ಈ ಬ್ಲಾಗ್ ಅನ್ನು ಹುಡುಕಿ

ಗುರುವಾರ, ಮೇ 18, 2023

ಪ್ರೇರಣ - ರಮಾಮಣಿಯಾದ ಕಥೆ

 ಪ್ರೇರಣ - ರಮಾಮಣಿಯಾದ ಕಥೆ

 


ಮಲೆನಾಡಿನ ಚೆಲುವೆ, ಬೆಂಗಳೂರಿನ ಗೊಂಬೆಯು ಸಿನಿಮಾ ನಟಿಯಾಗುವುದು ಸಾಮಾನ್ಯ ವಿಚಾರವೇನಲ್ಲ. ಪ್ರೇರಣಾ ಈಗ ಬೆಳೆದು ದೊಡ್ಡವಳಾಗಿ ಓದುಗರೇ ನಿರ್ಮಿಸಿದ ಕನ್ನಡದ ಮೊದಲ ಸಿನಿಮಾ ಡೇರ್ ಡೆವಿಲ್ ಮುಸ್ತಾಫ ಸಿನಿಮಾದಲ್ಲಿ ನಾಯಕಿಯಾಗಿದೆ. ಕನ್ನಡ ನಾಡಿಗೆ ಕುತೂಹಲ ಭರಿಸುವಷ್ಟು ಡಿಡಿಎಂ ತಂಡವು ಸೋಸಿಯಲ್ ಮೀಡಿಯಾವನ್ನು ಬಳಸಿಕೊಂಡಿದೆ. ಹಂತ ಹಂತವಾಗಿ ಜನರನ್ನು ತಲುಪಿದ್ದು ಶ್ರಮದಿಂದಲೇ ಆಗಿದೆ. ಅಭಿಮಾನವನ್ನು ಬಂಡವಾಳಮಾಡಿಕೊಂಡು ಮುಂದೆ ಬಂದಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ತೇಜಸ್ವಿ ಎಂದರೆ ವಿಭಿನ್ನ ಹಾಗೂ ಸೃಜನಶೀಲ ಪ್ರತಿಭೆಯ ಸ್ಥಾನವಿದೆ. ಸಾಮಾನ್ಯ ಓದುಗರಿಂದ, ಸಾಪ್ಟ್ವೇರ್ ಕ್ಷೇತ್ರದ ತನಕ ಓದುಗರನ್ನು ತುಂಬಿಕೊಂಡಿರುವ ತೇಜಸ್ವಿ ಈ ಮಕ್ಕಳ ವಿಚಿತ್ರ ಓದು ಕಾರ್ಯಗಳನ್ನು ತೇಜಸ್ವಿ ನೋಡಬೇಕಿತ್ತು. ಮೂರು ವರ್ಷಗಳ ಹಿಂದೆ, ಸಿನಿಮಾ ಕ್ಷೇತ್ರ ಕುರಿತು ಕನಸು ಕಾಣುತ್ತಿದ್ದ ಹೊಸ ಪ್ರತಿಭೆಗಳು, ಅವಕಾಶ ಸಿಗದ ಹಳೆಯ ಪ್ರತಿಭೆಗಳು ಒಟ್ಟಿಗೆ ಸೇರಿ ಪ್ರಾರಂಭಿಸಿದ ಚಿಕ್ಕ ಕಥೆ ಇದು. ಪ್ರಾರಂಭವೇನೋ ಚಿಕ್ಕ ಕಥೆಯಾಗಿ ಬೆಳೆದು ದೊಡ್ಡ ಆಲದಮರವಾಗಿ ನಿಂತ ಈ ಪ್ರಯಾಣದಲ್ಲಿ ಅದೆಷ್ಟು ಬಿಳಿಲುಗಳ ಶ್ರಮವಿದೆಯೋ ಆ ತಂಡಕ್ಕೆ ಗೊತ್ತು. ಅಂತು ಕಾಲ ಕಾಲಕ್ಕೆ ಟೀಶರ್ಟ್ ಮಾರಿ ಹಣ ಹೊಂದಿಸುವುದು, ಬ್ಯಾಡ್ಜ್ ಮಾರಾಟ ಇವೆಲ್ಲವೂ ಡಿಡಿಎಂ ತಂಡದ ಶ್ರಮ. ೨೦೨೧ರಲ್ಲಿ ರಾಜ್‌ಕುಮಾರ್ ಕುರಿತು ನಿನ್ನಂರ‍್ಯಾರು ಇಲ್ವಲ್ಲೋ ಹಾಡು ಅನಿಮೇಶನ್ ಮೂಲಕ ಕ್ರಾಂತಿಮಾಡಿತು. ಎರಡು ವರ್ಷಗಳ ಹಿಂದೆ ಮಕ್ಕಳಿಗೆ ಪೂಚಂತೆ ಪ್ಯಾರಾಗ್ರಾಫ್‌ನಂತಹ ಸ್ಪರ್ಧೆಗಳು, ಓದಿನ ಸ್ಪರ್ಧೆಗಳನ್ನೆಲ್ಲಾ ಏರ್ಪಡಿಸುತ್ತಾ, ತನ್ನ ಸಿನಿಮಾ ಯಾನವನ್ನು ಯುವಕರಲ್ಲಿ ಭಿತ್ತಿದರು. ಇಂತಹ ಯುವಕರೇ ಸೇರಿ ಇಷ್ಟು ಸುಲಲಿತ ಸಿನಿಮಾಯಾನವನ್ನು ಮಾಡಿದ್ದು ಈ ಶತಮಾನದ ವಿಶೇಷ. ಶಂಕರ್‌ನಾಗ್‌ನತಹ ನಿರ್ದೇಶಕರ ಕನಸು ಈಡೇರಿದಂತೆ ಎನ್ನಬಹುದು. ಇಂತಹ ಕಾರ್ಯಕ್ಕೆ ಯುವಕರ ತಂಡವಂತೂ ತುಂಬಾ ಸಾಥ್ ಕೊಡುತ್ತಿದೆ. ಉನ್ಮಾದ ಹೆಚ್ಚಿಸುವ ಕೆಟ್ಟ ಸಿನಿಮಾವನ್ನು ಬೆಳೆಸುವ ಸಂಸ್ಕೃತಿಯನ್ನು ಮುರಿದು ಮಲೆನಾಡ ಪರಿಸರದಲ್ಲಿ ಮಕ್ಕಳ ಮನೋಲೋಕವನ್ನು ಚಿತ್ರಿಸಿದ ತೇಜಸ್ವಿ ಕಥೆಯನ್ನು ಸ್ವಯಂ ಪ್ರೇರಿತರಾಗಿಯೇ ಇಷ್ಟಪಡಬೇಕಿದೆ. ಸಿನಿಮಾದ ರಮಾಮಣಿ ಈಗ ಕರುನಾಡು, ವಿಶ್ವವೇ ಗಮನಿಸುವ ಪ್ರತಿಭೆ. ಎಲ್ಲಾ ಯುವ ಪ್ರತಿಭೆಗಳಿಗೆ ಶುಭವಾಗಲಿ. ಎಲ್ಲರೂ ತಮ್ಮ ತಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡೋಣ. ನೋಡಿಸೋಣ. ಕನ್ನಡ ಸೃಜನಶೀಲರ ಶ್ರಮಕ್ಕೆ ಗೌರವ ನೀಡುವುದಕ್ಕೆ ಇದೇ ಸೂಕ್ತ ಸಮಯ.

 


ಪ್ರೇರಣ ನನಗೆ ಹೇಗೆ ಗೊತ್ತು ಅಂದ್ರೆ ಈ ಕಿರು ಕತೆ ಓದಿ...

ನಾನು ತುಂಬಾ ಹತ್ತಿರದಿಂದ ಮನೆಯ ಮಗುವಾಗಿ ನೋಡಿದ ಪ್ರತಿಭೆ ಈಕೆ. ೨೦೧೪-೧೫ರ ಸಂದರ್ಭದಲ್ಲಿ ಮಲೆನಾಡಿನಲ್ಲಿ ಸಂಶೋಧನೆಯಲ್ಲಿ ತೊಡಗಿದ್ದೆ. ಮನೆಯಿಲ್ಲದೆ ನೂರು ರೂಪಾಯಿಗೆ ಒಂದು ಚಿಕ್ಕದೊಂದು ಕೊಠಡಿಯಲ್ಲಿ ಬಾಡಿಗೆ ಇದ್ದ ಸಮಯ. ಒಂದು ದಿನ ಸರೋಜಮ್ಮ ಅವರು ಮನೆಗೆ ಬಂದು ನಿಮ್ಮ ಬಗ್ಗೆ ತಿಳ್ಕೊಂಡಿದಿವಿ ಮನೆಗೆ ಬಾರಪ್ಪ ಅಂತ ಔತಣ ಕೊಟ್ಟು ಕರೆದಾಗ ಹೋಗಲೇಬೇಕಾಯಿತು. ನಾನೇ ಅಲೆಮಾರಿ, ನನ್ನ ಜೊತೆಯಲ್ಲಿ ನನ್ನ ಸ್ನೇಹಿತ ಪ್ರವೀಣ್ ಅವರು ಕೂಡ ಜೊತೆಯಲ್ಲಿ ಓದಲು ಬಂದಿದ್ರು. ಇಬ್ಬರು ಅವರ ಮನೆಗೆ ಹೋದೆವು. ಸರೋಜಮ್ಮ ಅವರ ಬಗ್ಗೆ ನಾಲ್ಕು ಮಾತು ಇಲ್ಲಿ ಹೇಳಲೇಬೇಕು. ಅವರ ಬಗ್ಗೆ ಪ್ರತ್ಯೇಕ ಒಂದು ಪ್ರಬಂಧವೇ ಬರೆದಿರುವೆ. ಅವರು ಒಂಥರಾ ಏಕಾಂಗಿ ಹೋರಾಟಗಾರ್ತಿ, ಬಸವಣ್ಣನ ಕಾಯಕವೇ ಕೈಲಾಸತತ್ವದೊಟ್ಟಿಗೆ ಬದುಕುತ್ತಿರುವ ಸ್ವಾಭಿಮಾನಿ. ನಮ್ಮಂತವರನ್ನು ತಿಳಿದು ಆಶ್ರಯ ನೀಡಿ, ಅಮ್ಮನಾದ ತೆರೆದಮನ.

