮವರೆಲ್ಲ
ದೂರವಾಗುವಾಗ
ನನಗೆ ನಾನೇ
ಅನರ್ಥ
ಎನಿಸುತ್ತದೆ

ಆ ಕಾಡಿನ ಆ ಕೂಗಲಿ
ಒಬ್ಬನೇ ಸುತ್ತುವ ಪರಿಯು
ನೀರಲಿ ಬೆರಳುಗಳ
ಅರಳಿಸುವ ಆ ಹೊಳಪು
ನನ್ನ ಪೂರ್ಣ ರಾಜ್ಯ
*ನಾನಲ್ಲಿ ಮೌನಿ, ಚಿರಸುಖಿ*.
-ಅಂಕುರ

ಸೋಮವಾರ, ಅಕ್ಟೋಬರ್ 3, 2016

@4
ರನ್ನ ಕವಿ ಪ್ರಶಸ್ತಿ
ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಗೊಳಿಸಿರುವ ಈ ಕೃತಿಯನ್ನು 1928ರ ಕಾಲಘಟ್ಟದಲ್ಲಿ ಮೈಸೂರಿನ ವಿಶ್ವವಿದ್ಯಾಲಯ ಸಂಘ ಪ್ರಕಟಗೊಳಿಸಿತ್ತು. ಈ ಕೃತಿಗೆ ತನ್ನದೇ ಆದ ಐತಿಹಾಸಿಕ ಮಹತ್ವವಿದೆ. ಒಬ್ಬ ಕವಿಯನ್ನು ಕುರಿತು ಹಲವು ಸಾಹಿತ್ಯ ವಿದ್ವಾಂಸರು ಲೇಖನಗಳನ್ನು ರಚಿಸಿ ಮೊದಲಬಾರಿಗೆ ಕವಿ ಹಾಗೂ ಕೃತಿ ಕೇಂದ್ರಿತ ವಿಮರ್ಶೆಯನ್ನು ಮಂಡಿಸಿದ್ದಾರೆ. ಅಂತಹ ಅಧ್ಯಯನಕ್ಕೆ ಒಳಗಾದ ಕನ್ನಡದ ಮೊದಲ ಕವಿ ರನ್ನನಾಗಿದ್ದಾನೆ. ಪಂಪ ಕವಿ ಕುರಿತು ಇದೇ ಮಾರ್ಗದಲ್ಲಿ ಮುಳಿಯ ತಿಮ್ಮಪ್ಪಯ್ಯ 1938ರಲ್ಲಿ ನಾಡೋಜ ಪಂಪ ಕೃತಿ ಹೊರತಂದರು.  ಮುಖ್ಯವಾಗಿ ಕೃತಿ ವಿಮರ್ಶೆ ನೀಡುವುದು  ಇಲ್ಲಿನ ಉದ್ದೇಶವಲ್ಲ. ಮುಖ್ಯವಾಗಿ ರನ್ನಕವಿ ಪ್ರಶಸ್ತಿ ಕೃತಿಗೆ ಬರೆದಿರುವ ಮುನ್ನುಡಿ ಬರಹ ಶತಮಾನಕೂ ಸಲ್ಲುವ ಸಾಹಿತ್ಯ ವ್ಯಾಖ್ಯಾನವನ್ನು ಬಿ.ಎಂ.ಶ್ರೀ ಕಂಠಯ್ಯ ನೀಡಿದ್ದಾರೆ. ವಿಮರ್ಶೆ ಎಂದರೇನು?, ವಿಮರ್ಶಕನು ಯಾವ ಜ್ಞಾನವನ್ನು ಹೊಂದಿರಬೇಕು?, ಸಾಹಿತ್ಯ ಸೃಷ್ಠಿಗೆ ಇರಬೇಕಾದ ಭಾಷಾ ಚಿಂತನೆ., ಉತ್ತಮ ಸಾಹಿತ್ಯ ಗುರ್ತಿಸುವಲ್ಲಿ ವಿಮರ್ಶಕನ ಪಾತ್ರ, ಈ ಅಂಶಗಳು ಚರ್ಚೆಯಾಗಿವೆ. “ಕನ್ನಡ ಕಾವ್ಯ ರಾಶಿಯನ್ನು ಹೊರಕ್ಕೆ ತಂದು ಹೆಮ್ಮೆಪಟ್ಟದ್ದಾಯಿತು. ಈಗ ಬೇಕಾಗಿರುವುದು ಅದರ ಯೋಗ್ಯತೆಯನ್ನು ಗೊತ್ತು ಮಾಡುವ ವಿಮರ್ಶೆ. ಜಳ್ಳನ್ನು ತೂರಿ, ಕಾಳನ್ನು ತುಂಬಿಕೊಳ್ಳಬೇಕಾಗಿದೆ ಈಗ, ಸಾಹಿತ್ಯ ಕಲಾ ಪುತ್ರರ ಆತ್ಮ ಪುಷ್ಟಿಗಾಗಿ”.
(ಕೃತಿ ಕುರಿತ ಅಧ್ಯಯನ ನನ್ನ ‘ವಿಮರ್ಶೆಯ ಕಾವು’ ಲೇಖನದಲ್ಲಿ ತಿಳಿಯಬಹುದು)

