ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಸೆಪ್ಟೆಂಬರ್ 2, 2018

ಕೃಷ್ಣ ರಾಧೆಯರ ಕಥೆಯು..

ಕೃಷ್ಣನೆಂದರೆ ಪ್ರೇಮ
ರಾಧೆಯದರ ಭಾವ
ಮನುಜರೋಲಿಕೆಯ
ದೇಹವಿಲ್ಲ, ದಾಹ ಮೊದಲಿಲ್ಲ!

ಕೊಳಲದೋ ಜಗದನಿಯು
ಸವಿದಳು ಮನದನ್ನೆ
ಶೃಂಗಾರ ಮೋಹದಲಿ
ಹುಟ್ಟಿದನು ಕಾಮ
ರತಿಯ ರಮಣಾಂಕಿತದಿ

ನವಿಲು ಚಿತ್ರದ ನಗುವೆ
ಕುಂಚದೊಳಗಿನ ಒಲವೆ
ನೋಟದೊಳಗಿನ ಕೂಟ
ಚಿತ್ತಾರ ಬರೆದ ಚೈತ್ರ ಸಾರ

ಕೃಷ್ಣನೆಂದರೆ ಗೊಂಬೆ
ರಾಧೆಯೊಳು ನೀ ಕಾಂಬೆ
ನನ್ನೊಳಗೆ ನೀ ನಂಬೆ
ಅಂಬಿಗನು ನಾನು
ಜಗದ ಸಂಸಾರದಲಿ- ಅಂಕುರ
*ದ್ಯೋತಕ*

ಹೌದು, ಎನ್ನುವುದಾದರೆ ಹೌದು!
ಇಲ್ಲ ಎಂಬುದಕ್ಕೆ ಸಾಕ್ಷಿಯ ಕೊರತೆ.

ದೇವರೆಂದರೆ
ಕ್ರಿಯಾತ್ಮಕ ನಂಬಿಕೆ
ಇಲ್ಲಿ ಅರ್ಧ ಜನ ಅಜ್ಞಾನಿಗಳು.
ಕಾಲು ಪಾಲು ಮೂರ್ಖರು..
ಉಳಿದವರ ಎದೆಯಲ್ಲಿ
ಉಸಿರಾಟವಿದೆ.

ಧರ್ಮವೆಂದರೆ
ಮನೋ ಚೈತನ್ಯ.
ಇಲ್ಲವೆಂದೂ, ಇದೆಯೆಂದು,
ಒಂದಕ್ಕೆ ಜೋತು ಬಿದ್ದ,
ಹಗಲು ಬಾವಲಿ ಕಥೆಗೆ
ಪೌರೋಹಿತ್ಯ ಕೀಲಿಕೈ.

ಶಿಕ್ಷಣವಿದು ಬೆಳಕು
ಅಂತಃಶಕ್ತಿಯ ಅರಿವು
ನೇತು ಹಾಕಿದ್ದೇವೆ ಅಳತೆ
ಆಯಾಮದಲಿ
ನಾಲ್ಕು ಗೋಡೆಯ ನಡುವೆ
ನಾತವಾಗಿದೆ ಮನಸು
ಕಲಿಯಲಾಗದ ಪ್ರಕೃತಿ
ಈಗ ವಿಕೋಪದ ನೃತ್ಯ ಶಾಲೆ.

ಸಾಕು ಮಾಡುವೆ ಸೊಲ್ಲು
ಹಣದ ಅಳತೆಯ ಗೆಲ್ಲು
ನೀತಿ-ಸೂತಕವಾಗಿ
ದೇಶ ದ್ಯೋತಕವಾಗಿ
ಎಲ್ಲವೂ ಕ್ಷಣ ಮೆಚ್ಚುವ
ತಕ್ಷಣವೇ ಚುಚ್ಚುವ
ತನ್ನೊಳಗೆ ತಾ ಮುಚ್ಚುವ
ಸ್ವಚ್ಛ ನೀರಿನ ನಳಿನಾನನೆ..!-ಅಂಕುರ

ಶುಕ್ರವಾರ, ಆಗಸ್ಟ್ 24, 2018

ಪತ್ರಿಕೆಯ ಪ್ರಕಟಣೆಗಾಗಿ...
ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನ, ಬೆಂಗಳೂರು ಇವರು ದಿನಾಂಕ 26 ಆಗಸ್ಟ್ 2018ರಂದು ಸಮಯ 9.30ಘಂಟೆಗೆ ಶ್ರೀ ಕೃಷ್ಣರಾಜ ಮಂದಿರ, ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ ಇಲ್ಲಿ ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದ ಉದ್ಘಾಟನೆ ಹಾಗೂ ಧ್ವನಿಸಾಂದ್ರಿಕೆ ಮತ್ತು ಸಾಹಿತ್ಯ ಕೃತಿಗಳ ಲೋಕಾರ್ಪಣೆ ಸಮಾರಂಭ ಹಮ್ಮಿಕೊಂಡಿದ್ದಾರೆ. ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ.ಅರವಿಂದ ಮಾಲಗತ್ತಿಯವರು ಈ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾರೆ. ಹಿರಿಯ ಸಾಹಿತಿಗಳು ಮತ್ತು ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಡಾ. ಸಿದ್ಧಲಿಂಗಯ್ಯನವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
  ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷರಾದ ವತ್ಸಲ ಸುರೇಶ್ ಅವರು ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡುವರು. ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದ ಉಪಾಧ್ಯಕ್ಷರಾದ ಪ್ರಕಾಶ್ ಜೈನ್, ಖಜಾಂಚಿಗಳಾದ ಡಿ. ಎಸ್. ಮಂಜುನಾಥ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ. ಶಿವಕುಮಾರ ಮಾಲಿ ಪಾಟೀಲ್, ಪ್ರಸಾದ್ ನಾಯಕ್, ಹಿರಿಯ ರಂಗಕರ್ಮಿ, ನಟ, ನಿರ್ದೇಶಕರಾದ ಸೇತುರಾಂ, ಕಲ್ಲುಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಸವರಾಜು, ನಿರಂತರ ಪ್ರಕಾಶನದ ಪ್ರವೀಣ್ ಜಾಗಟ ಮತ್ತು ಚಂದ್ರಕೀರ್ತಿ, ಸಾಹಿತಿಗಳಾದ ವಾಸುದೇವ್ ನಾಡಿಗ್ ಮೊದಲಾದವರು ಉಪಸ್ಥಿತರಿರುತ್ತಾರೆ. ಈ ಕಾರ್ಯಕ್ರಮದಲ್ಲಿ ‘ಒಲವನಾದ’, ‘ಭಾವದಲೆಗಳು’, ‘ಭಾವತೀರದಲ್ಲಿ’ ಈ ಮೂರು ಧ್ವನಿಸಾಂದ್ರಿಕೆಗಳು ಮತ್ತು ಬಣ್ಣದ ಗರಿ(ಕವನಸಂಕಲನ), ಬಣವೆ(ಕಥಾ ಸಂಕಲನ), ಅಡಿಗಲ್ಲು(ಲೇಖನ ಸಂಕಲನ) ಸಾಹಿತ್ಯ ಕೃತಿಗಳು ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದ ಸದಸ್ಯರೆಲ್ಲಾ ಸೇರಿ ರಚಿಸಿದ ಈ ಎಲ್ಲಾ ಸಾಹಿತ್ಯ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಕಾರ್ಯಕ್ರಮದಲ್ಲಿ ಕುಮಾರಿ ಪ್ರಜ್ಞ ಮರಾಠೆ ಮತ್ತು ಶ್ರೀ ಚೇತನ್ ರಾಮ್ ಅವರು ಗೀತ ಗಾಯನ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಧನಕೇರಿಯ ಸರ್ವ ಸದಸ್ಯರೂ ಹಾಗೂ ಸಹೃದಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ಶಿವಾನಂದ ಬಡಿಗೇರ್ ಅವರು ಸ್ವಾಗತಿಸುತ್ತಾ, ಶ್ರೀ ಲೋಕೇಶ್ ಅವರು ವಂದನಾರ್ಪಣೆ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮವನ್ನು ಶ್ರೀಮತಿ ಅನಿತ ಕೆ.ವಿ ಹಾಗೂ ರವಿಶಂಕರ್ ಎ.ಕೆ ಅವರು ನಿರೂಪಿಸಿ ನಿರ್ವಹಿಸಲಿದ್ದಾರೆ.




ಇದೇ ಕಾರ್ಯಕ್ರಮದಲ್ಲಿ ಬಣವೆ ಸಂಕಲನದಲ್ಲಿ ನನ್ನ ಮೊದಲ ಕಥಾ ಬರಹ ಮಂದಣ್ಣ ಎಂಬ ಸೃಜನಶೀಲ ಬರಹ ನಿಮಗೆ ನೀಡುತ್ತಿದ್ದೇನೆ.
ಪ್ರಕಟಗೊಳ್ಳುವ ನನ್ನ ಸಾಹಿತ್ಯ
*ಕವಿತೆಗಳು- ಮೆಲುಕು, ತಂಗಾಳಿ ಕೂಗಿದಾಗ(ಬಣ್ಣದ ಗರಿ)
ಕಥೆ- ಮಂದಣ್ಣ(ಬಣವೆ)
ವಿಮರ್ಶೆ-ಪಂಪನ ಸಾಹಿತ್ಯದಲ್ಲಿ ಪ್ರಕೃತಿ
ಬಸವಣ್ಣನ ವಚನಗಳಲ್ಲಿ ವೈಚಾರಿಕತೆ

ನನ್ನ ಎಲ್ಲಾ ಆತ್ಮೀಯರಿಗೂ ಸಹೃದಯ ಸ್ವಾಗತ..

ಸೋಮವಾರ, ಅಕ್ಟೋಬರ್ 9, 2017

ನವರಂಗದೊಳಗೆ ನಾಟ್ಯರೂಪ


ದಸರಾ ವಿಚಾರವಲ್ಲ. ನವರಾತ್ರಿ ಎಂದರೆ ಈಗ ಎಲ್ಲಾ ಕಡೆಯೂ ನವರಾತ್ರಿ ಹೆಸರಿನಲಿ ಮನೆಯಿಂದ ಬೀದಿಯೊಳಗೂ ಸಂಭ್ರಮವಾಗಿರುವ ನವರಾತ್ರಿ ವಿಚಾರ ಎಲ್ಲರಿಗೂ ತಿಳಿದ ವಿಚಾರ.

ಸಾವಿರ ಕಂಬಗಳ ಬಸದಿ ಎಂಬುದೇ ಭಾರತದಲ್ಲಿ ಪ್ರಸಿದ್ಧ ಸ್ಥಳ.  ಇದು ಜೈನರ ಕಾಶಿ. ಕರ್ನಾಟಕದ ದಕ್ಷಿಣ ಕನ್ನಡದೊಳಗೆ ಮೂಡಿರುವ ಕರಾವಳಿಯ ಚಂದ್ರನಾಥ ಬಸದಿ ಇದು. ಈ ಬಸದಿಯಲ್ಲಿನ ಮಾಹಿತಿ ಎಲ್ಲಾ ಕಡೆಯೂ ಲಭ್ಯ ಇರುವ ಕಾರಣ ಇದರ ಮಾಹಿತಿಯೂ ಸೂಕ್ತವಲ್ಲ. ನವರಂಗ ಎಂದರೆ ಹಲವು ವಿಚಾರಗಳಿಗೆ ಮುಖ್ಯ ವೇದಿಕೆ. ದೇಗುಲಗಳ, ಬಸದಿಗಳ ಮುಂಭಾಗದ ನಡುವಣ ಇರುವ ಪ್ರಾಂಗಣ ಕೆಲವು ವಿಶೇಷತೆಯನ್ನು ಹೊಂದಿದೆ. ಇದು ಪ್ರಾಚೀನತಮ ಮುಖ್ಯ ಭೂಮಿಕೆಯನ್ನು ಅನಾವರಣಗೊಳಿಸುತ್ತಾ ಬಂದಿದೆ. ಪ್ರತಿಭೆಗಳ ಮೊದಲ ಪ್ರದರ್ಶನ ಇಲ್ಲಿಯೇ ಅನಾವರಣವಾಗಬೇಕಾಗಿತ್ತು. ದೇವರ ಮುಂಭಾಗದ ಈ ಪ್ರದರ್ಶನ ತುಂಬಾ ಭಕ್ತಿಯಿಂದ ಜರುಗುತ್ತಿತ್ತು.