ಇಂಗ್ಲೆಂಡ್ನಲ್ಲಿ ತನ್ನದೇ ಕಂಪನಿ ನಡೆಸುತ್ತಿರುವ ರಾಜೇಶ್ ಅವರು ಹಾಗೂ ಸರೋಜಮ್ಮ ಅಂದು ಅಷ್ಟು ಪ್ರೀತಿ ತೋರಿ, ನಾವು ನಾಲ್ಕು ತಿಂಗಳು ಇಂಗ್ಲೆಂಡ್ಗೆ ಹೋಗ್ತಾ ಇದ್ದೀವಿ, ನೀವು ಇದೆ ಮನೆಯಲ್ಲಿ ಬಂದು ಇದ್ದುಬಿಡಿ. ದೊಡ್ಡಮನೆ ಬೀಗ ಹಾಕಬಾರದು ಎಂದು ಹೇಳಿದಾಗ ಏನೂ ತಿಳಿಯದೆ ಒಪ್ಪಿಕೊಂಡೆ. ಆದರೆ ಅವರು ಹೋಗಿಬಂದರೂ, ಅದೇ ಪ್ರೀತಿಯಲ್ಲಿ ಆ ಮನೆಯಲ್ಲಿ ಆಶ್ರಯಕೊಟ್ಟು, ಬದುಕೆಂದರೆ ಏನು ಎಂಬುದನ್ನು ಕಣ್ಣೆದುರು ಕಾಣಿಸಿದವರು. ಮಲೆನಾಡು ಪರಿಚಯಿಸಿದವರು. ಕೂರಿಸಿ ಅನ್ನ ಕೊಟ್ಟವರು. ಕುವೆಂಪು ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯವನ್ನು ಅದೇ ಮನೆಯಲ್ಲಿ ನಿತ್ಯವೂ ಓದಿದ್ದು ನನ್ನ ಪುಣ್ಯ. ಹೀಗೆ ಆ ಮನೆಯ ಸದಸ್ಯನಾದ ನನಗೆ ಅವರ ಮನೆಯವರೆಲ್ಲಾ ಸ್ವಂತ ತಮ್ಮನಂತೆ ಕಂಡರು. ರಾಜೇಶಣ್ಣ ಹಾಗೂ ರಮ್ಯಕ್ಕ ಎಂಬ ಅಣ್ಣತಂಗಿ ಎಂದರೆ ಗೌರವ ಹಾಗೂ ಹೆಮ್ಮೆ ಅನಿಸುತ್ತದೆ. ರಾಜೇಶಣ್ಣ ಇಂಗ್ಲೆಂಡ್, ರಮ್ಯಕ್ಕ ಬೆಂಗಳೂರು. ಈ ರಮ್ಯಕ್ಕನ ಮಗಳೇ ಪ್ರೇರಣ. ರಜೆ ಬಂದರೆ ಸಾಕು, ಈ ರಮಾಮಣಿ ಅಂದ್ರೆ ಪ್ರೇರಣ ಅಲಿಯಾಸ್ ಪ್ರೆಟ್ಟಿ ಮಲೆನಾಡಿಗೆ ಬರುತ್ತಿದ್ದ ಪುಟ್ಟ ಹುಡುಗಿ. ಮುದ್ದಾಗಿ ಮಾತಾಡಿಸುವ, ಅಜ್ಜಿ ಹಿಂದೆ ತಿರುಗಾಡುವ, ಓದುವ, ಚಿತ್ರ ಬರೆಯುವ ಜಾಣ ಮಗು ಅದು. ಟ್ಯಾಬ್ ಕೈಲಿದ್ದರೆ ಸಾಕು ಟಾಕಿಂಗ್ ಟಾಮ್ - ಕ್ಯಾಟ್ ಗೇಮ್ ನಲ್ಲಿ ಬೆಕ್ಕಿಗೆ ಸ್ನಾನ, ನಿದ್ರೆ, ದಿನದ ಎಲ್ಲಾ ಕೆಲಸವನ್ನು ಮಾಡಿಸುತ್ತಾ ಆಟದಲ್ಲಿ ಮುಳುಗಿಹೋಗುತ್ತಿತ್ತು. ಚಿಕ್ಕ ವಯಸ್ಸಿಗೆ ಸದ್ಗುಣಗಳು ತಂದೆಯಿಂದ ಧ್ಯಾನ, ತಾಯಿಯಿಂದ ಮೌನ ಮತ್ತು ಮಾತು ಕಲಿತು ಬೆಳೆದ ಕಿನ್ನರಿ ಈಕೆ. ರಜೆಯನ್ನು ಮಲೆನಾಡಿನಲ್ಲಿ ಕಳೆಯುತ್ತಿದ್ದ ಪ್ರೇರಣ ಭರತನಾಟ್ಯ, ಯೋಗ ಹೀಗೆ ಪ್ರತಿಭೆಯನ್ನು ತಾನೇ ಅರ್ಥಪೂರ್ಣವಾಗಿ ನಿರ್ಮಿಸಿಕೊಂಡ ಮಗು. ಈಗ ತನ್ನ ಪ್ರತಿಭೆಯ ಮೂಲಕವೇ ನಟಿಯಾಗುವ ಎಲ್ಲಾ ಲಕ್ಷಣವನ್ನೂ ಹೊಂದಿರುವುದು ನಮಗೆಲ್ಲಾ ಹರ್ಷನೀಯ. 
 


https://in.bookmyshow.com/bengaluru/movies/daredevil-musthafa/ET00358461

 


     

ಗುರುವಾರ, ಮೇ 11, 2023

ಮೆಟ್ರೋ ಕಥನ - ೪೪

ಮೆಟ್ರೋ ಕಥನ - ೪೪

ಉದ್ಯೋಗ ಅರಸಿ ಹೊರಟ ಅಂದನಿಗೆ ರಸ್ತೆಯಲ್ಲಿ ಬರುವಾಗ ಚಿಕ್ಕ ಅಪಘಾತವಾಯಿತು. ಬಹಳ ನೊಂದನು. ಬಡತನವಿದ್ದಾಗಲೇ ಇಂತಹ ಕಷ್ಟಬರಬೇಕಾ ಎಂದು ಆಸ್ಪತ್ರೆ ಸೇರಿದನು. ಆ ದಿನ ಆಸ್ಪತ್ರೆಯಲ್ಲಿ ಎಲ್ಲರೂ ಒತ್ತಡದಲ್ಲಿಯೇ ಓಡಾಡುತ್ತಿದ್ದರು. ಹಾಸಿಗೆಯಲ್ಲಿಯೇ ಗಮನಿಸಿದ ಅಂದನು ನರ್ಸ್ ಅವರನ್ನು ವಿಚಾರಿಸಿದನು. ಸಾಫ್ಟ್ವೇರ್ ಸಮಸ್ಯೆಯಿಂದ ಯಾವ ಕೆಲಸಗಳು ಆಗುತ್ತಿಲ್ಲ.  ಇಂಜಕ್ಷನ್ ಇಂದ ಅಪರೇಶನ್ ವರೆಗೂ ಇಡೀ ಆಸ್ಪತ್ರೆಯೇ ತಂತ್ರಜ್ಞಾನದಿಂದ ಕೂಡಿದೆ ಎಂದು ನೊಂದರು. ನಾನು ಸಾಪ್ಟ್ವೇರ್ ತಜ್ಞ, ಒಂದು ಅವಕಾಶ ಕೊಡಿ ಸರಿಪಡಿಸಲು ಪ್ರಯತ್ನಿಸುತ್ತೇನೆ ಎಂದನು. ನರ್ಸ್ ಆಶ್ಚರ್ಯ ಪಟ್ಟರಾದರೂ ನಂಬಿದರು. ಕ್ಷಣಾರ್ಧದಲ್ಲಿಯೇ ವೈದ್ಯರಿಗೆ ತಿಳಿಸಿದರು. ವ್ಯವಸ್ಥೆಮಾಡಲಾಯಿತು. ಹತ್ತು ನಿಮಿಷ ನೋವನ್ನು ಮರೆತು ವೆಬ್ ಲೋಕದಲ್ಲಿ ಮುಳುಗಿದನು, ಎಲ್ಲವೂ ಸರಿಹೋಯಿತು. ವೈದ್ಯರ ತಂಡಕ್ಕೆ ಬಹಳ ಆನಂದವಾಯಿತು. ಉಡುಗೊರೆಯಾಗಿ ಉಚಿತ ಚಿಕಿತ್ಸೆ ನೀಡುತ್ತೇವೆ ಎಂದರು. ಅಂದನು ನಿಧಾನವಾಗಿ ಹೇಳಿದನು ಉಚಿತವೆಂಬುದು ಬೇಡ, ಉದ್ಯೋಗ ನೀಡಿ ಎಂದನು. ಆ ಕ್ಷಣದಲ್ಲಿಯೇ ಒಂದು ಸಭೆ ನಡೆಸಿ ತೀರ್ಮಾನಿಸಿ, ಲಕ್ಷಕ್ಕೂ ಅಧಿಕ ಸಂಬಳದ ಇಂಜಿನಿಯರ್ ಪದವಿ ನೀಡಿದರು.

ಆಸೆಯೇ ದುಃಖಕ್ಕೆ ಮೂಲವೆಂದನು ಬುದ್ಧ. ನಂಬಿಕೆಯೇ ದುಃಖ ನಿವಾರಕನೆಂದ ಅಂದ.

ಬುಧವಾರ, ಮೇ 10, 2023

ಮೆಟ್ರೋ ಕಥನ - ೪೩

 

ಮೆಟ್ರೋ ಕಥನ - ೪೩

ಮಾವು ಹಣ್ಣಾಗಿತ್ತು. ಹಕ್ಕಿಗೆ ಹಸಿವಾಗಿತ್ತು. ಕಾಲವೇ ಕೂಡಿಸಿದಂತೆ ಹಾರಿಬಂದು ಹಣ್ಣು ಕಂಡು ಖುಷಿಯಿಂದ ಹಾರಾಡಿತು. ಮೆಲ್ಲನೆ ಕುಕ್ಕಿ, ಕುಕ್ಕಿ ಸವಿಯಿತು. ಮಧ್ಯಾಹ್ನವಾಯಿತು. ದಾರಿಹೋಕ ಬಿಸಿಲ ಬೇಗೆಗೆ ಧಣಿವಾಗಿ ಮರದ ಬಳಿ ಬಂದನು. ಕುಳಿತು ಕತ್ತೆತ್ತಿ ನೋಡಿದರೆ ಹಣ್ಣಾಗಿ ಹಕ್ಕಿಮುಕ್ಕಿದ ಹಣ್ಣು ಕಂಡು ಖುಷಿಯಾದ. ಅರೆತಿಂದ ಹಣ್ಣು ಬಲುಸವಿಯೆಂದು ಕಿತ್ತು ತಿಂದನು. ಮಾವಿನಗಿಡ ಇಬ್ಬರಿಗೆ ತೃಪ್ತಿ ನೀಡಿ ಖುಷಿಯಾಯಿತು. 


ಹಣಕ್ಕಾಗಿ ಆತುರ ಪಟ್ಟು ಕಾಯಿಗಳ ಕಿತ್ತು, ಔಷಧಿಯಲ್ಲಿ ಹಣ್ಣುಮಾಡಿ ಲೋಕ ರಂಜಿಸುವ ಕಾಲದಲ್ಲಿ ಮೇಲಿನ ಕಥೆಯೊಂದು ಚಿತ್ರವಾಗಿ ನಗರದಲ್ಲಿ ನೇತಾಡುತ್ತಿತ್ತು.


- ಅಂಕುರ

ಮಂಗಳವಾರ, ಮೇ 9, 2023

ಮೆಟ್ರೋ ಕಥನ - ೪೨

ಮೆಟ್ರೋ ಕಥನ - ೪೨

ಮಿಂಚು ಹುಳವೊಂದು ಮಳೆಯ ತಂಗಾಳಿಯಲ್ಲಿ ಹಾರುತ್ತಿತ್ತು. ಮಿಂಚುಳ್ಳಿ ಈ ಹುಳವನ್ನು ಕಂಡು ಕ್ಷಣಾರ್ಧದಲ್ಲಿಯೇ ಹಿಡಿದು ತಂದು ತನ್ನ ಗೂಡಿಗೆ ಇಟ್ಟಿತು. ಅಜ್ಜಿಯ ಈ ಕತೆಯು ಅಂದನ ಕಣ್ಣಲ್ಲಿ ವಾಸ್ತವದ ಸುಂದರ ಹೆಣ್ಣುಗಳ ಕತೆ ಎನಿಸಿತು.


ವಿಶೇಷವೆಂದರೆ ರಾತ್ರಿ ಮಿಂಚುವ ಹುಳ, ಗರಿ ಬಿಚ್ಚಿ ಕುಣಿವ ನವಿಲು ಹೆಣ್ಣಲ್ಲ ಇವು, ಗಂಡು ಜಾತಿ ಎಂಬುದನ್ನು ನೆನೆದು ಸುಮ್ಮನೆ ನಕ್ಕನು.