 ಕೈಬುಟ್ಟಿಯ ಕ ನಸುಗಳು


ವಿನಃ ನಾಯಕ
      ವಿನಾಯಕನನ್ನು ದೇವರಿಗೆಲ್ಲಾ ಮೊದಲ ಪೂಜಿತನೆಂದುನೆಂದು ಧರ್ಮ ರೂಪಿಸಿಕೊಂಡಿದ್ದೇವೆ. ಅಂತೆಯೇ ವರ್ಷಕ್ಕೊಮ್ಮೆ ತಾಯಿ ಮಗನ ಪೂಜಿಸಿ ಹರ್ಷ ಪಡುತ್ತೇವೆ.
     ಅತ್ಯಂತ ಹೆಚ್ಚಾಗಿ ಸಮಾನ ಭಕ್ತಿ, ಶ್ರದ್ಧೆ ಪಡೆಯುವ ದೇವರು ವಿನಾಯಕನೇ ಇರಬೇಕು. ಆದರೇ ಕಡುಕಷ್ಟವಯ್ಯಾ ನಿನ್ನ ಆರಾಧನೆಯೆಂದು ಒಂದು, ಮೂರು, ಐದು, ಹನ್ನೊಂದು ಮತ್ತೆ ಊರಿನ ಭಕ್ತರು ಕಾಣಿಕೆ ಹೆಚ್ಚಿದಂತೆ ಬೆಸಸಂಖ್ಯೆಯ ದಿನದೂಡಿ ಸಂಭ್ರಮಿಸಿ, ಕೆಲವು ಕಡೆ ಆಟ, ಹಾಡು ಎಂದಾದರೆ ಮತ್ತೆ ಅದೇ ಮಹನೀಯರು ಸಿನಿಮಾ ಹಾಡಿಗೆ ಹುಚ್ಚರಂತೆ ಒನ್ಸಮೋರ್ ತೆಲುಗು ಅನ್ನುವ, ನಿದ್ರೆಯ ಪಾನಂಧತೆಯಲ್ಲೇ ನೀರಿನೊಳಗೆ ಗಣಪತಿ ಬಪ್ಪ ಮೋರಿ ಯಾ ಅನ್ನುವ ಭಕ್ತರ ಬೇಡಿದ್ದನೇ ಕೊಡುವ ಈ ವಿನಾಯಕ ವಿನಃ ನಾಯಕನೇ ಇರಬೇಕು. ಎ. ಎನ್ ಮೂರ್ತಿರಾವ್ ದೇವರು ಕೃತಿ ರಚಿಸಿದ್ದು ಸಾರ್ಥಕವೇ? ಅದನ್ನು ಓದಿ ಚೆಂದ ಈ ಚಂದ ಲೈಫ್ ಅನ್ನುಕೊಂಡವರ ಅವರವರ ವಿನಾಯಕನೇ ಕಾಪಡಬೇಕು.
ತಿಲಕ್ ಅವರಿಗೆ ಕಾಲಜ್ಞಾನ ತಿಳಿದಿದ್ದರೆ ಸ್ವಾತಂತ್ರ್ಯ ಸಂಘಟನೆಗೆ ಬೇರೆಯೇ ಯೋಚಿಸುತ್ತಿದ್ದರು ಅಲ್ಲವೇ!
ಗುರುಸಮಾಜ ಪರಿವರ್ತನ
       ಸಂವಿಧಾನದ ಪೀಠಿಕೆಯಲ್ಲೇ ಜಾತ್ಯಾತೀತ ಘೋಷಿಸಿಕೊಂಡ ಸರ್ವಧರ್ಮ ಅಭಿವೃದ್ಧಿಶೀಲ ಭಾರತೀಯರು ನಾವು.
ಜಾತಿ ಕಾಲಂ ಇಲ್ಲದ ಯಾವುದಾದರೂ ಅಪ್ಲಿಕೇಷನ್ ಉಂಟೇ! ಜಾತಿ ಸಂಬಂಧ ಅನ್ನೋ ಕರಳು ಜೀವಾತ್ಮಕ ಒಗ್ಗಟ್ಟಿನ ಸಂಕೇತವಾಗಿ ಪರಂಪರೆಯಿಂದ ಬಂದಿರೊದು ಸಹಜ.
ಜಾತಿ ನಾಶವಾಯಿತು
ತೊಡುವ ವೇಷವಾಯಿತು
ಅನ್ನೋ ತರಾ ತರಗತಿ ಗುರುಗಳ ಬದುಕು ಕೂಡ. ಜಾತಿ ಧರ್ಮದ ಆಚೆ ನಿಂತು ಯೋಚಿಸೋ ಪಾಠಗಳನ್ನೇ ಭ್ರಮಾಪತಂಗಗಳಿಗೆ ರಸವತ್ತಾಗಿ ಉಣಬಡಿಸೊ ಗುರುಗಳು ‘ಎಸ್ಸಿ ಎಸ್ಟಿಯರೋ ಸ್ವಲ್ಪ ಎದ್ದು ನಿಲ್ರಪ್ಪಾ ನಿಮ್ಮ ಲಿಸ್ಟ್ ಬರಕೋಬೇಕು’ ಅನ್ನೋ ಜ್ಯಾತ್ಯತೀತತೆ ಗುರುವೃತ್ತಿ ಸಮೀಕ್ಷೆ ಫಾರಂ ಹೊತ್ತು ಮನೆ ಮನೆ ಅಲೆದು ಜಾತಿ ಆದಾಯ ಬರೆದು ಸುಸ್ತಾದವರ ಕಥೆಯನ್ನಾದರೂ ಪಠ್ಯ ಮಾಡಬಾರದೆ!
ಜಾತಿನೂ ಕೆಲವರಿಗೆ ಲಾಭ ಮಾಡೋದಾದ್ರೆ ಬಲಿ ಆಗೋ ಪ್ರಾಣಿ ಯಾವುದಾದ್ರೆನು.. ಅಲ್ಲವೇ!
ಆತ್ಮ -ಜ್ಞಾನ
      ಆತ್ಮ ಎಂಬ ವಿಚಾರ ಒಂದು ಪಂಥಕ್ಕೆ ಅನ್ನುವ ಮಾತಾಗಿದೆ. ಸದಾ ವೃತ್ತಿಯಲ್ಲೆ ತೊಡಗಿ ಆ ಜಂಜಾಟಕ್ಕೆ ಲೀನವಾದವರ ಮುಂದೆ ಇದೊಂದು ಒಣ ಹರಟೆ. ಆದರೆ ಅವರ ಬದುಕೆ ನಿಜವಾದ ಆತ್ಮಜ್ಞಾನ ಅಂತ ತಿಳಿಸೋದು ಹೇಗೆ! ನಮ್ಮ ಭಾಷಣಕಾರರು ವೇದಿಕೆಯಲ್ಲೇ ಚಿಂತಿಸೋದು ಆದ್ರೆ ಆತ ಇಲ್ಲಿಗೆ ಬರಲಾರ.
ಸಿನಿಮಾ ಹಿಂದೆ
      ಸಿನಿಮಾ ಅನ್ನೋ ಬಣ್ಣದ ಲೋಕದ ಹಿಂದೆ ಸಾವಿರಾರು ಜನ ಪರಿಶ್ರಮ ಇದೆ ಅಂತ ಎಲ್ಲರಿಗೂ ಗೊತ್ತಾಗಬಹುದು. ಆದ್ರೆ ಅವರ್ಯಾರು ಮುಖ್ಯ ಆಗ್ಲೇಯಿಲ್ಲ. ಕೆಲವರು ಕಾಣ್ತಾರೆ ಕೆಲವರು ಕಾಣೋಲ್ಲ. ಇವರೆಲ್ಲಾ ಕಾವಲುಗಾರ ಇದ್ದಾಂಗೆ ದೇಶ ಆಗ್ಲಿ ಮನೆ ಆಗ್ಲಿ. ಬಿ.ಎಂ ಪುಟ್ಟಯ್ಯ ಗುರುಗಳು ಪಾಠದಲ್ಲಿ ಹೇಳಿದ್ದು ನೆನಪಿದೆ ರಾಜನ ಹೊತ್ತು ಕುದುರೆ ಬರುತ್ತೆ ಹೊರೆತು ರಾಜ ಎಂದಿಗೂ ಬರಲಾರ ಅವನು ಕುಳಿತಿರುತ್ತಾನೆ. ಸಮಾಜದ ರಚನೆಯೇ ಹೀಗೆ ಕಾಣುತ್ತೆ ಅನಿಸುತ್ತದೆ.
ಭಾಷೆ
