ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಆಗಸ್ಟ್ 16, 2019

ವಚನಗಳ ನಿರ್ವಚನ

ವಚನಗಳ ನಿರ್ವಚನ


    ದಾಸಿಮಯ್ಯ ಎಂಬುದು ಶ್ರದ್ಧೆ, ಭಕ್ತಿ, ಸೂಕ್ಷ್ಮತೆಯ ಸಂಕೇತ. ವಚನ ಸಾಹಿತ್ಯದಲ್ಲಿ ಅತ್ಯಂತ ಸರಳವಾಗಿ ವಚನಗಳನ್ನು ತಿಳಿಸಿ ಸಮಾಜದ ಆರೋಗ್ಯಕ್ಕಾಗಿ ಶ್ರಮಿಸಿದವನು. ಬದುಕಿನ ಅರ್ಥಸಾರವನ್ನು ತಾನು ಮಾಡುವ ಕಾಯಕದ ಕಾರ್ಯ, ಪರಿಕರಗಳಿಂದಲೇ ಪರಿಚಯಿಸಿದ ಮೊದಲ ವಚನಕಾರನಾಗಿ ಕಂಡುಬರುತ್ತಾನೆ.

ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ?
ಕಡೆಗೀಲು ಬಂಡಿಗಾಧಾರ
ಕಡುದರ್ಪವೇರಿದ ಒಡಲೆಂಬ ಬಂಡಿಗೆ
ಮೃಡಭಕ್ತರ ನುಡಿಗಡಣವೇ ಕಡೆಗೀಲು ಕಾಣಾ ರಾಮನಾಥ.


    ಈ ವಚನವು ದೇವರ/ಜೇಡರ ದಾಸಿಮಯ್ಯ ಅವರ ಸರಳವಾದ ವಚನ. ಮನುಷ್ಯನ ಬದುಕನ್ನು ಸರಿಪಡಿಸುವ ಸರಿಯಾದ ಮಾರ್ಗವನ್ನು ಈರೀತಿಯಾಗಿ ನುಡಿದಿದ್ದಾರೆ. ಬಂಡಿ ಎಂದರೆ ಗಾಡಿ, ಎತ್ತಿನ ಗಾಡಿ ಅಥವಾ ಯಾವುದೇ ರಥ. ಇದಕ್ಕೆ ಎರಡು ಚಕ್ರಗಳಿವೆ. ಈ ಚಕ್ರಗಳನ್ನು ಒಂದು ಅಚ್ಚಿಗೆ ಜೋಡಿಸಲಾಗಿರುತ್ತದೆ. ಈ ಅಚ್ಚಿನ ಕೊನೆಯ ಭಾಗದಲ್ಲಿ ಚಕ್ರ ಜಾರದಂತೆ, ಕಳಚದಂತೆ ಬಂಧಿಸುವುದೇ ಕಡೆಗೀಲು ಅಥವಾ ಕಡಾಣಿ. ಈ ಕಡೆಗೀಲಿಲ್ಲದೆ ಬಂಡಿಯನ್ನು ಚಲಿಸಲು ಸಾಧ್ಯವಿಲ್ಲ. ಬಂಡಿಗೆ ಕಡೆಗೀಲೇ ಆಧಾರ. ಹಾಗೇಯೇ ಅಹಂಕಾರ ತುಂಬಿದ ನಮ್ಮ ಶರೀರಕ್ಕೆ(ಮನಸ್ಸು) ಮೃಡ(ಶಿವ)ಭಕ್ತರ ಹಿತವಚನಗಳೇ ಆಧಾರ. ಅಹಂಕಾರ ಇಲ್ಲವಾಗಿಸಿ ಉತ್ತಮ ಜೀವನ ನಡೆಸಲು ಶರಣರ ಮಾತುಗಳು ದಾರಿದೀಪವಾಗುತ್ತವೆ. ಇಲ್ಲಿ ಬಂಡಿಗೆ ಈ ಶರೀರವನ್ನು ಹೋಲಿಸಿ, ಕಡೆಗೀಲಿಗೆ ಶರಣರ ನುಡಿಗಳನ್ನು ಹೋಲಿಸಿದ್ದಾರೆ. ದಾಸಿಮಯ್ಯನ ಈ ವಚನವು ಆದರ್ಶ ಬದುಕಿಗೆ ನಾವು ಯಾರನ್ನು ಅನುಸರಿಸಬೇಕು ಎಂಬ ಎಚ್ಚರವನ್ನು ನೀಡುತ್ತದೆ.

ಒಡಲುಗೊಂಡವ ಹಸಿವ
ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು ನಿನೆನ್ನ ಜಡಿದೊಮ್ಮೆ ನುಡಿಯದಿರಾ
ನೀನೆನ್ನಂತೊಮ್ಮೆ ಒಡಲುಗೊಂಡು ನೋಡಾ ರಾಮಾನಾಥ


ಈ ದೇಹವೆಂಬುದು ಹಸಿವಿನಿಂದ ಕೂಡಿದೆ. ಈ ದೇಹವನ್ನು ಹೊಂದಿರುವ ಜೀವಗಳೆಲ್ಲವೂ ಹಸಿವಿಗಾಗಿ ಈ ಸಮಾಜದಲ್ಲಿ ನಾನಾ ಕಾರ್ಯಗಳನ್ನು ಮಾಡುತ್ತಿವೆ. ಮನುಷ್ಯನೂ ಕೂಡ ಅದೇ ಕಾರ್ಯದಲ್ಲಿ ‘ಉದರನಿಮಿತ್ಥಂ ಬಹುವಿಧಕಾರ್ಯಂ’ ಎಂಬಂತೆ ಹಲವು ಕಾರ್ಯದಲ್ಲಿ ತೊಡಗಿದ್ದಾನೆ. ಸುಳ್ಳನ್ನು ಕೂಡ ಈ ಕಾರಣದಿಂದಲೇ ಹೇಳುತ್ತಾನೆ. ಆದರೆ ದೇವರು ನಿರಾಕಾರ ಸ್ವರೂಪಿ, ಆಕಾರವಿಲ್ಲದವನು, ಅವನಿಗೆ ಶರೀರವಾಗಲೀ, ಹಸಿವಾಗಲಿ ಇರಲಾರದು. ಹೀಗಿರುವಾಗ ದೇಹವನ್ನು ಹೊಂದಿ ಸುಳ್ಳಿನಲ್ಲಿ ತೊಡಗಿರುವವನು ಅಂದರೆ ಅನ್ನಕ್ಕಾಗಿ ಬದುಕುವವನು ಎಂದು ನಿಂದಿಸದಿರು ಎಂದು ದೇವರಿಗೆ ಸವಾಲು ಹಾಕಿದ್ದಾರೆ. ನನ್ನಂತೆ ನೀನು ದೇಹ ಹೊಂದಿ ನೋಡು ಎಂದು ತನ್ನ ದೇಹದ ಹಸಿವಿನ ಕಷ್ಟವನ್ನು ಬಡವರ, ದೀನದಲಿತರ ಪರವಾಗಿ ನಿಂತು ಅವರ ಕಷ್ಟಗಳನ್ನು ಸರಳವಾಗಿ ಸಮರ್ಥಿಸಿದ್ದಾನೆ.

ಮಡದಿಯ ಪ್ರಾಣಕ್ಕೆ ಮೊಲೆಮುಡಿ ಇದ್ದಿತೇ?
ಒಡೆಯರ ಪ್ರಾಣಕ್ಕೆ ಇದ್ದಿತೆ ಯಜ್ಞಪವೀತ?
ಕಡೆಯಲ್ಲಿದ್ದ ಅಂತ್ಯಜನು ಹಿಡಿದಿದ್ದನೇ ಪ್ರಾಣದಲ್ಲಿ ಹಿಡಿಗೋಲ
ನೀ ತೊಡಕಿಕ್ಕಿದ ತೊಡಕಿಕ್ಕಿದ ತೊಡಕನೀ ಲೋಕದ ಜಡರೆತ್ತ
ಬಲ್ಲರೈ ರಾಮನಾಥ?


    ದೇವರ ದಾಸಿಮಯ್ಯನು ವಚನ ಸಾಹಿತ್ಯದಲ್ಲಿ ವೈಚಾರಿಕವಾಗಿ ದನಿ ಎತ್ತಿದ ಮೊದಲಿಗ. ವಚನ ಸಾಹಿತ್ಯದ ಮೊದಲ ವಚನಕಾರನೂ ಹೌದು. ಮನುಷ್ಯನ ನಡುವೆ ಆಗಾಧವಾಗಿದ್ದ ಅಭಿಪ್ರಾಯ ಬೇಧಗಳನ್ನು ಖಂಡಿಸುವ ನುಡಿಗಳನ್ನು ವಚನವನ್ನಾಗಿಸಿದ್ದಾನೆ.
ಪ್ರಾಣವೆಂದರೆ ಉಸಿರು. ವಿಶಾಲ ಅರ್ಥದಲ್ಲಿ ಜೀವನ ಎಂದರ್ಥ. ಜೀವನ, ಬದುಕು ಎಂದರ್ಥ. ಇಲ್ಲಿ ಬದುಕಲು ಎಲ್ಲರಿಗೂ ಸಮಾನವಾದ ಅವಕಾಶಗಳಿವೆ. ಈ ಪ್ರಾಣಕ್ಕೆ ಯಾವುದೇ ಹಂಗಿಲ್ಲ. ಹೆಣ್ಣು-ಗಂಡು ಬೇಧವಿಲ್ಲ. ಯಾವುದೇ ಜಾತಿಯ ತೊಡಕಿಲ್ಲ. ಆದರೆ ಸಮಾಜದಲ್ಲಿ ಲಿಂಗ, ಜಾತಿಗಳ ಆಧಾರದ ಮೇಲೆ ವರ್ಗೀಕರಿಸುತ್ತಾ ಮೇಲು-ಕೀಳು ಎಂಬ ಭಾವನೆಗಳನ್ನು ಅತ್ಯಂತ ಬೌದ್ಧಿಕವಾಗಿ ನಿರ್ಮಿಸಲಾಗಿದೆ.
    ದಾಸಿಮಯ್ಯನವರ ಒಂದು ವಚನ ಅತ್ಯಂತ ಮುಖ್ಯವಾಗಿ ಗ್ರಹಿಸುತ್ತಾ ಈ ಮೇಲಿನ ವಚನದ ವ್ಯಾಖ್ಯಾನಮಾಡಬಹುದು. “ಮೊಲೆ ಮುಡಿ ಬಂದರೆ ಹೆಣ್ಣೆಂಬರು, ಗಡ್ಡ ಮೀಸೆ ಬಂದರೆ ಗಂಡೆಂಬರು, ನಡುವೆ ಸುಳಿವಾತ್ಮನು ಹೆಣ್ಣು ಅಲ್ಲ ಗಂಡು ಅಲ್ಲ ರಾಮನಾಥ..” ಈ ವಚನದಲ್ಲಿ ದೇಹದ ಆಕಾರಗಳು ಲಿಂಗವನ್ನು ತಿಳಿಸುತ್ತವೆ ಅಷ್ಟೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಈ ದೇಹದ ಆಕಾರಗಳ ಮೂಲಕವೇ ಮೇಲು-ಕೀಳೆಂಬ ಬೇಧ ಎಣಿಸುವುದು ತಪ್ಪೆಂದು ಹೇಳುತ್ತಾರೆ.
    ಮೊದಲ ಸಾಲು ಲಿಂಗದ ವಿಚಾರದಲ್ಲಿ ಹೆಣ್ಣು ಹೊರೆತು. ಪ್ರಾಣದ ವಿಚಾರದಲ್ಲಿ ಗಂಡಿಗೆ ಸಮಾನಳು ಅಲ್ಲಿ ಮೇಲು-ಕೀಳಿಲ್ಲ ಎಂದಿದ್ದಾರೆ. ಇನ್ನು ಎರಡನೇ ಸಾಲಿನಲ್ಲಿ ಒಡೆಯ ಎಂದರೆ ಪ್ರಾಚೀನ ಕಾಲದಲ್ಲಿ ಜನಸಾಮಾನ್ಯರು ಕರೆಯುತ್ತಿದ್ದ ಬ್ರಾಹ್ಮಣನ ಹೆಸರು. ಬ್ರಾಹ್ಮಣನು ಯಜ್ಞಪವೀತ ಅಂದರೆ ಜನಿವಾರ ಧರಿಸುವ ಮೂಲಕ ಬ್ರಾಹ್ಮಣನಾದನೇ ಹೊರೆತು ಪ್ರಾಣದ ವಿಚಾರದಲ್ಲಿ ಆತನೂ ಮನುಷ್ಯನೇ ಆಗಿದ್ದಾನೆ. ಇದು ಸಮಾಜದಲ್ಲಿದ್ದ ವರ್ಗಬೇಧವನ್ನು ಕುರಿತು ಹೇಳುತ್ತದೆ. ಮೂರನೆಯ ಸಾಲು ಜಾತಿಬೇಧ ಕುರಿತ ವಿಚಾರ. ಅಂತ್ಯಜ ಎಂದರೆ ಕೊನೆಯವ, ದಲಿತ, ಕೆಳಜಾತಿಯವ ಎಂಬ ಅಭಿಪ್ರಾಯವಿತ್ತು. ಅವನು ಊರನ್ನು ಪ್ರವೇಶಿಸುವಾಗ ಹಿಡಿಗೋಲು ಅಥವಾ ಸಂಬಳಿಗೋಲು ಹಿಡಿದು ಕುಟ್ಟುತ್ತಾ ಬರಬೇಕಿತ್ತು. ಆಗ ಅವನ ಬರುವ ಸೂಚನೆ ಕೇಳಿ ಬ್ರಾಹ್ಮಣರು ಆಚೆ ಬರುತ್ತಿರುತ್ತಿಲ್ಲ. ಇಂತಹ ಮೈಲಿಗೆಯೊಂದಿಗಿನ ಮೂಢನಂಬಿಕೆಗಳು ಸಾಕಷ್ಟಿದ್ದವು. ಇವನೂ ಕೂಡ ಹಿಡಿಗೋಲು ಹಿಡಿದ ಕ್ಷಣ ಕೀಳಲ್ಲ. ಸಮಾಜದಲ್ಲಿ ಪ್ರತಿಯೊಬ್ಬನ ಪ್ರಾಣಕ್ಕೂ ಸಮಾನ ಗೌರವ ಇರಬೇಕು ಏಕೆಂದರೆ ಹುಟ್ಟುತಹಃ ಎಲ್ಲರೂ ಮನುಷ್ಯರೇ ಆಗಿದ್ದಾರೆ. ಗಂಡ-ಹೆಂಡತಿ, ಒಡೆಯ-ಅಂತ್ಯಜ, ಯಜ್ಞಪವೀತ-ಹಿಡಿಗೋಲು ಇಂತಹ ಬೇಧಗಳೆಲ್ಲಾ ಸಮಾಜದಲ್ಲಿ ತಮ್ಮ ತಮ್ಮ ಅನುಕೂಲಕ್ಕಾಗಿ ಮಾಡಿಕೊಂಡ ಉಪಾದಿಗಳಾಗಿವೆ ಎನ್ನಬಹುದು ಏಕೆಂದರೆ ಎಲ್ಲರೂ ಸೇವಿಸುವ ಗಾಳಿ, ನೀರು ಮೊದಲಾದ ಪಂಚಭೂತಗಳಲ್ಲಿ ಈ ಪ್ರಕೃತಿ ಸಮಾನತೆ ನೀಡಿದೆ. ದಾಸಿಮಯ್ಯನವರು ಲಿಂಗ-ವರ್ಗ-ಜಾತಿ ಈ ಸಂಬಂಧಿಯಾಗಿ ಸಮಾನತೆ ರೂಪಿಸುವ ವೈಚಾರಿಕತೆಯನ್ನು ತಿಳಿಸಿದ್ದಾರೆ.

ಅನುಭಾವವಿಲ್ಲದವನ ಭಕ್ತಿ
ತಲೆಕೆಳಗಾದುದಯ್ಯ,
ಅನುಭಾವವೇ ಭಕ್ತಿಗಾಧಾರ
ಅನುಭಾವವುಳ್ಳವರ ಕಂಡು ತೂರ್ಯ
ಸಂಭಾಷಣೆಯ ಬೆಸಗೊಳ್ಳದಿದ್ದರೆ
ನರಕದಲ್ಲಿಕ್ಕಯ್ಯ ರಾಮನಾಥ !


ಅನುಭವವೆಂದರೆ ನಮ್ಮ ಇಂದ್ರಿಯಗಳಿಗೆ ದೊರಕುವ ಜ್ಞಾನ, ಅನುಭಾವವೆಂದರೆ ಇಂದ್ರಿಯಗಳಿಗೆ ಗೋಚರವಾಗದ ಜ್ಞಾನ ಎನ್ನಬಹುದು. ಅನುಭವಕ್ಕೆ ಈ ದೇಹ ಕೇಂದ್ರವಾದರೆ, ಅನುಭಾವಕ್ಕೆ ಮನಸ್ಸು ಕೇಂದ್ರವಾಗಿದೆ. ವಚನಕಾರ ಚೆನ್ನಬಸವಣ್ಣನು ‘ಭಕ್ತಿಗೆ ಅನುಭಾವವೇ ಬೀಜ ಕಾಣಿರೆ, ಆಚಾರ ಕಾಣಿರೆ, ಅನುಭಾವವಿಲ್ಲದವನ ಭಕ್ತಿ ಎಳತಟ(ಬಲವಂತ)ಗೊಳಿಸಿತ್ತು.’ ಎಂದಿದ್ದಾರೆ. ಈತ ಭಕ್ತಿಯನ್ನು ಅತ್ಯಂತ ಸಮರ್ಥವಾಗಿ ವ್ಯಾಖ್ಯಾನಿಸಿದ ವಚನಕಾರ. ಮೂಲ ಪ್ರೇರಣೆಯಾಗಿ ದಾಸಿಮಯ್ಯನ ಈ ಮೇಲಿನ ವಚನ ಉಳಿದ ವಚನಕಾರರಿಗೆ ಸ್ಪೂರ್ತಿ ತಂದಿದೆ.
    ಭಕ್ತಿಗೆ ಅನುಭಾವವಿರಬೇಕು. ಇಲ್ಲದಿದ್ದರೆ ಅದೊಂದು ವ್ಯರ್ಥ ಆಚರಣೆ. ಏಕೆಂದರೆ ಅನುಭಾವವೇ ಭಕ್ತಿಗೆ ಆಧಾರ. ಅದುವೆ ಮೂಲಸ್ಥಾನ. ಮನಸ್ಸಿನಿಂದ ಭಕ್ತಿಯನ್ನು ಪ್ರಕಟಿಸಬೇಕೆ ಹೊರೆತು ಈ ಬರೀ ದೇಹದಿಂದಲ್ಲ. ದೇಹದಿಂದ ಪ್ರಕಟಿಸುವ ಭಕ್ತಿಯು ಡಾಂಭಿಕ ಭಕ್ತಿಯಾಗುತ್ತದೆ. ಅನುಭಾವವುಳ್ಳವರ ಕಂಡು ಆನಂದದಿಂದ, ಮೋಕ್ಷ ಪಡೆಯುವ ಸ್ಥಿತಿಯಂತೆ ಪರಸ್ಪರ ಸಂಭಾಷಣೆಯ ಮಾಡದಿದ್ದರೆ ಅಂತಹವರನ್ನು ನರಕದಲ್ಲಿಡು ಎಂದು ನೇರವಾಗಿ ನುಡಿದಿದ್ದಾರೆ. ಇಲ್ಲಿ ಸರಳವಾಗಿ ತಿಳಿಯುವುದಾದರೆ ನಮ್ಮ ಪ್ರತಿ ಕಾರ್ಯದಲ್ಲೂ ಶ್ರದ್ಧೆ ಇರಬೇಕು. ಶ್ರದ್ಧೆಯಿಂದ ವರ್ತಿಸಬೇಕು ಆಗ ಮಾತ್ರ ಯಶಸ್ಸು ಸಾಧ್ಯ. ಶ್ರದ್ಧೆ ಇಲ್ಲದವರು ಯಾವುದೇ ಸಾಧನೆಗೆ ಅನರ್ಹರು ಎಂಬುದನ್ನು ಈ ವಚನ ತಿಳಿಸುತ್ತದೆ.

ಘಟವನೊಡೆದು ಬಯಲ ನೋಡಲದೇಕೆ ?
ಘಟದೊಳಿಪ್ಪುದೇ ಬಯಲೆಂದರಿದಡೆ ಸಾಲದೆ?
ಪಟವ ಹರಿದು ತಂತುವ ನೋಡಲದೇಕೆ?
ಪಟವೇ ತಂತುವೆಂದರಿದಡೆ ಸಾಲದೆ?
ಕಟಕವ ಮುರಿದು ಕಾಂಚನವ ನೋಡಲದೇಕೆ? ಆ
ಕಟಕವೇ ಕಾಂಚನವೆಂದರಿದಡೆ ಸಾಲದೆ?
ತನ್ನನಳಿದು ಘನವ ನೋಡಲದೇಕೆ?
ತಾನೇ ಘನವೆಂದರಿದಡೆ ಸಾಲದೆ ? ಹೇಳಾ ರಾಮನಾಥ !