- ಅಂಕುರ

ಸೋಮವಾರ, ಮೇ 8, 2023

ಮೆಟ್ರೋ ಕಥನ - ೪೧

 ಮೆಟ್ರೋ ಕಥನ - ೪೧


ಸುಖವಾಗಿ ನಿದ್ರಿಸುವುದು ಹೇಗೆ ಎಂಬ ಪ್ರಶ್ನೆಗೆ ಸಾಧು ಹೀಗೆ ಉತ್ತರಿಸಿದರು. ಮಲಗುವ ಮುನ್ನ ಮೊದಲು ಶಾಂತನಾಗು. ಸಾಧ್ಯ ಆದರೆ ಎರಡು ಪುಟ ಇಷ್ಟವಾದ ಅಕ್ಷರಗಳನ್ನು ಓದು. ಇಲ್ಲವೆ, ಮಧುರವಾದ ಸಂಗೀತವನ್ನು ಹತ್ತು ನಿಮಿಷ ಕೇಳು, ಇಲ್ಲವೆ, ನಿನ್ನ ಬದುಕಿನ ಯಶಸ್ವಿ ಕ್ಷಣವೊಂದನ್ನು ನೆನೆ. ನಾಳೆ ತಿಳಿದಿಲ್ಲವೆಂದು ಭಾವಿಸು. ಇಲ್ಲಿಯ ತನಕ ನೆಡೆದದ್ದು ಮುಕ್ತಾಯವೆಂದು ಅರಿ. ಇಷ್ಟು ನಿನ್ನದಾದರೆ ನಿದ್ರೆಯೇನು... ಸಾವನ್ನು ಕೂಡ ನೆಮ್ಮದಿಯಾಗಿ ಪಡೆಯಬಹುದು.


ಸಾಧುವಿನ ನುಡಿಯನ್ನು ಕೇಳಿ ಆನಂದವಾಯಿತು.


- ಅಂಕುರ

ಬುಧವಾರ, ಅಕ್ಟೋಬರ್ 26, 2022

ವಿಶ್ವ ಕವಿ

 















ವಿಶ್ವ ಕವಿ

ಎಣೆದ ಬಲೆಯೇ

ಸಾವಿನ ಸೆಲೆಯು

ವಿಜ್ಞಾನ ಹೇಳುತ್ತಿತ್ತು.

ಬಲೆಯನ್ನು ಬಲಿಸದೇ

ಒಲಿಸಿಕೊಳ್ಳುವ ಕಲೆಯ

ಕಾವ್ಯ ಹಾಡುತ್ತಿತ್ತು.


ನೆಲದ ಕಥೆಯನು ನೆನಸಿ

ಹೊರಲೋಕದ ಬೆಳಕನು ಬೆರಸಿ

ಮಣ್ಣಿನ ಮೂರ್ತಿಯನು

ಮಿದ್ದು, ತನ್ನ ನೋವನು ಬರೆದ

ಕವಿಗೆ ಕಾವ್ಯವೆಲ್ಲವೂ ಗೀತ


ಲೋಕದ ನೋವು, ತನಗೆ ಸುತ್ತಿದೆ

ಎಳೆಎಳೆಯನು ಜೀವತಂತಾಗಿ ಹಾಡುವೆ.

ನಾನು ಕವಿಯು, ಬೇಂದ್ರೆ ಬರಿ ಮಾಸ್ತರ

ಬದುಕಿದನು ಕವಿಯು ಅನಂತಕಾಲ


ಬೆಳಕಿನ ದಿನದಂದೇ, 

ಬೆಳಕಾಗಿ ಉಳಿದವಗೆ 

ಸಾವು ನಿರ್ಭಯ ವ್ಯಾಖ್ಯಾನ

ಉಳಿವು ಒಲವಣತೆಯ 

ಜೀವ ಸಖ್ಯತಾಣ.


- ಅಂಕುರ

ಮಂಗಳವಾರ, ಅಕ್ಟೋಬರ್ 25, 2022

ನೀರೋನೋ ರಾಜ್ಯದಲಿ...

 ನೀರೋನೋ ರಾಜ್ಯದಲ್ಲಿ...














ನೀರೋನೋ ರಾಜ್ಯದಲಿ... 

ದೇಹ ಸುಡಲಿಕ್ಕೆ 

ಹಲವು ಕಾರಣಗಳುಂಟು!

ಸುಡುವ ಬೇಗುದಿಗೆ

ನಮ್ಮ ಪರಮಭಕ್ತಿ ಇಹುದು.

'ಇಲ್ಲ'ವೆಂಬುದೇ ನಮ್ಮ 

ದಾಸ್ಯದಾಕೃತಿಯ ಚರಿತೆ.


ಹಣ ಇದ್ದವರ, ಅಧಿಕಾರವುಳ್ಳವರ,

ಒಳಮಾರ್ಗದ ಏಡಿ ಕೊಂಡಿಗಳ,

ಯೌವನದ ಹಸಿದಾವರೆಯ,

ಭೂಮಾಲಿಕರ,  ವಿಷಯ ಸಾಧಕರ, 

ವೇಷನಾದಕರ, ನೆತ್ತರಿನ ದಳ್ಳುರಿಯ,

ವಿದ್ಯೆಯ ಕುಶಲ ಜಾತರ ಈ ಎಲ್ಲರ

ಜವಾಬ್ದಾರಿ ಪೀಠತೋಟದಿ

ಬೆಳೆದ ಮಧುವಣ್ಣಿನ ರಸವನೀರಲು

ಕುಳಿತಿಹರು ಇವರೆಲ್ಲಾ ಒಟ್ಟೊಟ್ಟಿಗೆ...

ಅಂದು ರೋಮ್ ನಲ್ಲಿ

ನೀರೋ ಆಜ್ಞೆಮಾಡಿದನು.

ಎಳೆದು ತನ್ನಿ ಖೈದಿಗಳ 

ಸುಡಲಿಕ್ಕೆ ಸೌದಿಲ್ಲ

ನಮಗೆ ಬೆಳಕು ಬೇಕೀಗ...

ಇಂದು ನಮ್ಮಲ್ಲಿ ಹಲವು

ನೀರೋಗಳು, ಆಜ್ಞೆ ಮಾಡುವುದಿಲ್ಲ

ನಿಮ್ಮ ಸೇವೆಯೇ 

ನಮ್ಮ ಪರಮ ಗುರಿ ಎನ್ನುವರು

ಸೇವೆಯ ನೆಪದಲ್ಲಿ

ಸಾವನೊದಿಸುವರು.


ನಿತ್ಯವೂ ಔತಣಕೂಟ

ದುಡಿಯುವವರು 

ದುಡಿಯುತ್ತಲೇ ಇದ್ದಾರೆ.

ದುಡಿಸಲು ಬೀಸುವರು

'ಖಾಸಗಿ'ಯ ಗಾಳ!

ರಕ್ತ ಹೀರುವ ತನಕ

ಸುಂದರ ನೌಕೆಯ ಪಯಣ.

ದಾಸ್ಯದ ಪರವಾಗಿ

ನಿಂತ ವೇಷಗಾರರು 

ದಸ್ಯುಗಳ ಸೇವಕರೇ

ಮರೆಯ ಮರೆಯಲ್ಲಿ

ಮಧುವ ನೀಡುತ, ಮಧುರವಾಡುತ,

ಕುಣಿದ ದೇಹಹಿತ..

ಎಲ್ಲರೂ ಸುಡುವ ಸೌದಿಗಳೇ


'ಇಲ್ಲ'ದವರ ಹಿತ ಕಾಯುವ

'ಇರು'ವವರ ಜನ್ಮಗಳು

ನೀರೋ ಅವತಾರಗಳೇ..

ದತ್ತು ಮಗನಾಗಿ, 

ಗಂಡನನೇ ಕೊಂದವಳಿಗೆ ಮಗನಾಗಿ,

ಇವರ ಮಗಳಿಗೆ ಗಂಡನಾಗಿ,

ಆ ತಾಯಿಯನೇ ಕೊಂದವನಾಗಿ,

ಕೆಲವು ಅನುರಕ್ತಿಯ 

ಕಾಮಭೋಗಗಳಿಗೆ ತನ್ನೆಂಡತಿಯನೇ ತ್ಯಜಿಸಿ,

ಸಾಧುವಾದವನು,

ಕವಿಯಾಗಿ, ಕಲಾವಿದನಾಗಿ

ಒಣಜಂಬದಿ ದೇಶ ಸುಟ್ಟವನು.


ಸಭೆಯ ಮಾತುಗಳಲ್ಲಿ,

ಕಣ್ಣೀರು ಒರೆಸುತ, ಬೆವರೆಡೆಗೆ

ಬಂದ ಕಾಲ್ನಡಿಗೆ ಪಯಣದಲಿ

ಹಣ ಚೆಲ್ಲಿದ ಕಥೆಗಳಿವೆ.

ಸಂಬಳದ, ಅಧಿಕಾರದ 

ಹೆಚ್ಚಳದ ನಿಚ್ಚಳದಿ

ಬಡತನಕೆ ಸಾಂತ್ವನಗೈದ 

ಸಂಭ್ರಮದ ಕಥೆಯಲ್ಲಿ

ಭ್ರಷ್ಟಾಚಾರದ ಬೆವರವಾಸನೆಯಿದೆ

ನೀರೋ ಕಲ್ಪಿತ ಕಥೆಯ

ಚರಿತ್ರೆಯ ಪುತ್ಥಳಿ.

ಇವರೆಲ್ಲಾ ನಿತ್ಯ ವ್ಯಥೆಯ

ವಾಸ್ತವದ ದಾಳಿ.

ಬೆವರಿಗೂ ಭಯವಿದೆ, ಗಾಳಿಚಿಂತೆ.


ಇರುವವರ ಚರಿತೆಯಲಿ

ಶ್ರೀಮಂತ ಕಥೆಗಳಿವೆ

ನೋವಿನ ನರ್ತನಕೂ

ಅಧಿಕ ಪೀಠ, ಶ್ರೀಮಂತ ನೋಟ.

ಸುಡುವ ವಾಸನೆಗೆ ದಾಸ್ಯದ ಹೆಸರಿಲ್ಲ

ಗೌರವದ ರೇಷ್ಮೆಯಲಿ

ನಲಿವ ನೇಣು, ನಗುತ ನಿಂತಿವೆ

ಸಾಲು ಬಡತನದ ಗೋಣು.


'ಇಲ್ಲ'ದ ಕಥೆಯಲ್ಲಿ ಇದು ನಿತ್ಯ ನಾಕ

'ಇರು'ವವರ ಆರಾಧನೆಯು ಸಗ್ಗವಿವೇಕ

ಇಲ್ಲಿ ಬಾ, ಮೆಲ್ಲನೆ ನೀನು ನೀನಾಗಿ

ನಂಬದಿರು ರೂಪಗಳ ಕ್ಷಣಹಿತದ ಸುಖದಿ.


-ಅಂಕುರ

ಭಾನುವಾರ, ಅಕ್ಟೋಬರ್ 2, 2022

ಕಾಂತಾರವೆಂಬ ಅದ್ಭುತ ದೇಸಿ ಕಥನ

 

 ಕಾಂತಾರ ಹೆಸರಿನಂತೆಯೇ ಇರುವ ಅಭೇದ್ಯ ಶಕ್ತಿಯ ಸಿನಿಮಾ.

೨೦೨೨ರಲ್ಲಿ ನಾನು ನೋಡಿದ ಅತ್ಯುತ್ತಮ ಸಿನಿಮಾ. ಇದುವರೆಗೂ ರಿಷಬ್ ಶೆಟ್ಟಿಯವರು ಕಾಣಿಸಿದ ಬಗೆಗಿಂತ ಇದು ವಿಭಿನ್ನ ಹಾಗೂ ಹೊಸ ಮಾದರಿ.

ಕನ್ನಡದ ಉತ್ತಮ ನಟನನ್ನು ಗುರ್ತಿಸುವವರಿಗೆ ಇದು ಮಾದರಿ.


ದೈವದ ನೆಪವಾದರೂ, ಅಭಿನಯ ಕಲೆಯು ಪ್ರಾದೇಶಿಕ ಸ್ವರೂಪಕ್ಕೆ ಪೂರ್ಣ ಹೊಂದಿಕೊಂಡು ನೀಡುವ ಬಗೆಯೇ ವಿಶೇಷವಾದುದು.

ಎಲ್ಲಿಯೂ ನೋಡುಗರು ನಿರೀಕ್ಷಿಸುವ ಕಥೆ ಇರದೆ, ಕುತೂಹಲಕಾರಿ ಕಥೆಯನ್ನು ಹೆಣೆಯುತ್ತಾ ಸಾಗುತ್ತದೆ.