      ಮೂಡಬಿದರೆ ಸಾವಿರ ಕಂಬಗಳ ಬಸದಿಯ ನೆನಪಿನ ಕಾಶಿಯಾಗಿ ಒಂದು ಅರ್ಥವಾದರೆ. ಇನ್ನೊಂದು ಪ್ರಶಿದ್ಧಿಯನ್ನು ವಿಶ್ವಕ್ಕೆ ಪಸರಿಸಿದ್ದು ಆಳ್ವಾಸ್ ಶಿಕ್ಷಣ ಸಂಸ್ಥೆ. ಇದೊಂದು ಶಿಕ್ಷಣ ಸಂಸ್ಥೆಯಾಗಿ ನೋಡಿದರೆ ನಮಗೆ ಯಾವ ಅನುಭವವೂ ದೊರಕದು. ಇದು ಉತ್ತಮ ಶಿಸ್ತನ್ನೇ ತನ್ನತನವಾಗಿಸಿಕೊಂಡು ಮಕ್ಕಳ ಉನ್ನತ ಶಿಕ್ಷಣದ ಕನಸಿನೊಳಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ವಿಶಿಷ್ಟ ಸಾಹಸಗಳನ್ನು ತರುತ್ತಿರುವ ಪ್ರಯೋಗ ಶಾಲೆ.
ವಿಶ್ವ ಪ್ರವಾಸಿ ದಿನದ ಪ್ರಯುಕ್ತ ಸಾವಿರ ಕಂಬದ ಬಸದಿಯೊಳಗೆ ಸಾಂಸ್ಕೃತಿಕ ವೈಭವ ಸಾರುವ ಭಕ್ತಿ ಹಾಗೂ ಭಾವನಾತ್ಮಕ ಜಗತ್ತಿನ ಅನಾವರಣಕ್ಕೆ ವೇದಿಕೆ ಸಜ್ಜುಗೊಳಿಸಲಾಯಿತು. ಆದರೆ ಮಳೆಯ ಹೊಸ ಅರ್ಥ ನಾಡಿಗೆ ಬರೆದಾಗ ಕರಾವಳಿಯಲ್ಲಿ ಸುಮ್ಮನಿರುವುದೇ.. ಆದರೂ ಮೋಹನ ಆಳ್ವರು ಬದ್ಧತೆಗೆ ಪ್ರಮಾಣಿಕರು. ಮಕ್ಕಳು, ಒಂದಿಷ್ಟು ಕಲಾಸಕ್ತರು, ಚಾರುಕೀರ್ತಿಗಳು ಎಲ್ಲಾ ಬಂದರು. ೮೦ಅಡಿಗಳಲಿ ರಾಮಕಥೆ, ಮಣಿಪುರದ ದೋಲ್ಚಲಮ್, ಶ್ರೀಲಂಕಾ ಡೋಲಿನ ವೈಭವ ಇವೆಲ್ಲಾ ಮೈಚಳಿ ಮರೆತು ಕುಣಿಯುವ ನರ್ತಿಸುವ ವೈಭವಗಳು.
೨೦ಅಡಿಯೊಳಗಿನ ನವರಂಗಕೆ ಹೊಂದಿಸಿದರೆ ಏನಾಗಬಹುದು. ದೊಡ್ಡ ವೇದಿಕೆ ನಿರ್ಮಿಸಿದ ಬೆವರಲ್ಲಿ ಮಳೆಯ ಮಂದಿರವಾಯಿತು. ವೇದಿಕೆಯನ್ನು ರಂಗುಗೊಳಿಸಬೇಕಾದ ಬೆಳಕುಗಳು ನವರಂಗಕೆ ಬಂದವು. ಸದಾ ಮೌನವಾಗಿದ್ದ ಸಾವಿರಾರು ಕಂಭಗಳಿಗೂ ಸಂಗೀತದ ಆಲಾಪನೆಯ ಭವ್ಯ ಸಂಸ್ಕಾರ. ನರ್ತಿಸುವ ವಿಧ್ಯಾರ್ಥಿಗಳಿಗೆ ನವರಂಗದ ಮೊದಲ ಕಲಾ ಸಂಸ್ಕಾರ.
  https://kn.m.wikipedia.org/wiki/%E0%B2%B8%E0%B2%BE%E0%B2%B5%E0%B2%BF%E0%B2%B0_%E0%B2%95%E0%B2%82%E0%B2%AC%E0%B2%A6_%E0%B2%AC%E0%B2%B8%E0%B2%A6%E0%B2%BF

ಭಾನುವಾರ, ಆಗಸ್ಟ್ 27, 2017

*ಎನಿಸುತ್ತದೆ*

 ಒಬ್ಬನೇ ಏಕಾಂತ
ವಹಿಸೋಣ
ಎನಿಸುತ್ತದೆ,

ಯಾರಿಗೂ ಅರ್ಥವಾಗದ
ದನಿಯ ನಿಲ್ಲಿಸೋಣ
ಎನಿಸುತ್ತದೆ,

ನಮ್ಮನ್ನೇ ನಾವು
ನೀಡುತ್ತಾ ಬೇಡುತ್ತಾ
ನನ್ನನಿಮ್ಮೊಳಗೆ
ಕಾಣಲೊರಟ ಎನಗೆ
ನನ್ನ ತನವನ್ನೇ
ಕ್ಷಣ ನೋಡದೆ, ಕಾಡದೆ..
ನಮ್ಮವರೆಲ್ಲ
ದೂರವಾಗುವಾಗ
ನನಗೆ ನಾನೇ
ಅನರ್ಥ
ಎನಿಸುತ್ತದೆ

ಆ ಕಾಡಿನ ಆ ಕೂಗಲಿ
ಒಬ್ಬನೇ ಸುತ್ತುವ ಪರಿಯು
ನೀರಲಿ ಬೆರಳುಗಳ
ಅರಳಿಸುವ ಆ ಹೊಳಪು
ನನ್ನ ಪೂರ್ಣ ರಾಜ್ಯ
*ನಾನಲ್ಲಿ ಮೌನಿ, ಚಿರಸುಖಿ*.
-ಅಂಕುರ

ಭಾನುವಾರ, ಆಗಸ್ಟ್ 20, 2017

ಜಾನಿಕೆ! - ಅಂಕುರ


ಜಾನಿಕೆ!


ಸೀತಾ!
ನೀನೊಬ್ಬಳೇ ಹೀಗೆ..
ಅದೇ ರಾಮನ ನೆನೆದು
ಚಿತ್ರಪಟದಲಿ ಕನಸು
ಸುತ್ತಿ ಬೇಯುತ್ತಾ
ಸೌಮ್ಯದಲಿ ಕುಳಿತ ಹೆಣ್ಣು!
ರಾಮ ಬದಲಾಗಿ ಎಷ್ಟು ದಿನವಾಯ್ತು!
ಅವನೀಗ ಭಜನೆಯ
ಪಾತ್ರಧಾರಿ..

ಸೀತಾ!
ನಿನ್ನ ಕಷ್ಟಗಳಿಗೆಲ್ಲ
ಸಿಕ್ಕಿತೇ ಉತ್ತರ
ನೊಂದ ನೋವುಗಳಿಗೆ
ಪ್ರಶ್ನೆಯಾದರೂ
ಹುಟ್ಟಿತೇ ಹೇಳು..
ನೀ ಮಾಡಿದ ಪುಣ್ಯಕೆ
ನಿನ್ನ ಏಕಾಂತವೂ ಸ್ವರ್ಗ..

ಸೀತಾ!
ರಾಮ ವೇಷಧಾರಿಯಾದ
ನಾನೀಗ ಅಪರಾಧಿ..
ನಿನ್ನ ಒಂಟಿಯೇ ಬಿಟ್ಟು
ಗುಡಿಯಲಿ ಗೊಂಬೆಯ ಹಾಗೆ
ನಿನ್ನ ಜೊತೆ ನಿಂತು
ಜನ ಮೆಚ್ಚಿಸುವ ಢಾಂಬಿಕ
ಸೋಲುವ ಮುನ್ನ
ಧರ್ಮವ ತೊಳೆಯಲೇ ಬೇಕು
ಸೀತೆ ಇಳೆಗಿಳಿಯಲಿಲ್ಲ
ನೋಡಿ ನನ್ನೊಳಗೆ ಅವಳೀಗ 
ಭದ್ರಕೋಟೆಯೆಂದು
ಲೋಕದ ಕಣ್ಣಿಗೆ ಕಾಣಬೇಕು
ಮನದ ಕಣ್ಣಿಗೆ ನಿನ್ನ ನಾ ಪೂರ್ಣನಾಗಬೇಕು..

ಸೀತಾ,
ಕ್ಷಮಿಸು ನಿನ್ನ ಏಕಾಂತದ
ಈ ಭಗ್ನ ಮೂರ್ತಿಯನ್ನು... - ಅಂಕುರ

 ಜಾನಿಕೆ ಎಂದರೆ ಮೌನದೊಳಗಿನ ಧ್ಯಾನ
 


ಜಾನಿಕೆ ಕುರಿತು ಚಿಂತನೆಗಳು...
    ರಾಮಾಯಣವನ್ನು ಪುರಾಣ ದೃಷ್ಠಿಯಲ್ಲೇ ನೋಡುತ್ತಾ ಅದರ ಪಾತ್ರಗಳಿಗೆ ನ್ಯಾಯ ಒದಗಿಸುತ್ತಾ ಬಂದಿರುವ ನಮ್ಮ ಕವಿಗಳ ಪ್ರಯತ್ನ ದಿನದಿಂದ ದಿನಕ್ಕೆ ಹೊಸ ರೂಪಕವಾಗಿದೆ ವಾಲ್ಮೀಕಿ ವನಕ್ಕೆ. ಆದರೆ ರಾಮಾಯಣವನ್ನು ಆಧ್ಯಾತ್ಮಿಕವಾಗಿಯೂ ಗಮನಿಸುವಾಗ ದೈವೀಪುರುಷ ರಾಮ ವಿಧಿಯ ಲೀಲೆಯನ್ನು ಧರ್ಮಾರ್ಥವಾಗಿ ನಿರ್ವಹಿಸುತ್ತಾನೆ. ರಾಮಾಯಣದಲ್ಲಿ ಹಲವು ಮೌನಗಳಿವೆ, ಹಲವು ಧ್ಯಾನಗಳಿವೆ. ರಾಮನಿಗೆ ಸೀತೆಯ ವಿರಹವಿದ್ದರೂ ಧ್ಯಾನಕ್ಕೆ ತಲ್ಲೀನನಾಗುವುದು. ಹನುಮಂತನಂತಹ ಪಾತ್ರವೂ ಧ್ಯಾನದೊಂದಿಗೆ ಸಂಗೀತಗಳಲ್ಲಿ ಮಹತ್ ಸಾಧಕನಾಗುವುದು ವಿಶಿಷ್ಠವಾಗಿ ನೋಡುತ್ತಲೇ ಬಂದಿದ್ದೇವೆ. ಆದರೆ ಈ ಮೌನದೊಳಗಿನ ಧ್ಯಾನವನ್ನು ಯಾರೂ ತುಂಬಲಾಗಲಿಲ್ಲ.. ರಾಮನಂತೂ ಅದಕ್ಕೆ ಮತ್ತೆ ಮತ್ತೆ ಧರ್ಮಾರ್ಥವಾಗಿ ಪೆಟ್ಟು ನೀಡುತ್ತಲೇ ಬಂದನು. ಹನುಮಂತ, ಲಕ್ಷ್ಮಣ ಇವರಿಗೆಲ್ಲಾ ತಿಳಿಯಲು ಇನ್ನು ಅದೆಷ್ಟು ಶತಮಾನ ಬೇಕೋ! ರಾಮನನ್ನು ಶ್ರೀರಾಮನನ್ನಾಗಿ ನೋಡಿದ ಮೇಲೆ ಅವನ ತಪ್ಪುಗಳು ಧರ್ಮ ಕಾರ್ಯಗಳೇ ಆಗಿಬಿಡುತ್ತವೆ. ಹಾಗೇಯೇ ನಮ್ಮ ವಾಸ್ತವದ ಅದೆಷ್ಟೋ ಬೆಳಕಿನ ಕಿನ್ನರ ಜಗತ್ತು ನಿರ್ವಹಿಸುವ ತಪ್ಪುಗಳು ಸತ್ಯದ ಬಟ್ಟೆತೊಟ್ಟು ಇದೇ ವಾಸ್ತವ ಅನಿಸಿಕೊಂಡಿವೆ. ರಾಮಾಯಣದಲ್ಲಿ ಸೀತೆಗೆ ಅನ್ಯಾಯವಾಗಿದೆ ಎಂಬಂತೆ ನೋಡಿದ ವಿಮರ್ಶಾ ಪಂಥವೊಂದಿದೆ. ಚಿತ್ರಪಟ ರಾಮಾಯಣದಿಂದ, ಸೀತಾಯಣ ಹೀಗೆ ಇತ್ತೀಚಿನ ಉತ್ತರಕಾಂಡದವರೆಗೂ ಸೀತೆಗೆ ನ್ಯಾಯಕೊಡಿಸುವ ಬರಹಗಳೇ ಬಂದವು. ಆದರೆ ಸೀತೆ ವಾಲ್ಮೀಕಿಕಥೆಯಿಂದ ಬದಲಾಗಬಹುದೇ.. ಆಧುನಿಕ ಸೀತಾಸಂವತ್ಸರಗಳು ಜರುಗದಿರುವವೇ.. ಇದು ಬದಲಾವಣೆಯಲ್ಲ ಬರೀ ಬೆಳಕೇ ಹೊರೆತು ಕ್ರಿಯೆಯಲ್ಲ. ಅಗತ್ಯವಾಗಿ ಬೇಕಾಗಿರುವುದು ಸೀತೆಯರ ಕಥೆಗೆ ರಾಮನ ಉತ್ತರ ಬೇಕು ಈಗ ಸೀತೆ ಜಾನಿಕೆ.
    ಸೀತೆ ರಾಮಾಯಣದಲ್ಲಿ ಕೋಪಗೊಳ್ಳಲಿಲ್ಲ, ಕಣ್ಣೀರು ಹಾಕಲಿಲ್ಲ ಏಕೆಂದರೆ ಆಕೆಯದು ಪತಿಭಕ್ತಿಯ ವ್ರತವೆಂದು ಕವಿ ಅಣೆಪಟ್ಟಿ ಕಟ್ಟಿದ ಮೇಲೆ ಸೀತೆಗೆ ಹೇಗೆ ಇವೆಲ್ಲಾ ಸಾಧ್ಯ. ಆದರೆ ಬರಹಗಾರನ ಬಲವಂತದ ಮಾತುಗಳನ್ನು ವ್ಯಾಕರಣದ ಹಾದಿಯಿಂದ ಛಂದಸ್ಸಿನ ಬೀದಿಯಲ್ಲಿ ನುಡಿದರೂ ಇದು ಕೇವಲ ಸೀತೆಯ ಪಾತ್ರದ ದುಡಿಮೆ. ಆದರೆ ನಿಜವಾದ ಸ್ವರೂಪವನ್ನು ಕಣ್ತೆರೆದು ನೋಡಿದರೆ ಸೀತೆಯದು ಜಾನಿಕೆಯ ಸ್ಥಿತಿ. ಅಂದರೆ ಮೌನದೊಳಗಿನ ಧ್ಯಾನ. ಆಕೆ ಎಲ್ಲದಕ್ಕೂ ಮೌನವಾಗಿ ಉತ್ತರಿಸಿದ್ದಾಳೆ. ಧ್ಯಾನದಲ್ಲಿಯೇ ಉತ್ತರ ಕಂಡುಕೊಂಡಿದ್ದಾಳೆ ಸೀತೆಗೆ ಪ್ರಶ್ನೆಗಳು ಹುಟ್ಟಲೇ ಇಲ್ಲ ಹುಟ್ಟಿದರೂ ಅದೊಂದು ಉಪಮೆಯ ಹೊಸಬರಹ. ಇಂತಹ ಜಾನಿಕೆ ಸ್ಥಿತಿಯಲ್ಲಿ ಹಲವು ಸ್ವರೂಪಕ್ಕೆ ಸಿಕ್ಕಿ ಮೌನವಾಗಿರುವ ಹೆಣ್ಣುರೂಪಗಳು ನಮ್ಮ ಸಮಾಜದಲ್ಲಿವೆ. ಇವರಿಗೆ ನ್ಯಾಯಕೊಡುವ ಬರಹ ನಮ್ಮದಲ್ಲ.. ಇವರಂತಾಗದೆ ಹೆಣ್ಣಿನ ಕಣ್ಣು ತೆರೆಸುವುದು ಹಾಗೂ ರಾಮನೊಳಿಗಿನ ಅಂತಃಕರಣವನ್ನು ತೆರೆದು ಸೀತೆಗೆ ತನ್ನ ತಪ್ಪನ್ನು ಒಪ್ಪಿಕೊಂಡು ಕಥೆಯ ರಾಮನ ವಿಧಿಯ ಲೀಲೆಯ ಶಮನಮಾಡಿ ಮನುಷ್ಯ ರಾಮನನ್ನು ಕಣ್ತೆರೆಸಿ ಸೀತೆಗೂ ಜೀವ-ಜೀವನ ಇದೆ ಎಂಬುದನ್ನು ರಾಮನಿಂದಲೇ ಅರ್ಥೈಸುವುದು. ಕಾಲೇಜು ಹಂತದಲ್ಲಿ ಕಣ್ತೆರೆಯಬೇಕಾದ ವಿಶ್ವಪ್ರಜ್ಞೆಯ ಜೀವನ ಪ್ರೀತಿಯನ್ನು ಇಂದಿನ ವ್ಯಾಪಾರಿ ಜಗತ್ತು ಮೊಸಳೆಯಾದಿಯಲಿ ನುಂಗುತಿದೆ. ಸಿನಿಮಾ, ಮಾಧ್ಯಮ, ಪೋಷಕ ಜಗತ್ತು, ಸಾಹಿತ್ಯ ಜಗತ್ತು ಪ್ರಶ್ನಿಸಿಕೊಳ್ಳಬೇಕಿದೆ. ಪ್ರೀತಿಯನ್ನು ಕಾಮವ್ಯಾಮೋಹದಲಿ ತೊಳೆಯುವ ಅನೈತಿಕತೆ ದೂರವಾಗಬೇಕಿದೆ. ಮೌನಕೆ ಧರ್ಮದ ಪೆಟ್ಟು ಇಲ್ಲಿ ಅನಗತ್ಯ. ಧರ್ಮವೆಂದರೆ ಮನುಷ್ಯನನ್ನು ರೂಪಿಸುದೇ ಹೊರೆತು ಹಿಂದಿನಿಂದ ನಿರ್ಮಿಸಿಕೊಂಡು ಬಂದುದಲ್ಲ ಎಂಬ ಸಂದೇಶ ಸಮಾಜಕ್ಕೆ ಮೌನದೊಳಗಿನ ಧ್ಯಾನ ಉತ್ತರಿಸಬೇಕೆದೆ ಸಕಲರೂ ಈ ಕುರಿತು ಚಿಂತಿಸುವ ಪ್ರಯತ್ನ ಮಾಡೋಣ.
 