ವಚನ ಸಾಹಿತ್ಯದ ಮೂಲಬೇರು ಜನಪದ ಮೂಲದಲ್ಲಿಂದ ಬಂದಿದೆ. ಆಧ್ಯಾತ್ಮ, ತತ್ವಶಾಸ್ತ್ರ ಮೊದಲಾದ ಪದಗಳಿಗೆ ವಚನಕಾರರು ‘ಅನುಭಾವ’ವೆಂಬ ಒಂದೇ ಪದವನ್ನು ಅತ್ಯಂತ ಸಹಜ ಹಾಗೂ ಸರಳವಾಗಿ ಬಳಸಿದ್ದಾರೆ. ಮಡಕೆ, ಬಟ್ಟೆ, ಕಂಚು ಇವೆಲ್ಲಾ ಒಂದೊಂದು ಸಾಮಾಜಿಕ ಕಸುಬುಗಳ ಸಂಕೇತವಾಗಿ ಮೂಡಿಬಂದಿವೆ. ಅಂತಹ ಕಸುಬುಗಳಲ್ಲಿ ಅಡಗಿದ್ದ ಕಾಯಕ ಶ್ರದ್ಧೆಯು ಅತ್ಯಂತ ಸಮರ್ಥನೀಯವಾದುದು. ಮಡಕೆಯನೊಡೆದು ಬಯಲನೋಡುವ ಅಗತ್ಯವಿಲ್ಲ. ಏಕೆಂದರೆ ಬಯಲೆಂಬುದು ಅಲ್ಲಮನ ಆಕಾಂಕ್ಷೆಯ ಪದ. ಅದು ಮುಕ್ತಿಯ ರೂಪಕ. ಬಯಲು ಎಲ್ಲವನ್ನೂ ಒಳಗೊಂಡಿರುವ ಸಂಕೇತ. ಇಂತಹ ಬಯಲನ್ನು ಪರೀಕ್ಷಿಸುವುದು ಮೂರ್ಖತನ. ಮಡಕೆಯೊಡೆದು ತಿಳಿವುದಕ್ಕಿಂತ ಅದರೊಳಗಿರುವುದೇ ಮುಕ್ತಿಯೆಂದು ಭಾವಿಸಿದರೆ ಸಾಲದೆ ಎಂದಿದ್ದಾರೆ ದಾಸಿಮಯ್ಯ. ಹಾಗೇಯೇ ಬಟ್ಟೆಯ ಹರಿದು ದಾರವ ನೋಡುವುದು ದಡ್ಡತನ. ಬಟ್ಟೆಯೇ ದಾರದಿಂದಾದುದು ಎಮದು ತಿಳಿದರೆ ಸಾಲದೆ? ಕಟಕವೆಂದರೆ ‘ಚಿನ್ನದ ಬಳೆ’, ಕೈಕಡಗ. ಕಟಕವ ಮುರಿದು ಚಿನ್ನವ ನೋಡುವುದು ಅಜ್ಞಾನ. ಏಕೆಂದರೆ ಚಿನ್ನದಿಂದಲೇ ಕಟಕವಾಗಿರುತ್ತದೆ. ಘನವೆಂದರೆ ಶ್ರೇಷ್ಠ ಮಹತ್ವ ಪೂರ್ಣವಾದುದು. ದೇವರು ಮೊದಲಾದ ಅರ್ಥಗಳಿಂದ ಕರೆದರೆ ತನ್ನನ್ನು ತಾನು ನಿಂದಿಸಿಕೊಳ್ಳುತ್ತಾ ಈ ಘನವನ್ನು ಹುಡುಕುವುದು ಆಚಾರವಲ್ಲ. ತನ್ನನ್ನೆ ಘನವನ್ನಾಗಿ ರೂಪಿಸಿಕೊಳ್ಳುವುದು, ಭಾವಿಸುವುದು ಘನದ ವಿಚಾರ. ಅದುವೆ ಆಚಾರ. ಬಸವಣ್ಣನವರು ‘ಉಳ್ಳವರು ಶಿವಾಲಯ ಮಾಡುವರು’ ಎಂಬ ವಚನದಲ್ಲಿ ತನ್ನ ದೇಹವನ್ನು  ದೇವಾಲಯವಾಗಿ ಆತ್ಮವನ್ನೆ ದೇವರನ್ನಾಗಿ ರೂಪಿಸಿದ ಬಗೆಯನ್ನು ನೆನಯಬಹುದು. ವಿಶ್ವ ಚೈತನ್ಯವನ್ನು ಪ್ರಾಣ ಪರಂಪರೆಯಿಂದ ಕಾಣುವ ಈ ಸಾಕ್ಷಿಪ್ರಜ್ಞೆ ಜಗತ್ತಿನ ಸಾಹಿತ್ಯದಲ್ಲಿ ವಚನಕಾರರ ವಿಶಿಷ್ಟ ಕೊಡುಗೆಯಾಗಿ ಗುರ್ತಿಸಲಾಗಿದೆ.

ಉಂಕೆಯ ನಿಗುಚಿ, ಸರಿಗೆಯ ಸಮಗೊಳಿಸಿ,
ಸಮಗಾಲನಿಕ್ಕಿ ಅಣಿಯೇಳಮೆಟ್ಟಿದೆ !
ಹಿಡಿದ ಲಾಳಿಯ ಮುಳ್ಳು ಕಂಡಿಕೆಯ ನುಂಗಿತ್ತು
ಈ ಸೀರೆ ನೇಯ್ದವ ನಾನೊ ನೀನೊ ರಾಮನಾಥ

    ವೃತ್ತಿಯನ್ನೆ ಕೇಂದ್ರವನ್ನಾಗಿಸಿ ವಚನಗಳನ್ನು ರಚಿಸಿದ ಮೊದಲ ವಚನಕಾರ ಈ ದಾಸಿಮಯ್ಯ. ಈತ ಬಟ್ಟೆಯನ್ನು ತಯಾರಿಸುವ ನೇಕಾರ ಜಾತಿಯವನು. ದಶಕಗಳ ಕಾಲ ನೇಯ್ದ ಬಟ್ಟೆಯನ್ನು ಸಿದ್ದಾಪುರ ಸಂತೆಯಲ್ಲಿ ಮಾರಲು ಹೋದಾಗ ಶಿವನು ಪರೀಕ್ಷಿಸಿ ಹರಿದು, ಮನೆಗೆ ಬಂದು ಹಸಿವಿಗೆ ಅನ್ನವನುಂಡು ದಾಸಿಮಯ್ಯನ ಎಲ್ಲಾ ತಾಳ್ಮೆಯನ್ನು ಪರೀಕ್ಷಿಸಿದ ಈತನಿಗೆ ‘ತವನಿಧಿ’(ಅನ್ನದ ಅಕ್ಷಯ ಪಾತ್ರೆ) ನೀಡಿದ ಕಥೆಗಳಿವೆ. ಈತನಿಗೆ ಜೇಡರ ದಾಸಿಮಯ್ಯ ಎಂಬ ಹೆಸರೂ ಇದೆ ಹಾಗೆಯೇ ಸಾಕಷ್ಟು ಈ ಹೆಸರಿನ ಚರ್ಚೆಗಳೂ ಇವೆ. ಈತನ ದೊರೆತ ೧೭೬ ವಚನಗಳಲ್ಲಿ ಮುಕ್ಕಾಲುಪಾಲು ವೃತ್ತಿಗೌರವ ಕುರಿತಾದವುಗಳೇ ಆಗಿವೆ.

    ಈ ವಚನವು ಬಟ್ಟೆಯನ್ನು ನೇಯ್ಗೆ ಮಾಡುವ ಕಾಯಕ ಎಷ್ಟು ಶ್ರಮದಾಯಕವಾದುದೋ. ಈ ಕಾಯದೊಳಗೆ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಅಷ್ಟೇ ಕಷ್ಟದ ಕಾರ್ಯ. ಇಲ್ಲಿ ತಾಳ್ಮೆ, ಸೂಕ್ಷö್ಮತೆ, ಶ್ರದ್ಧೆ ತುಂಬಾ ಮುಖ್ಯವಾದ ಅಂಶಗಳು. ಬಟ್ಟೆಯನ್ನು ನೇಯಲು ಹಾಸುವ ದಾರವನ್ನು ಮಗ್ಗಕ್ಕೆ ಸರಿಯಾಗಿ ಹಾಸಿ, ಮೇಲೆ ಕೆಳಗೆ ಸರಿಗೊಳಿಸಿ, ಸರಿಯಾದ ರೀತಿಯಲ್ಲಿ ನೆಯ್ಗೆ ಮಾಡಿದರೆ ಆ ದಾರಗಳ ನಡುವೆ ಅಡ್ಡದಾರವನ್ನು ಜೋಡಿಸುವ ಚಿಕ್ಕ ಮರದ ವಸ್ತು ಲಾಳಿಯು ದಾರದ ಉಂಡೆಯನ್ನೆ ಖಾಲಿಮಾಡಿತ್ತು ಹೀಗೆ ಸೀರೆಯು ತಯಾರಾಗುತ್ತದೆ. ಇಂತಹ ಸೀರೆಯು ನನ್ನ ತಾಳ್ಮೆ ಮತ್ತು ಶ್ರಮದಿಂದ ತಯಾರಾದುದು. ಎಂಬ ದೇವರನ್ನು ಪ್ರಶ್ನಿಸುವ ರೀತಿಯನ್ನು ಹೊಂದಿದ್ದರೂ ನಾನೊ, ನೀನೊ ಎನ್ನುವಾಗ ಇದೊಂದು ಅಭೂತಕಾರ್ಯ ಆದ್ದರಿಂದ ನಿನ್ನ ದಯೆಯಿದ್ದರೆ ಮಾತ್ರ ಇದು ಇಷ್ಟು ಪರಿಪೂರ್ಣವಾಗಿ ನೆಯ್ಗೆಯಾಗಲು ಸಾಧ್ಯವೆಂಬ ಭಕ್ತಿಯನ್ನೂ ಪ್ರಕಟಿಸಿದ್ದಾರೆ. ರಾಮನಾಥವೆಂಬುದು ವಚನಗಳ ಅಂಕಿತ. ದಾಸಿಮಯ್ಯನು ನಂಬಿದ ಕಾಯಕ ಶಕ್ತಿ.

ಅಲ್ಲಮಪ್ರಭು

ತನು ಬತ್ತಲಿದ್ದಡೇನೂ ಮನ ಶುಚಿಯಾಗದನ್ನಕ್ಕರ ?
ಮಂಡೆ ಬೋಳಾದಡೇನೊ, ಭಾವ ಬಯಲಾಗದನ್ನಕ್ಕರ ?
ಭಸ್ಮವ ಹೂಸಿದಡೇನೊ,
ಕರಣಾದಿ ಗುಣಂಗಳನೊತ್ತಿ ಮೆಟ್ಟಿ ಸುಡದನ್ನಕ್ಕರ ?
ಇಂತೀ ಆಶೆಯ ವೇಷದ ಭಾಷೆಗೆ,
ಗುಹೇಶ್ವರಾ, ನೀ ಸಾಕ್ಷಿಯಾಗಿ ಛೀ ಎಂಬೆನು.

ವಚನಕಾರರು ಸಮಾಜದ ನಿಜವಾದ ವಿಮರ್ಶಕರು ಹಾಗೂ ಚಿಕತ್ಸಕರು. ಸಮಾಜದ ಅಸಮಾನತೆ, ಭಿನ್ನ ಅಭಿಪ್ರಾಯಗಳಿಗೆ ಸಮಾಜದ ಮಾದರಿಗಳನ್ನೆ ಉದಾಹರಣೆಯಾಗಿ, ಪ್ರತಿಮೆಯಾಗಿ ಬಳಸುತ್ತಾ ಚಿಕಿತ್ಸೆ ನೀಡಿದರು.
ಈ ಮೇಲಿನ ವಚನವನ್ನು ಸೂಕ್ಷ್ಮವಾಗಿ ಗ್ರಹಿಸಿದರೆ ಜೈನಧರ್ಮ, ವೈಷ್ಣವ ಧರ್ಮದ ಅಂಧ ಆಚರಣೆಗಳನ್ನು ಪ್ರಶ್ನಿಸಿರುವುದಾಗಿ ಕಂಡುಬರುತ್ತದೆ. ಅಥವಾ ನಮ್ಮೊಳಗೆ ಇರುವ ನಿತ್ಯ ನಾರಕವನ್ನು ನೂತನಗೊಳಿಸಿ ಪ್ರಶ್ನಿಸಿದ್ದಾರೆ. ಬಾಹ್ಯದ ಡಂಭಾಚಾರಕ್ಕಿಂತ ಅಂತರಂಗದ ಪರಿಶುದ್ಧ ಮೌನವೇ ಮಿಗಿಲೆಂದು ಅಲ್ಲಮಪ್ರಭುಗಳು ಸ್ಪಷ್ಟಪಡಿಸಿದ್ದಾರೆ.
ಇಲ್ಲಿ ಹೊರಗೆ ವೇಷ ಧರಿಸುತ್ತಾ ಆಚರಣೆಯ ನೆಪದಲ್ಲಿ ತೋರಿಕೆಯಲ್ಲಿರುತ್ತಾರೆ. ದಿಗಂಬರರಾಗುತ್ತಾರೆ. ಆದರೆ ಮನದಲ್ಲಿ ಆ ಶುಚಿತ್ವ ಇರದೆ ಈ ಹೊರಗಣದ ಎಲ್ಲಾ ಆಚಾರ ವ್ಯರ್ಥವೆಂದಿದ್ದಾರೆ. ಕೇವಲ ತಲೆಯನ್ನು ಬೋಳಿಸಿದರೆ ತನ್ನ ಹರಕೆ ತೀರಿಸಬಹುದೇ ಹೊರೆತು ಭಾವನೆಗಳು ಶುದ್ಧವಾಗಲಾರದು. ಭಾವನೆಗಳು ಶುದ್ಧವಿಲ್ಲದೆ ಮಾಡಿದ ಭಕ್ತಿ ವ್ಯರ್ಥ ಕಾರ್ಯ. ಬೂದಿ(ಭಸ್ಮ)ಗಳನ್ನು ಪೂಸಿಕೊಂಡರೆ ಅಂದರೆ ಬಳಿದುಕೊಂಡರೆ ಭಕ್ತನಾಗಲಾರನು. ಅಂತರಂಗ ಶುದ್ಧವಿರಬೇಕು. ಕರಣಗಳು ಎಂದರೆ ಕಾಯ ವಾಚ ಮನಸಾ ಈ ಮೂರು ಅಂಶಗಳ ನಿಯಂತ್ರಣ ಮುಖ್ಯ ಇವುಗಳ ಮೇಲೆ ಪ್ರಯೋಗವಾಗುವ ಇಂದ್ರಿಯ ವ್ಯಾಮೋಹಗಳ ನಿಯಂತ್ರಣ, ಅವುಗಳ ನಾಶ ಮುಖ್ಯ ಎಂದಿದ್ದಾರೆ. ಇಂತಹ ತೋರಿಕೆಯ ಭಕ್ತರ ಆಸೆಯ, ವೇಷದ, ನುಡಿಗಳ ಕಂಡರೆ ಛೀ ಎನ್ನುತ್ತೇನೆ, ಇಂತಹವರನ್ನು ತ್ಯಜಿಸುತ್ತೇನೆ ಗುಹೇಶ್ವರನ ಸಾಕ್ಷಿಯಾಗಿ ಎಂದಿದ್ದಾರೆ. ಅಲ್ಲಮನ ವಚನಗಳು ಬೆಡಗಿನಿಂದ ಕೂಡಿದ್ದರೂ ನೇರ ನಿಷ್ಠುರತೆಯನ್ನು ಸಾರುತ್ತವೆ.

ತನುವ ತೋಂಟವ ಮಾಡಿ, ಮನವ ಗುದ್ದಲಿ ಮಾಡಿ,
ಅಗೆದು ಕಳೆದೆನಯ್ಯಾ ಭ್ರಾಂತಿಯ ಬೇರ.
ಒಡೆದು ಸಂಸಾರದ ಹೆಂಟೆಯ, ಬಗಿದು ಬಿತ್ತಿದೆಯ್ಯಾ ಬ್ರಹ್ಮಬೀಜವ.
ಅಖಂಡಮಂಡಲವೆಂಬ ಬಾವಿ, ಪವನವೆ ರಾಟಾಳ,
ಸುಷುಮ್ನನಾಳದಿಂದ ಉದಕವ ತಿದ್ದಿ,
ಬಸವಗಳೈವರು ಹಸಗೆಡಿಸಿಹವೆಂದು
ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ,
ಆವಾಗಳೂ ಈ ತೋಂಟದಲ್ಲಿ ಜಾಗರವಿದ್ದು
ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ.


    ವಚನಕಾರರ ಕೆಲವು ಕಾಯಕಗಳ ಕುರಿತು ಅಲ್ಲಮನು ನೇರವಾಗಿ ಹೇಳಿದಂತಿದ್ದರೂ ಮನದ ಕಾಯಕ ಮೊದಲಿಗೆ ಇರಬೇಕೆಂಬ ಅನಂತ ಸತ್ಯದ ತಿಳಿ ಹೇಳಿದ್ದಾರೆ. ಗೊಗ್ಗಯ್ಯನೆಂಬ ಕೃಷಿಕ ವಚನಕಾರನಿಗೆ ಮನದ ತೋಟವ ಸಿದ್ಧಮಾಡೆಂದು ಈ ರೀತಿಯಲ್ಲಿ ಹೇಳಿದ್ದಾರೆ.
    ಇದೊಂದು ಸರಳವಾದ ಹಾಗೂ ವಿಶಾಲ ಅರ್ಥವನ್ನು ಒಂದು ಕಾರ್ಯವಿವರಣೆಯಂತೆ ಮೂಡಿದ ವಚನವಾಗಿದೆ. ಅಲ್ಲಮರು ಬಾಹ್ಯ ತೋಟವನ್ನು ಸಿದ್ಧಮಾಡುವ ಕ್ರಮದಲ್ಲಿಯೇ ಮನಸ್ಸನ್ನು ಶುದ್ಧಮಾಡಬೇಕೆಂಬ ಎಚ್ಚರ ಮೂಡಿಸಿದ್ದಾರೆ. ಈ ದೇಹವನ್ನು ತೋಟವೆಂದು ಭಾವಿಸಿ, ಮನವನ್ನೆ ಗುದ್ದಲಿಯನ್ನಾಗಿ ಮಾಡಿಕೊಂಡು ಮೊದಲಿಗೆ ಸ್ವಚ್ಛಮಾಡಬೇಕು, ಹಸನುಗೊಳಿಸಬೇಕು. ಅಗೆದು ತೆಗೆಯಬೇಕು ಈ ಶರೀರ ಹೊಂದಿರುವ ಭ್ರಮೆಗಳನೆಲ್ಲವನ್ನು ಹಾಗೆಯೇ ಸಂಸಾರದ ತೊಡಕುಗಳನ್ನು ಮಣ್ಣಿನ ಹೆಂಟೆಗಳನ್ನು ಉಡಿಗೊಳಿಸಿದಂತೆ ಸರಿಪಡಿಸಿಕೊಳ್ಳಬೇಕು. ಸರಿಯಾದ ಅರ್ಥಗಳನ್ನು ತುಂಬಿಕೊಳ್ಳಬೇಕು. ಇಂತಹ ತೋಟದಲ್ಲಿ ಅಂದರೆ ಶರೀರದಲ್ಲಿ ಬಿತ್ತಬೇಕು ಬ್ರಹ್ಮಬೀಜವನ್ನು ಎಂದಿದ್ದಾರೆ. ಇಲ್ಲಿ ಬ್ರಹ್ಮಬೀಜವೆಂದರೆ ಬದುಕಿನ ನಿಶ್ಚಲವಾದ ಗುರಿಯೆಂದು ಭಾವಿಸಬಹುದು. ಇಂತಹ ತೋಟಕ್ಕೆ ನೀರು, ಗಾಳಿಯನ್ನು ಈ ಅಖಂಡಮಂಡಲವೆಂಬ ವಿಶ್ವವೇ ಅಂದರೆ ನಮ್ಮ ಜ್ಞಾನಕೋಶವೆಂಬ ಬಾವಿ, ಈ ಗಾಳಿಯೇ ಅಂದರೆ ಉಸಿರಾಟವೇ ಚಕ್ರವಾಗಿ ಸುಷುಮ್ನನಾಳದಿಂದ ನೀರು ತಂದು ಹಾಕಬೇಕು. ಅಂದರೆ ನಮ್ಮ ದೇಹದಲ್ಲಿ ಯೋಗಶಾಸ್ತçವೇಳುವಂತೆ ಮೂರು ನಾಳಗಳಿವೆ ಒಂದು ಇಹಾ, ಪಿಂಗಳ, ಸುಷುಮ್ನ(ಕುಂಡಲಿನಿ). ಈ ಇಹಾ ಮತ್ತು ಪಿಂಗಳಗಳ ನಡುವೆ ಸುಷುಮ್ನ ನಾಳವಿದೆ. ಇವೆರಡು ಉಸಿರಾಟದ ಉಚ್ವಾಸ ಹಾಗೂ ನಿಚ್ವಾಸಗಳಾದರೆ ಸುಷುಮ್ನನಾಳವು ಪ್ರಾಣಶಕ್ತಿಯನ್ನು ಈ ದೇಹಕ್ಕೆ ಒದಗಿಸುತ್ತದೆ. ಇಂತಹ ನಾಳದಿಂದ ನಾವು ಈ ತನುವೆಂಬ ತೋಟಕ್ಕೆ ನೀರು ತರಬೇಕು ಎಂದಿದ್ದಾರೆ ಅಲ್ಲಮಪ್ರಭು. ಈ ರೀತಿಯಲ್ಲಿ ಬೆಳೆಸುತ್ತಿರುವ ತೋಟವನ್ನು ಬಸವಗಳೈವರು ಎಂದರೆ ಪಂಚೇಂದ್ರಿಯಗಳು(ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ) ತಮ್ಮ ಇಷ್ಟ ಸುಖಕ್ಕಾಗಿ ಹಾಳುಮಾಡುತ್ತಾರೆ ಎಂದು ಈ ಪಂಚೇಂದ್ರಿಯಗಳನ್ನು ಸಮತೆ, ಸೈರಣೆಯೆಂಬ ಬೇಲಿಯನ್ನು ಅಂದರೆ ನಿಯಂತ್ರಣವನ್ನು ಹೊಂದಿ ಯಾವಾಗಲೂ ಈ ತೋಟದಲ್ಲಿ ಎಚ್ಚರವಿದ್ದು(ಜಾಗ್ರತೆವಹಿಸಿ) ಬಿತ್ತಿ ಬೆಳದ ಸಸಿಯನ್ನು ಕಾಪಾಡಿದೆನು. ಎಂದರೆ ಬದುಕಿನ ಧ್ಯೇಯವನ್ನು ಬರೀ ಹೊಂದುವುದಷ್ಟೆ ಅಲ್ಲದೇ ಕಾಪಾಡಬೇಕಾದ ಎಚ್ಚರವನ್ನು ಈ ರೀತಿಯಲ್ಲಿ ಅರ್ಥಪಡಿಸಿದ್ದಾರೆ. 