     ನಾವು ಕಲಿಯುವ ಭಾಷೆಗೆ ಇದೇ ಸರಿಯಾದ ಉತ್ತರ ಅಂತ ಹೇಳಿಕೊಂಡು ಬರಲಾಗುತ್ತಿದೆ. ನಾವು ಕೊದುವ ಹೆಸರು, ಸಂಖೇತ, ಕಾರ್ಯ ಇದೆಲ್ಲಾ ನಾವು ಗ್ರಹಿಸಿರೋ ರೀತಿ ಅಲ್ಲವೆ, ಇದು ತಿಳಿದಿದ್ದರೂ ಪರಂಪರೆಯಂತೆ ಮುಂದುವರೆಸುತ್ತಿದ್ದೇವೆ. ಗ್ರಹಿಕಯಲ್ಲೇ ವಿಶ್ವದ ವಿಶ್ವಾಸ ಗಳಿಸೋ ಅದಷ್ಟೋ ಅಂಧರ ಗ್ರಹಿಕೆಗಳಿಗೆ ನಮ್ಮ ಕಲ್ಪನಾ ಭ್ರಮೆಗಳನ್ನೇ ಹೇರುತ್ತಿದ್ದೇವೆ ಅನಿಸುವುದಿಲ್ಲವೇ. ಬದಲಿ ಯೋಚಿಸಬಹುದು ಅನಿಸಿದರೂ ಅದು ಕೂಡ ಅಮುಖ್ಯ ಅನಿಸಬಹುದು ಎಕೆಂದರೆ ಕಾರ್ಯ ಮುಖ್ಯವೇ ಹೊರೆತು ವಸ್ತು.ವ್ಯಕ್ತಿ.ಹೆಸರು ಇವೆಲ್ಲಾ ಈ ಅಲೋಚನೆಯಲ್ಲಿ ಶೂನ್ಯ ಆಗಬಹುದು.
ಮಗುವಿನ ಆಯ್ಕೆ
      ಮಕ್ಕಳ ಆಯ್ಕೆಯ ಸ್ವಾತಂತ್ರವನ್ನು ನಾವು ದೊಡ್ಡವರು, ತಿಳಿದವರು, ಏನೇನೆಲ್ಲಾ ಭಾವನೆಗಳೊಂದಿಗೆ ಕಿತ್ತುಕೊಂಡು ನಮ್ಮ ಭ್ರಮೆಗಳನ್ನೆ ಹೇರುತ್ತಿದ್ದೇವೆ ಅನಿಸುತ್ತದೆ. ಮಕ್ಕಳು ತಮಗಿಷ್ಟದ ಹೆಸರು, ಧರ್ಮ-ಜಾತಿ, ಬದುಕುಗಳನ್ನು ಸಮಾಜಮುಖಿಯಾಗಿ ಪ್ರೌಢವಾಸ್ಥೆಯ ನಂತರ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ ನೀಡಬಹುದಲ್ಲವೇ.. ಮನುಷ್ಯ ಪ್ರಾಣಿ ಬಿಟ್ಟು ಉಳಿದೆಲ್ಲಾ ಪ್ರಾಣಿಗಳು ಸಾಮಾನ್ಯವಾಗಿ ನೀಡಿರಬಹುದೆನಿಸುತ್ತದೆ. ಆದರೆ ಇತ ಮನುಷ್ಯ, ಸೃಷ್ಠಿಕರ್ತ ಅಷ್ಟಾದರೂ ಹಕ್ಕು ಬೇಡವೆ! ಹೀಗೂ ಅನಿಸಬಹುದು. ಕೆಲವರಿಗೆ ಇದು ಕರ್ತವ್ಯ.. ಹಲವರಿಗಿದು ಸಮಾಜ ಪ್ರಕ್ರಿಯೆ ಸತ್ಯ ಯಾವುದೋ ಇರಬೇಕು. ತಮ್ಮ ಹೆಸರನ್ನೂ ಮಕ್ಕಳ ಹೆಸರಿನೊಂದಿಗೆ ಪರಂಪರೆಯಂತೆ ಮುಂದುವರೆಸುವಾಗ ಅದೆಷ್ಟು ದಿನ ಈ ಬಾಲಲೀಲೆಯನ್ನು ಹೊತ್ತು ಸಾಗಬೇಕೋ ಈ ಮಕ್ಕಳು!.
ಕೃತಿ
     ಇದೊಂದು ಶಾಶ್ವತ ರೂಪ. ವಿಶ್ವಾಸದ ವಿಶ್ವ. ಬರಹ, ದನಿ ನೋಟ ರೂಪಗಳು ಬೇರೆ ಇರಬಹುದು. ಜಗತ್ತಿನಲ್ಲಿ ಯಾವುದು ಪೂರ್ಣ ಕೃತಿ ಅಲ್ಲ ಅನಿಸಬಹುದು. ಆದರೆ ಆ ಕ್ಷಣಕ್ಕೆ ಪೂರ್ಣವಾಗಿ ಒಪ್ಪಿಕೊಳ್ಳುತ್ತೇವೆ. ಅದಕ್ಕೆ ನಂಬಿಕೆ, ಸತ್ಯ, ತೃಪ್ತಿ ಎನೆಲ್ಲಾ ಭಾವ ಕೀಲಿಕೈಗಳನ್ನು ರಿಪೇರಿ ಮಾಡಿರುತ್ತೇವೆ. ಹಾಗದ್ರೆ ಅಪೂರ್ಣ ಇರಬಹುದಾದುದು ಅದು ಕೊರತೆ, ನೋವು ಈ ಹೆಸರುಗಳನ್ನು ಪಡೆದಿರಬಹುದು. ಅಯ್ಯೋ! ದೇವರೇ ಅಪೂರ್ಣ. ನಾಸ್ತಿಕ ಜಗತ್ತು ನಾನು ನನ್ನಾಸೆಯೇ ಅಪೂರ್ಣ. ಇದು ಶ್ಲೋಕದಿಂದಲೇ ಅರ್ಥವಾಗಬೇಕು ಎಂದೇನು ಅಲ್ಲ, ಅನಕ್ಷರಸ್ಥನಾಗಿಯೂ ಈ ವಿಚಾರದಲ್ಲಿ ಉತ್ತಮವಾಗಿ ಮಾತನಾಡಬಹುದು.
ಜ್ಞಾನಂ ವಿಜ್ಞಾನಂ  
ಶೋಧನೆಯ ಸರಿಗಮದಲ್ಲಿರುವ ವಿಜ್ಞಾನವೇ ತನ್ನ ಪರಿಧಿಗಳನ್ನು ಬದಲಾವಣೆಯೊಂದಿಗೆ ಒಪ್ಪಿಸುತ್ತಾ, ಒಪ್ಪಿಕೊಳ್ಳುತ್ತಾ ತಾತ್ಕಾಲಿಕ ಸತ್ಯಗಳನ್ನು ಸಮನ್ವಯಗೊಳಿಸುತ್ತಿದೆ. ಶಾಸ್ತ್ರವೆಂಬುದು ಈಗಾಗಲೇ ಗುರಿಮುಟ್ಟಿರುವ ಅಂತಿಮ ಫಲಶೃತಿಯಲ್ಲಿ ನಾನ ವೇಷಗಳಲ್ಲಿ ಜನರಿಗೆ ದರ್ಶನವಾಗುತ್ತಿದೆ. ಶಾಸ್ತ್ರವೂ ಸುಳ್ಳಿನ ಕಂತೆಯೆಂದು ಶಾಸ್ತ್ರಕ್ಕೆ ತಿಳಿದು ದೇವರು, ದೆವ್ವ, ಗೌರವ-ನಂಬಿಕೆಗಳ ಭಯದಲ್ಲೇ ಸಮಾಜವನ್ನು ನಿಯಂತ್ರಿಸುತ್ತಿದೆ. ಇದು ಅಕ್ಷರದ ಕೊರತೆಯಲ್ಲ. ಬಾವಿಯೊಳಗಿನ ಕಪ್ಪೆಗಳ ಗುರುಕುಲ ತಂತ್ರ ! ಹಾಗಾದರೆ ವಿಜ್ಞಾನವನ್ನು ಒಪ್ಪಿಕೊಳ್ಳಬೇಕೆ, ಇಲ್ಲ ಶಾಸ್ತ್ರ ಸಾರುವುದೆಲ್ಲಾ ಸತ್ಯವೇ! ಉತ್ತರ ಹುಡುಕಾಡಿದರೆ ಯೋಚಿಸಬೇಕು ಎಂಬುವವರೆ ಜಾಸ್ತಿ ! ಇವರಿಗೆ ಸಾಮಾನ್ಯವಾಗಿ ಭಯವೇ ಬುನಾದಿ ಇಲ್ಲವೇ ಭದ್ರ.