ಭಾನುವಾರ, ಆಗಸ್ಟ್ 13, 2017

ಓ ಪಾರಿಜಾತ

ಓ ಪಾರಿಜಾತ...



ಸೂರ್ಯನಿಲ್ಲದ ವೇಳೆ
ಕೃಷ್ಣ ತಂದನು ಹೂ
ಪಾರಿಜಾತ ಇವಳು ಭಗ್ನಪ್ರೇಮಿ!
ಸತ್ಯಭಾಮೆಯ ಮನೆಯ
ಅಂಗಳವು ಇನ್ನು ವಿರಹ ಕಾಂತಿಯ
ಕಥೆಗೆ ಕೃಷ್ಣಲೀಲೆ!


ಕೇಸರಿಯ ಕಾಂಡದಲಿ
ಬಿಳಿಯ ಚಂದನಲೀಲೆ
ಪರಿಮಳಕೆ ಪ್ರೇಮವು
ರಾತ್ರಿ ರೂಪ
ಬುದ್ಧನ ಸ್ತೂಪದಲೂ
ನಿನ್ನ ಹಾಸಿದ ಅರಿವೆ
ಶಾಂತಿಯಲಿ ಬಂದ ಪ್ರೇಮ ಬಾಲೆ!
ಕ್ಷೀರಸಾಗರದಲ್ಲಿ
ಮಥನದ ಯುದ್ಧಗಳು

ದೇವತೆಗೂ ರಾಕ್ಷಸರ ಪಾಠವಾಯ್ತು.


ಸುರಭಿ, ವಾರಿಣಿಯ ಗೆಳತಿ
ಸುಂದರ ಮಧುಕನ್ಯೆ
ಬಂದಳು ಪ್ರೇಮದಲಿ ಪಾರಿಜಾತ
ಇಂದ್ರನ ಮೋಹದಲಿ
ವಿಷ್ಣುವಿನ ದಾಹದಲಿ
ಪ್ರೇಮ ಮಂದಿರ ವೃಕ್ಷ
ನಿನ್ನ ಜನ್ಮ ಲೀಲೆ!


ಭರತ ಭೂಮಿಯ ಮಗಳೆ
ಕೋಮಲಾಂಗಿಯ ಕನ್ಯೆ
ಪಂಪನ ಕಾವ್ಯಕೂ ಕೈಪಿಡಿಯ
ವರ್ಣನೆ ಓ ಕಬ್ಬಿಗನ ಮಗಳೇ
ಪ್ರಕೃತಿಗೆ ನಿನ್ನ ಸುಗಂಧ ಲೀಲೆ!

ಮಾತೆಂಬ ಮೈಲಿಗೆ...


 

          ಭಾರತ ಸಂವಿಧಾನವು ಪ್ರಾರಂಭವಾಗುವುದೇ ‘ನಾವು ಭಾರತೀಯ ಜನರು’ ಎಂಬ ತತ್ತ್ವದ ಅಡಿಪಾಯದಲ್ಲಿ ಆದ್ದರಿಂದ ಇಲ್ಲಿ ಪ್ರತಿಯೊಬ್ಬರಿಗೂ ಮನುಷ್ಯ ಗುಣವಿದೆ. ಅದನ್ನು ಕಾಪಾಡುವುದು ಪ್ರತಿಯೊಬ್ಬರ ಜವಬ್ದಾರಿ.
          ಅಕ್ಷರಗಳಿಗಿರುವ ಮೌಲ್ಯ, ಮಾತಿಗೆ ದೊರಕದೇ ಇರುವುದು ಇಂದು ವಿಪರ್ಯಾಸ. ಯೇಸು ಶಿಲುಬೆಯಲ್ಲಿ ಹೇಳಿದ ಕೊನೆಯ ದನಿ ‘ಅಪರಾಧಿಗಳನ್ನು ಕ್ಷಮಿಸು’ ಎಂಬ ಮಹತ್ವದ ಮಾತು ಇಲ್ಲಿ ಅನಿವಾರ್ಯ.

           ಸಮಾಜದ ಜನತೆಗೆ ತಮ್ಮ ಇರುವಂತಿಕೆಯನ್ನು ಗುರ್ತಿಸಿಕೊಳ್ಳುವ ಜವಬ್ದಾರಿ ಅಗತ್ಯವಿದೆ. ನಾವು ಕೂಡ ಈ ಸಮಾಜದ ಒಂದು ಭಾಗ. ಅದರೊಳಗೆ ನಮ್ಮ ಪಾತ್ರವೇನು ಎಂಬ ಅಂಶವನ್ನು ಸ್ವಯಂ ಕಲಿಕೆಯ ಪ್ರಾಮಾಣಿಕತೆ ಅಗತ್ಯವಿದೆ. ಮನುಷ್ಯನು ಮನುಷ್ಯನನ್ನೇ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆಯ ಪ್ರವೇಶ ಪಡೆಯುವುದಾದರೆ ಭಾರತೀಯ ಸಂಸ್ಕøತಿಯ ಅರ್ಥವೇನು? ಮನುಷ್ಯ ಸದಾ ಇರುವಂತಿಕೆಯನ್ನು ಗುರ್ತಿಸಿಕೊಳ್ಳುವಾಗ ತಾನು ಯಾವ ಹಾದಿ ಹಿಡಿದಿರುವೆ ಎಂಬ ಚಿಂತನೆ ಅಗತ್ಯವಿದೆ. ಸಮಾಜವನ್ನು ರೂಪಿಸುವ ಅದರಲ್ಲೂ ಶಿಕ್ಷಣದ ನೈತಿಕ ಜವಬ್ದಾರಿಯನ್ನು ಪೂರೈಸಿದ ಕೆಲವು ಮುಖಗಳು ಸಮಾಜದ ಜ್ಞಾನವನ್ನು ಮುಸುಕಿನಲ್ಲಿ ದರ್ಶನಮಾಡಿಸುವ ಹೊಣೆ ಹೊತ್ತಿರುವುದು ವಿಪರ್ಯಾಸ!
          ಈ ಲೇಖನದಲ್ಲಿ ಎರಡು ಅಂಶಗಳನ್ನು ಚರ್ಚಿಸುವ ಪ್ರವೇಶಿಕೆಯನ್ನು ಕಾಣುತ್ತಿದ್ದೇನೆ ನೀವು ಇದನ್ನು ವಿಸ್ತರಿಸಬಹುದು.


ನಿರೂಪಕರಿಗೆ ನಿರ್ಣಯಿಸುವ ಸ್ವಾತಂತ್ರ್ಯ ನೀಡಿದವರಾರು?
ಮಾಧ್ಯಮಗಳಲ್ಲಿ ಇಂದು ನಿರೂಪಕರ ಸಂಖ್ಯೆ ಗಂಟೆ ಲೆಕ್ಕದ ಕೂಲಿಯಾಗಿದೆ. ಆದರೆ ತಮ್ಮ ಕರ್ತವ್ಯದ ದಿಕ್ಕನ್ನೇ ಮರೆತ ಇವರು ಪ್ರತಿನಿತ್ಯ ಜರುಗುವ ಘಟನೆಗಳಲ್ಲಿ ರೆಕ್ಕೆ ಪುಕ್ಕಗಳು ದೊರೆತ ಅರೆಬರೆ ವಿಷಯಗಳನ್ನು ವಿಸ್ಮಯದಂತೆ ಹಾರಿಸುವ ನೈತಿಕ ಜವಬ್ದಾರಿಯಲ್ಲಿ ಇವರಿಗೆ ದಕ್ಕಿರುವ ಜ್ಞಾನವಾದರೂ ಎಷ್ಟು! ಒಂದು ಘಟನೆಗೆ ಸಾಕ್ಷಿಯೇ ಇನ್ನೂ ತನಿಕೆಯ ಕಾರ್ಯದಲ್ಲಿ ತೊಡಗಿರುವಾಗಲೇ ನಿರ್ಣಯಿಸುವುದು ಎಷ್ಟು ಸಮಂಜಸ. ಸಮೂಹ ಮಾಧ್ಯಮವೆಂಬುದು ನಾಲ್ಕನೆಯ ಅಂಗವೆಂದು ಕರೆದುಕೊಂಡು ಸ್ವಯಂ ಘೋಷಿತರು ಸಂವಿಧಾನ ಪಾಲನೆಯೊಂದಿಗೆ ಜನರ ರಕ್ಷಣೆಯ ಹೊಣೆಯೇನು? ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯವನ್ನು ಎಷ್ಟು ಜನರು ಅಧ್ಯಯನ ಮಾಡಿ ಬಳಸುತ್ತಿದ್ದಾರೆ. ಆಸ್ಪತ್ರೆಗೆ ಬಂದವರೆಲ್ಲಾ ರೋಗಿಯೇ! ಮಾಧ್ಯಮದವರಿಗೆ ಮಾಹಿತಿಯನ್ನು ಪೂರ್ಣ ಪರಿಶೀಲನೆಯೊಂದಿಗೆ ಪಡೆದು ಜನರಿಗೆ ನ್ಯಾಯಬದ್ಧವಾಗಿ ತಲುಪಿಸುವ ಜವಬ್ದಾರಿಯೇ ಹೊರೆತು ಬ್ರೇಕಿಂಗ್ ನ್ಯೂಸ್‍ಗಳ ಮೂಲಕ ಬಣ್ಣ ಹಚ್ಚುವ ಟಿ ಆರ್ ಪಿ ಸಂಸ್ಕøತಿಯಲ್ಲ. ಇದು ಆಡಳಿತ ವಲಯಕ್ಕೆ ತಿಳಿಯದೇ ಕೀಲಿ ಗೊಂಬೆಯಾಗಿರುವ ಅಧಿಕಾರಿಗಳ ವರ್ಗವನ್ನು ಕಂಡು ನಾಚುವ ಕಾಲ ಕಣ್ಣೆದುರಿದೆ. ಅಧಿಕಾರದಲ್ಲಿರುವ ಉತ್ತಮ ಆಡಳಿತಗಾರನನ್ನು ವ್ಯಂಗ್ಯವಾಗಿ ಬಿಂಬಿಸುವ ಮಾಧ್ಯಮಗಳು ಜನರ ತಿಳುವಳಿಕೆಗೆ ಯಾವ ಅಂಶವನ್ನು ನೀಡುತ್ತಿದ್ದೇವೆ ಎಂಬ ಅರಿವನ್ನು ಯೋಚಿಸುವುದಿಲ್ಲವೇಕೆ! ಅನಗತ್ಯವನ್ನು ಬಿಂಬಿಸುವಷ್ಟು ಅಗತ್ಯವನ್ನು ತಲುಪಿಸುತ್ತಿಲ್ಲವೇಕೆ? 