ಇದೊಂದು ಸಿನಿಮಾ ಎಂದು ನೋಡುತ್ತಾ ಸಾಗುವವರೂ ಕೂಡ, ಒಂದು ಕಾಲದ ಕರಾವಳಿಯ ಭೂಮಿಕೆಯ ಕಥೆಯನ್ನು ಓದುವ, ಕಾಣುವ ತಲ್ಲೀನತೆಯಲ್ಲಿ ಮುಳುಗಿಹೋಗುತ್ತಾರೆ. ಸಾಹಿತ್ಯ ಓದುಗರಾದ ನಮಗೆ ಇದು ಮತ್ತೆ ಮತ್ತೆ ನೋಡಬಹುದಾದ ಆಸಕ್ತಿ ಉಳಿಸಿದೆ ಎಂದಮೇಲೆ, ಸಾಮಾನ್ಯರಿಗೆ ಅದೆಷ್ಟು ಆಸಕ್ತಿ ಕೆರಳಿಸಬಹುದು ಅನಿಸಿತು.

     ಕೆಳಜಾತಿಯ ಸಮೂಹವು ಅನುಭವಿಸಿದ ನೋವು, ಭೂಮಿಯ ಹಕ್ಕು ಮೊದಲಾದವುಗಳನ್ನೇ ಕೇಂದ್ರವಾಗಿಸಿಕೊಂಡು, ಭೂಮಾಲಿಕರ ಕುತಂತ್ರಗಳನ್ನು ಪರಿಚಯಿಸುವ ಈ ಸಿನೆಮಾದಲ್ಲಿ ಕಂಬಳ, ಕೋಳಿ ಅಂಕ, ಭೂತಕೋಲ, ಯಕ್ಷಗಾನ ಮೊದಲಾದ ದಕ್ಷಿಣ ಕನ್ನಡದ ಸಂಸ್ಕೃತಿಗಳನ್ನು ಕಥೆಗೆ ತಕ್ಕಂತೆ ಮೇಳೈಸಲಾಗಿದೆ.

ರಿಷಿಬ್ ಅವರು ತೋರಿಸುವ ದೈವದಾಟ, ಭೂತಕೋಲದ ಕುಣಿತವು ಮನಸ್ಸಿನಲ್ಲಿ ಶಾಶ್ವತವಾಗಿ ಅಚ್ಚಳಿಯದೇ ಉಳಿಯುತ್ತದೆ. ಇಲ್ಲಿನ ಹಲವು ಪಾತ್ರಗಳು ಕೂಡ ದಕ್ಷಿಣ ಕನ್ನಡ, ಕುಂದಾಪುರ, ಉತ್ತರ ಕನ್ನಡ ಭಾಗಗಳ ದೇಸಿ ಪ್ರತಿಭೆಗಳೇ ಆಗಿರುವುದು ವಿಶೇಷ. 

ಭಾಷೆ, ಪ್ರದೇಶಗಳ ಮೀರಿ ನೋಡಬಹುದಾದ ಇದೊಂದು ಕನ್ನಡ, ತುಳು ಹಾಗೂ ಭಾರತೀಯ ಸಿನಿಮಾ ಎನಿಸಿತು.


- ಮೊದಲ ನೋಟದ ಅನಿಸಿಕೆ

ಡಾ. ರವಿಶಂಕರ್ ಎ.ಕೆ

ಸಹಾಯಕ ಪ್ರಾಧ್ಯಾಪಕ

ಕ್ರಿಸ್ತು ಜಯಂತಿ ಕಾಲೇಜು, ಬೆಂಗಳೂರು

ಭಾನುವಾರ, ಜುಲೈ 17, 2022

ಅವನು ಅವಳು ಇವನು !

 











ಈ ಪದ್ಯ 

ಅವಳಿಗಾಗಿ ಬರೆದೆ

ಎಂದು ಭಾವಿಸಬೇಡಿ,

ಅವಳು

ಈಗಾಗಲೇ ಅವನನ್ನು

ಇಷ್ಟಪಟ್ಟಾಯ್ತು.

ಅವಳ ಪ್ರೇಮಕಥೆಯಲ್ಲಿ

ನಾನೇ ಮೊದಲಿಗ.

ನನ್ನ ಪ್ರೇಮದ ಸ್ವಾದವು

ಅದೆಷ್ಟು ನಿರ್ಮಲವಲ್ಲವೆ,

ಅವಳಿಗಾಗಿ 

ಸಾವಿರ ಪತ್ರಗಳನ್ನು ಬರೆದೆ...

ಅಂದರೆ,

ನಮ್ಮ ಪ್ರೇಮದ ಸ್ವಾದವು

ಸಾವಿರ ದಿನಕ್ಕೂ ಮಿಗಿಲಲ್ಲವೆ!

ವೃತ್ತಿ-ಬಣ್ಣ-ಜಾತಿಗಳ

ಶಪಿಸದ ಅವಳು

ನನಗಾಗಿ ಪರಿತಪಿಸಿದಳು.

ಮೊದಲ ಭೇಟಿಯಲ್ಲಿಯೆ,

ನನ್ನ ಕನಸಂತೆ

ಅಲ್ಲೇ ಸಿಕ್ಕ ಭಿತ್ತಿ ಚಿತ್ರದ 

ಹಾಳೆಯ ಹರಿದು

ನಾಲ್ಕು ಸಾಲು ಬರೆದೆ..

ಹರಿದ ಕೋನಗಳಿಗೆ

ವಿಚಿತ್ರ ರೇಖೆಗಳ ಗೀಚಿ

ಸುಂದರವಾಗಿ ಮಡಚಿ

ನೀಡಿದೆ.

ಹೀಗೆ ಶುರುವಾದ

ಕಥೆಯಲ್ಲಿ

ನನ್ನ ಕವಿತೆಗಳ ಪತ್ರಗಳಿಗಿಂತ,

ನನ್ನ ಹತ್ತಿರದ ಕೆಲವು

ನೆಪಗಳೆ ಹಲವು

ಅವಳ ಕಥೆಗೆ.


ಮುಗಿದ ಕಥೆಗೆ

ಇಷ್ಟೆಲ್ಲಾ ಪೀಠಿಕೆ ಬೇಕೆ?

ಮುಗಿದಲ್ಲೇ ಪ್ರಾರಂಭವಾಗಿದ್ದರೆ,

ಇಷ್ಟು ಬರಹ ಸಾಕೆ!


ಅವನು ಅವಳಿಗಾಗಿ

ಬದಲಾಗಬೇಕಿದೆ

ಲಘಿಮಾ ಕೌಶಲದ ಪಯಣ

ಭವನೀ ಮಜ್ಜನದಲ್ಲಿ

ತಿರುಗಬೇಕಿದೆ

ಅಲ್ಲಿಯೂ ಅವಳನ್ನೇ

ಕಾಣಬೇಕಿದೆ

ಏಕೆಂದರೆ,

ಅವಳ ಎಲ್ಲಾ ಹೊಸ

ಆಯ್ಕೆಗಳೂ ಇವನೇ ಆಗಿವೆ.


ಅವನು ಇವಳಾಗಿ

ಇವಳು ಅವನಾಗಿ

ಒಂದಾಗುವ ಪರಿಗೆ

ನಾನು ಬದಲಾಗಬೇಕಿದೆ.


ನಾನು ಬದಲಾಗದೆಯೆ

ಅವನು ಅವನಾಗುವುದು

ಹೇಗೆ.. ನನ್ನ ಹಾಗೆ!

ಈ ಪರಿಯ ಪದವಿಗೆ

ಈ ಕವಿತೆಯೇ ಕಾರಣ!


ಮತ್ತೆ ಬರೆದಿದ್ದೇನೆ ಕವಿತೆ

ಅವನಾಗುವ ಹಲವು

ಸಿದ್ಧತೆಗಳು ಬೇಕಿವೆ

ಕವಿತೆಯ ನಿಲ್ಲಿಸಿ, ಹೊಸ

ಕಥೆಯಾಗುವ ಪರಿಗೆ

ಅವನು-ಅವಳು ಕಥಾನಾಯಕರು.

ಈ ಪದ್ಯ

ಅವಳಿಗಾಗಿ ಬರೆದೆ

ಎಂದು ಭಾವಿಸಬೇಡಿ.


- ಅಂಕುರ

ಸೋಮವಾರ, ಜುಲೈ 4, 2022

ಸಹೃದಯತೆ ಎಂದರೆ ಇವರೇ ನೆನಪಾಗುವುದು





ಹೌದು, ಸಹೃದಯತೆ ಎಂದಾಕ್ಷಣ ಇವರ ವ್ಯಕ್ತಿತ್ವ ನೆನಪಾಗುತ್ತದೆ. ಒಂದೊಂದು ಗುಣಕ್ಕೂ ಒಬ್ಬೊಬ್ಬರು ನಮ್ಮ ಮನಸ್ಸು ತುಂಬಿರುತ್ತಾರೆ. ಹೆಸರು ರಘು ಹಾಲೂರು ಎಂದಷ್ಟೇ ಗೊತ್ತಿತ್ತು. ಹಿರಿಯರು, ಜ್ಞಾನಿಗಳು ಎಲ್ಲಕ್ಕಿಂತ ಮಿಗಿಲಾಗಿ ಸಹೃದಯಿ. ಮೊನ್ನೆ ಬುಕ್ ಬ್ರಹ್ಮ ನಡೆಸಿದ ಸಂದರ್ಶನ ನೋಡಿದಾಗ ತಿಳಿಯಿತು ಇವರ ಹೆಸರು ರಘುನಂದನ ಹಾಲೂರು ಅಂತ.

ಲೋಕದಲ್ಲಿ ಇಷ್ಟವಾಗುವವರು ಸಾವಿರಾರು ಜನ ಇರಬಹುದು. ಈ ಇಷ್ಟಗಳಿಗೆ ಹಲವು‌ ಕಾರಣ ಇರುತ್ತವೆ.

ಈ ಲೋಕದಲ್ಲಿ ಮೊದಲಿಗೆ ಸ್ವಾರ್ಥ.

ನಂತರ‌ ಇರೋದೇ ನಿಸ್ವಾರ್ಥ.. 

ಇಂತಹ ಜಗತ್ತಿನಲ್ಲಿ ಸಾವಿರಾರು ಜನರು ಉತ್ತಮರು ನಿಸ್ವಾರ್ಥದ ನೆಲೆಯಲ್ಲಿ ಇದ್ದಾರೆ. ಆದರೆ ಅಲ್ಪ ಪ್ರಮಾಣದಲ್ಲಿ ಇರುವ ಸ್ವಾರ್ಥದ ಜನರ ಲೆಕ್ಕಾಚಾರದಲ್ಲಿ ಸಹೃದಯತೆಯು ಮುಖ್ಯ ವಾಹಿನಿಯಲ್ಲಿ ಕಾಣುತ್ತಿಲ್ಲ. 

ಸಹೃದಯತೆಯಲ್ಲಿ ರಘು ಆಲೂರ ಹೆಸರು ಏಕೆ  ಮುಖ್ಯ ಅಂದರೆ ಅವರ ಕನ್ನಡ ಪ್ರೀತಿ, ಕನ್ನಡ ಸೇವೆ, ಎಲ್ಲಕ್ಕಿಂತಲೂ ಆಪ್ತತೆ.

ಅಮೇರಿಕಾದಲ್ಲಿ ಇದ್ದರೂ ಕೇವಲ ಅಭಿಮಾನದ ಕನ್ನಡಿಗರಾಗದೆ, ಸಾಕಷ್ಟು ಕನ್ನಡ ಸೇವೆ ಮಾಡುತ್ತಿರುವ ಸಹೃದಯ ಕಾರ್ಯದಿಂದ ಮುಖ್ಯ ಅನಿಸುತ್ತಾರೆ.

ಅವರ ಕನ್ನಡಸೇವೆ ಕುರಿತು ಇಲ್ಲಿ ಬರಹವೇನೂ ನೀಡಲಾರೆ. ಏಕೆಂದರೆ ಎಲ್ಲವನ್ನೂ ಅವರ ಮಾತಲ್ಲೇ ಕೇಳಬಹುದು. ಬುಕ್ ಬ್ರಹ್ಮ ಅವರು ಸೆರೆಹಿಡಿದ್ದಿದ್ದಾರೆ.

