ಈ ಬ್ಲಾಗ್ ಅನ್ನು ಹುಡುಕಿ

ಸೋಮವಾರ, ಜುಲೈ 4, 2022

ಸಹೃದಯತೆ ಎಂದರೆ ಇವರೇ ನೆನಪಾಗುವುದು





ಹೌದು, ಸಹೃದಯತೆ ಎಂದಾಕ್ಷಣ ಇವರ ವ್ಯಕ್ತಿತ್ವ ನೆನಪಾಗುತ್ತದೆ. ಒಂದೊಂದು ಗುಣಕ್ಕೂ ಒಬ್ಬೊಬ್ಬರು ನಮ್ಮ ಮನಸ್ಸು ತುಂಬಿರುತ್ತಾರೆ. ಹೆಸರು ರಘು ಹಾಲೂರು ಎಂದಷ್ಟೇ ಗೊತ್ತಿತ್ತು. ಹಿರಿಯರು, ಜ್ಞಾನಿಗಳು ಎಲ್ಲಕ್ಕಿಂತ ಮಿಗಿಲಾಗಿ ಸಹೃದಯಿ. ಮೊನ್ನೆ ಬುಕ್ ಬ್ರಹ್ಮ ನಡೆಸಿದ ಸಂದರ್ಶನ ನೋಡಿದಾಗ ತಿಳಿಯಿತು ಇವರ ಹೆಸರು ರಘುನಂದನ ಹಾಲೂರು ಅಂತ.

ಲೋಕದಲ್ಲಿ ಇಷ್ಟವಾಗುವವರು ಸಾವಿರಾರು ಜನ ಇರಬಹುದು. ಈ ಇಷ್ಟಗಳಿಗೆ ಹಲವು‌ ಕಾರಣ ಇರುತ್ತವೆ.

ಈ ಲೋಕದಲ್ಲಿ ಮೊದಲಿಗೆ ಸ್ವಾರ್ಥ.

ನಂತರ‌ ಇರೋದೇ ನಿಸ್ವಾರ್ಥ.. 

ಇಂತಹ ಜಗತ್ತಿನಲ್ಲಿ ಸಾವಿರಾರು ಜನರು ಉತ್ತಮರು ನಿಸ್ವಾರ್ಥದ ನೆಲೆಯಲ್ಲಿ ಇದ್ದಾರೆ. ಆದರೆ ಅಲ್ಪ ಪ್ರಮಾಣದಲ್ಲಿ ಇರುವ ಸ್ವಾರ್ಥದ ಜನರ ಲೆಕ್ಕಾಚಾರದಲ್ಲಿ ಸಹೃದಯತೆಯು ಮುಖ್ಯ ವಾಹಿನಿಯಲ್ಲಿ ಕಾಣುತ್ತಿಲ್ಲ. 

ಸಹೃದಯತೆಯಲ್ಲಿ ರಘು ಆಲೂರ ಹೆಸರು ಏಕೆ  ಮುಖ್ಯ ಅಂದರೆ ಅವರ ಕನ್ನಡ ಪ್ರೀತಿ, ಕನ್ನಡ ಸೇವೆ, ಎಲ್ಲಕ್ಕಿಂತಲೂ ಆಪ್ತತೆ.

ಅಮೇರಿಕಾದಲ್ಲಿ ಇದ್ದರೂ ಕೇವಲ ಅಭಿಮಾನದ ಕನ್ನಡಿಗರಾಗದೆ, ಸಾಕಷ್ಟು ಕನ್ನಡ ಸೇವೆ ಮಾಡುತ್ತಿರುವ ಸಹೃದಯ ಕಾರ್ಯದಿಂದ ಮುಖ್ಯ ಅನಿಸುತ್ತಾರೆ.

ಅವರ ಕನ್ನಡಸೇವೆ ಕುರಿತು ಇಲ್ಲಿ ಬರಹವೇನೂ ನೀಡಲಾರೆ. ಏಕೆಂದರೆ ಎಲ್ಲವನ್ನೂ ಅವರ ಮಾತಲ್ಲೇ ಕೇಳಬಹುದು. ಬುಕ್ ಬ್ರಹ್ಮ ಅವರು ಸೆರೆಹಿಡಿದ್ದಿದ್ದಾರೆ.

ನನಗೆ ಮುಖ್ಯ ಅನಿಸಿದ್ದು...

ಟೋಸ್ಟ್ ಮಾಸ್ಟರ್ ಮೂಲಕ ವಾಕ್ಪಟುಗಳು ಕ್ಲಬ್ ನಿರ್ವಹಿಸುವ ಕಾರ್ಯದ ಮೂಲಕ..



ನಮ್ಮ ಸತ್ಯಣ್ಣನ ಮಾತು ಕೇಳಲು ಅದರ ಆನ್ಲೈನ್ ಕಾರ್ಯಕ್ರಮಕ್ಕೆ ಪ್ರವೇಶ ಪಡೆದ ನನಗೆ ಅದರ ಕಾರ್ಯವೈಖರಿ ತುಂಬಾ ಇಷ್ಟವಾಯಿತು. ಅವರ ಆಪ್ತತೆಯಲ್ಲಿ ನಾನೂ ಒಬ್ಬನಾದೆ. ಇದರಲ್ಲಿ ಎರಡು ಮಾದರಿಯ ಕಾರ್ಯಕ್ರಮ ನಡೆಯುತ್ತವೆ. ಒಂದು ವಾರ ಕನ್ನಡ ಅತಿಥಿಗಳಿಂದ ಒಂದು ಮುಖ್ಯ ವಿಚಾರ ಸಂವಾದ. ಮತ್ತೊಂದು ವಾರ ಇವರದೇ ಆಪ್ತರಿಂದ ಭಾಷಾ ಪ್ರಧಾನ ಹರಟೆ.

ಈ ಹರಟೆಯಲ್ಲಿ ಇವರ ನಿಯಮ ಚೆಂದ ಇರುತ್ತೆ.

ವಿಷಯ, ಭಾಷೆ, ಉಚ್ಛಾರಣೆ, ಪದಪ್ರಯೋಗ, ಸಮಯಪಾಲನೆ ... ಇತ್ಯಾದಿ

ಹೀಗೆ ವಿಂಗಡಿಸಿಕೊಂಡು ಎಲ್ಲವನ್ನೂ ಲೆಕ್ಕ ಹಾಕಿ ತಿದ್ದಿ ತೀಡಿ ಎಷ್ಟು ಮಜವಾಗಿ ನಮ್ಮ ಭಾಷೆಯನ್ನು ದುಡಿಸುತ್ತಾರೆ ಎಂದರೆ ಕನ್ನಡ ಮೇಷ್ಟ್ರುಗಳೂ ಕೂಡ ಈ ಕಾರ್ಯ ಮಾಡುತ್ತಿಲ್ಲ.

ಅಲ್ಲಿ ಗಾದೆ, ಒಗಟು, ನಾಣ್ನುಡಿ, ಸಿನಿಮಾ(ಹಳೆಯ), ಭಾಷಾಂತರ ಮೊದಲಾದ ಮಾದರಿಗಳು ಬಂದು ಹೋಗುತ್ತವೆ.

ಅಂತರಾಷ್ಟ್ರೀಯವಾಗಿ ಟೋಸ್ಟ್ ಮಾಸ್ಟರ್ ನ ಸಾವಿರಾರು ಕ್ಲಬ್ ಗಳಲ್ಲಿ ಮೊದಲಿಗೆ ಭಾರತೀಯ ಅದರಲ್ಲೂ ಕನ್ನಡದಲ್ಲಿ ಇಂತಹ ಪ್ರಯೋಗ ಮಾಡುತ್ತಿರುವುದು ಹಿರಿಮೆ ಅನಿಸಿತು. ಒಬ್ಬರಿಗೊಬ್ಬರು ಹಿತಮಿತ ವಾಕ್ಪಟುಗಳೇ, ನುಡಿ, ನಡೆ- ಸದ್ಭಾವಗಳ ಗಣಿ ಇವರು ಅನಿಸಿತು. ಅದರೊಳಗಿನ ಪ್ರತಿಯೊಬ್ಬರೂ ಅರ್ಥಪೂರ್ಣ ಕಾರ್ಯ ಮಾಡುತ್ತಿದ್ದಾರೆ ಅನಿಸಿತು. ಇದು ನಮ್ಮ ಚಿಕ್ಕಮಗಳೂರಿನ ರಘುನಂದನ ಹಾಲೂರು(ರಘು ಹಾಲೂರು) ಇವರ ಒಂದು ಚಿಕ್ಕ ಕಾರ್ಯವನ್ನು ಕಂಡಾಗ ಅನಿಸಿದ್ದು.. 

ಮೊನ್ನೆ ಅಮೇರಿಕಾದಿಂದ ಬೆಂಗಳೂರಿಗೆ ಬಂದಾಗ ನಮ್ಮನ್ನೆಲ್ಲಾ ಭೇಟಿಯಾದರು. ಪರದೆಯಲ್ಲಿ ಕಂಡ ಮುಖದ ಮನೋ ಮಧುರತೆ ಹಾಗೇ ಇತ್ತು. ಇನ್ನೂ ಹೆಚ್ಚಿನ ಗುಣವಿತ್ತು. ಹಳೆಯ ಆಪ್ತರು ಅನಿಸಿತು. ನನಗಿಂತ ತುಂಬಾ ಹಿರಿಯವರಾದರೂ ಯಾವುದೇ ಅಂತರವಿಲ್ಲದೆ ಹತ್ತಿರವಾಗುತ್ತಾರೆ. ಭಾಷೆ ಕುರಿತು ಒಂದಿಷ್ಟು ಮಾತಾಡಿದೆವು. ಅಣಕು ರಾಮನಾಥ್ ಅವರ ಮನೆಯ ಸಾಹಿತ್ಯ ಗೋಷ್ಠಿಗೆ ಸೇತುವೆ ಮಾಡಿ ತುರ್ತು ಕಾರ್ಯ ನಿಮಿತ್ತ ನಿರ್ಮಿಸಿದೆ. ಕಂಡದ್ದು ಅರ್ಧ ತಾಸಾದರೂ ಒಡನಾಟ ಮೂರ್ನಾಲ್ಕು ವರ್ಷದಷ್ಟು ಹಳೆಯದು.