ಯುವಕರಿಗೆ ದೊರೆತ ಮಾತಿನ ಮೈಲಿಗೆ..
ಯುವಕರೆಂದರೆ ಬೆಂಕಿಯ ರೂಪಗಳು, ಸಮಾಜದ ಹೊಸರೂಪಗಳು ಎಂಬ ಆಶಾಭಾವನೆಯನ್ನು ನಮ್ಮ ಹಿರಿಯ ವರ್ಗ ನೀಡಿತಾದರೂ ನಾವು ಏಕೆ ಅಳಿಸಲೆತ್ನಿಸುವ ಅಜ್ಞಾನವನ್ನು ತೋರುತ್ತಿದ್ದೇವೆ. ಮಾಧ್ಯಮವು ಸುಲಭವಾಗಿ ಕೈಗೆ ದೊರಕಿತೆಂಬ ಅಹಂ ಇಂದು ಯುವಕರಿಗೆ ಪೂರ್ಣ ಸ್ವಾತಂತ್ರ್ಯದ ಹಕ್ಕು ದೊರೆತಂತಾಗಿ ಮನುಷ್ಯ ಪದಕ್ಕೆ ಬೆಲೆಯೇ ಇಲ್ಲದಂತೆ ವರ್ತನೆಗಳು ಪ್ರಾರಂಭವಾಗಿವೆ. ಮೌಲ್ಯವೇ ಇಲ್ಲದಂತೆ ಮಾತನಾಡುವ, ವರ್ತಿಸುವ ಎಲ್ಲಾ ಬೆಳವಣಿಗೆಗಳು ಮಾತು, ಸಂದೇಶ, ನಡವಳಿಕೆಯಲ್ಲಿ ಕಂಡುಬರುತ್ತಿವೆ. ಕುಟುಂಬ, ಶಿಕ್ಷಣ, ಸಮಾಜವೆಂಬುದು ತನಗಿಷ್ಟದ ನೆಪವಾಗುತ್ತಿರುವ ವೇಳೆಯಲ್ಲಿ ಇವರಿಗೆ ಈ ಸ್ವಾತಂತ್ರ್ಯ ನೀಡಿದವರಾರು..
    ವಿಚಾರದ ಅಧ್ಯಯನವನ್ನೇ ಮಾಡದೇ ಪೂರ್ವಗ್ರಹಿತರಾಗಿ ಚಳುವಳಿ ಮಾಡುವ, ಬೆಂಬಲ ನೀಡುವ ಶಿಕ್ಷಣವನ್ನು ಯಾರು ನೀಡಿದ್ದಾರೆ.  ಸಂಘಟನೆಗಳೆಂದರೇನು... ಸಮಸ್ಯೆಗಳನ್ನು ಹುಡುಕುವುದೇ! ಪರಿಹಾರ ಹುಡುಕುವುದೇ! ಬೆಂಬಲ ಸೂಚಿಸುವುದೇ! ಏಕೆ ಈ ಅಂಶಗಳು ಅರ್ಥವಾಗುತ್ತಿಲ್ಲ. ಸಮಾಜದ ದ್ರೋಹಗಳೆಲ್ಲಾ ಹಣವೆಂಬ ನೆಪದಲ್ಲಿ ಸುಲಭ ಮಾರ್ಗಗಳನ್ನು ಅಲೋಚಿಸುತ್ತಾ ರಕ್ತ ಹೀರುವ ಸದ್ಗುಣರೂಪಗಳ ದರ್ಶನವು ಈ ಸಮಾಜಕ್ಕೆ ತಿಳಿಯುವುದೆಂದು?

  • ನ್ಯಾಯಾಲಯಕ್ಕೆ ಇಬ್ಬರೂ ಬಂದರು..
       ಸತ್ಯ ಹಾಗೂ ಸುಳ್ಳು ಇಬ್ಬರೂ ನ್ಯಾಯಾಲಯಕ್ಕೆ ಬರುವಾಗಲೇ ತಾನು ಬೆತ್ತಲೆ ಎಂಬುದು ಸುಳ್ಳಿಗೆ ತಿಳಿದಿರುತ್ತದೆ. ಆದರೂ ಭೂಷಣ ಪ್ರವೃತ್ತಿಯನ್ನು ಅದೆಂದಿಗೂ ಬಿಡಲಾರದು. ಒಬ್ಬ ವ್ಯಕ್ತಿ ಪೂರ್ಣವಾಗಿ ನ್ಯಾಯಕ್ಕೆ ಬದ್ಧವೆಂದ ಮೇಲೆ ಆ ವ್ಯಕ್ತಿಯ ಕುರಿತು ತನಗೆ ಸುಲಭವಾಗಿ ಲಭ್ಯವಾಗುವ ಅಕ್ಷರ, ಮಾತು, ಕ್ರಿಯೆಗಳಲ್ಲೆಲ್ಲಾ ಅಪೂರ್ಣ ಅನರ್ಥಗಳನ್ನು ಸೃಷ್ಟಿಸುವ ನೈತಿಕ ಸ್ವಾತಂತ್ರ್ಯವನ್ನು ಈ ಸಮಾಜಕ್ಕೆ ನೀಡಿದವರಾರು? ರಕ್ಷಕರು, ನ್ಯಾಯಧೀಶರು ಎಂಬೆಲ್ಲಾ ವ್ಯವಸ್ಥೆಗಳು ಇರುವುದಾದರೂ ಏಕೆ? ನಮ್ಮ ಮನೆಯೇ ನಮಗೆ ಪೂರ್ಣವಾಗಿ ಅರ್ಥವಾಗದಿರಲು ಕಾರಣ ನಮಗೆ ಪರಿಸರದ ಅನುಭವದ ಕೊರತೆ ಆದರೆ ಒಂದು ಸ್ಥಳವನ್ನು ನೋಡದೆ, ಎಂದೋ ನೋಡಿದ ಕಲ್ಪನೆಯಲ್ಲೇ, ಇನ್ನೊಬ್ಬರ ಹೇಳಿಕೆಯಲ್ಲಿ ನಾವು ನಮ್ಮದೇ ನಿರ್ಧಾರಗಳನ್ನು ಸುಲಭವಾಗಿ ಮಾರಿಕೊಂಡರೆ ನಮ್ಮ ಅಸ್ತಿತ್ವದ ಪ್ರಶ್ನೆಯಾದರೂ ಏನು? ನಾವು ಒಬ್ಬ ಮನುಷ್ಯನಿಗೆ ಸಹಾಯ ಮಾಡಲಾಗದ ಶಕ್ತಿ ಇಲ್ಲದ ಮೇಲೆ ಆತನನ್ನು ನಿಂದಿಸುವ ಯಾವ ನೈತಿಕತೆಯೂ ನಮಗೆ ಇರಲಾರದು ಎಂಬ ಬುದ್ಧನ ನುಡಿಗೆ ಅರ್ಥವಿಲ್ಲವೇ.. ಅಕ್ಷರ ಕಲಿತವರ ಗೊಸಂಬಿತನಗಳಿಗೆ ಅನಕ್ಷರಸ್ಥ ಬಲಿಯಾಗುತ್ತಿದ್ದಾನೆ. ಮಕ್ಕಳು ಬದುಕನ್ನು ಅರ್ಥವಿಲ್ಲದ ಅಯನದಲ್ಲಿ ಉಸಿರುಗಟ್ಟುತ್ತಾ ನಾಳೆಯ ವ್ಯವಹಾರದ ದಾಳಗಳಾಗುವುದು ಇಂದಿನ ಅನಿವಾರ್ಯ ಸ್ವರೂಪಿ ಜಗತ್ತಿನ ಲೀಲೆ!
     ಈ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರೂ ಯೋಚಿಸಬೇಕಾದುದು ಇಲ್ಲಿ ಯಾವುದು ಅಗತ್ಯ, ಹಾಗೂ ಅನಗತ್ಯವಾದುದನ್ನು ಮುಂದುವರೆಸಬೇಕೆ? ನಮ್ಮ ಎಂತಹ ರಾಜಕೀಯ ನಾಯಕರು ಬೇಕು, ಯಾವ ರೀತಿಯ ಸಾಂಸ್ಕøತಿಕ ಚಿಂತಕರು ಬೇಕು.. ಹಾಗೂ ಮೊದಲು ನಾವು ಯಾರು, ಇಲ್ಲಿ ನಮ್ಮ ಅಸ್ಥಿತ್ವವೇನು? ನಾವು ಮಾತನಾಡುವ ನುಡಿಯ ಶುದ್ಧತೆ ಹೇಗಿರಬೇಕು. ನಮ್ಮ ಒಪ್ಪಿಕೊಳ್ಳುವ ಸಮಾಜ ಹೇಗಿದೆ. ನಾವು ಸ್ವತಂತ್ರರೇ! ಇಷ್ಟೆಲ್ಲಾ ಪ್ರಶ್ನೆಗಳಿಗೆ ಮಾನಸಿಕವಾದ ನಮ್ಮದೇ ಉತ್ತರ ಕಂಡುಕೊಂಡರೆ ನಾಶವಾಗುತ್ತಿರುವ ಭಾರತೀಯ ಅಂತಃಸತ್ವ ಉಳಿಯುತ್ತದೆ. ನುಡಿದರೆ ಮುತ್ತಿನ ಹಾರದಂತಿರಬೇಕು.. ಮಾತೆಂಬುದು ಜ್ಯೋತಿರ್ಲಿಂಗ.. ಮೊದಲಾದ ನುಡಿಗಳಿಗೆ ಅಂಟಿದ ಮೈಲಿಗೆಯನ್ನು ಕಳಚುವ ಪ್ರಯತ್ನ ಮಾಡಬಹುದು. 
ಶ್ರೇಷ್ಟವಾದುದು ಯಾವಾಗಲೂ ಶಾಶ್ವತವಾಗಿ ಉಳಿಯುತ್ತದೆ ಹಾಗೂ ಇದನ್ನು ಕುರಿತು ಯೋಚಿಸುವಾಗ ನಮ್ಮ ಜ್ಞಾನದ ಅರ್ಹತೆಯನ್ನು ನಾವು ಪರಿಶೀಲಿಸಿಕೊಳ್ಳಲೇಬೇಕು

ಭಾನುವಾರ, ಆಗಸ್ಟ್ 6, 2017

            ಸ್ನೇಹಕ್ಕೆ ಒಂದು ಸಂವಿಧಾನ


         ಸ್ನೇಹವನ್ನು ಬಾಲ್ಯ ಮತ್ತು ವೃದ್ಧಾಪ್ಯದಲ್ಲಿ ಕಂಡಷ್ಟು ನಿರ್ಮಲವಾಗಿ ಯೌವನದಲ್ಲಿ ಕಾಣುವುದು ಕಷ್ಟ. ಯೌವನವೆಂಬುದು ಕ್ರಿಯೆಯ ಕಾಲದ ಚೋದ್ಯ. ಅಲ್ಲಿ ಪ್ರವೇಶಿಸುವ ಪ್ರೇಮವು ಪ್ರೀತಿಯ ತಾತ್ತ್ವಿಕತೆ ಪಡೆದು ಮನುಷ್ಯನ ಇರುವಂತಿಕೆಯನ್ನೇ ಪ್ರಶ್ನಿಸುತ್ತದೆ. ಆಗ ನಾವು ಸೋಲುತ್ತೇವೆ. ಬಾಲ್ಯ ಬೆಳವಣಿಗೆ ಕಾಣುತ್ತಾ ಯೌವನದ ವೇಳೆಗೆ ನಿರ್ಮಿಸಿಕೊಳ್ಳುವ ಜಗತ್ತು ತನ್ನ ಆಯ್ಕೆಯ ಪ್ರಪಂಚ ಇಲ್ಲಿ ಸದಾ ‘ನಾನು’ ಎಂಬ ಇರುವಂತಿಕೆಯನ್ನು ಗುರ್ತಿಸಿಕೊಳ್ಳುವಾಗ ಸ್ವಾರ್ಥ ಸಹಜವಾಗಿ ನೆರವಾಗುತ್ತದೆ. ಅದಕ್ಕಾಗಿ ವ್ಯಕ್ತಿತ್ವವು ಸ್ನೇಹ, ಪ್ರೀತಿ ಮೊದಲಾದ ಅಸ್ತ್ರ ಬಳಸಿ ಮಾನಸಿಕ ಸಾಂತ್ವಾನ ತಂದುಕೊಳ್ಳುವುದು. ಆಚರಣೆ, ಸಂಭ್ರಮಗಳಲ್ಲಿ ಪರಸ್ಪರ ಕಾಣುವ ಸಾಮೂಹಿಕ ವಿಶ್ವಪ್ರಜ್ಞೆ ನಿತ್ಯ ಕಾಣಲಾಗದು. 
ಸ್ನೇಹವೆ
ಪರಸ್ಪರ ಕಾಣುವ ವ್ಯಕ್ತಿ ಗೌರವ. ಯಾರೂ ಮೇಲಲ್ಲ ಎಂಬ ಗುಣದ ಜೊತೆಗೆ ಇಲ್ಲಿ ಎಲ್ಲರೂ ಮುಖ್ಯವೆಂಬ ಧೀಮಂತಿಕೆ. ಮುಗ್ಧಹಂಚಿಕೆ, ಪರಸ್ಪರ ಪೂರ್ಣ ಅರ್ಪಿಸಿಕೊಳ್ಳುವ ನೈತಿಕ ಜವಬ್ದಾರಿ. ಇನ್ನೊಬ್ಬರನ್ನು ಗೆಲ್ಲಿಸಬೇಕಂಬ ಹಪಾಹಪಿ.