ನನಗೆ ಮುಖ್ಯ ಅನಿಸಿದ್ದು...

ಟೋಸ್ಟ್ ಮಾಸ್ಟರ್ ಮೂಲಕ ವಾಕ್ಪಟುಗಳು ಕ್ಲಬ್ ನಿರ್ವಹಿಸುವ ಕಾರ್ಯದ ಮೂಲಕ..



ನಮ್ಮ ಸತ್ಯಣ್ಣನ ಮಾತು ಕೇಳಲು ಅದರ ಆನ್ಲೈನ್ ಕಾರ್ಯಕ್ರಮಕ್ಕೆ ಪ್ರವೇಶ ಪಡೆದ ನನಗೆ ಅದರ ಕಾರ್ಯವೈಖರಿ ತುಂಬಾ ಇಷ್ಟವಾಯಿತು. ಅವರ ಆಪ್ತತೆಯಲ್ಲಿ ನಾನೂ ಒಬ್ಬನಾದೆ. ಇದರಲ್ಲಿ ಎರಡು ಮಾದರಿಯ ಕಾರ್ಯಕ್ರಮ ನಡೆಯುತ್ತವೆ. ಒಂದು ವಾರ ಕನ್ನಡ ಅತಿಥಿಗಳಿಂದ ಒಂದು ಮುಖ್ಯ ವಿಚಾರ ಸಂವಾದ. ಮತ್ತೊಂದು ವಾರ ಇವರದೇ ಆಪ್ತರಿಂದ ಭಾಷಾ ಪ್ರಧಾನ ಹರಟೆ.

ಈ ಹರಟೆಯಲ್ಲಿ ಇವರ ನಿಯಮ ಚೆಂದ ಇರುತ್ತೆ.

ವಿಷಯ, ಭಾಷೆ, ಉಚ್ಛಾರಣೆ, ಪದಪ್ರಯೋಗ, ಸಮಯಪಾಲನೆ ... ಇತ್ಯಾದಿ

ಹೀಗೆ ವಿಂಗಡಿಸಿಕೊಂಡು ಎಲ್ಲವನ್ನೂ ಲೆಕ್ಕ ಹಾಕಿ ತಿದ್ದಿ ತೀಡಿ ಎಷ್ಟು ಮಜವಾಗಿ ನಮ್ಮ ಭಾಷೆಯನ್ನು ದುಡಿಸುತ್ತಾರೆ ಎಂದರೆ ಕನ್ನಡ ಮೇಷ್ಟ್ರುಗಳೂ ಕೂಡ ಈ ಕಾರ್ಯ ಮಾಡುತ್ತಿಲ್ಲ.

ಅಲ್ಲಿ ಗಾದೆ, ಒಗಟು, ನಾಣ್ನುಡಿ, ಸಿನಿಮಾ(ಹಳೆಯ), ಭಾಷಾಂತರ ಮೊದಲಾದ ಮಾದರಿಗಳು ಬಂದು ಹೋಗುತ್ತವೆ.

ಅಂತರಾಷ್ಟ್ರೀಯವಾಗಿ ಟೋಸ್ಟ್ ಮಾಸ್ಟರ್ ನ ಸಾವಿರಾರು ಕ್ಲಬ್ ಗಳಲ್ಲಿ ಮೊದಲಿಗೆ ಭಾರತೀಯ ಅದರಲ್ಲೂ ಕನ್ನಡದಲ್ಲಿ ಇಂತಹ ಪ್ರಯೋಗ ಮಾಡುತ್ತಿರುವುದು ಹಿರಿಮೆ ಅನಿಸಿತು. ಒಬ್ಬರಿಗೊಬ್ಬರು ಹಿತಮಿತ ವಾಕ್ಪಟುಗಳೇ, ನುಡಿ, ನಡೆ- ಸದ್ಭಾವಗಳ ಗಣಿ ಇವರು ಅನಿಸಿತು. ಅದರೊಳಗಿನ ಪ್ರತಿಯೊಬ್ಬರೂ ಅರ್ಥಪೂರ್ಣ ಕಾರ್ಯ ಮಾಡುತ್ತಿದ್ದಾರೆ ಅನಿಸಿತು. ಇದು ನಮ್ಮ ಚಿಕ್ಕಮಗಳೂರಿನ ರಘುನಂದನ ಹಾಲೂರು(ರಘು ಹಾಲೂರು) ಇವರ ಒಂದು ಚಿಕ್ಕ ಕಾರ್ಯವನ್ನು ಕಂಡಾಗ ಅನಿಸಿದ್ದು.. 

ಮೊನ್ನೆ ಅಮೇರಿಕಾದಿಂದ ಬೆಂಗಳೂರಿಗೆ ಬಂದಾಗ ನಮ್ಮನ್ನೆಲ್ಲಾ ಭೇಟಿಯಾದರು. ಪರದೆಯಲ್ಲಿ ಕಂಡ ಮುಖದ ಮನೋ ಮಧುರತೆ ಹಾಗೇ ಇತ್ತು. ಇನ್ನೂ ಹೆಚ್ಚಿನ ಗುಣವಿತ್ತು. ಹಳೆಯ ಆಪ್ತರು ಅನಿಸಿತು. ನನಗಿಂತ ತುಂಬಾ ಹಿರಿಯವರಾದರೂ ಯಾವುದೇ ಅಂತರವಿಲ್ಲದೆ ಹತ್ತಿರವಾಗುತ್ತಾರೆ. ಭಾಷೆ ಕುರಿತು ಒಂದಿಷ್ಟು ಮಾತಾಡಿದೆವು. ಅಣಕು ರಾಮನಾಥ್ ಅವರ ಮನೆಯ ಸಾಹಿತ್ಯ ಗೋಷ್ಠಿಗೆ ಸೇತುವೆ ಮಾಡಿ ತುರ್ತು ಕಾರ್ಯ ನಿಮಿತ್ತ ನಿರ್ಮಿಸಿದೆ. ಕಂಡದ್ದು ಅರ್ಧ ತಾಸಾದರೂ ಒಡನಾಟ ಮೂರ್ನಾಲ್ಕು ವರ್ಷದಷ್ಟು ಹಳೆಯದು.


ಇವರು ಕಾಣಿಸಿದ್ದು.. ಇಷ್ಟೇ ಆದರೂ, ಕಾಣಿಸಿದಿರುವ ಹಲವು ಇವರ ಆಪ್ತರು ಇವರಷ್ಟೇ ಶ್ರೇಷ್ಠರು ಅನಿಸಿತು. ಇಂತಹ ಹಲವು ಸಮಾಜಮುಖಿ ಕಾರ್ಯಗಳ ಪಟ್ಟಿಯೇ ಇದೆ. ಎಲ್ಲವನ್ನೂ ಕೇಳಿದ್ದೇನೆ, ಕಾಣುವ, ಸಾಧ್ಯವಾದಷ್ಟು ನಮ್ಮಂತೆ ಅಳವಡಿಸಿಕೊಳ್ಳುವ ಹಂಬಲವೂ ಇದೆ. ಧನ್ಯೋಸ್ಮಿ ಇವರ ಕಾರ್ಯವಿಶಾಲತೆಗೆ.

ಇವರ ಕ್ಲಬ್ ನಲ್ಲಿ ಇರುವವರು ಹಾಗೂ ವಾರಕ್ಕೊಮ್ಮೆ ಭಾನುವಾರ ರಾತ್ರಿ ಒಬ್ಬತ್ತು, ಹತ್ತಕ್ಕೆ ಏರ್ಪಡುವ ಕಾರ್ಯಕ್ರಮದ ಲಿಂಕು ಇದು.

Officers and members:

Anil Shekhar

Anil Joshi-Treasurer

Ashok-President

Chandra

Chanaveer 

Chetan

Mahadesh-Secretary

Prasad-SAA

Raghu-VPE

Shailaja

Shiva-VPM

Suma

Sumanth-VPPR

Club Name : Vakpatugalu 

Club Number : 01259423

District: 101

Division : C

Area : C5

For weekly session:

https://us02web.zoom.us/j/81055934461

ರಘುನಂದನ ಹಾಲೂರ ಅವರ ಸಂದರ್ಶನ - ಬುಕ್ ಬ್ರಹ್ಮ

https://youtu.be/qmTrvUrsO-4

ಶನಿವಾರ, ಜುಲೈ 2, 2022

ನಾವು ಮಧ್ಯಮ ವರ್ಗದವರೇ ಹೀಗೆ...

ನಾವು ಮಧ್ಯಮ ವರ್ಗದವರೇ ಹೀಗೆ...

ನಾವು ಮಧ್ಯಮ ವರ್ಗದವರೇ ಹೀಗೆ... 
ಮಾತು ಮಾತಿಗೂ 
 ಜೋತು ಬೀಳುತ್ತೇವೆ. 
ಆಡಿದ ಮಾತಿಗೆಲ್ಲಾ 
 ಅರ್ಥ ಹುಡುಕುತ್ತೇವೆ. 
ಹುಡುಕಿದ್ದಕ್ಕೆಲ್ಲಾ 
 ರೆಕ್ಕೆ ಪುಕ್ಕ ಕಟ್ಟಿ 
ನಾವೇ ನೋಯುತ್ತೇವೆ, 
 ಇಲ್ಲವೆ, ಸದಾ ಬೇಯುತ್ತೇವೆ. 
ಮಾತೆಲ್ಲವನ್ನೂ 
ಮರೆಯದೇ ಉಳಿಸುತ್ತೇವೆ.. 
ತಕ್ಕಮಟ್ಟಿಗೆ ರುಚಿ ನೀಡಿ ಬೆಳೆಸುತ್ತೇವೆ. 
ನಾವು ಯಾವಾಗಲೂ ಹೀಗೆ,
ಬೆಳೆವವರ ಕಾಲೆಳೆಯುತ್ತಾ
ಮೂಗು ತೂರಿಸುತ್ತಾ
ನಮ್ಮುದ್ದವ, ನಮ್ಮಗಲವ
ತೋರುತ್ತಲೇ 
ಇರುತ್ತೇವೆ.
ಮಾರುಕಟ್ಟೆಯಲ್ಲಿ
ಮೆಣಸಿನಕಾಯಿಗೂ,
ಅಕ್ಕಪಕ್ಕದ ತೋಟಗಳಿಗೂ,
ದೂರದೂರಿನ 
ಜಮೀನು-ಸೈಟುಗಳಿಗೂ,
ಆಗ ತಾನೇ ಸಿಕ್ಕ
ಸಾಬರು, ಸೇಟುಗಳಿಗೂ,
ನಮ್ಮ ರಾಜ್ಯಗಳ ಮುಖ್ಯಮಂತ್ರಿಗಳಿಗೂ,
ಪ್ರಧಾನಿಗೂ, ವಿದೇಶಾಂಗಕ್ಕೂ
ನಮ್ಮ ಸಲಹೆಗಳು
ಸದಾ ಇರುತ್ತವೆ...

ಬೆಲೆ ಹೆಚ್ಚಳಕೆ ಕುದಿಯುತ್ತೇವೆ
ಕಡಿಮೆ ಎಂದ ಕಡೆ 
ಕೈ ಚಾಚುತ್ತೇವೆ...
ಯಾರೂ ಕಾಣದಿದ್ದರೆ
ಜೇಬು ತೆರೆಯುತ್ತೇವೆ.

ಅಪ್ಪ-ಅಮ್ಮನ ಕುರಿತು
ನಮ್ಮದು ಸದಾ 
ಭಗವದ್ಗೀತೆಯ ನೀತಿ..
ಗಂಡ-ಹೆಂಡತಿ-ಮಕ್ಕಳ ಕುರಿತು
ಇನ್ನಿಲ್ಲದ ಭೀತಿ.
ಸ್ನೇಹಕ್ಕೆ ಕರ್ಣರಸಾಯನ.