ಇವರು ಕಾಣಿಸಿದ್ದು.. ಇಷ್ಟೇ ಆದರೂ, ಕಾಣಿಸಿದಿರುವ ಹಲವು ಇವರ ಆಪ್ತರು ಇವರಷ್ಟೇ ಶ್ರೇಷ್ಠರು ಅನಿಸಿತು. ಇಂತಹ ಹಲವು ಸಮಾಜಮುಖಿ ಕಾರ್ಯಗಳ ಪಟ್ಟಿಯೇ ಇದೆ. ಎಲ್ಲವನ್ನೂ ಕೇಳಿದ್ದೇನೆ, ಕಾಣುವ, ಸಾಧ್ಯವಾದಷ್ಟು ನಮ್ಮಂತೆ ಅಳವಡಿಸಿಕೊಳ್ಳುವ ಹಂಬಲವೂ ಇದೆ. ಧನ್ಯೋಸ್ಮಿ ಇವರ ಕಾರ್ಯವಿಶಾಲತೆಗೆ.

ಇವರ ಕ್ಲಬ್ ನಲ್ಲಿ ಇರುವವರು ಹಾಗೂ ವಾರಕ್ಕೊಮ್ಮೆ ಭಾನುವಾರ ರಾತ್ರಿ ಒಬ್ಬತ್ತು, ಹತ್ತಕ್ಕೆ ಏರ್ಪಡುವ ಕಾರ್ಯಕ್ರಮದ ಲಿಂಕು ಇದು.

Officers and members:

Anil Shekhar

Anil Joshi-Treasurer

Ashok-President

Chandra

Chanaveer 

Chetan

Mahadesh-Secretary

Prasad-SAA

Raghu-VPE

Shailaja

Shiva-VPM

Suma

Sumanth-VPPR

Club Name : Vakpatugalu 

Club Number : 01259423

District: 101

Division : C

Area : C5

For weekly session:

https://us02web.zoom.us/j/81055934461

ರಘುನಂದನ ಹಾಲೂರ ಅವರ ಸಂದರ್ಶನ - ಬುಕ್ ಬ್ರಹ್ಮ

https://youtu.be/qmTrvUrsO-4

ಶನಿವಾರ, ಜುಲೈ 2, 2022

ನಾವು ಮಧ್ಯಮ ವರ್ಗದವರೇ ಹೀಗೆ...

ನಾವು ಮಧ್ಯಮ ವರ್ಗದವರೇ ಹೀಗೆ...

ನಾವು ಮಧ್ಯಮ ವರ್ಗದವರೇ ಹೀಗೆ... 
ಮಾತು ಮಾತಿಗೂ 
 ಜೋತು ಬೀಳುತ್ತೇವೆ. 
ಆಡಿದ ಮಾತಿಗೆಲ್ಲಾ 
 ಅರ್ಥ ಹುಡುಕುತ್ತೇವೆ. 
ಹುಡುಕಿದ್ದಕ್ಕೆಲ್ಲಾ 
 ರೆಕ್ಕೆ ಪುಕ್ಕ ಕಟ್ಟಿ 
ನಾವೇ ನೋಯುತ್ತೇವೆ, 
 ಇಲ್ಲವೆ, ಸದಾ ಬೇಯುತ್ತೇವೆ. 
ಮಾತೆಲ್ಲವನ್ನೂ 
ಮರೆಯದೇ ಉಳಿಸುತ್ತೇವೆ.. 
ತಕ್ಕಮಟ್ಟಿಗೆ ರುಚಿ ನೀಡಿ ಬೆಳೆಸುತ್ತೇವೆ. 
ನಾವು ಯಾವಾಗಲೂ ಹೀಗೆ,
ಬೆಳೆವವರ ಕಾಲೆಳೆಯುತ್ತಾ
ಮೂಗು ತೂರಿಸುತ್ತಾ
ನಮ್ಮುದ್ದವ, ನಮ್ಮಗಲವ
ತೋರುತ್ತಲೇ 
ಇರುತ್ತೇವೆ.
ಮಾರುಕಟ್ಟೆಯಲ್ಲಿ
ಮೆಣಸಿನಕಾಯಿಗೂ,
ಅಕ್ಕಪಕ್ಕದ ತೋಟಗಳಿಗೂ,
ದೂರದೂರಿನ 
ಜಮೀನು-ಸೈಟುಗಳಿಗೂ,
ಆಗ ತಾನೇ ಸಿಕ್ಕ
ಸಾಬರು, ಸೇಟುಗಳಿಗೂ,
ನಮ್ಮ ರಾಜ್ಯಗಳ ಮುಖ್ಯಮಂತ್ರಿಗಳಿಗೂ,
ಪ್ರಧಾನಿಗೂ, ವಿದೇಶಾಂಗಕ್ಕೂ
ನಮ್ಮ ಸಲಹೆಗಳು
ಸದಾ ಇರುತ್ತವೆ...

ಬೆಲೆ ಹೆಚ್ಚಳಕೆ ಕುದಿಯುತ್ತೇವೆ
ಕಡಿಮೆ ಎಂದ ಕಡೆ 
ಕೈ ಚಾಚುತ್ತೇವೆ...
ಯಾರೂ ಕಾಣದಿದ್ದರೆ
ಜೇಬು ತೆರೆಯುತ್ತೇವೆ.

ಅಪ್ಪ-ಅಮ್ಮನ ಕುರಿತು
ನಮ್ಮದು ಸದಾ 
ಭಗವದ್ಗೀತೆಯ ನೀತಿ..
ಗಂಡ-ಹೆಂಡತಿ-ಮಕ್ಕಳ ಕುರಿತು
ಇನ್ನಿಲ್ಲದ ಭೀತಿ.
ಸ್ನೇಹಕ್ಕೆ ಕರ್ಣರಸಾಯನ.

ಅಕ್ಷರಗಳ ಓದಿ-ಬರೆದು 
ಬೆಳೆಯಬೇಕಾದ ನಾವು 
ಅಳಿಸಿಹೋಗುವ ಮಾತಿಗೆ 
ಸದಾ ಮೈಲಿಗೆಯಾಗುತ್ತೇವೆ.
ಕಣ್ತೆರೆಯ ಬೇಕಾದ ನಾವು
ಕಣ್ತೆರಸಲು ಹಂಬಲಿಸುತ್ತೇವೆ.
ನಮ್ಮ ದಾರಿಗೆ ನಾವೇ ಶತ್ರು..
ಲೋಕ ಮೆಚ್ಚಿಸಲು ನಾವೇ 
ನಿತ್ಯ ಸಾರ್ವತ್ರಿಕ ಮಿತ್ರು.


 -ಅಂಕುರ

ಬುಧವಾರ, ಜೂನ್ 1, 2022

ಹುಡುಕಬಹುದೇ !

 ಹುಡುಕಬಹುದೇ !




ದನಿ ಎತ್ತುವ ಕೊರಳುಗಳೇ

ಮೌನವೀಣೆಯ ಮೀಟಿ

ದನಿಯ ಕೇಳಿ ಒಮ್ಮೆ!

ಅಧರ್ಮದ ಕ್ರಿಮಿಯೇ

ಹುಡುಕುತಿಹೆ ಬಣ್ಣದ ಸೋಂಕು!

 ಇಲ್ಲಿ ಧರ್ಮವಿಲ್ಲ.

ಕಳೆದ ಕಾಲದ ಕಲಹ

ಇಂದು ಹಾಳಾಯ್ತು ವಿನಃ

ಭವಿಷ್ಯವೆಲ್ಲಿ?

ಹುಡುಕಬೇಡ ಮನವೆ

ಇನ್ನೆಲ್ಲೋ ಇದೆಯೆಂದು

ಕಳೆದುಕೋ ಇಲ್ಲೇ.

ಕಾಡಿದ್ದು, ಹುಡುಕಿದ್ದು

ಅಜ್ಞಾನವೇ ಹೊರೆತು

ಜ್ಞಾನವಲ್ಲ.


ಮಂಗಳವಾರ, ಮೇ 31, 2022

ಟ್ರೋಲು ಸ್ವಾಮಿ! ಟ್ರೋಲು..

 ಟ್ರೋಲು ಸ್ವಾಮಿ! ಟ್ರೋಲು..

 








ಟ್ರೋಲು ಸ್ವಾಮಿ! ಟ್ರೋಲು..

ಪ್ರಸಿದ್ಧಿಯಾಗಬೇಕಂದ್ರೆ

ಟ್ರೋಲೇ ಆಗಬೇಕು !

ಅಧಿಕಾರ ಇದ್ದ ಕಡೆ ವಾಲಬೇಕು

ವಾಲಾಟದಲ್ಲೇ ತೇಲಬೇಕು!

ಹಿಂದೂ ಬಗ್ಗೆ ಮಾತಾಡಬೇಕು

ಕೆಲವರನ್ನು ಮೆಚ್ಚಿಸಬೇಕು

ಕೆಲವರನ್ನು ಚುಚ್ಚಬೇಕು

ಮುಸ್ಲಿಂ ಕುರಿತು ಮಾತಾಡಬೇಕು

ಕೆಲವರನ್ನು ಮೆಚ್ಚಿಸಬೇಕು

ಕೆಲವರನ್ನು ಚುಚ್ಚಬೇಕು

ಸಮಯ ಸಿಕ್ರೆ ಹಿಜಾಬ್ ಕುರಿತೂ

ಮಾತಾಡಬೇಕು...

ದಲಿತರಿಗೆ ನ್ಯಾಯ ಕೊಡಿ

ಅನ್ನುತ್ತಲೇ ಇರಬೇಕು!