ನೀಲಮ್ಮನ ವಚನಗಳು
ನನ್ನನಾರೂವರಿಯರು
ನಾನು ಸ್ವರ್ಗಿಯಲ್ಲ ಅಪವರ್ಗಿಯಲ್ಲ
................................
.....................................
..........................
ನನ್ನನಾರೂ ಅರಿಯರು
       ನೀಲಾಂಬಿಕೆ, ನೀಲಲೋಚನೆ, ನೀಲಮ್ಮ, ಮಾಯಾದೇವಿ ಎಂತೆಲ್ಲ ಹೆಸರಿರುವ ನೀಲಮ್ಮನು ವಚನ ಸಾಹಿತ್ಯದಲ್ಲಿ ವೈಚಾರಿಕ ಚಿಂತಕಿ. ಹರಿಹರ ಮತ್ತು ಭೀಮ ಕವಿಗಳು ಬಸವಣ್ಣನವರ ಮಡದಿ ನೀಲಾಂಬಿಕೆಯವರನ್ನು ಮಾಯಿದೇವಿ ಎಂದು ಕರೆದಿದ್ದಾರೆ.  ನೀಲಮ್ಮ ವಿಚಾರದಲ್ಲಿ ವಿಶಿಷ್ಟ ವ್ಯಕ್ತಿತ್ವದವಳು. ಆಕೆಯೇ ತನ್ನ ವಚನಗಳಲ್ಲಿ ತಿಳಿಸುವಂತೆ ಯಾರೂ ತನ್ನನ್ನು ಅರಿಯಲು ಸಾಧ್ಯವಿಲ್ಲ ಎನ್ನುವಾಗ ಯಾವುದೇ ಒಂದು ಆಯಾಮದ ವ್ಯಕ್ತಿತ್ವವಾಗಿ ತನ್ನನ್ನು ಅಳೆಯಬೇಡಿ ಎಂಬ ಸೂಕ್ಷ್ಮತೆಯನ್ನೂ ತಿಳಿಸಿದ್ದಾರೆ.
    ತನ್ನ ವ್ಯಕ್ತಿತ್ವವನ್ನು ತಾನೇ ಪರಿಚಯಿಸುವ ಈಕೆ ತಾನೊಬ್ಬಳು ವಿಶಿಷ್ಟವಲ್ಲವೆಮದು ಸಾರುತ್ತಿದ್ದಾಳೆ. ನನ್ನನ್ನು ಯಾರು ಅರಿಯಲು ಸಾಧ್ಯವಿಲ್ಲ. ಏಕೆಂದರೆ ಒಂದು ಆಯಾಮದಲ್ಲಿ ನನ್ನ ವ್ಯಕ್ತಿತ್ವ ಇರಲಾರದು. ನಾನು ಸ್ವರ್ಗ ನಿರೀಕ್ಷಕಳು ಅಲ್ಲ, ಅಂತಹ ನಿಯಮಕ್ಕೂ ಒಳಗಾದವಳಲ್ಲ. ನನ್ನನ್ನು ಯಾರೂ ತಿಳಿಯಲಾಗದು. ನಾನು ಈ ಲೌಕಿಕದಿಂದ ಮುಕ್ತಳೂ ಅಲ್ಲ, ಅಮುಕ್ತಳೂ ಅಲ್ಲ. ನಿತ್ಯ ಸಂಸಾರದಲ್ಲಿ ಇರುವೆ. ಆದರೆ ಸಂಸಾರವೇ ನನ್ನ ಬದುಕಲ್ಲ. ಸಂಗಯ್ಯನೊಳಗಿನ ವ್ಯಕ್ತಿತ್ವ ನಾನು. ನನಗೆ ಯಾವುದೇ ರೂಪವಿಲ್ಲ. ಆದ್ಧರಿಂದ ನನ್ನನ್ನು ಯಾರೂ ಅರಿಯರು. 
ತಾನು ಬಿಜ್ಜಳನ ಕುಟುಂಬದವಳು ಎಂದು ಸೂಕ್ಷ್ಮವಾಗಿ ಹೇಳುತ್ತಾ:

ನಾಡನಾಳಹೋದರೆ,
ಆ ನಾಡು ಆಳುವ ಒಡೆಯಂಗೆ ನಾಡೆ ಹಗೆಯಾಯಿತ್ತು.
ಹಗೆಯಳಿದು ನಿಸ್ಸಂಗವಾಯಿತ್ತು.
ನಿಸ್ಸಂಗ ವೇದ್ಯವಾಗಿ ಸಂಗಯ್ಯನಲ್ಲಿ ಮುಕ್ತಳಾದೆನು ನಾನು.

ನಾಡನ್ನು ಆಳ ಹೋದರೆ ಅದು, ಆ ನಾಡಿನ ಕೋಪಕ್ಕೆ ಕೆಂಗಣ್ಣಿಗೆ ಗುರಿಯಾಗಿ ನಾಡು ಹಾಳಾಯಿತ್ತು ಎಂದು ಬಿಜ್ಜಳನ ವೈಫಲ್ಯವನ್ನು ಎತ್ತಿ ತೋರುತ್ತಾರೆ. ಹಗೆಯು ಅಳಿದು ನಿಸ್ಸಂಗವಾಯಿತ್ತು, ಮುಂದೆ ನಿಸ್ಸಂಗವೇ ವೇದ್ಯವಾಗಿ ಸಂಗಯ್ಯನಲ್ಲಿ ಮುಕ್ತಳಾದೆನು ಎಂದು ಹೇಳಿದ್ದಾರೆ.


ಕೊನೆಕಾಲದಲ್ಲಿ ಬಸವಣ್ಣನವರನ್ನು ಭೇಟಿಯಾಗಿ ಅವರ ಮುಂದಿನ ಗೊತ್ತು ಗುರಿಗಳನ್ನು ಅರಿತು ಅದರಂತೆ ಸಮಾಜ ಕಟ್ಟುವ ಕೆಲಸಕ್ಕೆ ಬದ್ಧಳಾಗಬೇಕೆಂದು ನೀಲಮ್ಮ, ಹಿರಿಯ ಶರಣ ಹಡಪದ ಅಪ್ಪನವರ ಜೊತೆಗೆ ಕೂಡಲ ಸಂಗಮಕ್ಕೆ ಪಯಣ ಬೆಳೆಸುತ್ತಾರೆ. ಆದರೆ ರಕ್ಕಸ ತಂಗಡಗಿ ಮುಟ್ಟುವಷ್ಟರಲ್ಲಿ ಬಸವಣ್ಣನವರು ಸಂಗಮದಲ್ಲಿ ಐಕ್ಯರಾದ ಸುದ್ದಿ ಬರ ಸಿಡಿಲಿನಂತೆ ಅಪ್ಪಳಿಸುತ್ತದೆ. ನೀಲಮ್ಮನವರಿಗೆ ಅಗಾಧ ನೋವು ಕಳವಳ ಆತಂಕವಾಗುತ್ತದೆ.



ಸೋಮವಾರ, ಆಗಸ್ಟ್ 12, 2019








ಮುಳುಗಿದ ಮನುಜ

ಮತ್ತೆ ಮತ್ತೆ ನಾಡಿನಲ್ಲಿ
ಇದೋ ತಿರುಗಿ ನಾಡಿಯಲ್ಲಿ
ಶೋಕ ತುಂಬಿ ಬಂದಿದೆ
ಕೊರಳ ತೇವ ಬತ್ತಿ ಇಂದು
ಕಣ್ಣೀರಲಿ ಕೋಟಿ ಕಥೆಯ ನಾಡಿದೆ

ಕಳೆದ ಬಾರಿ ಕೂರ್ಗಿನಲ್ಲಿ
ಕೇರಳಾದ ಕಡಲಿನಲ್ಲಿ
ಇನ್ನೂ ಜೀವ ನಡುಕವಿದೆ
ಮತ್ತೆ ಶಾಪ ಮೂಡಿದೆ

ಅತ್ತ ಕೃಷ್ಣೆ, ಇತ್ತ ತುಂಗೆ
ಜಲಾಶಯದಿ ಜೋಲಿಯಾಟ
ನೇತ್ರಾವತಿಯ ರೌದ್ರ ರೂಪ
ಕುಮಾರ ಧಾರ, ಫಲ್ಗುಣಿ
ಉಕ್ಕಿ ಹರಿದ ಕಂಬನಿ

ತಿಳಿದವರು ಗಂಟು ಕಟ್ಟಿ
ಊರನೂರ ಸೇರಿ ಬದುಕಿ
ಉಳಿದರು, ಕಣ್ಣೀರ ತಳೆದರು
ತಿಳಿಯದವರ ಗೋಳು ಇದು
ನಾಡು ತುಂಬಾ ದಾನಿ ಬೀಡು
ಇದೋ ಕಲ್ಯಾಣ ನೋಡು
ಪರಿಹಾರ ಪಂಜರ, ಸಾಗುತಿದೆ ಜನಸಾಗರ

ನದಿಯ ಬಳಿಗೆ ಹೋದವರು
ನದಿಯೇ ಬಳಿಗೆ ಬಂದಿದೆ
ಆನಾಗರೀಕತೆಯಿಂದ
ನಾಗರೀಕತೆಗೆ ಹೆಜ್ಜೆ ದನಿಯು ಹೀಗಿದೆ

ಕೈಗಾರೀಕತೆ ಕಟ್ಟಿದೆವು
ಕಂಪನಿಯನೇ ನೆಟ್ಟೆವು
ದುಡಿತದೊಳಗೆ ಜ್ಞಾನ ತುಂಬಿ
ಸೋಮಾರಿಯ ಬದುಕ ನಂಬಿ
ದಾಸರಾಗಿ ದಾಸ್ಯಹೊಂದಿ
ನಮ್ಮ ನಾಡ ಮರೆತೆವು

ಭೂಮಿಯನ್ನು ಕಟ್ಟುವಂತ
ಹರಿವ ನೀರ ಹರಿಸುವಂತ
ಬೆಳಕಿನಿಂದ ಬೆಳಕು ತಂದು
ಕೊಳಕಿನಿಂದ ಫಲವ ಬೆಳೆದು
ಕೆಸರಿನೆಸರ ಬಸಿರಿಗಿಡೆ
ಜ್ಞಾನ ನಮಗೆ ಬೇಕಿದೆ
ಕಣ್ಣು ತೆರೆವ ಮಣ್ಣಿನರಿವು
ಇದೋ ಇಲ್ಲಿ ಮೂಡಿದೆ - ಅಂಕುರ ೧೧+೦೮= ೧೯

ಗುರುವಾರ, ಆಗಸ್ಟ್ 8, 2019

                       ತುಂಗಭದ್ರೆ ಎಂಬ ತವಕ

    ಮಕ್ಕಳೆಂದರೆ ವಿಶ್ವಾಸದ ವಿಶ್ವಗಳು. ಅವು ಭವಿಷ್ಯತ್ತಿನ ಸಂಪತ್ತುಗಳು. ಮಕ್ಕಳನ್ನು ನಿರ್ಮಿಸಲು ತಂದೆ-ತಾಯಿಯಿಂದ ಪ್ರಾರಂಭವಾಗಿ ಸಮಾಜ, ವಿಶ್ವವೇ ಜವಾಬ್ದಾರಿ ಹೊರುತ್ತದೆ. ಇಂತಹ ವಿಶ್ವದ ಸಂಗಾತಿ ಮಕ್ಕಳನ್ನು ಕುರಿತು ಒಂದು ಸಾಹಿತ್ಯಲೋಕವೇ ಸೃಷ್ಠಿಗೊಂಡಿದೆ. ಈ ದಿಸೆಯಲ್ಲಿ ಒಂದು ಮಗುವಿನ ಕುರಿತು ಚರ್ಚಿಸುವುದು ಈ ಲೇಖನದ ಉದ್ದೇಶ.

    ಒಲವಿನ ಕವಿ ಎಂದೇ ಪ್ರಸಿದ್ಧವಾದ ಕೆ. ಎಸ್ ನರಸಿಂಹಸ್ವಾಮಿ ಅವರು ಜನಸಾಮಾನ್ಯರಿಗಾಗಿ ಕವಿತೆಯನ್ನು ಬರೆದ ಮಲ್ಲಿಗೆಯ ಕವಿ. ಈ ಕವಿಯು ನಲ್ಲ-ನಲ್ಲೆಯ ಕುರಿತು ನಲ್ಮೆಯಿಂದ ಬರೆದ ಸಾಹಿತ್ಯ ಇಂದಿಗೂ ಪ್ರಸಿದ್ಧ. ಅವರ 'ಮೈಸೂರು ಮಲ್ಲಿಗೆ' ಸಂಕಲನವು ಒಂದು ಸಂಸಾರದ ಸಾರವನ್ನೇ ವಿಚಾರ ವಿವರವಾಗಿ ನೀಡುವ ಏಕೈಕ ಕೃತಿಯಾಗಿದೆ. ಈ ಕವಿಯು ಎಲ್ಲಾ ಪ್ರಕಾರದಲ್ಲೂ ಸಾಹಿತ್ಯ ರಚನೆ ಮಾಡಿದ್ದರೂ ಪ್ರೀತಿ ತುಂಬುವ ವಿಷಯದಲ್ಲಿ ಜನಜನಿತವಾದವರು. ‘ತುಂಗಭದ್ರೆ’ ಎಂಬ ಕವಿತೆ ಒಲವಿನ ಕವಿತೆಗಳ ಮುಂದುವರೆದ ಭಾಗದಲ್ಲಿ ಕಾಣುವ ದಾರಿಯಂತೆ ಗೋಚರವಾಗುತ್ತದೆ. ಈ ಕವಿತೆಯು ವಿಶೇಷವಾಗಿ ಆಕರ್ಷಿತವಾಗುತ್ತದೆ.

    ತಂದೆ-ತಾಯಿ ಎಂಬ ಎರಡು ದಡಗಳ ನಡುವೆ ಮಗಳು ಚಂದಿರನ ಹಾಗೆ ಮೂಡಿದವಳು, ಶಾಂತ ಸ್ವರೂಪಿ. ಈ ತುಂಗಭದ್ರೆಯ ಬಾಲ್ಯದ ರೂಪವನ್ನು ಅತ್ಯಂತ ಸರಳವಾಗಿ ತಿಳಿಸಿದ್ದಾರೆ. ಈ ಮಗಳ ತುಂಟತನ, ಆಟ, ವೈಯಾರದ ಸೊಬಗು ವಿಶೇಷವಾದುದು. ಈ ತುಂಗಭದ್ರೆಯು ಹೊಳೆಯಲ್ಲವೆಂದು ಮೊದಲೇ ಅರ್ಥೈಸುವ ಮೂಲಕ ವಿಶೇಷ ಅರ್ಥಗಳಿಗೆ ಕಡಿವಾಣ ಹಾಕಿದ್ದಾರೆ. ಇವಳು ವರ್ಷದ ಮಗಳು ಈಗತಾನೇ ಬಾಲ್ಯದ ಅರ್ಥಕ್ಕೆ ಪದವಾಗಿ ಪದವಿಯೇರುತ್ತಿರುವ ಜೀವ. ಇವಳು ನನ್ನ ದೇವರು ಎನ್ನುವಾಗ ಅನಂತ ಸ್ವರೂಪವನ್ನೇ ನೀಡುತ್ತಾರೆ. ಕುವೆಂಪು ಈ ಸ್ಥಿತಿಯನ್ನು ‘ವಿಶ್ವಮಾನವ’ ಬಿಂಬವಾಗಿ ಕಾಣುತ್ತಾರೆ. ಜಗತ್ತಿನ ಯಾವುದೇ ರೂಪಗಳಿಗೂ ಸಿಲುಕದ ಮುಗ್ಧರೂಪ. ನಿರ್ಮಲ ಮನಸ್ಸು ಮಕ್ಕಳ ಸ್ವರೂಪ. ಇಂತಹ ಮಗುವಿನ ಪಾಲನೆಯನ್ನು ಮೊದಲಿಗೆ ತಿಳಿಹಾಸ್ಯದಲ್ಲಿ ನವಿರಾಗಿ ಬಿಂಬಿಸಿದ್ದಾರೆ. ಮದರಾಸಿನಲಿ ಬಿರುಗಾಳಿ ಎದ್ದು ಮೈಸೂರಿನಲಿ ಹತ್ತು ಹನಿ ಮಳೆ ಬಿದ್ದರೆ ತುಂಗಭದ್ರೆಗೆ ನೆಗಡಿ, ಬೀದಿಯಲಿ ಬಿಸಿಲು ಸುಳಿದರೆ ಉಷ್ಣ. ಈ ವ್ಯತ್ಯಾಸವು ಸಾಮಾನ್ಯವಾದ ವಿಚಾರವಾದರೂ ಅತ್ಯಂತ ಗಂಭೀರವಾದ ಹಿಂಸೆಗಳು ಆದ್ದರಿಂದ ಈ ವಿಚಾರದಲ್ಲಿ ಎಲ್ಲರೂ ಎಚ್ಚರವಹಿಸುತ್ತಾರೆ. ‘ತುಂಗಭದ್ರೆ’ಗೆ ಉಂಟಾಗುವ ಈ ಬದಲಾವಣೆಗೆ ಇಡೀ ಮನೆಯೇ ರಕ್ಷಣೆಗೆ ನಿಲ್ಲುತ್ತದೆ. ಎಲ್ಲರೂ ಈಕೆ ಕುರಿತು ಮಾತಾಡುವವರೇ. ಮಗುವಾದ ಕಾರಣ ದೇಹದ ಚಿಕ್ಕ ಬದಲಾವಣೆಗೂ ಸ್ಪಂದಿಸುತ್ತದೆ. ಮಾತುಬಾರದು ಮುಗ್ಧ ಕೂಸು ಅಳುವಿನ ಮೂಲಕ ಮಾತಾಡುತ್ತದೆ. ಈ ಅಳು ಕವಿಯ ಒಳಗಣ್ಣಿನ ಪ್ರೀತಿ. ತನ್ನ ಕಣ್ಣಿನ ಕಪ್ಪು ಬಿಂಬದ ದೀಪ್ತಿ. ಈ ಕಾರಣ ಮಗುವನ್ನು ಹಲವು ವಿಧದಲ್ಲಿ ಮುದ್ದಿಸಬೇಕು. ಬೆಚ್ಚಗೆ ಮಲಗಿಸುವ, ಆರೋಗ್ಯಕ್ಕಾಗಿ ಧೂಪವನಿಡುವ, ತೊಟ್ಟಿಲು ತೂಗುವ, ಲಾಲಿ ಹಾಡುವ, ಕಥೆ ಹೇಳುವ ಕೆಲಸ ಮಾಡಬೇಕು. ಆದರೆ ಈ ಮಗಳು ಮಲಗುವುದಿಲ್ಲ. ಮಾಯಾಂಗನೆಯಂತೆ ಅಳುವಿಂದ ನಗುವಿಗೆ ತನ್ನ ಸ್ವರೂಪವನ್ನೇ ಬದಲಿಸುತ್ತಾಳೆ. ಹೆಡೆ ಬಿಚ್ಚಿ ನಯನ ಮನೋಹರವಾಗಿ ನರ್ತಿಸುವ ಹಾವಿನಂತೆ ಸುಂದರವಾಗಿ ಈಕೆಯನ್ನು ಲಾಲಿಸುವವರಿಗೂ ನಗು ತುಂಬುತ್ತಾಳೆ.