ಶುಕ್ರವಾರ, ಸೆಪ್ಟೆಂಬರ್ 30, 2016

                        @2

                    ಕನಕದಾಸರ ಮರು ಓದು: ಏಕೆ? ಹೇಗೆ?

ಕನಕ ರೂಪಿಸಿದ ಚಿಂತನೆ ಮತ್ತು ಕರ್ನಾಟಕದ ಪರಂಪರೆಯ ಮುಖಾಮುಖಿಯ ನೆಲೆಗಳು

    ಕರ್ನಾಟಕವೂ ಮೂಲತಃ ಜನಪದ ಪರಂಪರೆಯ ಬೇರಿನಿಂದಲೇ ಉದಿಸಿತು. ಇಲ್ಲಿಯ ಎಲ್ಲಾ ಸಾಂಸ್ಕøತಿಕ ಆಯಾಮಗಳು ಇಂತಹ ಪಲ್ಲಟಗಳಿಂದಲೇ ಉತ್ತರ ಕಂಡುಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿವೆ. ಸಾಹಿತ್ಯದ ಅಭಿವ್ಯಕ್ತಿಯ ಕ್ರಮವೇ ವಿಭಿನ್ನವಾದುದು. ಇದೇ ದೃಷ್ಠಿಯಿಂದ ಸಂಗೀತ ವಾಙ್ಮಯವು ಶಾಸ್ತ್ರೀಯದಂತೆ ಜನಪದರ ನೆಲೆಯಲ್ಲೂ ಮೂಡಿ ಸಾಹಿತ್ಯವನ್ನು ಉದುಗಿಸಿಕೊಂಡಿತ್ತು. ಅಂತಹ ಸಾಹಿತ್ಯದ ಎಳೆಗಳು ವಚನ, ಕೀರ್ತನೆ, ಹಾಡುಗಳ ರೂಪದಲ್ಲಿ ಪ್ರಸರಣಗೊಂಡು ಅದು ನೀತಿಯೋಪಾದಿಯಲ್ಲಿ ಶಕ್ತಿ ಹಾಗೂ ಭಕ್ತಿಯ ಸಮನ್ವಯ ಮಾರ್ಗವನ್ನು ಕುರಿತು ಇಪ್ಪತ್ತನೆಯ ಶತಮಾನದವರೆಗೂ ಒಂದು ಪರಂಪರೆಯ ರೀತಿ ಬೆಳೆದು ತುಂಬಾ ವಿಸ್ತಾರವಾದ ಆಯಾಮವನ್ನು ಪಡೆಯುತ್ತಿವೆ.
    15ನೇ ಶತಮಾನದಲ್ಲಿ ರಚನೆಗೊಂಡಿರಬಹುದೆಂಬ ಸಾಹಿತ್ಯದ ಆಧಾರದ ಮೇಲೆ ಕನಕದಾಸರ ಕಾಲಮಾನ ತನ್ನ ಪೂರ್ವಕ್ಕೂ ಹಾಗೂ ಪ್ರಸ್ತುತತೆಗೂ ಒಂದು ಪರಂಪರೆಯನ್ನೇ ರೂಪಿಸಿದೆ ಎಂದು ಅಭಿಪ್ರಾಯಪಡಬಹುದು. ಇಲ್ಲಿ ಪರಂಪರೆಯನ್ನು ಬೇರೆ ಬೇರೆ ರೀತಿಯಲ್ಲಿ ನೋಡುವುದಾದರೂ ಕನಕದಾಸರ ಸಾಹಿತ್ಯ ಮತ್ತು ಅವರ ಆದಿಕೇಶವನ ಭಕ್ತಿ ಎಲ್ಲದಕ್ಕೂ ಅನ್ವಯಗೊಳ್ಳುತ್ತಲೇ ಬೆಳೆವಣಿಗೆ ಸಾಧಿಸುತ್ತಾ ಮತ್ತೆ ಮರು ಓದುವಿಗೆ ದಕ್ಕುತ್ತಿರುವುದು “ಶ್ರೇಷ್ಠ ಸತ್ವ” ಎಂದೇ ಕಾಣುತ್ತದೆ.
    ಕನಕದಾಸರ ಸಾಹಿತ್ಯದ ಮೇಲೆ ಉಂಟಾಗಿರುವ ಅಧ್ಯಯನಗಳನ್ನು ಗಮನಿಸಿದರೆ ಸಂಶೋಧನೆಗಳು, ಗಣಕಾನ್ವಯ, ದರ್ಶನ ಸಂಪುಟಗಳು ಇವೆಲ್ಲಾ ಶಿಸ್ತು ಬದ್ಧವಾಗಿಯೇ ನಡೆದಿವೆ. ಇನ್ನೂ ಕೀರ್ತನೆಗಳಂತೂ ಸಾಮಾನ್ಯರ ಹಾಡುಗಳಾಗಿ ಬೆಳೆದು ಬಂದು ದೇವರ ಸನ್ನಿಧಿಯ ಡಾಳಗಳಾಗಿವೆ ಎಂದು ಬಾಹ್ಯ ನೋಟದಲ್ಲಿ ಗಮನಿಸಬಹುದು. ಆದರೆ ದಾಸಪರಂಪರೆಯ ಸಾಹಿತ್ಯ ನಿರ್ಮಿತಿಯು ವಚನ ಸಾಹಿತ್ಯದಷ್ಟು ಜನರ ಬಳಿ ಸಾಗದೇ ಇರುವುದು ಅದರ ದೌರ್ಬಲ್ಯವಲ್ಲ, ಮಿತಿಯು ಅಲ್ಲ, ಅದು ಹೊಂದಿರುವ ಭಕ್ತಿ ಮಾರ್ಗ. ಸಾಹಿತ್ಯದಲ್ಲಿ ಯಾವುದೇ ಪರಂಪರೆ ಮುಖ್ಯವಾಗಿ ನಿಲ್ಲದೇ ಅಮುಖ್ಯವಾಗಿ ಮರೆಯಾಗದೇ ವಿಶ್ವಮಾನವತ್ವಕ್ಕೆ ಸ್ವಯಂ ಏಣಿಗಳನ್ನು ನಿರ್ಮಿಸುವ ಪ್ರಕ್ರಿಯೆಯೇ ನಿಜವಾದ ಬೆಳವಣಿಗೆ. ಇದೊಂದು ಕನ್ನಡ ಸಾಹಿತ್ಯದ ವೈಶಿಷ್ಟ್ಯ.