ಮಹಿಳೆಯೋ, ಮಾಂಸವೋ, ಪಕ್ಷವೋ

ಪುಡಾರಿಯೋ ಮಾತಾಡುತ್ತಲೇ ಇರಬೇಕು

ಸಾಧ್ಯವಾದಷ್ಟೂ ಶುದ್ಧವೆಂದು ವಿರುದ್ಧ ಮಾತಾಡಬೇಕು

ಮಠವೋ ಮಾನ್ಯವೋ ಪರವಾದಿ

ಸಂಘ ಕಟ್ಟಬೇಕು,

ಹೊಗಳು ಭಟ್ಟರಿಗೆ ಹಣ ನುಂಗಿಸಬೇಕು

ಕೃಪಾಪೋಷಿತವಾಗಿಯೇ ಬದುಕಬೇಕು

ಕುತ್ತಿಗೆಗೆ ಬಂದ್ರೆ,

 ಅರಾಮಾಗಿ ಇರಬೇಕಾದ್ರೆ,

ಮಾಡಿದ ತಪ್ಪು ಮರೆಸಬೇಕಂದ್ರೆ

ಆಸ್ಪತ್ರೆ ಇದೆ, ಜೈಲೂ ಇದೆ.

ಹೆಸರು ಕುದುರೆ ಹತ್ತಿಕೊಂಡು

ಬಿರುದು ಭವಾವಳಿ ಹೊತ್ತುಕೊಂಡು

ಅಪ್ಪ ಮಾಡಿದ ಆಸ್ತಿಯಲ್ಲಿ,

ಇಲ್ಲದಿದ್ರೇನು..

ಸರ್ಕಾರದ ಗದ್ದುಗೆ ಇವೆಯಲ್ವ

ಮಸ್ತಿ ಮಾಡೋ ಸಿಂಪಲ್ ಐಡಿಯಾ

ಬುಸಿನೆಸ್ ಆದ್ರೂ ಮಾಡ್ಲೇಬೇಕು

ಅಗತ್ಯ ಅನಿಸೋ  ಕಡೆ

ಬಡವರನ್ನೇ ಗಾಣ ಹಾಕಿ

ಹಗಲು ರಾತ್ರಿ ರಕ್ತ ಹೀರಬೇಕು

ಶಾಲೆ, ಮಂದಿರ, ಆಹಾರ

ಬೇಕಾದಷ್ಟು ಸ್ವಾಮಿ!

ಅಂತರಂಗ ಶುದ್ಧಿ ಇಲ್ಲದೆ

ಬಹಿರಂಗ ಹಾರಾಟ ಮಾಡ್ತ

ಲೋಕದ ಕಣ್ಣಿಗೆ ಟ್ರೋಲ್ ಆಗಬೇಕು

ಟ್ರೋಲು ಸ್ವಾಮಿ, ಟ್ರೋಲು

ಇವರೇ ಜಗತ್ತು ಮೆಚ್ಚುವ ಹೊಸ ಮಾಲು.

ಬುಧವಾರ, ಜನವರಿ 26, 2022

 ಗಾಂಧಿ

ಅಪರೂಪದ ಚಿತ್ರಗಳು


'ಬೆಂಕಿ ಬೇರೆ! ಬೆಳಕು ಬೇರೆ!
ಬಣ್ಣ ಬೇರೆ! ಬಿಡಿಬಿಡಿಸಿ,
ತಿಳಿತಿಳಿಸಿ ಹೇಳಿದ ಮಹಾತ್ಮ...'

~ ದ.ರಾ. ಬೇಂದ್ರೆ


ಓ ಮಹಾತ್ಮನೆ, ನಿನ್ನ ಸಾನ್ನಿಧ್ಯತೀರ್ಥದಲಿ ಮಾನವನ ಮೋಹಮದಮಾತ್ಸರ್ಯಗಳು ಮಿಂದು ಪ್ರೇಮದಿ ಪುನೀತವಾಗಿಹವು! ಸುಮುಹೂರ್ತದಲಿ ~ ಕುವೆಂಪು



ಮೇಲೊಂದು ಗರುಡ ಹಾರುತಿಹುದು
ಕೆಳಗದರ ನೆರಳು ಓಡುತಿಹುದು
* * *
ಹರಿದತ್ತ ಹರಿಯ ಚಿತ್ತ
ಈ ಧೀರ ನಡೆವನತ್ತ

~ ಪುತಿನ

'ಇನ್ನಿನಿಸು ನೀ ಮಹಾತ್ಮ ಬದುಕಬೇಕಿತ್ತು ಈಗ ಭಾರತಕಗತ್ಯವಿದೆ ನಿನ್ನ ಬಿರುಗಾಳಿಗೊಲೆವ ಹಡಗದಂತಿಹುದಾಸತ್ತು' ~ ಗೋವಿಂದ ಪೈ


ನಿನ್ನ ಹೆಸರಿಡಬಹುದು ಬೀದಿಬೀದಿಗೆ, ಸುಲಭ; ನಿನ್ನಂತೆ ಬದುಕುವುದು ದುರ್ಲಭ . ನಿನ್ನ ಹೆಸರೆತ್ತಿದರೆ, ನಿನ್ನ ಮಾತಾಡಿದರೆ ನಿನ್ನ ವೈರಿಗೆ ಕೂಡ ಲಾಭ ~ ಕೆ.ಎಸ್.ನ.





















ಗುರುವಾರ, ಅಕ್ಟೋಬರ್ 14, 2021

ಆಳಾಗ ಬಲ್ಲವನು ಆಳುವನು

 

ಆಳಾಗ ಬಲ್ಲವನು ಆಳುವನು

ಕಾಯಕವು ಉಳ್ಳನಕ| ನಾಯಕನು ಎನಿಸಿಪ್ಪ|

ಕಾಯಕವು ತೀರ್ದ ಮರುದಿನವೆ ಸುಡಗಾಡ

ನಾಯಕನು ಎನಿಪ ಸರ್ವಜ್ಞ||

ಕಾಯಕ ಎಂದರೆ ಕೆಲಸ. ಎಲ್ಲರೂ ಯಾವುದೇ ಒಂದು ಉದ್ಯೋಗವನ್ನು ಮಾಡಬೇಕು. ಆಗ ತಾನೇ ನಾಯಕನಾಗುತ್ತಾನೆ. ಇನ್ನೊಬ್ಬರನ್ನು ಬೇಡದೆ ಬದುಕಬಹುದು. ಕಾಯಕ ಇಲ್ಲದೆ ನಿರುದ್ಯೋಗಿಯಾದರೆ ಯಾವ ಪ್ರಯೋಜನಕ್ಕೂ ಬಾರನು. ಸುಡುಗಾಡಿನ ಅಂದರೆ ಶ್ಮಶಾನದ ನಾಯಕನಂತೆ ಅಪ್ರಯೋಜಕನಾಗುತ್ತಾನೆ. ನಾವು ಬದುಕಬೇಕೆಂದರೆ ಯಾವುದೇ ಒಂದು ಕಾರ್ಯವನ್ನು ಭೇದವಿಲ್ಲದೆ ನಿರ್ವಹಿಸಬೇಕು.

ಆಳಾಗ ಬಲ್ಲವನು ಆಳುವನು ಅರಸಾಗಿ

ಆಳಾಗಿ ಬಾಳಲರಿಯದವನು-ಕಡೆಯಲ್ಲಿ

ಹಾಳಾಗಿ ಹೋಹ ಸರ್ವಜ್ಞ

ಯಾವುದೇ ಕೆಲಸವನ್ನು ಒಲವು ನಲಿವಿನಿಂದ ಮಾಡಬಲ್ಲವನು ಮಾತ್ರ ಜೀವನವನ್ನು ಚೆನ್ನಾಗಿ ರೂಪಿಸಿಕೊಳ್ಳುತ್ತಾನೆ ಎಂಬುದನ್ನು ಹೇಳಲಾಗಿದೆ. ಆಳಾಗಿ ದುಡಿ ಅರಸಾಗಿ ಉಣ್ಣು ಎಂಬ ಗಾದೆ ಇದೆ. ಕಷ್ಟಪಟ್ಟು ದುಡಿದರೆ ಮಾತ್ರ ಅದಕ್ಕೆ ಸೂಕ್ತವಾದ ಪ್ರತಿಫಲ ದೊರೆಯುವುದು. ದುಡಿಮೆಯ ಪ್ರತಿಫಲದಿಂದ ಲಾಭ ಬರುತ್ತದೆ. ಕನಸಿನ ಎಲ್ಲವನ್ನೂ ಸೃಷ್ಟಿಸಿಕೊಳ್ಳಬಹುದು. ನಾಲ್ಕಾರು ಜನಕ್ಕೆ ಉದ್ಯೋಗವನ್ನೂ ಕೂಡ ನೀಡಬಹುದು. ಕಷ್ಟಪಟ್ಟು ಆಳಿನಂತೆ ದುಡಿಯಲು ಇಚ್ಚಿಸದೆ ಸೋಮಾರಿಯಾದರೆ ಕೊನೆಗೆ ಆಳಾಗಿ ಹೋಗುವನು ಎಂದಿದ್ದಾರೆ ಸರ್ವಜ್ಞ.

ಅಲಸಿಕೆಯಲಿರುವಂಗೆ| ಕಲಸಲಂಬಲಿಯಿಲ್ಲ

ಕೆಲಸಕ್ಕೆ ಅಲಸದಿರುವಂಗೆ ಬೇರಿಂದ

ಹಲಸು ಕಾತಂತೆ ಸರ್ವಜ್ಞ||

ಸೋಮಾರಿತನವನ್ನು ಸರ್ವಜ್ಞ ಇಲ್ಲಿ ವಿರೋಧಿಸಿದ್ದಾನೆ. ಸೋಮಾರಿಗಳು ಕೆಲಸಮಾಡದೆ, ಆಲಸ್ಯದಿಂದ(ಸೋಮಾರಿತನ) ಇದ್ದರೆ ತಿನ್ನಲು ಅನ್ನ ಸಿಗುವುದಿಲ್ಲ. ಯಾವುದೇ ಕೆಲಸವಾಗಲಿ ಆಲಸ್ಯ ತೋರದೆ, ಆಸಕ್ತಿ ತೋರಿದರೆ ಶ್ರೀಮಂತಿಕೆ ತಾನಾಗಿಯೇ ದೊರೆಯುತ್ತದೆ. ಅದು ಅಲಸಿನ ಮರವು ಬೇರಿನಿಂದಿಲ್ಲಾ ಅಲಸಿನ ಹಣ್ಣು ಬಿಡುತ್ತಾ ಸಂಭ್ರಮಿಸುವಂತೆ ಕ್ರಿಯಾಶೀಲವ್ಯಕ್ತಿ ಸದಾ ಆನಂದದಲ್ಲಿರುತ್ತಾನೆ.