    ಮಗಳಿಗೆ ವರ್ಷ ತುಂಬಿರುವ ಕಾರಣ ತೊಟ್ಟಿಲಿನಿಂದ ಮಂಡಿಯೂರಿ ನಡೆವ ನಾಲ್ಕು ಕಾಲಿನ ಕೂಸಾಗಿ ತನ್ನವರನ್ನು ಅಚ್ಚಿಕೊಳ್ಳುತ್ತದೆ. ಅದರಲ್ಲೂ ತುಂಗಭದ್ರೆ ಮಗಳು ತಂದೆಯೆಂದರೆ ತುಂಬಾ ಪ್ರೀತಿ. ಏಕೆಂದರೆ ದಿನವೆಲ್ಲಾ ತಾಯಿ ಬಳಿಯೇ ಅಧಿಕಾರ ನಡೆಸಿ ರಾತ್ರಿಯಾದರೆ ಸಾಕು ಹೊರಗಿನಿಂದ ಬರುವ ತಂದೆಗೆ ದೇವರ ಪದಕದಂತೆ ಆಕರ್ಷಣೆ, ಆಪ್ತಪ್ರೀತಿ. ಹೊಸಿಲು ದಾಟಲು ಬಿಡದೆ ಸರ್ಪದ ಕಾವಲಿನಂತೆ ಸದಾ ತಂದೆಯೂ ನನ್ನ ಜೊತೆಯಲ್ಲಿರಲಿ ಎಂದು ಬಯಸುವ ಮುಗ್ಧ ಭಾವ. ಈ ಮಗಳು ತುಟಿತೆರೆದರೆ ಸಾಕು ಹಾಲುಹಲ್ಲಿನ ರೂಪದ ದರ್ಶನ ಮೇಲಿನ ತುಂಟಿಯಂಚಲಿ ಸಣ್ಣಕ್ಕಿಯಂತೆ ಹಾಗೂ ಕೆಳದುಟಿಯ ಹಿಂದೆ ಹಾಲಿನ ಚುಕ್ಕಿಯಂತೆ. ಬಟ್ಟತಲೆ, ದುಂಡಾದ ಮುಖ ಹಾಗೂ ಕಣ್ಣಿನ ರೂಪವು ಕಿವಿಯತನಕವೆಂದು ಮುಖದ ಮನೋಹರತೆಯನ್ನು ವರ್ಣಿಸಿದ್ದಾರೆ. ಆ ಮಗುವಿನ ತಲೆಯ ಮೇಲೆ ಶಾಸ್ತçಕ್ಕೆ ಅಂದರೆ ಲೆಕ್ಕಕ್ಕಾಗಿ ಹತ್ತು ಕೂದಲು, ಆ ಕೂದಲನ್ನೇ ಸೇರಿಸಿ ಒಂದು ಮರಳು ಜಡೆ, ಅಂದರೆ ಬ್ರಹ್ಮಗಂಟು. ಇಲ್ಲಿ ಕೆಲವು ವಿಷಯಗಳು ಮುಖ್ಯವಾಗಿವೆ. ಬ್ರಹ್ಮಗಂಟಿನ ಮೂಲಕ ಹೆಣ್ಣಿನ ಸಂಕೇತವನ್ನು ನೀಡುವುದು ಅಂದರೆ ಸಂಬಂಧದ ಶಾಶ್ವತತೆ ಹಾಗೂ ಪವಿತ್ರದ ಗಂಟಾಗಿ ಜೈವಿಕ ಬೆಳವಣಿಗೆ ಸ್ವರೂಪ ತುಂಬುವುದು, ಬಿಡಿಸಲಾಗದ ಸಮಸ್ಯೆಯಾಗಿಯೂ ಅವಲೋಕಿಸುತ್ತಾರೆ.
 
    ಈ ಮಗುವಿನ ಆಟದ ಕ್ರಿಯೆಯೇ ಒಂದು ಸೋಜಿಗ. ಲೋಕದ ಯಾವುದೇ ಚೇಷ್ಠೆಗಳು ತಿಳಿಯದ ಈ ವರ್ಷದ ವಯಸ್ಸಿನಲ್ಲಿ ಪರಿಚಯದ ಪದನಿಧಿಗೆ ಹೆಜ್ಜೆಯಿಡುತ್ತದೆ. ಎಲ್ಲವನ್ನೂ ಮುಕ್ತವಾಗಿ ಮುಗ್ಧವಾಗಿ ಅವಲೋಕಿಸುತ್ತಾ ಸಾಗುವ ಜೀವಕ್ಕೆ ಅನುಭವದ ಮೊದಲ ಶಿಕ್ಷಣ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಧೈರ್ಯವೇ ಧೈರ್ಯ. ಆಗಾಗ ಮುಂಗೋಪ. ಎಲ್ಲರೂ ನನ್ನ ಇಷ್ಟಪಡಲಿ ಎಂದು ಭಾವಿಸುವ ‘ಇಷ್ಟ’ ಪ್ರವೃತ್ತಿ ಪ್ರಾರಂಭವಾಗುವುದೇ ಈ ವರ್ಷದ ವಯಸ್ಸಿನಲ್ಲಿ ಎನ್ನಬಹುದು. ಇದನ್ನು ‘ಇಗೋ’ವಿನ ಮೊದಲ ಹೆಜ್ಜೆ ಎಂದು ಮನೋವಿಜ್ಞಾನ ತಿಳಿಸುತ್ತದೆ. ತಂದೆ ಬೇಸರ ಮಾಡಿದ ತಾಯಿಯ ಬಳಿಗೆ ಓಡಿಹೋಗುವ ‘ತುಂಗಭದ್ರೆ’ಯು ತಾಯಿ ಗದರಿದರೆ ಅಂಬೆಗಾಲಿಡುತ ಕಣ್ಣೀರು ಸುರಿಸುತ್ತಾ ತಂದೆಯ ಬಳಿ ಬಂದು ಸೇರುತ್ತಾಳೆ. ಅಂದರೆ ಕೋಪವೇ ತಿಳಿಯದ ಕಂದನಿಗೆ ಪ್ರೀತಿಯೇ ಪ್ರಾಧಿಕಾರ, ಅಪೇಕ್ಷೆ.

    ಕೆ. ಎಸ್ ನರಂಸಿಂಹಸ್ವಾಮಿ ಅವರು ಈ ಕವಿತೆಯಲ್ಲಿ ‘ಸಂಸಾರವು ಒಂದು ಸಾಗರ'ವೆಂದಿದ್ದಾರೆ. ಸಾಗರಕ್ಕೆ ಎರಡು ದಡಗಳಿದ್ದಂತೆ ತಂದೆ ಹಾಗೂ ತಾಯಿ. ಮಗು ಎರಡು ದಡಗಳಿಗೂ ಚಲಿಸುವ ಚಂದ್ರ ರೂಪ. ಶಾಂತ ಸ್ವರೂಪ. ಈ ಮಗುವಿನ ತರಹ ನಮಗೆ ಯೋಗವಿಲ್ಲವೆಂದು ಕೊರಗುತ್ತಾರೆ. ಏಕೆಂದರೆ ಬಾಲ್ಯದಲ್ಲಿ ಜೀವದ ಕಣ್ಣಾಗಿ ಮಕ್ಕಳನ್ನು ಕಾಪಾಡುವ ತಂದೆ, ತಾಯಿ ಎಷ್ಟೊ ಜನ ಆ ವೇಳೆಗೆ ಅನಾಥರಾಗಿರುತ್ತಾರೆ. ಈ ಬದುಕಿನ ದಡವು ಬೇಸರವಾದರೆ ಇನ್ನೊಂದು ದಡಕ್ಕೆ ಪ್ರೀತಿ ಹುಡುಕಿ ಹೋಗಲು ಆ ದಡವೇ ಮುಳುಗಿ ಹೋಗಿರುತ್ತದೆ. ಇದೇ ರೀತಿ ಮುಂದೆ ಈ ಪುಟ್ಟ ಮಗಳು ದೊಡ್ಡವಳಾಗುತ್ತಾಳೆ. ಅವಳಿಗೂ ಈ ಅನಾಥಭಾವ ಕಾಡಬಹುದು. ಇಂದು ನಮ್ಮ ಅನಾಥಭಾವವನ್ನು ಹೋಗಲಾಡಿಸಲು ನಂಬಿಕೆಯನ್ನೆ ಹೊತ್ತು ತಂದವಳು ತನ್ನ ನಂಬಿಕೆಯನ್ನೆ ಕಳಚಿ ನಿಂತು ಅನಾಥವಾಗುವ ಕಾಡುದಾರಿಯ ಪರಿತಪವನ್ನು ನೆನೆದು ಭಯಗೊಳ್ಳುತ್ತಾರೆ. ತಳಮಳದಿಂದ ಕನವರಿಸಿ ಪ್ರತಿ ನಿದ್ದೆಯಿಂದ ಎಚ್ಚರಗೊಳ್ಳುವ ನನ್ನ ಜೀವಂತಿಕೆಯಲ್ಲಿ ಆಕೆಯ ಭವಿಷ್ಯದ ಚಿಂತೆಯಿದೆ ಎನ್ನುತ್ತಾರೆ. ಮುಂದೆ ಏನಾಗುವುದೋ ಎಂದು ನೋವುಪಡುವ ತಂದೆಯ ಈ ತವಕ ಭಾವದಲ್ಲಿ ಮಗಳೆಂಬ ಮುಗ್ಧತೆಯು ಕೂಡಿ ಕಳಚುವ ಕೊಂಡಿಯಾಗಿದೆ.

    ಪ್ರತಿ ತಂದೆಗೂ ಪ್ರಾಣತುಂಬುವ ಮಗಳ ಸ್ವರೂಪವು ಸಿಗ್ಮಂಡ್ ಫ್ರಾಯ್ಡ್ ಥಿಯರಿಯನ್ನು ತಿಳಿಸಿದರೂ ಸಹ ಅದು ಕೂಡಿ-ಕಳಚುವ ಕೊಂಡಿಯಲ್ಲಿ ಅನಾಥಭಾವದ ನಂಟಿದೆ. ತನ್ನ ಮಗಳು ಎರಡು ಸಂಸಾರದಲ್ಲಿ ಬದುಕುವಾಗ ಅನಾಥಳಾಗುವ ನೋವು ತಂದೆಯಲ್ಲಿ ಅಭಿವ್ಯಕ್ತಗೊಳ್ಳುತ್ತದೆ. ಈ ದೃಷ್ಠಿಕೋನದಲ್ಲಿ ‘ತುಂಗಭದ್ರೆ’ ಎಂಬ ಕವಿತೆಯು ತಂದೆ-ಮಗಳ ನಂಟನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದೆ. ಕೆ.ಎಸ್.ನ ಅವರು ಪ್ರತಿ ಜೀವದಲ್ಲೂ ಒಲುಮೆಯನ್ನು ಕಾಣುವ ಕವಿ. ಜೀವನವೆಂದರೆ ನಂಟು. ಅದೊಂದು ಸಂಬಂಧಗಳನ್ನು ಬೆಸೆಯುವ ಬ್ರಹ್ಮಗಂಟಾಗಿ ಕಾವ್ಯ ನಿರ್ಮಿಸಿದ್ದಾರೆ.

ಕೆ. ಎಸ್ ನರಸಿಂಹಸ್ವಾಮಿ ಅವರ ಕುರಿತು ಮಾಹಿತಿಗಾಗಿ ವಿಕಿಪಿಡಿಯಾ ಲಿಂಕ್ :

https://kn.wikipedia.org/s/jf


ಬುಧವಾರ, ಜುಲೈ 31, 2019

Constantinople
C-O-N-S-T-A-N-T-I-N-O-P-L-E
C-O-N-S-T-A-N-T-I-N-O-P-L-E
Use your pluck now try your luck to sing along with me,
Constantinople
C-O-N-S-T-A-N-T-I-N-O-P-L-E
C-O-N-S-T-A-N-T-I-N-O-P-L-E
It’s as easy to sing as you sing your A-B-C.
ನಾನು ಕೋಳಿಕೆ ರಂಗ
‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ
ಕಕೊತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಹಃ ಹಃ ಹಃ
ಬೆಪ್ಪು ನನ್ ಮಗ
ನಾನು ಕೋಳಿಕೆ ರಂಗ
‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ
ಕಕೊತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ
ನಮ್ಮ ತಿಪ್ಪಾರಳ್ಳಿ ಬೋರನ್ ಅಣ್ಣನ್ ತಮ್ಮನ್ ದೊಡ್ಡ್ ಮಗ
ನಾ ಹುಟ್ಟಿದ್ ದೊಡ್ದ್ರಳ್ಳಿ, ಬೆಳ್ದಿದ್ ಬ್ಯಾಡ್ರಳ್ಳಿ,
ಮದುವೆ ಮಾರ್ನಳ್ಳಿ ಬೆಳೆಗಳ್ ಹಾರ್ನಳ್ಳಿ;
ನಮ್ ಶಾನ್ಬ್ಹೊಗಯ್ಯ, ಅಲ್ದೆ ಶೆಕ್ದಾರಪ್ಪ
ಇವ್ರೆಲ್ರು ಕಂಡವ್ರೆ ನನ್ನಾ.
ನಾ ಹುಟ್ಟಿದ್ ದೊಡ್ದ್ರಳ್ಳಿ, ಬೆಳ್ದಿದ್ ಬ್ಯಾಡ್ರಳ್ಳಿ
ಮದುವೆ ಮಾರ್ನಳ್ಳಿ ಬೆಳೆಗಳ್ ಹಾರ್ನಳ್ಳಿ
ನಮ್ ಶಾನ್ಬ್ಹೊಗಯ್ಯ, ಅಲ್ದೆ ಶೆಕ್ದಾರಪ್ಪ
ಇವ್ರೆಲ್ರು ಕಂಡವ್ರೆ ನನ್ನಾ
ಹೆಂಡರ್ನು ಮಕ್ಕಳ್ನು ಬಿಟ್ಟು, ಹಟ್ಟಿ ಅದನ್ನು ಬಿಟ್ಟು,
ಹೆಂಡರ್ನು ಮಕ್ಕಳ್ನು ಬಿಟ್ಟು, ಹಟ್ಟಿ ಅದನ್ನು ಬಿಟ್ಟು,
ಬಂದಿವ್ನಿ ನಾ, ನಿಮ್ಮುಂದೆ ನಿಂತಿವ್ನಿ ನಾ
ಬಂದಿವ್ನಿ ನಾ, ನಿಮ್ಮುಂದೆ ನಿಂತಿವ್ನಿ ನಾ
ನಂಹಳ್ಳಿ ಕಿಲಾಡಿ ಹುಂಜಾ!
ನಾನು ಕೋಳಿಕೆ ರಂಗ
‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ
ಕಕೊತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಹಃ ಹಃ ಹಃ
ಬೆಪ್ಪು ನನ್ ಮಗ
ನಾನು ಕೋಳಿಕೆ ರಂಗ
‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ
ಎತ್ತಿಲ್ಲದ್ ಬಂಡಿಗಳುವೆ ಎಣ್ಣೆಲ್ಲದ್ ದೀಪಗಳುವೆ,
ತುಂಬಿದ್ ಮೈಸೂರಿಗ್ ಬಂದೆ;
ದೊಡ್ಡ್ ಚೌಕದ ಮುಂದೆ, ದೊಡ್ಡ್ ಗಡಿಯಾರದ ಹಿಂದೆ
ಕಟ್ ತಂದಿದ್ ಬುತ್ತಿನ್ ತಿಂತಿದ್ದೆ.
ಎತ್ತಿಲ್ಲದ್ ಬಂಡಿಗಳುವೆ ಎಣ್ಣೆಲ್ಲದ್ ದೀಪಗಳುವೆ,
ತುಂಬಿದ್ ಮೈಸೂರಿಗ್ ಬಂದೆ;
ದೊಡ್ಡ್ ಚೌಕದ ಮುಂದೆ, ದೊಡ್ಡ್ ಗಡಿಯಾರದ ಹಿಂದೆ
ಕಟ್ ತಂದಿದ್ ಬುತ್ತಿನ್ ತಿಂತಿದ್ದೆ.
ಅಲ್ ಕುದ್ರೆಮೇಲ್ ಕುಂತಿದ್ದೊಬ್ಬ್ ಸವಾರಯ್ಯ, ಕೆದ್ರಿದ್ ತನ್ ಮೀಸೆಮೇಲ್ ಹಾಕ್ದ ತನ್ ಕೈಯ್ಯ,
ಕೇಳ್ತಾನ್ ನನ್ನಾ ಗದ್ರುಸ್ತಾಲಿ ಬೆದ್ರುಸ್ತಾಲಿ “ಲೇ, ಯಾರೋ ಯಾಕೋ ಇಲ್ಲಿ” ಅಂತ!
ಹಃ ನಾನು..
ನಾನು ಕೋಳಿಕೆ ರಂಗ
‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ
ಕಕೊತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು
ಬೆಪ್ ನನ್ ಮಗ.
ಸಾಹಿತ್ಯ – ಟಿ.ಪಿ.ಕೈಲಾಸಮ್
ಸಂಗೀತ – ಸಿ ಅಶ್ವಥ್
ಗಾಯನ – ಸಿ ಅಶ್ವಥ್ ಮತ್ತು ಸಂಗಡಿಗರು

ಬುಧವಾರ, ಜೂನ್ 26, 2019

ವಚನದ ಸಾರವೇ ಈ ಕವಿತೆ







ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ 
ಇಲ್ಲೇ ಇರುವ ಪ್ರೀತಿ ಸ್ನೇಹಗಳ 
ಗುರುತಿಸದಾದೆನು ನಮ್ಮೊಳಗೆ

ಎಲ್ಲಿದೆ ನಂದನ ಎಲ್ಲಿದೆ ಬಂಧನ 
ಎಲ್ಲಾ ಇವೆ ಈ ನಮ್ಮೊಳಗೆ 
ಒಳಗಿನ ತಿಳಿಯನು ಕಲಕದೆ ಇದ್ದರೆ 
ಅಮೃತದ ಸವಿಯಿದೆ ನಾಲಗೆಗೆ

ಹತ್ತಿರವಿದ್ದೂ ದೂರ ನಿಲ್ಲುವೆವು 
ನಮ್ಮ ಅಹಮ್ಮಿನ ಕೋಟೆಯಲಿ 
ಎಷ್ಟು ಕಷ್ಟವೋ ಹೊಂದಿಕೆ ಎಂಬುದು 
ನಾಲ್ಕು ದಿನದ ಈ ಬದುಕಿನಲಿ





ಜಿ.ಎಸ್.ಶಿವರುದ್ರಪ್ಪ ಅವರ ಈ ಕವಿತೆ ವಚನ ಸಾಹಿತ್ಯದ ಸಂಪೂರ್ಣ ಆಶಯವನ್ನು ಹೇಳಬಲ್ಲದು. ಪ್ರಸ್ತುತ ಹೊಂದಿಕೆಯಾಗುವ ಈ ಕವನ ಮನುಷ್ಯ ಸಂಬಂಧಗಳ ನಡುವಿನ ಬಿಕ್ಕಟ್ಟುಗಳನ್ನು ಸರಳವಾಗಿ ಹೇಳುತ್ತದೆ. ದೇವನಿರುವುದು ಆತ್ಮದಲ್ಲಿ ಎಂದು ತಿಳಿದಿದ್ದರೂ ಆಡಂಬರಕ್ಕಾಗಿ ದೇವಾಲಯಗಳಲ್ಲಿ ದೇವರನುಡುಕುವ ಡಾಂಭಿಕ ಕಾರ್ಯದಲ್ಲಿ ತೊಡಗಿದ್ದೇವೆ. ನಮಗೆ ಭಯವಿದೆ. ಏಕೆಂದರೆ ನಮ್ಮ ಕುರಿತು ನಮಗೆ ಅಷ್ಟು ಪೂರ್ಣ ನಂಬಿಕೆ ಇಲ್ಲದಿರುವುದೇ ಆ ಭಯ, ಅಂಜಿಕೆ. ಈ ಸಮಾಜದಲ್ಲಿ ಪರಸ್ಪರರು ಪ್ರೀತಿ-ಸ್ನೇಹಗಳಿಂದ ವರ್ತಿಸಿ ಬಾಳುವುದರಿಂದ ಯಾವ ದ್ವೇಷವೂ ಇರಲಾರದು. ಸ್ವಾರ್ಥದ ಕಾರಣದಿಂದ ಗೆಲ್ಲುವ ಸವಾರಿ ಹೊರಟಿದ್ದೇವೆ. ಮನುಷ್ಯರ ನಡುವಿನ ಈ ಬಿಕ್ಕಟ್ಟು ಸಮಾಜ, ರಾಜ್ಯ, ದೇಶ-ದೇಶಗಳ ನಡುವಿನ ಹಿಂಸೆಗೆ ಕಾರಣವಾಗಿದೆ. ಇಷ್ಟು ಹಿಂಸೆಯ ಉಲ್ಬಣವಿದ್ದರೂ ನಾವು ಗುಡಿ-ಚರ್ಚು-ಮಸೀದಿ-ಸ್ತೂಪ-ಬಸದಿಗಳಲ್ಲಿ, ಮತಧರ್ಮಗಳ ಮತಿಹೀನತೆಯಲ್ಲಿ ಪರಿಹಾರ ಹುಡುಕುತ್ತಿದ್ದೇವೆ.

ಮನುಷ್ಯನ ಎಲ್ಲಾ ಕ್ರಿಯೆಗಳು ಕೂಡ ಸಂತೋಷವಾಗಿ ಬದುಕುವ ಕಾರಣ ನಡೆಯುತ್ತಿವೆ. ಈ ಬದುಕಿನ ಎಲ್ಲಾ ಹಿಂಸೆಗಳು ಈ ಕ್ರಿಯೆಗಳಿಂದಲೇ ನಿರ್ಮಿತವಾಗಿವೆ. ನಮ್ಮ ಮನಸ್ಸನ್ನು ನಾವೇ ನಿರ್ಮಾಣಮಾಡಿಕೊಳ್ಳಬೇಕು. ಇನ್ನೊಬ್ಬರಲ್ಲಿ ನಮ್ಮ ಲಾಭವನ್ನು ಹುಡುಕಿದರೆ ಅದೇ ಹಿಂಸೆ. ಹುಡುಕದೇ ಅವರೂ ನಮ್ಮಂತೆ ಎಂದು ಭಾವಿಸಿದರೆ ಅದೇ ನಂದನ, ಆನಂದ.  ಈ ನಿರ್ಮಲವಾದ ಮನಸ್ಸಿನ ಆತ್ಮವನ್ನು ಕಲಕುತ್ತಾ ಸದಾ ನೋವಿನಲ್ಲಿ ಬದುಕು ಸಾಗಿಸುವ ಬದಲು ನಮ್ಮೊಳಗೆ ಇರುವ ಅಮೃತದಂತಹ ಆನಂದವನ್ನು, ಮನದ ತಿಳಿಯನ್ನು ಕಲಕದೆ ಅನುಭವಿಸಬೇಕು, ಸವಿಯಬೇಕು, ಪರರಿಗೂ ಉಣಿಸಬೇಕು. 'ಇದಂ ಶರೀರಂ ಪರೋಪಕಾರಾರ್ಥಂ' ಎಂಬಂತೆ ನಿಸ್ವಾರ್ಥ ಗುಣ ನಮ್ಮದಾಗಬೇಕು.