ಸ್ನೇಹದ ಬದ್ಧತೆ..


          ಮನುಷ್ಯ ಸ್ವಾರ್ಥವಾಗುತ್ತಾ ತಾನು ಗಳಿಸಿಕೊಂಡ ಆಪ್ತತೆಯನ್ನು ಕಳಿಚಿಕೊಳ್ಳುವನು. ಕಾರಣ, ಅವನು ಗೆಲ್ಲುವ ದಿಕ್ಕಿನಲ್ಲಿ ತನ್ನ ಸಕಲ ಚಿಂತನೆಗೂ ಬೆಂಬಲ ಇಲ್ಲದಿರುವುದು. ಒಮ್ಮೆ ನಂಬಿಕೆಯನ್ನು ಒಪ್ಪಿಕೊಂಡ ಮೇಲೆ ಅದನ್ನು ಸೂಕ್ಷ್ಮ ಎಳೆಯಲ್ಲೂ ಅನುಮಾನಿಸದೇ ಕಾಪಾಡುವುದೇ ಸ್ನೇಹ ಬದ್ಧತೆಯ ಜವಬ್ದಾರಿ.

                  ಹೀಗೆ ಕಂಡಾಗ..

ಇಂದು ಮಾಧ್ಯಮಗಳೊಂದಿಗೆ ಕಟ್ಟಿಕೊಂಡ ಜವಬ್ದಾರಿಯುತ ಸಂಬಂಧಗಳಲ್ಲಿ ಸ್ನೇಹ ಪ್ರಾಥಮಿಕ ಹಾಗೂ ಫಲಿತ ಗೆಲುವೂ ಕೂಡ. ಪರಿಚಯ ನಿಧಾನವಾಗಿ ಸ್ನೇಹಕ್ಕೆ ಸಿಲುಕುವಾಗ ಬರೀ ಸಂದೇಶವಾಗಿ ಉಳಿದಿರುವ ತೋರಿಕೆಯ ವಾಸ್ತವತೆಯೂ ದರ್ಶನವಾಗುತ್ತದೆ.

       ಸ್ನೇಹವನ್ನು ಮೊದಲು ನಾಶಮಾಡುವ ಅಸ್ತ್ರ ನಂಬಿಕೆಯ ಪ್ರಶ್ನೆ. ಹಣವೇ ಮತ್ತೊಂದು ಮಾರ್ಗದ ಶ್ಮಶಾನ. ಪ್ರೀತಿಗೆ ಹಂಬಲಿಸುವ ಮನೋವಿಕಾರಗಳ ಸಂತೆಯಲ್ಲಿ ಕಾಮವೂ ಒಂದು ನಿಲ್ದಾಣ. ಜವಾಬ್ದಾರಿಗಳಿದಂತೆ ಪಡೆದುಕೊಳ್ಳುವ ಸಮಯ ಸಾಧಕತನ ಪೂರ್ಣ ಕೈಗೊಂಬೆಯಾಗಿ ಆತ್ಮವನ್ನು ಕಳಚಿ ಬಿಡುತ್ತದೆ. ಇಲ್ಲೆಲ್ಲಾ ಸ್ನೇಹ ಸುಂದರ ಹಾಳೆಯಾಗಿ ಬಂದು ನೆನೆಪುಗಳ ಶಾಹಿಯಲಿ ಮಿಂದು ಮತ್ತೆ ನೋಡದ, ಎಂದೂ ಕೂಡದ ಹಿತಶತ್ರು ವ್ಯಾಖ್ಯಾನದಲಿ ಚೂರಾಗುತ್ತದೆ.
ಉಳಿದದ್ದು..

        ಅದೊಂದು ಪೂರ್ಣ ವೃತ್ತಾಕಾರ. ಯಾರೋ ಹೇಗೆ ತಿರುಗಿಸಿದರೂ ಸುಂದರವಾಗಿ ಕಾಣುವ ವಿನೋದ ಶೈಲಿ. ಇಲ್ಲಿ ನಂಬಿಕೆ ರಕ್ತಗತವಾಗಿರುವುದರಿಂದ ಅದನ್ನು ತೋರ್ಪಡಿಸುವ ಅಗತ್ಯ ಇರದು. ಹಾಸ್ಯ ರಸದಲಿ ಹೊರಡುವ ಇದರ ಅಂತರ್ಯಾನವು ಆನಂದದಲ್ಲಿಯೇ ತೇಲುತ್ತಾ ಸುಖಿಸುತ್ತದೆ. ದುಃಖದಲ್ಲಿ ತನ್ನ ಜವಬ್ದಾರಿಯನ್ನು ನಿಭಾಯಿಸುತ್ತಾ ಪೂರ್ಣ ಹೊರೆ ಹೊರುತ್ತದೆ. ಈ ಸ್ನೇಹಕ್ಕೆ ಫಲಾಪೇಕ್ಷೆಯ ನಿರೀಕ್ಷೆ ಇರಲಾರದು. 


         ಜಗತ್ತು ಸ್ನೇಹದ ಹೆಗಲಾದರೆ ಕೂತು ಸವಾರಿಮಾಡುವ ಮನಸುಗಳು ಬೇಕಿದೆ ಬನ್ನಿ ವಯಸಿನ ಅಂತರವಿಲ್ಲ, ಮನಸಿನ ಮಂತ್ರವೇ ಎಲ್ಲ.


ಯಾವುದು ಸದಾ ಸಂತೋಷ ನೀಡುವುದೋ, ಶಾಶ್ವತವಾಗಿ ಉಳಿಯುವುದೋ ಅದೇ ‘ಒಳ್ಳೆಯ’ದು – ಡಿವಿಜಿ

ಸೋಮವಾರ, ಜುಲೈ 31, 2017

                 ಸಾರವೀ ವಿಚಾರ!
ಮೌನದ ರಾಗವನಾಡು ಬಾ
ಮಾತಿನ ದನಿ ಮರೆತು
ಧ್ಯಾನದ ಯೋಗವ ನೋಡು ಬಾ 
ಈ ನನ್ನ ಮನ ಅರಿತು - ಅಂಕುರ

ಬುಧವಾರ, ಜುಲೈ 26, 2017

            ಸ್ನೇಹಕ್ಕೆ ಒಂದು ಸಂವಿಧಾನ  

                                                        -  ಅಂಕುರ


         ಸ್ನೇಹವನ್ನು ಬಾಲ್ಯ ಮತ್ತು ವೃದ್ಧಾಪ್ಯದಲ್ಲಿ ಕಂಡಷ್ಟು ನಿರ್ಮಲವಾಗಿ ಯೌವನದಲ್ಲಿ ಕಾಣುವುದು ಕಷ್ಟ. ಯೌವನವೆಂಬುದು ಕ್ರಿಯೆಯ ಕಾಲದ ಚೋದ್ಯ. ಅಲ್ಲಿ ಪ್ರವೇಶಿಸುವ ಪ್ರೇಮವು ಪ್ರೀತಿಯ ತಾತ್ತ್ವಿಕತೆ ಪಡೆದು ಮನುಷ್ಯನ ಇರುವಂತಿಕೆಯನ್ನೇ ಪ್ರಶ್ನಿಸುತ್ತದೆ. ಆಗ ನಾವು ಸೋಲುತ್ತೇವೆ. ಬಾಲ್ಯ ಬೆಳವಣಿಗೆ ಕಾಣುತ್ತಾ ಯೌವನದ ವೇಳೆಗೆ ನಿರ್ಮಿಸಿಕೊಳ್ಳುವ ಜಗತ್ತು ತನ್ನ ಆಯ್ಕೆಯ ಪ್ರಪಂಚ ಇಲ್ಲಿ ಸದಾ ‘ನಾನು’ ಎಂಬ ಇರುವಂತಿಕೆಯನ್ನು ಗುರ್ತಿಸಿಕೊಳ್ಳುವಾಗ ಸ್ವಾರ್ಥ ಸಹಜವಾಗಿ ನೆರವಾಗುತ್ತದೆ. ಅದಕ್ಕಾಗಿ ತಾನು ಸ್ನೇಹ, ಪ್ರೀತಿ ಮೊದಲಾದ ಅಸ್ತ್ರ ಬಳಸಿ ಮಾನಸಿಕ ಸಾಂತ್ವಾನ ತಂದುಕೊಳ್ಳುತ್ತಾನೆ. ಆಚರಣೆ, ಸಂಭ್ರಮಗಳಲ್ಲಿ ಪರಸ್ಪರ ಕಾಣುವ ಸಾಮೂಹಿಕ ವಿಶ್ವಪ್ರಜ್ಞೆ ನಿತ್ಯ ಕಾಣಲಾಗದು. 
ಸ್ನೇಹವೆ
ಪರಸ್ಪರ ಕಾಣುವ ವ್ಯಕ್ತಿ ಗೌರವ. ಯಾರೂ ಮೇಲಲ್ಲ ಎಂಬ ಗುಣದ ಜೊತೆಗೆ ಇಲ್ಲಿ ಎಲ್ಲರೂ ಮುಖ್ಯವೆಂಬ ಧೀಮಂತಿಕೆ. ಮುಗ್ಧಹಂಚಿಕೆ, ಪರಸ್ಪರ ಪೂರ್ಣ ಅರ್ಪಿಸಿಕೊಳ್ಳುವ ನೈತಿಕ ಜವಬ್ದಾರಿ. ಇನ್ನೊಬ್ಬರನ್ನು ಗೆಲ್ಲಿಸಬೇಕಂಬ ಹಪಾಹಪಿ.

ಸ್ನೇಹದ ಬದ್ಧತೆ..


          ಮನುಷ್ಯ ಸ್ವಾರ್ಥವಾಗುತ್ತಾ ತಾನು ಗಳಿಸಿಕೊಂಡ ಆಪ್ತತೆಯನ್ನು ಕಳಿಚಿಕೊಳ್ಳುವನು. ಕಾರಣ, ಅವನು ಗೆಲ್ಲುವ ದಿಕ್ಕಿನಲ್ಲಿ ತನ್ನ ಸಕಲ ಚಿಂತನೆಗೂ ಬೆಂಬಲ ಇಲ್ಲದಿರುವುದು. ಒಮ್ಮೆ ನಂಬಿಕೆಯನ್ನು ಒಪ್ಪಿಕೊಂಡ ಮೇಲೆ ಅದನ್ನು ಸೂಕ್ಷ್ಮ ಎಳೆಯಲ್ಲೂ ಅನುಮಾನಿಸದೇ ಕಾಪಾಡುವುದೇ ಸ್ನೇಹ ಬದ್ಧತೆಯ ಜವಬ್ದಾರಿ.

                                         ಹೀಗೆ ಕಂಡಾಗ..

ಇಂದು ಮಾಧ್ಯಮಗಳೊಂದಿಗೆ ಕಟ್ಟಿಕೊಂಡ ಜವಬ್ದಾರಿಯುತ ಸಂಬಂಧಗಳಲ್ಲಿ ಸ್ನೇಹ ಪ್ರಾಥಮಿಕ ಹಾಗೂ ಫಲಿತ ಗೆಲುವೂ ಕೂಡ. ಪರಿಚಯ ನಿಧಾನವಾಗಿ ಸ್ನೇಹಕ್ಕೆ ಸಿಲುಕುವಾಗ ಬರೀ ಸಂದೇಶವಾಗಿ ಉಳಿದಿರುವ ತೋರಿಕೆಯ ವಾಸ್ತವತೆಯೂ ದರ್ಶನವಾಗುತ್ತದೆ.

       ಸ್ನೇಹವನ್ನು ಮೊದಲು ನಾಶಮಾಡುವ ಅಸ್ತ್ರ ನಂಬಿಕೆಯ ಪ್ರಶ್ನೆ. ಹಣವೇ ಮತ್ತೊಂದು ಮಾರ್ಗದ ಶ್ಮಶಾನ. ಪ್ರೀತಿಗೆ ಹಂಬಲಿಸುವ ಮನೋವಿಕಾರಗಳ ಸಂತೆಯಲ್ಲಿ ಕಾಮವೂ ಒಂದು ನಿಲ್ದಾಣ. ಜವಬ್ದಾರಿಗಳಿದಂತೆ ಪಡೆದುಕೊಳ್ಳುವ ಸಮಯ ಸಾಧಕತನ ಪೂರ್ಣ ಕೈಗೊಂಬೆಯಾಗಿ ಆತ್ಮವನ್ನು ಕಳಚಿ ಬಿಡುತ್ತದೆ. ಇಲ್ಲೆಲ್ಲಾ ಸ್ನೇಹ ಸುಂದರ ಹಾಳೆಯಾಗಿ ಬಂದು ನೆನೆಪುಗಳ ಶಾಹಿಯಲಿ ಮಿಂದು ಮತ್ತೆ ನೋಡದ, ಎಂದೂ ಕೂಡದ ಹಿತಶತ್ರು ವ್ಯಾಖ್ಯಾನದಲಿ ಚೂರಾಗುತ್ತದೆ.
ಉಳಿದದ್ದು..