ಉದ್ಯೋಗ ಉಳ್ಳವನ| ಹೊದ್ದುವುದು ಸಿರಿಬಂದು

ಉದ್ಯೋಗವಿಲ್ಲದಿರುವವನ ಕರದೊಳಗೆ

ಇದ್ದುದೂ ಪೋಕು ಸರ್ವಜ್ಞ||

ಉದ್ಯೋಗ ಇರುವವನು| ಬಿದ್ದಲ್ಲಿ ಬಿದ್ದಿರನು|

ಹದ್ದು ನೆವನವನು ಈಡಾಡಿ ಹಾವ ಕೊಂದೆದ್ದು

ಹೋದಂತೆ ಸರ್ವಜ್ಞ||

        ಈ ಮೇಲಿನ ಎರಡೂ ವಚನಗಳು ಉದ್ಯೋಗವನ್ನು ಕುರಿತು ತಿಳಿಸುತ್ತವೆ. ಕಾಯಕವೇ ಕೈಲಾಸವೆಂದರು ಬಸವಣ್ಣ. ಕಾಯಕವಿದ್ದರೆ ನಾಲ್ಕಾರು ಜನ ನಮ್ಮನ್ನು ಗೌರವಿಸುತ್ತಾರೆ.

ಶ್ರೀಮಂತಿಕೆಯು ತಾನಾಗಿಯೇ ಬರುತ್ತದೆ. ಇರುವ ಬಡತನವ ಕಳೆದು, ತನ್ನ ಕನಸುಗಳನ್ನು ಸಾಕಾರಗೊಳಿಸಬಹುದು. ಇಂದು ವಿದ್ಯೆಯು ಉದ್ಯೋಗ ನಿಮಿತ್ತವಾಗಿ ಸಂಘಟಿತಗೊಂಡಿದೆ. ಉತ್ತಮ ಜ್ಞಾನವಿಲ್ಲದೆಯೂ ಉದ್ಯೋಗ ಲಭಿಸದು. ಇರುವ ಉದ್ಯೋಗವೂ ಇಲ್ಲವಾಗುತ್ತದೆ. ಇರುವ ಸಂಪತ್ತನ್ನು ಸೋಮಾರಿತನದಲ್ಲಿ ಖಾಲಿ ಮಾಡುತ್ತಾ ಬಡವನಾಗುತ್ತಾನೆ, ಬಿಕ್ಷುಕನೂ ಆಗಿಬಿಡುತ್ತಾನೆ. ಉದ್ಯೋಗವನ್ನು ನಾವೇ ಸೃಷ್ಟಿಮಾಡಿಕೊಳ್ಳಬೇಕು. ಅದಕ್ಕೆ ಉತ್ತಮ ಶಿಕ್ಷಣ, ತರಬೇತಿಯೂ ಮುಖ್ಯ. ಇಂತಹ ಕ್ರಿಯಾಶೀಲರು ಎಂದಿಗೂ ಸೋಮಾರಿಗಳಾಗದೆ ಸದಾ ಯಾವುದಾದರೊಂದು ಉದ್ಯೋಗವನ್ನು ಸೃಷ್ಟಿಸಿಕೊಳ್ಳುತ್ತಾರೆ. ಸೋಮಾರಿಯು ಆಲಸ್ಯ, ನಿದ್ರೆಯಲ್ಲಿ ಕಾಲಕಳೆಯುತ್ತಾನೆ. ಕ್ರಿಯಾಶೀಲವ್ಯಕ್ತಿತ್ವವು ಯಾವುದಾದರೊಂದು ಉದ್ಯೋಗದಲ್ಲಿ ನಿರತನಾಗುತ್ತಾನೆ. ಅಂತಹ ಮನಸ್ಸನ್ನು ಸರ್ವಜ್ಞನನು ‘ಆಕಾಶದಿಂದಲೇ ಸಂಚು/ಉಪಾಯವನ್ನು ಮಾಡಿ ಭೂಮಿಯಲ್ಲಿ ಸಾಗುವ ಹಾವನ್ನು ವೇಗವಾಗಿ ಬಂದು ಹಿಡಿದು, ಕೊಂದು ಹೊತ್ತೊಯ್ಯುವಂತೆ’ ಯಾವುದೇ ಅವಕಾಶವನ್ನೂ ಬಿಡದೆ ಉಪಾಯದಿಂದ ಬಳಸಿಕೊಳ್ಳುವುದು ಕ್ರಿಯಾಶೀಲ ವ್ಯಕ್ತಿತ್ತ್ವವಾಗಿರುತ್ತದೆ.

 ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೆ ಮೇಲು

ಮೇಟಿಯಿಂ ರಾಟೆ ನಡೆದುದಲ್ಲದೆ-ದೇಶ

ದಾಟವೆ ಕೆಡುಗು ಸರ್ವಜ್ಞ

ಜೀವಿಗಳ ಹಸಿವನ್ನು ತಣಿಸುವುದಕ್ಕಾಗಿ ದವಸದಾನ್ಯಗಳನ್ನು ಬೆಳೆಯುವ ಬೇಸಾಯದ ವಿದ್ಯೆಯೇ ಮಾನವನ ಎಲ್ಲಾ ಬಗೆಯ ಕಸುಬುಗಳಿಗಿಂತಲೂ ಮೇಲು/ದೊಡ್ಡದೆಂಬುದನ್ನು ಹೇಳಲಾಗಿದೆ .

ಮೇಟಿ ವಿದ್ಯೆ ಎಂದರೆ ಬೇಸಾಯವನ್ನು ಮಾಡುವ ಕುಶಲತೆ ಮತ್ತು ಕಸುಬು. ಮೇಟಿ=ರಾಗಿ/ಬತ್ತ/ಜೋಳ ಮುಂತಾದ ಬೆಳೆಗಳನ್ನು ಒಕ್ಕಣೆ ಮಾಡುವಾಗ ಕಣದ ನಟ್ಟನಡುವೆ ನೆಡುವ ಮರದ ದಪ್ಪನೆಯ ಕಂಬ. ರಾಟೆ ಎಂದರೆ ನೂಲು ತೆಗೆಯುವ ಚರಕ/ಗಾಲಿ/ಚಕ್ರ. ಮೇಟಿಯಿಂದ  ರಾಟೆ ನಡೆಯುವುದು ಎನ್ನುವುದು ಒಂದು ನುಡಿಗಟ್ಟು. ಕೆಲಸಗಳು ಚೆನ್ನಾಗಿ ನಡೆಯುವುದು ಎಂಬ ತಿರುಳಿನಲ್ಲಿ ಬಳಕೆಯಾಗುತ್ತದೆ. ಮೇಟಿಯಿಂ ರಾಟಿ ನಡೆದುದು ಎಂದರೆ ಬೇಸಾಯದಿಂದಲೇ ದೇಶದ ಸಾಮಾಜಿಕ ಬದುಕು, ಸಂಸ್ಕೃತಿ ಮತ್ತು ನಾಗರೀಕತೆಗಳು ಉಳಿದು ಬೆಳೆದು ಬಾಳುತ್ತಿವೆ. ಬೇಸಾಯ ನಡೆಯದಿದ್ದರೆ ದೇಶದ+ಆಟವೇ=ದೇಶದ ಎಲ್ಲಾ ಬಗೆಯ ಚಟುವಟಿಕೆಗಳು  ಕೂಡ  ಕೆಡುಗು=ನಾಶವಾಗುತ್ತವೆ/ಹಾಳಾಗುತ್ತವೆ ಎಂದರ್ಥ. ಕೃಷಿಯನ್ನು ಕುರಿತು ಹೇಳುವ ಸರ್ವಜ್ಞನು ಕೃಷಿಯೇ ದೇಶಕ್ಕೆ ಮೂಲ ಎಂದು ತೀರ್ಮಾನಿಸಿರುವುದು ಸತ್ಯವೆನಿಸುತ್ತದೆ.



ಸೋಮವಾರ, ಮೇ 24, 2021

ಕಳಚಿಬಿಡು ನೋವು - ಅಂಕುರ

 ಕಳಚಿಬಿಡು ನೋವು - ಅಂಕುರ


ಪಡೆವ ಪ್ರೀತಿಗಳಂತೆ

ಕಳಚುವವು ಮಮತೆಗಳು

ಅಗಲಿಕೆಯು ಅನಿವಾರ್ಯ

ಅರ್ಥ ಮಾಡಿಕೊ ಮನವೆ




ಗೂಡು ಕಟ್ಟುವ ಹಕ್ಕಿ

ಕರುವನಾಕುವ ಪ್ರಾಣಿ

ಕಳಚುವ ಸಂಸಾರ, ತಿಳಿದುಕೊ ವಿಚಾರ

ಸೃಷ್ಟಿಗಳೆಲ್ಲಾ ನಾಶವಾಗಲೇಬೇಕು.

ಹೊಸಪ್ರೀತಿಗೆ ಮನಸು 

ಹೊಂದಿಕೊಳ್ಳಲೇಬೇಕು

ಇದೇ ನಿತ್ಯ ಸತ್ಯ ಪ್ರಕಾರ.


ಗಡಿಯಾರದೋಟಕ್ಕೆ ಅರ್ಥವೇ ಇಲ್ಲ

ಹಣದ ಹಂಬಲಕೆ ಸೂತಕವೆ ಎಲ್ಲ

ಲೋಕದಸಿವನು ಕಣ್ತೆರದು ನೋಡು

ಸತ್ತವರಿಗಿಂತ, ಬದುಕಿ ಸಾಯುವರೆ ಜಾಸ್ತಿ.

ಎನ್ನಸಿವು, ನೋವುಗಳು ಲೆಕ್ಕವಲ್ಲ.


ನೆನಪುಗಳಿಗೆ ಅರ್ಥ ಹುಡುಕದೆ,

ಇರುವ ಸತ್ಯಗಳ ಒಪ್ಪಬೇಕಿದೆ.