ಮನುಷ್ಯನ ಬದುಕು ಪರಸ್ಪರ ಸಂಬಂಧಗಳ ಸರಪಳಿಯಲ್ಲಿ ಇರುವಂತಹದು. ರಕ್ತ ಸಂಬಂಧ,  ಪರಿಚಯದ ಮೂಲಕ ನಾವು ಆತ್ಮೀಯತೆ ಗಳಿಸಿರುತ್ತೇವೆ. ಎಷ್ಟೇ ಹತ್ತಿರವಿದ್ದರೂ ಮಾನಸಿಕವಾಗಿ ತುಂಬಾ ದೂರ ಉಳಿದಿರುತ್ತೇವೆ. ಕೇವಲ ಋಣಾತ್ಮಕವಾಗಿ ತಪ್ಪುಗಳನ್ನು ಹುಡುಕುತ್ತಾ ಅವರಿಂದ ದೂರ ಉಳಿಯುತ್ತಿರುತ್ತೇವೆ. ಈ ಬದುಕು ನಾಲ್ಕುದಿನ ಸಂತೆಯಂತೆ ಇರುವುದು. ಇಂತಹ ಬದುಕಿನಲ್ಲಿ ಹೊಂದಿಕೆಯೆಂಬುದು ಮುಖ್ಯವಾದುದು. ಅದೇ ಹೊಂದಾಣಿಕೆ ಕಷ್ಟವಾದರೆ ನಮ್ಮ ಇಷ್ಟವಾದ ಬದುಕು ಸಿಗಲಾರದು.

ಮನೆಯಲ್ಲಿ ನಾವು ಎಷ್ಟು ಅನ್ಯೋನ್ಯತೆ ಹೊಂದಿದ್ದೇವೆ. ಸಮಾಜದಲ್ಲಿ ಇತರರ ಕುರಿತು ನಮ್ಮ ಅಭಿಪ್ರಾಯಗಳೇನು! ಈ ಅಂಶಗಳು ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ. ಒಂದು ಕಾರ್ಯಾರ್ಥವಾಗಿ ಇಲ್ಲಿ ಜನಿಸಿರುವ ನಾವು ಸ್ವಾರ್ಥವನ್ನು ಬಿಟ್ಟು ನಮ್ಮನ್ನು ಪ್ರೀತಿಸುವವರ ಮೇಲೆ ಪ್ರೀತಿಯನ್ನು ಹೊಂದಿ ಯಾರನ್ನೂ ದ್ವೇಷಿಸದೇ ನಮ್ಮ ಕಾಲವನ್ನು ಫಲಪ್ರದಗೊಳಿಸಬೇಕಿದೆ.

ಬುಧವಾರ, ಮೇ 15, 2019

                               ಬೇರು ತೇರು

ಬೇರು ತೇರು

ಸಂಪಾದನೆ : ಮಂಜುನಾಥ ಡಿ. ಎಸ್.
ರವಿಶಂಕರ ಎ.ಕೆ.
ಅನಿತ ಕೆ.ವಿ.

ಪ್ರಕಾಶನ : ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ (ರಿ)., ಬೆಂಗಳೂರು.

ಬೆಲೆ : ೨೨೦ರೂಗಳು


'ಬೇರು ತೇರು' 

ಇದೊಂದು ಅಪೂರ್ವ ಕೃತಿಯಾಗಿದೆ. ಕನ್ನಡ ಸಾಹಿತ್ಯದ ಪ್ರಾರಂಭದ ಗದ್ಯ ಬರಹಗಾರರಲ್ಲಿ ಕುವೆಂಪು ಹಾಗೂ ಬೇಂದ್ರೆ ಪ್ರಮುಖರು. ಇವರ ಗದ್ಯ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಸಂಶೋಧನಾ ಲೇಖನಗಳನ್ನು ಕರ್ನಾಟಕ ಹಾಗೂ ಹೊರರಾಜ್ಯಗಳ ವಿವಿಧ ಕಾಲೇಜು, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಸಂಶೋಧಕರು ರಚಿಸಿದ್ದಾರೆ.
ಇದರಲ್ಲಿರುವ ಲೇಖನಗಳ ರಚನೆಯಲ್ಲಿ ಕುವೆಂಪು ಬೇಂದ್ರೆ ಅವರು ರಚಿಸಿದ ನಾಟಕ, ಕಥೆ, ಭಾಷಣ, ಲೇಖನ, ಕಾದಂಬರಿ, ಮೀಮಾಂಸೆ, ವಿಮರ್ಶಾತ್ಮಕ ಕೃತಿಗಳನ್ನು ಲೇಖಕರು ಅನುಲಕ್ಷಿಸಿದ್ದಾರೆ. ಈ ಕೃತಿಯನ್ನು ಮಂಜುನಾಥ ಡಿ. ಎಸ್., ರವಿಶಂಕರ ಎ.ಕೆ., ಅನಿತ ಕೆ.ವಿ ಸಂಪಾದಿಸಿದ್ದಾರೆ.
ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಪ್ರಕಟಿಸಿದ ಮೊದಲ ಕೃತಿ ಇದು.

ಕನ್ನಡ ಸಾಹಿತ್ಯದಲ್ಲಿ ಕುವೆಂಪು ಬೇಂದ್ರೆ ಅವರ ಗದ್ಯಸಾಹಿತ್ಯದ ಅಧ್ಯಯನಕ್ಕೆ ಮೀಸಲಾದ ಮೊದಲ ಕೃತಿ.

ದಿನಾಂಕ ೧೧,೧೨ ಮೇ ೨೦೧೯ ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಬೇರು ತೇರು ಕೃತಿಯು ಬಿಡುಗಡೆಗೊಂಡು ಅಧಿವೇಶನಗಳ ರೂಪದಲ್ಲಿ ಚರ್ಚಿಸಲಾಯಿತು. ವಿವಿಧ ವಿಷಯ ತಜ್ಞರು ಈ ಕೃತಿ ಕುರಿತು ವಿಚಾರಗಳನ್ನು ಮಂಡಿಸಿದರು.

ಕಾರ್ಯಕ್ರಮದ ಚಿತ್ರಗಳು

















ಮಂಗಳವಾರ, ಫೆಬ್ರವರಿ 12, 2019

ಬೇಂದ್ರೆ ಕಾವ್ಯ : ಪದನಿರುಕ್ತ ಲೋಕಾರ್ಪಣೆ

ಕಿಟೆಲ್ ಕೋಶದಂತೆ ಕನ್ನಡದಲ್ಲಿ ಮತ್ತೊಂದು ಸೇವೆ ಎಂದರೆ ಕೃಷ್ಣಪ್ಪನವರ ಬೇಂದ್ರೆ ಕಾವ್ಯ : ಪದನಿರುಕ್ತ –
ನಾಡೋಜ ಚಂದ್ರಶೇಖರ ಕಂಬಾರರು



ಜರ್ಮನಿಯಿಂದ ಬಂದು ಕನ್ನಡದ ದೇಸಿ ಪದಗಳನ್ನು ಊರೂರು ತಿರುಗಿ ಜನರಿಂದ ಅರ್ಥ ಸಂಗ್ರಹಿಸಿ ಕಿಟೆಲ್ ತಮ್ಮ ಕೋಶವನ್ನು ರಚಿಸಿದನು ಅಂತಹ ಕಾರ್ಯವನ್ನು ಸಮರ್ಥವಾಗಿ ಕೃಷ್ಣಪ್ಪನವರು ಬೇಂದ್ರೆ ಕಾವ್ಯದ ಮೇಲೆ ಮಾಡಿದ್ದಾರೆ ಈ ನಿಮ್ಮ ಕಾರ್ಯಕ್ಕಾಗಿ ಇಡೀ ಕನ್ನಡ ನಾಡು ಕೃತಜ್ಞವಾಗಿದೆ ಎಂದು ಡಾ. ಚಂದ್ರಶೇಖರ ಕಂಬಾರ ಅವರು ಉದಯಭಾನು ಕಲಾಸಂಘ ಎರ್ಪಡಿಸಿದ್ದ ‘ಬೇಂದ್ರೆಕಾವ್ಯ: ಪದನಿರುಕ್ತ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅಭಿಪ್ರಾಯ ಪಟ್ಟರು. ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಮತ್ತು ಸಾಮಾಜಿಕವಾಗಿ ಸುಮಾರು ಅರವತ್ತು ವರ್ಷಗಳ ಕಾಲ ಈ ನಗರದಲ್ಲಿ ಅನನ್ಯ ಸೇವೆ ಮಾಡಿದ ಉದಯಭಾನು ಕಲಾಸಂಘದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಇದರ ಕಾರ್ಯವನ್ನು ಯಾವುದೇ ಸಂಸ್ಥೆಗೂ ಹೋಲಿಸಲಾಗದು, ಇದು ‘ಪ್ರಜಾ ಜನ್ಯಕಾರ್ಯ’ ಎಂದು ಗೌರವ ವ್ಯಕ್ತಪಡಿಸಿದರು. ಕುವೆಂಪು, ಬೇಂದ್ರೆ ಮತ್ತು ಪಂಜೆ ಮಂಗೇಶರಾಯರು ಈ ಮೂವರು ಜನಪದದಿಂದ ಸಾಕಷ್ಟು ಸಾಮಾಗ್ರಿಗಳನ್ನು ತಂದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಕನ್ನಡ ಸಾಹಿತ್ಯದ ಸೂರ್ಯಚಂದ್ರರೆಂದು ಇವರಿಬ್ಬರನ್ನು ಕರೆಯುತ್ತಿದ್ದರು ಬೇಂದ್ರೆಯವರು ತುಂಟತನದಿಂದ ನಾನು ಸೂರ್ಯನೋ, ಚಂದ್ರನೋ ಹೇಳಿ ಎಂದು ತಮಾಷೆ ಮಾಡಿದ್ದರು. ಕಿಟೆಲ್ ಜರ್ಮನಿಯಿಂದ ಬಂದು ಜನಸಾಮಾನ್ಯರ ಬಳಿಗೆ ಹೋಗಿ ಪ್ರತಿಯೊಂದು ಪದವನ್ನು ತಿಳಿದವರು ಹೇಳಿ ಎಂದು ಕೇಳುತ್ತಾ ಕಿಟೆಲ್ ಕೋಶ ರಚಿಸಿದರು. ಇವತ್ತಿಗೂ ಶ್ರೇಷ್ಠವಾದ ಕೃತಿಯದು. ಅಂತಹ ಅನನ್ಯವಾದ ಕಾರ್ಯವನ್ನು ಕೃಷ್ಣಪ್ಪನವರು ಮಾಡಿದ್ದಾರೆ. ನಾಲ್ಕು ದಶಕಗಳ ಕಾಲ ತಪಸ್ಸಿನಂತೆ ಮಾಡಿದ್ದಾರೆ. ಇದು ಬಹಳ ಸಾರ್ಥಕ ಕೆಲಸ ಹಾಗೂ ಇನ್ನೊಬ್ಬರು ಮಾಡಲಾಗದ ಕೆಲಸವಾಗಿ ಕಾಣುತ್ತದೆ. ನಾನೂ ನಿಮಗೆ ಕೃತಜ್ಞನಾಗಿದ್ದೇನೆ ಇದಕ್ಕಿಂತ ಹೆಚ್ಚು ಹೇಳಲಾಗದು ಎಂದು ಗೌರವ ಸಲ್ಲಿಸಿದರು.
‘ಬೇಂದ್ರೆಕಾವ್ಯ : ಪದ ನಿರುಕ್ತ’ ಗ್ರಂಥವನ್ನು ಪರಿಚಯಿಸುತ್ತಾ ಮೂರು ಸಾವಿರ ವರ್ಷಗಳ ಹಿಂದೆ ಸಂಸ್ಕೃತದಲ್ಲಿ ವೇದಗಳಿಗೆ ವ್ಯುತ್ಪತ್ತಿಯನ್ನು ರಚಿಸಿ ನಿರುಕ್ತ ಎಂಬ ಹೆಸರಿನಲ್ಲಿ ಯಾಸ್ಕನು ಬರೆದಿದ್ದಾನೆ. ಇದು ಭಾರತದಲ್ಲಿಯೇ ಇಂತಹ ಕಾರ್ಯ ಇದುವರೆಗೂ ಆಗಿಲ್ಲ. ಕನ್ನಡ ಸಾಹಿತ್ಯದಲ್ಲಿ ಆಧುನಿಕ ಕಾಲದಲ್ಲಿ ಕೃಷ್ಣಪ್ಪನವರ ಬೇಂದ್ರೆಕಾವ್ಯ: ಪದನಿರುಕ್ತ ಬರುವವರೆಗೂ ಇಂತಹ ಕಾರ್ಯ ಮತ್ತೊಂದು ಆಗಿಲ್ಲ. ಒಬ್ಬ ಕವಿಯನ್ನು ಪೂರ್ಣವಾಗಿ ಅಧ್ಯಯನ ಮಾಡಿ ಬೇಂದ್ರೆ ಕಾವ್ಯ ಅಧ್ಯಯನ ಮಾಡುವವರಿಗೆ  ನಿರುಕ್ತ ರಚಿಸಿಕೊಟ್ಟಿದ್ದಾರೆ. ಉಕ್ತ, ಅನುಕ್ತ, ದುರುಕ್ತ ಎಂಬ ಸಂಸ್ಕೃತದಲ್ಲಿ ಒಂದು ಯಾಸ್ಕನ ಕೃತಿ ಮಾತ್ರವಿದೆ. ಒಂದು ಕಾವ್ಯಕ್ಕೆ ಪ್ರವೇಶ ಮಾಡಲು ಅಂತಹ ಕಾರ್ಯವನ್ನು ಸಮಗ್ರವಾಗಿ ನೀಡಿದೆ. ತೆಲುಗಿನಲ್ಲಿ ಇಂತಹ ಹಲವು ಸಾಹಿತಿಗಳ ಮೇಲೆ ಇಂತಹ ಕಾರ್ಯವಾಗಿದೆ. ಕನ್ನಡದಲ್ಲಿ ಒಬ್ಬ ಕವಿಯ ಮೇಲೆ ಆಗಿರುವುದು ವಿಶೇಷ. ‘ಯಾವತ್ತು’ ಎಂಬ ಪದವು ಮೂರು ಅರ್ಥಗಳನ್ನು ಧ್ವನಿಸುತ್ತಾ ಹಲವು ಅರ್ಥಗಳಿಗೆ ದಾರಿ ಮಾಡಿಕೊಡುತ್ತದೆ. ಮೀಮಾಂಸೆಯ ವಾಚ್ಯಾರ್ಥ, ಲಕ್ಷಾö್ಯರ್ಥ, ವ್ಯಂಗ್ಯಾರ್ಥ ಈ ಮೂರು ಅರ್ಥಗಳನ್ನು ತಿಳಿದು ಕಾವ್ಯ ಪ್ರವೇಶ ಮಾಡಬೇಕು. ಈ ಮೂರು ಅರ್ಥದ ಜೊತೆಗೆ ಜನಪದ ಸಾಹಿತ್ಯವನ್ನು ಸೇರಿಸಿ ಬೇಂದ್ರೆ ಕಾವ್ಯವನ್ನು ಪ್ರವೇಶ ಮಾಡುವವರಿಗೆ ದಾರಿ ಮಾಡಿಕೊಟ್ಟಿದ್ದಾರೆ. ಕನ್ನಡದಲ್ಲಿ ಯಾಸ್ಕನ ಆ ಕಾರ್ಯವನ್ನು ನಿರ್ವಹಿಸಿದ್ದಾರೆ. ಈ ಗ್ರಂಥದ ಪ್ರತಿ ಪದವನ್ನು ಪರಿಶೀಲಿಸಿರುವ ನಾನು ನಿರುಕ್ತಎಂಬ ಹೆಸರನ್ನು ನೀಡಿದೆ. ವಿಶ್ವವಿದ್ಯಾಲಯದ ಅಧ್ಯಾಪಕರು, ವಿದ್ಯಾರ್ಥಿಗಳು ಬೇಂದ್ರೆಕಾವ್ಯ ಅಧ್ಯಯನ ಮಾಡಲು ಸದಾ ಜೊತೆಯಲ್ಲಿ ಇಟ್ಟುಕೊಳ್ಳುವ ಕೃತಿಯಾಗಿದೆ. ಬೇಂದ್ರೆ ಕಾವ್ಯಗಳ ಕ್ರಮಾನುಗತಿಯಲ್ಲಿ ಇದರೊಳಗೆ ಅಧ್ಯಯನದಲ್ಲಿ ಅಡ್ಡಿಯಾಗುವ ಪದಗಳನ್ನು ಅರ್ಥ ನೀಡುತ್ತಾ ಸಾಗಿದ್ದಾರೆ. ಒಬ್ಬ ವಿಮರ್ಶಕನಿಗೆ ಈ ಕಾರ್ಯ ಸಾಧ್ಯವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಕೃಷ್ಣಪ್ಪನವರು ಬೇಂದ್ರೆಯವರನ್ನು ಪೂರ್ಣವಾಗಿ ತಮ್ಮೊಳಗೆ ಅವಗಾಹನೆ ಮಾಡಿಕೊಂಡು ಹಲವು ಓದಿನಲ್ಲಿ ದಕ್ಕಿಸಿಕೊಂಡು ‘ಬೇಂದ್ರೆ ಕಾವ್ಯಕ್ಕೆ ಸುವರ್ಣ ಪ್ರವೇಶಿಕೆ’ ನೀಡಿದ್ದಾರೆ. ಇದೊಂದು ಸಾರಸ್ವತ ಯಜ್ಞದಂತೆ ಈ ಕಾರ್ಯ ಮಾಡಿದ್ದಾರೆ ಎಂದು ಮಲ  ಪುರಂ ಜಿ. ವೆಂಕಟೇಶ ಅವರು ಕೃತಿಯನ್ನು ತಮ್ಮ ಅಧ್ಯಯನದ ದೃಷ್ಠಿಕೋನದಲ್ಲಿ ಪರಿಚಯಿಸಿದರು.
ಲೇಖಕರಾದ ಡಾ. ಜಿ ಕೃಷ್ಣಪ್ಪನವರು ತಮ್ಮ ಕೃತಿ ರಚನೆ ಕುರಿತು ಚಂದ್ರಶೇಖರ ಕಂಬಾರರಿಂದ ಬಿಡುಗಡೆಯಾದ ಈ ನನ್ನ ಕೃತಿಯು ರಾಷ್ಟç ಗೌರವ ದೊರೆತಂತಾಯಿತು. ಈ ಕೃತಿಯಲ್ಲಿ ನನಗೆ ತಿಳಿದ ಕಾವ್ಯದ ಸವಿಯನ್ನು ಹಂಚಿದ್ದೆÃನೆ. ಮದಗ, ಅಕ್ಕಿ, ಮದಗುಣಕಿ, ಗುಂಭ, ಹಿಂಡವಳ, ಹಡಗದ ಹುಡುಗಿ, ಮಾವಿನ ಪೀಪಿ ಮೊದಲಾದ ಎಲ್ಲಿಯೂ ಅರ್ಥವಿಲ್ಲದ ಪದಗಳನ್ನು ಇಲ್ಲಿ ಮೊದಲಿಗೆ ಪರಿಚಯಿಸಿದ್ದೆÃನೆ. ಬೇಂದ್ರೆಯವರು ಆತ್ಮಕಥೆ ಬರೆದಿಲ್ಲವೆಂದು ಕೆಲವು ಬೀಸು ಹೇಳಿಕೆ ನೀಡುತ್ತಾರೆ ಆದರೆ ಒಬ್ಬ ಕವಿಯನ್ನು ಗದ್ಯದಲ್ಲಿಯೇ ಬರೆಯಬೇಕೆಂದು ಎಳೆಯುತ್ತಾ ನಾವು ಬೇಂದ್ರೆಯವರನ್ನು ಸರಿಯಾಗಿ ಗಮನಿಸಿಲ್ಲ. ಇವರ ಸಖೀಗೀತ, ಬಾಲ್ಯಕಾಂಡ ಮತ್ತು ಹಾಡು ಪಾಡು ಇವು ಮೊದಲ ಬಾರಿಗೆ ಕಾವ್ಯದಲ್ಲಿ ಆತ್ಮಚರಿತ್ರೆ ಬರೆದ ಕವಿ ಆಗಿದ್ದಾರೆ. ಕೃಷ್ಣಪ್ಪನವರು ತಮ್ಮ ಈ ಕೃತಿಯ ಕಾರ್ಯಕ್ಕೆ ಸಹಾಯಕವಾದ ಎಲ್ಲರನ್ನೂ ಅತ್ಯಂತ ಸಹೃದಯತೆಯಿಂದ ಕೃತಿಯನ್ನು ನೀಡುವುದರ ಮೂಲಕ ನೆನಪಿಸಿಕೊಂಡರು.