ಅಕ್ಷರಗಳ ಓದಿ-ಬರೆದು 
ಬೆಳೆಯಬೇಕಾದ ನಾವು 
ಅಳಿಸಿಹೋಗುವ ಮಾತಿಗೆ 
ಸದಾ ಮೈಲಿಗೆಯಾಗುತ್ತೇವೆ.
ಕಣ್ತೆರೆಯ ಬೇಕಾದ ನಾವು
ಕಣ್ತೆರಸಲು ಹಂಬಲಿಸುತ್ತೇವೆ.
ನಮ್ಮ ದಾರಿಗೆ ನಾವೇ ಶತ್ರು..
ಲೋಕ ಮೆಚ್ಚಿಸಲು ನಾವೇ 
ನಿತ್ಯ ಸಾರ್ವತ್ರಿಕ ಮಿತ್ರು.


 -ಅಂಕುರ

ಬುಧವಾರ, ಜೂನ್ 1, 2022

ಹುಡುಕಬಹುದೇ !

 ಹುಡುಕಬಹುದೇ !




ದನಿ ಎತ್ತುವ ಕೊರಳುಗಳೇ

ಮೌನವೀಣೆಯ ಮೀಟಿ

ದನಿಯ ಕೇಳಿ ಒಮ್ಮೆ!

ಅಧರ್ಮದ ಕ್ರಿಮಿಯೇ

ಹುಡುಕುತಿಹೆ ಬಣ್ಣದ ಸೋಂಕು!

 ಇಲ್ಲಿ ಧರ್ಮವಿಲ್ಲ.

ಕಳೆದ ಕಾಲದ ಕಲಹ

ಇಂದು ಹಾಳಾಯ್ತು ವಿನಃ

ಭವಿಷ್ಯವೆಲ್ಲಿ?

ಹುಡುಕಬೇಡ ಮನವೆ

ಇನ್ನೆಲ್ಲೋ ಇದೆಯೆಂದು

ಕಳೆದುಕೋ ಇಲ್ಲೇ.

ಕಾಡಿದ್ದು, ಹುಡುಕಿದ್ದು

ಅಜ್ಞಾನವೇ ಹೊರೆತು

ಜ್ಞಾನವಲ್ಲ.


ಮಂಗಳವಾರ, ಮೇ 31, 2022

ಟ್ರೋಲು ಸ್ವಾಮಿ! ಟ್ರೋಲು..

 ಟ್ರೋಲು ಸ್ವಾಮಿ! ಟ್ರೋಲು..

 








ಟ್ರೋಲು ಸ್ವಾಮಿ! ಟ್ರೋಲು..

ಪ್ರಸಿದ್ಧಿಯಾಗಬೇಕಂದ್ರೆ

ಟ್ರೋಲೇ ಆಗಬೇಕು !

ಅಧಿಕಾರ ಇದ್ದ ಕಡೆ ವಾಲಬೇಕು

ವಾಲಾಟದಲ್ಲೇ ತೇಲಬೇಕು!

ಹಿಂದೂ ಬಗ್ಗೆ ಮಾತಾಡಬೇಕು

ಕೆಲವರನ್ನು ಮೆಚ್ಚಿಸಬೇಕು

ಕೆಲವರನ್ನು ಚುಚ್ಚಬೇಕು

ಮುಸ್ಲಿಂ ಕುರಿತು ಮಾತಾಡಬೇಕು

ಕೆಲವರನ್ನು ಮೆಚ್ಚಿಸಬೇಕು

ಕೆಲವರನ್ನು ಚುಚ್ಚಬೇಕು

ಸಮಯ ಸಿಕ್ರೆ ಹಿಜಾಬ್ ಕುರಿತೂ

ಮಾತಾಡಬೇಕು...

ದಲಿತರಿಗೆ ನ್ಯಾಯ ಕೊಡಿ

ಅನ್ನುತ್ತಲೇ ಇರಬೇಕು!

ಮಹಿಳೆಯೋ, ಮಾಂಸವೋ, ಪಕ್ಷವೋ

ಪುಡಾರಿಯೋ ಮಾತಾಡುತ್ತಲೇ ಇರಬೇಕು

ಸಾಧ್ಯವಾದಷ್ಟೂ ಶುದ್ಧವೆಂದು ವಿರುದ್ಧ ಮಾತಾಡಬೇಕು

ಮಠವೋ ಮಾನ್ಯವೋ ಪರವಾದಿ

ಸಂಘ ಕಟ್ಟಬೇಕು,

ಹೊಗಳು ಭಟ್ಟರಿಗೆ ಹಣ ನುಂಗಿಸಬೇಕು

ಕೃಪಾಪೋಷಿತವಾಗಿಯೇ ಬದುಕಬೇಕು

ಕುತ್ತಿಗೆಗೆ ಬಂದ್ರೆ,

 ಅರಾಮಾಗಿ ಇರಬೇಕಾದ್ರೆ,

ಮಾಡಿದ ತಪ್ಪು ಮರೆಸಬೇಕಂದ್ರೆ

ಆಸ್ಪತ್ರೆ ಇದೆ, ಜೈಲೂ ಇದೆ.

ಹೆಸರು ಕುದುರೆ ಹತ್ತಿಕೊಂಡು

ಬಿರುದು ಭವಾವಳಿ ಹೊತ್ತುಕೊಂಡು

ಅಪ್ಪ ಮಾಡಿದ ಆಸ್ತಿಯಲ್ಲಿ,

ಇಲ್ಲದಿದ್ರೇನು..

ಸರ್ಕಾರದ ಗದ್ದುಗೆ ಇವೆಯಲ್ವ

ಮಸ್ತಿ ಮಾಡೋ ಸಿಂಪಲ್ ಐಡಿಯಾ

ಬುಸಿನೆಸ್ ಆದ್ರೂ ಮಾಡ್ಲೇಬೇಕು

ಅಗತ್ಯ ಅನಿಸೋ  ಕಡೆ

ಬಡವರನ್ನೇ ಗಾಣ ಹಾಕಿ

ಹಗಲು ರಾತ್ರಿ ರಕ್ತ ಹೀರಬೇಕು

ಶಾಲೆ, ಮಂದಿರ, ಆಹಾರ

ಬೇಕಾದಷ್ಟು ಸ್ವಾಮಿ!

ಅಂತರಂಗ ಶುದ್ಧಿ ಇಲ್ಲದೆ

ಬಹಿರಂಗ ಹಾರಾಟ ಮಾಡ್ತ

ಲೋಕದ ಕಣ್ಣಿಗೆ ಟ್ರೋಲ್ ಆಗಬೇಕು

ಟ್ರೋಲು ಸ್ವಾಮಿ, ಟ್ರೋಲು

ಇವರೇ ಜಗತ್ತು ಮೆಚ್ಚುವ ಹೊಸ ಮಾಲು.

ಬುಧವಾರ, ಜನವರಿ 26, 2022

 ಗಾಂಧಿ

ಅಪರೂಪದ ಚಿತ್ರಗಳು


'ಬೆಂಕಿ ಬೇರೆ! ಬೆಳಕು ಬೇರೆ!
ಬಣ್ಣ ಬೇರೆ! ಬಿಡಿಬಿಡಿಸಿ,
ತಿಳಿತಿಳಿಸಿ ಹೇಳಿದ ಮಹಾತ್ಮ...'

~ ದ.ರಾ. ಬೇಂದ್ರೆ


ಓ ಮಹಾತ್ಮನೆ, ನಿನ್ನ ಸಾನ್ನಿಧ್ಯತೀರ್ಥದಲಿ ಮಾನವನ ಮೋಹಮದಮಾತ್ಸರ್ಯಗಳು ಮಿಂದು ಪ್ರೇಮದಿ ಪುನೀತವಾಗಿಹವು! ಸುಮುಹೂರ್ತದಲಿ ~ ಕುವೆಂಪು



ಮೇಲೊಂದು ಗರುಡ ಹಾರುತಿಹುದು
ಕೆಳಗದರ ನೆರಳು ಓಡುತಿಹುದು
* * *
ಹರಿದತ್ತ ಹರಿಯ ಚಿತ್ತ
ಈ ಧೀರ ನಡೆವನತ್ತ

~ ಪುತಿನ

'ಇನ್ನಿನಿಸು ನೀ ಮಹಾತ್ಮ ಬದುಕಬೇಕಿತ್ತು ಈಗ ಭಾರತಕಗತ್ಯವಿದೆ ನಿನ್ನ ಬಿರುಗಾಳಿಗೊಲೆವ ಹಡಗದಂತಿಹುದಾಸತ್ತು' ~ ಗೋವಿಂದ ಪೈ


ನಿನ್ನ ಹೆಸರಿಡಬಹುದು ಬೀದಿಬೀದಿಗೆ, ಸುಲಭ; ನಿನ್ನಂತೆ ಬದುಕುವುದು ದುರ್ಲಭ . ನಿನ್ನ ಹೆಸರೆತ್ತಿದರೆ, ನಿನ್ನ ಮಾತಾಡಿದರೆ ನಿನ್ನ ವೈರಿಗೆ ಕೂಡ ಲಾಭ ~ ಕೆ.ಎಸ್.ನ.





















ಗುರುವಾರ, ಅಕ್ಟೋಬರ್ 14, 2021

ಆಳಾಗ ಬಲ್ಲವನು ಆಳುವನು

 

ಆಳಾಗ ಬಲ್ಲವನು ಆಳುವನು

ಕಾಯಕವು ಉಳ್ಳನಕ| ನಾಯಕನು ಎನಿಸಿಪ್ಪ|

ಕಾಯಕವು ತೀರ್ದ ಮರುದಿನವೆ ಸುಡಗಾಡ

ನಾಯಕನು ಎನಿಪ ಸರ್ವಜ್ಞ||

ಕಾಯಕ ಎಂದರೆ ಕೆಲಸ. ಎಲ್ಲರೂ ಯಾವುದೇ ಒಂದು ಉದ್ಯೋಗವನ್ನು ಮಾಡಬೇಕು. ಆಗ ತಾನೇ ನಾಯಕನಾಗುತ್ತಾನೆ. ಇನ್ನೊಬ್ಬರನ್ನು ಬೇಡದೆ ಬದುಕಬಹುದು. ಕಾಯಕ ಇಲ್ಲದೆ ನಿರುದ್ಯೋಗಿಯಾದರೆ ಯಾವ ಪ್ರಯೋಜನಕ್ಕೂ ಬಾರನು. ಸುಡುಗಾಡಿನ ಅಂದರೆ ಶ್ಮಶಾನದ ನಾಯಕನಂತೆ ಅಪ್ರಯೋಜಕನಾಗುತ್ತಾನೆ. ನಾವು ಬದುಕಬೇಕೆಂದರೆ ಯಾವುದೇ ಒಂದು ಕಾರ್ಯವನ್ನು ಭೇದವಿಲ್ಲದೆ ನಿರ್ವಹಿಸಬೇಕು.

ಆಳಾಗ ಬಲ್ಲವನು ಆಳುವನು ಅರಸಾಗಿ

ಆಳಾಗಿ ಬಾಳಲರಿಯದವನು-ಕಡೆಯಲ್ಲಿ

ಹಾಳಾಗಿ ಹೋಹ ಸರ್ವಜ್ಞ

ಯಾವುದೇ ಕೆಲಸವನ್ನು ಒಲವು ನಲಿವಿನಿಂದ ಮಾಡಬಲ್ಲವನು ಮಾತ್ರ ಜೀವನವನ್ನು ಚೆನ್ನಾಗಿ ರೂಪಿಸಿಕೊಳ್ಳುತ್ತಾನೆ ಎಂಬುದನ್ನು ಹೇಳಲಾಗಿದೆ. ಆಳಾಗಿ ದುಡಿ ಅರಸಾಗಿ ಉಣ್ಣು ಎಂಬ ಗಾದೆ ಇದೆ. ಕಷ್ಟಪಟ್ಟು ದುಡಿದರೆ ಮಾತ್ರ ಅದಕ್ಕೆ ಸೂಕ್ತವಾದ ಪ್ರತಿಫಲ ದೊರೆಯುವುದು. ದುಡಿಮೆಯ ಪ್ರತಿಫಲದಿಂದ ಲಾಭ ಬರುತ್ತದೆ. ಕನಸಿನ ಎಲ್ಲವನ್ನೂ ಸೃಷ್ಟಿಸಿಕೊಳ್ಳಬಹುದು. ನಾಲ್ಕಾರು ಜನಕ್ಕೆ ಉದ್ಯೋಗವನ್ನೂ ಕೂಡ ನೀಡಬಹುದು. ಕಷ್ಟಪಟ್ಟು ಆಳಿನಂತೆ ದುಡಿಯಲು ಇಚ್ಚಿಸದೆ ಸೋಮಾರಿಯಾದರೆ ಕೊನೆಗೆ ಆಳಾಗಿ ಹೋಗುವನು ಎಂದಿದ್ದಾರೆ ಸರ್ವಜ್ಞ.