ಭವಿಷ್ಯವೇ ಕಾಣದ ಜಗತ್ತಿನಲ್ಲಿ,

ಕನಸುಗಳಿಗೆ ಅಲ್ಪವಿರಾಮ ನೀಡಬೇಕಿದೆ.

ನೋವುಗಳು ಏನನ್ನೂ ಸೃಷ್ಟಿಸುವುದಿಲ್ಲ,

ಈಗಾಗಲೇ ಮನೆಗಳು

ಮನಸ್ಸುಗಳು ಖಾಲಿಯಾಗುತ್ತಿವೆ.


ಎಷ್ಟು ದಿನ ಮುಷ್ಟಿ ಗಾತ್ರದಲಿ

ಮುಚ್ಚಿಡುವೆ ಮನವೆ

ನೆನ್ನೆಗೆ ಎಂದಾದರೂ ಅರ್ಥವಿದೆಯೇ!

ನಮಗಿರುವ ಶಕ್ತಿಯಲಿ

ನೋವುಗಳು ಹೊರೆ ತುಂಬಿ

ಹೊರಲೇ ಬೇಕು ನಮ್ಮ ಬದುಕಿಗಾಗಿ.

ನಾಳೆಯ ಹೊಸ ಅರ್ಥಕ್ಕಾಗಿ.

ಸೋಮವಾರ, ಮೇ 17, 2021

ಸಾವು ಮತ್ತು ಬುದ್ಧ

 ಸಾವು ಮತ್ತು ಬುದ್ಧ



ಸಾವಿಲ್ಲದ ಮನೆಯ ಸಾಸಿವೆಯ ತರಬಹುದೆ,

ಸಾವಿನುತ್ತರಕೆ ಶತಮಾನಗಳೇ ಬರಿದು.

ನೊಂದವರಿಗಷ್ಟೆ ಗೊತ್ತು ನೋವಿನ ಬೆಲೆಯು

ಭಯದಲ್ಲೇ ಬರಿದಾಗುತಿದೆ ಸಾವಿನ ನೆಲೆಯು.


ಇದ್ದವರದೊಂದು ಕೂಡಿಡುವ ಚಿಂತೆ

ಜೀವವೆಂದರೆ ಲಾಭ ತುಂಬಿಡುವ ಸಂತೆ

ಸೂತಕದ ಮನೆಯಲ್ಲಿ ದೀಪವೇ ಹೇಳುವುದು

ತಲೆಮಾರು ಕಳೆದರೂ ಅಳಿಸದ ಕಲೆಯೆಂದು


ಸಾಲು ಸಾವುಗಳಲ್ಲಿ, ಚಿತೆಯ ಬೆಂಕಿಯ ಕಥೆಯು

ಮಣ್ಣಲ್ಲಿ ಮಣ್ಣಾದ ಶೋಕ ಸ್ಮಶಾನದ ವ್ಯಥೆಯು


ನೋವೆಂದರೇನು?

ಬರಿಯ ಭ್ರಮೆಯೆ, 

ಅನುಭವದ ಮನೆಯೆ, 

ಹಾಸ್ಯ ಆನಂದಕ್ಕಾಗಿ 

ತುಡಿದ ಜೀವಗಳೆಲ್ಲಾ 

ಒಟ್ಟಿಗೆ ಅಳುವುದು, ಕಷ್ಟ ಶಿವನೆ.


ಕಳೆದ ಕಾಲದ ನೆನಪು

ನನಗೂ ನಿನಗೂ ಸಾವು ಅನಿವಾರ್ಯ.

ಸತ್ಯವನು ಮೊದಲು ತಿಳಿ

ಭ್ರಮೆಗಳನು ಕಳಚಿ ನಡೆ

ಬದುಕು ಹೋರಾಟ. 

ಸತ್ಯದಾಟದಲಿ ನಮದೊಂದು ಪಾತ್ರವಷ್ಟೆ.

- ಅಂಕುರ ೧೬.೦೫.೨೧

ಭಾನುವಾರ, ಮಾರ್ಚ್ 21, 2021

ಕವಿತೆ

 ಕವಿತೆ ...



ಚೆಲುವನ್ನೇ ಪೋಣಿಸಿ

ಬೆರಳ ಲೆಕ್ಕದಲಿ ಗುಣಿಸಿ, ಬಾಗಿಸಿ

ಅಕ್ಷರದ ದಾರಿಯಲಿ ಶಿಸ್ತಾಗಿ 

ನಿಲ್ಲಿಸಿದ ಬೆಳಕು ಕಂಬದಂತೆ.


ಕಾಲವನ್ನು ಕೃಷಿಮಾಡಿ

ಮನಸ್ಸಿನ ರೆಕ್ಕೆಗಳಿಗೆ 

ಅನುಭವಗಳ ನೆಯ್ಗೆಯಲಿ

ಹದವಿಟ್ಟ ಪಲ್ಲವಿ


ಅವರಿವರ ನೆನಪುಗಳ

ಶಾಖ ಸಮ್ಮೋಹಕೆ ಸಿಲುಕಿ

ನೇತುಬಿದ್ದ ಸಾಲುಗಳು

ಬಣ್ಣ ಬಳಿದ ಮೂಕಾಭಿನಯ


ಈಗ ಕಾಣುವಾಸೆಯ ಬಿತ್ತಿ

ಇರುವಾಸೆಗಳನೆಲ್ಲಾ ತೊರೆದು

ಅವರಿವರ ಇವರವರ ನೆಚ್ಚಿ

ತನ್ನನ್ನೇ ಮಾರಿಕೊಳ್ಳವ ಹಪಾಹಪಿ


ಏನೇ ಆಗಲಿ,


ಮನಸ್ಸಿಗೆ ಮುದವನ್ನು

ಕನಸಿಗೆ ಹದವನ್ನು

ನುಡಿ-ಬರಹಕೆ ನಾದವನ್ನು

ಸೃಷ್ಠಿ-ದೃಷ್ಠಿಯಲಿ ತರುವ ಚಾಣಚೂರ್ಣ.

- ಅಂಕುರ ೨೧ ಮಾರ್ಚ್ ೨೧

ಶುಕ್ರವಾರ, ಫೆಬ್ರವರಿ 26, 2021

ಪ್ರೇಮ ಉಪಜ್ಞೆ!

 ಪ್ರೇಮ ಉಪಜ್ಞೆ!



ಮಣ್ಣಿನ ಹಸಿ ವಾಸನೆಯಲ್ಲಿ

ನಿನ್ನ ಮನಸನ್ನು ಹರಡಿದ್ದೇನೆ

ಸ್ವಚ್ಛವಾದ ಹಳತಂತೆ ಕಳೆಯಲಿ

ನೆನ್ನೆಯ ಎಲ್ಲಾ ಮೈಲಿಗೆಯು


ಪ್ರೇಮವನ್ನು ಬಸಿದು ಈ ಮಣ್ಣಲಿ

ಮೆಚ್ಚಿನ ಗೊಂಬೆಯನು ಮಾಡು

ಆಕಾರವು, ಅಲಂಕಾರವು ಹೇಗೆ ಇರಲಿ

ನೋಟಗಳ ಕೋಣೆಯಲಿ ಬೆಳಕಾಗಲಿ


ಬಂದೇ ಬರುತ್ತೇನೆ, ಹಚ್ಚಿ ಬಿಡು ಬೆಳಕು

ಕಥೆಗಳೆಲ್ಲವೂ ಸಾವಿಗೆ ಬರುವುದಿಲ್ಲ

ಸೃಷ್ಟಿಯ ಪಥದಲ್ಲಿ ಒಂದಿಷ್ಟು ಕಾಲ

ವಿಹರಿಸೋಣ ವಿರಹಗಳ ಮರೆತು


ನೀನೂ ನಾನು ಅವಳೂ ಅವನೂ 

ಸರಳ ರೇಖೆಯ ಸುಖಗಳು

ರೆಕ್ಕೆಗಳು ಮೂಡಲಿ ಸುಕ್ಕುಗಳ ಕಳಚಿ

ಇದು ಪ್ರಕೃತಿಯ ಪ್ರೇಮ ಉಪಜ್ಞೆ!


-ಅಂಕುರ (ಫೆಬ್ರವರಿ ೨೬)

ಮಂಗಳವಾರ, ಅಕ್ಟೋಬರ್ 27, 2020

ಮನೆಗೆ ಬಂದರು ಮೇಷ್ಟ್ರು

 ಮನೆಗೆ ಬಂದರು ಮೇಷ್ಟ್ರು










ಬಿಳಿಕಚ್ಚೆಯ ಕರಿಕೋಟಿನ

ಶಾಸ್ತ್ರಿ, ಭಟ್ಟರೆಲ್ಲರೂ

ಸವಿಯನುಂಡು, ಕಿವಿಯನಿಂಡಿ

ಎಲೆ ಅಡಕೆ ಮುಡಿ ಮಲ್ಲಿಗೆಯ

ಮನೆಗೆ ಮೇಷ್ಟ್ರು ಇದ್ದರು.