ಅಧ್ಯಕ್ಷತೆಯನ್ನು ವಹಿಸಿದ್ದ ಪಿ. ವಿ ನಾರಾಯಣ ಅವರು ಹಾಸು ಹೊದ್ದಾಸಿ ಹೊದ್ದವರು, ಕೊಟ್ಟು ತೊಟ್ಟವರು, ಉಂಡು ತೇಗಿದವರು ಎಂಬಂತೆ ತೇಗು ಈ ಪದನಿರುಕ್ತವಾಗಿದೆ. ತುಂಬು ಹೊಳೆಯಲ್ಲಿ ಈಜಿ ಬರುವ ಬಸವನ ಕೊಂಬು ಮಾತ್ರ ಕಾಣುತ್ತದೆ, ನೀರಿನಲ್ಲಿ ಅದರ ಕಾಲಿನ ಶ್ರಮ ಇರುತ್ತದೆ. ಆದೇ ರೀತಿ ಕೃಷ್ಣಪ್ಪನವರು ಶ್ರಮಪಟ್ಟಿದ್ದಾರೆ. ಹಾಗೇಯೆ ಅನಂತರಾಮು, ಶಂಕರ ಮೊಕಾಶಿ ಪುಣೇಕರ ಮೊದಲಾದವರು ಕೃಷ್ಣಪ್ಪನವರ ಕುರಿತ ಮಾತುಗಳನ್ನು ನೆನಪಿಸಿಕೊಂಡರು. ಕನ್ನಡದಲ್ಲಿ ವಿಮರ್ಶಕರು ದಾರಿ ತಪ್ಪಿಸುವ ಕಾರ್ಯ ಮಾಡುತ್ತಾರೆ ಹೊರೆತು ದಾರಿ ತೋರಿಸುವ ಕಾರ್ಯವಲ್ಲ. ಇಲ್ಲಿ ಕೃಷ್ಣಪ್ಪನವರು ಬೇಂದ್ರೆಯವರ ಕಾವ್ಯ ಅನುಸಂಧಾನದಲ್ಲಿ ಯಶಸ್ವಿಯಾಗಲು ನಮ್ಮಂತೆ ಕಾವ್ಯಮೀಮಾಂಸೆಯ ಚೌಕಟ್ಟಿನಲ್ಲಿ ದಾರಿ ತಪ್ಪಿದವರಲ್ಲ. ಅತ್ಯಂತ ಸಹಜವಾಗಿ ಬೇಂದ್ರೆಯವರ ಕಾವ್ಯ ಅನುಭವ ಮೂಲಕವಾದ ಅನುಸಂಧಾನವಾಗಿ ಕರಗತವಾಗಿದೆ, ಅಭ್ಯಾಸ ಪೂರ್ವಕವಾಗಿ ಅಲ್ಲ. ಇವರು ನೀಡುವ ಪದಗಳ ಅರ್ಥ ನನಗೂ ಬೇರೆ ಬೇರೆ ರೀತಿಯಲ್ಲಿ ಅರ್ಥವಾಗಿದೆ. ಬೇಂದ್ರೆ ಇವರಿಗೂ ಕೂಡ ಪೂರ್ಣವಾಗಿ ದಕ್ಕಿಲ್ಲ. ಏಕೆಂದರೆ ಒಬ್ಬ ಕವಿ ಪೂಣವಾಗಿ ಒಬ್ಬರಿಗೆ ದಕ್ಕಿದರೆ ಆ ಕವಿಯನ್ನು ಮತ್ತೆ ಓದುವುದಿಲ್ಲ. ಕುರ್ತಕೋಟಿ, ಆಮೂರ ಮೊದಲಾದವರ ಅಧ್ಯಯನದಲ್ಲಿ ಉಂಟಾದ ತಪ್ಪುಗಳನ್ನು ಗುರ್ತಿಸಿ ಸರಿಯಾದ ಅರ್ಥ ನೀಡಿ ಬೇಂದ್ರೆ ಕಾವ್ಯಕ್ಕೆ ಸಂಪಾದನಾ ಕಾರ್ಯವನ್ನು ಕೂಡ ಮಾಡಿದ್ದಾರೆ. ಈ ಕಾರ್ಯವನ್ನು ಮೆಚ್ಚಿದ ಪುಣೇಕರರು ಇವರ ಕಾರ್ಯಕ್ಕಾಗಿ ಐವತ್ತು ವರ್ಷ ಕಾದಿದ್ದೆÃನೆ ಎಂದು ಹೇಳಿದ ಮಾತನ್ನು ನೆನಪಿಸಿಕೊಂಡರು. ರವದಿ ಎಂಬ ಪದಕ್ಕೆ ಜನಪದ ಅರ್ಥವನ್ನು ಮತ್ತು ಆಧ್ಯಾತ್ಮಿಕ ಅರ್ಥದೊಂದಿಗೆ ಜೋಡಿಸುವ ಕ್ರಮವನ್ನು ನೋಡಬಹುದು ಎಂದರು. ಬೇಂದ್ರೆಯವರನ್ನು ಮಗುವಾಗಿ ಕಂಡು ಯಶೋಧೆಯಾಗಿ ಮಗುವಿನ ಎಲ್ಲಾ ಲೀಲೆಗಳನ್ನು ನೋಡಿದ್ದಾರೆ. ನಾವು ದೇವಕಿಯನ್ನು ಮರೆತು ಯಶೋಧೆಯನ್ನು ಕುವೆಂಪು, ಪುತಿನ ಅವರಿಗೂ ಇಂತಹ ಕಾರ್ಯ ಮಾಡುವ ಯಶೋಧೆ ಸಿಗಲಿ ಎಂದು ಬೇಂದ್ರೆ ಕಾವ್ಯದ ಯಶೋಧೆಯಾದ ಕೃಷ್ಣಪ್ಪನವರಿಗೆ ಅಭಿನಂದಿಸುತ್ತೆÃನೆ ಎಂದರು


ಪ್ರಸ್ತಾವಿಕ ನುಡಿಗಳನ್ನು ನುಡಿದ ಉದಯಭಾನು ಕಲಾ ಸಂಘದ ಕಾರ್ಯದರ್ಶಿಗಳಾದ ನರಸಿಂಹ ಅವರು ಚಂದ್ರಶೇಖರ ಕಂಬಾರರನ್ನು ಕನ್ನಡ ಸಾಹಿತ್ಯದ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಹಾಗೂ ಕನ್ನಡದ ಜ್ಞಾನಪೀಠವೆಂದು ಗೌರವಿಸಿ ಸ್ವಾಗತಿಸಿದರು. ಕೃಷ್ಣಪ್ಪನವರು ಮೊದಲ ಭಾಷಣ ೧೯೭೪ರಲ್ಲಿ ನಮ್ಮ ಉದಯ ಭಾನು ಕಲಾಸಂಘದಲ್ಲಿ ಮಾಡಿದ್ದರು. ಅದು ಬೇಂದ್ರೆ ಸಾಹಿತ್ಯ ಕುರಿತ ಮೊದಲ ಭಾಷಣವಾಗಿತ್ತು. ಯಾವುರಾಕೀ ನೀ ಮಾಯಾಕಾರತಿ ಕವಿತೆಯನ್ನು ಜನಪದ ಕಂಸಾಳೆಗೆ ಅಳವಡಿಸಿದ್ದರು ಎಂದರು. ಈ ಎಲ್ಲಾ ಕಾರ್ಯಗಳÀನ್ನು ನೆನಪಿಸಿಕೊಳ್ಳುತ್ತಾ ಉದಯಭಾನು ಕಲಾ ಸಂಘವು ನಾಡಿನಲ್ಲಿ ಶ್ರೆÃಷ್ಠ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಬಗೆಯನ್ನು, ಸಾರ್ವಜನಿಕ ಸೇವೆಯನ್ನು ನೆನಪಿಸಿಕೊಂಡರು. ಬೇಂದ್ರೆಯವರ ಕಾವ್ಯವನ್ನು ನಿರಂತರವಾಗಿ ಅಧ್ಯಯನ, ಪರಿಚಾರಿಕೆ ಮಾಡಿದ ಕೃಷ್ಣಪ್ಪನವರ ಸೇವೆಗೆ ೨೦೧೬ರಲ್ಲಿ ನಮ್ಮ ಸಂಘವು ಇವರು ರಚಿಸಿರುವ ಸಾಹಿತ್ಯ ಕುರಿತು ವಿಚಾರ ಸಂಕಿರಣ ಏರ್ಪಡಿಸಿ ‘ಕಾವ್ಯಶೋಧಕ’ ಗೌರವ ಗ್ರಂಥ ಅರ್ಪಿಸಿದೆ. ಈಗ ವಂಶಿ ಪ್ರಕಾಶನದ ಜೊತೆಗೆ ಬೇಂದ್ರೆಕಾವ್ಯ: ಪದನಿರುಕ್ತ ಬಿಡುಗಡೆ ಮಾಡುತ್ತಿದೆ ಎಂದು ಸಂತೋಷಪಟ್ಟರು. ಗಣ್ಯರಾದ ಕೃತಿಯನ್ನು ಲೋಕಾರ್ಪಣೆ ಮಾಡಿದ ಚಂದ್ರಶೇಖರ ಕಂಬಾರರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಿ.ವಿ ನಾರಾಯಣ, ಗ್ರಂಥ ಪರಿಚಯ ಮಾಡಿದ ವಿಶ್ರಾಂತ ಕುಲಪತಿ ಮಲ್ಲೆÃಪುರಂ ಜಿ. ವೆಂಕಟೇಶ್, ಸಂಘದ ಅಧ್ಯಕ್ಷರಾದ ಬಿ. ಕೃಷ್ಣ ಅವರು, ವಂಶಿ ಪ್ರಕಾಶನದ ಮಾಲೀಕರಾದ ಎನ್. ಪ್ರಕಾಶ್ ಅವರನ್ನು ಉದಯಭಾನು ಕಲಾಸಂಘದ ವತಿಯಿಂದ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ನಾಗಚಂದ್ರಿಕಾ ಭಟ್ ಹಾಗೂ ಸಂಗಡಿಗರು ಬೇಂದ್ರೆ ಕಾವ್ಯ ಗಾಯನ ಮಾಡಿದರು. ಸಂಘದ ಕಾರ್ಯಾಧ್ಯಕ್ಷರಾದ ಸತ್ಯನಾರಾಯಣ ಅವರು ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು. 

ಸೋಮವಾರ, ಜನವರಿ 14, 2019

ನಾ ಕಂಡ ಸಂಕ್ರಾಂತಿ

ಸೂರ್ಯನು ಉತ್ತರಾಯಣಕೆ
ಬರುವನೋ ಬಿಡುವನೋ
ಕಾಂತಿ ಕಡಿಮೆಯಾಗಿಲ್ಲ...
ಚಳಿಗೆ ಹೊದಿಕೆ ಬಂದಿಲ್ಲ...
ಹನ್ನೆರಡು ರಾಶಿಯ ಹೆಜ್ಜೆ
ಇಡುವನೋ ಬಿಡುವನೋ
ನನಗೆ ತಿಳಿದಿಲ್ಲ...
ರೈತನಂತೂ ಹನ್ನೆರಡು ತಿಂಗಳ
ಕಳೆದು ಸುಗ್ಗಿಗೆ ಬಂದ...
ವರ್ಷದ ಬೆವರನ್ನು ಕೂಡಿಡುವ
ಸಮಯವಿದು
ಹರ್ಷದ ಸುಗ್ಗಿಯ ಕಾಲಮೇಳ

ಕಥೆಯ ಸುಗ್ಗಿಯು ಈಗ
ಕಥೆಯಾಗಿ ಮರೆಯಾಯ್ತು
ಸುಲಭ ದಾರಿಯ ಬೆಳೆಯ
ಲಾಭ ಬಂದಾಯ್ತು..
ಕಣಗಳೆಲ್ಲಾ ರಸ್ತೆಗೆ ಬಂದು
ಮೇಟಿ-ಕೋಲುಗಳೆಲ್ಲಾ
ಯಂತ್ರದಲಿ ಮರೆಯಾಗಿ
ಉಳಿದದ್ದು ರೈತನಿಗೆ ಒಕ್ಕಲೂಟ
ದನಕರುಗಳೆಲ್ಲಾ ಸಂತೆಯಲಿ
ವ್ಯಾಪಾರ
ಉಳಿದದ್ದು ವಾಣಿಯಲಿ
ಹರಿಕಥೆಯ ಸಾರ..
ಸಂಕ್ರಾಂತಿ ಎಂಬುದು
ಹಳ್ಳಿಯ ಹಬ್ಬ!
ಸುಗ್ಗಿಗೂ ಸಂಭ್ರಮದ
ವಸಂತ ಕಬ್ಬ!
ಬರೀ ತೋರಣ ಬರದಿರಲಿ
ಮನಸುಗಳು ಇತಿಹಾಸ
ಮರಳಿ ತರಲಿ..
ಸುಲಭ ಬದುಕಿಗೆ
ಬೆವರ ಕ್ರಾಂತಿ ಇರಲಿ.-
ಅಂಕುರ ೧೫/೦೧/೨೦೧೯

ಮಂಗಳವಾರ, ಡಿಸೆಂಬರ್ 25, 2018

ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ (ರಿ),                                  ಅಕ್ಷಯನಗರ ಬೆಂಗಳೂರು

Dear Friends

I am very happy to share a song from our album 'yOdha namana' meaning Salute to Soldiers, produced by Sadhanakeri Pratishtana (Regd. non profit organization)

This album will be released on Jan 19th 2019 at HN Kalakshetra Bengaluru. All the proceeds will be donated to widows of soldiers who have sacrificed their lives for the country.

Please support us by sharing this link with your friends.

Lyrics : Prasad Naik
Music : Ram Prasad
Orchestra : Praveen D Rao
Singers : Pradnya Marathe, Sumedha Vadlapudi, Soma Shekar, Ram Prasad

https://www.youtube.com/watch?v=qZZ0Jt2DAgY&

For more details please contact

RAVI SHANKAR : +91 96634 33403
Shivanand Badiger : +91 99165 53747
Vatsala Suresh : +91 87926 93438

Singers in this album : Ratnamala Prakash, Gururaj Hosakote, Jogi Sunitha, Supriya Raghunandan, Pradnya Marathe, Sumedha Vadlapudi, Soma Shekar, Ram Prasad
Kannada Intorduction to the songs : Smt. Malathi Sharma

ಭಾನುವಾರ, ಸೆಪ್ಟೆಂಬರ್ 2, 2018

ಕೃಷ್ಣ ರಾಧೆಯರ ಕಥೆಯು..

ಕೃಷ್ಣನೆಂದರೆ ಪ್ರೇಮ
ರಾಧೆಯದರ ಭಾವ
ಮನುಜರೋಲಿಕೆಯ
ದೇಹವಿಲ್ಲ, ದಾಹ ಮೊದಲಿಲ್ಲ!

ಕೊಳಲದೋ ಜಗದನಿಯು
ಸವಿದಳು ಮನದನ್ನೆ
ಶೃಂಗಾರ ಮೋಹದಲಿ
ಹುಟ್ಟಿದನು ಕಾಮ
ರತಿಯ ರಮಣಾಂಕಿತದಿ

ನವಿಲು ಚಿತ್ರದ ನಗುವೆ
ಕುಂಚದೊಳಗಿನ ಒಲವೆ
ನೋಟದೊಳಗಿನ ಕೂಟ
ಚಿತ್ತಾರ ಬರೆದ ಚೈತ್ರ ಸಾರ

ಕೃಷ್ಣನೆಂದರೆ ಗೊಂಬೆ
ರಾಧೆಯೊಳು ನೀ ಕಾಂಬೆ
ನನ್ನೊಳಗೆ ನೀ ನಂಬೆ
ಅಂಬಿಗನು ನಾನು
ಜಗದ ಸಂಸಾರದಲಿ- ಅಂಕುರ
*ದ್ಯೋತಕ*

ಹೌದು, ಎನ್ನುವುದಾದರೆ ಹೌದು!
ಇಲ್ಲ ಎಂಬುದಕ್ಕೆ ಸಾಕ್ಷಿಯ ಕೊರತೆ.

ದೇವರೆಂದರೆ
ಕ್ರಿಯಾತ್ಮಕ ನಂಬಿಕೆ
ಇಲ್ಲಿ ಅರ್ಧ ಜನ ಅಜ್ಞಾನಿಗಳು.
ಕಾಲು ಪಾಲು ಮೂರ್ಖರು..
ಉಳಿದವರ ಎದೆಯಲ್ಲಿ
ಉಸಿರಾಟವಿದೆ.

ಧರ್ಮವೆಂದರೆ
ಮನೋ ಚೈತನ್ಯ.
ಇಲ್ಲವೆಂದೂ, ಇದೆಯೆಂದು,
ಒಂದಕ್ಕೆ ಜೋತು ಬಿದ್ದ,
ಹಗಲು ಬಾವಲಿ ಕಥೆಗೆ
ಪೌರೋಹಿತ್ಯ ಕೀಲಿಕೈ.

ಶಿಕ್ಷಣವಿದು ಬೆಳಕು
ಅಂತಃಶಕ್ತಿಯ ಅರಿವು
ನೇತು ಹಾಕಿದ್ದೇವೆ ಅಳತೆ
ಆಯಾಮದಲಿ
ನಾಲ್ಕು ಗೋಡೆಯ ನಡುವೆ
ನಾತವಾಗಿದೆ ಮನಸು
ಕಲಿಯಲಾಗದ ಪ್ರಕೃತಿ
ಈಗ ವಿಕೋಪದ ನೃತ್ಯ ಶಾಲೆ.

ಸಾಕು ಮಾಡುವೆ ಸೊಲ್ಲು
ಹಣದ ಅಳತೆಯ ಗೆಲ್ಲು
ನೀತಿ-ಸೂತಕವಾಗಿ
ದೇಶ ದ್ಯೋತಕವಾಗಿ
ಎಲ್ಲವೂ ಕ್ಷಣ ಮೆಚ್ಚುವ
ತಕ್ಷಣವೇ ಚುಚ್ಚುವ
ತನ್ನೊಳಗೆ ತಾ ಮುಚ್ಚುವ
ಸ್ವಚ್ಛ ನೀರಿನ ನಳಿನಾನನೆ..!-ಅಂಕುರ

ಶುಕ್ರವಾರ, ಆಗಸ್ಟ್ 24, 2018

ಪತ್ರಿಕೆಯ ಪ್ರಕಟಣೆಗಾಗಿ...
ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನ, ಬೆಂಗಳೂರು ಇವರು ದಿನಾಂಕ 26 ಆಗಸ್ಟ್ 2018ರಂದು ಸಮಯ 9.30ಘಂಟೆಗೆ ಶ್ರೀ ಕೃಷ್ಣರಾಜ ಮಂದಿರ, ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ ಇಲ್ಲಿ ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದ ಉದ್ಘಾಟನೆ ಹಾಗೂ ಧ್ವನಿಸಾಂದ್ರಿಕೆ ಮತ್ತು ಸಾಹಿತ್ಯ ಕೃತಿಗಳ ಲೋಕಾರ್ಪಣೆ ಸಮಾರಂಭ ಹಮ್ಮಿಕೊಂಡಿದ್ದಾರೆ. ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ.ಅರವಿಂದ ಮಾಲಗತ್ತಿಯವರು ಈ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾರೆ. ಹಿರಿಯ ಸಾಹಿತಿಗಳು ಮತ್ತು ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಡಾ. ಸಿದ್ಧಲಿಂಗಯ್ಯನವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
  ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷರಾದ ವತ್ಸಲ ಸುರೇಶ್ ಅವರು ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡುವರು. ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದ ಉಪಾಧ್ಯಕ್ಷರಾದ ಪ್ರಕಾಶ್ ಜೈನ್, ಖಜಾಂಚಿಗಳಾದ ಡಿ. ಎಸ್. ಮಂಜುನಾಥ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ. ಶಿವಕುಮಾರ ಮಾಲಿ ಪಾಟೀಲ್, ಪ್ರಸಾದ್ ನಾಯಕ್, ಹಿರಿಯ ರಂಗಕರ್ಮಿ, ನಟ, ನಿರ್ದೇಶಕರಾದ ಸೇತುರಾಂ, ಕಲ್ಲುಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಸವರಾಜು, ನಿರಂತರ ಪ್ರಕಾಶನದ ಪ್ರವೀಣ್ ಜಾಗಟ ಮತ್ತು ಚಂದ್ರಕೀರ್ತಿ, ಸಾಹಿತಿಗಳಾದ ವಾಸುದೇವ್ ನಾಡಿಗ್ ಮೊದಲಾದವರು ಉಪಸ್ಥಿತರಿರುತ್ತಾರೆ. ಈ ಕಾರ್ಯಕ್ರಮದಲ್ಲಿ ‘ಒಲವನಾದ’, ‘ಭಾವದಲೆಗಳು’, ‘ಭಾವತೀರದಲ್ಲಿ’ ಈ ಮೂರು ಧ್ವನಿಸಾಂದ್ರಿಕೆಗಳು ಮತ್ತು ಬಣ್ಣದ ಗರಿ(ಕವನಸಂಕಲನ), ಬಣವೆ(ಕಥಾ ಸಂಕಲನ), ಅಡಿಗಲ್ಲು(ಲೇಖನ ಸಂಕಲನ) ಸಾಹಿತ್ಯ ಕೃತಿಗಳು ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದ ಸದಸ್ಯರೆಲ್ಲಾ ಸೇರಿ ರಚಿಸಿದ ಈ ಎಲ್ಲಾ ಸಾಹಿತ್ಯ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಕಾರ್ಯಕ್ರಮದಲ್ಲಿ ಕುಮಾರಿ ಪ್ರಜ್ಞ ಮರಾಠೆ ಮತ್ತು ಶ್ರೀ ಚೇತನ್ ರಾಮ್ ಅವರು ಗೀತ ಗಾಯನ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಧನಕೇರಿಯ ಸರ್ವ ಸದಸ್ಯರೂ ಹಾಗೂ ಸಹೃದಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ಶಿವಾನಂದ ಬಡಿಗೇರ್ ಅವರು ಸ್ವಾಗತಿಸುತ್ತಾ, ಶ್ರೀ ಲೋಕೇಶ್ ಅವರು ವಂದನಾರ್ಪಣೆ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮವನ್ನು ಶ್ರೀಮತಿ ಅನಿತ ಕೆ.ವಿ ಹಾಗೂ ರವಿಶಂಕರ್ ಎ.ಕೆ ಅವರು ನಿರೂಪಿಸಿ ನಿರ್ವಹಿಸಲಿದ್ದಾರೆ.