        ಅದೊಂದು ಪೂರ್ಣ ವೃತ್ತಾಕಾರ. ಯಾರೋ ಹೇಗೆ ತಿರುಗಿಸಿದರೂ ಸುಂದರವಾಗಿ ಕಾಣುವ ವಿನೋದ ಶೈಲಿ. ಇಲ್ಲಿ ನಂಬಿಕೆ ರಕ್ತಗತವಾಗಿರುವುದರಿಂದ ಅದನ್ನು ತೋರ್ಪಡಿಸುವ ಅಗತ್ಯ ಇರದು. ಹಾಸ್ಯ ರಸದಲಿ ಹೊರಡುವ ಇದರ ಅಂತರ್ಯಾನವು ಆನಂದದಲ್ಲಿಯೇ ತೇಲುತ್ತಾ ಸುಖಿಸುತ್ತದೆ. ದುಃಖದಲ್ಲಿ ತನ್ನ ಜವಬ್ದಾರಿಯನ್ನು ನಿಭಾಯಿಸುತ್ತಾ ಪೂರ್ಣ ಹೊರೆ ಹೊರುತ್ತದೆ. ಈ ಸ್ನೇಹಕ್ಕೆ ಫಲಾಪೇಕ್ಷೆಯ ನಿರೀಕ್ಷೆ ಇರಲಾರದು. 


         ಜಗತ್ತು ಸ್ನೇಹದ ಹೆಗಲಾದರೆ ಕೂತು ಸವಾರಿಮಾಡುವ ಮನಸುಗಳು ಬೇಕಿದೆ ಬನ್ನಿ ವಯಸಿನ ಹಂತರವಿಲ್ಲ, ಮನಸಿನ ಮಂತ್ರವೇ ಎಲ್ಲ.


ಯಾವುದು ಸದಾ ಸಂತೋಷ ನೀಡುವುದೋ, ಶಾಶ್ವತವಾಗಿ ಉಳಿಯುವುದೋ ಅದೇ ‘ಒಳ್ಳೆಯ’ದು – ಡಿವಿಜಿ

ಸೋಮವಾರ, ಜುಲೈ 24, 2017

    ರಂಗಭೂಮಿಯೆಂಬ ವಿಶ್ವರೂಪಕ 





ರಂಗಭೂಮಿ ಇಂದು ಶ್ರೀಮಂತಗೊಂಡಿದೆ. ಆಸ್ವಾದಿಸುವ ಪ್ರೇಕ್ಷಕನನ್ನು, ಸಮೃದ್ದಿಯ ವಿನ್ಯಾಸದೊಂದಿಗೆ ನಟನೆಯನ್ನು ಹೊಂದಿರುವ ಪ್ರಸ್ತುತ ಕಾಲಘಟ್ಟದ ಕಲೆಯಾಗಿದೆ. ಸಾಹಿತ್ಯ ಅಧ್ಯಯನ ಸ್ವರೂಪಿಯಾದ ಈ ಮನೋರಂಜನಾ ಕಲೆಗಳು ಬದುಕನ್ನು ಬದಲಿಸುವಲ್ಲಿ ಯಶಸ್ವಿಯಾಗಿವೆ, ಆಧುನಿಕ ನೋಟಗಳಿಗೂ ರಸದೌತಣ ಮಾಡುವ ಕಲೆ ಬದಲಾವಣೆಯ ನೈತಿಕತೆಯನ್ನು ನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ರಂಗಭೂಮಿಯ ಚಾಪು ಅನನ್ಯವಾದುದು.  ಬಿ.ವಿ ಕಾರಂತ, ಕೆವಿ ಸುಬ್ಬಣ್ಣನಂತಹ  ಕಲಾಚಿಂತಕರು ಸೃಷ್ಟಿಸಿದ ಕಲೆಯ ಬೀಜಗಳು ಈ ಮಣ್ಣಿನಲ್ಲಿ ಬೀಳಲು ಎಲ್ಲಾ ದಿಕ್ಕುಗಳಿಗೂ ಹಬ್ಬಿ, ಗಾಳಿಯಲ್ಲಿ ತೂರಿ, ನೀರಿನಲ್ಲಿ ತೇಲಿ ಇಂದು ರಂಗಭೂಮಿ ಎಂಬುದು ಒಂದು ಅಕಾಡೆಮಿಕ್ ಆದ ಚಿಂತನೆಯಾಗಿದೆ.
    ಪ್ರದರ್ಶನವೆಂಬುದು  ಹಲವು ಶ್ರಮಗಳ ಫಲ. ಒಂದು ನಾಟಕ ಸಿದ್ಧಗೊಳ್ಳಲು ಬೇಕಾದ ಪೂರ್ಣಪ್ರಯತ್ನವೆಂಬುದು ಪಾತ್ರದೊಳಗೆ ಪ್ರವೇಶಿಸುವ ಕಲಾವಿದನ ರಸಯಾತ್ರೆ, ಪರಕಾಯ ಪ್ರವೇಶದ ನೈತಿಕ ಬದ್ಧತೆ. ಹೆಜ್ಜೆಹೆಜ್ಜೆಗೂ ಪ್ರೇಕ್ಷಕನ ಚಿಂತನೆಯಲ್ಲಿ ನಡೆಸುವ ಸಂಶೋಧನಾ ಹೊಸರೂಪತೆ. ಇಂತಹ ರಂಗಭೂಮಿ ಚಿಂತನೆ ಕುರಿತು ಹಲವು ಲೇಖನಗಳಿವೆ. ಏಕೆಂದರೆ ರಂಗಭೂಮಿ ಕಲೆ ಪಸರಿಸಿರುವ ಪರಿ ವಿಶ್ವರೂಪಕವಾದುದು. ಗ್ರೀಕ್ ಚಿಂತನೆಯಿಂದ, ರೋಮ್‍ನ ಪ್ರಯೋಗಗಳಿಂದ ಸಾಹಿತ್ಯದ ಜೊತೆ ಪ್ರದರ್ಶನವನ್ನೂ ಹೊತ್ತು ತಂದ ಈ ಕಲೆ ಇಂದು ದೇಸಿಯ ಕಲೆಯೊಂದಿಗೆ ಜನಪದ ನಂಟನ್ನು ಬೆಸೆದು ದೇಶ-ಕಾಲ-ಕಲೆಯ ತ್ರಿಕೂಟವನ್ನು ಎಲ್ಲಾ ಕಡೆಯಿಂದಲೂ ಪಸರಿಸಿದೆ. ಮಾಧ್ಯಮವೂ ಇದರ ಒಂದು ಅಂಗವಾಗಿದೆ. ಧ್ವನಿ ಮೊದಲ ಪದಿಯಾದರೆ, ನಟನೆ ಅದರ ಅಂಗ. ಬೆಳಕು ಹಾಗೂ ಸಂಗೀತ, ವೇಶದ ವಿನ್ಯಾಸದಂತೆ ಬಹುಮುಖ್ಯ ಜೀವನಾಡಿಗಳು.
    ರಂಗಭೂಮಿ ಎಂಬ ಕಲೆ ಕರ್ನಾಟಕದಲ್ಲಿ ಎಲ್ಲಾ ಭಾಗದಲ್ಲೂ ಮೂಡಿಬರುತ್ತಿರುವ ಈ ಹೊತ್ತಿನಲ್ಲಿ ನೀನಾಸಂನಂತಹ, ರಂಗಾಯಣದಂತಹ ಕೇಂದ್ರಗಳು ಹಲವು ಕಲಾವಿದರನ್ನು ಮುಕ್ತವಾಗಿ ನೀಡುತ್ತಾ ಬಂದಿವೆ. ಹಲವು ಕಲಾವಿದರು ರಂಗಭೂಮಿಯಲ್ಲೇ ಮುಂದುವರೆದರೆ, ಕೆಲವು ಕಲಾವಿದರು ಸಿನಿಮಾ ಕ್ಷೇತ್ರದಲ್ಲಿ ತೊಡಗಿದ್ದಾರೆ. ಇಲ್ಲೆಲ್ಲಾ ಕಲಾವಿದರಾಗಿ ಉಳಿಯುವ ಜೊತೆಯಲ್ಲಿ ಕಲೆಯನ್ನು ವಿಸ್ತರಿಸಿಕೊಳ್ಳುವ ಪ್ರಯೋಗ ಇವರದು. ಗುರುವಾಗಿ, ವಿನ್ಯಾಸಕರಾಗಿ ನಿರ್ದೇಶನ ಜಗತ್ತನ್ನು ತಮ್ಮದೇ ಆದ ರಂಗಭೂಮಿ ಕ್ಷೇತ್ರವನ್ನು ಸ್ಥಾಪಿಸುವಷ್ಟು ವಿಸ್ತಾರವಾದ ಜಗತ್ತು ಇವರದಾಗಿದೆ.
ಒಂದು ಜಗತ್ತಿನೊಳಗೆ ನಿಮ್ಮನ್ನು ಆಹ್ವಾನಿಸುವುದಾದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯು ರಂಗಭೂಮಿ ಅಧ್ಯಯನವನ್ನೂ ತುಂಬಾ ತಾತ್ವಿಕವಾಗಿ ನೀಡುತ್ತಿದೆ. ಉತ್ತಮ ಪ್ರಯೋಗಗಳು ಪ್ರೇಕ್ಷಕವರ್ಗಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ನೀಡುತ್ತಾ ಬಂದಿದೆ. ಇಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೂ ಅದರ ರಸಚಿಂತನೆಯ ನೋಟ ಸದಾ ಲಭಿಸುತ್ತದೆ. ನುಡಿಸಿರಿಯಂತಹ ಅಂತರಾಷ್ಟ್ರೀಯ ಪ್ರೇಕ್ಷಕವರ್ಗವನ್ನು ಸಂಪಾದಿಸಿದ ಕಾರ್ಯಕ್ರಮದಲ್ಲೂ ರಂಗಭೂಮಿ ಒಂದು ಭಾಗ. ನಿರ್ದೇಶಕರಾದ ಜೀವನರಾಂ ಸುಳ್ಯ ಅವರ ನೂರಾರು ಪ್ರದರ್ಶನಗಳನ್ನು ಕಂಡ ಎಲ್ಲಾ ಸಾಹಿತ್ಯ ನಾಟಕಗಳು ರಂಗಭೂಮಿಯಲ್ಲೇ ಒಂದು ಮೈಲಿಗಲ್ಲು. ಅದಕ್ಕೆ ಉತ್ತಮ ಉದಾಹರಣೆಯಾಗಿ ಹೇಳುವುದಾದರೆ ಅವರ ನಿರ್ದೇಶನದಲ್ಲಿ ಮಾಡುವ ಹೊಸಪ್ರಯೋಗಗಳು. 
ಜೀವನರಾಂ ಸುಳ್ಯ

      ದಕ್ಷಿಣ ಕನ್ನಡ ಭಾಗದ ಸಾಂಸ್ಕøತಿಕ ಚಿಂತನೆಯ ಹೊಸ ಪ್ರಯೋಗಾತ್ಮಕ ಮಿಳಿತಗಳನ್ನು ನೋಡುವುದರಲ್ಲೇ ಗ್ರಹಿಸಬೇಕು. ಮಹಾಮಾಯಿ, ಧಾಂಧೂಂ ಸುಂಟರಗಾಳಿಯಂತಹ ಪ್ರಯೋಗಗಳನ್ನೇ ಹೇಳುವುದಾದರೆ ಅಲ್ಲಿನ ಪ್ರತಿ ನಟರ ಶ್ರಮ, ಅವರ ನಿತ್ಯ ಪ್ರಯೋಗದೊಂದಿಗೆ ಒಳಗೊಳ್ಳುವ ಪರಕಾಯ ಪ್ರವೇಶ, ಬೆಳಕಿನ ವಿನ್ಯಾಸ, ಧ್ವನಿಯ ಸಾಪೇಕ್ಷತೆ, ಪ್ರತಿಯೊಬ್ಬರೂ ಒಪ್ಪಿಕೊಳ್ಳಬೇಕಾದ ಕಲಾವಿದರೆ! ನಿರ್ದೇಶಕರು ಹಾಗೂ ಇವರಲ್ಲಿ ಹಲವು ರಂಗ ತಾಂತ್ರಿಕರು ಪ್ರತ್ಯೇಕ ಲೇಖನಕ್ಕೇ ಅರ್ಹರು. ಇಲ್ಲಿ ಹೆಚ್ಚು ಹೇಳಲಾರೆ ಇವರನ್ನು ಮೊದಲ ಪದಿಯಲ್ಲೇ ಕೂತು “ನಾಟಕವನ್ನು ಮುಂದೆ, ಸಿನಿಮಾವನ್ನು ಹಿಂದೆ ನೋಡು” ಎಂಬಂತೆ ನೋಡಿದಾಗ ದಕ್ಕುವ ಸಾಹಿತ್ಯ ರಸ ದೌತಣ ಮರೆಯದ ಮೌಲ್ಯತಮ ನೆನಪು. - @ಅಂಕುರ

ಶನಿವಾರ, ಜುಲೈ 22, 2017

*ಸಿ. ಇ. ಟಿ ಸೂಕ್ಷ್ಮತೆಯಲಿ ಕನ್ನಡಕೂ ಕನ್ನಡಿ!*

ಕನ್ನಡ ಸಾಹಿತ್ಯ ಕುರಿತು ಅಧ್ಯಯನಗಳು ವಿಶೇಷವಾಗಿ ಗರಿಬಿಚ್ಚಿವೆ. ಅಧ್ಯಯನ ಎಂಬ ಪದದ ಮೂಲಾರ್ಥವೇ ಅಂಕದ ಸವಾರಿ ಎನಿಸಿದೆ.
ಸಿಇಟಿ ಎಂಬ ಪದವೇ ನೆನಪಿನ ಹಾಗೂ ಯೋಚಿಸಿ ಅರಿವನ್ನು ಪಡೆಯುವ ಜ್ಞಾನವಾಗಿ ಬೆಳವಣಿಗೆಯಾಗುತ್ತಿದೆ.
ಉದ್ಯೋಗ ಸ್ಥಾನಗಳು ಲಾಭಾಂಶದ ಬಿಳಿನೆರಳಾಗುತ್ತಿರುವ ಸಂದರ್ಭದಲ್ಲಿ ಆಶ್ರಯದ ಕೂಸಗಳದೆಷ್ಟೋ!
ಗೆಲ್ಲಬೇಕಾದವರು ವಿದ್ಯೆ ಕಲಿತವರಲ್ಲ, ಉದ್ಯೋಗ ನಿಮಿತ್ತರು. ಬಡತನ, ಅಧ್ಯಯನ ನಿಮಿತ್ತ, ವೃತ್ತಿ, ಪ್ರವೃತ್ತಿ ಮೊದಲಾದ ಅಂಶಗಳನ್ನು ಹೊಂದಿದವರಾಗಿ ಗೆಲ್ಲುವ ಅನಿವಾರ್ಯತೆ ಇದೆ ಇವರೇ ಬಂಡವಾಳ..