ಉಳ್ಳವರ ಒಲೆಯಲ್ಲಿ

ಭೋಜನ-ಭಾಜನದ ವೇಳೆಯಲ್ಲಿ

ಜಾತಿ-ಧರ್ಮವಿಲ್ಲವೆಂದು

ಸಮಾನತೆಯ ನುಡಿದರು

ಶಾಸ್ತ್ರ, ಕಥೆ, ಕಾವ್ಯಗಳ ಬರೆದರು


ದುಡಿವ ಜನಕೆಲ್ಲಿ ಗುಡಿಯ ಚಿಂತೆ

ದುಡಿಯ ಬಡಿದಂತೆ ದುಡಿದರು

ಎಲ್ಲದಕ್ಕೂ ಹಲ್ಲು ಕಿರಿದರು

ತಲೆಮಾರುಗಳ ತಲೆ ತೂಗಿ

ಹೊಸ ವೇಷಗಳ ತೊಟ್ಟರು


ಅವರು ಬಂದರು ಜೊತೆಗೆ ತಂದರು

ಮೇಷ್ಟ್ರು ಶಾಲೆಗೆ ಎಂದರು

ಪಾಠ ಬಂದಿತು ಬೀದಿಗೆ

ಕಲಿವ ಮಕ್ಕಳು ಕಿಟಕಿ ಗಾಳಿಯ ಕಲಿತು

ಕಿಟಕಿಗಾಗಿಯೇ ದುಡಿಯುತ

ಮನೆಗೆ ಕಿಟಕಿಯಾದರು


ಊರ ಸಂತೆಯ, ಗದ್ದೆ ತೊಗರಿಯ

ಗಾಳ-ದಾಳದ, ಹಾಳು ಬಾವಿಯ

ಚೋಳು  ಚಂದಿರ, ಗೋಳು ಮಂದಿರ

ಕುಣಿವ ಕೈಗಳು ನಿಂತವು

ಹಾಡು, ಕಥೆಗಳು ದನಿಯ ಮರೆತವು


ಯಂತ್ರ ಬಂದಿತು, ಬೆವರು ನಿಂತಿತು

ತಂತ್ರದೊಳಗಿದೆ ತತ್ತ್ವವು

ತನ್ನ ಸುಖವನು ಮರೆತ ಕಲಿಕೆಯು

ಪರರ ಸುಖಕೆ ಮೈಚಾಚಿತು

ಹಗಲು ರಾತ್ರಿ ಎನ್ನದೆ ಹೊಟ್ಟೆ ಬಿರಿಯೆ ಬಾಚಿತು


ಎಲ್ಲಾ ಹೋಯಿತು, ಇಲ್ಲೇ ಹಾಯಿತು

ಮೌಲ್ಯ ಮಾರಿದೆ ಮನವನು

ತಾನು ತತ್ತ್ವ, ನೀನು ಸತ್ತ್ವ

ಹೇಳಲೋಸುಗ ಬಾಳು ಮರೆತು

ಮನೆಗೆ ಬಂದರು ಮೇಷ್ಟ್ರು

ಇದೋ...

ನಿರ್ಜೀವ ನಾಕದಿ ಸಜೀವ ಲೋಕ ಎಂದರು.


- ಅಂಕುರ

ಮಂಗಳವಾರ, ಅಕ್ಟೋಬರ್ 13, 2020

ಸಂಶೋಧನೆ ಎಂಬ ಹೊಸ ಅನುಭವಗಳ ಓದು...

ಸಂಶೋಧನೆ ಎಂಬ ಹೊಸ ಅನುಭವಗಳ ಓದು...

    ಕನ್ನಡ ಸಾಹಿತ್ಯ ಅಧ್ಯಯನಕಾರನಾದ ನನಗೆ ಸಂಶೋಧನೆ ಎಂಬುದು ಈಗ ಅರ್ಥವಾಗುತ್ತಿದೆ. ಬರಹದ ಕಲೆಗೆ ಪ್ರವೇಶ ದೊರೆಯುತ್ತಿದೆ. ಪಿಎಚ್.ಡಿ ಎಂಬುದು ಅಧ್ಯಯನದ ಫಲಿತವನ್ನು ಒಂದು ನಿರ್ದಿಷ್ಠ ವಿಷಯದ ಮೇಲೆ ಮಂಡಿಸುವ ಅಧ್ಯಯನವಾಗಲಿ, ಆಯಸ್ಸಾಗಲಿ ನಮಗೆ ಲಭ್ಯವಾಗುವ ವೇಳೆಗೆ ನಮ್ಮ ಅಕಾಡೆಮಿಕ್ ಪಿಎಚ್.ಡಿ ಮುಗಿಯಿತು.

          ನನ್ನ ತಂದೆ, ತಾಯಿ ಹಾಗೂ ಅಣ್ಣ ನನ್ನ ಓದುವಿಗಾಗಿ ಜಗತ್ತಿಗೆ ಪರಿಚಯಿಸಿದರು. ಗುಬ್ಬಿ, ತುಮಕೂರುಗಳಲ್ಲಿ ಓದನ್ನು ಮುಗಿಸಿ, 2011ರಲ್ಲಿ ಕೋಲಾರದ ಬಾಲಕರ ಕಾಲೇಜಿನಲ್ಲಿ ಓದುತ್ತಿದ್ದೆ. ನನ್ನ ಗುರುಗಳಾದ ಡಾ. ಗೋವಿಂದರಾಯರ ಸಂಶೋಧನಾ ಕಾರ್ಯವನ್ನು ಅವರ ಮಾರ್ಗದರ್ಶಕರಾದ ನೆನಪಲ್ಲಿ ಸೇರಿ ಹೋದ ವಿ. ನಾಗರಾಜ್ ಮೇಷ್ಟ್ರ ಬಳಿ ಸುಳಿದಾಡಿದ ದಿನಗಳಲ್ಲಿ ಗಮನಿಸುತ್ತಿದ್ದ ನನಗೆ ಸಂಶೋಧನಾ ಆಸಕ್ತಿ ಮೂಡಿತು. ಬೇಂದ್ರೆ ಕೃಷ್ಣಪ್ಪನವರು ಎಂ.ಎ ಓದುವ ಹಂತಕ್ಕೆ ಸ್ಪರ್ಧೆಯ ನೆಪದಲ್ಲಿ ‘ಬೇಂದ್ರೆ ಸಾಹಿತ್ಯ’ ಓದುವಿನ ಕುತೂಹಲ ಸೃಷ್ಠಿದರು. ಈ ಕುತೂಹಲದಲ್ಲಿ ನನ್ನ ಅಧ್ಯಯನ ಗಮನಿಸಿದ ಡಾ. ಪಿ ಸಂಗೀತ ಮೇಡಂ ಅವರು ಸಂಶೋಧನೆ ಮಾಡಲು ಪ್ರೇರಣೆ ನೀಡಿದರು. 2012-13ರ ಸಮಯದಲ್ಲಿ ಕೆಲವೇ ವಿದ್ವಾಂಸರು ಮಾತ್ರ ಬೇಂದ್ರೆ ಸಾಹಿತ್ಯ ಕುರಿತು ಮಾತನಾಡುತ್ತಿದ್ದರು. ಡಾ. ಜಿ. ಕೃಷ್ಣಪ್ಪ ಅವರು ಅಭಿಮಾನದ ಬೇಂದ್ರೆಯಾಗಿ ಸಾಹಿತ್ಯ ಪರಿಚಾರಿಕೆಯನ್ನು ಕರ್ನಾಟಕದಾದ್ಯಂತ ಪಸರಿಸುತ್ತಿದ್ದರೆ, ಡಾ ಕೆ.ಸಿ ಶಿವಾರೆಡ್ಡಿ ಅವರು ಬೇಂದ್ರೆ-ಕುವೆಂಪು ಅವರ ಸಾಹಿತ್ಯ ತಾತ್ವಿಕತೆಯನ್ನು ಗಂಭೀರವಾಗಿ ಚರ್ಚಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಬೇಂದ್ರೆ ಕುರಿತ ನನ್ನ ಅಧ್ಯಯನದ ಆಸಕ್ತಿಗೆ ಡಾ. ಕೆ.ಸಿ ಶಿವಾರೆಡ್ಡಿ  ಅವರನ್ನು ಮಾರ್ಗದರ್ಶಕರಾಗಿ ಆಯ್ಕೆಮಾಡಿಕೊಂಡೆನು. ಲೀಲೆ ಎಂಬಂತೆ ಕನ್ನಡ ವಿಶ್ವವಿದ್ಯಾಲಯದ ಸಂಯೋಜಿತ ಕೇಂದ್ರ ‘ಕುವೆಂಪು ಕನ್ನಡ ಅಧ್ಯಯನ ಕೇಂದ್ರ’ ಕುಪ್ಪಳಿಯ ಆಂತರಿಕ ವಿದ್ಯಾರ್ಥಿಯಾಗಿ ಆಯ್ಕೆಯಾದೆನು. ಪ್ರಯಾಣ  ಕುಪ್ಪಳಿಯ ಕಡೆಗೆ ಸಾಗಿತು.

          ಕುಪ್ಪಳಿಯಲ್ಲಿನ ಬದುಕು ನನ್ನ ಜೀವನದ ಪ್ರಮುಖ ಅಧ್ಯಾಯ. ಅಲ್ಲಿನ ಏಕಾಂತ ಬದುಕು, ಹೋಟೆಲ್ ಆಹಾರ, ಸರೋಜಮ್ಮ ಅವರ ಮಾತೃ ಸೇವೆ, ಹಿರೇಕೊಡಿಗೆಯ ನಿವಾಸ, ವಾಜ್ಹಿ ನೋರೋನ್ನ ಅವರ ಚಿಂತನೆ ಎಲ್ಲವೂ ನನಗೆ ಸಾಕಷ್ಟು ಅನುಭವಗಳ ಮೂಲಕ ಮಲೆನಾಡನ್ನು ಪರಿಚಯಿಸಿತು. ಇದೇ ಸಂದರ್ಭದಲ್ಲಿ ಪ್ರಾಧ್ಯಾಪಕರ ಹುದ್ದೆ ಕುರಿತ ನನ್ನ ಅಧ್ಯಯನದಲ್ಲಿ ಆತ್ಮೀಯ ಪ್ರವೀಣ್ ಕುಮಾರ್ ಹಾಗೂ ರತ್ನಾಕರ ಸಿ ಎಂಬ ಇಬ್ಬರ ಸ್ನೇಹ ದೊರೆಯಿತು. ಬರೀ ಸ್ನೇಹವಲ್ಲ, ನನ್ನ ಎಲ್ಲಾ ಬಲವೂ ಆದರು. ಪಿಎಚ್ ಡಿ ಯಲ್ಲಿ ಜೊತೆಯಾದ ಅಕ್ಕರೆಯ ಅರುಣಕುಮಾರಿ ಮೇಡಂ ಹಾಗೂ ಮೃಣಾಲಿನಿ ಮೇಡಂ ಇವರು ನೀಡಿದ ಅಧ್ಯಯನದ ಆತ್ಮೀಯತೆ, ಧೈರ್ಯ ಹೇಗೆ ಮರೆಯಲಿ. ಇವರ ಹಿಂದಿನ ಶಕ್ತಿಗಳಾದ ರವಿನಂದನ ಸರ್ ಹಾಗೂ ಮಹದೇವಯ್ಯ ಸರ್ ಅವರ ಪ್ರೀತಿಯೂ ಒಂದೊಂದು ಅತಿಮಧುರ.