ಇದೇ ಕಾರ್ಯಕ್ರಮದಲ್ಲಿ ಬಣವೆ ಸಂಕಲನದಲ್ಲಿ ನನ್ನ ಮೊದಲ ಕಥಾ ಬರಹ ಮಂದಣ್ಣ ಎಂಬ ಸೃಜನಶೀಲ ಬರಹ ನಿಮಗೆ ನೀಡುತ್ತಿದ್ದೇನೆ.
ಪ್ರಕಟಗೊಳ್ಳುವ ನನ್ನ ಸಾಹಿತ್ಯ
*ಕವಿತೆಗಳು- ಮೆಲುಕು, ತಂಗಾಳಿ ಕೂಗಿದಾಗ(ಬಣ್ಣದ ಗರಿ)
ಕಥೆ- ಮಂದಣ್ಣ(ಬಣವೆ)
ವಿಮರ್ಶೆ-ಪಂಪನ ಸಾಹಿತ್ಯದಲ್ಲಿ ಪ್ರಕೃತಿ
ಬಸವಣ್ಣನ ವಚನಗಳಲ್ಲಿ ವೈಚಾರಿಕತೆ

ನನ್ನ ಎಲ್ಲಾ ಆತ್ಮೀಯರಿಗೂ ಸಹೃದಯ ಸ್ವಾಗತ..

ಸೋಮವಾರ, ಅಕ್ಟೋಬರ್ 9, 2017

ನವರಂಗದೊಳಗೆ ನಾಟ್ಯರೂಪ


ದಸರಾ ವಿಚಾರವಲ್ಲ. ನವರಾತ್ರಿ ಎಂದರೆ ಈಗ ಎಲ್ಲಾ ಕಡೆಯೂ ನವರಾತ್ರಿ ಹೆಸರಿನಲಿ ಮನೆಯಿಂದ ಬೀದಿಯೊಳಗೂ ಸಂಭ್ರಮವಾಗಿರುವ ನವರಾತ್ರಿ ವಿಚಾರ ಎಲ್ಲರಿಗೂ ತಿಳಿದ ವಿಚಾರ.

ಸಾವಿರ ಕಂಬಗಳ ಬಸದಿ ಎಂಬುದೇ ಭಾರತದಲ್ಲಿ ಪ್ರಸಿದ್ಧ ಸ್ಥಳ.  ಇದು ಜೈನರ ಕಾಶಿ. ಕರ್ನಾಟಕದ ದಕ್ಷಿಣ ಕನ್ನಡದೊಳಗೆ ಮೂಡಿರುವ ಕರಾವಳಿಯ ಚಂದ್ರನಾಥ ಬಸದಿ ಇದು. ಈ ಬಸದಿಯಲ್ಲಿನ ಮಾಹಿತಿ ಎಲ್ಲಾ ಕಡೆಯೂ ಲಭ್ಯ ಇರುವ ಕಾರಣ ಇದರ ಮಾಹಿತಿಯೂ ಸೂಕ್ತವಲ್ಲ. ನವರಂಗ ಎಂದರೆ ಹಲವು ವಿಚಾರಗಳಿಗೆ ಮುಖ್ಯ ವೇದಿಕೆ. ದೇಗುಲಗಳ, ಬಸದಿಗಳ ಮುಂಭಾಗದ ನಡುವಣ ಇರುವ ಪ್ರಾಂಗಣ ಕೆಲವು ವಿಶೇಷತೆಯನ್ನು ಹೊಂದಿದೆ. ಇದು ಪ್ರಾಚೀನತಮ ಮುಖ್ಯ ಭೂಮಿಕೆಯನ್ನು ಅನಾವರಣಗೊಳಿಸುತ್ತಾ ಬಂದಿದೆ. ಪ್ರತಿಭೆಗಳ ಮೊದಲ ಪ್ರದರ್ಶನ ಇಲ್ಲಿಯೇ ಅನಾವರಣವಾಗಬೇಕಾಗಿತ್ತು. ದೇವರ ಮುಂಭಾಗದ ಈ ಪ್ರದರ್ಶನ ತುಂಬಾ ಭಕ್ತಿಯಿಂದ ಜರುಗುತ್ತಿತ್ತು.

      ಮೂಡಬಿದರೆ ಸಾವಿರ ಕಂಬಗಳ ಬಸದಿಯ ನೆನಪಿನ ಕಾಶಿಯಾಗಿ ಒಂದು ಅರ್ಥವಾದರೆ. ಇನ್ನೊಂದು ಪ್ರಶಿದ್ಧಿಯನ್ನು ವಿಶ್ವಕ್ಕೆ ಪಸರಿಸಿದ್ದು ಆಳ್ವಾಸ್ ಶಿಕ್ಷಣ ಸಂಸ್ಥೆ. ಇದೊಂದು ಶಿಕ್ಷಣ ಸಂಸ್ಥೆಯಾಗಿ ನೋಡಿದರೆ ನಮಗೆ ಯಾವ ಅನುಭವವೂ ದೊರಕದು. ಇದು ಉತ್ತಮ ಶಿಸ್ತನ್ನೇ ತನ್ನತನವಾಗಿಸಿಕೊಂಡು ಮಕ್ಕಳ ಉನ್ನತ ಶಿಕ್ಷಣದ ಕನಸಿನೊಳಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ವಿಶಿಷ್ಟ ಸಾಹಸಗಳನ್ನು ತರುತ್ತಿರುವ ಪ್ರಯೋಗ ಶಾಲೆ.
ವಿಶ್ವ ಪ್ರವಾಸಿ ದಿನದ ಪ್ರಯುಕ್ತ ಸಾವಿರ ಕಂಬದ ಬಸದಿಯೊಳಗೆ ಸಾಂಸ್ಕೃತಿಕ ವೈಭವ ಸಾರುವ ಭಕ್ತಿ ಹಾಗೂ ಭಾವನಾತ್ಮಕ ಜಗತ್ತಿನ ಅನಾವರಣಕ್ಕೆ ವೇದಿಕೆ ಸಜ್ಜುಗೊಳಿಸಲಾಯಿತು. ಆದರೆ ಮಳೆಯ ಹೊಸ ಅರ್ಥ ನಾಡಿಗೆ ಬರೆದಾಗ ಕರಾವಳಿಯಲ್ಲಿ ಸುಮ್ಮನಿರುವುದೇ.. ಆದರೂ ಮೋಹನ ಆಳ್ವರು ಬದ್ಧತೆಗೆ ಪ್ರಮಾಣಿಕರು. ಮಕ್ಕಳು, ಒಂದಿಷ್ಟು ಕಲಾಸಕ್ತರು, ಚಾರುಕೀರ್ತಿಗಳು ಎಲ್ಲಾ ಬಂದರು. ೮೦ಅಡಿಗಳಲಿ ರಾಮಕಥೆ, ಮಣಿಪುರದ ದೋಲ್ಚಲಮ್, ಶ್ರೀಲಂಕಾ ಡೋಲಿನ ವೈಭವ ಇವೆಲ್ಲಾ ಮೈಚಳಿ ಮರೆತು ಕುಣಿಯುವ ನರ್ತಿಸುವ ವೈಭವಗಳು.
೨೦ಅಡಿಯೊಳಗಿನ ನವರಂಗಕೆ ಹೊಂದಿಸಿದರೆ ಏನಾಗಬಹುದು. ದೊಡ್ಡ ವೇದಿಕೆ ನಿರ್ಮಿಸಿದ ಬೆವರಲ್ಲಿ ಮಳೆಯ ಮಂದಿರವಾಯಿತು. ವೇದಿಕೆಯನ್ನು ರಂಗುಗೊಳಿಸಬೇಕಾದ ಬೆಳಕುಗಳು ನವರಂಗಕೆ ಬಂದವು. ಸದಾ ಮೌನವಾಗಿದ್ದ ಸಾವಿರಾರು ಕಂಭಗಳಿಗೂ ಸಂಗೀತದ ಆಲಾಪನೆಯ ಭವ್ಯ ಸಂಸ್ಕಾರ. ನರ್ತಿಸುವ ವಿಧ್ಯಾರ್ಥಿಗಳಿಗೆ ನವರಂಗದ ಮೊದಲ ಕಲಾ ಸಂಸ್ಕಾರ.
  https://kn.m.wikipedia.org/wiki/%E0%B2%B8%E0%B2%BE%E0%B2%B5%E0%B2%BF%E0%B2%B0_%E0%B2%95%E0%B2%82%E0%B2%AC%E0%B2%A6_%E0%B2%AC%E0%B2%B8%E0%B2%A6%E0%B2%BF

ಭಾನುವಾರ, ಆಗಸ್ಟ್ 27, 2017

*ಎನಿಸುತ್ತದೆ*

 ಒಬ್ಬನೇ ಏಕಾಂತ
ವಹಿಸೋಣ
ಎನಿಸುತ್ತದೆ,

ಯಾರಿಗೂ ಅರ್ಥವಾಗದ
ದನಿಯ ನಿಲ್ಲಿಸೋಣ
ಎನಿಸುತ್ತದೆ,

ನಮ್ಮನ್ನೇ ನಾವು
ನೀಡುತ್ತಾ ಬೇಡುತ್ತಾ
ನನ್ನನಿಮ್ಮೊಳಗೆ
ಕಾಣಲೊರಟ ಎನಗೆ
ನನ್ನ ತನವನ್ನೇ
ಕ್ಷಣ ನೋಡದೆ, ಕಾಡದೆ..
ನಮ್ಮವರೆಲ್ಲ
ದೂರವಾಗುವಾಗ
ನನಗೆ ನಾನೇ
ಅನರ್ಥ
ಎನಿಸುತ್ತದೆ

ಆ ಕಾಡಿನ ಆ ಕೂಗಲಿ
ಒಬ್ಬನೇ ಸುತ್ತುವ ಪರಿಯು
ನೀರಲಿ ಬೆರಳುಗಳ
ಅರಳಿಸುವ ಆ ಹೊಳಪು
ನನ್ನ ಪೂರ್ಣ ರಾಜ್ಯ
*ನಾನಲ್ಲಿ ಮೌನಿ, ಚಿರಸುಖಿ*.
-ಅಂಕುರ

ಭಾನುವಾರ, ಆಗಸ್ಟ್ 20, 2017

ಜಾನಿಕೆ! - ಅಂಕುರ


ಜಾನಿಕೆ!


ಸೀತಾ!
ನೀನೊಬ್ಬಳೇ ಹೀಗೆ..
ಅದೇ ರಾಮನ ನೆನೆದು
ಚಿತ್ರಪಟದಲಿ ಕನಸು
ಸುತ್ತಿ ಬೇಯುತ್ತಾ
ಸೌಮ್ಯದಲಿ ಕುಳಿತ ಹೆಣ್ಣು!
ರಾಮ ಬದಲಾಗಿ ಎಷ್ಟು ದಿನವಾಯ್ತು!
ಅವನೀಗ ಭಜನೆಯ
ಪಾತ್ರಧಾರಿ..

ಸೀತಾ!
ನಿನ್ನ ಕಷ್ಟಗಳಿಗೆಲ್ಲ
ಸಿಕ್ಕಿತೇ ಉತ್ತರ
ನೊಂದ ನೋವುಗಳಿಗೆ
ಪ್ರಶ್ನೆಯಾದರೂ
ಹುಟ್ಟಿತೇ ಹೇಳು..
ನೀ ಮಾಡಿದ ಪುಣ್ಯಕೆ
ನಿನ್ನ ಏಕಾಂತವೂ ಸ್ವರ್ಗ..

ಸೀತಾ!
ರಾಮ ವೇಷಧಾರಿಯಾದ
ನಾನೀಗ ಅಪರಾಧಿ..
ನಿನ್ನ ಒಂಟಿಯೇ ಬಿಟ್ಟು
ಗುಡಿಯಲಿ ಗೊಂಬೆಯ ಹಾಗೆ
ನಿನ್ನ ಜೊತೆ ನಿಂತು
ಜನ ಮೆಚ್ಚಿಸುವ ಢಾಂಬಿಕ
ಸೋಲುವ ಮುನ್ನ
ಧರ್ಮವ ತೊಳೆಯಲೇ ಬೇಕು
ಸೀತೆ ಇಳೆಗಿಳಿಯಲಿಲ್ಲ
ನೋಡಿ ನನ್ನೊಳಗೆ ಅವಳೀಗ 
ಭದ್ರಕೋಟೆಯೆಂದು
ಲೋಕದ ಕಣ್ಣಿಗೆ ಕಾಣಬೇಕು
ಮನದ ಕಣ್ಣಿಗೆ ನಿನ್ನ ನಾ ಪೂರ್ಣನಾಗಬೇಕು..

ಸೀತಾ,
ಕ್ಷಮಿಸು ನಿನ್ನ ಏಕಾಂತದ
ಈ ಭಗ್ನ ಮೂರ್ತಿಯನ್ನು... - ಅಂಕುರ

 ಜಾನಿಕೆ ಎಂದರೆ ಮೌನದೊಳಗಿನ ಧ್ಯಾನ
 


ಜಾನಿಕೆ ಕುರಿತು ಚಿಂತನೆಗಳು...
    ರಾಮಾಯಣವನ್ನು ಪುರಾಣ ದೃಷ್ಠಿಯಲ್ಲೇ ನೋಡುತ್ತಾ ಅದರ ಪಾತ್ರಗಳಿಗೆ ನ್ಯಾಯ ಒದಗಿಸುತ್ತಾ ಬಂದಿರುವ ನಮ್ಮ ಕವಿಗಳ ಪ್ರಯತ್ನ ದಿನದಿಂದ ದಿನಕ್ಕೆ ಹೊಸ ರೂಪಕವಾಗಿದೆ ವಾಲ್ಮೀಕಿ ವನಕ್ಕೆ. ಆದರೆ ರಾಮಾಯಣವನ್ನು ಆಧ್ಯಾತ್ಮಿಕವಾಗಿಯೂ ಗಮನಿಸುವಾಗ ದೈವೀಪುರುಷ ರಾಮ ವಿಧಿಯ ಲೀಲೆಯನ್ನು ಧರ್ಮಾರ್ಥವಾಗಿ ನಿರ್ವಹಿಸುತ್ತಾನೆ. ರಾಮಾಯಣದಲ್ಲಿ ಹಲವು ಮೌನಗಳಿವೆ, ಹಲವು ಧ್ಯಾನಗಳಿವೆ. ರಾಮನಿಗೆ ಸೀತೆಯ ವಿರಹವಿದ್ದರೂ ಧ್ಯಾನಕ್ಕೆ ತಲ್ಲೀನನಾಗುವುದು. ಹನುಮಂತನಂತಹ ಪಾತ್ರವೂ ಧ್ಯಾನದೊಂದಿಗೆ ಸಂಗೀತಗಳಲ್ಲಿ ಮಹತ್ ಸಾಧಕನಾಗುವುದು ವಿಶಿಷ್ಠವಾಗಿ ನೋಡುತ್ತಲೇ ಬಂದಿದ್ದೇವೆ. ಆದರೆ ಈ ಮೌನದೊಳಗಿನ ಧ್ಯಾನವನ್ನು ಯಾರೂ ತುಂಬಲಾಗಲಿಲ್ಲ.. ರಾಮನಂತೂ ಅದಕ್ಕೆ ಮತ್ತೆ ಮತ್ತೆ ಧರ್ಮಾರ್ಥವಾಗಿ ಪೆಟ್ಟು ನೀಡುತ್ತಲೇ ಬಂದನು. ಹನುಮಂತ, ಲಕ್ಷ್ಮಣ ಇವರಿಗೆಲ್ಲಾ ತಿಳಿಯಲು ಇನ್ನು ಅದೆಷ್ಟು ಶತಮಾನ ಬೇಕೋ! ರಾಮನನ್ನು ಶ್ರೀರಾಮನನ್ನಾಗಿ ನೋಡಿದ ಮೇಲೆ ಅವನ ತಪ್ಪುಗಳು ಧರ್ಮ ಕಾರ್ಯಗಳೇ ಆಗಿಬಿಡುತ್ತವೆ. ಹಾಗೇಯೇ ನಮ್ಮ ವಾಸ್ತವದ ಅದೆಷ್ಟೋ ಬೆಳಕಿನ ಕಿನ್ನರ ಜಗತ್ತು ನಿರ್ವಹಿಸುವ ತಪ್ಪುಗಳು ಸತ್ಯದ ಬಟ್ಟೆತೊಟ್ಟು ಇದೇ ವಾಸ್ತವ ಅನಿಸಿಕೊಂಡಿವೆ. ರಾಮಾಯಣದಲ್ಲಿ ಸೀತೆಗೆ ಅನ್ಯಾಯವಾಗಿದೆ ಎಂಬಂತೆ ನೋಡಿದ ವಿಮರ್ಶಾ ಪಂಥವೊಂದಿದೆ. ಚಿತ್ರಪಟ ರಾಮಾಯಣದಿಂದ, ಸೀತಾಯಣ ಹೀಗೆ ಇತ್ತೀಚಿನ ಉತ್ತರಕಾಂಡದವರೆಗೂ ಸೀತೆಗೆ ನ್ಯಾಯಕೊಡಿಸುವ ಬರಹಗಳೇ ಬಂದವು. ಆದರೆ ಸೀತೆ ವಾಲ್ಮೀಕಿಕಥೆಯಿಂದ ಬದಲಾಗಬಹುದೇ.. ಆಧುನಿಕ ಸೀತಾಸಂವತ್ಸರಗಳು ಜರುಗದಿರುವವೇ.. ಇದು ಬದಲಾವಣೆಯಲ್ಲ ಬರೀ ಬೆಳಕೇ ಹೊರೆತು ಕ್ರಿಯೆಯಲ್ಲ. ಅಗತ್ಯವಾಗಿ ಬೇಕಾಗಿರುವುದು ಸೀತೆಯರ ಕಥೆಗೆ ರಾಮನ ಉತ್ತರ ಬೇಕು ಈಗ ಸೀತೆ ಜಾನಿಕೆ.
    ಸೀತೆ ರಾಮಾಯಣದಲ್ಲಿ ಕೋಪಗೊಳ್ಳಲಿಲ್ಲ, ಕಣ್ಣೀರು ಹಾಕಲಿಲ್ಲ ಏಕೆಂದರೆ ಆಕೆಯದು ಪತಿಭಕ್ತಿಯ ವ್ರತವೆಂದು ಕವಿ ಅಣೆಪಟ್ಟಿ ಕಟ್ಟಿದ ಮೇಲೆ ಸೀತೆಗೆ ಹೇಗೆ ಇವೆಲ್ಲಾ ಸಾಧ್ಯ. ಆದರೆ ಬರಹಗಾರನ ಬಲವಂತದ ಮಾತುಗಳನ್ನು ವ್ಯಾಕರಣದ ಹಾದಿಯಿಂದ ಛಂದಸ್ಸಿನ ಬೀದಿಯಲ್ಲಿ ನುಡಿದರೂ ಇದು ಕೇವಲ ಸೀತೆಯ ಪಾತ್ರದ ದುಡಿಮೆ. ಆದರೆ ನಿಜವಾದ ಸ್ವರೂಪವನ್ನು ಕಣ್ತೆರೆದು ನೋಡಿದರೆ ಸೀತೆಯದು ಜಾನಿಕೆಯ ಸ್ಥಿತಿ. ಅಂದರೆ ಮೌನದೊಳಗಿನ ಧ್ಯಾನ. ಆಕೆ ಎಲ್ಲದಕ್ಕೂ ಮೌನವಾಗಿ ಉತ್ತರಿಸಿದ್ದಾಳೆ. ಧ್ಯಾನದಲ್ಲಿಯೇ ಉತ್ತರ ಕಂಡುಕೊಂಡಿದ್ದಾಳೆ ಸೀತೆಗೆ ಪ್ರಶ್ನೆಗಳು ಹುಟ್ಟಲೇ ಇಲ್ಲ ಹುಟ್ಟಿದರೂ ಅದೊಂದು ಉಪಮೆಯ ಹೊಸಬರಹ. ಇಂತಹ ಜಾನಿಕೆ ಸ್ಥಿತಿಯಲ್ಲಿ ಹಲವು ಸ್ವರೂಪಕ್ಕೆ ಸಿಕ್ಕಿ ಮೌನವಾಗಿರುವ ಹೆಣ್ಣುರೂಪಗಳು ನಮ್ಮ ಸಮಾಜದಲ್ಲಿವೆ. ಇವರಿಗೆ ನ್ಯಾಯಕೊಡುವ ಬರಹ ನಮ್ಮದಲ್ಲ.. ಇವರಂತಾಗದೆ ಹೆಣ್ಣಿನ ಕಣ್ಣು ತೆರೆಸುವುದು ಹಾಗೂ ರಾಮನೊಳಿಗಿನ ಅಂತಃಕರಣವನ್ನು ತೆರೆದು ಸೀತೆಗೆ ತನ್ನ ತಪ್ಪನ್ನು ಒಪ್ಪಿಕೊಂಡು ಕಥೆಯ ರಾಮನ ವಿಧಿಯ ಲೀಲೆಯ ಶಮನಮಾಡಿ ಮನುಷ್ಯ ರಾಮನನ್ನು ಕಣ್ತೆರೆಸಿ ಸೀತೆಗೂ ಜೀವ-ಜೀವನ ಇದೆ ಎಂಬುದನ್ನು ರಾಮನಿಂದಲೇ ಅರ್ಥೈಸುವುದು. ಕಾಲೇಜು ಹಂತದಲ್ಲಿ ಕಣ್ತೆರೆಯಬೇಕಾದ ವಿಶ್ವಪ್ರಜ್ಞೆಯ ಜೀವನ ಪ್ರೀತಿಯನ್ನು ಇಂದಿನ ವ್ಯಾಪಾರಿ ಜಗತ್ತು ಮೊಸಳೆಯಾದಿಯಲಿ ನುಂಗುತಿದೆ. ಸಿನಿಮಾ, ಮಾಧ್ಯಮ, ಪೋಷಕ ಜಗತ್ತು, ಸಾಹಿತ್ಯ ಜಗತ್ತು ಪ್ರಶ್ನಿಸಿಕೊಳ್ಳಬೇಕಿದೆ. ಪ್ರೀತಿಯನ್ನು ಕಾಮವ್ಯಾಮೋಹದಲಿ ತೊಳೆಯುವ ಅನೈತಿಕತೆ ದೂರವಾಗಬೇಕಿದೆ. ಮೌನಕೆ ಧರ್ಮದ ಪೆಟ್ಟು ಇಲ್ಲಿ ಅನಗತ್ಯ. ಧರ್ಮವೆಂದರೆ ಮನುಷ್ಯನನ್ನು ರೂಪಿಸುದೇ ಹೊರೆತು ಹಿಂದಿನಿಂದ ನಿರ್ಮಿಸಿಕೊಂಡು ಬಂದುದಲ್ಲ ಎಂಬ ಸಂದೇಶ ಸಮಾಜಕ್ಕೆ ಮೌನದೊಳಗಿನ ಧ್ಯಾನ ಉತ್ತರಿಸಬೇಕೆದೆ ಸಕಲರೂ ಈ ಕುರಿತು ಚಿಂತಿಸುವ ಪ್ರಯತ್ನ ಮಾಡೋಣ.
 