    ‘ರಾಮಧಾನ್ಯ ಚರಿತೆ’ ಕನಕದಾಸರ ಕಥನರೂಪದ ಕಾವ್ಯ. ಇದು ತನ್ನೊಡಲ ಕಥೆಯಿಂದಲೇ ಪ್ರಸಿದ್ಧಿ. ಕನ್ನಡ ಕಾವ್ಯ ಪರಂಪರೆಯಲ್ಲಿ ಎರಡು ಮುಖ್ಯ ನೆಲೆಗಳಿವೆ. ಲಿಖಿತ ಹಾಗೂ ಮೌಖಿಕ ಕಾವ್ಯವೆಂಬ ಗ್ರಹಿಕೆಗಳು. ಈ ಎರಡೂ ನೆಲೆಯಲ್ಲಿ ಕನಕದಾಸರು ಸಾಹಿತ್ಯವನ್ನು ಗಮನಿಸಿದ್ದಾರೆ. ಕನ್ನಡ ಪ್ರಾದೇಶಿಕ ಸಂಸ್ಕøತಿಯ ಆವರಣದಲ್ಲಿ ಸಂಸ್ಕøತ ಕಾವ್ಯ, ಛಂದಸ್ಸುಗಳ ಸಮೇತವಾಗಿ ದೀರ್ಘ ಜ್ಞಾನವನ್ನು ಪಡೆದ ಈ ಕವಿಗೆ ಜನಸಾಮಾನ್ಯರ ಅರಿವಿನ ಕಾರ್ಯವೇ ಬಹುಮುಖ್ಯ ನೆಲೆಯಾಗಿತ್ತು. ಆದ್ದರಿಂದಲೇ ಕೀರ್ತನೆಗಳು, ನಳಚರಿತೆ, ಮೋಹನ ತರಂಗಿಣಿ, ಹರಿಭಕ್ತಿಸಾರದಂತಹ ಕೃತಿಗಳು ರಚನೆಗೊಂಡವು.
    ದಾಸ ಪರಂಪರೆಯ ಹಿನ್ನಲೆಯಲ್ಲಿ ಇವರೊಬ್ಬ ಕೀರ್ತನಾಕಾರರು. ಕವಿದೃಷ್ಟಿಕೋನದಲ್ಲಿ ಲಕ್ಷ್ಮೀಶ, ಕುಮಾರವ್ಯಾಸರ ಸಾಲಿನಲ್ಲಿ ಧೀಮಂತವಾಗಿ ಕೂರುವ ಕನ್ನಡ ಪಂಡಿತ. ಇವರ ಸಾಹಿತ್ಯ ಶೈಲಿಯಲ್ಲಿ ಜನಪದ ತತ್ವದ ಸತ್ವವನ್ನು ಪಡೆದು ತನ್ನ ಪ್ರಾದೇಶಿಕ ವಸ್ತು, ಪ್ರಾಣಿ, ಪಕ್ಷಿ, ಸಸ್ಯ, ಧಾನ್ಯ ಸಂಪತ್ತು ಸಾಹಿತ್ಯಕ್ಕೆ ಪ್ರಮುಖ ವಸ್ತುಗಳಾಗಿ ವಚನಕಾರರ ಮೌಖಿಕ ನೆಲೆಗಟ್ಟಿನ ಆಶಯವನ್ನು ಒಂದು ಪರಂಪರೆಯಂತೆ ಮುಂದುವರೆಸಿರುವುದನ್ನು ಕಾಣಬಹುದು. ರಾಮಧಾನ್ಯ ಚರಿತೆಯಂತಹ ಕೃತಿಯು 158 ಪದ್ಯಗಳ ಭಾಮಿನಿ ಷಟ್ಪದಿಯ ರಚನೆಯನ್ನು ಹೊಂದಿದ್ದು, ಸರಳ ನಿರೂಪಣೆ, ಪಾರಾಯಣ ಪರಿಕಲ್ಪನೆಗೂ ದಕ್ಕುವ ಜನಮಾನಸ ಅಂತರ್ವಿಕ್ಷಣೆಯನ್ನು ಹೊಂದಿದೆ. ಕಥೆ ಹೇಳುವ ಜನಪದ ಸೊಗಡು ದೇಶಿಕಾವ್ಯಗಳಾದ ರಾಮಾಯಣ ಹಾಗೂ ಮಹಾಭಾರತದೊಳಗೆ ನಿಂತು ಶಾಂಡಿಲ್ಯಮುನಿಯು ಧರ್ಮ, ನೀತಿಯ ಅಭಿಪ್ರೇರಕನಾದ ಯುಧಿಷ್ಟಿರನಿಗೆ ಕನ್ನಡ ಮಣ್ಣಿನ ಕಥೆ ಹೇಳುವ ಕೌಶಲವೇ ನಮ್ಮ ಸಾಹಿತ್ಯದಲ್ಲಿ ಮೊದಲ ಪ್ರಯತ್ನವೆನ್ನಬಹುದು.     ಕಥೆಯೆಂದರೆ ರಾಗಿ ಭತ್ತಗಳೆಂಬ ಮೇಲು ಕೀಳಿನ ಬರಿ ವಿಡಂಬನೆಯ ವೈರುಧ್ಯದ ಸೊಗಸಷ್ಟೇ ಅಲ್ಲ. ಈ ಕಥೆಯೊಳಗೆ ಒಂದು ವಿಶ್ವ ಮಾನವತ್ವ ಇದೆ. ‘ಯಾರೂ ಮುಖ್ಯರಲ್ಲ; ಯಾರೂ ಅಮುಖ್ಯರಲ್ಲ’ ಎಂಬ ಅಂಶವನ್ನು ಸಹಜವಾಗಿಯೇ ನಿರೂಪಿಸುವ ಕಾವ್ಯವಿದು. ವರ್ಣಭೇದದೊಳಗೆ ಹುಟ್ಟಿಕೊಳ್ಳುವ ಪ್ರಶ್ನೆ ವರ್ಗಭೇದದೊಳಗೆ ಇಂದು ಐಕ್ಯವಾಗುವ ಪ್ರಸ್ತುತ ಸಮಾಜದ ಕನ್ನಡಿಗೆ ಇದೊಂದು ಮಾದರಿ ಕಥೆ. ಉಳ್ಳವರು ಶಿವಾಲಯವ ಮಾಡುವರು ನಾನೇನ ಮಾಡಲಿ ಬಡವನಯ್ಯ ಎಂಬ ಬಡತನದಲ್ಲಿ ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ ಎಂಬ ವಚನಕಾರರ ತಾತ್ವಿಕ ಶ್ರೇಷ್ಠತೆಯು ಪ್ರಸ್ತುತ ಬಡತನವನ್ನು ಪ್ರೀತಿಸುವ ಮದ್ಯಮ ಹಾಗೂ ಕೆಳವರ್ಗಗಳಿಗೆ ಈ ಕಥೆ ಶಕ್ತಿಯನ್ನು ತುಂಬುತ್ತದೆ. ಅದಕ್ಕೆ ರಾಘವನಲ್ಲೇ ರಾಗಿಯ ಮಹಿಮೆಯ ಹೊಗಳಿಕೆಯೊಳಗೆ ಉತ್ತರವಿದೆ. “ಮರುಳೆ ಬಾರೈ ವ್ರಿಹಿಯೆ ಮನದಲಿ ಕೊರಗಿ ಚಿಂತಿಸಲೇಕೆ ನಾವೀ ನರೆದಲಗನತಿಶಯವ ಮಾಡಿದೆವೆಂದು ಕನಲಿದೆಯ ಧರೆಗೆ ಹೊದ್ದಿದ ಕ್ಷಾಮಗಾಲದಿ ಕರುಣದಿಂ ನಡೆತಂದು ಲೋಕವ ಹೊರೆವನದು ಕಾರಣವೆ ಪತಿಕರಿಸಿದೆವು ಕೇಳೆಂದ” ಎಂಬ ರಾಮನ ಸಮನ್ವಯ ತೀರ್ಪು ಲೋಕದ ರಕ್ಷಣೆಯ ಬಹುಮುಖ್ಯ ಜವಬ್ದಾರಿ ಯಾರಮೇಲಿದೆ ಅಗತ್ಯವಾಗಿ ನಾವು ಯಾರನ್ನು ಪ್ರೀತಿಯಿಂದ ಕಾಣಬೇಕೆಂಬ ಸಾರ್ವಕಾಲಿಕ ಸತ್ಯ ಮುಖ್ಯವೆನಿಸುತ್ತದೆ.
    ಇಲ್ಲಿ ಕನಕದಾಸರು ಕಾವ್ಯದ ವಸ್ತು, ಛಂದೋ ಬಂಧ, ಕಥಾ ಹಂದರದ ಜವಾಬ್ದಾರಿಯ ಜೊತೆಗೆ ದೇಸಿ ಚಿಂತನೆಯನ್ನು, ಕನ್ನಡ ಸಂಸ್ಕøತಿಯೊಳಗೆ ಕಟ್ಟಿಕೊಡುವ ಕ್ರಿಯೆ ವಿಶೇಷವಾದುದು. ಆದ್ದರಿಂದಲೇ ಕಿ.ರಂ ನಾಗರಾಜ ಅವರ ಅವರ ರಂಗ ಕಲ್ಪನೆಗೆ ಕಾಲಜ್ಞಾನಿ ಕನಕನಂತೆ ಕಂಡಿರುವುದು. ಈ ದೃಷ್ಟಿ ಕೋನದಲ್ಲಿ ಒಂದು ಪೀಠಿಕೆಯಾಗಿ ಗಮನಿಸುತ್ತಾ ಈಗಾಗಲೇ ನಡೆದಿರುವ ಸಂಶೋಧನೋಪಾದಿಯ ಹಲವು ಬರಹಗಳ ಅಧ್ಯಯನದೊಂದಿಗೆ, ಪ್ರಸ್ತುತ ಸಮಾಜದ ವೈರುಧ್ಯಗಳ ಗ್ರಹಿಕೆಯೊಂದಿಗೆ ರಾಮಧಾನ್ಯ ಚರಿತೆ ಹೊಸ ಓದುವಿಗೆ ದಕ್ಕುತ್ತದೆ. ಧಾನ್ಯಗಳ ಚರಿತ್ರೆ ಒದಗಿಸುವ ಮನುಷ್ಯ ಸಂಬಂಧಿ ಬಿಕ್ಕಟ್ಟಿನ ಪ್ರಶ್ನೆಗಳಿಗಿಂತ ಸತ್ವಶಾಲಿ ಎಂಬ ದರ್ಶನದೊಳಗಿನ ತೀರ್ಪು ಸಮಾಜದ ಎಲ್ಲರಿಗೂ ದಕ್ಕಬೇಕಾದುದು ರಾಮ ಇಲ್ಲಿ ನೆಪ. ಅದೊಂದು ಪಾತ್ರ ಅದನ್ನು ಯಾರೂ ಬೇಕಾದರೂ ನಿರ್ವಹಿಸಬಹುದು. ಏಕೆಂದರೆ ರಾಮನ ಚಿಂತನೆ ಸಮರ್ಥರು ಸದಾ ಗೆಲ್ಲುವರು ಅದಕ್ಕೆ ಸೂಕ್ತ ನೋಟದ ಪರೀಕ್ಷೆ ಮುಖ್ಯ, ಇಲ್ಲಿ ಯಾರನ್ನು ಯಾರೂ ಅಳೆಯಲಾಗದು ಆದ್ದರಿಂದ ಗೌತಮನ ತ್ರಿಮೂರ್ತಿ ನ್ಯಾಯಕ್ಕಿಂತ ಸೆರೆ ಸತ್ಯದಲಿ ಸತ್ವ ಹುಡುಕುವ ಜಾಣ್ಮೆ ಮುಖ್ಯವೆನಿಸುತ್ತದೆ. ಇಲ್ಲಿ ಸತ್ವವೆಂದರೆ ಯಾವುದು ದೀರ್ಘವಾಗಿ, ಶ್ರೇಷ್ಠತೆಯೊಂದಿಗೆ ಇಲ್ಲಿ ಉಳಿಯಬಲ್ಲುದೋ ಅದುವೇ ಆಗಿದೆ. ಡಿ.ವಿ.ಜಿ ಅವರ ಸಾಹಿತ್ಯ ಶಕ್ತಿಯ ಬಹುಮುಖ್ಯ ಚಿಂತನೆ ಇದೇ ಆಗಿದೆ. ಕನಕದಾಸರ ಎಲ್ಲವನೂ ಒಂದರೊಳಗೆ ಅಳವಡಿಸಿಕೊಳುವ ದೇಸಿನೆಲೆಯ ಕಲ್ಪನೆ ಪ್ರಸ್ತುತ ಕೆಲವು ಅರ್ಥಗಳಿಗೆ ಅಖಂಡವೆಂಬ ವಿಶ್ವನೆಲೆ ಸೂಕ್ಷ್ಮವಾಗಿ ಕಾಣಬಹುದು.
                                                                                                                                     -ರವಿಶಂಕರ ಎ.ಕೆ