          ಹಸಿವಿನ ಚಿಂತೆಯಲ್ಲಿ ಕುಪ್ಪಳಿಯಿಂದ ಕರಾವಳಿಗೆ ಹೋದೆ, ಆಳ್ವಾಸ್ ನಲ್ಲಿ ಮೇಷ್ಟ್ರಾದೆ. ಇಲ್ಲೆಲ್ಲಾ ಪಿಎಚ್.ಡಿ ಎಂಬುದು ಬಹು ದೊಡ್ಡ ಜವಾಬ್ದಾರಿಯಾಗಿ ಕಾಡುತ್ತಿತ್ತು. ಗುರುಗಳಾದ ಗೋವಿಂದರಾಯರು ಹಾಗೂ ಜಿ ಕೃಷ್ಣಪ್ಪನವರು ನನ್ನ ಕುಟುಂಬವಾಗಿ ನಿತ್ಯ ಎಚ್ಚರಿಸುತ್ತಿದ್ದರು. ಅಂತೂ ವಿಶ್ವವಿದ್ಯಾಲಯ ನಿಯಮಕ್ಕೆ ಅನುಗುಣವಾಗಿ ಅಧ್ಯಯನಮಾಡುತ್ತಾ ಬಂದೆ. ಕರಾವಳಿಯಿಂದ ಬೆಂಗಳೂರು ಬಂದು ಉದ್ಯೋಗ ಬಿಟ್ಟು  ಪ್ರಬಂಧ ಬರೆಹವನ್ನು ಮುಗಿಸುವ ವೇಳೆಗೆ ನೆರಳಾಗಿ ನಿಂತವರು ಆತ್ಮೀಯ ಅನಿತ ಅಕ್ಕ ಅವರು ಹಾಗೂ ಅವರ ಕುಟುಂಬ. ಒಟ್ಟಾರೆ ಅಧ್ಯಯನವೆಂಬುದು ಒಂದು ಪ್ರಯಾಣ ಎಂದು ತಿಳಿಯಿತು. ಇಷ್ಟೆಲ್ಲಾ ಆತ್ಮೀಯರು ಎಲ್ಲರ ಅಧ್ಯಯನದಲ್ಲೂ ಒಂದೊಂದು ಶಕ್ತಿಯಾಗುತ್ತಾರೆ ಎಂದು ಸದಾ ಬಯಸುತ್ತೇನೆ. ಕನ್ನಡ ವಿಶ್ವವಿದ್ಯಾಲಯ ಸೆಪ್ಟಂಬರ್ 08ರಂದು ನನಗೆ ಮೌಖಿಕ ಪರೀಕ್ಷೆ ಏರ್ಪಡಿಸಿ, ಅಧಿಸೂಚನೆ ಹೊರಡಿಸಿತು.

          ಇದರ ನಡುವೆ ಸಂಶೋಧನೆ ಎಂಬುದು ಒಬ್ಬ ಪ್ರಾಧ್ಯಾಪಕ ವೇದಿಕೆಯಲ್ಲಿ ಇದ್ದವರಿಗೆ ನಿತ್ಯ ಕಾರ್ಯವೆಂದು ನನ್ನ ಮಾರ್ಗದರ್ಶಕರಾದ ಕೆ.ಸಿ ಶಿವಾರೆಡ್ಡಿ ಅವರು, ರಹಮತ್ ತರೀಕೆರೆ ಅವರು ಹೇಳುತ್ತಲೇ ಅದೇ ದಾರಿಯಲ್ಲಿ ನಡೆಸಿದರು. ನನ್ನ ಕ್ರಿಸ್ತು ಜಯಂತಿ ಕಾಲೇಜು ನನಗೆ ನಿತ್ಯವೂ ಸಮಯ, ಸೂಕ್ತ ವ್ಯವಸ್ಥೆ ರೂಪಿಸಿರುವುದು ನಾ ಕಂಡ ಶ್ರೇಷ್ಠ ಶಿಕ್ಷಣ ಸಂಸ್ಥೆಯಲ್ಲೊಂದು. ಸಂಶೋಧಕರ ವೇದಿಕೆಯನ್ನು ರೂಪಿಸಿ ಜೊತೆಯಾದ ಗೆಳೆಯ ಕುಮಾರಸ್ವಾಮಿ ಬೆಜ್ಜಿಹಳ್ಳಿ  ಈ ವಿಚಾರದಲ್ಲಿ ಒಳ್ಳೆಯ ಆತ್ಮೀಯ.

          ನನ್ನ ಎಲ್ಲಾ ಸಂತೋಷವನ್ನು ನಿತ್ಯ ತಮ್ಮ ಸಂತೋಷವಾಗಿ ಬೆನ್ನು ತಟ್ಟುವ ಸಹೋದ್ಯೋಗಿ ಆತ್ಮೀಯರಾದ ಸರ್ವೇಶ್ ಬಂಟಹಳ್ಳಿ ಅವರು, ಚಂದ್ರಶೇಖರ್ ಅವರು, ಸೈಯದ್ ಮುಯಿನ್ ಅವರು. ಇವರಂತ ಆತ್ಮೀಯತೆ ಎಲ್ಲಾ ಅಧ್ಯಯನಕಾರರಿಗೂ ಉದ್ಯೋಗದಲ್ಲಿ ಸಿಗಬೇಕು.

           ನನ್ನ ಪಿಎಚ್ ಡಿ ಪರೀಕ್ಷೆ ಮುಗಿಯಿತು ಎಂಬ ವಿಚಾರ ತಿಳಿದ ಡಾ. ಜಿ ಕೃಷ್ಣಪ್ಪ ಅವರು ಅನಾರೋಗ್ಯದ ನಡುವೆಯೂ ನನಗೆ ಮತ್ತೊಂದು ಡಾಕ್ಟರೇಟ್ ದೊರೆಯಿತು ಎಂದು ಕುಟುಂಬ ಸಮೇತ ಖುಷಿ ಪಟ್ಟರು. ಈ ವಿಚಾರ ಪತ್ರಿಕೆಯಲ್ಲಿ ಬಂದಾಗ ನನ್ನ ವಿದ್ಯಾರ್ಥಿಗಳು, ಸ್ನೇಹಿತರು ಇದು ತಮಗೆ ದೊರೆತ ಗೌರವವೆಂದು ಆನಂದಿಸಿದರು. ಇದೆಲ್ಲವೂ ಅಧ್ಯಯನಕ್ಕಿರುವ ಶಕ್ತಿ ಹಾಗೂ ಸಾಧ್ಯತೆ.

          ಸಂಶೋಧನೆ ಎಂಬುದು ನನ್ನ ಪ್ರಕಾರ ಹೊಸ ಅಧ್ಯಯನ. ಅದೊಂದು ಅನುಭವದ ದಾರಿಯ ಸಹಪ್ರಯಾಣ. ಜೊತೆಯಲ್ಲಿ ಸದಾ ಸಾಗೋಣ ಬನ್ನಿ.





ಗುರುವಾರ, ಆಗಸ್ಟ್ 20, 2020

ಎಲ್. ಎಸ್ ಶೇಷಗಿರಿರಾವ್

 ಎಲ್. ಎಸ್ ಶೇಷಗಿರಿರಾವ್

ಕನ್ನಡ ಸಾಹಿತ್ಯಕ್ಕೆ ನೀಡಿದ ಅಮೂಲ್ಯ ಶಬ್ದಕೋಶ
ಕನ್ನಡ ಸಾಹಿತ್ಯಕ್ಕೆ ನೀಡಿದ ಅಮೂಲ್ಯ ಸಾಹಿತ್ಯ ಚರಿತ್ರೆ

 ಎಲ್. ಎಸ್ ಶೇಷಗಿರಿರಾವ್ ಅವರು

 ಎಲ್. ಎಸ್ ಶೇಷಗಿರಿರಾವ್ ಅವರ ಕುರಿತು ಮಾಹಿತಿ :

ವಿಕಿಪೀಡಿಯಾದಿಂದ ಪರಿಶೀಲಿತ ಮಾಹಿತಿ:

ಎಲ್.ಎಸ್.ಶೇಷಗಿರಿರಾವ್ (೧೯೨೫ ಫೆಬ್ರುವರಿ ೧೬ - ೨೦ ಡಿಸೆಂಬರ್ ೨೦೧೯) ಅವರು ಕನ್ನಡದ ಒಬ್ಬ ಹಿರಿಯ ಸಾಹಿತಿ, ವಿಮರ್ಶಕ ಮತ್ತು ನಿಘಂಟು ತಜ್ಞರು.

ಜೀವನ[ಬದಲಾಯಿಸಿ]

ಎಲ್.ಎಸ್.ಶೇಷಗಿರಿರಾವ್ ಅವರು ೧೯೨೫ ಫೆಬ್ರುವರಿ ೧೬ರಂದು ಬೆಂಗಳೂರಿನಲ್ಲಿ ಜನಿಸಿದರು. ಮೂಲತಃ ದೇಶಪಾಂಡೆ ಮನೆತನದವರಾದ ಇವರ ತಂದೆ, ಲಕ್ಷ್ಮೇಶ್ವರ ಸ್ವಾಮಿರಾಯರು. ಶೇಷಗಿರಿರಾಯರು, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಏ.(ಗೌರವ) ಪದವಿ ಪರೀಕ್ಷೆಯಲ್ಲಿ ಪ್ರಥಮ ತರಗತಿಯಲ್ಲಿ ಉತ್ತೀರ್ಣರಾದರು. ಎಚ್.ವಿ. ನಂಜುಂಡಯ್ಯ ಚಿನ್ನದ ಪದಕ ಪಡೆದ ಮೊದಲ ವಿದ್ಯಾರ್ಥಿ ಇವರು.ತದನಂತರ ಬೆಂಗಳೂರು ಇಂಟರಮೀಡಿಯೆಟ್ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾದರು.