ಭಾನುವಾರ, ಆಗಸ್ಟ್ 13, 2017

ಓ ಪಾರಿಜಾತ

ಓ ಪಾರಿಜಾತ...



ಸೂರ್ಯನಿಲ್ಲದ ವೇಳೆ
ಕೃಷ್ಣ ತಂದನು ಹೂ
ಪಾರಿಜಾತ ಇವಳು ಭಗ್ನಪ್ರೇಮಿ!
ಸತ್ಯಭಾಮೆಯ ಮನೆಯ
ಅಂಗಳವು ಇನ್ನು ವಿರಹ ಕಾಂತಿಯ
ಕಥೆಗೆ ಕೃಷ್ಣಲೀಲೆ!


ಕೇಸರಿಯ ಕಾಂಡದಲಿ
ಬಿಳಿಯ ಚಂದನಲೀಲೆ
ಪರಿಮಳಕೆ ಪ್ರೇಮವು
ರಾತ್ರಿ ರೂಪ
ಬುದ್ಧನ ಸ್ತೂಪದಲೂ
ನಿನ್ನ ಹಾಸಿದ ಅರಿವೆ
ಶಾಂತಿಯಲಿ ಬಂದ ಪ್ರೇಮ ಬಾಲೆ!
ಕ್ಷೀರಸಾಗರದಲ್ಲಿ
ಮಥನದ ಯುದ್ಧಗಳು

ದೇವತೆಗೂ ರಾಕ್ಷಸರ ಪಾಠವಾಯ್ತು.


ಸುರಭಿ, ವಾರಿಣಿಯ ಗೆಳತಿ
ಸುಂದರ ಮಧುಕನ್ಯೆ
ಬಂದಳು ಪ್ರೇಮದಲಿ ಪಾರಿಜಾತ
ಇಂದ್ರನ ಮೋಹದಲಿ
ವಿಷ್ಣುವಿನ ದಾಹದಲಿ
ಪ್ರೇಮ ಮಂದಿರ ವೃಕ್ಷ
ನಿನ್ನ ಜನ್ಮ ಲೀಲೆ!


ಭರತ ಭೂಮಿಯ ಮಗಳೆ
ಕೋಮಲಾಂಗಿಯ ಕನ್ಯೆ
ಪಂಪನ ಕಾವ್ಯಕೂ ಕೈಪಿಡಿಯ
ವರ್ಣನೆ ಓ ಕಬ್ಬಿಗನ ಮಗಳೇ
ಪ್ರಕೃತಿಗೆ ನಿನ್ನ ಸುಗಂಧ ಲೀಲೆ!

ಮಾತೆಂಬ ಮೈಲಿಗೆ...


 

          ಭಾರತ ಸಂವಿಧಾನವು ಪ್ರಾರಂಭವಾಗುವುದೇ ‘ನಾವು ಭಾರತೀಯ ಜನರು’ ಎಂಬ ತತ್ತ್ವದ ಅಡಿಪಾಯದಲ್ಲಿ ಆದ್ದರಿಂದ ಇಲ್ಲಿ ಪ್ರತಿಯೊಬ್ಬರಿಗೂ ಮನುಷ್ಯ ಗುಣವಿದೆ. ಅದನ್ನು ಕಾಪಾಡುವುದು ಪ್ರತಿಯೊಬ್ಬರ ಜವಬ್ದಾರಿ.
          ಅಕ್ಷರಗಳಿಗಿರುವ ಮೌಲ್ಯ, ಮಾತಿಗೆ ದೊರಕದೇ ಇರುವುದು ಇಂದು ವಿಪರ್ಯಾಸ. ಯೇಸು ಶಿಲುಬೆಯಲ್ಲಿ ಹೇಳಿದ ಕೊನೆಯ ದನಿ ‘ಅಪರಾಧಿಗಳನ್ನು ಕ್ಷಮಿಸು’ ಎಂಬ ಮಹತ್ವದ ಮಾತು ಇಲ್ಲಿ ಅನಿವಾರ್ಯ.

           ಸಮಾಜದ ಜನತೆಗೆ ತಮ್ಮ ಇರುವಂತಿಕೆಯನ್ನು ಗುರ್ತಿಸಿಕೊಳ್ಳುವ ಜವಬ್ದಾರಿ ಅಗತ್ಯವಿದೆ. ನಾವು ಕೂಡ ಈ ಸಮಾಜದ ಒಂದು ಭಾಗ. ಅದರೊಳಗೆ ನಮ್ಮ ಪಾತ್ರವೇನು ಎಂಬ ಅಂಶವನ್ನು ಸ್ವಯಂ ಕಲಿಕೆಯ ಪ್ರಾಮಾಣಿಕತೆ ಅಗತ್ಯವಿದೆ. ಮನುಷ್ಯನು ಮನುಷ್ಯನನ್ನೇ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆಯ ಪ್ರವೇಶ ಪಡೆಯುವುದಾದರೆ ಭಾರತೀಯ ಸಂಸ್ಕøತಿಯ ಅರ್ಥವೇನು? ಮನುಷ್ಯ ಸದಾ ಇರುವಂತಿಕೆಯನ್ನು ಗುರ್ತಿಸಿಕೊಳ್ಳುವಾಗ ತಾನು ಯಾವ ಹಾದಿ ಹಿಡಿದಿರುವೆ ಎಂಬ ಚಿಂತನೆ ಅಗತ್ಯವಿದೆ. ಸಮಾಜವನ್ನು ರೂಪಿಸುವ ಅದರಲ್ಲೂ ಶಿಕ್ಷಣದ ನೈತಿಕ ಜವಬ್ದಾರಿಯನ್ನು ಪೂರೈಸಿದ ಕೆಲವು ಮುಖಗಳು ಸಮಾಜದ ಜ್ಞಾನವನ್ನು ಮುಸುಕಿನಲ್ಲಿ ದರ್ಶನಮಾಡಿಸುವ ಹೊಣೆ ಹೊತ್ತಿರುವುದು ವಿಪರ್ಯಾಸ!
          ಈ ಲೇಖನದಲ್ಲಿ ಎರಡು ಅಂಶಗಳನ್ನು ಚರ್ಚಿಸುವ ಪ್ರವೇಶಿಕೆಯನ್ನು ಕಾಣುತ್ತಿದ್ದೇನೆ ನೀವು ಇದನ್ನು ವಿಸ್ತರಿಸಬಹುದು.


ನಿರೂಪಕರಿಗೆ ನಿರ್ಣಯಿಸುವ ಸ್ವಾತಂತ್ರ್ಯ ನೀಡಿದವರಾರು?
ಮಾಧ್ಯಮಗಳಲ್ಲಿ ಇಂದು ನಿರೂಪಕರ ಸಂಖ್ಯೆ ಗಂಟೆ ಲೆಕ್ಕದ ಕೂಲಿಯಾಗಿದೆ. ಆದರೆ ತಮ್ಮ ಕರ್ತವ್ಯದ ದಿಕ್ಕನ್ನೇ ಮರೆತ ಇವರು ಪ್ರತಿನಿತ್ಯ ಜರುಗುವ ಘಟನೆಗಳಲ್ಲಿ ರೆಕ್ಕೆ ಪುಕ್ಕಗಳು ದೊರೆತ ಅರೆಬರೆ ವಿಷಯಗಳನ್ನು ವಿಸ್ಮಯದಂತೆ ಹಾರಿಸುವ ನೈತಿಕ ಜವಬ್ದಾರಿಯಲ್ಲಿ ಇವರಿಗೆ ದಕ್ಕಿರುವ ಜ್ಞಾನವಾದರೂ ಎಷ್ಟು! ಒಂದು ಘಟನೆಗೆ ಸಾಕ್ಷಿಯೇ ಇನ್ನೂ ತನಿಕೆಯ ಕಾರ್ಯದಲ್ಲಿ ತೊಡಗಿರುವಾಗಲೇ ನಿರ್ಣಯಿಸುವುದು ಎಷ್ಟು ಸಮಂಜಸ. ಸಮೂಹ ಮಾಧ್ಯಮವೆಂಬುದು ನಾಲ್ಕನೆಯ ಅಂಗವೆಂದು ಕರೆದುಕೊಂಡು ಸ್ವಯಂ ಘೋಷಿತರು ಸಂವಿಧಾನ ಪಾಲನೆಯೊಂದಿಗೆ ಜನರ ರಕ್ಷಣೆಯ ಹೊಣೆಯೇನು? ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯವನ್ನು ಎಷ್ಟು ಜನರು ಅಧ್ಯಯನ ಮಾಡಿ ಬಳಸುತ್ತಿದ್ದಾರೆ. ಆಸ್ಪತ್ರೆಗೆ ಬಂದವರೆಲ್ಲಾ ರೋಗಿಯೇ! ಮಾಧ್ಯಮದವರಿಗೆ ಮಾಹಿತಿಯನ್ನು ಪೂರ್ಣ ಪರಿಶೀಲನೆಯೊಂದಿಗೆ ಪಡೆದು ಜನರಿಗೆ ನ್ಯಾಯಬದ್ಧವಾಗಿ ತಲುಪಿಸುವ ಜವಬ್ದಾರಿಯೇ ಹೊರೆತು ಬ್ರೇಕಿಂಗ್ ನ್ಯೂಸ್‍ಗಳ ಮೂಲಕ ಬಣ್ಣ ಹಚ್ಚುವ ಟಿ ಆರ್ ಪಿ ಸಂಸ್ಕøತಿಯಲ್ಲ. ಇದು ಆಡಳಿತ ವಲಯಕ್ಕೆ ತಿಳಿಯದೇ ಕೀಲಿ ಗೊಂಬೆಯಾಗಿರುವ ಅಧಿಕಾರಿಗಳ ವರ್ಗವನ್ನು ಕಂಡು ನಾಚುವ ಕಾಲ ಕಣ್ಣೆದುರಿದೆ. ಅಧಿಕಾರದಲ್ಲಿರುವ ಉತ್ತಮ ಆಡಳಿತಗಾರನನ್ನು ವ್ಯಂಗ್ಯವಾಗಿ ಬಿಂಬಿಸುವ ಮಾಧ್ಯಮಗಳು ಜನರ ತಿಳುವಳಿಕೆಗೆ ಯಾವ ಅಂಶವನ್ನು ನೀಡುತ್ತಿದ್ದೇವೆ ಎಂಬ ಅರಿವನ್ನು ಯೋಚಿಸುವುದಿಲ್ಲವೇಕೆ! ಅನಗತ್ಯವನ್ನು ಬಿಂಬಿಸುವಷ್ಟು ಅಗತ್ಯವನ್ನು ತಲುಪಿಸುತ್ತಿಲ್ಲವೇಕೆ? 


ಯುವಕರಿಗೆ ದೊರೆತ ಮಾತಿನ ಮೈಲಿಗೆ..
ಯುವಕರೆಂದರೆ ಬೆಂಕಿಯ ರೂಪಗಳು, ಸಮಾಜದ ಹೊಸರೂಪಗಳು ಎಂಬ ಆಶಾಭಾವನೆಯನ್ನು ನಮ್ಮ ಹಿರಿಯ ವರ್ಗ ನೀಡಿತಾದರೂ ನಾವು ಏಕೆ ಅಳಿಸಲೆತ್ನಿಸುವ ಅಜ್ಞಾನವನ್ನು ತೋರುತ್ತಿದ್ದೇವೆ. ಮಾಧ್ಯಮವು ಸುಲಭವಾಗಿ ಕೈಗೆ ದೊರಕಿತೆಂಬ ಅಹಂ ಇಂದು ಯುವಕರಿಗೆ ಪೂರ್ಣ ಸ್ವಾತಂತ್ರ್ಯದ ಹಕ್ಕು ದೊರೆತಂತಾಗಿ ಮನುಷ್ಯ ಪದಕ್ಕೆ ಬೆಲೆಯೇ ಇಲ್ಲದಂತೆ ವರ್ತನೆಗಳು ಪ್ರಾರಂಭವಾಗಿವೆ. ಮೌಲ್ಯವೇ ಇಲ್ಲದಂತೆ ಮಾತನಾಡುವ, ವರ್ತಿಸುವ ಎಲ್ಲಾ ಬೆಳವಣಿಗೆಗಳು ಮಾತು, ಸಂದೇಶ, ನಡವಳಿಕೆಯಲ್ಲಿ ಕಂಡುಬರುತ್ತಿವೆ. ಕುಟುಂಬ, ಶಿಕ್ಷಣ, ಸಮಾಜವೆಂಬುದು ತನಗಿಷ್ಟದ ನೆಪವಾಗುತ್ತಿರುವ ವೇಳೆಯಲ್ಲಿ ಇವರಿಗೆ ಈ ಸ್ವಾತಂತ್ರ್ಯ ನೀಡಿದವರಾರು..
    ವಿಚಾರದ ಅಧ್ಯಯನವನ್ನೇ ಮಾಡದೇ ಪೂರ್ವಗ್ರಹಿತರಾಗಿ ಚಳುವಳಿ ಮಾಡುವ, ಬೆಂಬಲ ನೀಡುವ ಶಿಕ್ಷಣವನ್ನು ಯಾರು ನೀಡಿದ್ದಾರೆ.  ಸಂಘಟನೆಗಳೆಂದರೇನು... ಸಮಸ್ಯೆಗಳನ್ನು ಹುಡುಕುವುದೇ! ಪರಿಹಾರ ಹುಡುಕುವುದೇ! ಬೆಂಬಲ ಸೂಚಿಸುವುದೇ! ಏಕೆ ಈ ಅಂಶಗಳು ಅರ್ಥವಾಗುತ್ತಿಲ್ಲ. ಸಮಾಜದ ದ್ರೋಹಗಳೆಲ್ಲಾ ಹಣವೆಂಬ ನೆಪದಲ್ಲಿ ಸುಲಭ ಮಾರ್ಗಗಳನ್ನು ಅಲೋಚಿಸುತ್ತಾ ರಕ್ತ ಹೀರುವ ಸದ್ಗುಣರೂಪಗಳ ದರ್ಶನವು ಈ ಸಮಾಜಕ್ಕೆ ತಿಳಿಯುವುದೆಂದು?

  • ನ್ಯಾಯಾಲಯಕ್ಕೆ ಇಬ್ಬರೂ ಬಂದರು..
       ಸತ್ಯ ಹಾಗೂ ಸುಳ್ಳು ಇಬ್ಬರೂ ನ್ಯಾಯಾಲಯಕ್ಕೆ ಬರುವಾಗಲೇ ತಾನು ಬೆತ್ತಲೆ ಎಂಬುದು ಸುಳ್ಳಿಗೆ ತಿಳಿದಿರುತ್ತದೆ. ಆದರೂ ಭೂಷಣ ಪ್ರವೃತ್ತಿಯನ್ನು ಅದೆಂದಿಗೂ ಬಿಡಲಾರದು. ಒಬ್ಬ ವ್ಯಕ್ತಿ ಪೂರ್ಣವಾಗಿ ನ್ಯಾಯಕ್ಕೆ ಬದ್ಧವೆಂದ ಮೇಲೆ ಆ ವ್ಯಕ್ತಿಯ ಕುರಿತು ತನಗೆ ಸುಲಭವಾಗಿ ಲಭ್ಯವಾಗುವ ಅಕ್ಷರ, ಮಾತು, ಕ್ರಿಯೆಗಳಲ್ಲೆಲ್ಲಾ ಅಪೂರ್ಣ ಅನರ್ಥಗಳನ್ನು ಸೃಷ್ಟಿಸುವ ನೈತಿಕ ಸ್ವಾತಂತ್ರ್ಯವನ್ನು ಈ ಸಮಾಜಕ್ಕೆ ನೀಡಿದವರಾರು? ರಕ್ಷಕರು, ನ್ಯಾಯಧೀಶರು ಎಂಬೆಲ್ಲಾ ವ್ಯವಸ್ಥೆಗಳು ಇರುವುದಾದರೂ ಏಕೆ? ನಮ್ಮ ಮನೆಯೇ ನಮಗೆ ಪೂರ್ಣವಾಗಿ ಅರ್ಥವಾಗದಿರಲು ಕಾರಣ ನಮಗೆ ಪರಿಸರದ ಅನುಭವದ ಕೊರತೆ ಆದರೆ ಒಂದು ಸ್ಥಳವನ್ನು ನೋಡದೆ, ಎಂದೋ ನೋಡಿದ ಕಲ್ಪನೆಯಲ್ಲೇ, ಇನ್ನೊಬ್ಬರ ಹೇಳಿಕೆಯಲ್ಲಿ ನಾವು ನಮ್ಮದೇ ನಿರ್ಧಾರಗಳನ್ನು ಸುಲಭವಾಗಿ ಮಾರಿಕೊಂಡರೆ ನಮ್ಮ ಅಸ್ತಿತ್ವದ ಪ್ರಶ್ನೆಯಾದರೂ ಏನು? ನಾವು ಒಬ್ಬ ಮನುಷ್ಯನಿಗೆ ಸಹಾಯ ಮಾಡಲಾಗದ ಶಕ್ತಿ ಇಲ್ಲದ ಮೇಲೆ ಆತನನ್ನು ನಿಂದಿಸುವ ಯಾವ ನೈತಿಕತೆಯೂ ನಮಗೆ ಇರಲಾರದು ಎಂಬ ಬುದ್ಧನ ನುಡಿಗೆ ಅರ್ಥವಿಲ್ಲವೇ.. ಅಕ್ಷರ ಕಲಿತವರ ಗೊಸಂಬಿತನಗಳಿಗೆ ಅನಕ್ಷರಸ್ಥ ಬಲಿಯಾಗುತ್ತಿದ್ದಾನೆ. ಮಕ್ಕಳು ಬದುಕನ್ನು ಅರ್ಥವಿಲ್ಲದ ಅಯನದಲ್ಲಿ ಉಸಿರುಗಟ್ಟುತ್ತಾ ನಾಳೆಯ ವ್ಯವಹಾರದ ದಾಳಗಳಾಗುವುದು ಇಂದಿನ ಅನಿವಾರ್ಯ ಸ್ವರೂಪಿ ಜಗತ್ತಿನ ಲೀಲೆ!
     ಈ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರೂ ಯೋಚಿಸಬೇಕಾದುದು ಇಲ್ಲಿ ಯಾವುದು ಅಗತ್ಯ, ಹಾಗೂ ಅನಗತ್ಯವಾದುದನ್ನು ಮುಂದುವರೆಸಬೇಕೆ? ನಮ್ಮ ಎಂತಹ ರಾಜಕೀಯ ನಾಯಕರು ಬೇಕು, ಯಾವ ರೀತಿಯ ಸಾಂಸ್ಕøತಿಕ ಚಿಂತಕರು ಬೇಕು.. ಹಾಗೂ ಮೊದಲು ನಾವು ಯಾರು, ಇಲ್ಲಿ ನಮ್ಮ ಅಸ್ಥಿತ್ವವೇನು? ನಾವು ಮಾತನಾಡುವ ನುಡಿಯ ಶುದ್ಧತೆ ಹೇಗಿರಬೇಕು. ನಮ್ಮ ಒಪ್ಪಿಕೊಳ್ಳುವ ಸಮಾಜ ಹೇಗಿದೆ. ನಾವು ಸ್ವತಂತ್ರರೇ! ಇಷ್ಟೆಲ್ಲಾ ಪ್ರಶ್ನೆಗಳಿಗೆ ಮಾನಸಿಕವಾದ ನಮ್ಮದೇ ಉತ್ತರ ಕಂಡುಕೊಂಡರೆ ನಾಶವಾಗುತ್ತಿರುವ ಭಾರತೀಯ ಅಂತಃಸತ್ವ ಉಳಿಯುತ್ತದೆ. ನುಡಿದರೆ ಮುತ್ತಿನ ಹಾರದಂತಿರಬೇಕು.. ಮಾತೆಂಬುದು ಜ್ಯೋತಿರ್ಲಿಂಗ.. ಮೊದಲಾದ ನುಡಿಗಳಿಗೆ ಅಂಟಿದ ಮೈಲಿಗೆಯನ್ನು ಕಳಚುವ ಪ್ರಯತ್ನ ಮಾಡಬಹುದು. 
ಶ್ರೇಷ್ಟವಾದುದು ಯಾವಾಗಲೂ ಶಾಶ್ವತವಾಗಿ ಉಳಿಯುತ್ತದೆ ಹಾಗೂ ಇದನ್ನು ಕುರಿತು ಯೋಚಿಸುವಾಗ ನಮ್ಮ ಜ್ಞಾನದ ಅರ್ಹತೆಯನ್ನು ನಾವು ಪರಿಶೀಲಿಸಿಕೊಳ್ಳಲೇಬೇಕು