ಕನ್ನಡ ಸಾಹಿತ್ಯ ಕೂಡ ಸಿ ಇ ಟಿಗೆ ದಕ್ಕಿದಾಗ ಅದರ ಉಳಿವು ಅಳಿವಿನ ರಾಜಕೀಯ ಬೆಳವಣಿಗೆ ಚಿಂತನಾರ್ಹ.
ಉದ್ಯೋಗ ಸಲುವಾಗಿ ಅರ್ಹತೆಯನ್ನು ಹೊಂದಿದ ಸದ್ಯದ ೨೧.೦೦೦ಕ್ಕೂ ಮಿಗಿಲಾಗಿ ಸಾಹಿತ್ಯ ಅಭ್ಯರ್ಥಿಗಳು ಬಂಡವಾಳದ ಪ್ರತ್ಯೇಕ ಮಾದರಿಗಳು. ಗೆದ್ದವರ ಅರಿವು ತರಬೇತಿಯ ವಿವಿಧ ರೂಪಗಳನ್ನು ಪ್ರಾರಂಭಿಸಿದರೆ, ಪ್ರಕಾಶಕರು ಮತ್ತು ಪುಸ್ತಕದ ವ್ಯಾಪಾರಿಗಳು ಸುಮಾರು ೧೦_೦೦೦ ದಷ್ಟು ಪ್ರತಿಗಳ ಮುದ್ರಣ ಹಾಗೂ ಮಾರಾಟದ ವಹಿವಾಟಿಗೆ ನಿಂತು ಮೂಲಪ್ರತಿ, ಹೋಲಿಕೆ ಪ್ರತಿ ಹೀಗೆಲ್ಲಾ ಮುದ್ರಿಸಲು ಪ್ರಾರಂಭಿಸುತ್ತಿದ್ದಾರೆ. ಆದರೆ ರೆಡಿಮೆಡ್ ಯುಗದಲ್ಲಿ ಇಂತಹ ತಯಾರಿಸಿದ ಸಿಲಬಸ್ ಪೂರ್ಣತೆಯ ಪುಸ್ತಕಗಳು ಸಿದ್ಧಮಾದರಿಯಲ್ಲಿ ದೊರೆತರೆ ಹೇಗೆ! ಹೌದು ಈಗ ಇವುಗಳ ಹಾವಳಿಯೇ ಹೆಚ್ಚು. ಪ್ರಾಣಹೋಗುವವನ ದಾಹದಾಟದ ದಾಳಗಳು. ಹತ್ತಾರು ಜನರ ಅಧ್ಯಯನವನ್ನು ಕದ್ದುಕೊಲೆಗಯ್ಯುವ ಕೌತ್ಸುಕಾಭರಣಗಳೂ ಇದ್ದಾವೆ. ಇರಲಿ :ವ್ಯಾಪಾರಂ ದ್ರೋಹ ಚಿಂತನಂ' ಅಲ್ಲವೇ..

ಉತ್ತಮ ಚಿಂತನೆ ಎಂದರೆ ಇದೇ ವ್ಯವಹಾರ ಹಲವರಿಗೆ ಸಾಹಿತ್ಯದ ಆಳ ಅಗಲ ಪರಿಚಯಿಸಿದ ಪರಿ ಅನನ್ಯವಾದುದು.

ಪ್ರಾಧ್ಯಾಪಕರ ಹುದ್ದೆಗೆ ಮೊದಲು ಇದರ ಬಿಸಿ ತುಪ್ಪದ ಅರಿವು ಎಲ್ಲರಿಗೂ ದಕ್ಕಿತು. ಇಲ್ಲಿ ಎಚ್ಚರಗೊಂಡವರು ಪಿಯು ಉಪನ್ಯಾಸಕ ಹುದ್ದೆಗೆ ಬೇಕಾದ ತುಪ್ಪ ಕಾಸಲು ಪ್ರಾರಂಭಿಸಿದರು. ಗೆದ್ದವರು ಜ್ಞಾನಿಗಳೇನೂ ಅಲ್ಲ, ಸೋತವರು ಅಜ್ಞಾನಿಗಳಲ್ಲ..

ಈ ನಿಟ್ಟಿನಲ್ಲಿ ಸ್ಪರ್ಧಾ ಶ್ರೇಯಸ್ಸು, ಏಣಿ ಈ ಸಿಇಟಿ ಮಾದರಿಯ ಪುಸ್ತಕಗಳ ಕಥೆ ಭಿನ್ನವಾಗಿದೆ. ಇದರ ಸಂಪಾದಕರು ಇದುವರೆಗೂ ಎಲೆಮರೆಯ ಕಾಯಿಯಂತೆ ಸಾಹಿತ್ಯ ಅಧ್ಯಯನ ಮಾಡಿದ್ದಾರೆ, ಹಲವರ ತಪ್ಪುಗಳ ಗ್ರಹಿಸಿದ್ದಾರೆ, ದೀರ್ಘವಾದ ಅಧ್ಯಯನವನ್ನು ಓದುಗರಿಗೆ ಒಪ್ಪಿಸುವ ಕೆಲಸ ಮಾಡಿದ್ದಾರೆ ಅನಿಸುತ್ತದೆ, ಯಾವುದೇ ವ್ಯಾಕರಣ ದೋಷವಿಲ್ಲದ ಈ ಕೃತಿಗಳು ಕೆಲವು ಸಣ್ಣ ಕೊರೆತೆಗಳ ಹೊರತುಪಡಿಸಿ ಉತ್ತಮ ಸಾಹಿತ್ಯ ಸೇತುವೆಗಳೆನ್ನಬಹುದು. ವ್ಯವಹಾರವನ್ನು ವಸ್ತುನಿಷ್ಠವಾಗಿ ಮಾಡುವ ಕ್ರಮ ಇಲ್ಲಿ ಗಮನಿಸಬಹುದು.

ಅಕ್ಷರಗಳ ಪುಟದೊಡಲಿನಲಿ ಅಕ್ಷಯರೂಪದ ಮಹಿಮೆ ಅಧ್ಯಯನ ಸ್ವರೂಪಿಯಾದುದು.  ಅರ್ಥವಂತಿಕೆ ಮಾತ್ರ ಜೀವನ ರೂಪಿಸುತ್ತದೆ ವ್ಯವಹಾರಿಕರ ಹಿನ್ನಲೆಯ ಬಿಳಿನೆರಳಲ್ಲ..
ಬನ್ನಿ ಯೋಗ್ಯವಾದುದನ್ನು ಆರಿಸಿಕೊಳ್ಳುವ.- ಅಂಕುರ

ಬುದ್ಧಿವಂತ ಯೋಚಿಸುತ್ತಾನೆ, ದಡ್ಡನಾದವ ಅನ್ವಯಿಕೊಳ್ಳುತ್ತಾನೆ- ಹಿರಿಯರ ಮಾತು

ಗುರುವಾರ, ಜುಲೈ 20, 2017

ಬ್ರಹ್ಮಕಮಲ ಅರಳುವ ಸಮಯ
ಇದು ಹೂವು,
ರಾತ್ರಿಯ ರಾಣಿ ಮೌನ ವಾಣಿ
ವಿಷ್ಣುವಿನ ನಾಭಿಯಲಿ
ಬ್ರಹ್ಮನ ದರ್ಶನ ತಂದು
ಇರುಳು ಲೋಕದಿ
ಚಂದ್ರ ರೂಪ ತಾರೆ

ಬ್ರಹ್ಮ ಕಮಲ ಅರಳುವ ಸಮಯ
ಸ್ವರ್ಗರೂಪವೇ ತೆರೆಯುವ ಮಾಯ
ವಿಶ್ವ ಲೋಕ ನಾಭಿ
ದಳದ ಎಳೆಯಲಿ ಅಣುವಿನ ಕಣಗಳ
ಕಾಮ ಕಾವ್ಯ ಕವಿಸಮಯ

ಪತ್ರದ ಪುತ್ರ ಏನೀ ಸೂತ್ರ
ಪತ್ರದಿಂದಲೇ ಪೂರ್ಣ ಪವಿತ್ರ
ಔಷಧ ರೂಪ, ದೈವ ಸ್ವರೂಪ
ಕುಬೇರನ ತರುವ ಜೀವ ದ್ರವ್ಯ
ಹಿಮಾಲಯ ಎಲ್ಲೇ
ನೀ ಇಲ್ಲಿ ಅಲ್ಲಲ್ಲಿ..
- ಅಂಕುರ


ಮಂಗಳವಾರ, ಜುಲೈ 18, 2017



ಜೀವನ ಪ್ರೀತಿಯ ಸತ್ಯಗಳಲ್ಲಿ ಕುವೆಂಪು ಅವರ ಪಕ್ಷಿಕಾಶಿಯ ಅನನ್ಯತೆ! 
-ಅಂಕುರ
ಈ ಕಿರುಬರಹದ ಧನ್ಯತೆಯನ್ನು ನಮ್ಮ ನಡುವಿನ ಸಾಧಕರತ್ನ ಡಾ.ಕೆ.ಎನ್ ಬಸವರಾಜು ಅವರಿಗೆ ಸಹೃದಯ ಅರ್ಪಣೆ.

ಪ್ರಕೃತಿಯೊಂದಿಗೆ ಆಧ್ಯಾತ್ಮ ಚಿಂತನೆಗಳನ್ನು ಸಮೃದ್ಧಗೊಳಿಸಿದ ಕನ್ನಡದ ಶ್ರೀ ಸಾಮಾನ್ಯ ಚಿಂತನೆಯ ಕವಿ ಕುವೆಂಪು.
ಜಗತ್ತನ್ನು ನಿಸರ್ಗದೊಂದಿಗೆ ಅನುಸಂಧಾನ ಮಾಡುತ್ತಾ ಮನುಷ್ಯನ ಬದುಕಿನ ಅರ್ಥಗಳನ್ನು ನಿರೂಪಿಸಿದವರು. ಅಂತಹ ಒಂದು ಕವಿತೆ ಪಕ್ಷಿಕಾಶಿಯಲ್ಲಿ ಕವಿಯ ಕಾವ್ಯ ಸಾಮರ್ಥ್ಯದ ನೈಜ ಕೈಪಿಡಿ ರೂಪಿಸಿದೆ ಅದೇ ಆನಂದ ಮಯ ಈ ಜಗ ಹೃದಯವೆನ್ನುವ ಸಾರ.
ಪ್ರತಿಯೊಬ್ಬ ಶ್ರೀ ಸಾಮಾನ್ಯನೂ ನಿಸರ್ಗದೊಂದಿಗೆ ಬದುಕನ್ನು ಸವಿಯುವ ಸುಂದರ ಚೈತನ್ಯ ಶಕ್ತಿ ಇಲ್ಲಿದೆ.
ನಿಸರ್ಗವೆಂಬುದು ಹಗಲಿನ ಸೂರ್ಯ ಬೆಳಕಲ್ಲಿ, ಚಂದ್ರನ ಇರುಳು ತಂಪಿನಲ್ಲಿ ಅಮೂರ್ತವಾದ ಆನಂದಧಾಮ. ಇದರಲ್ಲಿ ಸಕಲ ಜೀವಿಗಳೂ ಬದುಕುತ್ತಿವೆ, ಆಹಾರ ಹುಡುಕುವ, ಸಂತಾನ ಹಾಗೂ ವಂಶೋಭಿವೃದ್ಧಿಯ, ಹಾಗೂ ಮುಪ್ಪಿನ ನಿಸರ್ಗ ತಹ ಜನನದಂತೆ ಮರಣವನ್ನು ಕಾಣುವ ಆಹಾರ ಸರಪಳಿಯ ರೂಪವಿದೆ. ಮನುಷ್ಯನೂ ಒಂದು ಜೀವಿ! ಆದರೆ ಈತನ ಬದುಕು ಮಾತ್ರ ಸವಿಯುವ ಸೌಜನ್ಯತೆಯಿಂದಿಲ್ಲ. ಅದಕ್ಕೆ ಕವಿತೆ ಬದುಕುವ ಕಲೆಯ ಪಾಠವನ್ನು ಹೇಳುತ್ತಿದೆ. ನಿಸರ್ಗದಲ್ಲಿ ಅಭಿವ್ಯಕ್ತಗೊಳ್ಳುವ ಯಾವ ಬಗೆಯೂ ಅಪಾಯಕಾರಿಯಾದುದಲ್ಲ, ವಿಕೋಪವೂ ಅಲ್ಲ ಅದೊಂದು ಸಹಜ ಕ್ರಿಯೆ ಅದರೊಂದಿಗೆ ಹೊಂದಿಕೆಯ ಅನುಸಂಧಾನ ಮುಖ್ಯವೆಂದಿದ್ದಾರೆ.ಅದನ್ನೇ ಸೂರ್ಯನು ಬರಿ ರವಿಯಲ್ಲ ಅವನೊಂದು ವಿಜ್ಞಾನದ ಬೀಜ, ನಕ್ಷತ್ರ ಸ್ವರೂಪಿ, ಬೆಳಕಿನ ಅಭೇದ್ಯ ನೈಸರ್ಗಿಕ ಸೃಷ್ಠಿ ಆ ಭ್ರಾಂತಿಯನ್ನು ಅರಿಯುವ ಅಗತ್ಯವಿದೆ.
ರವಿವದನವಾದ ಈ ಜಗತ್ತಿನಲ್ಲಿ ಶಿವ ಸಾಕ್ಷಾತ್ಕಾರವಿದೆ. ಇಲ್ಲಿ ಶಿವ ಹಾಗೂ ಈಶ್ವರ ಬೇರೆ ಬೇರೆ. ಶಿವನೆಂದರೆ ಸರ್ವ ದೈವ ಸ್ವರೂಪಿ. ಅವನಿಗೆ ಪೋರೋಹಿತ ಬಂಧನವಿಲ್ಲ, ಆಡಂಬರದ ಶ್ರೀಮಂತಿಕೆಯಿಲ್ಲ, ಹೆಣ್ಣು ಗಂಡೆಂಬ ಲಿಂಗಭೇದವಿಲ್ಲ. ಸ್ಥಾವರವಿದ್ದರೂ ಅದೊಂದು ನಿಸರ್ಗರೂಢವಾದುದು. ಅದು ಕಲೆಯ ಬಲೆಯು.. ಕಲಾವೃತವಾದ ಕವಿಸಮಯ ಸ್ವರೂಪಿ. ಪ್ರತಿಜೀವಿಯೂ ಅದರ ಅಂಗ. ಇದು ಈ ರೀತಿ ಆಳದ ಸೌಂದರ್ಯವನ್ನು ಸಾಕ್ಷೀಭೂತವಾಗಿಸಿದೆ. ಆದರೆ ಅದನ್ನು ನೋಡುವ ಕಣ್ಣು ಕವಿಸಮಯದ ಕೈಪಿಡಿಯ ದರ್ಶನದಂತಿರಬೇಕು. ಸಾಮಾನ್ಯ ನೋಟಕ್ಕೆ ಇಲ್ಲಿ ಯಾವ ಸೌಂದರ್ಯವೂ ದಕ್ಕದು ಅದೊಂದು ಶವಮುಖದಂತೆ. ಸದಾ ಹಸನ್ಮಖಿ ಆದರೆ ನಿರ್ಜೀವ ಸಾಕ್ಷಿ. ಅದು ಮನುಷ್ಯ ಬದುಕಿನ ಸ್ವರೂಪವಲ್ಲ. 
ಉದಯವೆಂಬುದು ಕುವೆಂಪು ಕಾವ್ಯಕ್ಕೆ ಅನ್ವರ್ಥ. ಇಲ್ಲಿನ ಉದಯ ಕಾಣುವ ಬಗೆಯನ್ನು ತಿಳಿಸುತ್ತದೆ. ನಿಸರ್ಗದ ಪ್ರತಿಕ್ಷಣವೂ ಹಲವು ಉದಯಗಳ ಪ್ರಾರಂಭವನ್ನು ಸಂಖ್ಯೇತಿಸುತ್ತದೆ. ಅದನ್ನು ಕಾಣುವ ಹೃದಯ ನಮಗಿರಬೇಕು ಅದನ್ನು ಒಳಗಣ್ಣು, ಆತ್ಮ (ಮನಸ್ವರೂಪ) ಎನ್ನಬಹುದು. ಕವಿ ಈ ಜಗತ್ತಿನ ವ್ಯಾಪಾರವನ್ನು ರಸೋವೈಶಃವಾಗಿ ಕಾವ್ಯದ ಕಣ್ಣನ್ನು ತೆರೆದಿದ್ದಾರೆ.ಇದನ್ನು ಅಮೃತದ ಹಣ್ಣಾಗಿಸಲು ಪ್ರತಿ ಚರಾಚರದಲ್ಲೂ ಶಿವನ ಕಾಣುವ ಸೌಜನ್ಯತೆಬೇಕು ಏಕೆಂದರೆ ಈ ಜಗತ್ತು ಶಿವನ ಸದನ ನಾವೆಲ್ಲಾ ಇಲ್ಲಿ ಸದಸ್ಯರು, ಭಕ್ತರು, ಶ್ರೀ ಸಾಮಾನ್ಯ ಸಹೃದಯರು ಕಣ್ ತೆರೆದು ಕಲೆಯನ್ನು ವಿಜ್ಞಾನದೊಡನೆ ಮೇಳೈಸಿ ಕಾಣಬೇಕು. ಆನಂದಮಯ ಈ ಜಗಹೃದಯ ನೀ ಹರ್ಷಕಾಣು ಭಯವೇಕೆ ಅನಂತತಮನಾಗು ಎನ್ನುವರು ಕವಿ ಕುವೆಂಪು. ಇಂತಹ ಕಾವ್ಯ ವೈಖರಿ ಹೃದಯದೊಳಗಿನ ಪಕ್ಷಿಗೆ ಅಕ್ಷಿಯ ನೋಟವನ್ನು ತೆರೆದು ಕಾಶಿಯನ್ನೇ ಕೈಲಾಸವಾಗಿಸಿದ ನಮ್ಮ ನಿಸರ್ಗವನ್ನು ನಾವೆಲ್ಲಾ ಏಕತಾನತೆಯಲ್ಲಿ ಸವಿಯೋಣ!
ಸವಿಯ ಸಿಂಚನದಲ್ಲಿ ಹಲವು ಸಾಧಕರ ಕಿರಣ ಸ್ವರೂಪಿ ಕೃಷಿ ತತ್ವ ನಮ್ಮ ನಡುವೆ ದಾರಿ ದೀಪಗಳ ಸಹ ಇರುವುದು ಹರ್ಷನೀಯ  - ಅಂಕುರ





ಸೋಮವಾರ, ಜುಲೈ 17, 2017

ಜೀವನಪ್ರೀತಿ ಅನುಸರಿಸುವ ಹಕ್ಕು

ಜೀವನಪ್ರೀತಿ ಅನುಸರಿಸುವ ಹಕ್ಕು

ಮನುಷ್ಯನಿಗೆ ಸ್ವಾಭಿಮಾನ ಮುಖ್ಯವಾಗಿ ತನ್ನ ಸಖ್ಯದ ಬದುಕನ್ನು ತಂತಿಯ ಮೇಲೋ
ಮುಳ್ಳಿನ ಮೇಲೋ ಸಾಗಿಸುತ್ತಾನೆ.

ಇಲ್ಲಿ ಸಂಬಂಧ, ಜಾತಿ, ರೀತಿ ನೀತಿಗಳನ್ನು ಮೀರಲಾಗದ, ಮೀರಿದ್ದೇ ಮಹಾ ಹೀನಾಯವಾಗುವ ಜಡಬೇರುಗಳು ಕೂಡ ಇವನ ಹೆಗಲೇರುತ್ತವೆ.

ಇಂತಹ ಸಂದರ್ಭದಲ್ಲಿ ಹಳೆಯಬೇರುಗಳಿಗೆ ನಲುಗಿಹೋದ ಹೊಸ ಚಿಗುರುಗಳು ಇಂತಹ ಸಾಕ್ಷ್ಯಾಧಾರ.

ಇಲ್ಲಿ ಹೆಣ್ಣು ಗಂಡು ಮದುವೆ ಆಗಲೇಬೇಕಾ! ಆಗದಿದ್ದವರ ಕಥೆಗಳೇನು..
ಮನಸ್ಸಿನ ತೀರ್ಮಾನಗಳೇನು! ಅಬ್ಬಾ! ನಾವು ಗೋಡೆ ಬರಹಗಳಾಗಿದ್ದೇವೆ ಓದಲು ಚೆಂದ ಅದರಲ್ಲಿ ಬದುಕಿನ ಆನಂದ ಸಖ್ಯ ಸ್ವಲ್ಪ ಕಷ್ಟತಮ.

ಬದುಕನ್ನು ಹೋರಾಟದ ವಿಧಿ ನಾದದಲ್ಲಿ ಕೊಂಡೊಯ್ಯುವ ಹಕ್ಕಿರುವ ಪ್ರತಿ ಮನುಷ್ಯ ಸಮಾಜದ ಕೊಂಕಿಗಳಿಗೆ ಹೆದರುವ ಅಗತ್ಯವಿಲ್ಲ. ಸಮಾಜ ರೂಪಿಸಲ್ಪಟ್ಟಿದ್ದೇ  ಹೊರೆತು ಸೃಷ್ಟಿ ಅಲ್ಲ. ಮದುವೆ ಒಂದು ಉತ್ತಮ ಆಯ್ಕೆ, ಸ್ಪಷ್ಟವಾದ ಅಲೋಚನೆ ಅದರ ವಿಧಿ..
ಜಾತಿ ನೆಪಗಳಲ್ಲಿ ಇನ್ನು ಬೇಯುವ ಅಗತ್ಯವಿಲ್ಲ. ದುಡಿಯುವ ಮನಸ್ಸಿಗೆ ಬದುಕುವ ಕಲೆಗೆ ಜಾತಿ ಎಂದಿಗೂ ನೆರವಾಗಿಲ್ಲ.. ಆಗಂತ ಜಾತಿ ಕೆಟ್ಟದ್ದು ಅಲ್ಲ, ಅದೊಂದು ಹಿಂದಿನಿಂದ ಆಚರಿಸಲ್ಪಟ್ಟದ್ದು. ಅದಕ್ಕೆ ಶರಣಾಗುತ್ತಾ ಸಾಗುವ ಹೆಜ್ಜೆ ಹೆಜ್ಜೆಯ ಸಂಬಂಧಗಳಲ್ಲೂ ಊಹಿಸಲಾರದಷ್ಟು ಗಾಯಗಳಿವೆ..
ಬದುಕು ಒಂದು ಆಯ್ಕೆ. ಗೆಲ್ಲುವ ಧೀಮಂತಿಕೆ ನಮ್ಮನ್ನು ಸದಾ ಹರ್ಷಗೊಳಿಸುತ್ತದೆ. ಸೋಲನ್ನು ಎಂದಿಗೂ ಒಪ್ಪಿಕೊಳ್ಳುವ ಅಗತ್ಯಕ್ಕೆ ಸಿಲುಕಬಾರದು..
ಕೆಲವೊಮ್ಮೆ ಕೆಲವು ಅನಿವಾರ್ಯಗಳಿಗೆ ರಾಜಿಯಾಗುತ್ತಾ ಅದರಾಚೆಗೆ ಅತಿಬೇಗ ಬರುವ ಲಘಿಮಾಕೌಶಲ ಕಲೆಯ ಅರಿವು ಬೇಕು.

ಸೋತ ಕಗ್ಗಸಾರ, ನುಡಿಯಾದ ಗುರುಪಾಠ ಇವೆಲ್ಲವೂ ಪ್ರಮಾಣಿಕತೆಗೆ ಒದಗಿದ ಅತ್ಯಂತ ಹೀನಾಯ ಸೋಲುಗಳು. ಆದರೆ ನಿಜವಾಗಿಯೂ ಸಮಾಜ ಗೆದ್ದಿರುವುದು ಸ್ವತಂತ್ರ ಆಯ್ಕೆಯ ಪ್ರಾಮಾಣಿಕ ಸತ್ವದಲ್ಲಿ ಮಾತ್ರ.
ಅದನ್ನು ಜೀವನಪ್ರೀತಿ ಎನ್ನೋಣ...
ಯಾವುದೇ ಜೀವಿ ಇಲ್ಲಿ ಸುಂದರವಾಗಿ ಬದುಕನ್ನು ಸಾಗಿಸುತ್ತಿದೆ ಎಂದು ಗಮನಿಸಿದಾಗ ಅದಕ್ಕೆ ಜೀವನಪ್ರೀತಿಯೇ ಮೂಲಾಧಾರ. ಈ ಜಾತಿ, ಅಪ್ರಮಾಣಿಕ ಹಠಗಳು, ಹಿರಿತನದ ಜಡ್ಡು ಕಟ್ಟಳೆಗಳು ಬದುಕನ್ನು ರೂಪಿಸಲಾರವು ಅವು ನಮ್ಮನ್ನು ಸದಾ ಒಂದು ಬಂಧನದೊಳಗೆ ಕಾಣಲು ಯತ್ನಿಸುವ ಅಚರಣೆಗಳಾಗಿವೆ ಅಷ್ಟೇ.
ಬದುಕಿಗೆ ಜೀವನಪ್ರೀತಿ ಮೂಲತಳಹದಿ. ಇದರಿಂದ ಆಯ್ಕೆ ನಮ್ಮ ಸ್ವತಂತ್ರ, ಅಲೋಚನಾ ಪರವಾದ ಹಕ್ಕು. ಅನಿವಾರ್ಯತೆಯಲ್ಲ.

ಉದ್ಯೋಗ, ಆನಂದ, ನೆಮ್ಮದಿಯ ನಲ್ಮೆತನಗಳಿಗೆ ಜೀವನಪ್ರೀತಿ ಒದಗಿಸೋಣ ಇಲ್ಲಿ ಗೆದ್ದವರಿಗೆ, ಪ್ರಮಾಣಿಕತೆಗೆ ಎಂದಿಗೂ ಗೌರವ ಇದೆ.

ಹೀಗೂ ಸಾಗೋಣ ಬನ್ನಿ - ಅಂಕುರ

ಬುಧವಾರ, ಜೂನ್ 21, 2017

ಅವಳೆಂದರೆ..
ಅವಳೆಂದರೆ ಗರಿಕೆಯ ಹಾಗೆ
ಕಸವೆಂದರೂ ಪೂಜಿಸುವ
ಅಲಂಕಾರ ದ್ರವ್ಯ,
ಕಿತ್ತರೂ ಚಿಗುರುವ
ಜೀವಂತಕಾವ್ಯ.
-ಅಂಕುರ