1. ಕನ್ನಡವೆಂಬ ಹಕ್ಕುಗಾರಿಕೆ

ಒಂದು ಭಾಷೆಯ ಮೇಲೂ ಹಕ್ಕುಗಾರಿಕೆ ಇದೆಯೇ? ಭಾಷೆ ಭಾವನೆಗಳಿಗೆ ಸಂಬಂಧಿಸಿದ ಮಾಧ್ಯಮವೆಂದರೆ ಹಕ್ಕುಗಾರಿಕೆ ಯಾರದು ನೀವೇ ಯೋಚಿಸಿ.

        ಇತ್ತೀಚಿಗೆ ಮಕ್ಕಳ ಮಾತಿನಲ್ಲಿ ಭವಿಷ್ಯದ ಭಯ ಕಾಡುತ್ತಿದೆ. ‘ಕನ್ನಡ ಮಾತಾಡಿದಕ್ಕಾಗಿ ದಂಡ ಕಟ್ಟಿದ ನಮ್ಮ ಖಾಸಗಿ ಶಾಲೆಯ ಮಕ್ಕಳು, ನಮ್ಮ ಶಾಲಾ ಆವರಣ ಪೂರ್ತಿ ಕನ್ನಡ ಮಾತನಾಡುವುದನ್ನು ನಿಷೇಧಿಸಲಾಗಿದೆ ಎನ್ನುವ ಮಕ್ಕಳ ನುಡಿಗಳು, ನಮ್ಮ ಶಾಲೆ ಕನ್ನಡ ವಿಷಯವೇ ಇಲ್ಲ ಆದ್ದರಿಂದ ಊರಿಗೆ ಬಂದಾಗ ಮಾತ್ರ ಕನ್ನಡ ಮಾತನಾಡಬೇಕಿದೆ ಎನ್ನುವ ಮಕ್ಕಳು ಇವರೆಲ್ಲಾ ನಮ್ಮ ಮುಂದೆ ಸಾಕಷ್ಟು ಪ್ರಶ್ನೆಗಳನ್ನು ಇಡುತ್ತಿದ್ದಾರೆ. ಎಕೆ ಈ ದನಿ ನಮಗೆ ಕೇಳುತ್ತಿಲ್ಲ.
           ಸ್ವಲ್ಪ ಯೋಚಿಸೋಣ! ನಿಜವಾಗಿಯೂ ಕರ್ನಾಟಕದಲ್ಲಿ ಕನ್ನಡವೆಂಬ ಹಕ್ಕುಗಾರಿಕೆ ಕಿತ್ತುಕೊಂಡವರಾರು? ಇದುವರೆಗೂ ಯಾವುದಾದರೂ ಮಗುವಿನಿಂದ ಈ ಕನ್ನಡ ಭಾಷೆ ಸರಿಯಿಲ್ಲ ಈ ಭಾಷೆಯನ್ನು ಶಾಲಾ ವಾತಾವರಣದಿಂದಲೇ ತೆಗೆದು ಹಾಕಿ ಎಂಬ ದನಿ, ಕೂಗು, ಕೊರಗು ಈ ಕರ್ನಾಟಕದಲ್ಲಿ ಮೂಡಿದೆಯೇ. ಇಲ್ಲವಲ್ಲ. ಈ ಹಕ್ಕುಗಾರಿಕೆ ಕಿತ್ತುಕೊಂಡ ಹೀನ ಸಂಸ್ಕøತಿ ಮೊದಲು ಹುಟ್ಟಿದ್ದು ನಮ್ಮ ಶಿಕ್ಷಣ ಕಲಿತವರಿಂದಲೇ. ಅದರಲ್ಲೂ ಶಿಕ್ಷಕರಿಂದಲೇ. ಎರಡನೇ ವರ್ಗ ಎಡಬಿಡಂಗಿ ಪೋಷಕರದು. ಇವರು ಮಕ್ಕಳನ್ನು ದುಡ್ಡುಬಿಡುವ ಮರವನ್ನಾಗಿ ಮಾಡುವ ಕನಸು ಕಂಡವರು. ಮಕ್ಕಳಿಗೂ ಒಂದು ಮನಸ್ಸಿದೆ ಎಂದು ಈ ಎರಡೂ ವರ್ಗಕ್ಕೂ ಯಾವತ್ತಿಗೂ ತಿಳಿಯುವುದಿಲ್ಲ ಏಕೆಂದರೆ ಇವರದು ರಿಪೇರಿಯಾಗದ ಮನಸು.
ಇನ್ನು ಸಮಾಜಕ್ಕೆ ಬಂದರೆ ಇದೊಂದು ಮಾರುಕಟ್ಟೆ ಇಲ್ಲಿ ಭಾಷೆಗೆ ಬೆಲೆ ಇರುವಷ್ಟೂ ಬೇರೆಲ್ಲೂ ಇರಲಾರದು. ನೂರು ವರ್ಷದ ಹಿಂದೆ ಕನ್ನಡ ಇಲ್ಲಿ ಹೇಗಿತ್ತೋ ಈಗಲೂ ಹಾಗೆ ಇದೆ. ಇದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇಲ್ಲಿ ಕೆಲವರು ಕನ್ನಡ ಉಳಿಸುವ ಮುಖವಾಡ ಹಾಕಿಕೊಂಡು ಕುಷ್ಠರೋಗಿಗಳಂತೆ ತಿರುಗುತ್ತಿದ್ದಾರೆ. ಇವರಿಗೆ ಸಂಘವಿದೆ, ಬಳಗವಿದೆ, ಉಕ್ಕಿ ಹರಿಯುವ ಕನ್ನಡ ಪ್ರೀತಿಯೂ ಇದೆ ಎಂದು ನಂಬಿಸಲಾಗಿದೆ. ಇವರು ಹೋರಾಟ, ಅರಿವು, ಜಾತ್ರೆ ಸಾಕಷ್ಟು