ಸಾಹಿತ್ಯ ಸೇವೆ[ಬದಲಾಯಿಸಿ]

೧೯೪೮ರಲ್ಲಿ ಶೇಷಗಿರಿರಾವ್ ಅವರ ಮೊದಲ ಕಥಾಸಂಕಲನ “ ಇದು ಜೀವನ ” ಪ್ರಕಟವಾಯಿತು. ಕನ್ನಡ ಸಾರಸ್ವತಲೋಕದಲ್ಲಿ ತಮ್ಮದೆ ಒಂದು ಛಾಪನ್ನು ಸ್ಥಾಪಿಸಿರುವ ಎಲ್. ಎಸ್. ಎಸ್, ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಮಾಡಿರುವ ಕಾರ್ಯಗಳು ನಿಜಕ್ಕೂ ಶ್ಲಾಘನೀಯ. ನೂರಾರು ಚಿಕ್ಕ-ಪುಟ್ಟ ಹೊತ್ತಿಗೆಗಳನ್ನು ಅವರು ರಾಷ್ಶ್ಟೋತ್ಥಾನ ಪರಿಷತ್ ವತಿಯಿಂದ ಪ್ರಕಟಿಸಿದ್ದಾರೆ. ಇದು ಮಕ್ಕಳ ಜ್ಞಾನವರ್ಧನೆಗೆಂದು ಹಮ್ಮಿಕೊಂಡ ಕೆಲಸವಾಗಿತ್ತು. ಅದರ ಬೆಲೆ ಕೇವಲ, ೭೫ ಪೈಸೆಗಳು. ಈ ಪುಸ್ತಕಗಳು ಹಿರಿಯರಿಗೂ, ಅತ್ಯಂತ ಉಪಯುಕ್ತಮಾಹಿತಿಗಳನ್ನು ಕೊಟ್ಟಿವೆ. ತುಂಬಾ ಚೆನ್ನಾಗಿವೆ. ರಾಯರ ಸಂಪಾದನೆಯ ಚಟುವಟಿಕೆಯಲ್ಲಿ, ಬೆಂಗಳೂರು ದರ್ಶನ ಸಂಪುಟಗಳು, ಅತ್ಯಂತ ಉಪಯುಕ್ತಮಾಹಿತಿಗಳನ್ನು ಬೆಂಗಳೂರಿನ ಜನರಿಗೆ ಕೊಟ್ಟಿವೆ. ವಿಶ್ವಕೋಶದತರಹವೇ ಸಂಯೋಜಿಸಿರುವ ಈ ಬೃಹದ್ ಸಂಪುಟಗಳು, ಅತ್ಯಂತ ಶ್ರಮವಹಿಸಿ, ವಿದ್ವಾಂಸರಿಂದ ತಯಾರಿಸಲ್ಪಟ್ಟ ಮಾಹಿತಿಗಳು. ಪ್ರತಿಯೊಬ್ಬ ಬೆಂಗಳೂರಿನ ನಾಗರಿಕನ ಮನೆಯಲ್ಲೂ ಪಡಸಾಲೆಯ ಕಪಾಟಿನ ಶೋಭೆಯನ್ನು ವಿಜೃಂಭಿಸುವ ಕೃತಿಗಳಿವು.[೧]

ಪ್ರಮುಖ ಕೃತಿಗಳು[ಬದಲಾಯಿಸಿ]

ಸಣ್ಣಕಥೆಗಳ ಸಂಕಲನಗಳು[ಬದಲಾಯಿಸಿ]

ಅ) ಇದು ಜೀವನ. ಆ) ಜಂಗಮಜಾತ್ರೆಯಲ್ಲಿ. ಇ) ಮುಟ್ಟಿದ ಗುರಿ ಮತ್ತು ಇತರ ಕಥೆಗಳು. ಈ) ಮುಯ್ಯಿ.

ಸಾಹಿತ್ಯವಿಮರ್ಶೆ[ಬದಲಾಯಿಸಿ]

ಅ. ಕಾದಂಬರಿ-ಸಾಮಾನ್ಯಮನುಷ್ಯ. ಆ. ಆಲಿವರ್ ಗೋಲ್ಡ್ ಸ್ಮಿತ್, ಇ. ಮಾಸ್ತಿ ವೆಂಕಟೇಶ ಐಯ್ಯಂಗಾರ್. ಈ. ಇಂಗ್ಲೀಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ.

ವಿಮರ್ಶೆ[ಬದಲಾಯಿಸಿ]

  • ಅ) ಪಾಶ್ಚಾತ್ಯಸಾಹಿತ್ಯ ವಿಹಾರ.
  • ಆ) ಸಾಹಿತ್ಯ ವಿಶ್ಲೇಷಣೆ.
  • ಇ) ಹೊಸಗನ್ನಡ ಸಾಹಿತ್ಯ .
  • ಈ) ಫ್ರಾನ್ಸ್ ಕಾಫ್ಕಾ,
  • ಉ) ಗ್ರೀಕ್ ರಂಗಭೂಮಿ ಮತ್ತು ನಾಟಕ.
  • ಊ) ವಿಲಿಯಮ್ ಶೇಕ್ಸ್ ಪಿಯರ್,
  • ಋ) ಸಾಹಿತ್ಯ-ಬದುಕು,
  • ೠ) ಟಿ. ಪಿ. ಕೈಲಾಸಂ,
  • ಏ). ಪಾಶ್ಚಾತ್ಯ ಮತ್ತು ಭಾರತೀಯಮಹಾಕಾವ್ಯ ಪರಂಪರೆಗಳ ಮನೋಧರ್ಮ,
  • ಏ). ಮಾಸ್ತಿ : ಜೀವನ ಮತ್ತು ಸಾಹಿತ್ಯ,
  • ಐ). ಇಂಗ್ಲೀಷ್ ಸಾಹಿತ್ಯ ಚರಿತ್ರೆ,
  • ಒ). ಸಾಹಿತ್ಯದ ಕನ್ನಡಿಯಲ್ಲಿ,
  • ಓ). ಪಾಶ್ಚಾತ್ಯಸಾಹಿತ್ಯಲೋಕದಲ್ಲಿ,
  • ಔ). ಎಲ್. ಎಸ್. ಎಸ್. ಕಂಡ ತ. ರಾ. ಸು.
  • ಅಂ.) ಮಹಾಭಾರತ( ನಾಲ್ಕು ಸಂಪುಟಗಳು).

ನಾಟಕಗಳು[ಬದಲಾಯಿಸಿ]

ಅ) ಆಕಾಂಕ್ಷೆ ಮತ್ತು ಆಸ್ತಿ. ಆ) ಜೀವನ ಚರಿತ್ರೆ ಇ) ಸಾರ್ಥಕ ಸುಬೋಧ, ಈ) ಎಂ. ವಿಶ್ವೇಶ್ವರಯ್ಯ,

ನಿಘಂಟುಗಳು[ಬದಲಾಯಿಸಿ]

  • ಅ) ಐ.ಬಿ.ಎಚ್. ಕನ್ನಡ- ಕನ್ನಡ-ಇಂಗ್ಲೀಷ್ ನಿಘಂಟು,
  • ಆ). ಐ.ಬಿ.ಎಚ್ ಇಂಗ್ಲೀಷ್-ಕನ್ನಡ ನಿಘಂಟು,
  • ಇ). ಐ. ಬಿ. ಎಚ್ ಕನ್ನಡ -ಕನ್ನಡ ನಿಘಂಟು,
  • ಈ) ಸುಭಾಸ್ ಇಂಗ್ಲೀಷ್-ಇಂಗ್ಲೀಷ್-ಕನ್ನಡ ನಿಘಂಟು,
  • ಉ) ಸುಭಾಶ್ ವಿದ್ಯಾರ್ಥಿ ಮಿತ್ರ ಇಂಗ್ಲೀಷ್-ಕನ್ನಡ್ ನಿಘಂಟು,
  • ಊ) ಸುಲಭ ಇಂಗ್ಲೀಷ್ ( ಏನ್ಗ್ಲಿಶ್ ಮದೆ ಎಅಸ್ಯ್.)

ಇತರೆ[ಬದಲಾಯಿಸಿ]

  • ಅ) ಮಕ್ಕಳ ಸಾಹಿತ್ಯ- ೯ ಕೃತಿಗಳು,
  • ಆ) ಮಕ್ಕಳಿಗಾಗಿ-೪ ಕೃತಿಗಳು.
  • ಇ) ಇತರ-೯
  • ಈ) ಅನುವಾದಿತ-೪,
  • ಉ) ಸಂಪಾದಿತ-೯ ಕೃತಿಗಳು ಹಾಗೂ
  • ಊ) ಇಂಗ್ಲೀಷ್ ನಲ್ಲಿ -ಮೂಲ ಅನುವಾದಿತ-ಸಂಪಾದಿತ- ೩೧ ಕೃತಿಗಳು.[೨]

ಪ್ರಶಸ್ತಿ, ಪುರಸ್ಕಾರಗಳು[ಬದಲಾಯಿಸಿ]

  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
  • ಸಾಹಿತ್ಯಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ.
  • ವರ್ಧಮಾನ ಪ್ರಶಸ್ತಿ.
  • ಡಾ. ಅ.ನ.ಕೃ. ಪ್ರಶಸ್ತಿ.
  • ಬಿ.ಎಮ್.ಶ್ರೀ ಪ್ರಶಸ್ತಿ.
  • ಬಿ.ಎಮ್.ಇನಾಮದಾರ ಪ್ರಶಸ್ತಿ.
  • ಕಾವ್ಯಾನಂದ ಪ್ರಶಸ್ತಿ.
  • ದೇವರಾಜ ಬಹಾದ್ದೂರ ಪ್ರಶಸ್ತಿ.
  • ಮಾಸ್ತಿ ಪ್ರಶಸ್ತಿ.
  • ೨೦೦೭ ರ ಕರ್ನಾಟಕ ಸಾಹಿತ್ಯ ಸಮ್ಮೆಲನದ ಅದ್ಯಕ್ಶರಾಗಿದ್ದರು (ಉಡುಪಿ)

ನಿಧನ[ಬದಲಾಯಿಸಿ]

೨೦ಡಿಸೆಂಬರ್೨೦೧೯ರಂದು ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು[೩][೪]