ಅಲಸಿಕೆಯಲಿರುವಂಗೆ| ಕಲಸಲಂಬಲಿಯಿಲ್ಲ

ಕೆಲಸಕ್ಕೆ ಅಲಸದಿರುವಂಗೆ ಬೇರಿಂದ

ಹಲಸು ಕಾತಂತೆ ಸರ್ವಜ್ಞ||

ಸೋಮಾರಿತನವನ್ನು ಸರ್ವಜ್ಞ ಇಲ್ಲಿ ವಿರೋಧಿಸಿದ್ದಾನೆ. ಸೋಮಾರಿಗಳು ಕೆಲಸಮಾಡದೆ, ಆಲಸ್ಯದಿಂದ(ಸೋಮಾರಿತನ) ಇದ್ದರೆ ತಿನ್ನಲು ಅನ್ನ ಸಿಗುವುದಿಲ್ಲ. ಯಾವುದೇ ಕೆಲಸವಾಗಲಿ ಆಲಸ್ಯ ತೋರದೆ, ಆಸಕ್ತಿ ತೋರಿದರೆ ಶ್ರೀಮಂತಿಕೆ ತಾನಾಗಿಯೇ ದೊರೆಯುತ್ತದೆ. ಅದು ಅಲಸಿನ ಮರವು ಬೇರಿನಿಂದಿಲ್ಲಾ ಅಲಸಿನ ಹಣ್ಣು ಬಿಡುತ್ತಾ ಸಂಭ್ರಮಿಸುವಂತೆ ಕ್ರಿಯಾಶೀಲವ್ಯಕ್ತಿ ಸದಾ ಆನಂದದಲ್ಲಿರುತ್ತಾನೆ.

ಉದ್ಯೋಗ ಉಳ್ಳವನ| ಹೊದ್ದುವುದು ಸಿರಿಬಂದು

ಉದ್ಯೋಗವಿಲ್ಲದಿರುವವನ ಕರದೊಳಗೆ

ಇದ್ದುದೂ ಪೋಕು ಸರ್ವಜ್ಞ||

ಉದ್ಯೋಗ ಇರುವವನು| ಬಿದ್ದಲ್ಲಿ ಬಿದ್ದಿರನು|

ಹದ್ದು ನೆವನವನು ಈಡಾಡಿ ಹಾವ ಕೊಂದೆದ್ದು

ಹೋದಂತೆ ಸರ್ವಜ್ಞ||

        ಈ ಮೇಲಿನ ಎರಡೂ ವಚನಗಳು ಉದ್ಯೋಗವನ್ನು ಕುರಿತು ತಿಳಿಸುತ್ತವೆ. ಕಾಯಕವೇ ಕೈಲಾಸವೆಂದರು ಬಸವಣ್ಣ. ಕಾಯಕವಿದ್ದರೆ ನಾಲ್ಕಾರು ಜನ ನಮ್ಮನ್ನು ಗೌರವಿಸುತ್ತಾರೆ.

ಶ್ರೀಮಂತಿಕೆಯು ತಾನಾಗಿಯೇ ಬರುತ್ತದೆ. ಇರುವ ಬಡತನವ ಕಳೆದು, ತನ್ನ ಕನಸುಗಳನ್ನು ಸಾಕಾರಗೊಳಿಸಬಹುದು. ಇಂದು ವಿದ್ಯೆಯು ಉದ್ಯೋಗ ನಿಮಿತ್ತವಾಗಿ ಸಂಘಟಿತಗೊಂಡಿದೆ. ಉತ್ತಮ ಜ್ಞಾನವಿಲ್ಲದೆಯೂ ಉದ್ಯೋಗ ಲಭಿಸದು. ಇರುವ ಉದ್ಯೋಗವೂ ಇಲ್ಲವಾಗುತ್ತದೆ. ಇರುವ ಸಂಪತ್ತನ್ನು ಸೋಮಾರಿತನದಲ್ಲಿ ಖಾಲಿ ಮಾಡುತ್ತಾ ಬಡವನಾಗುತ್ತಾನೆ, ಬಿಕ್ಷುಕನೂ ಆಗಿಬಿಡುತ್ತಾನೆ. ಉದ್ಯೋಗವನ್ನು ನಾವೇ ಸೃಷ್ಟಿಮಾಡಿಕೊಳ್ಳಬೇಕು. ಅದಕ್ಕೆ ಉತ್ತಮ ಶಿಕ್ಷಣ, ತರಬೇತಿಯೂ ಮುಖ್ಯ. ಇಂತಹ ಕ್ರಿಯಾಶೀಲರು ಎಂದಿಗೂ ಸೋಮಾರಿಗಳಾಗದೆ ಸದಾ ಯಾವುದಾದರೊಂದು ಉದ್ಯೋಗವನ್ನು ಸೃಷ್ಟಿಸಿಕೊಳ್ಳುತ್ತಾರೆ. ಸೋಮಾರಿಯು ಆಲಸ್ಯ, ನಿದ್ರೆಯಲ್ಲಿ ಕಾಲಕಳೆಯುತ್ತಾನೆ. ಕ್ರಿಯಾಶೀಲವ್ಯಕ್ತಿತ್ವವು ಯಾವುದಾದರೊಂದು ಉದ್ಯೋಗದಲ್ಲಿ ನಿರತನಾಗುತ್ತಾನೆ. ಅಂತಹ ಮನಸ್ಸನ್ನು ಸರ್ವಜ್ಞನನು ‘ಆಕಾಶದಿಂದಲೇ ಸಂಚು/ಉಪಾಯವನ್ನು ಮಾಡಿ ಭೂಮಿಯಲ್ಲಿ ಸಾಗುವ ಹಾವನ್ನು ವೇಗವಾಗಿ ಬಂದು ಹಿಡಿದು, ಕೊಂದು ಹೊತ್ತೊಯ್ಯುವಂತೆ’ ಯಾವುದೇ ಅವಕಾಶವನ್ನೂ ಬಿಡದೆ ಉಪಾಯದಿಂದ ಬಳಸಿಕೊಳ್ಳುವುದು ಕ್ರಿಯಾಶೀಲ ವ್ಯಕ್ತಿತ್ತ್ವವಾಗಿರುತ್ತದೆ.

 ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೆ ಮೇಲು

ಮೇಟಿಯಿಂ ರಾಟೆ ನಡೆದುದಲ್ಲದೆ-ದೇಶ

ದಾಟವೆ ಕೆಡುಗು ಸರ್ವಜ್ಞ

ಜೀವಿಗಳ ಹಸಿವನ್ನು ತಣಿಸುವುದಕ್ಕಾಗಿ ದವಸದಾನ್ಯಗಳನ್ನು ಬೆಳೆಯುವ ಬೇಸಾಯದ ವಿದ್ಯೆಯೇ ಮಾನವನ ಎಲ್ಲಾ ಬಗೆಯ ಕಸುಬುಗಳಿಗಿಂತಲೂ ಮೇಲು/ದೊಡ್ಡದೆಂಬುದನ್ನು ಹೇಳಲಾಗಿದೆ .

ಮೇಟಿ ವಿದ್ಯೆ ಎಂದರೆ ಬೇಸಾಯವನ್ನು ಮಾಡುವ ಕುಶಲತೆ ಮತ್ತು ಕಸುಬು. ಮೇಟಿ=ರಾಗಿ/ಬತ್ತ/ಜೋಳ ಮುಂತಾದ ಬೆಳೆಗಳನ್ನು ಒಕ್ಕಣೆ ಮಾಡುವಾಗ ಕಣದ ನಟ್ಟನಡುವೆ ನೆಡುವ ಮರದ ದಪ್ಪನೆಯ ಕಂಬ. ರಾಟೆ ಎಂದರೆ ನೂಲು ತೆಗೆಯುವ ಚರಕ/ಗಾಲಿ/ಚಕ್ರ. ಮೇಟಿಯಿಂದ  ರಾಟೆ ನಡೆಯುವುದು ಎನ್ನುವುದು ಒಂದು ನುಡಿಗಟ್ಟು. ಕೆಲಸಗಳು ಚೆನ್ನಾಗಿ ನಡೆಯುವುದು ಎಂಬ ತಿರುಳಿನಲ್ಲಿ ಬಳಕೆಯಾಗುತ್ತದೆ. ಮೇಟಿಯಿಂ ರಾಟಿ ನಡೆದುದು ಎಂದರೆ ಬೇಸಾಯದಿಂದಲೇ ದೇಶದ ಸಾಮಾಜಿಕ ಬದುಕು, ಸಂಸ್ಕೃತಿ ಮತ್ತು ನಾಗರೀಕತೆಗಳು ಉಳಿದು ಬೆಳೆದು ಬಾಳುತ್ತಿವೆ. ಬೇಸಾಯ ನಡೆಯದಿದ್ದರೆ ದೇಶದ+ಆಟವೇ=ದೇಶದ ಎಲ್ಲಾ ಬಗೆಯ ಚಟುವಟಿಕೆಗಳು  ಕೂಡ  ಕೆಡುಗು=ನಾಶವಾಗುತ್ತವೆ/ಹಾಳಾಗುತ್ತವೆ ಎಂದರ್ಥ. ಕೃಷಿಯನ್ನು ಕುರಿತು ಹೇಳುವ ಸರ್ವಜ್ಞನು ಕೃಷಿಯೇ ದೇಶಕ್ಕೆ ಮೂಲ ಎಂದು ತೀರ್ಮಾನಿಸಿರುವುದು ಸತ್ಯವೆನಿಸುತ್ತದೆ.



ಸೋಮವಾರ, ಮೇ 24, 2021

ಕಳಚಿಬಿಡು ನೋವು - ಅಂಕುರ

 ಕಳಚಿಬಿಡು ನೋವು - ಅಂಕುರ


ಪಡೆವ ಪ್ರೀತಿಗಳಂತೆ

ಕಳಚುವವು ಮಮತೆಗಳು

ಅಗಲಿಕೆಯು ಅನಿವಾರ್ಯ

ಅರ್ಥ ಮಾಡಿಕೊ ಮನವೆ




ಗೂಡು ಕಟ್ಟುವ ಹಕ್ಕಿ

ಕರುವನಾಕುವ ಪ್ರಾಣಿ

ಕಳಚುವ ಸಂಸಾರ, ತಿಳಿದುಕೊ ವಿಚಾರ

ಸೃಷ್ಟಿಗಳೆಲ್ಲಾ ನಾಶವಾಗಲೇಬೇಕು.

ಹೊಸಪ್ರೀತಿಗೆ ಮನಸು 

ಹೊಂದಿಕೊಳ್ಳಲೇಬೇಕು

ಇದೇ ನಿತ್ಯ ಸತ್ಯ ಪ್ರಕಾರ.


ಗಡಿಯಾರದೋಟಕ್ಕೆ ಅರ್ಥವೇ ಇಲ್ಲ

ಹಣದ ಹಂಬಲಕೆ ಸೂತಕವೆ ಎಲ್ಲ

ಲೋಕದಸಿವನು ಕಣ್ತೆರದು ನೋಡು

ಸತ್ತವರಿಗಿಂತ, ಬದುಕಿ ಸಾಯುವರೆ ಜಾಸ್ತಿ.

ಎನ್ನಸಿವು, ನೋವುಗಳು ಲೆಕ್ಕವಲ್ಲ.


ನೆನಪುಗಳಿಗೆ ಅರ್ಥ ಹುಡುಕದೆ,

ಇರುವ ಸತ್ಯಗಳ ಒಪ್ಪಬೇಕಿದೆ.