ಮಾರ್ಗಗಳಿವೆ. ಅಷ್ಟೇ ಯಾಕೆ ಕಷ್ಟ ಪಟ್ಟು ಬರೆದು ನಿದ್ರಿಸುತ್ತಿರುವ ಸಾಹಿತಿಗಳೂ ಇದ್ದಾರೆ ಇವರು ಉಪ್ಪಿನಕಾಯಿಯಂತೆ. ಎನಾದರೂ ಮಾಡಿ ಸರ್ಕಾರದ ಹಣ ದೋಚಲು ಕಾಸಿಗೊಂದರ ಕಜ್ಜಾಯವಿದ್ದಂತೆ. (ಸಾಹಿತಿಗಳೇ ನಿಮ್ಮ ತೂಕದ ಭಾಷಣಕ್ಕೆ ಸಮಾಜ ಎಂದಿಗೂ ಪಾಕವಾಗಲ್ಲಿಲ್ಲ ಸ್ವಾಮಿ ಏಕೆಂದರೆ ಸಮಾಜಕ್ಕೂ ನಿಮಗೂ ಬಸ್ಸು ರೈಲಿನ ಸಂಬಂಧ). ಇವರ ಈ ಹುಚ್ಚುಗಾರಿಕೆಗೆ ಅರ್ಥವಿದೆ, ಸಾಕಷ್ಟು ಹಣವೂ ದೊರಕುತ್ತಿದೆ ಆದರೆ ಇವರ ಪ್ರಯೋಗ ಆರೋಗ್ಯವಂತನ ಮೇಲೆ ಅತಿಯಾದ ಕಾಳಜಿಯಿದ್ದಂತೆ. ನಿಜವಾಗಿ ಸಮಸ್ಯೆಯಿರುವುದು ಔಪಚಾರಿಕ ಕ್ಷೇತ್ರದಲ್ಲೇ. ನಿಮ್ಮ ಪ್ರಯೋಗ ಮೊದಲು ಪ್ರಯೋಗಗೊಳ್ಳಬೇಕಾದುದು ಶಾಲೆಗಳ ಮೇಲೆ. ಹೀಗೆ ಚಿಂತಿಸಿದರೆ ಹಲವು ಕ್ಷೇತ್ರಗಳು ಜೊತೆಯಾಗುತ್ತವೆ.
              ಕಿರು ಚಿಂತನೆಯ ಕೊನೆಯಲ್ಲಿ ಕನ್ನಡ ಬೋಧಿಸುವವರ ಗಮನಿಸೋಣ! (ಸರ್ಕಾರಿ  ಬಡವರ ಬಂಧುಗಳನ್ನು ಇಲ್ಲಿ ಪರಿಗಣಿಸಲಾಗದು) ಇವರು ಆಹಾರದಲ್ಲಿ ತಳ ಒತ್ತಿದ, ಸೀದು ಕಮಟಾದ ಇಲ್ಲವೇ ಆಟಕ್ಕುಂಟು ಲೆಕ್ಕಕ್ಕೆ ಇದ್ದೂ ಇಲ್ಲದ ವಿಧೂಷಕರು(ಕ್ಷಮಿಸಿ ಕಾಳಜಿಯಲ್ಲಿ ಸ್ವಲ್ಪ ಹೊಗಳಿಕೆ ಜಾಸ್ತಿಯಾಗಿರಬಹುದು). ಕನ್ನಡ ವಿಷಯವೆಂದರೆ ವೇಳಾಪಟ್ಟಿ ತಯಾರಕರು ಮೊದಲೇ ನಿರ್ಧರಿಸಿ ಬಿಟ್ಟಿರುತ್ತಾರೆ. ಮಕ್ಕಳಿಗೆ ಕೆಲವು ಬೋಧನೆಯ ನಂತರ ಬೇಸರಕ್ಕೆ ಮೀಸಲಾದ ವಿಷವೇ ಕನ್ನಡವೆಂದು. ಹೌದು ವೇಳೆವಾಳಿಗಳೇ ನಾವೂ ವಿಧೂಷಕರೇ ನಿಮ್ಮ ಅರೆ ಹುಚ್ಚು ಬೋಧನೆಯಿಂದ ನೊಂದ ಮಕ್ಕಳ ಹೃದಯ ಅರಳಿಸುತ್ತೇವೆ ಜೀವ ಚೈತನ್ಯ ನೀಡುತ್ತೇವೆ. ಏಕೆಂದರೆ ಈ ಮಣ್ಣಿನ ಭಾಷೆಗೆ ಈ ಮಕ್ಕಳ ಹೃದಯವಿಹಾರದ ದಾರಿ ಗೊತ್ತು. ಈಗ ಹೇಳಿ ಕನ್ನಡವೆಂಬ ಹಕ್ಕುಗಾರಿಕೆ ಯಾರದೆಂದು..!

ನುಡಿಸು ತಾಯೆ

ಲಿಪಿಮನದಿ ತನಿ ದನಿಯ
ಈ ಕಾಯವ ನಾ ಅರ್ಪಿತ ತಾಯಿ

ಆತ್ಮಾಂತರಾಳದ ಎಲ್ಲಾ ಪರಿಶ್ರದ್ಧೆ
ಪದಪುಂಜವೇ ನಾ ಪುಷ್ಪಾರ್ಪಿತ ತಾಯಿ
ಸಾಲು ಸಂಗಮದೊಳು ಎನ್ನ
ನಿರತೆ ನಿರ್ಮಲದಿ ರಂಜಿಸು ತಾಯಿ
ಆತ್ಮದ ಪದ ತಂತಿಯ ನಾದದಲಿ
ಸರ್ವಮನ ಮಿಡಿತದಲಿ ಎನ್ನ ನುಡಿಸು ತಾಯಿ
ಸಹೃದಯಗಳ ನಂದಾನಂದದ
ಅಂತರಾಳದ ಬೆಳಕ ನಂದಿಸದಿರು ತಾಯಿ
ಕರಕೂಡಿಸಿ ಲಿಪಿಯಾರಿಸಿ ನಿನ್ನಲಿ
ಮೊರೆಯಿಡುತ ಬರೆವೆ ರಕ್ಷಿಸು ತಾಯಿ.