ಭವಿಷ್ಯವೇ ಕಾಣದ ಜಗತ್ತಿನಲ್ಲಿ,

ಕನಸುಗಳಿಗೆ ಅಲ್ಪವಿರಾಮ ನೀಡಬೇಕಿದೆ.

ನೋವುಗಳು ಏನನ್ನೂ ಸೃಷ್ಟಿಸುವುದಿಲ್ಲ,

ಈಗಾಗಲೇ ಮನೆಗಳು

ಮನಸ್ಸುಗಳು ಖಾಲಿಯಾಗುತ್ತಿವೆ.


ಎಷ್ಟು ದಿನ ಮುಷ್ಟಿ ಗಾತ್ರದಲಿ

ಮುಚ್ಚಿಡುವೆ ಮನವೆ

ನೆನ್ನೆಗೆ ಎಂದಾದರೂ ಅರ್ಥವಿದೆಯೇ!

ನಮಗಿರುವ ಶಕ್ತಿಯಲಿ

ನೋವುಗಳು ಹೊರೆ ತುಂಬಿ

ಹೊರಲೇ ಬೇಕು ನಮ್ಮ ಬದುಕಿಗಾಗಿ.

ನಾಳೆಯ ಹೊಸ ಅರ್ಥಕ್ಕಾಗಿ.

ಸೋಮವಾರ, ಮೇ 17, 2021

ಸಾವು ಮತ್ತು ಬುದ್ಧ

 ಸಾವು ಮತ್ತು ಬುದ್ಧ



ಸಾವಿಲ್ಲದ ಮನೆಯ ಸಾಸಿವೆಯ ತರಬಹುದೆ,

ಸಾವಿನುತ್ತರಕೆ ಶತಮಾನಗಳೇ ಬರಿದು.

ನೊಂದವರಿಗಷ್ಟೆ ಗೊತ್ತು ನೋವಿನ ಬೆಲೆಯು

ಭಯದಲ್ಲೇ ಬರಿದಾಗುತಿದೆ ಸಾವಿನ ನೆಲೆಯು.


ಇದ್ದವರದೊಂದು ಕೂಡಿಡುವ ಚಿಂತೆ

ಜೀವವೆಂದರೆ ಲಾಭ ತುಂಬಿಡುವ ಸಂತೆ

ಸೂತಕದ ಮನೆಯಲ್ಲಿ ದೀಪವೇ ಹೇಳುವುದು

ತಲೆಮಾರು ಕಳೆದರೂ ಅಳಿಸದ ಕಲೆಯೆಂದು


ಸಾಲು ಸಾವುಗಳಲ್ಲಿ, ಚಿತೆಯ ಬೆಂಕಿಯ ಕಥೆಯು

ಮಣ್ಣಲ್ಲಿ ಮಣ್ಣಾದ ಶೋಕ ಸ್ಮಶಾನದ ವ್ಯಥೆಯು


ನೋವೆಂದರೇನು?

ಬರಿಯ ಭ್ರಮೆಯೆ, 

ಅನುಭವದ ಮನೆಯೆ, 

ಹಾಸ್ಯ ಆನಂದಕ್ಕಾಗಿ 

ತುಡಿದ ಜೀವಗಳೆಲ್ಲಾ 

ಒಟ್ಟಿಗೆ ಅಳುವುದು, ಕಷ್ಟ ಶಿವನೆ.


ಕಳೆದ ಕಾಲದ ನೆನಪು

ನನಗೂ ನಿನಗೂ ಸಾವು ಅನಿವಾರ್ಯ.

ಸತ್ಯವನು ಮೊದಲು ತಿಳಿ

ಭ್ರಮೆಗಳನು ಕಳಚಿ ನಡೆ

ಬದುಕು ಹೋರಾಟ. 

ಸತ್ಯದಾಟದಲಿ ನಮದೊಂದು ಪಾತ್ರವಷ್ಟೆ.

- ಅಂಕುರ ೧೬.೦೫.೨೧

ಭಾನುವಾರ, ಮಾರ್ಚ್ 21, 2021

ಕವಿತೆ

 ಕವಿತೆ ...



ಚೆಲುವನ್ನೇ ಪೋಣಿಸಿ

ಬೆರಳ ಲೆಕ್ಕದಲಿ ಗುಣಿಸಿ, ಬಾಗಿಸಿ

ಅಕ್ಷರದ ದಾರಿಯಲಿ ಶಿಸ್ತಾಗಿ 

ನಿಲ್ಲಿಸಿದ ಬೆಳಕು ಕಂಬದಂತೆ.


ಕಾಲವನ್ನು ಕೃಷಿಮಾಡಿ

ಮನಸ್ಸಿನ ರೆಕ್ಕೆಗಳಿಗೆ 

ಅನುಭವಗಳ ನೆಯ್ಗೆಯಲಿ

ಹದವಿಟ್ಟ ಪಲ್ಲವಿ


ಅವರಿವರ ನೆನಪುಗಳ

ಶಾಖ ಸಮ್ಮೋಹಕೆ ಸಿಲುಕಿ

ನೇತುಬಿದ್ದ ಸಾಲುಗಳು

ಬಣ್ಣ ಬಳಿದ ಮೂಕಾಭಿನಯ


ಈಗ ಕಾಣುವಾಸೆಯ ಬಿತ್ತಿ

ಇರುವಾಸೆಗಳನೆಲ್ಲಾ ತೊರೆದು

ಅವರಿವರ ಇವರವರ ನೆಚ್ಚಿ

ತನ್ನನ್ನೇ ಮಾರಿಕೊಳ್ಳವ ಹಪಾಹಪಿ


ಏನೇ ಆಗಲಿ,


ಮನಸ್ಸಿಗೆ ಮುದವನ್ನು

ಕನಸಿಗೆ ಹದವನ್ನು

ನುಡಿ-ಬರಹಕೆ ನಾದವನ್ನು

ಸೃಷ್ಠಿ-ದೃಷ್ಠಿಯಲಿ ತರುವ ಚಾಣಚೂರ್ಣ.

- ಅಂಕುರ ೨೧ ಮಾರ್ಚ್ ೨೧

ಶುಕ್ರವಾರ, ಫೆಬ್ರವರಿ 26, 2021

ಪ್ರೇಮ ಉಪಜ್ಞೆ!

 ಪ್ರೇಮ ಉಪಜ್ಞೆ!



ಮಣ್ಣಿನ ಹಸಿ ವಾಸನೆಯಲ್ಲಿ

ನಿನ್ನ ಮನಸನ್ನು ಹರಡಿದ್ದೇನೆ

ಸ್ವಚ್ಛವಾದ ಹಳತಂತೆ ಕಳೆಯಲಿ

ನೆನ್ನೆಯ ಎಲ್ಲಾ ಮೈಲಿಗೆಯು


ಪ್ರೇಮವನ್ನು ಬಸಿದು ಈ ಮಣ್ಣಲಿ

ಮೆಚ್ಚಿನ ಗೊಂಬೆಯನು ಮಾಡು

ಆಕಾರವು, ಅಲಂಕಾರವು ಹೇಗೆ ಇರಲಿ

ನೋಟಗಳ ಕೋಣೆಯಲಿ ಬೆಳಕಾಗಲಿ


ಬಂದೇ ಬರುತ್ತೇನೆ, ಹಚ್ಚಿ ಬಿಡು ಬೆಳಕು

ಕಥೆಗಳೆಲ್ಲವೂ ಸಾವಿಗೆ ಬರುವುದಿಲ್ಲ

ಸೃಷ್ಟಿಯ ಪಥದಲ್ಲಿ ಒಂದಿಷ್ಟು ಕಾಲ

ವಿಹರಿಸೋಣ ವಿರಹಗಳ ಮರೆತು


ನೀನೂ ನಾನು ಅವಳೂ ಅವನೂ 

ಸರಳ ರೇಖೆಯ ಸುಖಗಳು

ರೆಕ್ಕೆಗಳು ಮೂಡಲಿ ಸುಕ್ಕುಗಳ ಕಳಚಿ

ಇದು ಪ್ರಕೃತಿಯ ಪ್ರೇಮ ಉಪಜ್ಞೆ!


-ಅಂಕುರ (ಫೆಬ್ರವರಿ ೨೬)

ಮಂಗಳವಾರ, ಅಕ್ಟೋಬರ್ 27, 2020

ಮನೆಗೆ ಬಂದರು ಮೇಷ್ಟ್ರು

 ಮನೆಗೆ ಬಂದರು ಮೇಷ್ಟ್ರು










ಬಿಳಿಕಚ್ಚೆಯ ಕರಿಕೋಟಿನ

ಶಾಸ್ತ್ರಿ, ಭಟ್ಟರೆಲ್ಲರೂ

ಸವಿಯನುಂಡು, ಕಿವಿಯನಿಂಡಿ

ಎಲೆ ಅಡಕೆ ಮುಡಿ ಮಲ್ಲಿಗೆಯ

ಮನೆಗೆ ಮೇಷ್ಟ್ರು ಇದ್ದರು.


ಉಳ್ಳವರ ಒಲೆಯಲ್ಲಿ

ಭೋಜನ-ಭಾಜನದ ವೇಳೆಯಲ್ಲಿ

ಜಾತಿ-ಧರ್ಮವಿಲ್ಲವೆಂದು

ಸಮಾನತೆಯ ನುಡಿದರು

ಶಾಸ್ತ್ರ, ಕಥೆ, ಕಾವ್ಯಗಳ ಬರೆದರು


ದುಡಿವ ಜನಕೆಲ್ಲಿ ಗುಡಿಯ ಚಿಂತೆ

ದುಡಿಯ ಬಡಿದಂತೆ ದುಡಿದರು

ಎಲ್ಲದಕ್ಕೂ ಹಲ್ಲು ಕಿರಿದರು

ತಲೆಮಾರುಗಳ ತಲೆ ತೂಗಿ

ಹೊಸ ವೇಷಗಳ ತೊಟ್ಟರು


ಅವರು ಬಂದರು ಜೊತೆಗೆ ತಂದರು

ಮೇಷ್ಟ್ರು ಶಾಲೆಗೆ ಎಂದರು

ಪಾಠ ಬಂದಿತು ಬೀದಿಗೆ

ಕಲಿವ ಮಕ್ಕಳು ಕಿಟಕಿ ಗಾಳಿಯ ಕಲಿತು

ಕಿಟಕಿಗಾಗಿಯೇ ದುಡಿಯುತ

ಮನೆಗೆ ಕಿಟಕಿಯಾದರು


ಊರ ಸಂತೆಯ, ಗದ್ದೆ ತೊಗರಿಯ

ಗಾಳ-ದಾಳದ, ಹಾಳು ಬಾವಿಯ

ಚೋಳು  ಚಂದಿರ, ಗೋಳು ಮಂದಿರ

ಕುಣಿವ ಕೈಗಳು ನಿಂತವು

ಹಾಡು, ಕಥೆಗಳು ದನಿಯ ಮರೆತವು


ಯಂತ್ರ ಬಂದಿತು, ಬೆವರು ನಿಂತಿತು

ತಂತ್ರದೊಳಗಿದೆ ತತ್ತ್ವವು

ತನ್ನ ಸುಖವನು ಮರೆತ ಕಲಿಕೆಯು

ಪರರ ಸುಖಕೆ ಮೈಚಾಚಿತು

ಹಗಲು ರಾತ್ರಿ ಎನ್ನದೆ ಹೊಟ್ಟೆ ಬಿರಿಯೆ ಬಾಚಿತು


ಎಲ್ಲಾ ಹೋಯಿತು, ಇಲ್ಲೇ ಹಾಯಿತು

ಮೌಲ್ಯ ಮಾರಿದೆ ಮನವನು

ತಾನು ತತ್ತ್ವ, ನೀನು ಸತ್ತ್ವ

ಹೇಳಲೋಸುಗ ಬಾಳು ಮರೆತು

ಮನೆಗೆ ಬಂದರು ಮೇಷ್ಟ್ರು

ಇದೋ...

ನಿರ್ಜೀವ ನಾಕದಿ ಸಜೀವ ಲೋಕ ಎಂದರು.


- ಅಂಕುರ